ಭಾಷಾ ಹೇರಿಕೆಯೋ, ಇಲ್ಲಾ ವಿಷಯಾಂತರವೋ

ಇದ್ದಕ್ಕಿದ್ದಂತೆಯೇ ಎರಡ್ಮೂರು ದಿನಗಳಿಂದ ನಮ್ಮ ಖನ್ನಢ ಉಟ್ಟು ಓರಾಟಗಾರರು ಎದ್ದೂ ಬಿದ್ದು ಓಡಾಡ್ತಾ ಅವ್ರೇ ಮತ್ತು ಸ್ಯಾನೇ ಮಾತಾಡ್ತಾ ಅವ್ರೆ!! . ಅರೇ ಯಾಕಪ್ಪಾ!! ಇಷ್ಟು ಬೇಗ ನವೆಂಬರ್ ತಿಂಗಳು ಬಂದು ಬಿಡ್ತಾ?. ಮೊನ್ನೇ ಇನ್ನೂ ಆಗಷ್ಟ್ 15, ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿರೋ ಖುಷೀನೇ ಇನ್ನೂ ತಣ್ಣಗಾಗಿಲ್ಲ. ಆಷ್ಟರೊಳಗೆ ಕರ್ನಾಟಕ ರಾಜ್ಯೋತ್ಸವ ಬಂದು ಬಿಡ್ತಾ ಅಂತಾ ಯೋಚಿಸಿ ಅಲ್ಲೇ ಬಿಳಿ ಪ್ಯಾಂಟ್ ಬಿಳೀ ಶರ್ಟ್ ಹಾಕಿಕೊಂಡು, ಕೊರಳಲ್ಲಿ ನಾಯಿ ಚೈನ್ ತರಹ ಚಿನ್ನದ ಚೈನ್ ಅದರ ಜೊತೆಗೆ ಮ್ಯಾಚಿಂಗ್ ಇರಲೀ ಅಂತಾ ಹಳದೀ ಕೆಂಪು ಬಣ್ಣದ ಶಾಲು ಹಾಕ್ಕೊಂಡು ಕೈಗಳಲ್ಲಿ ಬೇಡಿ ತರದ ಬ್ರೇಸ್ಲೇಟ್ ಹಾಕಿ ಕೊಂಡು ಓಡಾಡ್ತಿದ್ದ ಒಬ್ಬ ಓರಾಟಗಾರನ್ನನ್ನು ತಡೆದು ನಿಲ್ಲಿಸಿ, ಅಣ್ಣಾ ಏನ್ ಸಮಾಚಾರ ? ಇಷ್ಟೋಂದು ಓಡಾಡ್ತಾ ಇದ್ದೀರಿ? ಎಂದೆ. ಏನು ಸಮಾಚಾರ ಎಂದು ಕೇಳಿದ್ದೇ ತಡಾ, ದುರು ದುರುಗುಟ್ಟಿ ನನ್ನನ್ನೇ ಕೆಕ್ಕರಿಸಿಸುವ ಹಾಗೆ ನೋಡಿ, ಎನ್ ಜನಾ ಸಾ.. ನೀವೂ.. ಪೇಪರ್ ಓದಾಕಿಲ್ವಾ, ಇಂದಿ ಏರಿಕೆಯ ವಿರುದ್ಧ ಟೌನ್ ಆಲ್ ಮುಂದೆ ಪ್ರತಿಭಟನೆ ಮಾಡ್ತಾ ಇದ್ದೀವಿ !! ಸುಕ್ರವಾರನೋ ಇಲ್ಲಾ ಸನಿವಾರನೋ ಕರ್ನಾಟಕ ಬಂದ್ ಕೂಡಾ ಮಾಡ್ತೀವಿ ಅಂದ. ಓಹೋ ಹೌದಾ!! ನನಗೆ ಗೊತ್ತೇ ಇರಲಿಲ್ಲ. ಯಾಕೀ ಈ ಪ್ರತಿಭಟನೆ? ಹಿಂದಿ ಹೇರಿಕೆ ಎಲ್ಲಿ, ಯಾರಿಂದ ಆಗಿದೆ. ನನಗೆ ಗೊತ್ತಿರುವ ಹಾಗೆ ಕೇಂದ್ರ ಸರ್ಕಾರ ಅಂತಾ ಯಾವುದೂ ಕಾನೂನನ್ನೂ ಇತ್ತೀಚಿಗೆ ಮಾಡಲಿಲ್ಲ. ಇನ್ನು ರಾಜ್ಯಸರ್ಕಾರ ಇಂತಹ ತೀರ್ಮಾನ ತೆಗೆದು ಕೊಳ್ಳಲು, ನೋ.. ವೇ.. ಛಾನ್ಸೇ ಇಲ್ಲಾ.. ಏಕೆಂದರೆ ಸರ್ಕಾರವೇ ಇಲ್ಲ, ಇರುವುದೆಲ್ಲಾ ಒನ್ ಮ್ಯಾನ್ ಆರ್ಮಿ ಅಂದೆ. ಅದಕ್ಕವನು ಅದೆಲ್ಲಾ ನನಗೆ ಗೊತ್ತಿಲ್ಲಾ ಸಾ.. ನಮ್ ಗುರು ಏಳವ್ರೇ.. ಮಗಾ.. 300 ರೂಪಾಯಿ ಒಂದು ಚಿಕನ್ ಬಿರ್ಯಾನಿ ಒಂದು ಕ್ವಾಟ್ರು ಕೊಡ್ತೀವಿ ಅಂತ ಏಳಿ ಒಂದೈವತ್ತು- ನೂರು ಜನಾನಾ ಎತ್ತಾಕ್ಕೊಂಡ್ ಟೌನ್ ಆಲ್ ತವಾ ಬಾ.. ಅಂತಾ ಅದಕ್ಕೇ ಓಡಾಡ್ತಾ ಇವ್ನಿ, ನೀವು ಬರೋಂಗಿದ್ರೆ ಏಳಿ, ಕರ್ಕೊಂಡು ಓಯ್ತೀನಿ ಅಂದಾ. ಇಲ್ಲಪ್ಪಾ ನನಗೆ ಕೆಲಸ ಇದೇ. ಬಹಳ ಒಳ್ಳೇ ಕೆಲಸ ಮಾಡ್ತಾ ಇದ್ದೀರಿ. ನಿಮ್ಮಂತಹವರು ಇರೋದ್ರಿಂದಾನೇ ಇನ್ನೂ ನಮ್ಮ ರಾಜ್ಯದಲ್ಲಿ ಕನ್ನಡ ಅಂತಾ ಉಳ್ಕೊಂಡಿದೇ ಅಂತಾ ಹೇಳಿ ಸುಮ್ಮನೆ ಸಾಗ ಹಾಕಿದೆ.

hindhi1

ಇಷ್ಟಕ್ಕೂ ಆಗಿದ್ದೇನು ಎಂದರೆ, ಇನ್‌ಫೆಂಟ್ರಿ ರಸ್ತೆಯ ಬಳಿ ಮಾರವಾಡಿಗಳ ಗಣೇಶ ಬಾಗ್‌ ಪ್ರಾರ್ಥನಾ ಮಂದಿರದಲ್ಲಿ ಅವರ ಗುರುಗಳು ಚಾತುರ್ಮಾಸ ಆಚರಣೆ ಮಾಡುತ್ತಿದ್ದು ಅದರ ಸಂಬಂಧಪಟ್ಟಂತೆ ಹಿಂದಿ ಭಾಷೆಯಲ್ಲಿ ಬ್ಯಾನರ್‌ ಕಟ್ಟಲಾಗಿತ್ತು. ಸಾರ್ವಜನಿಕ ಪ್ರದೇಶದಲ್ಲಿ ಹಿಂದಿ ಭಾಷೆಯಲ್ಲಿ ಬ್ಯಾನರ್‌ ಕಟ್ಟಿದ್ದರಿಂದ ಕೆಲ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬ್ಯಾನರ್‌ ಹರಿದು ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್‌ ಕಿತ್ತು ಹಾಕಿ, ಅಲ್ಲಿನ ಭದ್ರತಾ ಸಿಬ್ಬಂದಿಗಳಿಗೆ ಕನ್ನಡ ಭಾಷೆಯ ಬಗ್ಗೆ ಸಣ್ಣದಾಗಿ ಭಾಷಣ ಬಿಗಿದು ‘ಕನ್ನಡವಿದ್ದರೆ ಶಾಂತಿ-ಇಲ್ಲದಿದ್ದರೆ ಕ್ರಾಂತಿ’ ಎಂದು ಎಚ್ಚರಿಸಿ, ಈ ಘಟನೆಯನ್ನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದನ್ನು ಗಮನಿಸಿದ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರು, ಬ್ಯಾನರ್‌ ಹರಿದು ಹಾಕಿದ್ದಕ್ಕಾಗಿ, ಕೋಮು ಸೌಹರ್ದತೆಗೆ ಧಕ್ಕೆ ತರುವ ಪ್ರಕರಣ ಎಂದು ದಾಖಲಿಸಿ, ಆ ಕನ್ನಡಪರ ಸಂಘಟನೆಗಳ ಆರು ಮಂದಿಯನ್ನು ಬಂಧಿಸಿ ಭಾನುವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ವಿಚಾರಣೆಗಾಗಿ ಆ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿದ್ದಾರೆ.

ಈ ಘಟನೆ ಬಗ್ಗೆ ಗುರು ಆನಂದ ಚಾತುರ್ಮಾಸ ಸಮಿತಿಯ ಕಾರ್ಯದರ್ಶಿ ಫ್ಯಾನ್‌ಚಂದ್‌ ಜೈನ್‌ ಅವರನ್ನು ಮಾಧ್ಯಮಗಳು ವಿಚಾರಿಸಿದಾಗ, ಈ ಕಾರ್ಯಕ್ರಮ ಸಂಪೂರ್ಣವಾಗಿ ಜೈನ ಸಮುದಾಯಕ್ಕಾಗಿಯೇ ಇದ್ದ ಕಾರ್ಯಕ್ರಮವಾಗಿದ್ದು ರಾಜ್ಯ ಮತ್ತು ದೇಶದ ಮೂಲೆ ಮೂಲೆಗಳಿಂದ ಹಲವಾರು ಜೈನ ಮುದಾಯದವರು ಬರುವವರಿದ್ದು ಹಾಗು ಇತರೇ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿದ್ದ ಕಾರಣ, ಬ್ಯಾನರನ್ನು ಹಿಂದಿಯಲ್ಲಿ ಮಾತ್ರವೇ ಹಾಕಿಸಲಾಗಿತ್ತು ಮತ್ತು ಕನ್ನಡದಲ್ಲಿ ಬ್ಯಾನರ್‌ ಹಾಕಿರಲಿಲ್ಲ ಎಂದು ತಿಳಿಸಿದರು. ಹಾಗೇ ತಮ್ಮ ಮಾತನ್ನು ಮುಂದುವರೆಸಿ, ನಾವು ಹಿಂದೆಯೂ ನಮ್ಮ ಅನೇಕ ಕಾರ್ಯಕ್ರಮಗಳಲ್ಲಿ ಇದೇ ರೀತಿ ಹಿಂದಿ ಭಾಷೆಯಲ್ಲಿಯೇ ಬ್ಯಾನರ್‌ ಹಾಕಿದ್ದೇವೆ, ಎಂದೂ ಕೂಡ ಇಂತಹ ಕಹಿ ಅನುಭವ ಆಗಿಲ್ಲ. ಈ ಶುಕ್ರವಾರ ಮಾತ್ರವೇ ಕೆಲ ಕನ್ನಡ ಕಾರ್ಯಕರ್ತರು ಬ್ಯಾನರ್‌ ಹರಿದಿದ್ದಾರೆ. ನಿಜವಾಗಿಯೂ ನಾವುಗಳಾರೂ, ಕನ್ನಡ ವಿರೋಧಿಗಳಲ್ಲ. ಚಾತುರ್ಮಾಸಕ್ಕೆ ಕನ್ನಡಿಗರಿಗೆ ಆಹ್ವಾನ ಇರದ ಕಾರಣ ಕೇವಲ ಹಿಂದಿಯಲ್ಲಿ ಮಾತ್ರವೇ ಬ್ಯಾನರ್‌ ಹಾಕಲಾಗಿತ್ತು ಎಂದು ಸ್ಪಷ್ಟೀಕರಿಸಿದ್ದಾರೆ.

ಇಡೀ ಪ್ರಕರಣವನ್ನು ಅವಲೋಕಿಸಿದರೆ ಅದೊಂದು ಸಮುದಾಯದ ಖಾಸಗೀ ಕಾರ್ಯಕ್ರಮ. ಭಾರತ ದೇಶ ಸರ್ವ ಸ್ವತಂತ್ಯ ದೇಶ ಮತ್ತು ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬ ಭಾರತೀಯನಿಗೂ ಇದೆ. ಅದಕ್ಕೂ ಹೆಚ್ಚಾಗಿ ಹಿಂದಿ ಭಾಷೆ ದೇಶದ ಹದಿನೈದು ಅಧಿಕೃತ ಭಾಷೆಗಳಲ್ಲಿ ಒಂದು. ಯಾರೋ ಕೆಲವು ಹುಡುಗರು ಯಾರದ್ದೋ ಕುಮ್ಮಕ್ಕಿನಿಂದ ಈ ರೀತಿಯ ಪ್ರಕರಣವನ್ನು ಅಚಾತುರ್ಯವಾಗಿ ಮಾಡಿದ್ದಾರೆ. ಪೋಲೀಸರು ಎರಡೂ ಕಡೆಯವರನ್ನು ಕರೆಸಿ ಮಾತಾನಾಡಿಸಿ ಸಮಾಧಾನ ಪಡಿಸಿ ಪ್ರಕರಣವನ್ನು ಅಲ್ಲೇ ಇತ್ಯರ್ಥ ಮಾಡಿಸಿ ಕಳುಹಿಸಬಹುತಾಗಿತ್ತು.

ಆದರೇ, ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದರು ಹಿಂದಿ ಬೋರ್ಡ್ ತೆಗೆಸುವ ನೆಪದಲ್ಲಿ ಗದ್ದಲ ಮಾಡಿದವರು ಗೂಂಡಾಗಳು ಎಂದು ಕರೆದದ್ದು ಕೆಲವರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಹಾಗಾಯ್ತು. ಸಣ್ಣದಾಗಿ ಇದ್ದ ಪೆಟ್ಟಿ ಕೇಸ್ ಒಂದಕ್ಕೆ ರಾಜಕೀಯ ಬಣ್ಣ ಬಳೆದು ಟಿಲಿಫೋನ್ ಕದ್ದಾಲಿಕೆಯಲ್ಲಿ ತಮ್ಮ ಬಂಡವಾಳ ಬಯಲಾಗಿದ್ದನ್ನು ಕಂಡು ಹೇಗಾದರೂ ಮಾಡಿ ರಾಜ್ಯದ ಜನರ ದಿಕ್ಕು ತಪ್ಪಿಸಲು ಪರದಾಡುತ್ತಿದ್ದ ಕೆಲ ರಾಜಕೀಯ ನಾಯಕರುಗಳು ಮತ್ತೊಮ್ಮೆ ಅಪವಿತ್ರ ಮೈತ್ರಿ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು, ಕನ್ನಡ ಪರ ಹೋರಾಟಗಾರ ತಿದಿ ತೀಡಿದ ಪರಿಣಾಮವೇ ಎಲ್ಲಾ ಖನ್ನಡ ಉಟ್ಟು ಓರಾಟಗಾರರೂ ಒಮ್ಮಿಂದ್ದೊಂಮ್ಮೆಲೆ ಅಖಾಡಕ್ಕೆ ಧುಮುಕಿದರು.

ಕಳೆದ ಮೂರು ವಾರಗಳಿಂದ ಆಶ್ಲೇಷ ಮಳೆ ಧಾಳಿಗೆ ಸಿಕ್ಕಿ ಮುಕ್ಕಾಲು ರಾಜ್ಯ ನೀರಾಪಾಲಾಗಿದೆ. ಇಂತಹ ಸಮಯದಲ್ಲಿ ಮಂತ್ರಿಮಂಡಲ ರಚನೆ ಎಂದು ಸಮಯ ವ್ಯರ್ಥ ಮಾಡದೇ ಮುಖ್ಯಮಂತ್ರಿಗಳು ಈ ಇಳೀ ವಯಸ್ಸಿನಲ್ಲಿಯೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ನೆರೆ ಸಂತ್ರಸ್ತರ ಜಾಗಗಳಿಗೆ ಹೋಗಿ ಸ್ಥಳೀಯ ಅಧಿಕಾರಿಗಳ ಬೆಂಬಲದಿಂದ ಸರ್ಕಾರದ ವತಿಯಿಂದ ಅಗತ್ಯ ನೆರವುಗಳನ್ನು ಕೊಡಿಸುತ್ತಿದ್ದಾರೆ. ಇನ್ನೂ ನಾನಾ ಸಂಘ ಸಂಸ್ಥೆಗಳೂ ತಮ್ಮ ಕೈಯಲ್ಲಾದ ಮಟ್ಟಿಗೆ ತನು ಮನ ಧನ ಅರ್ಪಿಸುವುದರೊಂದಿಗೆ ಜನರ ಸಂಕಷ್ಟಗಳಿಗೆ ನೆರವಾಗುತ್ತಿದ್ದಾರೆ. ಆಗೆಲ್ಲಾ ಕೈನೋವು, ಕಣ್ಣು ನೋವು, ಆರೋಗ್ಯ ಸರೀ ಇಲ್ಲಾ ಅಂತಾ ಸಬೂಬು ಹೇಳುತ್ತಾ, ಕೆಲಸಕ್ಕೆ ಕರೀ ಬೇಡಿ, ಬಿರ್ಯಾನಿಗೆ ಮರೀ ಬೇಡಿ ಎಂದು ಬಕ್ರೀದ್ ಬಿರ್ಯಾನಿ ತಿನ್ನುತ್ತಾ, ಇಲ್ಲಿಂದ ದಿಲ್ಲಿ- ದಿಲ್ಲಿಯಿಂದ ಇಲ್ಲಿ ಎಂದು ಐಶಾರಾಮ್ಯವಾಗಿ ಓಡಾಡುತ್ತಿದ್ದ ಈ ರಾಜಕೀಯ ಧುರೀಣರು ಸೀದಾ ಆ ಕನ್ನಡ ಸಂಘಟನೆಯ ಹಿರಿಯ ಮುಖಂಡರ ಆ ತತ್ ಕ್ಷಣದ ಅಗತ್ಯತೆಗಳನ್ನು ಪೂರೈಸಿ ಅವರನ್ನು ರಾಜ್ಯಸರ್ಕಾರ ಮತ್ತು ಕೇಂದ್ರ ಸರ್ಕಾರದ ಮೇಲೆ ಹಿಂದಿ ಹೇರಿಕೆ ಎಂದು ಛೂ.. ಬಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕೆಲ ವರ್ಷಗಳ ಹಿಂದೆ ಹೊಟ್ಟೆಗೆ ಹಿಟ್ಟಿಲ್ಲದೆ, ಜೀವನ ಸಾಗಿಸಲು ಮುಂಬೈಯಲ್ಲಿ ಬಾರ್ ಮತ್ತು ಹೋಟೆಲ್ನಲ್ಲಿ ಕೆಲಸ ಮಾಡುತ್ತಾ ಪುಡಿಗಾಸಿನಲ್ಲಿ ಜೀವನ ಸಾಗಿಸುತ್ತಿದ್ದವರು ಇಂದು ಅಧಿಕೃತವಾಗಿ ಅವರೇ ಘೋಷಿಸಿಕೊಂಡಂತೆ ನೂರಾರು ಕೋಟಿಗಳಷ್ಟು ಆಸ್ತಿ ಮಾಡಿ ಕೊಂಡಿದ್ದಾರೆ. ಕಷ್ಟ ಪಟ್ಟು ತಿಂಗಳಿಗೆ 1 ಲಕ್ಷ ರೂಪಾಯಿ ಸಂಪಾದನೆ ಮಾಡಿ ಅಷ್ಟೂ ಹಣವನ್ನು ಖರ್ಚು ಮಾಡದೇ ಉಳಿಸಿದರೂ 1 ಕೋಟಿಯಾಗಿ ಸಂಗ್ರಹಿಸಿ ಇಡಲು 8 ವರ್ಷ 3 ತಿಂಗಳು ಬೇಕು. ಇನ್ನು ಯಾವುದೇ ಕೆಲಸವನ್ನೂ ಮಾಡದೇ, ಯಾವುದೇ ವ್ಯವಹಾರವನ್ನೂ ಮಾಡದೇ ಐಶಾರಾಮ್ಯವಾಗಿ ಜೀವನ ನಡೆಸುತ್ತಾ ದುಬಾರೀ ಕಾರುಗಳಲ್ಲಿಯೇ ಓಡಾಡುತ್ತಾ ಕೆಲವೇ ಕೆಲವು ವರ್ಷಗಳಲ್ಲಿ ನೂರಾರು ಕೋಟಿಗಳಷ್ಟು ಆಸ್ತಿ ಮಾಡಲು ಹೇಗೆ ಸಾಧ್ಯ? ಕನ್ನಡ ಸಂಘಟನೆಗಳಲ್ಲಿ ಈ ಪರಿಯಾಗಿ ದುಡ್ದಿದೆ ಎಂದು ತಿಳಿದಿದ್ದೇ ತಡಾ, ಒಂದಾಗಿದ್ದ ಕನ್ನಡ ಸಂಘಟನೆ ಛಿದ್ರ ಛಿದ್ರವಾಗಿ ನೂರಾರು ಸಂಘಟನೆಗಳಾಗಿ ಆಗಿ ಹೋದವು. ಒಮ್ಮಿಂದೊಮ್ಮೆಲ್ಲೆ ಎಂಕಾ, ನಾಣೀ, ಸೀನಾ ಎಲ್ಲರೂ ಉಟ್ಟು ಖನ್ನಡ ಓರಾಟಗಾರರಾಗಿ ಪರಿವರ್ತಿತರಾಗಿ ಹೋದರು.

ಈ ಕನ್ನಡ ಪರ ಸಂಘಟನೆಗಳು ಕರ್ನಾಟಕ ರಾಜ್ಯ ಮತ್ತು ಕನ್ನಡ ಭಾಷೆಯನ್ನು ಗುತ್ತಿಗೆ ತೆಗೆದು ಕೊಂಡಂತೆ ತಮ್ಮ ಹದ್ದು ಮೀರಿ ಎಲ್ಲೆ ಮೀರಿ ವರ್ತಿಸುತ್ತ ಭಯದ ವಾತಾವರಣ ನಿರ್ಮಿಸತೊಡಗಿದವು. ಯಾವುದೇ ಸಭೆ ಸಮಾರಂಭಗಳು ಆಗಬೇಕಿದ್ದರೆ ಇಂತಿಷ್ಟು ಕಪ್ಪ ಕಾಣಿಕೆ ಆ ಸಂಘಟನೆಗಳಿಗೆ ಕೊಟ್ಟಲ್ಲಿ ಮಾತ್ರವೇ ಕಾರ್ಯಕ್ರಮ ಸುಗಮವಾಗಿ ಸಾಗುತ್ತದೆ ಇಲ್ಲದಿದ್ದಲ್ಲಿ ಅನಾವಶ್ಯಕ ಕಿರಿಕಿರಿ ಮಾಡಿಸ ತೊಡಗಿದವು. ಒಂದೆರಡು ವರ್ಷದ ಹಿಂದೆ ಇದೇ ಕನ್ನಡ ಪರ ಸಂಘಟನೆಯ ಹಿರಿಯ ಕಾರ್ಯಕರ್ತ ಬೆಂಗಳೂರಿನಲ್ಲಿ Sunny Leone ಕಾರ್ಯಕ್ರಮ ನಿಗದಿಯಾಗಿದ್ದಾಗ, ಗಲಾಟೆ ಮಾಡುತ್ತೇವೆಂದು ಆಯೋಜಕರನ್ನು ಬೆದರಿಸಿ ಮೊದಲು 50 ಲಕ್ಷ ನಂತರ 25 ಕೊಟ್ಟರೆ ಇಡೀ ಕಾರ್ಯಕ್ರಮವನ್ನು ನಿರ್ವಿಘ್ನವಾಗಿ ತಮ್ಮ ಮುಂದಾಳತ್ವದಲ್ಲಿಯೇ ನಡೆಸಿಕೊಡುತ್ತೇವೆ ಎಂದು ಹೇಳಿದ ವೀಡೀಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿ ಕಡೆಗೆ ಆ ಕಾರ್ಯಕ್ರಮವೇ ರದ್ದಾಗಿದ್ದು ಈಗ ಇತಿಹಾಸ.

hindhi2

ಅಷ್ಟಕ್ಕೂ ಈ ಸಂಘಟನೆಗಳಿಗೆ ಕನ್ನಡದ ಬಗ್ಗೆ ಅಷ್ಟೊಂದು ಕಾಳಜಿ ಹೊಂದಿದೆಯಾ ಎಂದು ಗಮನಿಸಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಕನ್ನಡದ ಸಂಘಟನೆಯ ಮುಂದಾಳತ್ವ ಹೊಂದಿರುವ ಬಹುತೇಕರು ಅನ್ಯಭಾಷಿಕರೇ. ಕನ್ನಡ ನಾಡಿನಲ್ಲಿ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಕನ್ನಡ ಭಾಷೆಯನ್ನು ದುರ್ಬಳಕೆ ಮಾಡಿಕೊಂಡು ಒಂದಷ್ಟು ಜನರನ್ನು ಸದಾ ಹಿಂದೆ ಮುಂದೆ ಇಟ್ಟು ಕೊಂಡು ಓಡಾಡುತ್ತಾ ಜನರನ್ನು ಭಯಭೀತರನ್ನಾಗಿ ಮಾಡುತ್ತಾ ತಿಂಗಳು ತಿಂಗಳು ಕಪ್ಪಾ (ಹಫ್ತಾ) ವಸೂಲು ಮಾಡುವವರೇ ಬಹಳಷ್ಟು ಮಂದಿ ಇದ್ದಾರೆ.

ಚುನಾವಣಾ ಸಮಯದಲ್ಲಿ ಜೆಸಿ ನಗರ ಶಿವಾಜೀ ನಗರ, ತಿಲಕ್ ನಗರ, ಟ್ಯಾನರೀ ರೋಡ್, ವಿಲ್ಸನ್ ಗಾರ್ಡನ್ ಈ ಭಾಗಗಳಲ್ಲಿ ಹುಡುಕಿದರೂ ಒಂದಾದರೂ ಕನ್ನಡ ಬ್ಯಾನರ್ ಕಾಣದೇ ಅಲ್ಲೆಲ್ಲಾ ಉರ್ದು ಮಯವಾಗಿರುತ್ತದೆ.

ಅದೇ ರೀತಿ, ಹಲಸೂರು, ಇಂದಿರಾನಗರದ ಕೆಲಭಾಗ, ಶ್ರೀರಾಮ ಪುರ, ಚಿಕ್ಕ ಪೇಟೆಯ ಕೆಲ ಭಾಗ, ಬೆಂಗಳೂರಿನ ದಂಡು ಪ್ರದೇಶದಲ್ಲಿ ಸಂಪೂರ್ಣ ತಮಿಳುಮಯ.

ಇನ್ನು ಕಲಬುರಗಿಯ ನಗರ ಪಾಲಿಕೆಯ ಕಟ್ಟಡದ ಮೇಲೆ ಉರ್ದು ಬೋರ್ಡ್ ಹಾಕಲೇಬೇಕು. ಉರ್ದು ಇಲ್ಲದಿದ್ದಲ್ಲಿ ಕನ್ನಡವೂ ಬೇಡಾ ಎಂದು ಉದ್ಧಟತನದ ಇಬ್ಬಂದಿತನದ ಧೋರಣೆ ಪ್ರದರ್ಶಿಸಿದವರು ಇದೇ ಖನ್ನಡ ಪರ ಓರಾಟಗಾರರೇ.

ಹಾಗೆ ನೋಡಿದರೆ ಆಗ್ಗಿಂದ್ದಾಗೆ ನಡೆಯುವ ಅನ್ಯ ಧರ್ಮೀಯರ ಅನೇಕ ಧಾರ್ಮಿಕ ಸಮಾವೇಶಗಳು ಮತ್ತು ಸುವಾರ್ತಾ ಕೂಟಗಳ ಫೆಕ್ಸ್ ಗಳು ಮತ್ತು ಪೋಸ್ಟರ್ಗಳು ಕನ್ನಡಕ್ಕಿಂತ, ಉರ್ದು, ತಮಿಳು ಮತ್ತು ತೆಲುಗು ಮಯವಾಗಿಯೇ ಇರುತ್ತದೆ. ಆಗೆಲ್ಲಾ ಈ ಓರಾಟಗಾರರು ಈ ರೀತಿಯಾಗಿ ಫ್ಲೆಕ್ಸ್ ಅಥವಾ ಪೋಸ್ಟರ್ ಹರಿದು ಪ್ರತಿಭಟನೆ ಮಾಡಿದ್ದು ಯಾರೂ ಕಂಡೆ ಇಲ್ಲ.

ಇನ್ನು ಬಹುತೇಕ ರಾಜಕೀಯ ಪಕ್ಷದವರು ತಮ್ಮ ರಾಜಕೀಯ ಲಾಭಕ್ಕಾಗಿ ತಮ್ಮ ಬಾಂಧವರ ಬೃಹತ್ ಸಮಾವೇಶಗಳನ್ನು ಏರ್ಪಡಿಸಿ ಆ ಬಾಂಧವರ ಭಾಷೆಯಲ್ಲೇ ಕರಪತ್ರ ಹೊರಡಿಸಿ ಅಷ್ಟೇ ಸಾಲದು ಎಂಬಂತೆ ಕಾಶ್ಮೀರದಿಂದ ಪ್ರತ್ಯೇಕತಾವಾದಿಯನ್ನು ಕರೆಸಿ ಭಾಷಣ ಬಿಗಿಸಿದ್ದಲ್ಲದೇ ,ಇಲ್ಲೇ ಇರುವ ಕೆಲ ಕುಲಬಾಂಧವರು ಕನ್ನಡ ಗೊತ್ತಿದ್ದರೂ ಅವರ ಭಾಷೆಯಲ್ಲಿಯೇು ಪ್ರಚೋದನಾತ್ಮಕವಾಗಿ ಭಾಷಣ ಬಿಗದ ಸಮಯಲ್ಲಿ ಕಾಣಿಸದ ಈ ಖನ್ನಡ ಓರಾಗಾರರು ಈಗ ಪ್ರತ್ಯಕ್ಷರಾಗಿರುವುದು ಅನುಮಾನವನ್ನು ಹುಟ್ಟು ಹಾಕುತ್ತಿದೆ.

ಆರಂಭದಲ್ಲಿ ನಾನು ಹೊಡೆದ ಹಾಗೆ ಮಾಡುತ್ತೀನಿ. ನೀನು ಅತ್ತ ಹಾಗೆ ಮಾಡು. ಯಾವಾಗ ಈ ಸಂಘಟನೆಗಳಿಗೆ ತಮಗೆ ಸಲ್ಲಬೇಕಾದ ಕಪ್ಪವನ್ನು ಎಲ್ಲಾ ರಾಜಕೀಯ ಪಕ್ಷದವರೂ ಕೊಡುತ್ತಾರೋ ಅಲ್ಲಿಂದ ಹೊಟ್ಟೆ ತುಂಬಿದ ತೋಳದ ರೀತಿ ಜಾಣ ಕುರುಡು ಮತ್ತು ಮೌನ ವಹಿಸಿ ಬಿಡುತ್ತಾರೆ.

ನಿಜಕ್ಕೂ ಜೈನ ಮತದವರು ಸಾಧು ಸ್ವಭಾವದವರು. ನಿಜ. ಪರ ಊರಿನಿಂದ ತಮ್ಮ ಹೊಟ್ಟೇ ಪಾಡಿಗೆ ಇಲ್ಲಿ ಬಂದು ಅತೀ ಶೀಘ್ರದಲ್ಲಿಯೇ ಅರೇ ಬರೇ ಕನ್ನಡವನ್ನಾದರೂ ಕಲಿತು ನಾನಾ ರೀತಿಯ ವ್ಯಾಪಾರವನ್ನು ಮಾಡಿ ನಾಲ್ಕಾರು ಕಾಸು ಸಂಪಾದಿಸಿ ಅದರಲ್ಲಿ ಕೆಲವಷ್ಟನ್ನಾದರೂ ಸಮಾಜ ಮುಖೀ ಕಾರ್ಯಗಳಲ್ಲಿ ವಿನಿಯೋಗಿಸುತ್ತಾರೆ. ಆದರೆ ಅವರಾರು ಕಳ್ಳತನವನ್ನಾಗಲೀ, ದರೋಡೆಯನ್ನಾಗಲೀ ಅಥವಾ ರೋಲ್ ಕಾಲ್ ಮಾಡಿ ಸಂಪಾದಿಸಿದ ಉದಾಹರಣೆಯೇ ಇಲ್ಲಾ.

ಇಂದಿಗೂ ಬಹುತೇಕ ಸಾರಿಗೆ ಸಂಸ್ಥೆಗಳ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ಜೈನ್ ಸಮುದಾಯದವರೇ ಉಚಿತವಾಗಿ ನಿರ್ಮಿಸಿ ಕೊಟ್ಟಿರುವುದು ನಮಗೆಲ್ಲಾ ತಿಳಿದ ವಿಷಯವೇ.

ಭಯ್ಯಾ ಪಾನಿ ಪೂರಿ ದೇನಾ, ಭಯ್ಯಾ ತೋಡಾ ಜ್ಯಾದಾ ಟೀಕಾ ಡಾಲ್ನಾ ಅಂತಾನೋ, ಇಲ್ಲವೇ ಭಯ್ಯಾ ಏ ಬಿಂದಿ ಪ್ಯಾಕೇಟ್ ಕಿತ್ನಾಕಾ ಹೈ? ತೋಡಾ ಕಮ್ ಕರ್ಕೇ ದೇನಾ ಎಂದು ನಮ್ಮವರೇ ಹಿಂದಿಯಲ್ಲಿ ಮಾತಾನಾಡಿಸುವುದನ್ನು ಕಣ್ಣಾರೆ ಇಂದಿಗೂ ನೋಡಬಹುದು. ಅದೇ ರೀತಿ, ಏ ಬಾಯ್, ಚಾರ್ ಸೌ ಬೀಸ್ ಪಾನ್ ದೇನಾ, ತೋಡಾ ಸುಪಾರೀ ದೇಖ್ ಕೇ ಡಾಲ್ನಾ ಎಂದು ಬೀಡಾ ಹಾಕಿಸಿಕೊಂಡು ತಿಂದು ಎಲ್ಲೆಂದರಲ್ಲಿ ಉಗಿಯುವ ನೂರಾರು ಖನ್ನಢ ಓರಾಟಗಾರರು ಇಂದಿಗೂ ಕಾಣ ಸಿಗುತ್ತಾರೆ.

 • ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ. ಕಾಶ್ಮೀರದಿಂದ (ಇತ್ತೀಚಿನ ಸುದ್ದಿ) ಹಿಡಿದು ಕನ್ಯಾಕುಮಾರಿಯ ವರೆಗೂ ಕಛ್ ನಿಂದ ಕಟಕ್ ವರೆಗೂ ಯಾವ ಭಾರತೀಯ ಬೇಕಾದರೂ ಸ್ವತಂತ್ರ್ಯವಾಗಿ ವಾಸಿಸಬಹುದು. ತಮಗಿಷ್ಟವಾದ ಭಾಷೆಯನ್ನು ಮಾತನಾಡಬಹುದು. ಆದರೆ ಬಲವಂತವಾಗಿ ಮತ್ತೊಬ್ಬರ ಮೇಲೆ ತಮ್ಮ ಭಾಷೆಯನ್ನು ಹೇರಬಾರದಷ್ಟೇ.

  ಕನ್ನಡ ಭಾಷೆಯನ್ನು ಉಳಿಸುವುದು ಮತ್ತು ಬೆಳೆಸುವುದು ಕೇವಲ ಕೆಲ ಸಂಘ ಸಂಸ್ಥೆಗಳ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ.

 

 • ಮನೆಯೇ ಮೊದಲ ಪಾಠ ಶಾಲೆಯಾದ ಕಾರಣ ಮನೆಯಲ್ಲಿ ಕನ್ನಡವೇ ಪ್ರಧಾನವಾಗಿರಲಿ. ಕನ್ನಡದ ಧಾರಾವಾಹಿಗಳು ಮತ್ತು ಕನ್ನಡದ ಚಲನ ಚಿತ್ರಗಳನ್ನು ಮಕ್ಕಳಿಗೆ ಹೆಚ್ಚಾಗಿ ತೋರಿಸಿ.
 • ನಮ್ಮ ಮಕ್ಕಳನ್ನು ಕನ್ನಡ ಶಾಲೆ ಅದರಲ್ಲೂ ಸರ್ಕಾರೀ ಶಾಲೆಗೇ ಸೇರಿಸಿ ಎಂದು ಹೇಳುವುದರ ಮೊದಲು, ಅವರು ಕಲಿಯುವ ಶಾಲೆಯಲ್ಲಿ ಕನ್ನಡ ಸರಿಯಾಗಿ ಓದುವುದುನ್ನು ಬರೆಯುವುದನ್ನು ಮತ್ತು ಮಾತನಾಡುವುದನ್ನು ಕಲಿಸಿ.
 • ಒಬ್ಬ ಕನ್ನಡಿಗನಾಗಿ ಸರ್ಕಾರೀ, ಖಾಸಗೀ ಮತ್ತು ಬ್ಯಾಂಕ್ಗಳಲ್ಲಿ ಕನ್ನಡವನ್ನೇ ವ್ಯಾವಹಾರಿಕ ಭಾಷೆಯನ್ನಾಗಿ ಬಳಸಿದಲ್ಲಿ ಉಳಿದವರೂ ಅದಕ್ಕೆ ತಕ್ಕಂತೆ ಕನ್ನಡದಲ್ಲಿಯೇ ಪ್ರತಿಕ್ರಿಯಿಸುತ್ತಾರೆ.
 • ರಾಜ್ಯ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಕೆಲವು ಉದ್ಯೋಗವನ್ನು ಮೀಸಲಿಟ್ಟಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವವರ ಸಂಖ್ಯೆ ಹೆಚ್ಚಾದೀತು.
 • ಕನ್ನಡದ ಮೇಲಿನ ಅಭಿಮಾನದಿಂದ ಅದನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ಎಲ್ಲಾ ಕನ್ನಡಿಗರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೇ ಹೊರತು, ಕನ್ನಡದ ಹೆಸರಿನಿಂದಲೇ ಅನ್ಯಭಾಷಿಗರನ್ನು ಹೆದರಿಸಿ ಬೆದರಿಸಿ ನಮ್ಮ ಹೊಟ್ಟೆ ಹೊರೆಯುವ ಕಾಯಕಕ್ಕೆ ಎಂದೂ ಯಾರೂ ಇಳಿಯಬಾರದು. ಏಕೆಂದರೆ ಕನ್ನಡಿಗರದ್ದು ಕೊಡುವ ಕೈ ಹೊರತು ಬೇಡುವ ಕೈ ಅಲ್ಲಾ. ದೇಹಿ ಎಂದು ಬಂದವರಿಗೆ ಹೊಟ್ಟೆಯ ತುಂಬಾ ಅನ್ನವನಿಟ್ಟು ನೀರಿನ ಜೊತೆ ಬೆಲ್ಲವನ್ನೂ ಕೊಡುವ ವಿಶಾಲ ಹೃದಯಿಗಳು. ಇಂತಹ ಸಣ್ಣ ಪುಟ್ಟ ಕ್ಷುಲ್ಲಕ ವಿಷಯಗಳು ಕನ್ನಡಿಗರ ಸ್ವಾಭಿಮಾನಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆ ತರುವ ಕಾರಣ ಅದರಿಂದ ದೂರವಿರೋಣ. ನಾವೂ ಸ್ವಾಭಿಮಾನಿಗಳಾಗಿ ತಲೆಯೆತ್ತಿ ಬಾಳೋಣ. ಇತರರನ್ನೂ ನೆಮ್ಮದಿಯಾಗಿ ಬಾಳಗೊಡೋಣ.

ಏನಂತೀರೀ?

 

 

2 thoughts on “ಭಾಷಾ ಹೇರಿಕೆಯೋ, ಇಲ್ಲಾ ವಿಷಯಾಂತರವೋ

 1. ತುಂಬಾ ಚೆನ್ನಾಗಿ ವಿವರವಾಗಿ ಅಧ್ಯಯನ ಮಾಡಿ ಬರಿದಿದ್ದಿರಿ. ಇದು ಇಲ್ಲಿಗೆ ನಿಲ್ಲಬಾರದು ಮುಂದೆ ಸೋಶಿಯಲ್ ಮೀಡಿಯಾ ದಿಂದ ಎಲ್ಲರಿಗೂ ಮುಟ್ಟಬೇಕು. ಖಡಕ್ ಆಗಿ ಬರೀದಿದ್ದಿರಿ. ನಿಮಗೊಂದು ನಮಸ್ಕಾರ ಗುರುಗಳೇ

  Like

 2. ನಿಮ್ಮ ಲೇಖನದಲ್ಲಿ ಬರೆದಿರುವಂತಹ ಒಂದೊಂದು ಪದವು ಅಕ್ಷರಶಃ ಸತ್ಯ.
  ದುಡ್ಡಿಗಾಗಿ ತಮ್ಮತನವನ್ನು ಮಾರಿಕೊಳ್ಳುವವರಿಗೆ ಬಟ್ಟೆ ಸುತ್ಕೊಂಡು ಹೊಡೆದ ಹಾಗಿದೆ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s