ಆಗ ಎಂಭತ್ತರ ದಶಕ. ನಾವಿನ್ನೂ ಚಿಕ್ಕವರು. ಆಗ ತಾನೇ ಸಂಗೀತದ ಬಾಲ ಪಾಠ ನಡೆಯುತ್ತಿತ್ತು. ಯಾವುದೇ ಹಾಡು ಕೇಳಿದರೂ ಈ ಗಾಯಕರು ಯಾರು? ಈ ಹಾಡು ಯಾವ ರಾಗದಲ್ಲಿದೆ? ಯಾವ ತಾಳ ಹೀಗೆ ಮನಸ್ಸಿನಲ್ಲಿಯೇ ಮಂಡಿಗೆ ಹಾಕುತ್ತಿದ್ದಂತಹ ಕಾಲ. ನಮಗೆಲ್ಲಾ ಅಂದಿನಕಾಲದಲ್ಲಿ ರೇಡಿಯೋ ಒಂದೇ ಸುಲಭದ ಮನೋರಂಜನಾ ಸಾಧನ. ಚಲನಚಿತ್ರಗೀತೆಗಳು, ಭಾವಗೀತಗಳು, ಸುಗಮ ಸಂಗೀತ, ನಾಟಕಗಳು, ಗಮಕ ರೂಪಕ ಮತ್ತು ಶಾಸ್ತ್ರೀಯ ಸಂಗೀತ ಎಲ್ಲವನ್ನೂ ರೇಡಿಯೋ ಮೂಲಕವೇ ಕೇಳುತ್ತಿದ್ದೆವು. ಅದೊಂದುದಿನ ಜಗದೊದ್ದಾರನಾ… ಆಡಿಸದಳೇಶೋಧಾ.. ಜಗದೊದ್ದಾರನಾ... ಎಂಬ ಹಾಡು ಪ್ರಸಾರವಾಗುತ್ತಿತ್ತು. ಅದಾಗಲೇ ಸುಪ್ರಸಿದ್ಧವಾದ ಆ ಹಾಡನ್ನು ಯಾರೋ ಮಾಹಾನುಭಾವ ಸುಶ್ರಾವ್ಯವಾಗಿ ಹಾಡುತ್ತಿದ್ದರಾದರೂ, ಉಚ್ಚಾರದಲ್ಲಿ ಸ್ವಲ್ಪ ವೆತ್ಯಾಸವಿತ್ತು. ಯಾರೂ ವಿದೇಶಿಯರು ಕನ್ನಡ ಹಾಡನ್ನು ಹಾಡಿದಂತೆ ಇದ್ದದ್ದನ್ನು ಕೇಳಿಸಿಕೊಂಡು, ಅಣ್ಣಾ, ಈ ಹಾಡನ್ನು ಹಾಡುತ್ತಿರುವವರು ಯಾರು? ಎಂದು ನಮ್ಮ ತಂದೆಯವರನ್ನು ವಿಚಾರಿಸಿದಾಗ, ಅವರು ಇದನ್ನು ಜಾನ್ ಬಿ. ಹಿಗ್ಗಿನ್ಸ್ ಎಂಬ ವಿದೇಶದವರು ಹಾಡಿದ್ದಾರೆ. ತುಂಬಾ ಚೆನ್ನಾಗಿ ಹಾಡುತ್ತಾರೆ. ಅವರ ಕೃಷ್ಣಾ ನೀ ಬೇಗನೇ ಬಾರೋ…. ಹಾಡನ್ನು ಕೇಳಬೇಕು. ಇನ್ನೂ ತುಂಬಾ ಚೆನ್ನಾಗಿದೆ ಎಂದು ತಿಳಿಸಿದರು.
ಈ ರೀತಿಯಾಗಿ ನನಗೆ ಮೊತ್ತ ಮೊದಲ ಬಾರಿಗೆ ಜಾನ್ ಬೋರ್ತ್ವಿಕ್ ಹಿಗ್ಗಿನ್ಸ್ ಅವರ ಪರಿಚಯವಾಗಿ ನಂತರ ಕುತೂಹಲದಿಂದ ಅವರಿವರ ಬಳಿ ಈ ವಿದೇಶೀ ಮನುಷ್ಯ ಕರ್ನಾಟಕ ಸಂಗೀತವನ್ನು ಸುಶ್ರಾವ್ಯವಾಗಿ ಹಾಡುತ್ತಿರುವುದನ್ನು ತಿಳಿಸಿದಾಗ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯತೊಡಗಿತು.
ಜಾನ್ ಹಿಗ್ಗಿನ್ಸ್ ಹುಟ್ಟಿದ್ದು ಸೆಪ್ಟೆಂಬರ್ 18, 1939 ಅಮೆರಿಕದ ಮೆಸಾಚುಸೆಟ್ಸ್ ಎಂಬ ಪ್ರದೇಶದಲ್ಲಿ. ಅದೇ ಊರಿನ ಫಿಲಿಪ್ಸ್ ಅಕಾಡೆಮಿಯಲ್ಲಿ ಎಂಬ ಶಾಲೆಯಲ್ಲಿ ತಂದೆ ಮತ್ತು ತಾಯಿ ಇಬ್ಬರೂ ಶಿಕ್ಷಕರು. ಹಾಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನೆಲ್ಲಾ ಕಲಿತದ್ದು ಅದೇ ಶಾಲೆಯಲ್ಲಿಯೇ. ಅಪ್ಪಾನ ಬಳಿ ಇಂಗ್ಲೀಷ್ ಕಲಿತರೆ ಅಮ್ಮನ ಬಳಿ ಪಾಶ್ಚಾತ್ಯ ಸಂಗೀತ. ಪ್ರೌಢ ಶಿಕ್ಷಣ ಮುಗಿದ ನಂತರ 1962ರಲ್ಲಿ ಸಂಗೀತ ಮತ್ತು ಇತಿಯಾದದಲ್ಲಿ ಬಿ.ಎ. ಪದವಿ ಮುಗಿಸಿ, 1964ರಲ್ಲಿ ಮ್ಯೂಸಿಕಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದು ಕೆಲ ಕಾಲ ಅಲ್ ಮಿನೆಸೋಟಾದ ವಿಶ್ವವಿದ್ಯಾನಿಲಯದಲ್ಲಿ ಪಾಠವನ್ನೂ ಮಾಡಿದರು. ಅದೇ ಕಾಲ ಘಟ್ಟದಲ್ಲಿ ಬೇರೆ ಬೇರೆ ಪ್ರಾಕಾರಗಳ ಸಂಗೀತದ ಕುರಿತಾದ ಅಧ್ಯಯನ ಮಾಡುತ್ತಾ ಅದೇ ವಿಷಯದ ಮೇಲೆ 1973ರಲ್ಲಿ ಪಿಎಚ್.ಡಿ ಪಡೆದು ಡಾ. ಜಾನ್ ಬೋರ್ತ್ವಿಕ್ ಹಿಗ್ಗಿನ್ಸ್ ಎಂದು ಪ್ರಖ್ಯಾತರಾಗುತ್ತಾರೆ.
ಹಾಗೆ ಪಿಎಚ್.ಡಿ ಮಡುತ್ತಿದ್ದ ಸಮಯದಲ್ಲಿ ಜಗತ್ತಿನ ಹಲವು ಸಂಗೀತ ಪ್ರಕಾರಗಳ ಪೈಕಿ ಭಾರತೀಯ ಸಂಗೀತದ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದಾಗ ಅವರಿಗೆ ಕರ್ನಾಟಕ ಸಂಗೀತದ ಕಡೆ ಹೆಚ್ಚಿನ ಗೀಳು ಮೂಡುತ್ತದೆ. ಕರ್ನಾಟಕ ಸಂಗೀತದಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಸ್ಥಳೀಯವಾಗಿ ಲಭ್ಯರಿದ್ದ ಶ್ರೀ ರಾಬರ್ಟ್ ಬ್ರೌನ್ ಮತ್ತು ಶ್ರೀ ಟಿ. ರಂಗನಾಥನ್ ಅವರ ಬಳಿ ಸ್ವರ ಪ್ರಸ್ತಾರದಿಂದ ಹಿಡಿದು ಸಂಗೀತ ರಸಾಸ್ವಾದನೆಯವರೆಗಿನ ಹಲವು ಹಂತಗಳನ್ನು ಕಲಿತುಕೊಳ್ಳುತ್ತಾರೆ. ಏನೇ ಕಲಿತರು ಅದರಲ್ಲಿ ಪ್ರೌಢತೆಯನ್ನು ಸಾಧಿಸುವ ಛಲಗಾರಾಗಿದ್ದ ಹಿಗ್ಗಿನ್ಸ್ ರವರು ಹೆಚ್ಚಿನ ಅಭ್ಯಾಸಕ್ಕಾಗಿ ಫುಲ್ಬ್ರೈಟ್ ಫೆಲೋಶಿಪ್ ಪಡೆದು ಭಾರತದ ಅಂದಿನ ಮದರಾಸು ಇಂದಿನ ಚನ್ನೈಗೆ ಬರುತ್ತಾರೆ. ಅಲ್ಲಿ ಖ್ಯಾತ ಸಂಗೀತಗಾರರಾಗಿದ್ದ ಟಿ. ವಿಶ್ವನಾಥನ್ ಬಳಿ ಶಾಸ್ತ್ರೋಕ್ತವಾಗಿ ಶಿಷ್ಯ ವೃತ್ತಿ ಸ್ವೀಕರಿಸಿ, ಒಂದೆರಡು ವರ್ಷಗಳಲ್ಲೇ ಕಛೇರಿ ಕೊಡುವಷ್ಟು ಪ್ರಾವೀಣ್ಯತೆ ಪಡೆದು 1966ರಲ್ಲಿ ಮದ್ರಾಸಿನಲ್ಲಿ ವರ್ಷಾ ವರ್ಷ ಅದ್ದೂರಿಯಾಗಿ ನಡೆಯುವ ಪ್ರತಿಷ್ಠಿತ ತ್ಯಾಗರಾಜ ಆರಾಧನೆಯಲ್ಲಿ ಮೊತ್ತಮೊದಲಿನ ಸಭಾಕಛೇರಿಯನ್ನೇ ಕೊಡುತ್ತಾರೆ.
ಮದ್ರಾಸಿನ ತ್ಯಾಗರಾಜ ಆರಾಧನೆಯೆಂದರೆ ಅದು ಬಹಳ ವಿದ್ವತ್ಪೂರ್ಣ ಸಭೆ. ದೇಶದ ನಾನಾ ಭಾಗದ ಸಂಗೀತ ವಿದ್ವಾಂಸರುಗಳು ತಮ್ಮಜೀವಮಾನದಲ್ಲಿ ಒಮ್ಮೆಯಾದರೂ ಅಲ್ಲಿ ಸಂಗೀತ ಕಛೇರಿ ನಡೆಸುವ ಸೌಭಾಗ್ಯ ಸಿಗಲಿ ಎಂದು ಆಶಿಸುವಂತಹ ಸ್ಥಳ. ಅಂತಹ ಜಾಗದಲ್ಲಿ ಈ ವಿದೇಶೀ ಸಂಗೀತಗಾರ ಅದು ಹೇಗೆ ಹಾಡುತ್ತಾನೆ ಎಂಬುದನ್ನು ನೋಡಲೆಂದೇ ಸಾವಿರಾರು ವಿದ್ವಾಂಸರುಗಳು ಸೇರಿರುತ್ತಾರೆ. ಸ್ವತಃ ಹಿಗ್ಗಿನ್ಸ್ ಅವರ ಅವನ ಗುರುಗಳಾದ ಶ್ರೀ ವಿಶ್ವನಾಥನ್ ಅವರು ವಿದೇಶಿ ಉಡುಪಿನಲ್ಲಿ ಬಂದಿದ್ದರೆ, ಅಂದಿನ ಕಾರ್ಯಕ್ರಮದ ಕೇಂದ್ರ ಬಿಂದು ಶ್ರೀ ಜಾನ್ ಬಿ ಹಿಗ್ಗಿನ್ಸ್ ಯಾವ ಭಾರತೀಯ ಸಂಗೀತಗಾರನಿಗೂ ಕಮ್ಮಿಯಿಲ್ಲದಂತೆ ಅಪ್ಪಟ ಭಾರತೀಯ ಪೋಷಾಕಾದ ಪರಿಶುದ್ಧವಾದ ಬಿಳಿ ಅಂಗಿ ಮತ್ತು ಧೋತಿ ಹೆಗಲ ಮೇಲೆ ಶುಭ್ರವಾದ ಶಲ್ಯ, ಹಣೆಯಲ್ಲಿ ವೀಭೂತಿಯನ್ನು ಧರಿಸಿ ಪಕ್ಕ ವಾದ್ಯಗಾರರೊಂದಿಗೆ ವೇದಿಕೆಯನ್ನು ಹತ್ತಿದರೇ, ಘಗ್ಗೆಂದು ಸಾವಿರಾರು ವಿದ್ಯುತ್ ಬಲ್ಬುಗಳು ಒಮ್ಮೆಗೆ ಹತ್ತಿ ಉರಿವಂತೆ ಪ್ರಕಾಶಮಾನವಾಗಿ ಹೋಗುತ್ತದೆ. ಅಪ್ಪಟ ಭಾರತೀಯರಂತೆ ಮುಂದಿರುವ ವಿದ್ವಜ್ಜನರಿಗೆ ಕುಳಿತಲ್ಲಿಂದಲೇ ಭಕ್ತಿಪೂರ್ವಕವಾಗಿ ವಂದಿಸಿ, ತ್ಯಾಗರಾಜರ ಕೃತಿಯಾದ ಎಂದರೋ ಮಹಾನುಭಾವಲು ಅಂದಿರಿಕಿ ವಂದನಮು ಎಂಬ ಕೃತಿಯೊಂದಿಗೆ ಗೋಷ್ಠಿ ಶುರುವಾಗಿ ಮುಂದಿನ ಎರಡು ಮೂರು ಗಂಟೆಗಳ ಕಾಲ ಇಡೀ ಸಭಾಂಗಣದಲ್ಲಿ ನೆರದಿದ್ದ ಸಂಗೀತಾಸಕ್ತರ ಹೃನ್ಮನಗಳನ್ನು ಸೆಳೆದು ಬಿಡುತ್ತಾರೆ ಎಂದರೆ ಅತಿಶಯೋಕ್ತಿಯೇನಲ್ಲ. ಒಂದಾದ ಮೇಲೆ ಒಂದೊಂದು ಕೃತಿಗಳನ್ನು ಭಾವಪೂರ್ಣವಾಗಿ ತಾಳ ಬದ್ಧವಾಗಿ ರಾಗವಾಗಿ ಹಾಡುತ್ತಿದ್ದರೆ, ಭಲೇ..ಭಲೇ.. ಬೇಷ್.. ಬೇಷ್.. , ಅಪ್ಪಡಿ ಪೋಡು.. ಎಂಬ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಕೇವಲ ತಾವೊಬ್ಬರೇ ಆಕರ್ಷಣೀಭೂತರಾಗದೇ ಪಕ್ಕ ವಾದ್ಯಗಾರರಿಗೂ ತಮ್ಮ ಪ್ರತಿಭೆಯನ್ನು ತೋರಿಸಲು ತನಿ ಕಛೇರಿಗೆ ಅವಕಾಶ ನೀಡಿ ಅವರ ಜೊತೆಯಲ್ಲಿ ಜೋರಾಗಿ ತಾಳವನ್ನು ಹಾಕುತ್ತಾ ಅವರನ್ನು ಹುರಿದುಂಬಿಸುತ್ತಿದ್ದರೆ ಅಂದು ಕರ್ನಾಟಕ ಸಂಗೀತ ಲೋಕಕ್ಕೆ ಮತ್ತೊಬ್ಬ ಪ್ರತೀಭಾವಂತ ನಕ್ಷತ್ರದ ಅನಾವರಣವಾಯಿತು ಎಂದರೆ ತಪ್ಪಾಗಲಾರದು.
ಹೀಗೆ ಅಲ್ಪಾವಧಿಯಲ್ಲಿಯೇ ಅವರು ದಕ್ಷಿಣ ಭಾರತದ್ಯಾಂತ ತಮ್ಮ ಪ್ರತಿಭೆಯಿಂದ ಮನೆ ಮಾತಾಗಿ ಹೋಗುತ್ತಾರೆ. ಸಂಗೀತದ ಜೊತೆ ಜೊತೆಗೇ ಗುರುಗಳಾದ ಶ್ರೀ ವಿಶ್ವನಾಥನ್ ಅವರ ಸಹೋದರಿ, ಹೆಸರಾಂತ ನೃತ್ಯಗಾರ್ತಿ ಮತ್ತು ವಿದುಷಿ ಟಿ.ಬಳಸರಸ್ವತಿಯವರ ಬಳಿಯಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿ ಭರತನಾಟ್ಯದ ನೃತ್ಯ ಸಂಗೀತದ ಕುರಿತಾದ ತಮ್ಮ ಪ್ರಬಂಧವನ್ನೂ ಮಂಡಿಸುತ್ತಾರೆ. ಅದೇ ರೀತಿ ದಕ್ಷಿಣ ಭಾರತದ ಎಲ್ಲಾ ಆಕಾಶವಾಣಿಗಳಲ್ಲಿಯೂ ಅವರ ಸಂಗೀತ ಕಾರ್ಯಕ್ರಮಗಳನ್ನು ಕೊಡುತ್ತಾರೆ. ಬೆಂಗಳೂರಿನ ಗಾಯನ ಸಮಾಜದಲ್ಲಿಯೂ ಕಛೇರಿನಡೆಸಿ ಬೆಂಗಳೂರಿನ ಜನರ ಮನಸ್ಸನ್ನೂ ಗೆದ್ದಿರುತ್ತಾರೆ. ದೇಶಾದ್ಯಂತ ವಿವಿಧ ಕಡೆಗಳಲ್ಲಿನ ಕಛೇರಿಗಳ ಜೊತೆ ಜೊತೆಯಲ್ಲಿಯೇ ಹಲವಾರು ದಿಸ್ಕ್ ಆಲ್ಬಮ್ಗಳ ಧ್ವನಿಮುದ್ರಣ ಮಾಡಿ, ತಮ್ಮ ಗಾಯನವನ್ನು ಜಗತ್ತಿನಾದ್ಯಂತ ಪ್ರಸರಿಸಲು ಕಾರಣಿಭೂತರಾಗುತ್ತಾರೆ, ಹೀಗೆ ತಮ್ಮ ಪ್ರತಿಭೆಯಿಂದ ವ್ಯಾಪಕವಾಗಿ ಗುರುತಿಸಲ್ಪಟ್ಟ ಕಾರಣಕ್ಕಾಗಿ ಭಾಗವತರ್ (ವಿದ್ವತ್ಪೂರ್ಣ ಸಂಗೀತಗಾರ) ಎಂಬ ಗೌರವಕ್ಕೆ ಪಾತ್ರರಾಗಿ ಜಾನ್ ಭಾಗವತರ್ ಹಿಗ್ಗಿನ್ಸ್ ಎಂದು ಗುರುತಿಸಲ್ಪಡುತ್ತಾರೆ.
ತಮ್ಮ ಸಂಗೀತ ಜ್ಞಾನ ಕೇವಲ ಭಾರತಕ್ಕೇ ಸೀಮಿತವಾಗದೇ ವಿದೇಶೀಯರಿಗೂ ಭಾರತೀಯ ಸಂಗೀತವನ್ನು ಪರಿಚಯಿಸಲು ನಿರ್ಧರಿಸಿ 1971ರಲ್ಲಿ ಕೆನಡಾದ ಟೊರಾಂಟೊ ನಗರದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಗೀತಾಧ್ಯಯನಕ್ಕೆ ಮೀಸಲಾದ ವಿಭಾಗವನ್ನು ಆರಂಭಿಸುತ್ತಾರೆ. ಭಾರತದಲ್ಲಿ ತಮಗಾದ ಅನನ್ಯ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳನ್ನು ಭಾರತೀಯ ಸಂಗೀತ ಕಲಿಸಲು ಪ್ರೇರೇಪಿಸುತ್ತಾರೆ.
ಜಗದೊದ್ದಾರನಾ… ಹಾಡಿನಲ್ಲಿರುವಂತೆ ದೇವಕಿಯ ಹೊಟ್ಟೆಯಲ್ಲಿ ಹುಟ್ಟಿದರೂ ಗೋಕುಲದಲ್ಲಿ ಯಶೋಧೆಯ ಮಡಿಲಲ್ಲಿ ಬೆಳೆದ ಶ್ರೀ ಕೃಷ್ಣನಂತೆ ಅಮೇರಿಕಾದಲ್ಲಿ ಹುಟ್ಟಿ ಸಂಗೀತ ವಿಧ್ಯಾರ್ಥಿಯಾಗಿ ಭಾರತಕ್ಕೆ ಬಂದು ಇಲ್ಲಿ ಪ್ರಕಾಶಿಸಿ, ಪ್ರಜ್ವಲಿಸಿ, ಒಂದು ಹಂತದ ಪ್ರವರ್ಧಮಾನಕ್ಕೆ ಬಂದಿದ್ದ ಜಾನ್ ಭಾಗವತರ್ ಹಿಗ್ಗಿನ್ಸ್ 1984ರ ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೌತ್ ಆಫಿಕಾ ಸಹೋಯೋಗದೊಂದಿಗೆ ಸಂಗೀತ ಸಮ್ಮೇಳನ ಆಯೋಜಿಸಿರುತ್ತರೆ. ಈ ಸಮ್ಮೇಳನದ ಮೂಲಕ ಅಲ್ಲಿನ ತಮಿಳು ಮತ್ತು ಆಫ್ರಿಕಾದ ಜನರಿಗಾಗಿ ಕರ್ನಾಟಕ ಸಂಗೀತದ ರುಚಿಯನ್ನು ಸವಿಬಡಿಸಬೇಕು ಎಂದು ಹಗಲಿರುಳು ಸಾಕಷ್ಟು ತಾಲೀಮು ಮಾಡಿರುತ್ತಾರೆ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆದೀತು ಎಂದು ಸಮ್ಮೇಳನ್ನಕ್ಕೆ ಕೇವಲ ಹತ್ತು ದಿನಗಳಿವೆ ಎನ್ನುವಷ್ಟರಲ್ಲಿ 1984ರ ಡಿಸೆಂಬರ್ 7 ರಂದು ತನ್ನ ಸಾಕು ನಾಯಿಯನ್ನು ಕರೆದುಕೊಂಡು ಮಾರ್ಗದ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಚಾಲಕನ ನಿರ್ಲಕ್ಷದ ಪರಿಣಾಮವಾಗಿ ಅಪಘಾತಕ್ಕೆ ಈಡಾಗಿ ಸ್ಥಳದಲ್ಲಿಯೇ ಸಾವನ್ನಪ್ಪುತ್ತಾರೆ. ಅತ್ತ ಡರ್ಬನ್ನಲ್ಲಿ ಸಮ್ಮೇಳನಕ್ಕಾಗಿ ಚಪ್ಪರ ಕಟ್ಟುತ್ತಿದ್ದರೆ, ಇಲ್ಲಿ ಅವರ ಅಂತಿಮ ಸಂಸ್ಕಾರಕ್ಕಾಗಿ ಚಟ್ಟ ಕಟ್ಟುವಂತಹ ಪರಿಸ್ಥಿತಿ ಏರ್ಪಡುತ್ತದೆ. ಈ ವಿಷಯ ಕೆಲಚು ದಿನಗಳಾದ ನಂತರ ಭಾರತಾದ್ಯಂತ ತಲುಪಿ ಅಸಂಖ್ಯಾತ ಸಂಗೀತ ಪ್ರಿಯರಿಗೆ ದುಖಃವನ್ನುಂಟು ಮಾಡುತ್ತದೆ. ಎಲ್ಲೋ ಹುಟ್ಟಿ, ಕರ್ನಾಟಕ ಸಂಗೀತಕ್ಷೇತ್ರದಲ್ಲಿ ಧೃವತಾರೆಯಂತೆ ಕೆಲ ಕಾಲ ಮಿಂಚಿ ಮರೆಯಾದರೂ ಇಂದಿಗೂ ಸಂಗೀತ ಪ್ರಿಯರ ಮನಸ್ಸಿನಲ್ಲಿ ಧೃವ ನಕ್ಷತ್ರದಂತೆ ಶಾಶ್ವತ ಸ್ಥಾನವನ್ನು ಗಳಿಸಿದ್ದಾರೆ ಎಂದರೆ ತಪ್ಪಾಗಲಾರದು.
ಜಾನ್ ಬಿ ಹಿಗ್ಗಿನ್ಸ್ ಅವರ ಮಗ ನಿಕೋಲಸ್ ಹಿಗ್ಗಿನ್ಸ್ ಕೂಡಾ ಕರ್ನಾಟಕ ಸಂಗೀತದಲ್ಲಿ ಆಸಕ್ತಿ ಹೊಂದಿ ತಮ್ಮ ತಂದೆಯಷ್ಟಿಲ್ಲದಿದ್ದರೂ ತಕ್ಕಮಟ್ಟಿಗೆ ಸಂಗೀತಾಭ್ಯಾಸ ಮಾಡಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಮೆಚ್ಚಬೇಕಾದ ಅಂಶವಾಗಿದೆ. ಇಂದಿಗೂ ಕೂಡ ಆಕಾಶವಾಣಿಯಲ್ಲಿ ಅವರು ಹಾಡಿದ ಕೃಷ್ಣಾ ನೀ ಬೇಗನೇ ಬಾರೋ.. ಜಗದೊದ್ಧಾರನ ಮುಂತಾದ ಕೃತಿಗಳನ್ನು ಕೇಳುತ್ತಿದ್ದರೆ ನಮ್ಮೆಲ್ಲರ ಕಂಠಗಳು ಬಿಗಿಯಾಗಿ ಕಣ್ಣಂಚಿನಲ್ಲಿ ನಮ್ಮ ಪರಮಾಪ್ತರೇ ಅಗಲಿದರೇನೋ ಎನ್ನುವಂತೆ ಭಾಸವಾಗುತ್ತದೆ. ಸಂಗೀತ ಎಂದಿಗೂ ಸುರಗಂಗೆಯಂತೇ.. ಸಂಗೀತ ಎಂದಿಗೂ ರವಿಕಾಂತಿಯಂತೇ ಎನ್ನುವ ಹಾಗೆ ಜಾನ್ ಭಾಗವತರ್ ಹಿಗ್ಗಿನ್ಸ್ ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ ಭಾವನಾತ್ಮಕವಾಗಿ ಅವರ ಹಾಡುಗಳ ಮೂಲಕ ನಮ್ಮೆಲ್ಲರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ಏನಂತೀರೀ??