ಮನಸ್ಸಿದ್ದಲ್ಲಿ ಮಾರ್ಗ

ಸ್ನೇಹ ಚುರುಕಾದ ಬುದ್ಧಿವಂತ ಮಧ್ಯಮ ವರ್ಗದ ಹುಡುಗಿ. ಓದಿನೊಂದಿಗೆ ಹಾಡು, ನೃತ್ಯಗಳಲ್ಲೂ ಎತ್ತಿದ ಕೈ. ತಂದೆ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಜೊತೆಗೆ ಮನೆಯಲ್ಲಿಯೇ ಸಣ್ಣ ಪುಟ್ಟ ಎಲೆಕ್ಟ್ರಿಕಲ್ ವಸ್ತುಗಳನ್ನು ರಿಪೇರಿ ಮಾಡುತ್ತಿದರೆ, ತಾಯಿ ಅಪ್ಪಟ ಗೃಹಿಣಿ. ಅದೊಂದು ಬೇಸಿಗೆ ರಜೆಯಲ್ಲಿ ಹೈಸ್ಕೂಲ್ ಓದುತ್ತಿದ್ದ ಸ್ನೇಹ ತನ್ನ ಸ್ನೇಹಿತೆಯರೊಂದಿಗೆ ಆಟವಾಡಲು ಮನೆಯ ಸಮೀಪದಲ್ಲೇ ಇದ್ದ ಕ್ರೀಡಾಂಗಣಕ್ಕೆ ಹೋಗಿದ್ದಳು. ಅಲ್ಲೇ ಪಕ್ಕದಲ್ಲೇ ಆಡುತ್ತಿದ್ದವರ ಚೆಂಡು ಇವರತ್ತ ಬಂದಿತು. ಆ ಕೂಡಲೇ ಸ್ನೇಹ ಆ ಚೆಂಡನ್ನು ಹಿಡಿದು ತನ್ನ ಎಡಗೈನಿಂದ ರಭಸವಾಗಿ ಹಿಂದಿರುಗಿಸಿ ತನ್ನ ಪಾಡಿಗೆ ತನ್ನ ಆಟವನ್ನು ಮುಂದುವರೆಸಿದಳು. ಆದರೆ, ಆಕೆ ಹಾಗೆ ಎಸೆದ ಚೆಂಡು ಪಕ್ಕದಲ್ಲಿ ಅಟವಾಡುತ್ತಿದ್ದ ತಂಡದ ತರೆಬೇತಿದಾರನಿಗೆ ಲಗಾನ್ ಚಿತ್ರದಲ್ಲಿ ಅಮೀರ್ ಖಾನ್ಗೆ ಕಚ್ರಾ ತನ್ನ ಪೋಲಿಯೋ ಕೈನಿಂದ ಎಸೆದ ಚೆಂಡು ತಿರಿಗಿದಾಗ ಆದ ಆನಂದಂತೆ ಆಗಿರಬೇಕು. ಆ ಕೂಡಲೇ, ಏನಮ್ಮಾ ನಿನ್ನ ಹೆಸರು? ಏನು ಓದ್ತಾ ಇದ್ಯಾ? ಎಲ್ಲಿ ನಿನ್ನ ಮನೆ ? ಎಂದೆಲ್ಲಾ ವಿಚಾರಿಸಿ ಇನ್ನೂ ಹದಿನೈದು ವರ್ಷದ ಒಳಗಿರುವ ಹುಡುಗಿ ಮತ್ತು ಕ್ರೀಡಾಂಗಣದ ಸಮೀಪವೇ ಇರುವ ವಿಷಯ ಕೇಳಿ, ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವ ಹಾಗೆ ಮನಸ್ಸಿನಲ್ಲೇ ಸಂತೋಷ ಗೊಂಡು, ಸುಮ್ಮನೆ ಅಲ್ಲೆಲ್ಲೋ ಆಡುವ ಬದಲು ನಮ್ಮ ಜೊತೆ ಆಡುವುದಕ್ಕೆ ಬಾ. ಚೆನ್ನಾಗಿ ಆಡಿದರೆ ರಾಜ್ಯ ಮತ್ತು ಅಂತರಾಜ್ಯ ಕ್ರೀಡಾಪಟುವಾಗಬಹುದು. ನಾವೇ ಸಮವಸ್ತ್ರಗಳನ್ನೆಲ್ಲಾ ಕೊಡುತ್ತೇವೆ ಎಂದಾಗ ಸಣ್ಣ ವಯಸ್ಸಿನ ಸ್ನೇಹಳಿಗೆ ಕುತೂಹಲ ಹೆಚ್ಚಾಗಿ. ಸರಿ ಸಾರ್ ನಮ್ಮ ಅಪ್ಪಾ ಅಮ್ಮಂದಿರನ್ನು ಕೇಳಿ ನಾಳೆ ಬರ್ತೀನಿ ಎಂದು ಹೇಳಿ ಮನೆಗೆ ಹಿಂತಿರುಗಿದ ನಂತರ ತನ್ನ ತಂದೆ ಮತ್ತು ತಾಯಿಯರಿಗೆ ನಡೆದ ವಿಷಯವನ್ನೆಲ್ಲಾ ಕೂಲಂಕುಶವಾಗಿ ವಿವರಿಸಿದಳು. ಮಾರನೆಯ ದಿನ ತಂದೆಯೊಂದಿಗೆ ಅದೇ ಕ್ರೀಡಾಂಗಣಕ್ಕೆ ಬಂದು ತರಬೇತಿದಾರೊಂದಿಗೆ ಮಾತನಾಡಿ, ಅವರ ಮಾತುಗಳಿಂದ ಸಮಾಧಾನವಾಗಿ ಮಗಳನ್ನು ಅವರ ಆಟವಾಡಲು ಸೇರಿಸಿದರು. ಅದು ಸ್ನೇಹಳ ಜೀವನದಲ್ಲಿ ಬಹುದೊಡ್ಡ ತಿರುವನ್ನು ಕೊಡುತ್ತದೆ ಮತ್ತು ಆಕೆಯ ಅದೃಷ್ಟವನ್ನೇ ಬದಲಾಯಿಸುತ್ತದೆ ಎಂದು ಆಕೆಗಾಗಲೀ, ಅವಳ ಪೋಷಕರು ಮತ್ತವಳ ತರಬೇತುದಾರರಿಗೆ ತಿಳಿದೇ ಇರಲಿಲ್ಲ. ರಸ್ತೆಯ ಬದಿಯಲ್ಲಿ ತನ್ನ ಸ್ನೇಹಿತೆಯರೊಂದಿಗೆ ಕುಂಟೇ ಬಿಲ್ಲೆ, ಹಗ್ಗದಾಟ, ಐಸ್ ಪೈಸ್, ರಿಂಗ್ ಆಟ ಆಡುತ್ತಿದ್ದವಳು ನೋಡ ನೋಡುತ್ತಿದ್ದಂತೆ ರಾಜ್ಯಮಟ್ಟದ ಆಟಗಾರ್ತಿಯಾಗಿಯೇ ಬಿಟ್ಟಳು. ಅವಳ ತಂಡದಲ್ಲಿ ಬಹುತೇಕ ಎಲ್ಲರೂ ಬಲಗೈ ಆಟಗಾರ್ತಿಯಾಗಿದ್ದರೆ, ಸ್ನೇಹ ಮಾತ್ರ ಎಡಗೈ ಪೋರಿ. ಹಾಗಾಗಿ ಅದರ ಸಂಪೂರ್ಣ ಲಾಭವನ್ನು ಪಡೆದುಕೊಂಡು ತನ್ನ ತಂಡದ ಮುಂಚೂಣಿ ಆಟಗಾರ್ತಿಯಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದ ತಂಡ ಭಾಗವಾಗಿಯೇ ಹೋದಳು ಮತ್ತು ಅ ಎಲ್ಲಾ ಗೆಲುವಿನಲ್ಲೂ ತನ್ನ ಛಾಪನ್ನು ಮೂಡಿಸಿದ್ದಳು.

ಅದೇ ಸಮಯಕ್ಕೆ ಹತ್ತನೇ ತರಗತಿಯ ಪರೀಕ್ಷೆ ಬಂದ್ದರಿಂದ ಆಟವನ್ನು ಕೆಲ ಕಾಲ ಪಕ್ಕಕ್ಕಿಟ್ಟು ಓದಿನ ಕಡೆ ಗಮನಹರಿಸಿ ಶೇಕಡಾ ತೊಂಬತ್ತುಕ್ಕೂ ಅಧಿಕ ಅಂಕಗಳನ್ನು ಗಳಿಸಿ ಎಲ್ಲರಂತೆ ವಿಜ್ಞಾನ ವಿಷಯನ್ನು ತೆಗೆದುಕೊಂಡು ಇಂಜಿನೀಯರ್ ಇಲ್ಲವೇ ಡಾಕ್ಟರ್ ಆಗ ಬಹುದಿತ್ತು. ಅಷ್ಟರಲ್ಲಾಗಲೇ ತನ್ನ ಕ್ರೀಡಾ ಸಾಮರ್ಥ್ಯದ ಬಗ್ಗೆ ಅರಿವಿದ್ದ ಸ್ನೇಹ, ತನ್ನ ಮುಂದಿನ ಭವಿಷ್ಯ ಕ್ರೀಡಾಲೋಕದಲ್ಲೇ ಎಂದು ನಿರ್ಧರಿಸಿ, ವಿಜ್ಞಾನದ ಬದಲಾಗಿ ವಾಣಿಜ್ಯ ವಿಷಯವನ್ನು ಆಯ್ಕೆಮಾಡಿಕೊಂಡು ನಗರದ ಪ್ರತಿಷ್ಠಿತ ಮತ್ತು ಕ್ರೀಡಾರ್ಥಿಗಳಿಗೆ ಹೆಚ್ಚೆನ ಪ್ರೋತ್ಸಾಹ ನೀಡುವ ಜೈನ್ ಕಾಲೇಜಿಗೆ ಸೇರಲು ನಿರ್ಧರಿಸಿದಳು. ಅಂಕಗಳಲ್ಲಿಯೂ ಮತ್ತು ಕ್ರೀಡೆ ಎರಡರಲ್ಲಿಯೂ ಮುಂದಿದ್ದರಿಂದ ಸುಲಭವಾಗಿಯೇ ವಿವಿ ಪುರಂ ಜೈನ್ ಕಾಲೇಜಿಗೆ ಪ್ರವೇಶ ದೊರಕಿತು.

ಅದಾಗಲೇ ರಾಜ್ಯ ಮಟ್ಟದ ಆಟಗಾರ್ತಿಯಾಗಿದ್ದರಿಂದ ವಿದ್ಯಾರ್ಥಿ ವೇತನವೂ ದೊರಕಿ ಬಹುತೇಕ ಕಾಲೇಜಿನ ಫೀ ಕಳೆದು ಇನ್ನೂ ಹೆಚ್ಚಿನ ಹಣ ಮಿಕ್ಕುತ್ತಿದ್ದರಿಂದ ಆಕೆಯ ವಿದ್ಯಾಭ್ಯಾಸ ಮನೆಯವರಿಗೆ ಎಂದೂ ಹೊಣೆಯಾಗಲಿಲ್ಲ. ಕ್ರೀಡಾಳುವಾಗಿ ಪ್ರವೇಶ ದೊರಕಿಸಿಕೊಂಡಾಗಿದೆ ಮುಂದೇನು ಎಂದು ಯೋಚಿಸುತ್ತಿರುವಾಗಲೇ ಅವಳ ಎತ್ತರ ಮತ್ತು ತೋಳ್ಬಲವನ್ನು ಗಮನಿಸಿದ ಕಾಲೇಜಿನ ತರಭೇತಿದಾರರು ಸ್ನೇಹಳಿಗೆ ಹಾಯಿದೋಣಿಯನ್ನು ಪ್ರಯತ್ನಿಸಿ ನೋಡೆಂದರು.

Screenshot 2019-09-20 at 6.43.49 PM

ಹೇಳಿ ಕೇಳಿ ಹಾಯಿದೋಣಿ ಹೆಚ್ಚಾಗಿ ಕಡಲ ತೀರದಲ್ಲೋ ಅಥವಾ ನದಿ ತಟದಲ್ಲಿ ಇರುವ ಊರುಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿರುತ್ತದೆ. ಆದರೆ ಸ್ನೇಹ ಇದ್ದದ್ದು ಕಾಂಕ್ರೀಟ್ ಕಾಡಾದ ಬೆಂಗಳೂರಿನಲ್ಲಿ ನದಿ ಹೋಗಲಿ ಅಳಿದುಳಿದಿದ್ದ ಕೆರೆಗಳನ್ನೂ ಅಕ್ರಮವಾಗಿ ಮುಚ್ಚಿಹಾಕಿ ದೊಡ್ಡ ದೊಡ್ಡ ಬಂಗಲೆಗಳನ್ನು ಎಬ್ಬಿಸಿರುವ ಊರು. ಇದ್ದದ್ದರಲ್ಲಿ ಹಲಸೂರಿನ ಕೆರೆಯಲ್ಲಿ ಮಿಲ್ಟ್ರಿಯ ಭಾಗವಾದ ಎಂ.ಇ.ಜಿ ತಂಡದವರು ಹಾಯಿ ದೋಣಿ ಅಭ್ಯಾಸ ಮಾಡುತ್ತಾರೆ ಎಂದು ತಿಳಿದು ಅವಳ ತಂದೆ ಮತ್ತು ಮಗಳು ಅವರ ತರಭೇತಿದಾರರ ಶಿಫಾರಸ್ಸು ಪತ್ರದ ಜೊತೆ ಅವಳ ಕ್ರೀಡಾ ಪುರಸ್ಕಾರಗಳೊಂದಿಗೆ ಅಲ್ಲಿಗೆ ಹೋದರು. ಮೊದ ಮೊದಲು ಸೇನಾಧಿಕಾರಿಗಳು ಸ್ನೇಹಳನ್ನು ತರಭೇತಿಗೆ ಸೇರಿಸಿಕೊಳ್ಳಲು ಹಿಂಜರಿದರಾದರೂ, ಪ್ರತಿ ನಿತ್ಯ ಅಪ್ಪಾ ಮಗಳು ಶ್ರಧ್ಧೆಯಂದ ಹೇಳಿದ ಸಮಯಕ್ಕೆ ಬರುತ್ತಿದ್ದನ್ನು ಮೆಚ್ಚಿ ಒಮ್ಮೆ ಪ್ರಯತ್ನಿಸಿ ನೋಡೋಣ ಎಂದು ಕೆಲವಾರು ಎಚ್ಚರಿಕೆಗಳೊಂದಿಗೆ ಅವಳಿಗೆ ತರಭೇತಿ ನೀಡಲು ಒಪ್ಪಿಕೊಂಡರು. ಸಮಯಕ್ಕೆ ಸರಿಯಾಗಿ ಬೆಳಿಗ್ಗೆ ಮತ್ತು ಸಂಜೆ ತಪ್ಪದೆ ಬರಬೇಕು. ವಿನಾಕಾರಣ ಚಕ್ಕರ್ ಹಾಕುವ ಹಾಗಿಲ್ಲ. ತರಭೇತಿದಾರರಿಗೆ ವಿಧೇಯಕರಾಗಿರ ಬೇಕು ಹೀಗೇ ಹಾಗೆ ಎಂದು ಇನ್ನು ಮುಂತಾದ ಅನೇಕ ನಿಬಂಧನೆಗಳನ್ನು ಒಡ್ಡಿ ಆಕೆಯನ್ನು ತರಭೇತಿಗೆ ಸೇರಿಸಿ ಕೊಂಡರು. ಬೀಸುವ ಗಾಳಿ, ಹರಿಯುವ ನೀರನ್ನು ಹೇಗೆ ತಡೆದು ಹಿಡಿಯಲು ಸಾಧ್ಯವಿಲ್ಲವೋ ಅದೇ ರೀತಿ ಸ್ನೇಹಾಳ ಕ್ರೀಡಾ ಪ್ರತಿಭೆಯನ್ನು ಬಹಳ ದಿನಗಳ ಕಾಲ ಮುಚ್ಚಿಡಲಾಗಲಿಲ್ಲ. ಪ್ರತೀ ದಿನ ಬೆಳ್ಳಂಬೆಳಿಗ್ಗೆ ಮಳೆ, ಗಾಳಿ, ಚಳಿ ಯಾವುದನ್ನೂ ಲೆಕ್ಕಿಸದೇ, ತಂದೆಯೊಡನೆ ತನ್ನ ಮನೆಯಿಂದ ಸುಮಾರು ಹದಿನೈದು – ಇಪ್ಪತ್ತು ಕಿ.ಮೀ ದೂರದ ಅಲಸೂರು ಕೆರೆಯ ಬಳಿ ಅಭ್ಯಾಸಕ್ಕೆ ಸರಿಯಾದ ಸಮಯಕ್ಕೆ ಬಂದು, ತಡವಾಗಿ ಬಂದಲ್ಲಿ ಶಿಕ್ಷೆಯ ರೂಪದಲ್ಲಿ ಅಲಸೂರು ಕೆರೆಯ ಸುತ್ತ ಎರಡು ಮೂರು ಬಾರಿ ಓಡ ಬೇಕಾಗುತ್ತಿತ್ತು. ಅಲ್ಲಿಂದ ಕಾಲೇಜಿಗೆ ಹೋಗಿ, ಪುನಃ ಸಂಜೆ ಕಾಲೇಜಿನಿಂದ ಅಲಸೂರಿಗೆ ಬಂದು ಅಭ್ಯಾಸ ಮುಗಿಸುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತಿತ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಎಲ್ಲವನ್ನೂ ಸರಿತೂಗಿಸತೊಡಗಿಸಿ, ಒಂದೊಂದೇ ಸ್ಪರ್ಧೆಗಳಲ್ಲಿ ಭಾಗವಹಿಸಿತೊಡಗಿದಳು. ಸ್ಪರ್ಧೆಗಳಿಗೆ ಎಂದು ಹೊರ ಊರುಗಳಿಗೆ ಹೋದಾಗ ಅಟೆಂನ್ಡೆನ್ಸ್ ಏನೋ ಕೊಡ್ತಾ ಇದ್ದರೂ, ಪಾಠ ಮಿಸ್ ಆಗ್ತಾ ಇತ್ತು. ಅದಕ್ಕಾಗಿ ತನ್ನ ಗೆಳೆತಿಯರ ಹತ್ತಿರ ನೋಟ್ಸ್ ತೆಗೆದು ಕೊಂಡು ಅದನ್ನು ಬರೆಯುವುದು, ಸಮಯ ಸಿಕ್ಕಾಗಾಲೆಲ್ಲಾ ಗುರುಗಳ ಬಳಿ ಹೋಗಿ ಪಾಠ ಹೇಳಿಸಿ ಕೊಳ್ಳುವ ಮುಖಾಂತರ ಓದಿನಲ್ಲಿಯೂ ಹಿಂದೆ ಬೀಳಲಿಲ್ಲ. ಆರಂಭದಲ್ಲಿ ಕಡಲ ತೀರದ ಕೇರಳ ಮತ್ತು ಪೂರ್ವಾಂಚಲದ ಹುಡುಗಿಯರಿಂದ ಪ್ರಭಲ ಸ್ಪರ್ಧೆಯನ್ನು ಎದುರಿಸಬೇಕಾಯಿತಾದರೂ ಆನಂತರ ಆಕೆ ಮುಟ್ಟಿದ್ದೆಲ್ಲಾ ಚಿನ್ನವಾಯಿತು. ರಾಜ್ಯ ಮಟ್ಟದ, ರಾಷ್ಟ್ರೀಯ ಮಟ್ಟದ ಆಕೆ ಸ್ಪರ್ಧೆ ಮಾಡಿದ ಬಹುತೇಕ ಕ್ರೀಡಾ ಕೂಟಗಳಲ್ಲಿ ಒಂದಲ್ಲಾ ಒಂದು ಪದಕ ಪಡೆಯದೇ ಹಿಂದಿರುಗಿದ ಕಥೆಯೇ ಇಲ್ಲಾ. 2018ರ ಏಷ್ಯನ್ ಗೇಮ್ಸ್ ಕ್ರೀಡಾ ಕೂಟವನ್ನು ಪ್ರತಿನಿಧಿಸಲು ಕೂದಲೆಳೆಯಿಂದ ತಪ್ಪಿಸಿಕೊಂಡರೂ ಅದೇ ಸಮಯದಲ್ಲಿ ತನ್ನ ಅಂತಿಮ ವರ್ಷದ ಬಿಕಾಂ ಪದವಿಯನ್ನು ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣಳಾದಳು. ಸದ್ಯಕ್ಕೆ ಸೇನೆಯನ್ನು ಸೇರಿ ದೇಶ ಸೇವೆ ಮಾಡಬೇಕು ಎನ್ನುವ ಹುಮ್ಮಸ್ಸಿನಲ್ಲಿರುವ ಆಕೆ ಅದಕ್ಕೆ ತಕ್ಕ ದೈಹಿಕ ಕಸರತ್ತಿನಲ್ಲಿ ತೊಡಗಿದ್ದಾಳೆ. ಅಂತಯೇ ಸಮಯವನ್ನು ಹಾಳು ಮಾಡಬಾರದೆಂದು ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಉತ್ತಮ ಸಂಬಳದ ಕೆಲಸವನ್ನು ಗಿಟ್ಟಿಸಿಕೊಂಡು ವಾರಾಂತ್ಯದಲ್ಲಿ ತಮ್ಮ ಪೋಸ್ಟ್ ಗ್ರಾಜ್ಯುಯೇಷನ್ ಡಿಪ್ಲಮೋ ಕೂಡಾ ಮಾಡುತ್ತಿದ್ದಾಳೆ. ಕ್ರೀಡಾಜಗತ್ತಿನಲ್ಲಿ ಇನ್ನೂ ಬಹಳಷ್ಟು ಸಾಧನೆ ಮಾಡಬೇಕು ಎನ್ನುವ ಛಲವೂ ಇದೇ.

ನೆನ್ನೆ ಬೆಳಿಗ್ಗೆ ಕಛೇರಿಗೆ ಸ್ನೇಹಿತನೊಂದಿಗೆ ಹೋಗಲು ಅವನ ಮನೆಯತ್ತ ಕಾಲ್ನಡಿಗೆಯಲ್ಲಿ ರಭಸವಾಗಿ ರಸ್ತೆಯಲ್ಲಿ ಹೋಗುತ್ತಿದ್ದಾಗ, ನನ್ನ ಪಕ್ಕದಲ್ಲಿ ತಲೆಯ ತುಂಬಾ ಮುಚ್ಚುವ ಹೆಲ್ಮೆಟ್ ಹಾಕಿಕೊಂಡ ಹುಡುಗಿಯೊಬ್ಬಳು ಹಾದು ಹೋದಳು. ಹಾಗೆ ಹೋದ ಕ್ಷಣ ಮಾತ್ರದಲ್ಲಿಯೇ ಮತ್ತೇ ಹಿಂದಿನಿಂದ ಬಂದ ಅಕೆ, ಮಾವಾ ಇದೇನು ಇಲ್ಲಿ? ಅದೂ ನಡೆದು ಕೊಂಡು ಹೋಗ್ತಾ ಇದ್ದೀರೀ? ಬನ್ನಿ. ನೀವೆಲ್ಲಿಗೆ ಹೋಗಬೇಕೋ ಅಲ್ಲಿಗೆ ನಾನು ಡ್ರಾಪ್ ಮಾಡ್ತೀನಿ ಅಂದಳು. ಅರೇ ಇದ್ಯಾರಪ್ಪಾ ನನ್ನನ್ನು ಈ ರೀತಿಯಾಗಿ ಕರೆಯೋದು ಎಂದು ನೋಡಿದರೇ ಅದೇ ಮುಗುಳ್ನಗೆಯ ಸ್ನೇಹಾ. ನೀನೇನು ಪುಟ್ಟೀ ಇಲ್ಲಿ ಎಂದು ನಾನು ಕೇಳಿದ್ರೇ, ಇಲ್ಲೇ ವರ್ಕೌಟ್ ಮಾಡಲು ಜಿಮ್ಗೆ ಹೋಗುತ್ತಿದ್ದೇನೆ ಎಂದಳು. ಸರಿ ಹೇಗಿದೆ ನಿನ್ನ ಅಭ್ಯಾಸ ಎಂದರೆ, ಅಲಸೂರಿನ ಕೆರೆ ಕೊಳಕಾಗಿದೆ. ಹಾಗಾಗಿ ಮಡಿವಾಳ ಕೆರೆಯಲ್ಲಿ ಅಭ್ಯಾಸ ಮಾಡಲು ಅನುವು ಮಾಡ್ತೀವಿ ಅಂದಿದ್ದಾರೆ ಅದಕ್ಕಾಗಿ ಕಾಯ್ತಾ ಇದ್ದೀನಿ ಅಂತ ತನ್ನ ಅಭ್ಯಾಸದ ಹಸಿವಿನ ಇಂಗಿತವನ್ನು ವ್ಯಕ್ತ ಪಡಿಸಿದಳು. ಸರೀ ಪುಟ್ಟೀ, ನನಗೂ ತಡವಾಗುತ್ತಿದೆ. ಮನೆಗೆ ಬಾ ಎಂದು ಹೇಳಿ ಬೀಳ್ಕೊಟ್ಟು ಹೆಜ್ಜೆ ಹಾಕುತ್ತಿದ್ದಾಗ, ಅರೇ, ನಮ್ಮ ಕಣ್ಣ ಮುಂದೆ ಬೆಳೆದ ಈ ಚುರುಕಿನ ಹುಡುಗಿ, ಯಾವುದೇ ಸಭೆ ಸಮಾರಂಭಗಳಲ್ಲಿ ಹಾಡು ಇಲ್ಲವೇ ನೃತ್ಯ ಮಾಡು ಎಂದು ಹೇಳಿದ್ದೇ ತಡಾ, ನಿಸ್ಸಂಕೋಚವಾಗಿ ಸುಶ್ರಾವ್ಯವಾಗಿ ಹಾಡುತ್ತಿದ್ದ, ಸುಂದರ ವದನಾ.. ಎಂದು ತನ್ನ ಎಡಗೈಯಿಂದ ಆಕೆಯ ಬಟ್ಟಲು ಕಣ್ಣುಗಳನ್ನು ತೀಡುತ್ತಾ ಮಾಡುತ್ತಿದ್ದ ನೃತ್ಯ ಇನ್ನೂ ಕಣ್ಣ ಮುಂದೆಯೇ ಇದೆ. ಎಲ್ಲರನ್ನೂ ಅತ್ತೇ, ಮಾವಾ, ಅಜ್ಜೀ, ತಾತಾ.. ಎನ್ನುತ್ತಾ ಹೆಸರಿಗೆ ಅನ್ವರ್ಥದಂತೆ ಸ್ನೇಹ ಪೂರ್ವಾಕವಾಗಿಯೇ ತನ್ನ ಬುಟ್ಟಿಗೆ ಬೀಳಿಸಿ ಕೊಳ್ಳುತ್ತಿದ್ದ ಆ ಪುಟ್ಟ ಪೋರಿ, ಈಗ ದೊಡ್ಡವಳಾಗಿ ಚಿನ್ನ , ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಸ್ವಸಾಮಥ್ಯದಿಂದ ಲೂಟಿ ಹೊಡೆಯುತ್ತಿರುವುದನ್ನು ಕೇಳುವುದಕ್ಕೆ ಮತ್ತು ನೋಡುವುದಕ್ಕೇ ಆನಂದವಾಗುತ್ತದೆ.

Screenshot 2019-09-20 at 6.46.48 PM

ನಮಗೇ ಇಷ್ಟು ಹೆಮ್ಮೆಯಾಗಬೇಕಾದರ, ಆಕೆಯ ಮನೆಯವರಿಗೆ ಇನ್ನು ಎಷ್ಟಿರ ಬೇಕು? ಆಕೆಯ ಕ್ರೀಡಾಸಾಧನೆಗಳ ಬರಹ ಮತ್ತು ಪೋಟೋಗಳು ಪ್ರತೀ ಬಾರಿ ಯಾವುದಾದರೂ ಪತ್ರಿಕೆಗಳಲ್ಲಿ ಬಂದರೆ ಅಥವಾ ಆಕೆಯ ಪ್ರತಿಭೆಯನ್ನು ಗುರುತಿಸಿ ಎಲ್ಲಾ ಕಡೆಯಲ್ಲೂ ಆಕೆಗೆ ಅಭಿನಂದನೆಗಳನ್ನು ಸಲ್ಲಿಸಿದ ಕೂಡಲೇ ಅವರ ಪೋಷಕರು ಆ ಎಲ್ಲಾ ವಿಷಯಗಳನ್ನು ಎಲ್ಲರೊಡನೆ ಹಂಚಿಕೊಳ್ಳುವಾಗ ಅವರ ಮುಖದಲ್ಲಿ ಆಗುವ ಆನಂದ ಅವರ್ಣನೀಯ. ನಿಜ ಆ ರೀತಿಯ ಸಂತಸ ಪಡುವುದು ಅವರ ಹಕ್ಕೂ ಸಹ. ಸ್ನೇಹಾಳ ಪ್ರತಿಯೊಂದು ಸಾಧನೆಯ ಹಿಂದೆಯೂ ಅಕೆಯ ಪೋಷಕರ ಪಾಲು ಬಹಳಷ್ಟಿದೆ.

daughter.jpeg

ಅಂದು ಮಗಳು ಹುಟ್ಟಿದಾಗ, ಅಯ್ಯೋ ಹೆಣ್ಣು ಮಗಳು ಹುಟ್ಟಿದಳಲ್ಲಾ, ಅದೂ ಕಪ್ಪನೆಯ ಬಣ್ಣ, ನಂತರ ಬೆಳೆಯುತ್ತಿದ್ದಂತೆಯೇ ಆಕೆ ಉಳಿದವರಿಗಿಂತ ವಿಭಿನ್ನವಾಗಿ ಎಡಚಿ, ಎಂದು ಆಕೆಯ ತಂದೆ ತಾಯಿಯರು ಮೂದಲಿಕೆ ಮಾಡಿಬಿಟ್ಟಿದ್ದರೇ, ಇಲ್ಲವೇ ಆಕೆಯ ಕ್ರೀಡಾ ಸಾಮರ್ಥ್ಯದ ಅರಿವಿದ್ದರೂ ಹೇಗೂ ಆಕೆ ವಿದ್ಯೆಯಲ್ಲಿ ಮುಂದಿದ್ದಾಳೆ. ಕ್ರೀಡೆಯಿಂದ ಮಕ್ಕಳು ಉದ್ದಾರವಾಗುವುದಿಲ್ಲ ಎಂದು ಎಲ್ಲಾ ತಂದೆ ತಾಯಿಯರಂತೆ ಭಾವಿಸಿ ಆಕೆಯನ್ನೂ ಇಂಜಿನೀಯರ್ ಅಥವಾ ಡಾಕ್ಟರ್ ಮಾಡಲು ಹೋಗಿದ್ದರೆ, ಇಂದು ಒಂದು ಅಪ್ರತಿಮ ಕ್ರೀಡಾಪಟುವಿನ ಭವಿಷ್ಯ ನಾಶವಾಗಿ ಹೋಗಿರುತ್ತಿತ್ತು. ಅಯ್ಯೋ ಹೆಣ್ಣು ಮಗಳು ದೂರದ ಊರಿನ ಸ್ಪರ್ಥೆಗಳಿಗೆ ಆಕೆಯನ್ನು ಕಳುಹಿಸುವುದು ಬೇಡ ಎಂದಿದ್ದರೆ, ಅದರಿಂದ ಆಕೆಗೇನೂ ನಷ್ಟವಾಗದಿದ್ದರೂ ಅದರಿಂದ ಕ್ರೀಡಾ ಜಗತ್ತಿಗೆ ಹೆಚ್ಚಿನ ನಷ್ಟವಾಗುತ್ತಿತ್ತು. ನೀರೇ ಇಲ್ಲದ ಬೆಂಗಳೂರಿನಲ್ಲಿ ಈ ನೀರೇ, ಅದು ಇಲ್ಲ ಇದು ಇಲ್ಲಾ, ಅದಿದ್ದರೆ ನಾನು ಹೀಗೆ ಮಾಡಿ ಬಿಡುತ್ತಿದ್ದೆ ಎಂದು ಸುಮ್ಮನೇ ಸಮಯ ವ್ಯರ್ಥ ಮಾಡದೇ, ಇರುವ ಸೌಲಭ್ಯಗಳನ್ನೇ ಉಪಯೋಗಿಸಿಕೊಂಡು ತನ್ನ ಪ್ರತಿಭೆ, ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾಳೆ. ಅದಕ್ಕಾಗಿ ಅವಳು ಅಭಿನಂದಾನಾರ್ಹಳು ಮತ್ತು ಕ್ರೀಡಾಲೋಕದಲ್ಲಿ ಈಗಷ್ಟೇ ಅಂಬೇಗಾಲಿಡುತ್ತಿರುವ ಅನೇಕರಿಗೆ ಅನುಕರಣೀಯಳೂ ಹೌದು. ಇತ್ತೀಚೆಗೆ ನಾನು ಓದಿದ ಆಂಗ್ಲ ಭಾಷೆಯ ಒಂದು ವಾಕ್ಯ Daughters are not a tension. Daughters are equal to TEN SONS ಎಂಬ ವಾಕ್ಯ ಈಕೆಗೆಂದೇ ಹೇಳಿ ಮಾಡಿಸಿದಂತಿದೆ. ಹೌದು ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ. ಒಂದು ತಾಯಿ ಹತ್ತು ಗಂಡು ಮಕ್ಕಳನ್ನು ಸಾಕ ಬಲ್ಲಳು. ಆದರೇ ಅದೇ ಹತ್ತು ಮಕ್ಕಳು ಸೇರಿ ತಮ್ಮ ತಾಯಿಯನ್ನು ಸಾಕಲಾರರು ಎಂಬುದು ಈಗಾಗಲೇ ಜಗಜ್ಜಾಹೀರಾತಾಗಿದೆ. ವಿದ್ಯೆ ಕಲಿತ ಹೆಣ್ಣು ಊರಿಗೆ ಕಣ್ಣು ಎನ್ನುವಂತೆ ಹೆಣ್ಣು ಮಕ್ಕಳನ್ನು ಕೇವಲ ಮುಸುರೇ ತಿಕ್ಕುವುದಕ್ಕಷ್ಟೇ ಮೀಸಾಲಾಗಿಡದೇ, ಆಕೆಗೂ ವಿದ್ಯೆಯನ್ನು ಕಲಿಸೋಣ. ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳೆಂದು ಭ್ರೂಣದಲ್ಲಿಯೇ ಹತ್ಯೆ ಮಾಡದೇ, ಅಕೆಗೆ ಪುರುಷರ ಸರಿ ಸಮಾನಳಾಗಿ ಬಾಳುವಂತೆ ಅವಕಾಶ ಕಲ್ಪಿಸಿಕೊಡೋಣ.

ಅಸಾಧ್ಯ ಎಂಬ ಪದದಲ್ಲಿ ಕಾರವನ್ನು ತೆಗೆದು ಹಾಕಿದರೆ ಎಲ್ಲವೂ ಸಾಧ್ಯ.
ಅಂತೆಯೇ, ವಿನಾಶ ಪದಕ್ಕೆ ಕಾರವನ್ನು ಸೇರಿಸಿದರೆ ಅವಿನಾಶವಾಗಿ ನಾಶವನ್ನು ತಡೆಗಟ್ಟಬಹುದು.
ವಿನಾಶದ ಅಂಚಿನಿಂದ ಅವಿನಾಶಕ್ಕೆ ತರಲು, ಅಸಾಧ್ಯವಾದ ಕೆಲಸವನ್ನು ಸಾಧ್ಯ ಮಾಡಲು ಕಾರವನ್ನು ಎಲ್ಲಿ ತೆಗೆಯಬೇಕು ಮತ್ತು ಎಲ್ಲಿ ಸೇರಿಸಬೇಕು ಎನ್ನುವ ವಿವೇಕ, ವಿವೇಚನೆ, ಸ್ಥೈರ್ಯ ಮತ್ತು ಧೈರ್ಯ ಇರಬೇಕಷ್ಟೇ. ಏಕೆಂದರೆ ಮನಸ್ಸಿದಲ್ಲಿ ಖಂಡಿತವಾಗಿಯೂ ಮಾರ್ಗವಿದೇ.

ಏನಂತೀರೀ?

One thought on “ಮನಸ್ಸಿದ್ದಲ್ಲಿ ಮಾರ್ಗ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s