ಹನ್ನೆರಡು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡ ಘಟಾನುಘಟಿ ಆಟಗಾರರೆಲ್ಲಾ ನಿವೃತ್ತಿಯ ಅಂಚಿನಲ್ಲಿದ್ದಾಗ ಹೊಡೀ ಬಡೀ ಆಟಕ್ಕೆ ಹೇಳಿ ಮಾಡಿಸಿದಂತಹ ಮಹೇಂದ್ರ ಸಿಂಗ್ ದೋನಿ ನೇತೃತ್ವದಲ್ಲಿ ಯುವ ಆಟಗಾರರ ತಂಡದ ರಚನೆಯಾಗಿತ್ತು. ಆಷ್ಟರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಪಂದ್ಯಾವಳಿಯ ಘೋಷಣೆಯಾಗಿತ್ತು.
2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಲೀಗ್ ಹಂತದಲ್ಲೇ ಹೊರ ಬಂದಿದ್ದರಿಂದ ಮತ್ತು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಕೇವಲ ಒಂದು ಟಿ20 ಪಂದ್ಯವನ್ನಾಡಿದ್ದ ಸೆಹ್ವಾಗ್, ಯುವರಾಜ್ ಸಿಂಗ್, ಧೋನಿ ಹೊರತುಪಡಿಸಿ ಉಳಿದವರಿಗೆ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಅನುಭವವಿರಲಿಲ್ಲವಾದ್ದರಿಂದ ಭಾರತದ ಯುವ ತಂಡದ ಮೇಲೆ ಅಂತಹ ಹೆಚ್ಚಿನ ಭರವಸೆಯಾಗಲೀ ಒತ್ತಡಗಳಾಗಲೀ ಇರಲಿಲ್ಲ. ಹೋಗಿ ನಿಮ್ಮ ಸ್ವಾಭಾವಿಕ ಆಟವನ್ನಾಡಿ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎನ್ನುವಂತೆ ಫಲಾಫಲಗಳನ್ನು ಭಗವಂತನ ಮೇಲೆ ಬಿಡಿ ಎನ್ನುವ ನಿರೀಕ್ಷೆಯೊಂದಿಗೆ ಭಾರತ ತಂಡ ದಕ್ಷಿಣ ಆಫ್ರಿಕಾ ದೇಶಕ್ಕೆ ಹೋಗಿತ್ತು.
ಸೆಪ್ಟಂಬರ್ 11, 2007 ರಿಂದ ಪಂದ್ಯವಳಿಗಳು ಆರಂಭವಾದರೂ ಭಾರತ ಮತ್ತು ಸ್ಕಾಟ್ಲಾಂಡ್ ನಡುವಿನ ಮೊದಲನೇ ಪಂದ್ಯ Sep 14, 2007 7ನೇಯ ಪಂದ್ಯವಾಗಿ ಶುರುವಾದರೂ ಮಳೆಯ ಕಾರಣದಿಂದಾಗಿ ಪಂದ್ಯವೇ ರದ್ದಾಗಿ ಎರಡೂ ತಂಡಗಳಿಗೆ ಸಮಾನವಾಗಿ ಒಂದೊಂದು ಅಂಕಗಳನ್ನು ಹಂಚಲಾಯಿತು
ಭಾರತದ ಎರಡನೇ ಪಂದ್ಯ ತನ್ನ ಸಾಂಪ್ರಾದಾಯಿಕ ಎದುರಾಳಿ ಪಾಕೀಸ್ಥಾನದ ವಿರುದ್ದ ಡರ್ಬನ್ನಿನಲ್ಲಿ Sep 14, 2007ರಂದು ಆಯೋಜಿಸಲಾಗಿತ್ತು. ಭಾರತ ನಿಗಧಿತ India 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಲು ಶಕ್ತವಾಯಿತು. ಅದರಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪನ ಕಾಣಿಕೆಯೇ 50 ರನ್ ಅದಕ್ಕುತ್ತರವಾಗಿ ಪಾಕೀಸ್ಥಾನ ತಂಡವೂ ಕೂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದು ಕೊಂಡು 141 ರನ್ನುಗಳನ್ನು ಗಳಿಸಲು ಶಕ್ತವಾದಾಗ ಪಂದ್ಯ ಟೈ ಆಗಿ ಸೂಪರ್ ಓವರ್ ಅವಕಾಶದಲ್ಲಿ ಭಾತರದ ಪರ ಶೆಹ್ವಾಗ್, ಹರ್ಬಜನ್ ಮತ್ತು ಉತ್ತಪ್ಪ ವಿಕೆಟ್ ಉರುಳಿಸಿದರೆ, ಪಾಕೀಸ್ಥಾನದ ಪರ,ಆರಾಫತ್, ಉಮರ್ ಗುಲ್ ಮತ್ತು ಆಫ್ರೀದಿ ಮೂರು ಮಂದಿಯೂ ವಿಕೆಟ್ ಉರುಳಿಸಲಾಗದೆ ಭಾರತಕ್ಕೆ 3-0 ಬೋಲ್ ಔಟ್ ಜಯ ತಂದಿತ್ತರು.
ಮೂರನೆಯ ಪಂದ್ಯ Sep 16, 2007ರಂದು ಜೋಹಾನ್ಸ್ ಬರ್ಗಿನಲ್ಲಿ ನ್ಯೂಜಿಲೆಂಡ್ 190 (20/20) ಕ್ಕೆ ವಿರುದ್ಧವಾಗಿ ಭಾರತ 180/9 (20/20) ಗಳಿಸಲು ಶಕ್ತವಾಗಿ 10ರನ್ನುಗಳ ಸೋಲನ್ನು ಕಂಡಾಗ, ಭಾರತದ ಕಥೆ ಮುಗಿಯಿತು ಎಂದು ಭಾವಿಸಿದವರೇ ಹೆಚ್ಚು.
ನಾಲ್ಕನೇಯ ಪಂದ್ಯ Sep 19, 2007ರಂದು ಡರ್ಬನ್ನಿನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ತಂಡ 218/4 (20) ಕ್ಕೆ ವಿರುದ್ಧವಾಗಿ ಇಂಗ್ಲೇಂಡ್ 20 ಓವರ್ಗಳಲ್ಲಿ 200/6 ರನ್ ಗಳಿಸಿ ಭಾರತದ ವಿರುದ್ಧ 18ರನ್ನುಗಳಿದ ಸೋತಾಗ, ಭಾರತ ತಂಡ ಪಂದ್ಯದಿಂದ ಪಂದ್ಯಕ್ಕೆ ತಮ್ಮ ಪ್ರದರ್ಶನವನ್ನು ಉತ್ತಮಗೊಳಿಸುತ್ತಿದ್ದಾರೆ. ಹಾಗಾಗಿ ಭರವಸೆ ಇಡಬಹುದೆಂದು ಜನಾ ಭಾವಿಸತೊಡಗಿದರು.
ಐದನೇ ಪಂದ್ಯ Sep 20, 2007 ಡರ್ಬನ್ನಿನಲ್ಲಿ ಭಾರತ 20 ಓವರ್ಗಳಲ್ಲಿ ಕೇವಲ 153/5 ರನ್ ಗಳಿಸಿದಾಗ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಎಲ್ಲರೂ ಭಾವಿಸಿರುವಾಗ ರುದ್ರಪ್ರತಾಪ್ ಸಿಂಗ್ ರೌದ್ರಾವತಾರದ ಮುಖಾಂತರ 4 ವಿಕೆಟ್ ಕೆಡವಿ ಮತ್ತು ಉಳಿದ ಬೋಲರ್ಗಳೂ ಶಿಸ್ತು ಬದ್ದವಾಗಿ ಆಡಿದ ಪರಿಣಾಮ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ ಕೇವಲ116/9 ಗಳಿಸಲು ಶಕ್ತವಾಗಿ ಭಾರತ 37ರನ್ನುಗಳ ಭಾರೀ ಅಂತರದ ಜಯಸಾಧಿಸಿ ಸೆಮಿಫೈನಲ್ಲಿಗೆ ತಲುಪಿತು.
ಮೊದಲ ಸೆಮಿಫೈನಲ್ಲಿನಲ್ಲಿ ನ್ಯೂಜಿಲೆಂಡ್ ಗಳಿಸಿದ 143/8 ರನ್ನುಗಳ ವಿರುದ್ಧವಾಗಿ ಪಾಕೀಸ್ಥಾನ ಕೇವಲ 18.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ 6 ವಿಕೆಟ್ ಅಂತರದ ಭಾರೀ ಜಯ ಸಾಧಿಸಿ ಫೈನಲ್ಲಿಗೆ ಲಗ್ಗೆ ಹಾಕಿತ್ತು.
Sep 22, 2007 ರಂದು ನಡೆದ 2ನೇ ಸೆಮಿಫೈನಲ್ ಮತ್ತದೇ ಡರ್ಬ್ಬನ್ನಿನಲ್ಲಿ ನಡೆದು ಭಾರತ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದರೆ ಬಾರೀ ಬಲಿಷ್ಥ ತಂಡ ಎಂಬ ಆಶಯದೊಂದಿಗೆ ಆಡಲು ಬಂದ ಆಸ್ಟ್ರೇಲಿಯಾ 20 ಓಗರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ 15 ರನ್ ಗಳ ಅಂತರದಲ್ಲಿ ಪರಾಭವಗೊಂಡು ಭಾರತ ತಂಡಕ್ಕೆ ಫೈನಲ್ಸ್ ಆಡಲು ಅನುವು ಮಾಡಿಕೊಟ್ಟಿತು.
ಇಲ್ಲಿಯವರೆಗೂ ನಡೆದದ್ದು ಕೇವಲ ಟ್ರೈಲರ್, ಇನ್ನು ಮುಂದೇ ಪಿಕ್ವರ್ ಎನ್ನುವಂತೆ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನದ ವಿರುದ್ದ ಚೊಚ್ಚಲ ಟಿ20 ಫೈನಲ್ ಪಂದ್ಯವನ್ನಾಡಲು ಸಜ್ಜಾಯಿತು. ಅಲ್ಲಿಯವರೆಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕೀಸ್ಥಾನದ ವಿರುದ್ಧ ಒಂದೂ ಪಂದ್ಯವನ್ನೂ ಸೋತಿರದ ಭಾರತ ತಂಡವೇ ನೆಚ್ಚಿನ ತಂಡವಾಗಿ ಅಧಿಕ ವಿಶ್ವಾಸದಿಂದ ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ Sep 24, 2007ರಂದು ಜೋಹಾನ್ಸ್ ಬರ್ಗಿನಲ್ಲಿ ಆಡಲು ಮೈದಾನಕ್ಕೆ ಇಳಿಯಿತು .
ಚೊಚ್ಚಲ ಟಿ20 ಫೈನಲ್ ಅದೂ ಹೈವೊಲ್ಟೇಜ್ ಪಂದ್ಯ ನಡೆಯುತ್ತಿದೆ. ಮನೆಯಲ್ಲಿ ಕುಳಿತು ಪಂದ್ಯವನ್ನು ನೋಡಲು ಆಸೆ ಆದರೆ ನಾನು ಮನೆಯಲ್ಲಿ ಬಹಳ ಆಸೆ ಪಟ್ಟು ನೋಡಿದ ಬಹುತೇಕ ಪಂದ್ಯಗಳಲ್ಲಿ ಭಾರತ ತಂಡ ಸೋತಿರುವುದನ್ನು ನೆನೆದು ಹೇಗಾದರೂ ಆಗಲೀ ಕಛೇರಿಗೆ ಹೋಗಿಬಿಡೋಣ. ಕಂಪ್ಯೂಟರಿನಲ್ಲೇ ಸ್ಕೋರ್ ಣೊಡೋಣ. ಚೆನ್ನಾಗಿ ಆಡುತ್ತಿದ್ದರೆ ಹೇಗೂ ಆಫೀಸಿನ ಕ್ಯಾಂಟೀನಿನಲ್ಲಿ ದೊಡ್ಡದಾದ ಟಿವಿ ಇದೆ. ಅಲ್ಲೇ ಸ್ನೇಹಿತರೂ ಇರುತ್ತಾರೆ ಅವರ ಜೊತೆಯೇ ನೋಡೋಣ ಎಂದು ನಿರ್ಧರಿಸಿ ಬೆಳಿಗ್ಗೆ ಆಫೀಸಿಗೆ ಹೊರಡಲು ಅನುವಾದಾಗ, ಇದೇನೋ ಮಗೂ ಇವತ್ತೂ ಆಫೀಸಿಗೆ ಹೋಗ್ತಾ ಇದ್ಯಾ? ಮನೆಯಲ್ಲೇ ಒಟ್ಟಿಗೆ ಕುಳಿತು ಫೈನಲ್ಸ್ ನೋಡೋಣ ಅಂದ್ಕೊಂಡಿದ್ನಲ್ಲೋ ಅಂತಾ ಹೇಳಿದ್ರೂ ನಮ್ಮ ತಂದೆ. ಆದರೆ ನನ್ನ ಅಳುಕನ್ನು ಅವರ ಮುಂದೆ ತೋರಿಸಲು ಇಚ್ಚಿಸದೇ, ಇಲ್ಲಾ ಅಣ್ಣಾ ಸ್ವಲ್ಪ ಅರ್ಜೆಂಟ್ ಕೆಲಸ ಇದೆ. ನೀವು ನೋಡಿ ಸಂತೋಷ ಪಡಿ. ಚೆನ್ನಾಗಿ ಆಡ್ತಾ ಇದ್ರೇ ಅಗಾಗಾ ಫೋನ್ ಮಾಡಿ ತಿಳಿಸಿ ಎಂದು ಅವರ ಉತ್ತರಕ್ಕೂ ಕಾಯದೇ ಆಫೀಸಿಗೆ ಹೋರಟೇ ಬಿಟ್ಟೆ,
ಬೆಳಿಗ್ಗಿನಿಂದಲೂ ಆಫೀಸಿನಲ್ಲಿ ಕೆಲಸ ಮಾಡಲು ಮನಸ್ಸೇ ಇರಲಿಲ್ಲ. ಮಧ್ಯಾಹ್ನ ಯಾವಾಗ ಪಂದ್ಯ ಶುರುವಾಗುತ್ತದೋ ಎಂಬ ಆತಂಕವೇ ಹೆಚ್ಚು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದು ಕೊಂಡ ಭಾರತಕ್ಕೆ ಆತಂಕದ ಕ್ಷಣ. ವೀರೇಂದ್ರ ಶೆಹ್ವಾಗ್ ಗಾಯಾಳುವಾದ ಪರಿಣಾಮ ಮೊತ್ತ ಮೊದಲಬಾರಿಗೆ ಗಂಭೀರ್ ಜೊತೆ ಯೂಸುಫ್ ಪಠಾಣ್ ಆರಂಭಿಕ ಆಟಗಾರನಾಗಿ ಇಳಿದರು. ಯೂಸುಫ್ ಉತ್ತಮ್ಮ ಹೊಡೀ ಬಡೀ ಆಟಗಾರನಾದರೂ ಮೊತ್ತ ಮೊದಲ ಪಂದ್ಯ ಅದೂ ಫೈನಲ್ಸಿನಲ್ಲಿ ಹೇಗೆ ಆಡುತ್ತಾರೆ ಎಂಬ ಆತಂಕ ಆದರೆ ಮೊದಲ 3 ಓವರಿನಲ್ಲೇ 25ರನ್ ಗಳಿಸಿದಾಗ ಭರವಸೆ ಮೂಡುತ್ತಿದೆ ಎಂದು ಭಾವಿಸುತ್ತಿರುವಾಗಲೇ ಅನಾವಶ್ಯಕ ಹೊಡೆತಕ್ಕೆ ಕೈ ಹಾಕಿದ ಯೂಸುಫ್ ಪಠಾನ್ 15 ರನ್ ಗಳಿಗೆ ಔಟಾದಾಗ ನಿರಾಸೆ ಮೂಡಿತು. ಅದಾದ ನಂತರ ಬಂದ ಉತ್ತಪ್ಪ, ಧೋನಿ ಮತ್ತು ಯುವರಾಜ್ ಅಷ್ಟೇನು ಹೇಳಿ ಕೊಳ್ಳುವಂತಹ ಆಟವಾಡದೇ, 15.2 ಓವರಿನಲ್ಲಿ ನಾಯಕ ದೋನಿ ಔಟಾದಾಗ ಭಾರತದ ಮೊತ್ತ 4 ವಿಕೆಟ್ ನಷ್ಟಕ್ಕೆ 111 ರನ್ ಆದರೆ ಸಮಯೋಚಿತ ಆಟವಾಡಿದ ಗೌತಮ್ ಗಂಭೀರ್ 75 ರನ್ ಮತ್ತು ರೋಹಿತ್ 30 ರನ್ ಗಳಿಸಿ ನಿಗಧಿತ 20 ಓವರಿನಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 157 ರನ್ ಗಳಿಸಿದಾಗ, ಮನೆಯಲ್ಲಿ ಕುಳಿತು ಪಂದ್ಯ ನೋಡದೇ ಇದ್ದದ್ದೇ ಒಳ್ಳೇದಾಯ್ತು. ಸುಮ್ಮನೆ ಈ ಸೋಲೋ ಪಂದ್ಯ ನೋಡಲು ರಜಾ ಹಾಕಿದ್ಯಾ ಅಂತಾ ಎಲ್ಲರೂ ರೇಗಿಸುತ್ತಿದ್ದರು ಎಂದು ಒಮ್ಮೆ ಯೋಚಿಸಿದರೆ, ಅಂದು 1983 ರಲ್ಲಿ ಕಪಿಲ್ ದೇವ್ ತಂಡ 60 ಓವರ್ಗಳ ಪಂದ್ಯದಲ್ಲೇ 183ರನ್ ಅದೂ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಿಯಂತ್ರಿಸಿರುವಾಗ ಇನ್ನು ಈ ಫೈನಲ್ ಪಂದ್ಯದಲ್ಲಿ 157 ರನ್ ಅದೂ 20 ಓವರಿನಲ್ಲಿ ಓವರಿನಲ್ಲಿ ನಿಯಂತ್ರಿಸಲು ಏಕೆ ಸಾಧ್ಯವಿಲ್ಲಾ.? ಅವರಿಗೂ ಫೈನಲ್ಸ್ ಪಂದ್ಯಾ ಎಂಬ ಭಯಾ ಇದ್ದೇ ಇರುತ್ತದೆ ಎಂದು ನನ್ನನ್ನು ನಾನೇ ಸಂತೈಸಿಕೊಂಡೆ.
ಪಾಕೀಸ್ಥಾನ ತನ್ನ ಇನ್ನಿಂಗ್ಸ್ ಆರಂಭಿಸಿ ಮೊದಲ್ನೇ ಓವರಿನಲ್ಲಿಯೇ ಕೇವಲ 2ಡೇ ರನ್ನಿಗೆ ಮೊದಲ ವಿಕೆಟ್ ಕಳೆದು ಕೊಂಡಾಗ ಆಹಾ ಎಂದೇ. ಆದರೆ ಕಮ್ರಾನ್ ಅಕ್ಮಲ್ ಪಟಪಟನೇ ರನ್ ಹೊಡೆದಾಗ ಹೃದಯ ಧಸಕ್ ಎನ್ನುತ್ತಿತ್ತು ಆದರೆ 2.3 ಓವರಿನಲ್ಲಿ 26 ರನ್ನಿಗೆ 2ನೇ ವಿಕೆಟ್ ಬಿದ್ದಾದ ನಂತರ ಒಂದು ಕಡೆ ವಿಕೆಟ್ ಬೀಳುತ್ತಾ ಹೋದಾಗ ನನ್ನ ಜಾಗದಿಂದ ಎದ್ದು ನೇರವಾಗಿ ಟಿವಿಯಲ್ಲೇ ಆಟವನ್ನು ನೋಡಲು ಕ್ಯಾಂಟೀನ್ ಹೋಗಿ ನೋಡಿದರೆ, ಒಳಗೆ ಹೋಗಲೂ ಸಾಧ್ಯವಾಗದಷ್ಟು ಜನ ಅಲ್ಲಿದ್ದಾರೆ. ಹಾಗೂ ಹೀಗೂ ನುಗ್ಗಿ ಒಳಗಡೆ ಹೋಗಿ ನೋಡಿದರೇ, ನಮ್ಮ ಸಿ.ಇ.ಓ ಕೂಡಾ ಆಟ ನೋಡ್ತಾ ಇದ್ದಾರೆ. ಒಂದು ಕಡೆ ವಿಕೆಟ್ ಬೀಳ್ತಾ ಇದ್ರೂನೂ ಮಿಸ್ಬಾ ಉಲ್ ಹಕ್ ಒಂದು ಕಡೆ ನಿಂತು ಆಡುತ್ತಾ ಹಾಗೂ ಹೀಗೂ ಮಾಡಿ 19 ಓವರಿಗೆ 9 ವಿಕೆಟ್ ನಷ್ಟಕ್ಕೆ 141ರನ್ ಗಳಿಸಿದ್ದಾಗ ಪಂದ್ಯಾ ತೂಗು ಉಯ್ಯಾಲೆಗೆ ಜಾರಿತು. ಪಂದ್ಯ ಯಾರ ಪಾಲಿಗೆ ಬೇಕಾದರೂ ವಾಲಬಹುದು ಎನ್ನುವಹಾಗಿತ್ತು.
ಪಾಕೀಸ್ಥಾನಕ್ಕೆ ಪಂದ್ಯ ಗೆಲ್ಲಲು ಕಡೆಯ 6 ಚೆಂಡಿನಲ್ಲಿ ಕೇವಲ 13 ರನ್ ಗಳ ಅವಶ್ಯಕತೆ ಇದ್ದರೆ, ಭಾರತಕ್ಕೆ ಕೇವಲ ಒಂದು ವಿಕೆಟ್ ಬೇಕಿದೆ. ನಮ್ಮ ಕಡೆಯ ಎಲ್ಲಾ ಪ್ರಮುಖ ಬೋಲಗಳೂ ತಮ್ಮ ತಮ್ಮ ಕೋಟಾ ಮುಗಿಸಿಯಾಗಿದೆ. ಯಾರಪ್ಪಾ ಕಡೆಯ ಓವರ್ ಬೋಲಿಂಗ್ ಮಾಡೋದು ಬಹುಶಃ ಹರ್ಬಜನ್ ಸಿಂಗಿನದ್ದು ಇನ್ನೂ ಒಂದು ಓವರ್ ಬಾಕಿ ಇರುವುದರಿಂದ ಅವನೇ ಕಡೇ ಓವರ್ ಬೋಲ್ ಮಾಡಬಹುದು ಎಂದು ನಾವೆಲ್ಲಾ ಮಾತಾಡುತ್ತಿರುವಷ್ಟರಲ್ಲಿ ನಾಯಕ ದೋನಿ ಜೋಗಿಂದರ್ ಶರ್ಮಾ ಕೈಗೆ ಚೆಂಡನ್ನು ಕೊಟ್ಟಾಗ, ಎಲ್ಲರ ಬಾಯಲ್ಲೂ ಒಂದೇ ಉದ್ಗಾರ, ಛೇ.. ಛೇ..ಛೇ.. ಹೋಯ್ತು. ಮ್ಯಾಚ್ ಯಕ್ಕುಟ್ಟೋಯ್ತು. ದೋನಿಗೆ ತಲೇನೇ ಇಲ್ವಾ? ಕಡೆಯ ಓವರ್ ಯಾರೋ ಒಬ್ಬಾ ಡಬ್ಬಾ ಬೋಲರ್ ಕೈಯಲ್ಲಿ ಮಾಡಿಸ್ತಾ ಇದ್ದಾನೆ ಅಂತಾನೇ ಎಲ್ಲರೂ ತಿಳಿದು ಕೊಂಡೆವು. ಅದಕ್ಕೆ ತಕ್ಕಂತೆ ಜೋಗಿಂದರ್ ಮಾಡಿದ ಮೊದಲನೇ ಎಸೆತ ವೈಡ್ ಆಯ್ತು. ಅಷ್ಟೇ ಆಗೋಯ್ತು ಎಂದೇ ಎಲ್ಲರೂ ಭಾವಿಸಿರುವಾಗಲೇ, ಎರಡನೇ ಎಸೆತಕ್ಕೆ ಭಾರೀ ಹೋಡೆತ ಬಾರಿಸಲು ಹೋಗಿ ಮಿಸ್ ಆದಾಗ ಪರವಾಗಿಲ್ಲ ಇನ್ನೂ ಚಾನ್ಸ್ ಇದೆ ಅನ್ನಿಸಿತು. ಮೂರನೇ ಬಾಲ್ ಸೀದಾ ಫುಲ್ಟಾಸ್ ಬಾಲ್ ಹಾಕಬೇಕೇ? ಅದಕ್ಕೆಂದೇ ಕಾಯುತ್ತಿದ್ದ ಮಿಸ್ಬಾ ಮಿಸ್ ಮಾಡದೇ ನೇರವಾಗಿ ಲಾಂಗ್ ಆಫ್ ಕಡೆಗೆ ಭರ್ಜರಿಯಾಗಿ ಸಿಕ್ಸರ್ ಬಾರಿಸಿಯೇ ಬಿಟ್ಟ. ಹಾಗೆ ಸಿಕ್ಸರ್ ನೋಡಿದ ಕೂಡಲೇ ಎಲ್ಲರೂ ದೋನಿಯನ್ನು ಶಪಿಸುತ್ತಾ ಕ್ಯಾಂಟೀನ್ ಬಿಟ್ಟು ಹೊರಹೋಗ ತೊಡಗಿದರು. ನನಗೂ ಕೂಡಾ ಭಾರತ ತಂಡ ಜಯದ ಅಷ್ಟು ಹತ್ತಿರ ಬಂದು ಸೋಲುವುದನ್ನು ನೋಡಲು ಇಷ್ಟವಿಲ್ಲದಿದ್ದರೂ ಸ್ನೇಹಿತರ ಒತ್ತಾಯಕ್ಕೆ ಬಿದ್ದು ಅಲ್ಲೇ ನಿಂತೆ. ದೋನಿ ಎಲ್ಲಾ ಫೀಲ್ಡರ್ಗಳನ್ನು ಮತ್ತೊಮ್ಮೆ ಸರಿ ಪಡಿಸಿದ ಈಗ ಪಾಕೀಸ್ಥಾನಕ್ಕೆ 4 ಚೆಂಡಿನಲ್ಲಿ ಕೇವಲ 6 ರನ್ ಬೇಕಿತ್ತು. ಯಾವುದೇ ಬ್ಯಾಟ್ಸಮನ್ ಇದ್ದಿದ್ದರೂ ಸುಲಭವಾಗಿ ಗೆಲ್ಲುವ ಪಂದ್ಯವಾಗಿತ್ತು. ಜೋಗಿಂದರ್ ಶರ್ಮ ವೇಗವಾಗಿ ಓಡಿ ಬಂದು ನಾಲ್ಕನೇ ಚಂಡು ಎಸೆಯುತ್ತಿದ್ದಂತೆಯೇ ಮಿಸ್ಬಾ ತಲೆಯೊಳಗೆ ಅದೇನು ಅಲೋಚನೆ ಇತ್ತೋ ಕಾಣೇ, ಹಿಂದಿನ ಚೆಂಡನ್ನು ಸಿಕ್ಸರ್ ಬಾರಿಸಿದ್ದರಿಂದ ಈಬಾರಿಯೂ ಸಿಕ್ಸರ್ ಬಾರಿಸುವಂತೆ ಸ್ಕೂಪ್ ಮಾಡಿದ. ದುರದೃಷ್ಟವಶಾತ್ ಈ ಬಾರಿ ಅದೃಷ್ಟ ಅವನ ಪಾಲಿಗೆ ಇಲ್ಲದೇ ಚೆಂಡು ಅವನ ಇಚ್ಚೆಯಂತೆ ಸರಿಯಾಗಿ ತಾಗದೇ ಪೈನ್ ಲೆಗ್ಗಿನ ಕಡೆ ಆಕಾಶದತ್ತ ಚಿಮ್ಮಿತು. ಅಲ್ಲಿ ಶ್ರೀಶಾಂತ್ ಅದಕ್ಕಾಗಿಯೇ ಬಕ ಪಕ್ಷಿಯಂತೆ ಕಾಯುತ್ತಿದ್ದ. ಈಗ ಎಲ್ಲರ ಚಿತ್ತ ಶ್ರೀಶಾಂತನತ್ತ. ಬಹುತೇಕ ಭಾರತೀಯರ ಹೃದಯ ಶ್ರೀಶಾಂತನ ಕೈಯಲ್ಲಿತ್ತು ಎಂದರೆ ತಪ್ಪಾಗಲಾರದು. ಅದೃಷ್ಟವಶಾತ್ ಯಾವುದೇ ತಪ್ಪಾಗದೇ ಚೆಂಡು ಸುರಕ್ಷಿತವಾಗಿ ಶ್ರೀಶಾಂತ್ ಕೈಗೆ ಸೇರಿತು. ಐದು ಹತ್ತು ಸೆಕೆಂಡ್ ಹಾಗೆಯೇ ಚೆಂಡನ್ನು ಗಟ್ಟಿಯಾಗಿ ಹಿಡಿದು ನಂತರ ಖುಷಿಯಿಂದ ಚೆಂಡನ್ನು ಆಕಾಶದತ್ತ ಚಿಮ್ಮುತ್ತಿದ್ದರೆ ಇಡೀ ಮೈದಾನದಲ್ಲಿದ್ದ ಅಷ್ಟೋ ಜನರ ಹರ್ಷೋದ್ಗಾರ ನಡೆಯುತ್ತಿದ್ದರೆ ನಮ್ಮ ಕ್ಯಾಂಟೀನ್ ನಲ್ಲಿ ಬೋಲೋ…… ಭಾರತ್……. ಮಾತಾ…. ಕೀ…. ಜೈ……. ಅಂತಾ ಅದೆಷ್ಟು ಬಾರಿ ಕೂಗಿದ್ದೇವೋ ಲೆಖ್ಕಕ್ಕೇ ಇಲ್ಲ. ಪರಸ್ಪರ ಒಬ್ಬರನ್ನೊಬ್ಬರು ತಬ್ಬಿಕೊಂಡು ಭಾರತ ಮತ್ತೊಮ್ಮೆ ವಿಶ್ವಕಪ್ ಗೆದ್ದ ಸಂಭ್ರವನ್ನು ಅದ್ದೂರಿಯಾಗಿ ಸಂಭ್ರಮಿಸಲಾಯಿತು. ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 5 ರನ್ನುಗಳ ರೋಮಾಂಚಕ ವಿಜಯ ಪಡೆದು ಇತಿಹಾಸವನ್ನು ಬರೆದಾಗಿತ್ತು. ಭಾರತ ಆಟಗಾರರು ಒಬ್ಬರನ್ನೊಬ್ಬರು ಆಲಂಗಿಸಿ ಸಂತೋಷ ಪಡುತ್ತಿದ್ದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ, ಅಲ್ಲಿಯವರೆಗೂ ಹೀರೋ ಆಗಿ ಮೆರೆದಿದ್ದ ಮಿಸ್ಬಾ ಕಡೆಯ ಕ್ಷಣದಲ್ಲಿ ವಿಲನ್ ಆಗಿಹೋದನಲ್ಲಾ ಎಂದು ಪರಿತಪಿಸಿ ಅಲ್ಲಿಯೇ ಕುಸಿದು ಬಿದ್ದು ನಂತರ ಹ್ಯಾಪು ಮೋರೆ ಹಾಕಿಕೊಂಡು ನಿಧಾನವಾಗಿ ಪೆವಿಲಿಯನ್ ನತ್ತ ಸಾಗುತ್ತಿದ್ದ.
ಭಾರತ ತಂಡ ಗೆಲ್ಲುತ್ತಿದ್ದಂತಯೇ ನಮ್ಮ ತಂದೆಯವರು ನನಗೆ ಕರೆ ಮಾಡಿ, ನೋಡ್ಯಾ ಹೇಗೆ ಗೆದ್ದು ಬಿಟ್ಟರು ನಮ್ಮವರು? ಮನೆಗೆ ಬರ್ತಾ ಸ್ವೀಟ್ಸ್ ತೆಗೆದುಕೊಂಡು ಬೇಗ ಬಾ. ನಾನು ಇಲ್ಲಿ ಎಲ್ಲರಿಗೂ ಹಂಚಬೇಕು ಎಂದರು. ಅದೇ ರೀತಿ ಮಾರನೆಯ ದಿನ ನಮ್ಮ ಆಫೀಸಿನಲ್ಲಿ ಎಲ್ಲಾ ಮ್ಯಾನೇಜರ್ಗಳ ಬಳಿ ಹಣ ಸಂಗ್ರಹಿಸಿ ಇಡೀ ಆಫೀಸಿನ ಎಲ್ಲರಿಗೂ ಸಿಹಿ ಹಂಚಿ ಭಾರತದ ವಿಜಯವನ್ನು ಮತ್ತಷ್ಟೂ ಸಂಭ್ರಮಿಸಿದ್ದೆವು.
ಹನ್ನೆರಡು ವರ್ಷಗಳ ಹಿಂದೆ ಆ ಪಂದ್ಯದಲ್ಲಿ ಆಟವಾಡಿದ್ದ ಎರಡೂ ತಂಡಗಳ ಬಹುತೇಕ ಆಟಗಾರರು ಇಂದು ಕ್ರಿಕೆಟ್ ಪಂದ್ಯಗಳನ್ನೇ ಆಡುತ್ತಿಲ್ಲವಾದರೂ ಅವರ ಅಂದಿನ ಆಟ ಇಂದಿಗೂ ಕೂಡಾ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಉಳಿದಿದೆ ಮತ್ತು ಅದನ್ನು ಸದಾ ನಾವು ಮೆಲುಕು ಹಾಕುತ್ತಲೇ ಇದ್ದೇವೆ. ಮುಂದೆ ಭಾರತ ಎಷ್ಟೇ ಪಂದ್ಯಗಳನ್ನು ಗೆದ್ದರೂ ಈ ಚೊಚ್ಚಲು ವಿಶ್ವಕಪ್ ವಿಜಯ ಚಿರಸ್ಥಾಯಿಯಾಗಿಯೇ ಉಳಿಯುತ್ತದೆ
ಏನಂತೀರೀ?