ಇಂದಿನ ನಮ್ಮ ಬಹುತೇಕ ಯುವ ಜನಾಂಗವನ್ನು ಕರೆದು, ಈ ಕಾರ್ಯವನ್ನು ನಿಮ್ಮಿಂದ ಸಾಧಿಸಲು ಸಾಧ್ಯವೇ ? ಎಂದು ಒಂದು ಸಾಮಾನ್ಯ ಕೆಲಸವನ್ನು ತೋರಿಸಿದರೂ, ಅವರಿಂದ ಮೊದಲು ಬರುವ ಉತ್ತರವೇ ಇಲ್ಲಾ. ಇದು ಸಾಧ್ಯವಿಲ್ಲ. ಅದು ಏಕೆ ಸಾಧ್ಯವಿಲ್ಲಾ ಎಂದು ನಾವು ಕೇಳುವುದಕ್ಕೆ ಮುಂಚೆಯೇ, ಅದಕ್ಕೆ ನಾನಾ ರೀತಿಯ ಕಾರಣಗಳನ್ನು ನೀಡಲು ಆರಂಭಿಸುತ್ತಾರೆ. ಅರೇ ಅದೇಕೆ ಸಾಧ್ಯವಿಲ್ಲಾ? ನೀವು ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಕೆಲಸ ಕಾರ್ಯಸಾಧುವಾಗುತ್ತದೆ ಎಂದು ತಿಳಿಸಿದಾಗ ಹಾಂ!! ಹೌದು. ನಿಜ. ನೀವು ಹೇಳಿದ ಹಾಗೆ ಮಾಡಿದಲ್ಲಿ ಅದು ಕಾರ್ಯ ಸಾಧುವಾಗಬಹುದು ಆದರೇ… ಎಂದು ಮತ್ತೊಮ್ಮೆ ರೇ… ಪ್ರಪಂಚಕ್ಕೆ ಮುಳುಗುತ್ತಾರೆ.
ಈ ರೀತಿಯ ಪರಿಸ್ಥಿತಿಗೆ ಕಾರಣವೇನು ಎಂದು ಯೋಚಿಸಿದಲ್ಲಿ, ಕಾರಣ ಬಲು ಸರಳ. ಅದೇನೆಂದರೆ ಅವರೆಲ್ಲರಿಗೂ ಅವರವರ ಶಕ್ತಿ , ಸಾಮಥ್ಯದ ಮೇಲಿನ ನಂಬಿಕೆಯೇ ವಿರಳ. ಈ ಸಮಸ್ಯೆ ಇಂದಿನದ್ದಲ್ಲಾ. ಅದು ತ್ರೇತಾಯುಗದಲ್ಲಿ ವಾಲಿಯನ್ನು ಮಣಿಸಲು ಸುಗ್ರೀವನಿಗೆ ಮತ್ತು ಸಮುದ್ರೋಲಂಘನ ಮಾಡುವ ಸಮಯದಲ್ಲಿ ಹನುಮಂತನಿಗೂ ಅವರದ್ದೇ ಶಕ್ತಿ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲದ ಕಾರಣ ಮುಂದುವರೆಯಲು ಸಾಧ್ಯವಾಗಿರಲಿಲ್ಲ. ಸುಗ್ರೀವನಿಗೆ ರಾಮ, ಹನುಮಂತನಿಗೆ ಜಾಂಬವಂತನು ಬಂದು ಅವರ ಶಕ್ತಿ ಸಾಮಾರ್ಥ್ಯವ ಬಗ್ಗೆ ಅರಿವು ಮೂಡಿಸಿದಾಗಲೇ ವಿಜಯವನ್ನು ಕಾಣುವಂತಾಯಿತು.
ಯಾವುದೇ ಕೆಲವನ್ನು ಮಾಡಬೇಕಿದ್ದಲ್ಲಿ ಅದು ಒಬ್ಬನಿಂದಾಗಲೀ ಅಥವಾ ಮತ್ತೊಬ್ಬರ ಸಹಾಯದಿಂದಾಗಲೀ ಅಥವಾ ಗುಂಪಿನೊಂದಿಗೆ ಮಾಡಬೇಕಿದ್ದಲ್ಲಿ ಮೊದಲು ನಮಗೆ ನಮ್ಮ ಮೇಲೆ, ನಮ್ಮ ಸಹಾಯಕನ ಮೇಲೆ ಮತ್ತು ನಮ್ಮ ಗುಂಪಿನ ಮೇಲೆ ನಂಬಿಕೆ ಮತ್ತು ವಿಶ್ವಾಸವಿದ್ದಲ್ಲಿ ಮಾತ್ರವೇ ಕೆಲಸ ಸುಲಭ ಸಾಧ್ಯವಾಗುತ್ತದೆ. ಉದಾ. ಸಾಮಾನ್ಯವಾಗಿ ಎಲ್ಲರೂ ಪುಟ್ಟ ಮಕ್ಕಳನ್ನು ಆಟ ಆಡಿಸುವಾಗ, ಆ ಮಗುವನ್ನು ಮೇಲೆಕ್ಕೆ ಚಿಮ್ಮಿಸಿ ನಂತರ ಅದು ಕೆಳಗೆ ಬೀಳುವಷ್ಟರಲ್ಲಿ ಹಿಡಿಯುತ್ತೇವೆ. ಹಾಗೆ ಮಾಡುವ ಪ್ರಕ್ರಿಯೆಯಲ್ಲಿ ನಮಗೆ ಆ ಮಗುವನ್ನು ಹಿಡಿಯುವ ಭರವಸೆ ಮತ್ತು ನಂಬಿಕೆ ಇರುವ ಕಾರಣದಿಂದಾಗಿಯೇ ನಮಗೆ ಎಷ್ಟು ಸಾಧ್ಯವೋ ಅಷ್ಟೇ ಎತ್ತರಕ್ಕೆ ಚಿಮ್ಮಿಸುತ್ತೇವೆ. ಅಂತಯೇ, ಆ ಪುಟ್ಟಮಗುವಿಗೂ ಅದು ಕೆಳಗೆ ಬೀಳುವ ಮುನ್ನವೇ ನಾವು ಹಿಡಿದೇ ಹಿಡಿಯುತ್ತೇವೆ ಎಂಬ ನಂಬಿಕೆ ಇರುವ ಕಾರಣದಿಂದಾಗಿಯೇ ನಾವು ಆ ಮಗುವನ್ನು ಎಷ್ಟು ಮೇಲೆ ಎಸೆದಾಗಲೂ ಅದು ನಗುತ್ತಲೇ ಇರುತ್ತದೆ.
ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಸಂಬಂಧಗಳ ಮಧ್ಯೆಯೂ ನಂಬಿಗೆ ಇರಲೇ ಬೇಕು. ಅಪ್ಪಾ ಮಕ್ಕಳ ನಡುವೆ, ಗುರು ಶಿಷ್ಯರ ನಡುವೆ, ಕೆಲದಲ್ಲಿ ಸಹೋದ್ಯೋಗಿಗಳೊಂದಿಗೆ, ವಿಶೇಷವಾಗಿ ಗಂಡ ಮತ್ತು ಹೆಂಡತಿಯ ನಡುವೆ ಪರಸ್ಪರ ಸಂಬಿಕೆ ಇದ್ದಾಗಲೇ ಸಂಸಾರ ಸ್ವರ್ಗವಾಗುತ್ತದೆ ಒಮ್ಮೆ ಒಬ್ಬರನ್ನೊಬ್ಬರ ನಡುವೆ ನಂಬಿಕೆ ಕಳೆದು ಹೋದಾಗಾ ಅದೇ ಸಂಸಾರ ನರಕಮಯವಾಗಿ ಹೋಗುತ್ತದೆ. ಜಗತ್ತಿನಲ್ಲಿ ಎಲ್ಲಾ ನಂಬಿಕೆಗಳಿಗಿಂತ ತಾಯಿಯ ಮೇಲೆ ಮಕ್ಕಳಿಗಿರುವ ನಂಬಿಕೆಯೇ ಅತ್ಯಂತ ಪವಿತ್ರವಾದದ್ದು ಮತ್ತು ಮಹತ್ವವಾದದ್ದು. ತಾಯಿಯೇ ಮೊದಲ ಗುರು ಆಕೆ ಹೇಳಿದ್ದೇ ಮಕ್ಕಳಿಗೆ ವೇದ ವಾಕ್ಯ ಮತ್ತು ಆಕೆ ಹೇಳಿದವರೇ ಅವರ ಅಪ್ಪ. ಇದನ್ನೇ ಧೃಢೀಕರಿಸುವಂತೆ ಇಂಗ್ಲೀಷಿನಲ್ಲಿ ಒಂದು ಗಾದೆ ಮಾತಿದೆ. mother is a fact father is assumption. ಇಂದೇನೋ DNA ಮುಂಖಾಂತರ ತಂದೆ ಮಕ್ಕಳ ಸಂಬಂಧವನ್ನು ಗುರುತಿಸಬಹುದಾದರೂ, ಮಕ್ಕಳು ತಾಯಿ ತೋರಿಸಿದಾತನನ್ನೇ ತಂದೆ ಎಂದು ನಂಬುವುದೇ ಹೆಚ್ಚು.
ಇನ್ನು ದೀರ್ಘಕಾಲದ ಗೆಳೆತನ ಮುಖ್ಯ ಸೇತುವೆಯೇ ನಂಬಿಕೆ, ಗೆಳೆತನ ಮತ್ತು ನಂಬಿಕೆ ಎಂದಾಗ ದ್ವಾಪರ ಯುಗದ ಧುರ್ಯೋಧನ ಮತ್ತು ಕರ್ಣರ ನಡುವಿನ ಗೆಳೆತನ ಮತ್ತು ನಂಬಿಕೆಯ ಬಗ್ಗೆ ಪ್ರಸ್ತಾಪಿಸಲೇ ಬೇಕಾಗುತ್ತದೆ. ಎಲ್ಲರಿಗೂ ಗೊತ್ತಿರುವಂತೆ ಕರ್ಣ ಕುಂತೀ ಪುತ್ರ ಹೌದಾದರೂ ವಿಧಿ ಬರಹದಂತೆ ಆತ ಸೂತಪುತ್ರನಾಗಿ ಬೆಳೆದು ನಾನಾ ರೀತಿಯ ಕಷ್ಟಗಳ ನಡುವೆ ವಿದ್ಯೆ ಕಲಿತು ಸ್ವಸಾಮಥ್ಯದಿಂದ ಬೆಳೆದು ಅದೊಮ್ಮೆ ಸುಯೋಧನನ ಕಣ್ಣಿಗೆ ಬಿದ್ದು ಆತನ ಶಕ್ತಿ ಸಾಮರ್ಥ್ಯಕ್ಕೆ ಮೆಚ್ಚಿ, ಅತನನ್ನು ಅಂಗ ದೇಶದ ರಾಜನನ್ನಾಗಿ ಮಾಡಿ ಇನ್ನು ಮುಂದೆ ನಾವಿಬ್ಬರೂ ಪ್ರಾಣ ಸ್ನೇಹಿತರು ಎಂದಿರುತ್ತಾನೆ. ಕರ್ಣನೂ ಸಹಾ ಅದೇ ಮಾತಿಗೆ ತಕ್ಕಂತೆ ಆತ ಬದುಕಿರುವವರೆಗೂ ಅದೇ ನಂಬಿಕೆಯನ್ನು ಉಳಿಸಿ ಕೊಂಡಿರುತ್ತಾನೆ. ಅವರಿಬ್ಬರ ನಡುವೆ ಎಂತಹ ನಂಬಿಕೆ ಇತ್ತೆಂಬುತಕ್ಕೆ ಈ ಪ್ರಸಂಗವೇ ಸಾಕ್ಷಿ. ಅದೊಮ್ಮೆ ಸುಯೊಧನನ ಹೆಂಡತಿ ಭಾನುಮತಿ ಮತ್ತು ಕರ್ಣ ಭಾನುಮತಿಯ ಆಂತಃಪುರದಲ್ಲಿ ಪಗಡೆಯಾಟ ಆಡುತ್ತಿರುತ್ತಾರೆ. ಆಟವನ್ನು ಸುಮ್ಮನೆ ಆಡಿದರೆ ಮಜಾ ಬರುವುದಿಲ್ಲವೆಂಬ ಕಾರಣ, ಸೋತವರು ಗೆದ್ದವರಿಗೆ ತಮ್ಮ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ಕೊಡಬೇಕೆಂದು ಇಬ್ಬರೂ ತೀರ್ಮಾನಿಸಿತುತ್ತಾರೆ. ಅದೇ ರೀತಿ ಆಟ ಮುಂದುವರೆದು, ಕರ್ಣ ಆಟದಲ್ಲಿ ವಿಜಯಿಯಾಗಿ, ನಾ ಗೆದ್ದೇ, ನಾ ಗೆದ್ದೇ ಎಲ್ಲಿ ಕೊಡೂ ಆ ಕಂಠೀಹಾರವನ್ನು ಎಂದು ನಮ್ರತೆಯಿಂದ ಕೇಳುತ್ತಾನೆ. ಆದರೆ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳದ ಭಾನುಮತಿ, ಇಲ್ಲಾ ನೀನು ಮೋಸದಿಂದ ಗೆದ್ದಿರುವ ಕಾರಣ ನಾನು ನಿನಗೆ ನನ್ನ ಕಂಠೀಹಾರವನ್ನು ಕೊಡುವುದಿಲ್ಲಾ ಎಂದು ವಾದ ಮಾಡುತ್ತಿರುತ್ತಾಳೆ, ಅವರಿಬ್ಬರ ವಾದ ವಿತಂಡ ವಾದಕ್ಕೆ ತಿರುಗಿ ಕೊನೆಗೆ ಕೋಪಗೊಂಡ ಕರ್ಣ ಭರದಲ್ಲಿ ಭಾನುಮತಿಯ ಕುತ್ತಿಗೆಗೇ ಕೈ ಹಾಕಿ ಕಂಠೀ ಹಾರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರೆ, ಭಾನುಮತಿ ಅದನ್ನು ತಡೆಯಲು ಪ್ರಯತ್ನಿಸುವ ಸಂಧರ್ಭದಲ್ಲಿ ಸರ ಕಿತ್ತು ಬಂದು ಅದರಲ್ಲಿದ್ದ ಮುತ್ತು ರತ್ನಗಳು ಚೆಲ್ಲಾಪಿಲ್ಲಿಯಾಗಿ ಭೂಮಿಯ ಮೇಲೆ ಬೀಳುತ್ತದೆ. ಅದೇ ಸಮಯದಲ್ಲೇ ಸುಯೋಧನನು ತನ್ನ ರಾಣಿಯ ಅಂತಃಪುರ ಪ್ರವೇಶ ಮಾಡಿ ಅವರಿಬ್ಬರ ಆ ಪರಿಯಾಗಿ ಪರಸ್ಪರ ಕಿತ್ತಾಡುತ್ತಿದ್ದೂ ಮತ್ತು ಗೆಳೆಯ ಕರ್ಣ ತನ್ನ ಹೆಂಡತಿಯ ಕುತ್ತಿಗೆ ಕೈಹಾಕಿ ಆಕೆಯ ಸರವನ್ನು ಎಳೆದಾಡಿದರೂ ಒಂದು ಚೂರೂ ಕೋಪಗೊಳ್ಳದೇ, ನೆಲದ ಮೇಲೆ ಬಿದ್ದಿದ್ದ ಮುತ್ತು ರತ್ನಗಳನ್ನು ಹೆಕ್ಕುತ್ತಾ, ಸರಿಯಾಗಿ ಮಾಡಿದೆ ಗೆಳೆಯಾ, ಆಟದಲ್ಲಿ ಸೋತಾಗ ಒಪ್ಪಂದಂತೆ ನಡೆದುಕೊಳ್ಳಬೇಕು ಎಂದು ಗೆಳೆಯನ ಪರ ವಾದಿಸುತ್ತಾನೆ. ತನ್ನ ಪತಿರಾಯ ತನ್ನ ಪರವಾಗಿರದೇ ಆತನ ಗೆಳೆಯ ಪರ ಬೆಂಬಲಿಸಿದ್ದನ್ನು ನೋಡಿ ಪತಿರಾಯನ ಮೇಲೆ ಕೋಪಗಂಡದ್ದನ್ನು ನೋಡಿದ ಸುಯೋಧನ, ನೋಡು ಭಾನುಮತಿ, ನಾನು ನಿನ್ನನ್ನು ಮುದುವೆ ಆಗುವ ಮುಂಚೆಯೇ ನನಗೆ ಕರ್ಣನ ಪರಿಯವವಿದೆ. ಅತನ ಗುಣ ಮತ್ತು ನಡುವಳಿಕೆಯ ಮೇಲೆ ನಂಬಿಕೆ ಇದೆ. ಆತ ವಿನಾಕಾರಣ, ಎಂದೂ ಯಾರ ಮೇಲೂ ಆಕ್ರಮಣ ಮಾಡಲಾರ. ಒಂದು ವೇಳೆ ಆತ ಆಕ್ರಮಣ ಮಾಡಿದ್ದಾನೆಂದರೇ ಅಲ್ಲೊಂದು ಘನ ಘೋರವಾದ ತಪ್ಪು ನಡೆದೇ ಇರುತ್ತದೆ ಎನ್ನುವುದು ನನ್ನ ನಂಬಿಕೆ ಹಾಗಾಗಿ, ಅಂತಹ ನಂಬಿಕೆಯಿಂದಾಗಿಯೇ, ಈ ಪ್ರಸಂಗದಲ್ಲಿ ನಾನು ನನ್ನ ಅರ್ಥಾಂಗಿಗಿಂತಲೂ ಹೆಚ್ಚಾಗಿ ನನ್ನ ಸ್ನೇಹಿತನ ಮೇಲೆ ಭರವಸೆ ಇದೆ ಎನ್ನುತ್ತಾನೆ.
ಆಚಾರ್ಯ ದ್ರೋಣಾಚಾರ್ಯರು ಕ್ಷತ್ರೀಯರಿಗಲ್ಲದೇ ಬೇರೆಯವರಿಗೆ ವಿದ್ಯೆ ಹೇಳಿಕೊಡುವುದಿಲ್ಲಾ ಎಂಬ ಕಾರಣದಿಂದಾಗಿ ಬೇಡರ ಮಗ ಏಕಲವ್ಯನಿಗೆ ವಿದ್ಯೆ ಕಲಿಸಲು ನಿರಾಕರಿಸಿದಾಗ, ಏಕಲವ್ಯ ಮಾನಸಿಕವಾಗಿ ದ್ರೋಣರನ್ನೇ ತನ್ನ ಗುರುವಾಗಿ ಸ್ವೀಕರಿಸಿ ಅವರ ಮೇಲಿನ ಅಪಾರವಾದ ನಂಬಿಕೆಯಿಂದಲೇ ತನ್ನ ಸ್ವಸಾಮಥ್ಯದಿಂದ ಬಿಲ್ವಿದ್ಯೆ ಪಾರಂಗತನಗುತ್ತಾನೆ. ಅತನ ಪಾರಂಗತ್ಯವನ್ನು ಮುರಿಯಲೆಂದೇ ಅದೇ ಗುರು, ಗುರು ಕಾಣಿಕೆಯಾಗಿ ಆತನ ಬಲಗೈ ಹೆಬ್ಬರಳನ್ನು ಅರ್ಪಿಸುವಂತೆ ಕೇಳಿದಾಗ, ಒಂದು ಚೂರು ತಡಮಾಡದೇ, ಏನನ್ನೂ ಯೋಚಿಸದೇ, ತನ್ನ ಗುರುವಿಗೆ ಹೆಬ್ಬರಳನ್ನು ಅರ್ಪಿಸಿಯೂ ಮತ್ತದೇ ಗುರುವಿನ ಮೇಲಿನ ನಂಬಿಕೆಯಿಂದಾಗಿ ತನ್ನ ಎದಗೈನಿಂದ ಬಿಲ್ವಿದ್ಯೆ ಅಭ್ಯಾಸ ಮಾಡಿ ಮತ್ತೆ ತನ್ನ ಪ್ರಾಭಲ್ಯವನ್ನು ತೋರುತ್ತಾನೆ.
ನಂಬಿಕೆ ಮತ್ತು ವಿಶ್ವಾಸಗಳ ಕುರಿತಾದ ಶ್ರೀ ರಾಮಕೃಷ್ಣ ಪರಮಹಂಸರ ಒಂದು ದೃಷ್ಟಾಂತವನ್ನು ಹೇಳಲೇ ಬೇಕು. ಇದನ್ನು ಶ್ರೀಯುತ ಗುರುರಾಜ ಕರ್ಜಗಿಯವರೂ ಕೂಡಾ ಅನೇಕ ಬಾರಿ ಪ್ರಸ್ತಾಪಿದ್ದಾರೆ. ಅದೊಂದು ನದಿಯ ಆಚೆಯಲ್ಲಿರುವ ಗ್ರಾಮ. ಅಲ್ಲೊಂದು ಪ್ರಸಿದ್ಧ ದೇವಸ್ಥಾನ. ಆ ದೇವರ ಆಭಿಷೇಕಕ್ಕೆ ಪ್ರತಿದಿನವೂ ನದಿಯ ಮತ್ತೊಂದು ಕಡೆ ಇರುವ ಊರಿನಿಂದ ಹಾಲಿನಾಕೆ ಹಾಲನ್ನು ತಂದು ಕೊಡುತ್ತಿದ್ದಳು. ಅದೋಂದು ದಿನ ಭಾರೀ ಮಳೆಯಿಂದಾಗಿ ಆ ನದಿ ಉಕ್ಕಿ ಹರಿಯುತ್ತಿರುತ್ತಿದ್ದ ಪರಿಣಾಮ ಎಷ್ಟು ಹೊತ್ತಾದರೂ ಆಕೆ ಹಾಲನ್ನು ತಂದು ಕೊಡದಿದ್ದಾಗ, ಅಯ್ಯೋ ದೇವರಿಗೆ ಅಭಿಷೇಕ ಮಾಡಲು ಇಂದು ಹಾಲೇ ಇಲ್ಲವೇ? ಛೇ!! ಆಕೆಯಾದರೂ ಏನು ಮಾಡಿಯಾಳು ಎಂದು ಮನಸ್ಸಿನಲ್ಲಿಯೇ ಪರಿತಪಿಸುತ್ತಾ ಪೂಜೆ ಮುಂದುವರಿಸಿದ್ದಾಗ, ಸ್ವಾಮೀ ಹಾಲನ್ನು ತೆಗೆದುಕೊಳ್ಳಿ ಮತ್ತು ತಡವಾಗಿದ್ದಕ್ಕೆ ದಯವಿಟ್ಟು ಕ್ಷ್ಮಮಿಸಿ ಬಿಡಿ ಎಂಬ ಹಾಲಿನಾಕೆಯ ಮಾತನ್ನು ಕೇಳಿ ಅಶ್ವರ್ಯ ಚಕಿತರಾಗಿ, ಅರೇ ನದಿ ಈ ಪಾಟಿ ಉಕ್ಕಿ ಹಾರಿಯುತ್ತಿದ್ದಾಗ ಅದು ಹೇಗೆ ಬಂದೆಯಮ್ಮಾ ಎಂದು ಕೇಳುತ್ತಾರೆ ಶಾಸ್ತ್ರಿಗಳು. ಸ್ವಾಮೀ ಎಂದಿನಂತೆ ಹಾಲನ್ನು ತೆಗೆದುಕೊಂಡು ನದಿಯ ದಡಕ್ಕೆ ಬಂದು ನೋಡಿದರೆ ನದಿ ಪ್ರವಾಹದ ರೂಪದಲ್ಲಿ ಉಕ್ಕಿ ಹರಿಯುತ್ತಿದ್ದ ಪರಿಣಾಮವಾಗಿ ದೋಣಿ ನಡೆಸುವ ಅಂಬಿಗ ಕಾಣಲಿಲ್ಲ. ಸ್ವಲ್ಪ ಹೊತ್ತು ಆತನಿಗಾಗಿ ಕಾಯ್ದ ನಂತರ ಇನ್ನು ಹೆಚ್ಚು ಕಾಯ್ದರೆ ನಿಮ್ಮ ಪೂಜೆಗೆ ತಡವಾಗುತ್ತದೆ ಎಂದು ಭಾವಿಸಿ, ನೀವೇ ಪ್ರತಿ ಸಂಜೆ ನಿಮ್ಮ ಪ್ರವಚನದಲ್ಲಿ ನೀವೇ ಹೇಳುವಂತೆ, ಶ್ರದ್ಧಾ ಭಕ್ತಿಯಂದ ಮತ್ತು ಭಗವಂತನ ಮೇಲೆ ನಂಬಿಕೆ ಹಾಕಿ ಆತನ ನಾಮವನ್ನು ಸ್ಮರಿಸಿದರೆ, ಜನ ಭವಸಾಗರವನ್ನು ದಾಟುತ್ತಾರೆ ಎಂಬುದನ್ನು ನೆನೆದು, ಹಾಗೆಯೇ ನದಿಯ ಮೇಲೆಯೇ ನಡೆದು ಕೊಂಡು ಬಂದು ಬಿಟ್ಟೆ ಎಂದು ಮುಗ್ಘವಾಗಿ ಹೇಳುತ್ತಾಳೆ. ಆಕೆಯ ಮಾತನ್ನು ಕೇಳಿದ ಅರ್ಚಕರಿಗೆ ಅರೇ ನನ್ನ ಪ್ರಚನಕ್ಕೆ ಇಷ್ಟೋಂದು ಶಕ್ತಿಯಿದಯೇ? ಸರಿ ಅದನ್ನು ನಾನೊಮ್ಮೆ ಪರೀಕ್ಷಿಸ್ಸಲೇ ಬೇಕು ಎಂದು ತೀರ್ಮಾನಿಸಿ ಅಮ್ಮಾ ಸ್ವಲ್ಪ ಪೂಜೆ ಆಗುವವರೆಗೂ ತಡಿ. ನೀನು ನದಿ ದಾಟುವುದನ್ನು ನಾನು ನೋಡಬೇಕು ಎಂದು ಹೇಳಿ. ಲಗು ಬಗೆಯಾಗಿ ಪೂಜಾವಿಧಾನಗಳನ್ನು ಪೂರ್ಣಗೊಳಿಸಿ, ಭಾರೀ ಅಹಂನ್ನಿನೊಂದಿಗೆ, ಹಾಲಿನಾಕೆಯ ಸಂಗಡ ನದಿ ತಟಕ್ಕೆ ಬರುತ್ತಾರೆ. ಹಾಲಿನಾಕೆ ಮತ್ತದೇ ಭಗವಂತನ ಮೇಲೆ ನಂಬಿಕೆ ಇಟ್ಟು ತನ್ನ ಪಾದಿಗೆ ನದಿಯ ಮೇಲೆ ನಡೆಯಲಾರಂಭಿಸಿದಳು ಅಕೆಯನ್ನು ಅರ್ಚಕರು ಅಹಂನಿಂದ ಹಿಂಬಾಲಿಸಿ, ಒಂದೆರಡು ಹೆಜ್ಜೆ ಇಡುವಷ್ಟರಲ್ಲಿಯೇ ಅಯ್ಯೋ, ಅಮ್ಮಾ, ನಾನು ಸತ್ತೇ ಸತ್ತೇ, ಎಂದು ಕೂಗಲಾರಂಭಿಸಿದರು. ಆಕೆ ಆ ಶಬ್ಧವನ್ನು ಕೇಳಿ ಹಿಂತಿರುಗಿ ನೋಡಿದರೆ, ಅರ್ಚಕರು ಮುಳುಗುತ್ತಿದ್ದನ್ನು ನೋಡಿ, ಅವರ ಕೈ ಹಿಡಿರು ದಡಕ್ಕೆ ಎಳೆದು ತಂದು, ಸ್ವಾಮಿಗಳೆ, ನೀವು ದೇವರ ಹೆಸರನ್ನು ಬಾಯಲ್ಲಿ ಮಾತ್ರ ಹೇಳಿದಿರೇ ಹೊರತು, ಹೃದಯದಿಂದಲ್ಲಾ. ನಿಮ್ಮ ನಂಬಿಕೆ ದೇವರ ಮೇಲೆ ಇರದೇ, ಗಮನವೆಲ್ಲಾ ಪಂಚೆ ಒದ್ದೆಯಾಗದಿರಲಿ ಎಂದು ಅದನ್ನು ಮೇಲಕ್ಕೆತ್ತಿ ಹಿಡಿಯುವುದರ ಕಡೆ ಇದ್ದ ಪರಿಣಾಮ ನೀವು ನದಿ ದಾಟಲಾಗಲಿಲ್ಲ. ನೀವು ನಿಜವಾಗಿಯೂ ಭಗವಂತನ ಮೇಲೆ ನಂಬಿಕೆ ಇಟ್ಟು ಆತನ ಮೇಲೆ ಭಾರ ಹಾಕಿ ನಡೆದಿದ್ದಲ್ಲಿ ಇಷ್ಟು ಹೊತ್ತಿಗೆ ನಾವಿಬ್ಬರೂ ನದಿಯ ತಟದಲ್ಲಿ ಇರ ಬೇಕಿತ್ತು ಎಂದಳು. ಅರ್ಚಕರ ಅಹಂ ನೀರಿನಲ್ಲಿ ಮುಳುಗುವಾಗಲೇ ಕೊಚ್ಚಿಹೋಗಿ, ಅವರಿಗೆ ತಮ್ಮ ತಪ್ಪಿನ ಅರಿವಾಗಿ ಆಕೆಯಲ್ಲಿ ಕ್ಷಮೆಯಾಚಿಸಿದರು.
ಇದೇ ರೀತಿ ರಾಮಾಯಣದ ಮತ್ತೊಂದು ಪ್ರಸಂಗ ಹೇಳಲೇ ಬೇಕು. ರಾಮ ಮತ್ತು ಲಕ್ಷ್ಮಣರು ತಮ್ಮ ಕಪಿ ಸೇನೆಯ ಸಹಾಯದಿಂದ ಸೇತು ಬಂಧನ ಮಾಡಿ ಲಂಕೆಯನ್ನು ತಲುಪಿ, ಲಂಕಾಧಿಪತಿಯ ವಿರುದ್ಧ ಯುದ್ದಕ್ಕೆ ಸಕಲ ಸನ್ನದ್ಧರಾಗಿ ಮಾರನೆಯ ದಿನದಿಂದ ಯುದ್ಧವನ್ನು ಪ್ರಾರಂಭಿಸಬೇಕು ಎಂದು ನಿರ್ಧರಿಸಿರುತ್ತಾರೆ. ಆದರೆ ಕ್ಷತ್ರೀಯರ ಸಂಪ್ರದಾಯಾದ ಪ್ರಕಾರ ಯುಧ್ದಕ್ಕೆ ಮುಉನ ಶತ್ರು ವಿನಾಶಕಾರೀ ಪೂಜೆಮಾಡಿಸಲು ಲಂಕೆಯಲ್ಲಿ ಸೂಕ್ತ ಪುರೋಹಿತರ ಹುಡುಕಾಟ ನಡೆಶುತ್ತಿದ್ದಾಗ , ವಿಭೀಷಣನ ತನ್ನ ಅಣ್ಣ ರಾವಣನ್ನನೇ ಪೌರೋಹಿತ್ಯಕ್ಕೆ ಕರೆಯುವಂತೆ ಸಲಹೆ ನೀಡುತ್ತಾನೆ. ನಾಲ್ಕು ವೇದ ಪಾರಂಗತ, ಮಹಾ ಜ್ಞಾನಿ ಪರಮ ಬ್ರಾಹ್ಮಣ ಮತ್ತು ಶಿವ ಭಕ್ತ ಲಂಕಾಧಿಪತಿಗಿಂತ ಮತ್ತೊಬ್ಬ ಸಮರ್ಥ ಪುರೋಹಿತರು ಲಂಕೆಯಲ್ಲಿ ಬೇರಾರು ಇಲ್ಲಬೆಂಬ ನಂಬಿಕೆ ವಿಭೀಷಣನದ್ದು. ಅಂತೆಯೇ ಯುದ್ಧವನ್ನು ಮುಂದಿಟ್ಟು ಕೊಂಡು ವಿಭೀಷಣನ ಮೇಲಿನ ನಂಬಿಕೆಯಿಂದಲೇ, ಹನುಮಂತನ ಮುಖಾಂತರ ರಾವಣನನ್ನು ಪೌರೋಹಿತ್ಯಕ್ಕೆ ಹೇಳಿ ಕಳುಹಿಸುತ್ತಾರೆ. ಗುರುವಿನ ಸ್ಥಾನಕ್ಕೆ ಮರ್ಯಾದೆ ಕೊಟ್ಟು ಕರೆದ ಪರಿಣಾಮ ತನ್ನ ಶತೃ ಎಂದೂ ಲೆಕ್ಕಿಸದೇ, ಸ್ವತಃ ರಾವಣನೇ ಬಂದು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ ರಾಮ ಲಕ್ಷ್ಮಣರಿಗೆ ಕಂಕಣ ಕಟ್ಟಿ, ರಾಮ ಲಕ್ಷ್ಮಣರು ಭಕ್ತಿಪೂರ್ವಕವಾಗಿ ಅಚಾರ್ಯ ರಾವಣನಿಗೆ ನಮಿಸಿದಾಗ ಅವರಿಬ್ಬರಿಗೂ ವಿಜಯೀಭವ ಎಂದು ಹರಸಿ ತನ್ನ ಬ್ರಾಹ್ಮಣ್ಯತ್ವವನ್ನು ಮೆರೆಯುತ್ತಾನೆ. ತನ್ನ ಶತೃವಿನ ಬಾಯಿಯಿಂದ ವಿಜಯೇಭವ ಎಂಬ ಮಾತನ್ನು ಕೇಳಿ ದಂಗಾದ ರಾಮ, ಅರೇ ಇದೇನಿದು? ಯುದ್ದಕ್ಕೆ ಮುಂಚೆಯೇ ಶಸ್ತ್ರ ತ್ಯಾಗವೇ? ಯುದ್ಧ ಮಾಡದಯೇ ನಾವು ಗೆದ್ದು ಬಿಟ್ಟೆವೇ ಎಂದು ಕೇಳಿದ್ದಕ್ಕೆ ವ್ಯ್ರಘ್ರನಾದ ರಾವಣ, ನೀವಿಬ್ಬರೂ ನನಗೆ ನಮಸ್ಕರಿಸಿದಾಗ, ಗುರುವಿನ ರೂಪದಲ್ಲಿ ಆಶೀರ್ವಾದ ಮಾಡಿದ್ದೇನೆಯೇ ಹೊರತು, ನಿಮ್ಮ ಶತೃವಾಗಿ ಅಲ್ಲಾ. ನನ್ನ ಶಕ್ತಿ ಸಾಮರ್ಥ್ಯದ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ನಾಳಿನ ಯುದ್ದದಲ್ಲಿ ನನ್ನ ಸಾಮಥ್ಯದಿಂದ ನಿಮ್ಮನ್ನು ಸೋಲಿಸಿ ನಾನೇ ವಿಜಯೆಯಾಗುತ್ತೇನೆ ಎಂದು ತನ್ನ ದರ್ಪವನ್ನು ತೋರುತ್ತಾನಾದರೂ ಮುಂದಿನ ಯುದ್ದದಲ್ಲಿ ರಾಮ ಲಕ್ಷ್ಮಣರ ಮುಂದೆ ಆತನ ಪರಾಕ್ರಮವೇನೂ ನಡೆಯದೆ ಸೋತು ಸತ್ತು ಹೋಗುತ್ತಾನೆ.
ಮೇಲೆ ಹೇಳಿದ ಎರಡೂ ಪ್ರಸಂಗಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೇ, ಹಾಲಿನಾಕಿ ಮತ್ತು ರಾಮ ಲಕ್ಷ್ಮಣರ ನಂಬಿಕೆಗೂ, ದೇವಸ್ಥಾನದ ಅರ್ಚಕರು ಮತ್ತು ಪುರೋಹಿತ ರೂಪದಲ್ಲಿ ಬಂದಿದ್ದ ರಾವಣರ ನಂಬಿಕೆಗಳ ಮಧ್ಯೆ ಅಜಗಜಾಂತರದ ವೆತ್ಯಾಸವಿದೆ. ಹಾಲಿನಾಕಿ ದೇವರನ್ನು ನಂಬಿದರೆ, ರಾಮ ಲಶ್ಷ್ಮಣರು ವಿಭೀಷಣನ ಮಾತಿನ ಮೇಲೆ ನಂಬಿಕೆ ಇಟ್ಟ ಪರಿಣಾಮವಾಗಿ ತಮ್ಮ ಕಾರ್ಯವನ್ನು ಸಾಧಿಸಿದರು. ಅದರೇ ಇಬ್ಬರೂ ಪುರೋಹಿತರೂ ತಮ್ಮ ಮೇಲಿನ ಅತಿಯಾದ ಆತ್ಮವಿಶ್ವಾಸದ ಪರಿಣಾಮದಿಂದ ನಂಬಿಕೆಯಿಂದ ವಿಚಲಿತರಾಗಿ ಸೋಲುಣಬೇಕಾಯಿತು.
ಇನ್ನು ರೋಗಿಗಳ ಖಾಯಿಲೆಗಳನ್ನು ಗುಣಪಡಿಸುವುದರಲ್ಲಿ ಔಷಧಿಗಳ ಜೊತೆ ಜೊತೆಗೆ ರೋಗಿಗಳಿಗೆ ವೈದ್ಯರ ಮೇಲಿನ ನಂಬಿಕೆಯೇ ಹೆಚ್ಚಿನ ಪಾತ್ರ ವಹಿಸುತ್ತದೆ. ಆ ವೈದ್ಯರು ಎಷ್ಟೇ ಸುಪ್ರಸಿದ್ಧರಾಗಿದ್ದರೂ ಸಿದ್ಧ ಹಸ್ತರಾಗಿದ್ದರೂ ರೋಗಿಗಳಿಗೆ ಅವರ ಚಿಕಿತ್ಸೆಯ ಮೇಲೆ ನಂಬಿಕೆ ಇಲ್ಲದಿದ್ದಲ್ಲಿ ಎಂತಹ ಶಕ್ತಿಶಾಲಿ ಔಷಧಿಗಳನ್ನು ನೀಡಿದರೂ ಗುಣಪಡಿಸಲಾಗದು. ಅದೇ ರೋಗಿಗಳಿಗೆ ವೈದ್ಯರ ಚಿಕಿತ್ಸೆಯ ಮೇಲೆ ನಂಬಿಕೆ ಇದ್ದಲ್ಲಿ, ಮದ್ದೇ ಇಲ್ಲದೇ ಗುಣ ಪಡಿಸಬಹುದು. ಆಪ್ತರಕ್ಷಕ ಸಿನಿಮಾದಲ್ಲಿ ವೈದ್ಯರಾಗಿ ನಟಿಸಿರುವ ಡಾ.ವಿಷ್ಣುವರ್ಧನ್ ಅವರು ತಮ್ಮ ಸಹಾಯಕ ಕೋಮಲ್ ನಿದ್ದೆಯೇ ಬರುತ್ತಿಲ್ಲಾ ಎಂದಾಗ, ಎಲ್ಲಿ ಕಣ್ಣು ಮುಚ್ಚಿಕೊಂಡು ಬಾಯಿ ತೆಗಿ. ನಾನು ಮಾತ್ರೆ ಹಾಕುತ್ತೇನೆ ಸುಮ್ಮನೆ ನೀರು ಕುಡಿದು ಮಲಗಿ ಕೋ. ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಒಂದು ಕಾಗದ ತುಣುಕನ್ನು ಉಂಡೆ ಮಾಡಿ ಕಣ್ಣು ಮುಚ್ಚಿಕೊಂಡಿದ್ದ ಕೋಮಲ್ ಬಾಯಿಗೆ ಹಾಕಿದಾಗ, ಆತ ವೈದ್ಯರ ಮೇಲಿನ ನಂಬಿಕೆಯಿಂದ ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಗಡದ್ದಾಗಿ ನಿದ್ದೆ ಜಾರಿಹೋಗುತ್ತಾನೆ. ಸಿನಿಮಾದಲ್ಲಿ ಹಾಸ್ಯಕ್ಕೆಂದು ಈ ದೃಶ್ಯವನ್ನು ತೋರಿಸಿದ್ದರೂ ವೈದ್ಯರ ಕೈಗುಣ ನಿಜಕ್ಕೂ ದೊಡ್ಡದೇ ಸರೀ.
ಹಾಗಾಗಿ ಅಂದೂ ಇಂದೂ ಎಂದೆಂದೂ ಈ ಜಗತ್ತಿನಲ್ಲಿ ಸುಖಃ ಶಾಂತಿಯಿಂದ ನೆಮ್ಮದಿಯಾಗಿ ಬಾಳ್ವೆ ನಡೆಸಲು ಎಲ್ಲರ ಮೇಲೂ ಪರಸ್ಪರ ನಂಬಿಕೆ ಇರಬೇಕು, ನಂಬಿಕೆ ವಿಸ್ವಾಸವನ್ನು ಹೆಚ್ಚಿಸುತ್ತದೆ ಅದರ ಪರಿಣಾಮವಾಗಿ ಮಿತೃತ್ವ ಹೆಚ್ಚಾಗಿ ಎಲ್ಲರೂ ಸ್ನೇಹಪೂರ್ವಕವಾಗಿರಬಹುದು. ಆದೇ ಅಪನಂಬಿಕೆ ವಿಸ್ವಾಸವನ್ನು ಕುಗ್ಗಿಸುವ ಪರಿಣಾಮವಾಗಿ ಶತೃತ್ವ ಹೆಚ್ಚಾಗಿ ಪರಸ್ಪರ ದ್ವೇಷದಿಂದ ಕಚ್ಚಾಡುವ ಸಂಭವೇ ಹೆಚ್ಚು. ಆದನ್ನೇ ಅಲ್ಲವೇ ಚಿ.ಉದಯಶಂಕರ್ ಅವರು ಒಡಹುಟ್ಟಿದವರು ಸಿನಿಮಾದಲ್ಲಿ ರಾಜಕುಮಾರ್ ಅವರಿಂದ ನಂಬಿ ಕೆಟ್ಟವರಿಲ್ಲವೋ ತಮ್ಮಯ್ಯ ನೀ ಕೇಳೂ, ನಂಬಿ ಕೆಟ್ಟವರಿಲ್ಲವೋಕೆಟ್ಟವರಿಲ್ಲವೋ ಎಂದು ಹಾಡಿಸಿದ್ದಾರೆ. ಹಾಗಾಗಿ ಎಲ್ಲರಲ್ಲೂ ನಂಬಿಕೆ ಇಡೋಣ. ನುಡಿದಂತೆಯೇ ನಡೆಯೋಣ. ನಡೆಯುಂತೆಯೇ, ನುಡಿಯುವುದರ ಮೂಲಕ ಎಲ್ಲರ ನಂಬಿಕೆಗೆ ಪಾತ್ರರಾಗೋಣ.
ಏನಂತೀರೀ?
ಎಂದಿನಂತೆಯೇ ಓದಿಸಿಕೊಂಡು ಹೋಗುವ ಸರಳ ನಿರೂಪಣೆ ಸೊಗಸಾಗಿದೆ,ಉಪಕಥೆಗಳು ಲೇಖನದ ಶಕ್ತಿ ಹೆಚ್ಚಿಸಿವೆ. ಇನ್ನಷ್ಟು ಉಪಕಥೆ ಸೇರಿಸಿಕೊಂಡು ಬರೆಯಿರಿ ನಾವು ಯಾವುದೇ ಬೇಸರಯಿಲ್ಲದೆ ಓದುತ್ತೇವೆ. ಮೆಲುಕುಹಾಕುವುದಷ್ಟೇ ನಮ್ಮ ಕೆಲಸ.
.ನನ್ನ ಪ್ರಕಾರ ” ಅಮ್ಮನ ಮೇಲೆ ಮಗು ಇಟ್ಟಿರುವ ನಂಬಿಕೆ ಅತ್ಯಂತ ದೊಡ್ಡದಾದ ನಂಬಿಕೆ.” ಅಮ್ಮ ಯಾರನ್ನೋ ತೋರಿಸಿ ಇವ ನಿನ್ನ ಅಪ್ಪ, ಅಣ್ಣ, ಅಕ್ಕ ಎಂದು ಹೇಳಿದ್ದನ್ನು ನಂಬಿದ್ದೇವಲ್ಲಾ. ಡಿ ಎನ್ಎ ಟೆಸ್ಟ್ ಮೊರೆಹೋಗಿಲ್ಲವಲ್ಲ. ಒಂದುವೇಳೆ ಡಿಎನ್ ಎ ಟೆಸ್ಟ್ ಬೇಕೆಂದಾದರೆ ನಂಬಿಕೆ ಸತ್ತಿತು ಅಷ್ಟೇ.
LikeLike
ಹೌದು ನಿಜ. ಲೇಖನ ಬರೆಯುವಾಗ ತಾಯಿ ಮಕ್ಕಳ ಸಂಬಂಧ ಕುರಿತಾಗಿ ಇದೇ ಮಾತನ್ನೇ ಬರೆಯ ಬೇಕು ಎಂದು ಕೊಂಡಿದ್ದೆ ಆದರೆ ಲೇಖನದ ಓಘದಲ್ಲಿ ಆ ಅಂಶ ಬಿಟ್ಟು ಹೋಗಿತ್ತು. ನೀವು ನೆನಪಿಸಿದ ಮೇಲೆ ಮೂಲ ಲೇಖನವನದಲ್ಲಿ ತಿದ್ದುಪಡಿ ಮಾಡಿದ್ದೇನೆ.
ನಿಮ್ಮ ಸಲಹೆಗಳು ಇದೇ ರೀತಿ ಮುಂದುವರೆಯಲಿ ಎಂದು ಆಶಿಸುತ್ತೇವೆ.
LikeLike