ನಮ್ಮೆಲ್ಲರ ನಿತ್ಯ ಜೀವನದಲ್ಲಿ ಗೆಳೆತನ (friendship) ಎಂಬುದು ಬಹಳ ಮುಖ್ಯ ಪಾತ್ರವಹಿಸುತ್ತದೆ. ಗೆಳೆತನ ಸರಿಯಾಗಿದ್ದಲ್ಲಿ ಎಲ್ಲವೂ ಸುಖಃಮಯವಾಗಿರುತ್ತದೆ. ಅಕಸ್ಮಾತ್ ಗೆಳೆತನದಲ್ಲಿ ಒಂದು ಚೂರು ವೆತ್ಯಾಸವಾದರೂ ಅದು ಘನ ಘೋರ ಪರಿಣಾಮವನ್ನು ಬೀರುತ್ತದೆ.
ಮೇಲೆ ತೋರಿಸಿರುವ ಚಿತ್ರವನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೇ, ಹುಡುಗಿಯೊಬ್ಬಳು ಅಪಾಯಕ್ಕೆ ಸಿಲುಕಿದ್ದಾಳೆ. ಅವಳನ್ನು ರಕ್ಷಿಸಲು ಒಬ್ಬ ಹುಡುಗ ಪ್ರಯತ್ನಿಸುತ್ತಿದ್ದಾನೆ. ತಾನು ಕೈಹಿಡಿದು ಮೇಲೆ ಎತ್ತುತ್ತಿರುವ ಹುಡುಗಿಗೆ ಹಾವು ಕಚ್ಚುತ್ತಿದೆ ಎಂದು ಆ ಹುಡುಗನಿಗೆ ತಿಳಿದಿಲ್ಲ. ಅದೇ ರೀತಿ ತನ್ನನ್ನು ರಕ್ಷಿಸುತ್ತಿರುವ ಹುಡುಗನ ಬೆನ್ನ ಮೇಲೆ ದೊಡ್ಡದಾದ ಬಂಡೆ ಬಿದ್ದಿದೆ ಎನ್ನುವುದು ಆ ಹುಡುಗಿಗೆ ತಿಳಿದಿಲ್ಲ. . ಹುಡುಗಿ ಅಯ್ಯೋ, ನನ್ನ ಕೈಗೆ ಹಾವು ಕಚ್ಚಿ ವಿಷವೇರುತ್ತಿದೆ. ಕೈಗಳು ಭಾರವಾಗುತ್ತಿದೆ ಇನ್ನು ಮೇಲೆ ನಾನು ಏರಲು ಸಾಧ್ಯವಿಲ್ಲ. ನಾನು ಬೀಳುತ್ತಲಿದ್ದೇನೆ. ಛೇ!! ಆ ಮನುಷ್ಯ ಇನ್ನೂ ಸ್ವಲ್ಪ ಹೆಚ್ಚಿನ ಶಕ್ತಿಯನ್ನು ಬಳಸಿ ಒಮ್ಮೆಲೇ ನನ್ನನ್ನು ಮೇಲಕ್ಕೆ ಏಕೆ ಎಳೆಯಲು ಸಾಧ್ಯವಿಲ್ಲ ಎಂದು ಯೋಚಿಸುತ್ತಿದ್ದಾಳೆ.
ಅದೇ ರೀತಿ ಹುಡುಗ, ಅಯ್ಯೋ ನನ್ನ ಬೆನ್ನ ಮೇಲೆ ಬಂಡೆ ಬಿದ್ದ ಪರಿಣಾಮವಾಗಿ ತುಂಬಾ ನರಳುತ್ತಿದ್ದೇನೆ. ಕೈ ಕೂಡಾ ತುಂಬಾ ನೋಯುತ್ತಿದೆ. ಆದರೂ ನಾನು ಶಕ್ತಿ ಮೀರಿ ಎಷ್ಟು ಸಾಧ್ಯವೋ ಅಷ್ಟು ಬಳಸಿ ಆ ಹುಡುಗಿಯನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದೇನೆ. ಅದಕ್ಕೆ ತಕ್ಕಂತೆ ಆಕೆಯ ಕಡೆಯಿಂದಲೂ ಸ್ವಲ್ಪ ಹೆಚ್ಚಿನ ಪ್ರಯತ್ನವಾಗಿ ಆಕೆ ಏಕೆ ಮೇಲೆ ಬರಲು ಪ್ರಯತ್ನಿಸುತ್ತಿಲ್ಲಾ ಎಂದು ಯೋಚಿಸುತ್ತಿದ್ದಾನೆ.
ಹಾಗೆ ನೋಡಿದರೆ, ಇಬ್ಬರ ಅಲೋಚನೆಗಳೂ ಸರಿಯಾಗಿವೆ. ಇಬ್ಬರೂ ಪ್ರಯತ್ನವನ್ನಂತೂ ಮಾಡುತ್ತಿದ್ದಾರಾದರೂ, ಅವರ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಮಾತ್ರ ಅವರಿಬ್ಬರಿಗೂ ಸಿಗುತ್ತಿಲ್ಲ. ಅದಕ್ಕೆ ಕಾರಣ, ಸಂವಹನೆಯ ಕೊರತೆ. ಇಬ್ಬರೂ ಅವರಿಗಾಗುತ್ತಿರುವ ಕಷ್ಟಗಳನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿಲ್ಲವಾದ್ದರಿಂದ ಪರಸ್ಪರ ವಿರುದ್ಧವಾಗಿ ಯೋಚಿಸುವಂತಾಗಿದೆ.
ಇಂತಹ ಕಠಿಣ ಪರಿಸ್ಥಿತಿ ಎಲ್ಲರ ಜೀವನದಲ್ಲಿ ನಿತ್ಯ ಸಾಮಾನ್ಯವಾಗಿದೆ. ಒಬ್ಬ ವ್ಯಕ್ತಿಗಿರುವ ಒತ್ತಡವನ್ನು ಮತ್ತೊಬ್ಬರು ನೋಡಲಾಗುವುದಿಲ್ಲ, ಮತ್ತು ಅವರು ಅನುಭವಿಸುತ್ತಿರುವ ನೋವನ್ನು ಇತರ ವ್ಯಕ್ತಿಯು ನೋಡಲಾಗದ ಕಾರಣ ಸಹಾಯ ಮಾಡಲೂ ಸಾದ್ಯವಿರುವುದಿಲ್ಲ. ಕುಟುಂಬಲ್ಲೇ ಆಗಲೀ, ಉದ್ಯೋಗದಲ್ಲೇ ಆಗಲಿ ಅಥವಾ ಸ್ನೇಹಿತರೊಂದಿಗಾಗಲೀ ನಾವು ಸದಾಕಾಲ ಪಾರದರ್ಶಕವಾಗಿರಬೇಕು ಮತ್ತು ನಮಗೆ ಏನು ಬೇಕು ಎಂಬುದನ್ನು ಸುತ್ತೀ ಬಳಸಿ ಹೇಳದೇ, ನೇರ, ದಿಟ್ಟವಾಗಿ ಮತ್ತು ಸ್ಪಷ್ಟವಾಗಿ ಅರ್ಥವಾಗುವಂತೆ ತಿಳಿಸಿಬಿಡಬೇಕು. ಸುಮ್ಮನೆ ಸುತ್ತೀ ಬಳಸಿ ಕಾಲ ಹರಣ ಮಾಡುತ್ತಲೇ ಹೋದರೆ ನಾವು ಏನು ಹೇಳಬೇಕೋ ಅದನ್ನು ಮರೆತು ಬಿಡುವ ಸಂಭವವೇ ಹೆಚ್ಚು. ಒಂದು ಪಕ್ಷ ಮರೆಯದೇ ಹೇಳಿದರೂ ಕಾಲ ಮಿಂಚಿ ಹೋಗಿ ಅವರೂ ಕೂಡಾ ಸಹಾಯ ಮಾಡುವ ಪರಿಸ್ಥಿತಿಯಲ್ಲಿರುವುದಿಲ್ಲ.
friend is a need friend indeed ಅಂದರೆ ಆಪತ್ಕಾಲದಲ್ಲಿ ಆಗುವವನೇ ಆಪ್ತಮಿತ್ರ ಎನಿಸಿಕೊಳ್ಳುತ್ತಾನೆ. ಗೆಳೆತನಕ್ಕೆ ಕೃಷ್ಣಾ ಮತ್ತು ಕುಚೇಲರಿಗಿಂತ ಮತ್ತೊಂದು ಉತ್ತಮ ಉದಾಹರಣೆ ಇಲ್ಲಾ. ಶ್ರೀ ಕೃಷ್ಣಾ ಮತ್ತು ಕುಚೇಲ ಬಾಲ್ಯದ ಸ್ನೇಹಿತರು. ಇಬ್ಬರೂ ಸಾಂದೀಪಿನಿ ಗುರುಕುಲದಲ್ಲಿ ಒಟ್ಟಿಗೆ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಗ ಒಬ್ಬರನ್ನೊಬ್ಬರು ಬಿಟ್ಟಿರದಂತಹ ಪ್ರಾಣ ಸ್ನೇಹಿತರು. ಇಬ್ಬರ ವಿದ್ಯಾಭ್ಯಾಸ ಮುಗಿದು ಅವರರವರ ಊರಿಗೆ ಹಿಂದಿರುಗುವಾಗ ಶ್ರೀಕೃಷ್ಣನೇ ಖುದ್ದಾಗಿ, ಗೆಳೆಯಾ ನಿನಗೆ ಯಾವುದೇ ಸಂಕಷ್ಟಗಳು ಎದುರಾದಾಗ ಬೇಸರಿಸದೇ ನನ್ನನ್ನು ನೆನೆಪಿಸಿಕೋ. ನನ್ನ ಕೈಯಲ್ಲಾದ ಮಟ್ಟಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ ಎಂಬುದಾಗಿ ಮಾತನ್ನು ಕೊಟ್ಟಿರುತ್ತಾನೆ. ಇನ್ನು ಕುಚೇಲನೋ ಮಹಾ ಸ್ವಾಭಿಮಾನಿ. ತನ್ನ ಸಂಸಾರದಲ್ಲಿ ಒಂದು ಹೊತ್ತಿಗೆ ಊಟಕ್ಕೂ ಕಷ್ಟವಿದ್ದರೂ ಅವನೆಂದೂ ಶ್ರೀಕೃಷ್ಣನ ನೆರವನ್ನು ಕೇಳಲು ಮನಸ್ಸು ಮಾಡಿರಲಿಲ್ಲ. ಆದರೆ ಅದೊಂದು ದಿನ ಆತನ ಹೆಂಡತಿಯ ಪಿತ್ತ ನೆತ್ತಿಗೇರಿ, ಶ್ರೀಕೃಷ್ಣಾ ನಿಮಗೆ ಬಾಲ್ಯ ಸ್ನೇಹಿತ, ಪ್ರಾಣ ಸ್ನೇಹಿತ ಎನ್ನುತ್ತೀರಿ, ಸ್ನೇಹಿತನ ಕಷ್ಟಕ್ಕೆ ಆಗದವನು ಅದೆಂತಹಾ ಪ್ರಾಣ ಸ್ನೇಹಿತ ಎಂದು ಹಂಗಿಸುತ್ತಾಳೆ. ನೋಡು ನಮ್ಮ ದುರ್ವಿಧಿಗೆ ನನ್ನ ಸ್ನೇಹಿತನ್ನನ್ನು ಏಕೆ ದೂಷಿಸುವೆ. ಕಾಲ ಎಂದೂ ಹೀಗೆ ಇರುವುದಿಲ್ಲ. ಗಡಿಯಾರದ ಮುಳ್ಳಿನಂತೆ ಅದು ಬದಲಾಗುತ್ತಲೇ ಇರುತ್ತದೆ. ನಾವೀಗ ಬಡತನದಲ್ಲಿರಬಹುದು ಮುಂದೊಂದು ದಿನ ನಮಗೂ ಒಳ್ಳೆಯ ಕಾಲ ಬಂದೇ ಬರುತ್ತದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕಷ್ಟೇ ಎಂದು ಸಮಾಧಾನ ಪಡಿಸುತ್ತಾನೆ.
ಅದೆಷ್ಟೋ ಬಾರಿ ಇಂತಹ ಸಮಾಧಾನಗಳನ್ನು ಕೇಳಿ ಕೇಳಿ ಸಾಕಾಗಿದ್ದ ಆತನ ಪತ್ನಿ ನೀವು ಈ ಬಾರಿ ಶ್ರೀಕೃಷ್ಣನ ಬಳಿ ಖುದ್ದಾಗಿ ಹೋಗಿ ಸಹಾಯ ಕೇಳದಿದ್ದಲ್ಲಿ ನಾನು ಮತ್ತು ನನ್ನ ಮಕ್ಕಳು ಕೆರೆಯೋ ಇಲ್ಲವೇ ಭಾವಿಯನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಹೆದರಿಸಿದಾಗ, ಆಕೆಗೆ ಬೆದರಿ ಶ್ರೀಕೃಷ್ಣನನ್ನು ಕಾಣಲು ಬರೀಗೈಯಲ್ಲಿ ಹೋಗಲು ಮನಸ್ಸಾಗದೇ ಮನೆಯಲ್ಲಿ ಅಳಿದುಳಿದ್ದ ಮೂರು ಹಿಡಿ ಅವಲಕ್ಕಿಯನ್ನು ತನ್ನ ಶಲ್ಯದ ತುದಿಯಲ್ಲಿ ಕಟ್ಟಿಕೊಂಡು ಶ್ರೀಕೃಷ್ಣನನ್ನು ಭೇಟಿಯಾಗುತ್ತಾನೆ. ಹಾಗೆ ಭೇಟಿಯಾದಾಗಲೂ ಉಭಯ ಕುಶಲೋಪರಿಯನ್ನು ವಿಚಾರಿಸುತ್ತಾನಾದರೂ ತಾನು ಅತನಿಂದ ಸಹಾಯ ಬೇಡಲು ಬಂದಿರುವ ವಿಷಯವನ್ನು ಮಾತ್ರ ಹೇಳುವುದೇ ಇಲ್ಲ. ಶ್ರೀಕೃಷ್ಣ ತನ್ನ ಎಲ್ಲಾ ಕೆಲಸಗಳನ್ನೂ ಬದಿಗಿಟ್ಟು ಇಡೀ ದಿನ ತನ್ನ ಸ್ನೇಹಿತನ ಜೊತೆಗೇ ಇದ್ದು ಆತನಿಗೆ ಸಕಲ ಆದರಾತಿಥ್ಯಗಳನ್ನು ಮಾಡುತ್ತಾನೆ. ಇನ್ನೇನು ಕುಚೇಲ ಮನೆಗೆ ಹೊರಡುವ ಸಮಯದಲ್ಲೂ ಶ್ರೀಕೃಷ್ಣಾ , ಗೆಳೆಯಾ ಇನ್ನೇನು ವಿಷಯಾ? ಎಂದು ಬಾಯಿ ಬಿಟ್ಟು ಕೇಳಿದಾಗಲೂ ಅಟ ಬಾಯಿಯನ್ನೇ ಬಿಡದಿದ್ದಾಗ, ಗೆಳೆಯ ನನ್ನನ್ನು ನೋಡಲು ಅದೇಷ್ಟೋ ವರ್ಷಗಳ ನಂತರ ಬಂದಿರುವೆ. ನನಗೇನು ತಾರದೇ ಬರಿಗೈಯಲ್ಲಿ ಬರಲು ಅದು ಹೇಗೆ ಮನಸ್ಸಾಯಿತು ಎಂದು ಕೇಳಿ, ಅರೇ ಇದೇನಿದು ನಿನ್ನ ಶಲ್ಯದಲ್ಲಿ ಏನೋ ಗಂಟನ್ನು ಕಟ್ಟಿಕೊಂಡು ನನಗಾಗಿಯೇ ಏನನ್ನೋ ತಂದಿರುವಂತಿದೆ ಎಂದು ತಾನೇ ಕೈ ಹಾಕಿ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ, ಕುಚೇಲ ಒಲ್ಲದ ಮನಸ್ಸಿನಿಂದಲೇ ಅವನಿಗೆ ಅವಲಕ್ಕಿಯನ್ನು ಕೊಡುತ್ತಾನೆ. ಶ್ರೀಕೃಷ್ಣನು ಅಹಾ ಬಹಳ ರುಚಿಯಾಗಿದೆ ಈ ಅವಲಕ್ಕಿ. ಇಂತಹ ಅವಲಕ್ಕಿಯನ್ನು ನಾನೆಂದೂ ತಿಂದೇ ಇರಲಿಲ್ಲ. ಇಂತಹ ರುಚಿರುಚಿಯಾದ ಅವಲಕ್ಕಿಯನ್ನು ತಂದು ಕೊಟ್ಟ ನಿನಗೆ, ನಿನ್ನೆಲ್ಲಾ ಇಚ್ಚೆಗಳು ಈಡೇರಲಿ ಎಂದು ಹಾರೈಸಿ ತನ್ನ ಗೆಳೆಯನ್ನನ್ನು ಅತನ ಮನೆಗೆ ಬೀಳ್ಗೊಡುತ್ತಾನೆ. ಬೆಳಗಿನಿಂದಲೂ ತನ್ನ ಬಾಲ್ಯದ ಗೆಳೆಯನ ಆದಾರಾಥಿತ್ಯಗಳಿಂದ ಒಂದು ರೀತಿಯ ಮುಜುಗರಕ್ಕೊಳಗಾಗಿ ಆತನಿಂದ ಯಾವ ರೀತಿಯ ಸಹಾಯವನ್ನೂ ಕೋರದೆ ಈಗ ಬರಿಗೈಯಲ್ಲಿ ಮನೆಗೆ ಹೋಗಿ ತನ್ನ ಹೆಂಡತಿ ಮಕ್ಕಳನ್ನು ಹೇಗೆ ಎದುರಿಸುವುದು ಎಂದು ಆತಂಕದಲ್ಲೇ ತನ್ನ ಮನೆಗೆ ಹೋದಾಗ, ತಾನಿದ್ದ ಗುಡಿಸಿಲಿನ ಜಾಗದಲ್ಲಿ ಇದ್ದಕ್ಕಿದ್ದಂತೆಯೇ ಭವ್ಯವಾದ ಬಂಗಲೆ ತಲೆ ಎದ್ದಿರುತ್ತದೆ. ಅರೇ ಇದೇನಿದೂ ತಾನು ತಪ್ಪಾದ ದಾರಿಗೆ ಬಂದಿಲ್ಲವಷ್ಟೇ ಎಂದು ಯೋಚಿಸುತ್ತಿರುವಾಗಲೇ ಸರಿಯಾಗಿ ಮೈಮುಚ್ಚುವ ಉಡುವ ಬಟ್ಟೆಗೂ ಗತಿಯಿಲ್ಲದೇ ಇದ್ದ ಅತನ ಮಕ್ಕಳು ಪಚ್ಚೆ ಪೀತಾಂಬರದ ಉಡುಪನ್ನು ಧರಿಸಿಕೊಂಡು ಕಂಠೀಹಾರವವನ್ನು ತೊಟ್ಟು ಆಡವಾಡಲೂ ಅದೇ ಬಂಗಲೆಯಿಂದ ಹೊರಬಿದ್ದಾಗಲೇ ಅದು ತನ್ನ ಮನೆ ಎಂದು ಗೊತ್ತಾಗಿ ಆ ಭವ್ಯ ಮಹಲಿನ ಒಳಗೆ ಅಳುಕುತ್ತಲೇ ಕಾಲಿಟ್ಟಾಗ ಕುಚೇಲನ ಮಡದಿ ತನ್ನ ಪತಿರಾಯರನ್ನು ಕಂಡು ಓಡಿ ಬಂದು ನಮ್ಮ ಕಷ್ಟಗಳನ್ನು ಆ ಭಗವಂತ ಶ್ರೀ ಕೃಷ್ಣ ಪರಿಹರಿಸಿದ ಎಂದು ಆನಂದದಿಂದ ಹೇಳುತ್ತಾ , ಈ ಕೆಲಸವನ್ನು ಇಷ್ಟು ದಿನ ತಡಮಾಡದೇ ಎಂದೋ ಮಾಡಿದ್ದರೆ, ನಾವು ಈ ರೀತಿಯಾಗಿ ಕಷ್ಟವನ್ನು ಅನುಭವಿಸ ಬೇಕಿರಲಿಲ್ಲ ಎಂದಾಗಲೇ, ಕುಚೇಲನಿಗೆ ತನ್ನ ಸಂವಹನ ಕೊರತೆಯ ಅರಿವಾಗುತ್ತದಾದರೂ, ತಾನು ಏನನ್ನೂ ಕೇಳದಿದ್ದರೂ ತಾನು ಬಂದಿದ್ದ ವಿಷಯವನ್ನು ಅರಿತು ಸಹಾಯ ಹಸ್ತವನ್ನು ಚಾಚಿದ ಶ್ರೀ ಕೃಷ್ಣನ ಮೇಲೆ ಅಪಾರವಾದ ಗೌರವ ಮೂಡುತ್ತದೆ.
ಆ ಭಗವಂತನಿಗೂ ತನ್ನ ಭಕ್ತರ ಕಷ್ಟ ಅರಿವಿದ್ದರೂ, ಭಕ್ತರೇ ಅತನ ಬಳಿ ಬಂದು ಕೇಳುವವರೆಗೂ ಇಲ್ಲವೇ , ನೆನಪಿಸಿಕೊಳ್ಳುವವರೆಗೂ ಆತ ಸಹಾಯಕ್ಕೆ ಬರಲಾರ ಎನ್ನುವುದು ಈ ದೃಷ್ಟಾಂತದಿಂದ ತಿಳಿದು ಬರುತ್ತದೆ. ಭಗವಂತನದ್ದೇ ಈ ರೀತಿಯಾದರೆ, ಇನ್ನು ಹುಲುಮಾನವರಿಗೆ ಇತರ ಕಷ್ಟ ಹೇಗೆ ಅರಿವಾಗ ಬೇಕು? ಅದಕ್ಕಾಗಿಯೇ ನಮ್ಮ ಕುಟುಂಬ, ಬಂಧು ಮಿತ್ರರು ಮತ್ತು ನೆರೆಹೊರೆಯವರ ಜೊತೆ ನಮ್ಮ ಸಂವಹನೆ ಉತ್ತಮವಾಗಿರ ಬೇಕು. ತಾಳ್ಮೆಯಿಂದ ಆಲೋಚನಾ ಭರಿತವಾಗಿರಬೇಕು. ಹಾಗಾದಲ್ಲಿ ಮಾತ್ರವೇ ಒಬ್ಬರಿಗೊಬ್ಬರು ಸಹಾಯ ಹಸ್ತವನ್ನು ಚಾಚುವಂತಾಗುತ್ತದೆ ಮತ್ತು ಸಂಬಂಧಗಳು ಬೆಳೆಯುತ್ತವೆ ಇಲ್ಲವೇ ಉತ್ತಮ ಗೊಳ್ಳುತ್ತದೆ. ಪರಸ್ಪರ ಗೌರವ ಮೂಡಲ್ಪಡುತ್ತದೆ ಮತ್ತು ಸರ್ವೇ ಜನಾಃ ಸುಖಿನೋ ಭವಂತು. ಸಮಸ್ತ ಲೋಕಾನಿ, ಸನ್ಮಂಗಳಾನಿ ಭವಂತು. ಲೋಕಾ ಸಮಸ್ತಾಃ ಸುಖಿನೋ ಭವಂತು ಎಂಬ ಶ್ಲೋಕಕ್ಕೆ ನಿಜವಾದ ಅರ್ಥ ಬರುತ್ತದೆ.
ಇಂದು ವಿಶ್ವ ಸ್ನೇಹಿತರ ದಿನ. ನಮ್ಮ ಯಾವುದೇ ಸ್ನೇಹಿತರು ಕಷ್ಟದಲ್ಲಿ ಇದ್ದಾರೆ ಎಂಬ ಸುದ್ದಿ ತಿಳಿದಾಕ್ಷಣವೇ, ಅವನು ನಮ್ಮ ಬಳಿ ಬಂದು ಸಹಾಯ ಕೇಳಲಿ ಎಂದು ಕಾಯುವ ಬದಲು ನಮ್ಮ ಕೈಯ್ಯಲ್ಲಿ ಅಗುವಷ್ಟು ಸಹಾಯ ಮಾಡಿಬಿಡೋಣ. ಆರ್ಥಿಕವಾಗಿ ಸಹಾಯ ಮಾಡಲು ಆಗದಿದ್ದ ಪಕ್ಷದಲ್ಲಿ ಅವನ ಕಷ್ಟಗಳನ್ನು ಕೇಳಿ, ಸಮಸ್ಯೆಗಳಿಂದ ಹೊರಬರುವ ಪರಿಹಾರವನ್ನಾದರೂ ಹೇಳುವಂತಹ ಕನಿಷ್ಠ ಮನೋಭಾವನೆಯನ್ನು ಬೆಳಸಿಕೊಂಡಾಗಲೇ ನಿಜವಾದ ಸ್ನೇಹಿತರ ದಿನಾಚರಣೆಗೆ ಬೆಲೆ ಬರುತ್ತದೆ. ಗೆಳೆತನ ಎನ್ನುವುದು ಕೇವಲ ಕೈಗೊಂದು ಬ್ಯಾಂಡ್ ಹಾಕುವುದಕ್ಕೆ ಮಾತ್ರವೇ ಸೀಮಿತವಾಗಿರದೇ, ಗೆಳೆಯರ ಸುಖಃ ಮತ್ತು ದುಃಖ ಎರಡನ್ನೂ ಸರಿಸಮನಾಗಿ ಸದಾಕಾಲವೂ ಹಂಚಿಕೊಳ್ಳುವಂತಾಗಲಿ.
ಸೊಗಸಾಗಿದೆ
LikeLiked by 1 person