ನೀರು ಎಲ್ಲರ ಜೀವಾಮೃತ. ಕಡೇ ಪಕ್ಷ ಊಟ ಇಲ್ಲದಿದ್ದರೂ ಸುಮಾರು ದಿನಗಳು ಜೀವಿಸಬಹುದು. ಆದರೆ ನೀರು ಇಲ್ಲದೇ ಜೀವಿಸಲು ಸಾಧ್ಯವೇ ಇಲ್ಲ. ಎಷ್ಟೋ ಬಾರಿ ಆಹಾರ ಇಲ್ಲದಿದ್ದಾಗ ಹೊಟ್ಟೆ ತುಂಬಾ ನೀರನ್ನು ಕುಡಿದೇ ಹೊಟ್ಟೆ ತುಂಬಿಸುಕೊಂಡ ಎಷ್ಟೋ ಉದಾಹರಣೆಗಳಿವೆ. ಅಂತಹ ನೀರನ್ನು ಕುಡಿಯುವಾಗ ಆದ ಅನುಭವದ ಸಂಗತಿಯೇ ಇಂದಿನ ಕಥಾವಸ್ತು.
ಶಂಕರ ಅದೊಂದು ಪ್ರತಿಷ್ಥಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಭಾರತದಲ್ಲದೇ ದೇಶ ವಿದೇಶದ ನಾನಾ ಭಾಗಗಳಲ್ಲಿ ಅವನ ಕಂಪನಿಯ ಶಾಖೆ ಇತ್ತು. ಪ್ರಪ್ರಥಮ ಬಾರಿಗೆ ಅವನಿಗೆ ಕೆಲಸದ ಮೇಲೆ ಜಪಾನ್ ದೇಶಕ್ಕೆ ಹೋಗುವ ಸೌಭಾಗ್ಯ ಒದಗಿ ಬಂದಿತ್ತು. ಚೊಚ್ಚಲ ವಿದೇಶೀ ಪ್ರಯಾಣ. ಅದೂ ಅಲ್ಲದೇ ಸುಮಾರು ಹತ್ತರಿಂದ ಹನ್ನೆರಡು ಘಂಟೆಗಳ ಸುದೀರ್ಘವಾದ ವಿಮಾನಯಾನ. ಎಲ್ಲದ್ದಕ್ಕಿಂತಲೂ ವಿಶೇಷವಾಗಿ ಅಲ್ಲಿ ಸಸ್ಯಾಹಾರ ದೊರಕುವುದು ವಿರಳ ಎಂದು ಈಗಾಗಲೇ ಅಲ್ಲಿಗೆ ಹೋಗಿದ್ದ ಅವನ ಸಹೋದ್ಯೋಗಿಗಳು ತಿಳಿಸಿದ್ದರಿಂದ ಅವನ ಲಗ್ಗೇಜಿನಲ್ಲಿ ಬಹುಪಾಲು ಎಂ.ಟಿ.ಆರ್. ಸಿದ್ದ ಅಡುಗೆಯ ಪ್ಯಾಕೇಟ್ಗಳೇ ಹೆಚ್ಚಾಗಿದ್ದರು. ಮೊದಲ ಎರಡು ಮೂರು ದಿನಗಳಿಗೆ ಆಗುವಷ್ಟು ಚಪಾತಿ ಮತ್ತು ಮೂರ್ನಾಲ್ಕು ದಿನಗಳು ಇಟ್ಟರೂ ಹಾಳಗದಂತೆ ತಯಾರಿಸಿದ ಟೊಮೇಟೋ ಗೊಜ್ಜು. ಹೀಗೆ ಬಟ್ಟೆ ಬರೇ ಮತ್ತು ಕಛೇರಿಗೆ ಸಂಬಂಧ ಪಟ್ಟ ವಸ್ತುಗಳಿಗಿಂತ ಸಸ್ಯಹಾರೀ ಊಟದ ಸಾಮಾನುಗಳೇ ಹೆಚ್ಚಾಗಿತ್ತು.
ಎಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿತು. ಚೊಚ್ಚಲ ವಿದೇಶೀ ಪ್ರವಾಸ ಅದೂ ಮೂರ್ನಾಲ್ಕು ವಾರಗಳು ಬೇರೆ. ಮದುವೆ ಮಕ್ಕಳಾದ ಮೇಲೆ ಅಷ್ಟು ದಿನ ಕುಟುಂಬವನ್ನು ಎಂದೂ ಬಿಟ್ಟಿರದಿದ್ದ ಶಂಕರನಿಗೆ ಒಂದು ಕಡೆ ಸಂತೋಷ ಮತ್ತೊಂದು ಕಡೇ ಬೇಸರವೂ ಹೌದು. ಅದರೆ ಕರ್ತವ್ಯ ನಿಮಿತ್ತ ಹೋಗಲೇಬೇಕಾದ ಅನಿವಾರ್ಯ ಕಾರಣದಿಂದಾಗಿ ಅಗಲಿಕೆಯನ್ನು ಸಹಿಸಿಕೊಂಡಿದ್ದ. ಶಂಕರನನ್ನು ಬೀಳ್ಕೊಡಲು ಇಡೀ ಕುಟುಂಬದರೆಲ್ಲಾ ವಿಮಾನ ನಿಲ್ದಾಣಕ್ಕೆ ಬಂದಾಗಿತ್ತು. ಲಗ್ಗೇಜಿನ ಬಹುಪಾಲು ಆಹಾರ ವಸ್ತುಗಳೇ ಇದ್ದಕಾರಣ ಅಷ್ಟೊಂದು ತೆಗೆದುಕೊಂಡು ಹೋಗಲು ಬಿಡುತ್ತಾರೋ ಇಲ್ಲವೋ ಎಂಬ ಆತಂಕ ಎಲ್ಲರಿಗೂ ಇತ್ತು. ಚಿಕ್ ಇನ್ ಕೌಂಟರಿನಲ್ಲಿ ಸ್ಕಾನ್ ಆಗಿ ಪ್ರತೀ ಬ್ಯಾಗಿನ ತೂಕ ನಿಗಧಿ ಪಡಿಸಿದ್ದಕ್ಕಿಂತ ಕಡಿಮೆ ಇದ್ದ ಕಾರಣ ಯಾವುದೇ ತೊಂದರೆಯಾಗದ್ದನ್ನು ನೋಡಿ ಎಲ್ಲರಿಗೂ ಒಂದು ರೀತಿಯ ಸಮಾಧಾನ. ಚೆಕ್-ಇನ್-ಲಗ್ಗೇಜ್ ಹೋಗಿ ಬೋರ್ಡಿಂಗ್ ಪಾಸ್ ತೆಗೆದು ಕೊಂಡ ನಂತರ ಬಂದ ತಂದೆ ತಾಯಿ ಮತ್ತು ಮಾವ ಅತ್ತೆಯರಿಗೆ ನಮಸ್ಕರಿಸಿ, ಮನೆಯವರನ್ನು ಅಪ್ಪುಗೆಯಿಂದ ಆಲಿಂಗನ ಮಾಡಿ, ಮಕ್ಕಳನ್ನು ಪ್ರೀತಿಯಿಂದ ಮುದ್ದಾಡಿ ಭಾರವಾದ ಹೃದಯದಿಂದ ತಡ ರಾತ್ರಿ ವಿಮಾನವನ್ನು ಏರಿದ್ದ ಶಂಕರ.
ನಾಲ್ಕುಗಂಟೆಗಳ ಪ್ರಯಾಣದ ನಂತರ ವಿಮಾನ ಮಲೇಷಿಯದ ಕೌಲಾಲಾಂಪುರ್ ನಲ್ಲಿ ಇಳಿಯಿತು. ಅಲ್ಲಿಂದ ನಾಲ್ಕು ಗಂಟೆಗಳ ತರುವಾಯು ಟೋಕಿಯೋಗೆ ಹೋಗಲು ಮತ್ತೊಂದು ವಿಮಾನವನ್ನು ಏರಬೇಕಿತ್ತು. ಕೌಲಾಲಾಂಪುರ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಶಂಕರನಿಗೆ ಹೊಸದೊಂದು ಲೋಕಕ್ಕೇ ಹೋದ ಅನುಭವ. ಎಕೆಂದರೆ ಅದುವರೆಗೂ ಬೆಂಗಳೂರಿನ ಸಣ್ಣ ವಿಮಾನ ನಿಲ್ದಾಣ (ಹಿಂದಿನ ಹೆಚ್.ಎ.ಎಲ್.) ಅದು ಬಿಟ್ಟರೇ ಬಾಂಬೇ ಮತ್ತು ದೆಹಲಿಯ ಡೊಮೆಸ್ಟಿಕ್ ವಿಮಾನ ನಿಲ್ದಾಣವನ್ನು ನೋಡಿದ್ದ ಅವನಿಗೆ ಇಲ್ಲಿ ನೂರಾರು ಟರ್ಮಿನಲ್ಗಳು. ಕ್ಷಣ ಕ್ಷಣಕ್ಕೂ ಒಂದು ಕಡೆ ಹತ್ತಾರು ವಿಮಾನಗಳು ಆಗಸಕ್ಕೇರುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಅಷ್ಟೇ ಸಂಖ್ಯೆಯ ವಿಮಾನಗಳು ಇಳಿಯುತ್ತಿದ್ದದ್ದನ್ನು ನೋಡಿ ಆಶ್ವರ್ಯವಾಯಿತು. ಅವನು ಹೋಗಬೇಕಿದ್ದ ಟರ್ಮಿನಸ್ ಕಡೆ ಹೋಗಿ ಮತ್ತೊಂದು ವಿಮಾನವೇರಲು ಇನ್ನೂ ಬಹಳ ಸಮಯ ಇದ್ದರಿಂದ ಸ್ವಲ್ಪ ಅಲ್ಲೇ ವಿಶ್ರಮಿಸಿಕೊಂಡ. ಒಂದೆರಡು ಘಂಟೆಯಾದ ಬಳಿಕ ನಿಧಾನವಾಗಿ ಬೆಳಕು ಹರಿದಿತ್ತು. ಹೊಟ್ಟೆಯೂ ಚುರು ಗುಡುತ್ತಿತ್ತು. ಸೀದಾ ಹೋಗಿ ತನ್ನ ಪ್ರಾಥರ್ವಿಧಿಗಳನ್ನೆಲ್ಲಾ ಮುಗಿಸಿ, ಹಲ್ಲುಜ್ಜಿ ಮುಖ ತೊಳೆದು ಕೊಂಡು ಬೆಳಗಿನ ಉಪಹಾರಕ್ಕೆಂದೇ ಪ್ರತ್ಯೇಕವಾಗಿ ತಂದಿದ್ದ ಪೊಟ್ಟಣವನ್ನು ತೆರೆದು ಆರಾಮಾಗಿ ಚಪಾತಿ ಮತ್ತು ಗೊಜ್ಜನ್ನು ಸವಿಯುತ್ತಾ ತಿಂದು ಮುಗಿಸಿದ ಮೇಲೆ ಕೈತೊಳೆದು ಕೊಂಡು ಎಂದಿನಂತೆ ನೀರು ಕುಡಿಯಲು ನೋಡುತ್ತಾನೆ. ಅಲೆಲ್ಲೂ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲಾ. ಸಾಮಾನ್ಯವಾಗಿ ನಮ್ಮ ವಿಮಾನ ನಿಲ್ಡಾಣಗಳಲ್ಲಿ ಪ್ರಯಾಣಿಕರು ಕುಳಿತಿಕೊಳ್ಳುವ ಲಾಬಿಯ ಅಕ್ಕ ಪಕ್ಕದಲ್ಲಿ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸಿ ಅದರ ಪಕ್ಕದಲ್ಲಿ ನೀರಿನ ಲೋಟಗಳನ್ನು ಜೋಡಿಸಿಟ್ಟಿರುತ್ತಾರೆ. ಅಗತ್ಯವಿದ್ದವರು, ಲೋಟದಿಂದಲೋ ಇಲ್ಲವೇ ಬೊಗಸೇ ಕೈಗಳಿಂದಲೂ ನೀರನ್ನು ಹಿಡಿದು ಕುಡಿಯಬಹುದು. ಆದರೆ ಅಲ್ಲೆಲ್ಲೂ ಆ ರೀತಿಯ ವ್ಯವಸ್ಥೆ ಕಾಣದೇ ಕೇವಲ ನೀರಿನ ಕಾರಂಜಿಯಂತಹದ್ದು ಇತ್ತು. ಕಾರಂಜಿಯ ಸುತ್ತ ಮುತ್ತಲೂ ತಿರುಗಾಡಿದರೆ ಎಲ್ಲೂ ಲೋಟಗಳು ಕಾಣಲಿಲ್ಲ ಇನ್ನು ತಿರುಗಿಸಿ ನೀರು ಕುಡಿಯಲು ಬಾಗಿದಂತಹ ನಲ್ಲಿಯೂ ಕಾಣಲಿಲ್ಲ. ಕೇವಲ ಆಕಾಶಕ್ಕೆ ನೀರು ಚಿಮ್ಮುವ ಹಾಗೆ ಇದ್ದ ನಲ್ಲಿ. ಅದರಲ್ಲಿ ನೀರು ಎಲ್ಲಿಂದ ಬರುತ್ತದೆ ಎಂದು ಶಂಕರನಿಗೆ ಗೊತ್ತಾಗಲಿಲ್ಲ.
ಇದೇನಪ್ಪಾ ತಿಂಡಿ ತಿಂದ ಮೇಲೆ ನೀರನ್ನು ಕುಡಿಯದಿದ್ದರೆ ಹೇಗೆ. ಗೊಜ್ಜಿನ ಖಾರ ನಿಧಾನವಾಗಿ ಗಂಟಲಿಗೆ ತಾಗಿ ಗಂಟಲು ಕೂಡಾ ಒಣಗುತ್ತಿದೆ ಏನು ಮಾಡುವುದು ಎಂದು ಯೋಚಿಸುತ್ತಾ ಗೊತ್ತಿಲ್ಲದ ಜಾಗದಲ್ಲಿ ಸಮ್ಮನೆ ಅಪಹಾಸ್ಯಕ್ಕೆ ಒಳಾಗಾಗುವುದರ ಬದಲು ಸುಮ್ಮನೆ ಒಂದು ಕಡೆ ನಿಂತು ಬೇರೆಯವರು ಯಾರಾದರೂ ಹೇಗೆ ಕುಡಿಯುತ್ತಾರೆ ಎಂದು ನೋಡಿ ತಿಳಿಯೋಣ ಎಂದು ನಿರ್ಧರಿಸಿ ಅಲ್ಲಿಯೇ ಕಾರಂಜಿಯ ಹತ್ತಿರವೇ ನಿಂತು ನೋಡ ತೊಡಗಿದ. ಐದು ನಿಮಿಷ ಆಯ್ತು. ಹತ್ತು ನಿಮಿಷ ಆಯ್ತು. ಆ ಕಡೆ ಒಬ್ಬ ನರಪಿಳ್ಳೆಯೂ ಸುಳಿಯಲೇ ಇಲ್ಲ. ಶಂಕರನಿಗೋ ಬಾಯಾರಿಕೆ ತಡೆಯಲಾಗುತ್ತಿಲ್ಲ. ಸುಮ್ಮನೇ ಕಾರಂಜಿಯ ಕಡೆಯೇ ನೋಡುತ್ತಲೇ ಇದ್ದಾಗ, ಅದಾರೋ ಒಬ್ಬ ನೀಟಾಗಿ ಸೂಟು ಬೂಟು ಹಾಕಿಕೊಂಡು ಆ ಕಾರಂಜಿಯ ಕಡೇಗೇ ಬರುತ್ತಿದ್ದಾನೆ. ಆಹಾ ದೇವರು ಬಂದ ಹಾಗೆ ಬರುತ್ತಿದ್ದಾನೆ. ನೋಡೋಣ ಅದು ಹೇಗೆ ನೀರನ್ನು ಕುಡಿಯುತ್ತಾನೆ ಎಂದು ಅವನನ್ನೇ ದಿಟ್ಟಿಸಿ ನೋಡುತ್ತಿದ್ದ ಶಂಕರ. ಹಾಗೆ ಬಂದಾತ, ತನ್ನ ಕುತ್ತಿಗೆ ಕಟ್ಟಿದ್ದ ಟೈಯನ್ನು ಹಾಗೆಯೇ ಹೆಗಲು ಮೇಲೆ ಹಾಕಿಕೊಂಡು ಆಕಾಶತ್ತ ಬಾಯಿ ಅಗಲಿಸಿದ ಕೂಡಲೇ ಆ ಕಾರಂಜಿಯಿಂದ ನೀರು ಚಿಮ್ಮತೊಡಗಿತು. ಅದನ್ನು ಆತ ಸುಲಭವಾಗಿ ಕುಡಿದು ಬಿಟ್ಟ. ಅರೇ ಇಷ್ಟೆನಾ!! ಇಷ್ಟಕ್ಕೇ ನಾನು ಅಷ್ಟೊಂದು ಹೊತ್ತಿನಿಂದ ಕಷ್ಟ ಪಡಬೇಕಾಯ್ತು ಎಂದು ಪರಿತಪಿಸಿ, ಆತ ಹೋದ ನಂತರ ಶಂಕರನೂ ಕಾರಂಜಿಯ ಮುಂದೆ ಬಾಯಿ ಅಗಲಿಸಿ ನಿಂತರೆ, ನೀರೇ ಬರುತ್ತಿಲ್ಲ. ಅರೇ ಇದೇನಪ್ಪಾ ಈಗ ತಾನೇ ಆತ ನೀರು ಕುಡಿದದ್ದನ್ನು ನೋಡಿದ್ದೇನೆ ಎಂದು ಮತ್ತೊಮ್ಮೆ ನೀರಿಗಾಗಿ ಗುಂಡಿಯನ್ನು ಎಲ್ಲಾ ಕಡೇ ತಡಕಾಡುತ್ತಿದ್ದಾಗ ಆ ಕಾರಂಜಿಯ ಬೋಗುಣಿಯ ಕೆಳಗಡೆ ಒಂದು ಸಣ್ಣ ಗುಂಡಿ ಕಾಣಿಸಿ, ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಾಂತಾಗಿ,ಅದನ್ನು ಅದುಮಿದಾಗ ನೀರು ಚಿಮ್ಮಿದ್ದು ನೋಡಿದಾಗ ಅವನಿಗಾದ ಆನಂದಕ್ಕೆ ಪಾರವೇ ಇಲ್ಲ.
ತನ್ನ ವೈಜ್ಞಾನಿಕ ಸಮಸ್ಯೆಗೆ ಪರಿಹಾರ ಕಂಡುಕೊಂಡ ನಂತರ ಸಾರ್ವಜನಿಕ ಸ್ನಾನದ ಗೃಹ(ಹಮಾಮ್)ನಿಮಧದ ಬೆತ್ತಲೆಯಾಗಿಯೇ ಯುರೇಕಾ.. ಯುರೇಕಾ.. ಎಂದು ಕೂಗುತ್ತಾ ಓಡಿಹೋದ ಆರ್ಕಿಮಿಡೀಸ್ ಪರಿಸ್ಥಿತಿಯೇ ಅನದ್ದಾಗಿತ್ತು. ಅದೇನೋ ಪ್ರಪಂಚವನ್ನೇ ಗೆದ್ದು ಬಿಟ್ಟನೇನೋ ಎನ್ನುವಷ್ಟರ ಮಟ್ಟಿಗಿನ ಸಂತೋಷ.ನೀರೇನೋ ಚಿಮ್ಮುತ್ತಿತ್ತು. ಆದರೆ ಅದಕ್ಕೆ ಸೀದಾ ಬಾಯಯನ್ನು ಒಡ್ಡುವುದು ತುಸು ಕಷ್ಟವೇ ಆಯಿತು ನಮ್ಮಲ್ಲೇನೋ ಒಂದು ಕೈ ಬೊಗಸೇ ಹಿಡಿದು ಕುಡಿಯ ಬಹುದು. ಆದರೆ ಇಲ್ಲಿ ಬಲಗೈ ನೀರಿನ ಗುಂಡಿಯ ಮೇಲಿದ್ದರೆ, ಏಡಗೈನಲ್ಲಿ ನೀರನ್ನು ಹಿಡಿದು ಕುಡಿಯಲು ಮುಜುಗರ ಹಾಗೂ ಹೀಗೂ ಕಷ್ಟ ಪಟ್ಟು ಅಷ್ಟೋ ಇಷ್ಟು ನೀರನ್ನು ಕುಡಿದನಾದರೂ ಸರಿಯಾಗಿ ಬಾಯಿಗೆ ಹತ್ತಲಿಲ್ಲ. ವಿಮಾನದಲ್ಲಿ ಕುಳಿತುಕೊಂಡ ನಂತರ ಗಗನಸಖಿಯ ಹತ್ತಿರ ನೀರನ್ನು ಕೇಳಿ ಎಷ್ಟೋ ದಿನಗಳಾದ ನಂತರ ನೀರನ್ನು ಕಂಡಂತೆ ಗಟ ಗಟನೆ ಎರಡ್ಮೂರು ಲೋಟ ನೀರನ್ನು ಕುಡಿದಿದ್ದನ್ನು ನೋಡಿ ಇತರರು ಆಶ್ವರ್ಯ ಪಟ್ಟರೂ ನೋಟ ಪರರಿಷ್ಟ. ಊಟ ತನ್ನಿಷ್ಟ ಎನ್ನುವ ಭಾವನೆ ಶಂಕರನದ್ದಾಗಿತ್ತು.
ಮುಂದೆ ಟೋಕಿಯೋ ನಗರದಲ್ಲಿಯೂ ಇದಕ್ಕಿಂತ ಸ್ವಲ್ಪ ಭಿನ್ನ ರೀತಿಯದ್ದು.ಅಲ್ಲಿ ನೀರಿಗಾಗಿ ಬಟನ್ ಒತ್ತುವ ಬದಲಾಗಿ ಕಾಲಿನಿಂದ ಪೆಡಲ್ ಒತ್ತಿದರೆ ನೀರು ಚಿಮ್ಮುವ ವ್ಯವಸ್ಥೆ ಇತ್ತು. ಹಿಂದಿನ ಅನುಭವ ಪಾಠ ಕಲಿಸಿದ್ದರಿಂದ ಶಂಕರ ಸುಲಲಿತವಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದ. ಬೆಂಗಳೂರಿಗೆ ಹಿಂದುರಿಗಿದ ನಂತರ ಇದೇ ಅನುಭವವನ್ನು ತನ್ನ ಎಲ್ಲಾ ಬಂಧು ಮಿತ್ರರೊಂದಿಗೆ ರಸವತ್ತಾಗಿ ವಿವರಿಸಿದ್ದ.
ಇದಾದ ಸ್ವಲ್ಪ ದಿನಗಳ ನಂತರ ಅವನ ಬಾಸ್ ಮನೆಯವರು ಕರೆ ಮಾಡಿ, Shankar Thank you very much ಎಂದಾಗ, ಶಂಕರ ಕಕ್ಕಾ ಬಿಕ್ಕಿ. ಇದೇನು ಮೇಡಂ ನಾನು ನಿಮಗೆ ಯಾವ ಸಹಾಯ ಮಾಡದಿದ್ದರೂ ಥ್ಯಾಂಕ್ಸ್ ಹೇಳುತ್ತಿದ್ದೀರಿ? ಅಂತಹದ್ದು ಏನಾಯಿತು ಎಂದು ಆಶ್ಚರ್ಯದಿಂದ ಕೇಳಿದ. ಆತ್ತ ಕಡೆಯಿಂದ ಜೋರಾಗಿ ನಕ್ಕ ಆತನ ಬಾಸ್ ಮನೆಯವರು, ನಿಮ್ಮ ನೀರಡಿಕೆಯ ಅನುಭವವನ್ನು ನಮ್ಮ ಮನೆಯವರು ಕೆಲ ದಿನಗಳ ಹಿಂದೆ ಸವಿವರವಾಗಿ ವಿವರಿಸಿದ್ದರು. ಮೊನ್ನೆ ನಾನು ಒಂದು ದೊಡ್ಡ ಐಶಾರಾಮಿ ಕಂಪನಿಗಿ ಹೋಗಿದ್ದಾಗ ಇದೇ ಸಮಸ್ಯೆ ನನಗೆ ಬಂದೊದಗಿತ್ತು ನಿಮ್ಮ ಅನುಭವ ಕೇಳಿದ್ದರಿಂದ ಯಾವುದೇ ಮುಜುಗರವಾಗದೇ ನೀರು ಕುಡಿದೆ. ಹಾಗಾಗಿ ನಿಮಗೆ ಈ ಥ್ಯಾಂಕ್ಸ್ ಎಂದಾಗ, ಅರೇ ನಾವು ಹಂಚಿಕೊಳ್ಳುವ ಅನುಭವದ ಪಾಠಗಳು ಮತ್ತೊಬ್ಬರಿಗೆ ಹೇಗೆ ಸಹಾಯವಾಗ ಬಲ್ಲದು ಎಂದು ಯೋಚಿಸುತ್ತಾ , ಅರೇ ಬಿಡಿ ಮೇಡಂ ಅದರಲ್ಲೇನಿದೆ ಎಂದು ದೇಶಾವರಿ ನಕ್ಕಿದ್ದ ಶಂಕರ. ಕಡೆಯದಾಗಿ ಮಾತು ಮುಗಿಸಿವ ಮುನ್ನಾ ಏನೇ ಹೇಳಿ ಶಂಕರ್, ಲೋಟದಿಂದಲೋ ಇಲ್ಲವೇ ಬೊಗಸೆ ಹಿಡಿಡು ಗಟ ಗಟನೆ ನೀರು ಕುಡಿಯವ ಮಜ ಈ ಕಾರಂಜಿಯಲ್ಲಿ ಇರೋದಿಲ್ಲಾ ಅಲ್ವಾ ಎಂದಾಗ, ಹೌದು ಮೇಡಂ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಎಂದಿದ್ದ ಶಂಕರ.
ಇಂದು ಬಹುತೇಕ ಎಲ್ಲಾ ಮಲ್ಟೀಪ್ಲೆಕ್ಸ್ ಗಳಲ್ಲಿಯೂ ಅದೇ ರೀತಿಯ ನೀರಿನ ವ್ಯವಸ್ಥೆಯೇ ಅಳವಡಿಸಿರುತ್ತಾರೆ. ಪ್ರತಿಬಾರಿ ಅಲ್ಲಿಗೆ ಹೋದಾಗಲೆಲ್ಲಾ ಶಂಕರನಿಗೆ ತನ್ನ ಮೊತ್ತ ಮೊದಲ ಅನುಭವ ನೆನಪಾಗಿ ಅವನಿಗೇ ಅರಿವಿಲ್ಲದಂತೆ ನಗುತ್ತಾನೆ. ಆತ ಹಾಗೆ ನಗುವುದನ್ನು ನೋಡಿದವರು ಆಶ್ಚರ್ಯ ಪಟ್ಟುಕೊಂಡರೂ ಶಂಕರನಿಗೆ ಚಿಂತೆಯಿಲ್ಲ. ಏಕೆಂದರೆ ಬದುಕು ಕಲಿಸುವ ಪಾಠಗಳ ಮುಂದೆ ಬೇರೆಲ್ಲಾ ನಗಣ್ಯ
ಏನಂತೀರೀ?
Super
LikeLiked by 1 person
ನಿಜ. ಇದು ನನ್ನ ಅನುಭವಕ್ಕೂ ಬಂದಿದೆ.
ಬರೀ ನೀರು ಕುಡಿಯಲು ಅಲ್ಲ, ಕೈ ತೊಳೆಯುವಾಗ, ಸ್ನಾನಕ್ಕೆ ಹೋದಾಗ….., ಇಂಥ ಕಸಿವಿಸಿ ಅನುಭವಕ್ಕೆ ಬರುತ್ತದೆ.
LikeLiked by 1 person
Superb
LikeLiked by 1 person