ದಾನ ಮತ್ತು ಧರ್ಮ ಎಲ್ಲಾ, ಇಲ್ಲೇ ಡ್ರಾ, ಇಲ್ಲೇ ಬಹುಮಾನ

ಸುಮಾರು ಹನ್ನೆರಡು ಹದಿಮೂರು ವರ್ಷಗಳ ಹಿಂದಿನ ಮಾತು. ಅವತ್ತು ಶನಿವಾರವಾದ್ದರಿಂದ ಕೆಲಸಕ್ಕೆ ರಜೆ ಇದ್ದ ಕಾರಣ ಯಾವುದೋ ಕೆಲಸಕ್ಕೆಂದು ಹೊರಗೆ ಹೋಗಿ ಮನೆಗೆ ಹಿಂದಿರುಗುವಾಗ ಮಟ ಮಟ ಮಧ್ಯಾಹ್ನವಾಗಿ ಹೊಟ್ಟೆ ಕೂಡಾ ತುಂಬಾನೇ ಹಸಿದಿತ್ತು. ಮನೆ ಒಳಗೆ ಕಾಲಿಟ್ಟೊಡನೆಯೇ ನಮ್ಮ ತಾಯಿಯವರು ಯಾರೊಂದಿಗೂ ಮಾತನಾಡುತ್ತಿರುವ ಶಬ್ಧ ಕೇಳಿಸಿ, ಯಾರು ಬಂದಿರಬಹುದು ಎಂದು ಯೋಚಿಸುತ್ತಾ ಸೀದಾ ಬಚ್ಚಲು ಮನೆಗೆ ಹೋಗಿ ಕೈ ಕಾಲು ತೊಳೆದುಕೊಂಡು ಬಂದು ನೋಡಿದರೆ, ಯಾರೋ ಅಪರಿಚಿತ ಹೆಂಗಸು ನೋಡಲು ಬಹಳ ಕೃಶಕಾಯಳು, ಉಡಲು ಒಂದು ಒಳ್ಳೆಯ ಸೀರೆಯೂ ಇಲ್ಲದ ಹೆಂಗಸಿಗೆ ನಮ್ಮಮ್ಮ ಊಟವನ್ನು ಬಿಡಿಸುತ್ತಾ ಆಕೆಯ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದವರು ನನ್ನನ್ನು ಕಂಡ ಕೂಡಲೇ ಏನೋ ಆಣ್ಣಾ ಹೊಟ್ಟೆ ಹಸಿಯುತ್ತಿದೆಯಾ, ಒಂದು ಐದು ನಿಮಿಷ ತಡೀ. ಇವರ ಊಟ ಮುಗಿದ ನಂತರ ಎಲ್ಲರಿಗೂ ಒಟ್ಟಿಗೆ ಬಡಿಸುತ್ತೇನೆ. ನಾವೂ ಕೂಡಾ ನೀನು ಬರೋದನ್ನೇ ಕಾಯುತ್ತಿದ್ದೆವು. ಬೆಳೆಗ್ಗೆಯೂ ಏನೋ ಅವಸರವಸರದಲ್ಲಿ ತಿಂಡಿನೂ ಸರಿಯಾಗಿ ತಿನ್ನದೆ ಹೋಗಿಬಿಟ್ಟೆ ಎಂದು ಮಾತೃವಾತ್ಸಲ್ಯ ಎತ್ತಿ ತೋರಿಸಿದರು. ಹೂಂ ಹಾಗೇ ಆಗಲಿ ಅವರ ಊಟ ಮುಗಿದ ನಂತರ ತಟ್ಟೆ ಹಾಕಿ ಕರೆಯಿರಿ ಎಂದು ಅಲ್ಲಿಯೇ ಇದ್ದ ನನ್ನ ಪುಟ್ಟ ವಯಸ್ಸಿನ ಮಗನನ್ನು ಎತ್ತಿಕೊಂಡು ಆಟವಾಡಿಸುತ್ತಾ ನನ್ನ ಕೊಠಡಿಗೆ ಹೋದೆ. ಸ್ವಲ್ಪ ಹೊತ್ತಿನ ನಂತರ ತಟ್ಟೆ ಹಾಕಿ ಎಲ್ಲರನ್ನೂ ಊಟಕ್ಕೆ ಕರೆದರು. ಹಾಗೆಯೇ ಊಟ ಮಾಡುತ್ತಿರುವಾಗ ನಿಧಾನವಾಗಿ ಆಕೆ ಯಾರಮ್ಮಾ? ಈ ಮೊದಲು ಅವರನ್ನು ನೋಡಿದ ನೆನಪಿಲ್ಲವಲ್ಲಾ ಎಂದೆ. ಓ ಅವರಾ, ಯಾರೂ ಬಡ ಮುತ್ತೈದೆ. ಯಜಮಾನರಿಗೆ ಆರೋಗ್ಯ ಸರಿ ಇಲ್ವಂತೇ, ಮಕ್ಕಳಿಬ್ಬರೂ ತಿರುಪತಿಯಲ್ಲಿ ವೇದಾಧ್ಯಯನ ಮಾಡುತ್ತಿದ್ದಾರಂತೇ. ಹೀಗೆ ನಾಲ್ಕಾರು ಮನೆಗಳಲ್ಲಿ ಕೊಡುವ ಅಲ್ಪ ಸ್ವಲ್ಪ ದಾನ ಧರ್ಮದಿಂದ ಜೀವನ ನಡೆಸುತ್ತಿದ್ದಾರಂತೆ. ಹೇಗೂ ಶ್ರಾವಣಮಾಸ ಮಟ ಮಟ ಮಧ್ಯಾಹ್ನದ ಸಮಯದಲ್ಲಿ ಮುತ್ತೈದೆ ಬಂದಿದ್ದಾರೆ, ನೋಡಿದರೆ ಊಟ ಆಗಿರಲಿಲ್ಲ ಎಂದು ಎದ್ದು ಕಾಣುತ್ತಿತ್ತು ಅದಕ್ಕೇ ಊಟಕ್ಕೇಳಿ ಎಂದೆ. ಮೊದ ಮೊದಲು ಸಂಕೋಚದಿಂದ ಬೇಡ ಬೇಡ ಎಂದಾಕೆ, ನನ್ನ ಒತ್ತಾಯಕ್ಕೆ ಮಣಿದು ಊಟಕ್ಕೆ ಕುಳಿತುಕೊಂಡರು. ಒಳ್ಳೆ ಕೋಳಿ ಕೆದಕಿದಹಾಗೆ ನಾಲ್ಕು ತುತ್ತು ತಿಂದರಷ್ಟೆ. ನಾನೇ ಒಂದೈವತ್ತು ರೂಪಾಯಿ, ಒಂದು ಪಾವು ಅಕ್ಕಿ ಮತ್ತು ತೆಂಗಿನ ಕಾಯಿ ಕೊಟ್ಟು ಕಳುಹಿಸಿದೆ ಎಂದರು ನಮ್ಮಮ್ಮ.

ಊಟ ಹಾಕಿ ದುಡ್ಡು ಕೊಟ್ಟು ಕಳುಹಿಸಿದ್ದಕ್ಕೆ ನನಗೇನು ಬೇಸರವಿಲ್ಲಾ ಆದರೆ ಈ ರೀತಿ ಅಪರಿಚಿತರನ್ನು ನಾವು ಯಾರೂ ಇಲ್ಲದಿದ್ದ ಸಮಯದಲ್ಲಿ ಮನೆಯೊಳಗೆ ಕುಳ್ಳರಿಸಿ ಊಟ ಹಾಕುವ ಮೊದಲು ಸ್ವಲ್ಪ ಜಾಗೃತೆ ವಹಿಸಿ. ಕಾಲ ತುಂಬಾನೇ ಕೆಟ್ಟುಹೋಗಿದೆ ಯಾವ ಹುತ್ತದ್ದಲ್ಲಿ ಯಾವ ಹಾವಿರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ ಎಂದೆ. ಅದಕ್ಕೆ ಪ್ರತ್ಯುತ್ತರವಾಗಿ ಇಲ್ಲಾ ಕಣೋ, ರಾಮಕೃಷ್ಣಯ್ಯನವರ ಮನೆಯವರು ಆಕೆಯನ್ನು ಇಲ್ಲಿಗೆ ಕಳುಹಿಸಿದ್ದಾರೆ. ಆವರ ಮನೆಗೆ ತುಂಬಾನೇ ದಿನಗಳಿಂದ ಬರುತ್ತಿದ್ದಾರಂತೆ ಅದಕ್ಕೇ ನಾನು ಒಳಗೆ ಕರೆದು ಕೂರಿಸಿದೆ. ಇಲ್ಲಾಂದ್ರೆ ಒಳಗೇ ಸೇರಿಸ್ತೀನಾ? ಎನೋ ನಮ್ಮ ಕೈಯಲ್ಲಿ ಆಗೋವರೆಗೂ ನಾಲ್ಕಾರು ಜನರಿಗೆ ದಾನ ಧರ್ಮ ಮಾಡಿಬಿಡಬೇಕು ಅದು ನಮ್ಮನ್ನಲ್ಲದಿದ್ದರೂ ನಮ್ಮ ಮಕ್ಕಳನ್ನು ಒಂದಲ್ಲಾ ಒಂದು ರೀತಿ ಕಾಪಾಡುತ್ತದೆ. ನೋಡು ಈ ಅನ್ನದ ಮುಂದೆ ಕುಳಿತು ಹೇಳ್ತಿದ್ದೀನಿ. ನಾವು ಇರಲಿ ಬಿಡಲಿ ನೀನೂ ಕೂಡಾ ಇದೇ ರೀತಿ ನಿನ್ನ ಕೈಯಲ್ಲಿ ಆದ ಮಟ್ಟಿಗೆ ಸಹಾಯ ಮಾಡು ಅದು ನಮ್ಮ ವಂಶವನ್ನು ಖಂಡಿತಾ ಕಾಪಾಡಿಯೇ ತೀರುತ್ತದೆ. ನಿಮ್ಮ ತಾತ ಮುತ್ತಾತಂದಿರು ಮಾಡಿದ ಪುಣ್ಯ ಫಲವೇ ಇಂದು ನಮ್ಮನ್ನು ಈ ರೀತಿಯಾಗಿ ಇಟ್ಟಿರುವುದು ಎಂದಾಗ. ಏ ಇದೇನು ಊಟದ ಮುಂದೆ ಕೂತು ಸಾಯುವ ಮಾತು. ಬಿಡ್ತು ಅನ್ನಿ, ನೀವಿಬ್ಬರೂ ಇನ್ನೂ ಇಪ್ಪತ್ತು-ಇಪ್ಪತೈದು ವರ್ಷಗಳವರೆಗೂ ಆರಾಮಾಗಿ ನಿಮ್ಮ ಮೊಮ್ಮಕ್ಕಳು ಮರಿ ಮಕ್ಕಳನ್ನು ಎತ್ತಿ ಆಡಿಸ್ತೀರಿ ಎಂದು ಸಮಧಾನ ಪಡಿಸಿ ಊಟ ಮುಗಿಸಿದೆವು. ಅದಾದ ನಂತರ ಆಕೆ ಪ್ರತೀ ಶನಿವಾರ ತಪ್ಪದೇ ನಮ್ಮ ಮನೆಗೆ ಆಕೆ ಬಂದು ಕೊಟ್ಟದ್ದನ್ನು ತೆಗೆದುಕೊಳ್ಳುತ್ತಾ ದುರಾಸೆ ಪಡದೆ, ಬಾಯಿ ತುಂಬಾ ನಾಲ್ಕಾರು ಒಳ್ಳೆಯ ಮಾತುಗಳನ್ನಾಡಿ ಮಕ್ಕಳಿಗೆ ಆಶೀರ್ವದಿಸಿ ಹೋಗುತ್ತಿದ್ದರು. ಆಕೆಯ ಸಜ್ಜನಿಕೆಯ ಪ್ರಭಾವಕ್ಕೆ ಒಳಗಾಗಿ, ಅಮ್ಮಾ ಕೂಡಾ ಅವರನ್ನು ನಮ್ಮ ತಂಗಿಯರ ಮನೆಯ ಒಳಗೊಂಡಂತೆ ಇನ್ನೂ ಮೂರ್ನಾಲ್ಕು ಮನೆಯವರಿಗೆ ಪರಿಚಯಿಸಿದ್ದರು.

rail

ಈ ಘಟನೆಯಾದ ಸ್ವಲ್ಪ ದಿನಗಳಲ್ಲೇ ನಾನು, ನಮ್ಮ ಮಡದಿ ಮತ್ತು ನಮ್ಮ ಸಣ್ಣ ವಯಸ್ಸಿನ ಮಕ್ಕಳೊಂದಿಗೆ, ಅಮೇರಿಕಾ ಪ್ರವಾಸಕ್ಕೆ ಹೋಗುವ ಸಲುವಾಗಿ ವೀಸಾ ಪಡೆಯಲು ಚೆನ್ನೈಗೆ ಹೊರಟೆವು. ಈಗಿನಂತೆ ಆಗೆಲ್ಲಾ ಹೊಟೇಲ್ಗಳು ಇಂಟರ್ನೆಟ್ ಬುಕಿಂಗ್ ಇಲ್ಲದ ಕಾರಣ, ಅಲ್ಲೇ ಎಂಬೆಸಿ ಅಕ್ಕ ಪಕ್ಕದ ಹೋಟೇಲ್ನಲ್ಲೇ ಬಾಡಿಗೆ ರೂಮ್ ಹುಡುಕೋಣ ಎಂದು ನಿರ್ಧರಿಸಿ ಮಧ್ಯಾಹ್ನದ ಬೃಂದಾವನ್ ರೈಲು ಹತ್ತಿದೆವು. ಇಡೀ ಬೋಗಿಯಲ್ಲಿ ಜನ ತುಂಬಿ ತುಳುಕುತ್ತಿದ್ದವರು, ವಾಣಿಯಂಬಾಡಿ ತಲುಪುವ ಹೊತ್ತಿಗೆ ಸಾಕಷ್ಟು ಜನ ಇಳಿದುಬಿಟ್ಟಿದ್ದರಿಂದ ಭೋಗಿಯೆಲ್ಲಾ ಖಾಲಿ ಖಾಲಿ ಎನಿಸತೊಡಗಿತ್ತು. ಅಷ್ಟರಲ್ಲಿ ನನ್ನ ಮಕ್ಕಳಿಬ್ಬರಿಗೂ ನಿದ್ದೆ ಬರಲು ನಮ್ಮ ಸೀಟಿನುದ್ದಕ್ಕೂ ಮಕ್ಕಳಿಬ್ಬರನ್ನು ಮಲಗಿಸಿ ನಾನು ಪಕ್ಕದಲ್ಲಿದ್ದ ಮತ್ತೊಂದು ಖಾಲೀ ಸೀಟಿನಲ್ಲಿ ಕುಳಿತುಕೊಂಡೆ. ನನ್ನ ಪಕ್ಕದಲ್ಲಿ ವಯಸ್ಕರೊಬ್ಬರು ಕುಳಿತಿದ್ದರು. ರೈಲು ಹೊರಟು ಒಂದು ಐದು ಹತ್ತು ನಿಮಿಷವಾಗಿರ ಬಹುದು. ನಿಧಾನವಾಗಿ ಅವರೇ ಮಾತಿಗಿಳಿದು ನೀವು ಕನ್ನಡಿಗರೇ ? ಎಂದು ಕೇಳಿದರು. ಅದಕ್ಕೆ ನಾನು ಹೌದು ಎಂದೆ. ಓಹೋ ಬಹಳ ಸಂತೋಷ ಇಡೀ ಬೋಗಿಯಲ್ಲಿ ಕನ್ನಡಿಗರೇ ಕಾಣದೆ ಮನಸ್ಸಿಗೆ ಬೇಜಾರಾಗಿತ್ತು ಎಂದರು ಆ ಹಿರಿಯರು. ಹಾಗೆ ಮುಂದುವರಿದು ನಮ್ಮ ಮನೆಯ ಬಗ್ಗೆ ವಿಚಾರಿಸಿದರು. ನಾನೂ ಕೂಡ ಬೆಂಗಳೂರಿನಲ್ಲಿ ನಿಮ್ಮ ಮನೆ ಎಲ್ಲಿ ಎಂದು ಕೇಳಿದಾಗ, ಅರವಿಂದ ನಗರ ಎಂದು ಅವರು ಹೇಳಿದರು. ಓ ಆರವಿಂದ ನಗರದ ಪೋಸ್ಟ್ ಆಫೀಸಿನ ಹತ್ತಿರವೇ ಎಂದು ವಿಚಾರಿಸಿದಾಗ, ಹೌದು ಆ ಪೋಸ್ಟ್ ಆಫೀಸೇ ನಮ್ಮ ಮನೆ ಕೆಳಗಡೆ ಪೋಸ್ಟ್ ಆಫೀಸಿಗೆ ಬಾಡಿಗೆ ಕೊಟ್ಟಿದ್ದೇವೆ ಮೇಲೆ ನಾವು ವಾಸಿಸುತ್ತಿದ್ದೇವೆ ಎಂದು ತಿಳಿಸಿ, ನಿಮಗೆ ಆ ಕಡೆ ಪರಿಚಯವಿದೆಯೇ ಎಂದು ಮರು ಪ್ರಶ್ನಿಸಿದರು. ಒಹೋ, ನಿಮ್ಮ ಮನೆಯ ಪಕ್ಕದ ಗಣೇಶ ನಮ್ಮ ಸ್ನೇಹಿತ ಎಂದೆ. ಹೀಗೆ ಅವರಿಗೆ ಕೊಂಚ ಹತ್ತಿರವಾದೆ. ಹಾಗೆಯೇ ಮಾತು ಮುಂದುವರಿಸಿ ನೀವು ಮೂಲತಃ ಯಾವ ಊರಿನವರು ಎಂದು ವಿಚಾರಿಸಿದೆ. ಅವರು ನಾವು ಜೋಡಿ ಗುಬ್ಬಿಯವರು ಎಂದರು. ಹಾಗಾದರೆ, ನಿಮಗೆ ಪ್ರೇಮ ಅಪ್ಪಣ್ಣ ಗೊತ್ತೇ? ಪ್ರೇಮ ನಮ್ಮ ಅಕ್ಕ ಎಂದೆ. ಅದಕ್ಕವರು ಅಪ್ಪಣ್ಣ ನಮ್ಮ ಸಮೀಪದ ಬಂಧು ಎಂದರು. ಅಲ್ಲಿಗೆ ನಾವು ದೂರದ ಸಂಬಂಧಿಗಳಾದೆವು. ಹಾಗೇ ಮುಂದುವರಿಸಿ ನಿಮಗೆ ಮೂಲತಃ ಜೋಡಿ ಗುಬ್ಬಿಯವರೇ ಆದರೂ ಈಗ ಭದ್ರಾವತಿಯ ನಾರಾಯಣ ಅವರು ನಿಮಗೆ ಏನಾಗಬೇಕು ಎಂದೆ? ಅದಕ್ಕವರು ಅವರೂ ಸಹ ನಮಗೆ ಹತ್ತಿರದ ಸಂಬಂಧಿಗಳಾದರೂ ಅವರಿಗಿಂತ ಅವರ ಅಳಿಯ ಡಾ.ರಾಮಕೃಷ್ಣ ನಮಗೆ ಬಹಳ ಆಪ್ತರು ಎಂದರು, ಆಗ ನಿಧಾನವಾಗಿ ನಸುನಗುತ್ತಾ ಆ ರಾಮಕೃಷ್ಣನವರೇ ನಮ್ಮ ಚಿಕ್ಕಪ್ಪನವರು. ನಮ್ಮ ತಂದೆಯ ಸ್ವಂತ ತಮ್ಮ ಎಂದೆ, ಹೀಗೆ ನಾನಾ ಕಡೆಯಿಂದ ಸುತ್ತೀ ಬಳಸೀ ಬಂದರೂ ನಾನು ಅವರೊಂದಿಗೆ ಸಂಬಂಧ ಬೆಸೆಯುತ್ತಿದ್ದದ್ದು ನೋಡಿ ಅವರಿಗೆ ತುಂಬಾ ಸಂತೋಷವಾಗಿ, ಅರೇ ನೋಡಿ ಒಬ್ಬರಿಗೊಬ್ಬರು ಪರಿಚಯವೇ ಇಲ್ಲದವರು ಈಗ ನೋಡಿ ಎಷ್ಟು ಹತ್ತಿರದ ಸಂಬಂಧಿಗಳೇ ಆಗಿ ಹೋಗಿಬಿಟ್ಟೆವು ಎಂದರು. ಸರೀ ಈಗ ಚೆನ್ನೈಗೆ ಬರುತ್ತಿರುವ ಕಾರಣ ಏನು ಎಂದು ವಿಚಾರಿಸಿ, ನಾವು ವೀಸಾಕ್ಕೆಂದು ಹೋಗುತ್ತಿರುವ ವಿಷಯ ತಿಳಿದು ಎಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದೀರಿ ಎಂದು ಕೇಳಿದರು. ಅದಕ್ಕೆ ನಾನು, ಇನ್ನು ಎಲ್ಲೂ ವ್ಯವಸ್ಥೆ ಆಗಿಲ್ಲ. ಅಲ್ಲಿಗೆ ಹೋಗಿ ಹೋಟೆಲ್ ಬುಕ್ ಮಾಡಬೇಕು ಎಂದೇ. ಆ ಕೂಡಲೇ, ಛೇ.. ಛೇ.. ಛೇ.. ಎಲ್ಲಾದರೂ ಉಂಟಾ, ನೀವು ನಮಗೆ ಇಷ್ಟು ಹತ್ತಿರದ ಸಂಬಂಧಿಗಳಾಗಿ ನಮ್ಮ ಮನೆ ಇದ್ದರೂ ಬೇರೆಲ್ಲೋ ಹೋಟೆಲ್ನಲ್ಲಿ ಉಳಿಯುವುದೇ, ಇಲ್ಲಾ ನೀವೆಲ್ಲಾ ನಮ್ಮ ಮನೆಯಲ್ಲೇ ಉಳಿಯಬೇಕು ಎಂದರು. ಅರೇ ಇದೇನಪ್ಪಾ? ಹಿಂದೆಂದೂ ಪರಿಚಯವಿಲ್ಲದಿದ್ದವರು ಈಗ ಎಲ್ಲೋ ಬಾದರಾಯಣ ಸಂಬಂಧ ಬೆಸೆದು ಕೊಂಡು ಅವರ ಮನೆಗೆ ಹೋಗುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ಯಾಕೇ ನಿಮ್ಮ ಮನೆಯವರಿಗೆ ಹೇಳಬೇಕೇ ಎಂದು ಅವರೇ ನಮ್ಮ ಮಡದಿಯ ಕಡೇ ನೋಡಿ, ಈ ಮುದ್ದಾದ ಮಕ್ಕಳನ್ನು ಕರೆದುಕೊಂಡು ನೀವೆಲ್ಲರೂ ನಮ್ಮ ಮನೆಗೇ ಬರಬೇಕು ಎಂದು ನಿವೇದಿಸಿದರು. ಸರಿ ದೊಡ್ಡವರು ಆಷ್ಟೊಂದು ಬಲವಂತ ಮಾಡುತ್ತಿದ್ದಾರಲ್ಲಾ ಎಂದು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡೆವು. ಅಷ್ಟರಲ್ಲಾಗಲೇ ಅರಕೋಣಂ ತಲುಪಿಯಾಗಿತ್ತು. ಕೂಡಲೇ ಅವರ ಮಡದಿಗೆ ಮೊಬೈಲ್ ಕರೆ ಮಾಡೀ ಸುಭಧ್ರಾ, ನಾನು ಮತ್ತು ನಮ್ಮ ಸಂಬಂಧಿಗಳ ಕುಟುಂಬದೊಂದಿಗೆ ಬರುತ್ತಿದ್ದೇವೆ ಅದಕ್ಕೆ ಬೇಕಾದ ವ್ಯವಸ್ಥೆ ಮಾಡು ಎಂದು ತಿಳಿಸಿದರು,

ಚೆನ್ನೈ ರೈಲ್ವೇ ನಿಲ್ದಾಣದಿಂದ ಆಟೋ ಮಾಡಿಕೊಂಡು ನೇರವಾಗಿ ಅವರ ಮನಗೆ ಹೋದರೆ, ನಮ್ಮ ಬರುವಿಗಾಗಿ ಅವರ ಮಡದಿ ಮತ್ತು ಅವರ ಮಗ ಕಾಯುತ್ತಾ ಇದ್ದಾರೆ. ಹೋದ ತಕ್ಷಣವೇ, ರಾಯರು ನಮ್ಮ ಸಂಬಂಧಗಳನ್ನೆಲ್ಲಾ ಸೂಕ್ಷ್ಮವಾಗಿ ತಿಳಿಸಿ ನಮಗೇ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಿ ಕೊಟ್ಟು ನಾವು ಕೈಕಾಲು ಮುಖ ತೊಳೆದುಕೊಂಡು ಬರುವಷ್ಟರಲ್ಲಿ ಊಟದ ತಟ್ಟೆ ಹಾಕಿದ್ದರು ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತು ಕೊಂಡೆವು, ಆಕೆಯ ಹೆಸರು ಸುಭದ್ರಮ್ಮ ಎಂದು ಇದ್ದರೂ ಆಕೆ, ಸಾಕ್ಷಾತ್ ಅನ್ನಪೂರ್ಣಮ್ಮನೇ ಸರಿ. ಬೇಡ ಬೇಡಾ ಎಂದರೂ ಒತ್ತಾಯ ಪೂರ್ವಕವಾಗಿ ರುಚಿ ರುಚಿಯಾದ ಬಿಸಿ ಬಿಸಿ ಹುಳಿ,ಸಾರು, ಜೊತೆಗೆ ಬಾಳಕ , ಹಪ್ಪಳ ಸಂಡಿಗೆಯೊಂದಿಗೆ ಭೂರೀ ಭೋಜನವಾಯಿತು. ಊಟವಾದ ನಂತರ ಅವರ ಮಗ ಚೆನ್ನೈನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಕಾರಣ ಈಗ ಕೆಲ ವರ್ಷಗಳಿಂದ ಚೆನ್ನೈನಲ್ಲಿ ನೆಲಸಿರುವುದಾಗಿ ತಿಳಿಸಿದರು. ಹಾಗೇ ಮಾತನಾಡುತ್ತಾ ಮಾರನೇಯ ದಿನ ಬೆಳಿಗ್ಗೆ 9ಗಂಟೆಗೆಲ್ಲಾ ವೀಸಾ ಕಛೇರಿಗೆ ಹೋಗಬೇಕಾಗಿರುವುದರಿಂದ, ನಾವು ಬೆಳಿಗ್ಗೆಯೇ ಹೊರಡುತ್ತೇವೆ. ನೀವು ವೃಥಾ ತೊಂದರೆ ತೆಗೆದುಕೊಳ್ಳಬೇಡಿ ಎಂದೆ. ನಾನು ಈ ಮಾತನ್ನು ಹೇಳುತ್ತಿದ್ದಂತೆಯೇ ಸುಭದ್ರಮ್ಮನವರು? ಯಾಕೇ? ನಮ್ಮ ಮನೆಯ ಅಡಿಗೆ ಹಿಡಿಸಲಿಲ್ಲವೇ? ಅಥವಾ ಹೊರಗೆ ತಿನ್ನುವ ಚಪಲವೇ? ಅದೆಲ್ಲಾ ಬೇಡ. ನಾನೇ ಬೆಳಿಗ್ಗೆ ತಿಂಡಿ ಮಾಡಿಕೊಡುತ್ತೇನೆ. ಸುಮ್ಮನೆ ತಿಂಡಿ ತಿಂದು ಹೋಗಿ ಎಂದು ಎಷ್ಟೋ ದಿನಗಳಿಂದ ಪರಿಚಯ ಇರುವ ಹಾಗೆ ತೀರಾ ಸಲುಗೆಯಿಂದ ಅಧಿಕಾರಯುತವಾಗಿ ಆಜ್ಞಾಪಿಸಿದರು. ನೀರಲ್ಲಿ ಬಿದ್ದಾಗಿದೆ. ಇನ್ನು ಚಳಿಯೇನು, ಬಿಸಿಲೇನು? ಎನ್ನುವಂತೆ ಅವರು ಹೇಳಿದ್ದಕ್ಕೆ ಮರು ಮಾತನಾಡದೇ ಒಪ್ಪಿಕೊಳ್ಳಲೇ ಬೇಕಾಯಿತು.

rotti

ಮಾರನೇಯ ದಿನ ಬೆಳಿಗ್ಗೆ ನಾವು ಎದ್ದು ಮಕ್ಕಳಿಗೆಲ್ಲಾ ಸ್ನಾನ ಮಾಡಿಸಿ ಅವರನ್ನೆಲ್ಲ ತಯಾರು ಮಾಡಿ ನಮ್ಮಕೊಠಡಿಯಿಂದ ಹೊರಬರುವುದನ್ನೇ ಕಾಯುತ್ತಿದ್ದ ಸುಭದ್ರಮ್ಮನವರು, ಎಲ್ಲಾ ಬಂದ್ರಾ? ನೀವು ಬರಲೀ ಎಂದೇ ಕಾಯುತ್ತಿದ್ದೆ ಎಂದು ಹೇಳಿ ಪಟ ಪಟನೇ ಬಿಸಿ ಬಿಸಿಯಾದ ಅಕ್ಕಿ ರೊಟ್ಟಿ ಅದಕ್ಕೆ ಗಟ್ಟಿಯಾದ ಕಾಯಿ ಚೆಟ್ನಿ ಅದರ ಮೇಲೆ ಮನೆಯಲ್ಲೇ ಕಡಿದು ಮಾಡಿದ್ದ ಹಸನಾದ ಬೆಣ್ಣೆ ಹಾಕಿಕೊಟ್ಟರು. ಅಷ್ಟು ಬೆಳ್ಳನೆಯ, ತೆಳುವಾದ ಮತ್ತು ಗರಿಗರಿಯಾದ ಅಕ್ಕಿರೊಟ್ಟಿಯನ್ನು ನನ್ನ ಜೀವಮಾನದಲ್ಲೇ ತಿಂದಿರಲಿಲ್ಲ. ಹಾಗಾಗಿ ರೊಟ್ಟಿಯನ್ನು ಗಡದ್ದಾಗಿ ತಿಂಡಿ ತಿಂದು ಎಂಬೆಸಿ ಕೆಲಸ ಮುಗಿಸಿಕೊಂಡು ಹಿಂದಿರುಗಿ, ಮಧ್ಯಾಹ್ನ ಮತ್ತು ರಾತ್ರಿ ರುಚಿಚಿಯಾದ ಊಟ ಹಾಕಿದ್ದಲ್ಲದೆ, ರಾತ್ರಿ ಹೊರಡುವಾಗ ನಮ್ಮ‌ ಮನೆಯವರಿಗೆ ಅರಿಶಿನ ಕುಂಕುಮ, ಮಕ್ಕಳ ಕೈಗೆ ಚಾಕೆಲ್ಪೇಟ್ ತೆಗೆದುಕೊಳ್ಳಿ ಎಂದು ಸ್ವಲ್ಪ ಹಣವನ್ನೂ ಕೊಟ್ಟು ಕಳುಹಿಸಿದ್ದರು,. ನಮ್ಮದು ಉಂಡೂ ಹೋದ ಮತ್ತು ಕೊಂಡೂ ಹೋದ ಎನ್ನುವ ಕಥೆಯಾಗಿತ್ತು. ರೈಲಿನಲ್ಲಿ ಅಚಾನಕ್ಕಾಗಿ ಸಿಕ್ಕಿ ಪರಿಚಯವಾಗಿ ಅದು ಸಂಬಂಧಕ್ಕೆ ತಿರುಗಿ, ವಿಶ್ವೇಶ್ವರಯ್ಯ ಮತ್ತು ಸುಭದ್ರಮ್ಮ ದಂಪತಿಗಳು ಆದಿನ ನಮಗೆ ಕೇವಲ ಆಶ್ರಯದಾತರಾಗಿರಲಿಲ್ಲ. ಬದಲಾಗಿ ಸಾಕ್ಷಾತ್ ಶ್ರೀ ಪಾರ್ವತಿ ಮತ್ತು ಪರಮೇಶ್ವರನಂತೆ ನಮ್ಮನ್ನು ಸಲಹಿದ್ದರು. ಹೋಟೆಲ್ ರೂಮೊಂದನ್ನು ಬಾಡಿಗೆ ಹಿಡಿದು ಅಲ್ಲಿಯೇ ಊಟೋಪಚಾರಗಳನ್ನು ಮುಗಿಸಿ ನಮ್ಮ ಉದ್ದೇಶವನ್ನು ಪೂರೈಸ ಬಹುದಾಗಿದ್ದರೂ, ಇವರು ತೋರಿದ ಹೃದಯ ವೈಶಾಲ್ಯತೆ, ಅತಿಥಿ ಸತ್ಕಾರಕ್ಕೆ ಬೆಲೆ ಕಟ್ಟಲಾಗದು. ಮುಂದೆ ಅವರು ಬೆಂಗಳೂರಿಗೇ ಸಂಸಾರ ಸಮೇತರಾಗಿ ಹಿಂದಿರುಗಿ, ಬಾಣಂತನಕ್ಕೆ ಹೋಗಿದ್ದ ಸೊಸೆಗೂ ಮಗಳು ಜನಿಸಿ ಅವಳ ನಾಮಕರಣ ಮುಂದೆ ಆ ಮಗುವಿನ ವರ್ಷದ ಹುಟ್ಟು ಹಬ್ಬ ಹೀಗೆ ನಾನಾ ಕಾರ್ಯಕ್ರಮಗಳಿಗೆ ನಾವು ಅವರ ಮನೆಗೆ ಹೋದರೆ, ಅವರೂ ಸಹಾ ನಮ್ಮ ಮಗನ ಮುಂಜಿ, ಗೃಹಪ್ರವೇಶ ಹೀಗೆ ನಮ್ಮ ಮನೆಯ ಸಭೆ ಸಮಾರಂಭಗಳಿಗೆ ಹೋಗಿ ಬಂದು ಮಾಡುತ್ತಾ ಹತ್ತಿರದ ಸಂಬಂಧಿಗಳಿಗಿಂತಲೂ ಹೆಚ್ಚಾಗಿಯೇ ಹೋದೆವು.

ನಾವು ಮಾಡಿದ ಪುಣ್ಯಕಾರ್ಯಗಳು ನಮ್ಮ ಮಕ್ಕಳನ್ನು ಮತ್ತು ಮರಿಮಕ್ಕಳನ್ನು ಕಾಪಾಡುತ್ತದೆ ಎಂಬ ಮಾತು ಪ್ರಚಲಿತದಲ್ಲಿದೆ. ಆಂದು ನಮ್ಮ ತಾಯಿಯವರು ಅದಾರೋ ಅಪರಿಚಿತ ಹೆಂಗಸಿಗೆ ಮಾಡಿದ ಉಪಕಾರಕ್ಕೆ ಇಂದು ಆ ಭಗವಂತ ವಿಶ್ವೇಶರಯ್ಯನವರ ರೂಪದಲ್ಲಿ ಬಂದು ಅದರ ಋಣವನ್ನು ತೀರಿಸಿದ್ದ. ಅಪರಿಚಿತರಿಗೆ ಸತ್ಕಾರ‌ ಮಾಡಬೇಡಿ‌ ಎಂದು ನಮ್ಮ ತಾಯಿಯವರಿಗೆ ಹೇಳಿದ್ದ ನಾವೇ ಇಂದು ಅಪರಿಚಿತರ ಮನೆಯಲ್ಲಿ ಸತ್ಕಾರಕ್ಕೆ ಒಳಗಾಗಿದ್ದೆವು ಅದಕ್ಕೇ ಹೇಳೋದು ನಾವು ಮಾಡಿದ ದಾನ ಧರ್ಮಗಳಿಗೆ ಮುಂದಿನ ತಲೆಮಾರು ಇಲ್ಲವೇ ಮುಂದಿನ ಜನ್ಮದವರೆಗೂ ಕಾಯುವ ಅವಶ್ಯಕತೆಯೇ ಇಲ್ಲ. ಇಂದೇನಿದ್ರೂ ಅಲ್ಲೇ ಡ್ರಾ ಅಲ್ಲೇ ಬಹುಮಾನ. ಹಾಗಾಗಿ ಸಾಧ್ಯವಾದಷ್ಟೂ ದಾನ ಧರ್ಮಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥವಾಗಿ ಮಾಡೋಣ . ಹೀಗೆಯೇ ದಾನ ಧರ್ಮ ಮಾಡುವಷ್ಟು ಸಿರಿ ಸಂಪತ್ತು ಮತ್ತು ವಿಶಾಲವಾದ ಮನಸ್ಸನ್ನು ಕೊಡಲಿ ಎಂದು ಆ ಭಗವಂತನನ್ನು ಕೇಳೋಣ. ಭಗವದ್ಗಿತೆಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ, ಕರ್ಮಣ್ಯೇವಾಧಿಕಾರಸ್ತೇ, ಮಾಫಲೇಷು ಕದಾಚನ. ನಿಮ್ಮ ಕೆಲಸಗಳನ್ನು ನೀವು ಮಾಡಿ, ಫಲಾಫಲಗಳನ್ನು ನನ್ನ ಮೇಲೆ ಬಿಡಿ ಎನ್ನುವಂತೆ ನಮ್ಮ ಪಾಲಿನ ಕರ್ತ್ಯವ್ಯಗಳನ್ನು ನಾವು ಸರಿಯಾಗಿ ಮಾಡುವುದರ ಮೂಲಕ ಎಲ್ಲರಿಗೂ ಆದರ್ಶಪ್ರಾಯರಾಗೋಣ. ಇಂದು ನಮ್ಮ ತಾಯಿಯವರೂ ಇಲ್ಲ ಮತ್ತು ಆ ಬಡ ಹೆಂಗಸೂ ನಮ್ಮ ಮನೆಗೆ ಬರುತ್ತಿಲ್ಲವಾದರೂ ಅವರು ಮಾಡಿದ ಪುಣ್ಯ ಕೆಲಸ ಮತ್ತು ಆಶೀರ್ವಾದಗಳು ನಮ್ಮನ್ನು ಸದಾಕಾಲವೂ ಕಾಯುತ್ತಲೇ ಇರುತ್ತದೆ.

ವೀಡಿಯೋ : https://youtu.be/BFDl0OWY9Vc

ಏನಂತೀರೀ?

.

3 thoughts on “ದಾನ ಮತ್ತು ಧರ್ಮ ಎಲ್ಲಾ, ಇಲ್ಲೇ ಡ್ರಾ, ಇಲ್ಲೇ ಬಹುಮಾನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s