ಹಾಸನಾಂಬಾ

ಸಾಮಾನ್ಯವಾಗಿ ಬಹುತೇಕ ಊರುಗಳ ಹೆಸರುಗಳು ಅಲ್ಲಿಯ ಸ್ಥಳೀಯ ಐತಿಹ್ಯ ಇಲ್ಲವೇ ಅಲ್ಲಿಯ ಗ್ರಾಮದೇವತೆಗಳನ್ನು ಆಧರಿಸಿಯೇ ಇರುತ್ತವೆ. ಅದರಂತೆ ಮಹಿಷಾಸುರನನ್ನು ಸಂಹರಿಸಿದ ಸ್ಥಳ ಮೈಸೂರಾದರೆ, ಮಂಗಳಾದೇವಿಯ ಸನ್ನಿಧಿ ಮಂಗಳೂರು ಇರುವಂತೆ ಹಾಸಾನಾಂಬೆ ನೆಲೆಸಿರುವ ದಿವ್ಯಕ್ಷೇತ್ರ ಹಾಸನ ಎಂದು ಪ್ರಸಿದ್ದಿಯಾಗಿದೆ.

ಶಿಲ್ಪಕಲೆ, ಸಾಹಿತ್ಯ, ಬಾಹ್ಯಾಕಾಶ ಸಂಶೋಧನೆ ಮತ್ತು ರಾಜಕೀಯವಾಗಿ ವಿಶ್ವವಿಖ್ಯಾತವಾದ ಹಾಸನ ಜಿಲ್ಲೆಯಲ್ಲಿಯೇ . ಜಗತದ್ವಿಖ್ಯಾತ ಬೇಲೂರು, ಹಳೇಬೀಡು, ಶ್ರವಣಬೆಳಗೊಳದಂತಹ ಪ್ರದೇಶಗಳು ಇರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ಇಂತಹ ಸುಪ್ರಸಿದ್ದ ಹಾಸನಕ್ಕೆ, ಹಾಸನ ಎಂಬ ಹೆಸರು ಬರಲು ಕಾರಣವಾದ ಗ್ರಾಮದೇವತೆ ಹಾಸನಾಂಬೆಗೂ ಒಂದು ಸುಂದರವಾದ ಐತಿಹ್ಯವಿದೆ ಮತ್ತು ಇತರೇ ಎಲ್ಲಾ ದೇವಾಯಗಳಂತೆ ವರ್ಷದ 365 ದಿನಗಳೂ ಭಕ್ತರ ಸೇವೆಗೆ ಲಭ್ಯವಿರದೇ, ವರ್ಷಕ್ಕೆ ಕೇವಲ 10-12 ದಿನಗಳು ಮಾತ್ರವೇ ಲಭ್ಯವಿರುವ ರೋಚಕವಾದ ವಿಷಯವಿದೆ.

hasanamba.jpg

ಹೌದು. ಹಾಸನಾಂಬ ದೇವಾಲಯ ಪ್ರತಿ ವರ್ಷ ಆಶ್ವಯುಜ ಮಾಸದ ಹುಣ್ಣಿಮೆಯ ನಂತರದ ಗುರುವಾರ ಮಧ್ಯಾಹ್ನ ಬಾಗಿಲು ತೆರೆದು ನಂತರ ಕಾರ್ತೀಕ ಮಾಸದ ಬಲಿಪಾಡ್ಯಮಿಯ ಮಾರನೆ ದಿನ ಬೆಳಗ್ಗೆ ಮುಚ್ಚಿದರೆ, ಮತ್ತೆ ದೇವಿಯ ದರ್ಶನ ಮುಂದಿನ ಒಂದು ವರ್ಷದ ನಂತರವಷ್ಟೇ. ಆದರೆ ಈ 10-12 ದಿನಗಳಲ್ಲಿಯೇ ದೇವಿಯ ದರ್ಶನ ಪಡೆಯಲು ದೇಶಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ವಿದೇಶದಲ್ಲಿರುವ ಭಕ್ತಾದಿಗಳು ಇದೇ ಸಮಯದಲ್ಲೇ ತಮ್ಮ ಸ್ಚದೇಶ ಪ್ರಯಾಣ ಮಾಡಿ ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಹಾಗಾಗಿ ಆ 10-12 ದಿನಗಳು ಹಾಸನಾದ್ಯಂತ ದೇವಿಯ ಜಾತ್ರೆಯ ಜೊತೆಗೆ ದೀಪಾವಳೀ ಹಬ್ಬವೂ ಸಮ್ಮಿಳನವಾಗಿ ಊರ ತುಂಬಾ ಸಂಭ್ರಮದ ವಾತಾವರಣ. ಜಿಲ್ಲಾಡಳಿತ ಮತ್ತು ಸರ್ಕಾರವೂ ಸಹಾ ಭಕ್ತರಿಗೆ ಸುಗಮವಾಗಿ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲು ನೈವೇದ್ಯ ಮತ್ತು ವಿಶೇಷ ಪೂಜೆಯ ಹೊರತಾಗಿ ಹಗಲೂ ರಾತ್ರಿ ದೇವಿಯ ದರ್ಶನಕ್ಕೆ ಬರುವ ಯಾತ್ರಿಕರಿಗೆ ಸಕಲ ಅನುಕೂಲ ಕಲ್ಪಿಸಿಕೊಡುತ್ತಾರೆ.

WhatsApp Image 2019-10-18 at 7.04.50 AM

ಪುರಾಣದ ರೀತ್ಯಾ ಅದೊಮ್ಮೆ ಕಾಶಿಯಿಂದ (ವಾರಣಾಸಿ) ದಕ್ಷಿಣಾಭಿಮುಖವಾಗಿ ವಾಯುವಿಹಾರಕ್ಕೆಂದು ಸಪ್ತ ಮಾತೃಕೆಯರಾದ ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ದುರ್ಗೆ, ಚಾಮುಂಡಿಯವರು ಈ ಮಾರ್ಗವಾಗಿ ಹಾದು ಹೋಗುತ್ತಿದ್ದಾಗ, ಇಲ್ಲಿಯ ಮಲೆನಾಡಿನ ನಿತ್ಯಹದ್ವರ್ಣ ಪ್ರದೇಶಕ್ಕೆ ಮಾರು ಹೋಗಿ ಅವರಲ್ಲಿ, ವೈಷ್ಣವಿ, ವಾರಾಹಿ ಮತ್ತು ಇಂದ್ರಾಣಿ ಎಂಬ ಈ ಮೂವರು ಸದ್ಯದ ದೇವಾಲಯ ಇರುವ ಸ್ಥಳದಲ್ಲಿಯೇ ನೆಲೆಸಿದರೆ, ಹಾಸನ ನಗರದ ಹೃದಯಭಾಗದಲ್ಲಿರುವ ದೇವಿಕೆರೆಯಲ್ಲಿ, ಬ್ರಾಹ್ಮಿದೇವಿ,ಮಹೇಶ್ವರಿ, ಕೌಮಾರಿಯವರು ನೆಲೆಗೊಂಡು ಇನ್ನು ಏಳನೇ ಮಾತೃಕೆ ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಎಂಬ ಸ್ಥಳದಲ್ಲಿ ಕೆಂಚಾಂಬ ದೇವಿ ಎಂಬ ಹೆಸರಿನಿಂದ ಪ್ರತಿಷ್ಟಾಪನೆ ಗೊಂಡರೆಂಬ ಕಥೆ ಎಲ್ಲೆಡೆಯೂ ಜನಜನಿತವಾಗಿದೆ. ಆದಿಶಕ್ತಿ ಸ್ವರೂಪಿಣಿ ಮಾತೃ ಸ್ವರೂಪಿಣಿಯಾಗಿರುವ ಹಾಸನಾಂಬೆ ಸಿಂಹಾಸನಾಪುರಿಯ ಅಧಿದೇವತೆ- ಭವತಾರಿಣಿ, ಅಸುರ ಸಂಹಾರಿಣಿ. ಬೇಡಿದ ವರಕೊಡುವ ಶಕ್ತಿದೇವತೆಯಾಗಿ ಜನಮಾನಸದಲ್ಲಿ ಕಾಣಿಸಿ ಕೊಂಡಿದ್ದಾಳೆ.

ಇದೇ ರೀತಿ ಒಬ್ಬಳು ಸೊಸೆ ತನ್ನ ಅತ್ತೆ ಕಾಟದಿಂದ ಬೇಸತ್ತು ಪ್ರತಿನಿತ್ಯ ಈ ದೇವಾಲಯಕ್ಕೆ ಬಂದು ದೇವಿಯ ದರ್ಶನ ಪಡೆದು ತನ್ನ ಅಳಲನ್ನು ದೇವಿಯ ಬಳಿ ಹೇಳಿಕೊಳ್ಳುತ್ತಿದ್ದಳಂತೆ. ಸೊಸೆ ಹೇಳದೇ ಕೇಳದೆ, ಪ್ರತಿದಿನವೂ ಮನೆಯಿಂದ ಕೆಲ ಸಮಯ ಕಾಣೆಯಾಗುತ್ತಿದ್ದದ್ದನ್ನು ಗಮನಿಸಿದ ಆಕೆಯ ಅತ್ತೆ , ಅವಳನ್ನೇ ಹಿಂಬಾಲಿಸಿಕೊಂಡು ಬಂದು, ತನ್ನ ಸೊಸೆ ದೇವಿಯೊಂದಿಗೆ ಮಾತನಾಡುವುದನ್ನು ಕಂಡು ಅಲ್ಲಿಯೇ ಇದ್ದ ಚಂದನ ಬಟ್ಟಲನ್ನು ತೆಗೆದು ಆಕೆಯ ತಲೆಗೆ ಕುಟ್ಟಿದಳಂತೆ. ಸೊಸೆ ನೋವಿನಿಂದ ಅಮ್ಮಾ ಹಾಸನಾಂಬೆ, ಕಾಪಾಡು ತಾಯೇ ಎಂದು ಕೇಳಿಕೊಂಡಾಗ ಎಂದು ಕೂಗಿ ಕೊಂಡಳು. ದೇವಿಯು ತನ್ನ ಭಕ್ತೆಯ ಆರ್ತನಾದ ಕೇಳಿ ಇನ್ನು ಮುಂದೇ ನೀನು ನನ್ನ ಸನ್ನಿಧಿಯಲ್ಲಿಯೇ ಕಲ್ಲಿನ ರೂಪದಲ್ಲಿದ್ದು ಇಲ್ಲಿಗೆ ಬರುವವರೆಲ್ಲರ ಭಕ್ತಿ ಭಾವಕ್ಕೆ ನೀನು ಸಾಕ್ಷಿಯಾಗಿರು ಎಂದು ಹರಸಿದಳಂತೆ. ಅದಕ್ಕೆ ಪುಷ್ಟಿಕೊಡುವಂತೆ ಈಗಲೂ ದೇವಿಯ ಮುಂದೆ ಇಲ್ಲೊಂದು ಕರಿಯ ಕಲ್ಲಿದೆ.

ಹುತ್ತ ರೂಪದಲ್ಲಿ ನೆಲೆಸಿರುವ ಹಾಸನಾಂಬಾ ದೇವಿಯನ್ನು ಸಾಂಕೇತಿಕವಾಗಿ ಕುಂಭ ರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕುಂಭಗಳಿಗೆ ಮೊದಲದಿನದ ಹೊರತಾಗಿ, ಉಳಿದ ಆಷ್ಟೂ ದಿನಗಳೂ ಹೆಣ್ಣು ದೇವತೆಯ ಮುಖವಾಡಗಳಿಂದ ಅಲಂಕಾರ ಮಾಡಿ ನಾನಾ ರೀತಿಯ ಪತ್ರೆ ಮತ್ತು ಪುಷ್ಪ ಮತ್ತು ಚಿನ್ನ ವಜ್ರ ವೈಡೂರ್ಯಗಳ ಆಭರಗಳನ್ನು ತೊಡಿಸಿ ಪೂಜೆ ಮಾಡಲಾಗುತ್ತದೆ. ಮೊದಲ ದಿನ ಅಂತಹ ಯಾವುದೇ ಅಲಂಕಾರಗಳಿಲ್ಲದೆ ಇರುವ ಮೂಲ ದೇವರ ದರ್ಶನವನ್ನು ಈ ವೀಡೀಯೋದಲ್ಲಿ ನೋಡಬಹುದಾಗಿದೆ.

ದೇವಾಲಯವನ್ನು ವರ್ಷಾದ್ಯಂತ ಮುಚ್ಚಿಟ್ಟು ಕೇವಲ ವರ್ಷಕ್ಕೊಮ್ಮೆ ಮಾತ್ರವೇ ಏಕೆ ತೆರೆಯುತ್ತಾರೆ ಎಂಬುದಕ್ಕೆ ಯಾವುದೇ ಸೂಕ್ತವಾದ ಇತಿಹಾಸವಾಗಲೀ, ಪುರಾಣವಾಗಲೀ ಇಲ್ಲದಿದ್ದರೂ, ವಿಹಾರಕ್ಕೆಂದು ಬಂದ ಸಪ್ತಮಾತ್ರಿಕೆಯರು ಸ್ಥಿರವಾಗಿ ಇಲ್ಲಿಯೇ ನೆಲೆಸದೆ ವರ್ಷದ ಈ ಕೆಲವೂ ದಿನಗಳು ಮಾತ್ರವೇ ಇಲ್ಲಿ ಬಂದು ನೆಲೆಸುವ ಕಾರಣದಿಂದ ವರ್ಷಕ್ಕೊಮ್ಮೆ ಮಾತ್ರವೇ ಈ ದೇವಸ್ಥಾನವನ್ನು ತೆಗೆಯುತ್ತಾರೆ ಎಂಬುದಾಗಿ ಕೆಲವು ಬಲ್ಲವರು ತಿಳಿಸುತ್ತಾರೆ. ಹಾಗೆ ಇದ್ದಕ್ಕಿದ್ದಂತೆಯೇ ಬಾಗಿಲು ತೆರೆದ ತಕ್ಷಣವೇ ಭಕ್ತ ಸಮೂಹಕ್ಕೆ ದರ್ಶನದ ಅವಕಾಶ ಕೊಡುವುದಿಲ್ಲ. ದೇವಸ್ಥಾನದ ಅರ್ಚಕರು ಸ್ಥಳೀಯ ಮುಖಂಡರಗಳು, ಜಿಲ್ಲಾಧಿಕಾರಿಗಳು ಮತ್ತು ಆರಕ್ಷಕರ ಸುಪರ್ಧಿಯಲ್ಲಿಯೇ ದೇವಾಲಯದ ಬಾಗಿಲನ್ನು ತೆರೆಯುವ ಮುನ್ನಾ ವರ್ಷವಿಡೀ ಬಾಗಿಲು ಹಾಕಿದ್ದ ಕಾರಣ, ಬಾಗಿಲು ತೆಗೆದ ಕೂಡಲೇ ದೇವಿಯ ನೋಟದ ಶಕ್ತಿ ಪ್ರಖರತೆಯನ್ನು ಜನಸಾಮಾನ್ಯರು ತಡೆದುಕೊಳ್ಳಲು ಆಗದೇ ಇರಬಹುದೆಂಬ ಕಾರಣದಿಂದಾಗಿ, ದೇವಾಲಯದ ಮುಂದೆ ಬಾಳೆಯ ಕಂದನ್ನು ಕಡಿದು ದೃಷ್ಟಿ ನಿವಾರಣೆ ಮಾಡಿ, ದೇವಾಲಯದಲ್ಲಿ ದೀಪದ ಜೊತೆ ನೈವೇದ್ಯವನ್ನು ನಿವೇದಿಸಿ ದೇವಸ್ಥಾನವನ್ನು ತೆರೆಯುತ್ತಾರೆ. ದೇವಿಯ ದೃಷ್ಟಿಯ ಪ್ರಭಾವದಿಂದಾಗಿ ದೇವಿಯನ್ನು ಪೂಜಿಸುವ ಅರ್ಚಕರ ಕಣ್ಣುಗಳು ಕೆಂಪಾಗಿರುತ್ತವೆ ಎಂಬುದು ಇಲ್ಲಿಯವರ ನಂಬಿಕೆ ಇದಲ್ಲದೇ , ದೇವಾಲಯದಲ್ಲಿ ಹುತ್ತಗಳು ಇರುವ ಕಾರಣ ಮತ್ತು ವರ್ಷವಿಡೀ ಮುಚ್ಚಿರುವುದರಿಂದ ಹುಳ ಹುಪ್ಪಟಗಳು ಇಲ್ಲವೇ ಯಾವುದೇ ಸರೀಸೃಪಗಳು ಇದ್ದಿರಬಹುದಾದ ಕಾರಣ, ಜೋರಾಗಿ ವಾದ್ಯಗಳ ಶಬ್ದ ಮಾಡಿ ಅವುಗಳೆಲ್ಲವೂ ಆ ಶಬ್ಧಕ್ಕೆ ಅಂಜಿ ಹೊರ ಹೋದ ನಂತರವೇ ಭಕ್ತಾದಿಗಳಿಗೆ ದೇವಿಯ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇಲ್ಲಿಯ ಮತ್ತೊಂದು ವಿಶೇಷವೆಂದರೆ ಇತರೇ ಶಕ್ತಿ ದೇವತೆಗಳಿಗೆ ಕೊಡುವಂತೆ ಇಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ನಿಷಿಧ್ಧವಾಗಿದೆ. ಇದಲ್ಲದೇ ದೇವಸ್ಥಾನದ ಸುತ್ತಮುತ್ತಲಿನ ಮನೆಗಳವರೂ ಸಹಾ ದೇವಾಲಯ ತೆರೆದಿರುವ ಅಷ್ಟೂ ದಿನ ತಮ್ಮ ಮನೆಗಳಲ್ಲಿ ಒಗ್ಗರಣೆ ಇಲ್ಲದಿರುವ ಅಡುಗೆಗಳನ್ನೇ ಮಾಡುತ್ತಾರೆ.

ಈ ದೇವಾಲಯ ಕುರಿತು ಇರುವ ಮತ್ತೊಂದು ಬಹು ದೊದ್ಡ ನಂಬಿಕೆ ಬಹಳ ಜನರ ಗಮನ ಸೆಳೆಯುತ್ತದೆ. ಬಲಿಪಾಡ್ಯಮಿಯ ಮಾರನೆ ದಿನ ಬೆಳಗ್ಗೆ ದೇವಾಲಯ ಮುಚ್ಚುವ ಸಮಯದಲ್ಲಿ, ದೇವಿಯ ಮುಂದೆ ಹಚ್ಚಿಟ್ಟ ದೀಪ, ದೇವಿಗೆ ಅಲಂಕಾರ ಮಾಡಿದ ಹೂವು ಮತ್ತು ನೈವೇದ್ಯಕ್ಕೆ ಇಟ್ಟ ಅನ್ನ,ಪುನಃ ಒಂದು ವರ್ಷದ ನಂತರ ದೇವಾಲಯವನ್ನು ಮತ್ತೆ ತೆಗೆದಾಗ ನಂದಾದೀಪ ಆರದೇ ಹೂವು ಬಾಡದೇ, ಅನ್ನ ಹಳದೇ ಇರುತ್ತದೆ ಎನ್ನುತ್ತಾರೆ ಹಿರೀಕರು. ಕೆಲವರು ಇದನ್ನು ದೇವಿಯ ಪವಾಡವೆಂದರೆ ಮತ್ತೆ ಕೆಲವರು ಇದು ವೈಜ್ಞಾನಿಕ ಲೋಕಕ್ಕೇ ಸವಾಲು ಎನ್ನುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇದೇ ವಿಷಯಕ್ಕೆ ಕುರಿತು ಅನೇಕ ಪ್ರಗತಿಪರರು ಪ್ರತಿಭಟನೆ ನಡೆಸಿ ಇದರ ಬಗ್ಗೆ ತನಿಖೆ ನಡೆಸಬೇಕೆಂದು ಸರ್ಕಾಕ್ಕೆ ಆಗ್ರಹಿಸಿದರೂ, ಇದು ತಲೆತಲಾಂತರಗಳಿಂದ ಜನರ ನಂಬಿಕೆಯಾಗಿರುವುದರಿಂದ ಮತ್ತು ಅದನ್ನು ಧಿಕ್ಕರಿಸಿ ಅದರ ಬಗ್ಗೆ ತನಿಖೆ ನಡೆಸುವುದರಿಂದ ಹಲವರ ಅಚಾರ ವಿಚಾರಗಳಿಗೆ ಧಕ್ಕೆ ಬರುತ್ತದೆ ಎಂಬ ಕಾರಣದಿಂದ ಸರ್ಕಾರವೂ ಈ ಬಗ್ಗೆ ಹೆಚ್ಚಿನ ಆಸ್ಪದ ಕೊಡದೇ ವಿಷಯವನ್ನು ಅಲ್ಲಿಗೇ ತಣ್ಣಗೆ ಮಾಡಿರುತ್ತದೆ.

ತಲೆ ತಲಾಂತರಗಳಿಂದ ನಂಬಿಕೊಂಡು ಬಂದಂತಹ ಮತ್ತು ರೂಢಿ ಮಾಡಿಕೊಂಡು ಬಂದಂತಹ ಮತ್ತು ಅದರಿಂದ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತಹ ವಿಚಾರಗಳಲ್ಲಿ ಅನಗತ್ಯ ಮೂಗು ತೂರಿಸದೇ ಅವರರವರ ಆಚರಣೆಗಳಿಗೆ ಸ್ಪಂದಿಸಿ, ದೇವಿಯ ದರ್ಶನ ಪಡೆದು ಸತ್ಪಾತ್ರರಾಗುವುದು ಒಳ್ಳೆಯ ಗುಣ ಲಕ್ಷಣ.

ಏನಂತೀರೀ?

3 comments

  1. ಹಾಸನಾಂಬೆಯ ದೇವಾಲಯದ ದ್ವಾರ ತೆರೆಯುವ ವೇಳೆಗೆ ಸರಿಯಾಗಿ ಲೇಖನ ಮೂಡಿಬಂದಿರುವುದು ಸೂಕ್ತವಾಗಿದೆ. ಹಾಸನಾಂಬೆಯ ಬಗ್ಗೆ ಐತಿಹ್ಯವು ಚೆನ್ನಾಗಿ ಮೂಡಿ ಬಂದಿದೆ. , ಧನ್ಯವಾದಗಳು

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s