ಅಂಬಿ ಮಜ್ಜಿಗೆ

ಇಂದು ಮಧ್ಯಾಹ್ನ ನಮ್ಮ ಮನೆಯಿಂದ ಅಣ್ಣನ ಮನೆಗೆ ಹೋಗುವಾಗ ರಾಜಕುಮಾರ್ ಸ್ಮಾರಕ ದಾಟಿ ಸ್ವಲ್ಪ ‌ಮುಂದೆ ಹೋಗುತ್ತಿರುವಾಗ ವರ್ತುಲ ರಸ್ತೆಯ ಬದಿಯ ತಳ್ಳು ಗಾಡಿಯ ಮೇಲೆ ಅಂಬಿ ಮಜ್ಜಿಗೆ ಅನ್ನೋ ಬೋರ್ಡ್ ನೋಡಿ ಅರೇ ಇದೇನಪ್ಪಾ‌ ಒಂದು ತರಹದ ವಿಶೇಷವಾದ ಶೀರ್ಷಿಕೆ‌ ಇದೆಯಲ್ಲಾ? ಅಂಬಿ‌ (ಅಂಬರೀಷ್) ಅಭಿಮಾನಿಗಳ ‌ಅಭಿಮಾನಕ್ಕೆ ಕೊನೆಯೇ ಇಲ್ಲವೇ? ಎಂದು ಯೋಚಿಸುತ್ತಿರುವಾಗಲೇ, ಇದನ್ನೇ ಗಮನಿಸಿದ ಮಡದಿಯೂ ಕೂಡಾ ಅಂಬಿ‌ ಯಾವಾಗ ಇಲ್ಲಿ ಬಂದು ಮಜ್ಜಿಗೆ ಕುಡಿದಿದ್ರೋ? ಅವರು ಕುಡಿತಿದ್ದ ‌ಮಜ್ಜಿಗೆಯೇ ಬೇರೆ ಅಲ್ವಾ? ಅಂದಾಗ, ಅರೇ ಹೆಣ್ಣು ಮಕ್ಕಳೂ ಹೇಗೆ ಯೋಚಿಸ್ತಾರಲ್ವಾ? ಎಂದು ಸಣ್ಣಗೆ ಮನಸ್ಸಿನಲ್ಲೇ ನಗುತ್ತಾ ಸ್ವಲ್ಪ ದೂರ ಸಾಗುತ್ತಿದ್ದಾಗ ಮತ್ತೊಂದು ಅದೇ ರೀತಿಯ ಗಾಡಿ ನೋಡ್ದಾಗ ನಿಜಕ್ಕೂ ನಗು ತಡೆಯಲು ಆಗಲೇ ಇಲ್ಲಾ.

ಗಾಡಿಯ ಮೇಲೆ ಅಂಬ್ಲಿ ಮಜ್ಜಿಗೆ ಅಂತಾ ಸರಿಯಾಗಿ ಬರೆದಿದ್ದರು. ರಾಗಿ ಅಂಬಲಿ ಮಜ್ಜಿಗೆ ಮಾರೋ ಗಾಡಿಯ ಮೇಲೆ ಯಾರೋ ಬೋರ್ಡ್ ಬರೆದಿರೋ ಪುಣ್ಯಾತ್ಮನ ಕಾಗುಣಿತದ ಒಂದು “ಲ” ಒತ್ತಿನ ತಪ್ಪಿನಿಂದಾಗಿ ಎಷ್ಟೊಂದು ಅಪಾರ್ಥ ಕಲ್ಪಿಸಿತ್ತು. ಇಂದಿನ ಬಹುತೇಕರಿಗೆ ಕನ್ನಡದ ಕಾಗುಣಿತವೇ ಸರಿಯಾಗಿ ಬಾರದಿರುವ ಕಾರಣವೋ ಇಲ್ಲವೇ ಕಣ್ತಪ್ಪಿನಿಂದಾದ ಮುದ್ರಾರಾಕ್ಷಸನ ಪರಿಣಾಮವಾಗಿ ಈ ರೀತಿಯಾದ ಅಭಾಸ ಆಗಿದ್ದು ಒಂದು ರೀತಿಯ ‌ಮಜಾ‌ ಕೊಟ್ಟಿತು ಅಲ್ಲದೆ ಎಲ್ಲರೊಡನೆ ಅಂಬಲಿ‌ ಹೇಗೆ ಮಾಡಬೇಕು ಮತ್ತು ಅದರ ಗಮ್ಮತ್ತು ಏನು ಎಂಬುದನ್ನು ಹಂಚಿಕೊಳ್ಳಲು ಪ್ರೇರಣೆ ಆಯಿತು.

ಆದರೆ ನಿಜಕ್ಕೂ ಈ ಬಿಸಿಲು‌ ಹೊತ್ತಿನಲ್ಲಿ ಯಾವುದೋ ರೀತಿಯ ಅನಾರೋಗ್ಯಕರ‌ ಪೇಯಗಳನ್ನು ಸೇವಿಸುವ ಬದಲು ರಾಗಿ ಅಂಬಲಿ ಮತ್ತು ‌ಮಜ್ಜಿಗೆ ದೇಹಕ್ಕೆ ಅತ್ಯುತ್ತಮ. ಅದನ್ನು ತಯಾರಿಸುವುದೂ ಬಹಳ ಸುಲಭ. ಹಿಟ್ಟಂ ತಿಂದವ, ಬೆಟ್ಟಂ ಕಿತ್ತಿಟ್ಟಂ ಎನ್ನುವ ಹಾಗೆ ರಾಗಿ ಅಂಬಲಿ ಶಕ್ತಿವರ್ಧಕ ಪೇಯವೂ ಹೌದು.

ರಾಗಿ ಅಂಬಲಿ ರುಚಿಗೆ ತಕ್ಕಂತೆ ಸಿಹಿಯಾಗಿಯೋ ಇಲ್ಲವೇ ತುಸು ಉಪ್ಪು ಮತ್ತು ಹುಳಿ‌ ಹುಳಿಯಾಗಿಯೂ ಸೇವಿಸ ಬಹುದು.

ಒಂದು ಬಟ್ಟಲು ಸಿಹಿ ರಾಗಿ ಅಂಬಲಿ ತಯಾರಿಸಲು ಬೇಕಾಗುವ ಸಾಮಾನುಗಳು ಹೀಗಿವೆ.

  • 4 ಚಮಚ ರಾಗಿ ಹಿಟ್ಟು
  • 4 ಚಮಚ ಬೆಲ್ಲದ ಪುಡಿ (ಅಂಬಲಿ ಸಿಹಿಯಾಗಿ ಬೇಕಿದಲ್ಲಿ)ಗಮ್ಮನೆಂದು ಇರಲು ಏಲಕ್ಕಿ ಚಿಟಿಕೆ ಪುಡಿ
  • ಅರ್ಧ ಕಪ್ ಹಾಲು

ರಾಗಿ ಹಿಟ್ಟನ್ನು ಸಣ್ಣನೆಯ ಉರಿಯಲ್ಲಿ ಗಮ್ಮನೆ ವಾಸನೆ ಬರುವವರೆಗೂ ಹುರಿದುಕೊಳ್ಳಿ. ಹಿಟ್ಟು ತಣ್ಣಗಾದ ಮೇಲೆ ಒಂದು ದಪ್ಪನೆ ತಳದ ಪಾತ್ರೆಯಲ್ಲಿ, ಎರಡು ಲೋಟ ತಣ್ಣನೆ ನೀರಿನಲ್ಲಿ, ಹುರಿದ ರಾಗಿ ಹಿಟ್ಟನ್ನು ಹಾಕಿ ಗಂಟಿಲ್ಲದ ಹಾಗೆ ಕಲೆಸಿ‌ಕೊಳ್ಳಬೇಕು. ನಂತರ ಸಣ್ಣ ಉರಿಯಲ್ಲಿ ಅಂಬಲಿ ತೆಳು ಹದಕ್ಕೆ ಬರುವ ತನಕ ಕುದಿಸಿ, ಅದಕ್ಕೆ ಪುಡಿಮಾಡಿದ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ, ಅದು ತಣ್ಣಗಾದ ನಂತರ ನಮ್ಮ ಅಗತ್ಯಕ್ಕೆ ತಕ್ಕಷ್ಡು ಹಾಲನ್ನು ಸೇರಿಸಿದರೆ ರುಚಿಯಾದ ಸಿಹಿ ಅಂಬಲಿ ಸಿಧ್ದ.

ಒಂದು ಬಟ್ಟಲು ಹುಳಿ ಹುಳಿಯಾದ ಅಂಬಲಿಯನ್ನು ಮಾಡುವ ವಿಧಾನ

  • 4 ಚಮಚ ರಾಗಿ ಹಿಟ್ಟು
  • ರುಚಿಗೆ ತಕ್ಕಸ್ಟು ಉಪ್ಪು ಮತ್ತು ಕಾಳು‌‌ ಮೆಣಸಿನ‌ಪುಡಿ,
  • 1/2 ಚಮಚ ಹುರಿದು ಪುಡಿ ಮಾಡಿದ ಜೀರಿಗೆ ಪುಡಿ
  • 2 ಬಟ್ಟಲು ಮಜ್ಜಿಗೆ
  • ಅರ್ಧ ಸ್ಪೂನ್ ಹುಣಸೇಹಣ್ಣಿನ ಹುಳಿ
  • ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ಈರುಳ್ಳಿ ಮತ್ತು ಇನ್ನೂ ಹೆಚ್ಚಿನ ಖಾರ ಬೇಕಿದ್ದಲ್ಲಿ ಒಂದು ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ

ರಾಗಿ ಹಿಟ್ಟನ್ನು ಸಣ್ಣನೆಯ ಉರಿಯಲ್ಲಿ ಗಮ್ಮನೆ ವಾಸನೆ ಬರುವವರೆಗೂ ಹುರಿದುಕೊಳ್ಳಿ. ಹಿಟ್ಟು ತಣ್ಣಗಾದ ಮೇಲೆ ಒಂದು ದಪ್ಪನೆ ತಳದ ಪಾತ್ರೆಯಲ್ಲಿ, ಎರಡು ಲೋಟ ತಣ್ಣನೆ ನೀರಿನಲ್ಲಿ, ಹುರಿದ ರಾಗಿ ಹಿಟ್ಟನ್ನು ಹಾಕಿ ಗಂಟಿಲ್ಲದ ಹಾಗೆ ಕಲೆಸಿ‌ಕೊಳ್ಳಬೇಕು. ನಂತರ ಸಣ್ಣ ಉರಿಯಲ್ಲಿ‌ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು,‌ಜೀರಿಗೆ‌ ಪುಡಿ, ಕಾಳು‌ಮೆಣಸಿನ ಪುಡಿಯ ಜೊತೆಗೆ ಹುಣಸೇಹುಳಿ ಸೇರಿಸಿ, ಖಾರ ಬೇಕಿದ್ದಲ್ಲಿ ಹೆಚ್ಚಿದ ಮೆಣಸಿನಕಾಯಿ ಹಾಕಿ ಅಂಬಲಿ ತೆಳು ಹದಕ್ಕೆ ಬರುವ ತನಕ ಕುದಿಸಿ, ಅದು ತಣ್ಣಗಾದ ನಂತರ ನಮ್ಮ ಅಗತ್ಯಕ್ಕೆ ತಕ್ಕಷ್ಟು ಮಜ್ಜಿಗೆ ಬೆರೆಸಿ‌ ಈರುಳ್ಳಿಯ ಜೊತೆಗೆ ಸೇವಿಸಲು ಗಮ್ಮತ್ತಾಗಿರುತ್ತದೆ.

ಇತ್ತೀಚೆಗೆ ಮನೆಗಳಲ್ಲಿ ಈ ರೀತಿಯಾಗಿ ಅಂಬಲಿ‌‌‌ ಮಾಡದಿರುವ ಕಾರಣ ರಸ್ತೆಗಳಲ್ಲಿ ತಳ್ಳು ಗಾಡಿಗಳ‌ ಮೇಲೆ ಸುಲಭವಾಗಿ ‌ಕೈಗೆಟುಕುವ ಬೆಲೆಯಲ್ಲಿ ‌ಸಿಗುತ್ತದೆ.‌ ಇನ್ನು ಮಾವಿನಕಾಯಿ ಕಾಲದಲ್ಲಿ ಹುಳಿ‌ ಮಾವಿನಕಾಯಿ‌ ನೆಂಚಿಕೊಳ್ಳಲೂ ಬಹುದು.‌ ಕರಿದ‌ ಬಾಳಕದ(ಉಪ್ಪು‌ ಮೆಣಸಿನಕಾಯಿ)‌‌ ಜೊತೆಗೂ ಸೇವಿಸಲು ಮಜವಾಗಿರುತ್ತದೆ.

ಮೇಲೆ ತಿಳಿಸಿದ ಹಾಗೆ ನಮ್ಮ ನಮ್ಮ ಮನೆಗಳಲ್ಲಿ ಅಂಬಲಿ ತಯಾರಿಸಿ ಪ್ರತೀ ದಿನ ಬೆಳೆಗ್ಗೆ ಇಲ್ಲವೇ ರಾತ್ರಿ ಸೇವಿಸಿ ಆರೋಗ್ಯವಾಗಿರೋಣ. ಹಾಂ, ಇನ್ನೊಂದು ಹೇಳಲು‌‌‌ ಮರತೆ. ಅಂಬಲಿ ಚೆನ್ನಾಗಿ ಮಾಡಲು‌‌ ಕಲಿತ ಮೇಲೆ ನಮ್ಮನ್ನು ಕರೆದು ನಮಗೂ ರಾಗಿ ಅಂಬಲಿ ಕೊಡಲು ಮರೆಯದಿರಿ.

ಕರೀತೀರೀ ತಾನೇ?

ಏನಂತೀರೀ?

2 comments

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s