ದಿನಾ ಸಾಯುವವರಿಗೆ ಅಳುವವರು ಯಾರು?

ಬೆಂಗಳೂರು ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ನಗರ. ಜಗತ್ತಿನ ಎಲ್ಲ ಜನರೂ ವಾಸಿಸಲು ಬಯಸುವ ಮತ್ತು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕಛೇರಿಗಳನ್ನು ಹೊಂದಲು ಇಚ್ಚೆಪಡುವ ನಗರ. ಭಾರತದ ಸಿಲಿಕಾನ್ ಸಿಟಿ. ಸ್ಟಾರ್ಟ್ ಅಪ್ ಹಬ್. ಅತ್ಯಂತ ಹೆಚ್ಚಿನ ದ್ವಿಚಕ್ರವಾಹನಗಳು ಇರುವ ಊರು. ಹೀಗೆ ಒಂದೇ ಎರಡೇ ಬೆಂಗಳೂರನ್ನು ಹೊಗಳಲು ಹೊರಟರೇ ಪದಗಳೇ ಸಾಲದು.

ಒಂದು ಕಾಲದಲ್ಲಿ ಅತ್ಯಂತ ಹೆಚ್ಚಿನ ಕೆರೆ ಕಟ್ಟೆಗಳಿಂದ ಕೂಡಿ ಇಡೀ ಊರಿಗೆ ಊರೇ ಹಸಿರುಮಯವಾಗಿದ್ದ ಕಾಲವೊಂದಿತ್ತು. ಯಾವುದೇ ರೋಗಿಗಳು ಬೆಂಗಳೂರಿಗೆ ಬಂದರೆಂದರೆ ಅವರ ಎಲ್ಲಾ ರೀತಿಯ ಖಾಯಿಲೆಗಳೂ ಇಲ್ಲಿಯ ಹವಾಮಾನದ ಎದುರು ನಿಲ್ಲಲಾರದೇ ಕೆಲವೇ ಕೆಲವು ದಿನಗಳಲ್ಲಿ ಓಡಿ ಹೋಗಿಬಿಡುತ್ತಿತ್ತು. ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಅಂತಹ ದೊಡ್ಡ ಉದ್ಯಾನಗಳಲ್ಲದೇ ಪ್ರತೀ ಬಡವಾಣೆಗಳಲ್ಲಿಯೂ ಸಣ್ಣ ಪುಟ್ಟ ಉದ್ಯಾನಗಳು ಇದ್ದು ಬೆಂಗಳೂರು ಉದ್ಯಾನ ನಗರಿ ಎಂದೇ ಹೆಸರಾಗಿತ್ತು. ಬಹುತೇಕ ಬಡಾವಣೆಗಳಲ್ಲಿ ದೊಡ್ಡ ದೊಡ್ಡ ದೇವಾಲಯಗಳು, ಗಲ್ಲಿಗೊಂದಂತೆ ಇರುವ ಹೋಟೆಲ್ಗಳು ಎಲ್ಲರ ನಾಲಿಗೆಯ ಬರವನ್ನು ತಣಿಸುತಿದ್ದವು. ಐ.ಟಿ.ಐ. ಹೆಚ್.ಎಂ.ಟಿ, ಹೆಚ್.ಎ.ಎಲ್, ಬಿಇಎಲ್, ಮುಂತಾದ ಸರ್ಕಾರಿ ಸಾಮ್ಯದ ಕಾರ್ಖಾನೆಗಳು, ಟಾಟಾ ಇನಿಸ್ಟಿಟ್ಯೂಟ್, ರಾಮನ್ ಇನಿಸ್ಟಿಟ್ಯೂಟ್, CPRI, ADA, DRDO, GTRE, ಮುಂತಾದ ವೈಜ್ಞಾನಿಕ ಸಂಶೋಧನ ಕೇಂದ್ರಗಳು ಬೆಂಗಳೂರಿನ ಘನತೆಯನ್ನು ಹೆಚ್ಚಿಸಿದ್ದವು. ಎಲ್ಲದ್ದಕ್ಕೂ ಕಿರೀಟವಿಟ್ಟಂತೆ ಇಡೀ ರಾಷ್ಟದಲ್ಲಿ ಎಲ್ಲೂ ಇಲ್ಲದ ವಿಧಾನ ಸೌಧ, ರೈಲ್ವೇನಿಲ್ದಾಣ, ಅಂತರಾಜ್ಯ ಬಸ್ ನಿಲ್ದಾಣ ಮತ್ತು ಸ್ಥಳೀಯ ಬಸ್ ನಿಲ್ದಾಣ ಒಂದೇ ಜಾಗದಲ್ಲಿದ್ದದ್ದು ನಗರಕ್ಕೆ ಕಳಶ ಪ್ರಾಯವಾಗಿತ್ತು. ನಗರದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೆಲವೇ ಕೆಲವು ನಿಮಿಷಗಳಲ್ಲಿ ಹೋಗ ಬಹುದಾಗಿತ್ತು

ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ಎನ್ನುವಂತೆ, ನಿಧಾನವಾಗಿ ಎಲ್ಲವೂ ಮರೀಚಿಕೆಯಾಗ ತೊಡಗಿದವು. ಬೆಂಗಳೂರಿನ ನಿರ್ಮಾತ ಎಂದೇ ಖ್ಯಾತವಾಗಿರುವ ಕೆಂಪೇಗೌಡರು ನಗರದ ಹೊರವಲಯಗಳ ನಾಲ್ಕೂ ದಿಕ್ಕುಗಳಲ್ಲಿ ಗೋಪುರಗಳನ್ನು ಕಟ್ಟಿಸಿ ಬೆಂಗಳೂರು ನಗರ ಈ ಗೋಪುರಗಳ ಸಹರದ್ದು ಮೀರಿ ಬೆಳೆದರೆ ಕೇಡುಂಟಾಗುತ್ತದೆ ಎಂದಿದ್ದರಂತೆ. ಅಂದು ಹೊರವಲಯದಲ್ಲಿದ್ದ ಗೋಪುರಗಳು ಇಂದು ನಗರದ ಹೃದಯದ ಭಾಗವಾಗಿ,. ನಗರ ಅಡ್ಡಡ್ಡ ಉದ್ದುದ್ದವಾಗಿ ಎಗ್ಗಿಲ್ಲದೇ ಬೆಳೆಯುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಮೊವತ್ತು ವರ್ಷಗಳ ಹಿಂದೆ ಯೋಜನೆ ಮಾಡಿ, ಹತ್ತು ಹದಿನೈದು ವರ್ಷಗಳ ಹಿಂದೆ ಬೆಂಗಳೂರು ನಗರಾಭಿವೃಧ್ಧಿ ಪ್ರಾಧಿಕಾರ ನಿರ್ಮಿಸಿದ ಹೊರವಲಯದ ವರ್ತುಲ ರಸ್ತೆಗಳೇ ಇಂದು ಒಳವಲಯದ ರಸ್ತೆಗಳಾಗಿ ಮಾರ್ಪಟ್ಟಿರುವುದು ಅಪಾಯಕಾರಿಯಾಗಿದೆ.

ಇದರ ಜೊತೆಗೆ ಬೆಂಗಳೂರಿನ ಸಾರ್ವಜನಿಕ ವಾಹನದ ವ್ಯವಸ್ಥೆ ಅಷ್ಟಾಗಿ ಸಮರ್ಪಕವಾಗಿಲ್ಲದ ಕಾರಣ ಜನರು ತಮ್ಮ ಸ್ವಂತದ ವಾಹನಗಳನ್ನೇ ಅವಲಂಭಿಸಬೇಕಾಗಿದೆ, ಹಾಗಾಗಿ ಇಡೀ ಎಷ್ಯಾ ಖಂಡದಲ್ಲಿಯೇ ಅತ್ಯಂತ ಹೆಚ್ಚಿನ ದ್ವಿಚಕ್ರ ವಾಹನ ಹೊಂದಿರುವ ನಗರವೂ ನಮ್ಮದೇ. ಈ ರೀತಿಯಾಗಿ ಲಕ್ಷಾಂತರ ವಾಹನಗಳು ಏಕಕಾಲದಲ್ಲಿ ರಸ್ತೆಗಿಳಿಯುವ ಕಾರಣ ಎಲ್ಲೆಡೆಯಲ್ಲೂ ವಾಹನದ ದಟ್ಟಣೆಯಾಗಿ, ಅವುಗಳು ಉಗುಳುವ ಹೊಗೆಯ ಪರಿಣಾಮವಾಗಿ ಪರಿಸರ ಮಾಲಿನ್ಯ ಹೆಚ್ಚಾಗಿ ಹೋಗಿರುವುದು ಅತ್ಯಂತ ಕಳವಳಕಾರಿಯಾಗಿದೆ. ಇನ್ನು ರಸ್ತೆಗಳೋ,ಆದರ ಬಗ್ಗೆ ಮಾತನಾಡದಿರುವುದೇ ಒಳಿತು. ಯಾವುದೇ ಸರ್ಕಾರ ಬರಲಿ, ಆ ತೆರಿಗೆ, ಈ ತೆರಿಗೆ, ನಗರಾಭಿವೃದ್ಧಿಗೆ ಎಂದು ಪ್ರತೀ ವಾಹನ ಕೊಂಡಾಗಲೂ ಸಾವಿರಾರು ಏನು? ಲಕ್ಷಾಂತರ ಹಣವನ್ನು ಸುಲಿಗೆ ಮಾಡುತ್ತವೆಯೇ ಹೊರತು ರಸ್ತೆಗಳ ಅಭಿವೃದ್ದಿಯ ಬಗ್ಗೆ ಕಿಂಚಿತ್ತೂ ಗಮನ ಹರಿಸದಿರುವುದು ಬೇಸರದ ಸಂಗತಿಯಾಗಿದೆ. ಇತ್ತೀಚೆಗೇನೋ ವೈಟ್ ಟಾಪಿಂಗ್ ಹೆಸರಿನಲ್ಲಿ ಸುಮಾರಾಗಿಯೇ ಇದ್ದ ರಸ್ತೆಗಳಿಗೆ ಜನರು ತೆರಿಗೆ ಕಟ್ಟಿದ ಹಣದಿಂದ ಕೊಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೂ ರಸ್ತೆಗಳ ಅಭಿವೃಧ್ಧಿಯಾಗುವುದಕ್ಕಿಂದ ರಾಜಕಾರಣಿಗಳು ಮತ್ತು ರಸ್ತೆಯ ಕಂಟ್ರಾಕ್ಟರ್ಗಳು ಮಾತ್ರವೇ ಉದ್ದಾರವಾಗುತ್ತಿರುವುದು ಸ್ಪಷ್ಟವಾಗಿದೆ.

ಈ ರೀತಿಯ ಹದಗೆಟ್ಟ ರಸ್ತೆಗಳಲ್ಲಿ ಸಿಕ್ಕಿ ನಲುಗುವ ಸಾರ್ವಜನಿಕರ ಪಾಡನ್ನು ನಿಜಕ್ಕೂ ಹೇಳ ತೀರದಾಗಿದೆ. ಒಂದು ಕಿಮೀ ದೂರವನ್ನು ವಾಹನಗಳಲ್ಲಿ ಕ್ರಮಿಸಲು ಗಂಟೆಗಟ್ಟಲೆ ಹೆಚ್ಚೆ ನಮಸ್ಕಾರದಂತೆ ಆಮೆ ವೇಗದಲ್ಲಿ ಸಾಗಬೇಕಾದಂತಹ ದುಸ್ಥಿತಿ ಇಲ್ಲಿಯ ಜನರದ್ದಾಗಿದೆ. ಹೆಬ್ಬಾಳ, ಮೇಖ್ರೀಸರ್ಕಲ್, ಕೆ.ಆರ್. ಪುರಂ, ಮಾರತ್ ಹಳ್ಳಿ ಬ್ರಿಡ್ಜ್, ಸಿಲ್ಕ್ ಬೋರ್ಡ್ ಸರ್ಕಲ್ ಗಳನ್ನು ದಾಟುವುದು ದಿನದ ಇಪ್ಪನಾಲ್ಕು ಗಂಟೆಗಳೂ ಸಹಾ ನರಕ ಸದೃಶವಾಗಿದೆ. ಒಂದು ಸಣ್ಣ ಮಳೆಯೋ ಇಲ್ಲವೇ ಮಾರ್ಗದ ಮಧ್ಯದಲ್ಲಿ ಒಂದು ವಾಹನ ಏನದರೂ ಕೆಟ್ಟು ನಿಂತಿತೆಂದರೆ ಮೈಲು ಗಟ್ಟಲೆಯ ವಾಹನ ದಟ್ಟಣೆಯಾಗುವುದು ದಿನ ನಿತ್ಯವೂ ಖಾಯಂ ಆಗಿಹೋಗಿದೆ. ಇಷ್ಟರ ಮಧ್ಯೆ ಮೆಟ್ಟ್ರೋ ಹೆಸರಿನಲ್ಲಿಯೋ ಇಲ್ಲವೆ ಮೆಲ್ಸೇತುವೆ/ಕೆಳ ಸೇತುವೆ ನೆಪದಲ್ಲಿ ವರ್ಷಾನುಗಟ್ಟಲೆ ನಡೆಸುವ ಕಾಮಗಾರಿಗಳೂ ವಾಹನ ದಟ್ಟಣೆಗೆ ಉರಿಯೋ ಬೆಂಕಿಗೆ ತುಪ್ಪಾ ಸೇರಿಸುವಂತಿದೆ. . ಹೀಗೆ ವಾಹನ ಚಲಾವಣೆಯಲ್ಲಿಯೇ ರಸ್ತೆಗಳಲ್ಲಿ ಗಂಟೆ ಗಟ್ತಲೆ ಕಾಲ ಕಳೆಯಬೇಕಾದ ಕರ್ಮವಿರುವುದರಿಂದ ಇಲ್ಲಿಯ ಬಹುತೇಕ ಜನರು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹಿಗಳಾಗಿ ಹೋಗುತ್ತಿರುವುದು ಯೋಚಿಸ ಬೇಕಾದ ವಿಷಯವಾಗಿದೆ. ರಸ್ತೆಗಳಲ್ಲಿಯೇ ಗಂಟೆಗಟ್ಟಲೆ ಕಳೆಯುಬೇಕಾಗಿರುವುದರಿಂದ ಸರಿಯಾದ ಸಮಯಕ್ಕೆ ಕಛೇರಿಗೆ ಹೋಗಲು ಸಾಧ್ಯವಾಗದೇ, ಅಪ್ಪೀ ತಪ್ಪೀ ಮಾರ್ಗದ ಮಧ್ಯೆದಲ್ಲೇ ಇರುವಾಗ ಆಫೀಸಿನಿಂದ ಫೋನ್ ಬಂದ್ರೆ, ಕರೆ ತೆಗೆದುಕೊಂಡ್ವೀ ಅಂದ್ರೆ, ನಮ್ಮ ಗ್ರಹಚಾರ ಕೆಟ್ಟಿತೂ ಅಂತಾನೇ. ಫೋನಲ್ಲಿ ಮಾತಾಡುತ್ತಿರುವುದಕ್ಕೆ ಸಾವಿರಾರು ದಂಡ ತೆರಲೇ ಬೇಕು ಅದಲ್ಲದೇ, ಅಕ್ಕ ಪಕ್ಕದ ವಾಹನಗಳು ಉಜ್ಜಿಕೊಂಡು ಹೋದ್ರೂ ಗೊತ್ತಾಗೋದಿಲ್ಲ. ಕಳ್ಳಕಾಕರಿಗೆ ಈ ವಾಹನ ದಟ್ಟಣೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿ, ಹಾಡು ಹಗಲಲ್ಲೇ ವಾಹನ ದಟ್ಟಣೆಯ ಮಧ್ಯೆ ವಾಹನ ಸವಾರರನ್ನು ದೋಚುತ್ತಿದ್ದಾರೆ.

ಸಾಮಾನ್ಯವಾಗಿ ಎಲ್ಲರೂ ಒಂದು ಲೀಟರ್ ಪೆಟ್ರೋಲಿಗೆ ಎಷ್ಟು ಮೈಲೇಜ್ ಕೊಡುತ್ತದೆ.? ನಿಮ್ಮ ಗಾಡಿ ಎಂದು ಕೇಳುವುದು ಸಹಜವಾದ ಪ್ರಕ್ರಿಯೆ. ಆದರೆ ಇನ್ನು ಮುಂದೆ ಹಾಗೆ ಹೇಳುವ ಬದಲು ಒಂದು ಮೈಲಿಗೆ ಎಷ್ಟು ಲೀಟರ್ ಪೆಟ್ರೋಲ್ ಹಾಕಿಸ ಬೇಕು ? ಎಂದು ಕೇಳುವ ದುರ್ಗತಿ ಬಂದೊದಗಿದೆ.

WhatsApp Image 2019-10-24 at 11.53.28 PM
ಸಮಯ ಮತ್ತು ರಸ್ತೆ ಎರಡೂ ಎಷ್ಟೂ ಹೊತ್ತಾದರೂ ನಿಂತಲ್ಲೇ ನಿಂತಿರುತ್ತದೆ

ಇಷ್ಟೆಲ್ಲಾ ಅವ್ಯಸ್ಥೆಗಳಿಂದ ಕೂಡಿದ್ದರೂ ವಾಹನ ದಟ್ತಣೆಗೆ ಒಂದು ಶಾಶ್ವತ ಪರಿಹಾರವನ್ನು ಕೊಡಲು ಯಾವುದೇ ಸರ್ಕಾರವಾಗಲೀ ಪೋಲೀಸರಾಗಲೀ ಮುಂದಾಗದಿರುವುದು ನಿಜಕ್ಕೂ ಖಂಡನಾರ್ಹವಾಗಿದೆ. ಹೆಲ್ಮೇಟ್ ಹಾಕಿಲ್ಲಾ , ಹೆಡ್ ಲೈಟ್ ಸರಿಯಿಲ್ಲಾ, ಲೈಸೆನ್ಸ್ ಇಲ್ಲಾ ಇನ್ಷೂರೆನ್ಸ್ ಇಲ್ಲಾ ಎಂದೋ, ಇಲ್ಲವೇ ಆಮೇ ವೇಗದಲ್ಲಿ ಹೋಗುತ್ತಿದ್ದರೂ ಅತೀ ವೇಗವಾಗಿ ವಾಹನ ಚೆಲಾಯಿಸುತ್ತಿದ್ದೀರೀ ಎಂದು ಯಾವುದೋ ಮೂಲೆಯಲ್ಲಿ ನಾಲ್ಕೈದು ಪೋಲಿಸರು ನಿಂತು ಜನರಿಂದ ಸಾವಿರಾರು ರೂಪಾಯಿಗಳ ದಂಡವನ್ನು ಹಾಕುತ್ತಾರೆಯೇ ಹೊರತು, ರಸ್ತೆಗಳ ಮಧ್ಯೆ ನಿಂತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾದಿಕೊಡದಿರುವುದು ಅವರ ಕರ್ತವ್ಯ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ.

WhatsApp Image 2019-10-19 at 3.52.39 PM
ವಾಹನದಟ್ಟಣೆಯಲ್ಲಿ ರೇಡಿಯೇಟರ್ ಬಿಸಿಯಾಗಿದ್ದರೆ, ತಣ್ಣಗೆ ಮಾಡಿಕೊಳ್ಳಲು ರಸ್ತೆಗಳಲ್ಲಿಯೇ ತಣ್ಣೀರಿನ ಹಳ್ಳಗಳ ವ್ಯವಸ್ಥೆ

ಒಟ್ಟಿನಲ್ಲಿ ಒಂದಾ ಕಾಲದಲ್ಲಿ ಹೇಮಾಮಾಲಿನಿಯ ಕೆನ್ನೆಯಷ್ಟು ನುಣುಪಾಗಿದ್ದ ರಸ್ತೆಗಳು ಇಂದು ಗುಂಡಿಗಳ ಗೂಡಾಗಿದೆ. ಮುಂಚೆಲ್ಲಾ ರಸ್ತೆಗಳಲ್ಲಿ ಗುಂಡಿಗಳನ್ನು ನೋದಿಕೊಂಡು ವಾಹನ ಚಲಾಯಿಸ ಬೇಕಾಗಿತ್ತು. ಆದರೆ ಇಂದು ಅದರ ತದ್ವಿರುದ್ಧವಾಗಿ, ಗುಂಡಿಗಳ ಮಧ್ಯೆ ರಸ್ತೆಗಳನ್ನು ಹುಡುಕಿಕೊಂಡು ವಾಹನ ಚೆಲಾಯಿಸವೇಕಾಗಿ ಬಂದಿರುವುದು ನಿಜಕ್ಕೂ ನಮ್ಮ ದೌರ್ಭಾಗ್ಯವೇ ಸರಿ . ಅರೇ ಕೆಲವೇ ಕೆಲವು ವರ್ಷಗಳಲ್ಲಿ ಇಷ್ಟೊಂದು ಬದಲಾವಣೆ ಹೇಗಾಯಿತೆಂದು ತಿಳಿಯಲು ಹೊರಟರೆ ಸಿಕ್ಕ ಕಾರಣ ಅತ್ಯಂತ ಘನ ಫೋರಕರವಾದದ್ದು. ದನದಾಹಿ ಜನರುಗಳು ಪ್ರಕೃತಿಯ ಮೇಲೆ ಮಾಡಿದ್ದ ಎಗ್ಗಿಲ್ಲದ ಅತ್ಯಾಚಾರ ಎಂದರೂ ತಪ್ಪಾಗಲಾರದು. ಒಂದು ಕಾಲದಲ್ಲಿ ಉದ್ಯಾನ ನಗರಿ ಎಂದು ಖ್ಯಾತವಾಗಿದ್ದದ್ದು ಇಂದು ಅದ್ವಾನ ನಗರಿ ಎಂದೇ ಕುಖ್ಯಾತಿ ಪಡೆದಿದೆ ಎನ್ನುವುದು ನಮ್ಮ ದೌರ್ಭಾಗ್ಯವೇ ಸರಿ. ಜನರೂ ಸಹಾ ಇದರ ವಿರುದ್ಧ ಪ್ರತೀ ದಿನ ಒಂದಲ್ಲಾ ಒಂದು‌ ಕಡೆ ಪ್ರತಿಭಟನೆ ನಡೆಸಿದರೂ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಎನ್ನುವ ಹಾಗೆ ದಪ್ಪ ಚರ್ಮದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಯಾವುದೇ ಪರಿಹಾರವನ್ನು ಸೂಚಿಸದಿರುವುದು ನಿಜಕ್ಕೂ ದುಖಃದ ವಿಷಯವಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರವೇ ದಮ್ನಯ್ಯಾ, ಗುಡ್ಡಯ್ಯಾ, ಎನ್ನುತ್ತಾ ಜನರಿಗೆ ಕಣ್ಣೊರೆಸುವಂತೆ, ರಸ್ತೆಗಳಿಗೆ ಕಪ್ಪು ಸುಣ್ಣ ಬಳಿದಂತೆ ಡಾಂಬರ್ ಬಳಿಯುತ್ತಾರೆ. ಚುನಾವಣೆ ಮುಗಿದು ಮೂರೇ ಮೂರು ಆಗುವಷ್ಟರಲ್ಲಿಯೇ ಹಾಕಿದ ಡಾಂಬರ್ ಕಿತ್ತುಹೋಗಿ ಗುಂಡಿಗಳ ಆಗರ ಆಗಿ ಹೋದರೂ ಅದಕ್ಕೆ ತೇಪೆ ಹಾಕಲು ಮತ್ತೊಂದು ಚುನಾವಣಗೇ ಕಾಯ ಬೇಕಾದ ಅನಿವಾರ್ಯ ಪರಿಸ್ಥಿತಿ ನಮ್ಮದಾಗಿದೆ. ಒಟ್ಟಿನಲ್ಲಿ ದಿನಾ ಸಾಯುವವರಿಗೆ ಅಳುವವರು ಯಾರು ? ಎನ್ನುವಂತೆ ನಮ್ಮಂತಹವರ ಈ ಅಳಲನ್ನು ಯಾರೂ ಕೇಳುವವರೇ ಇಲ್ಲವಾಗಿದೆ.

ಅದ್ಯಾಕೋ ಏನೋ, ಬಿಬಿಎಂಪಿ, ಜಲ ಮಂಡಳಿ ಮತ್ತು ಕೆಇಬಿಯವರ ನಡುವೆ ಎಣ್ಣೆ ಸೀಗೇಕಾಯಿ ಸಂಬಂಧ. ಬಿಬಿಎಂಪಿ ಅವರು ಅತ್ತೂ ಕರೆದು ಅತ್ತೇ ಮನೆಯವರು ಔತಣ ಮಾಡಿದರೂ ಅನ್ನೋ ಹಾಗೆ ಡಾಂಬರ್ ಹಾಕಿದ ಮೂರೇ ದಿನಗಳೊಳಗೆ ಜಲ ಮಂಡಳಿ ಇಲ್ವೇ ಕೆಇಬಿಯವರು ರಸ್ತೆಯನ್ನು ಅಗದು ಹಾಕಿಬಿಡ್ತಾರೆ. ಈ ನಡುವೆ OFC & GAIL ಅವರೂ ಇವರ ಜೊತೆಗೆ ಸೇರಿಕೊಂಡು ಇರೋ ಬರೋ ರಸ್ತೆಗಳನ್ನು ಹಾಳು ಮಾಡಲು ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿರುವುದು ನಿಜಕ್ಕೂ ಶೋಚನೀಯ. ನಾವುಗಳು ನೀರು, ಒಳಚರಂಡಿ ಅಥವಾ ವಿದ್ಯುತ್ ಪಡೆಯಲು ರಸ್ತೆ ಅಗೆಯಬೇಕಾದರೆ ನೂರೆಂಟು ಷರತ್ತುಗಳನ್ನು ಹಾಕುವ ಮತ್ತು ಅದಕ್ಕೆ ನಮ್ಮಿಂದಲೇ ಸುಲಿಗೆ ಮಾಡುವೆ ಬಿಬಿಎಂಪಿ ಈ ಎಲ್ಲಾ ಸಂಸ್ಥೆಗಳ ಬಗ್ಗೆ ಜಾಣ ಕುರುಡು ಏಕೆ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಲೇ ಇದೆ.

ಓಳ್ಳೆಯ ರಸ್ತೆಗಳು ರಾಜ್ಯ ಮತ್ತು ದೇಶ ಅಭಿವೃದ್ಧಿಯ ಪಥಗಳು ಎಂದು ಮನಗಂಡ ನಮ್ಮ ಹಿಂದಿನ ಹೆಮ್ಮೆಯ ಪ್ರಧಾನಿಳಾಗಿದ್ದ      ದಿ. ಆಟಲ್ ಬಿಹಾರಿ ವಾಜಪೇಯಿಯವರು ಗ್ರಾಮ ಸಡಕ್ ಯೋಜನೆ, ಸುವರ್ಣ ಚತುರ್ಭುಜ ರಸ್ತೆಗಳ ಹೆಸರಿನಲ್ಲಿ ಸಾವಿರಾರು ಕಿ.ಮೀ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಿ ನಿಜಕ್ಕೂ ಪ್ರಾತಸ್ಮರಣೀಯರಾಗಿದ್ದಾರೆ. ಆದರೆ ಮುಂದೆ ಅಧಿಕಾರಕ್ಕೆ ಬಂದ ಸರ್ಕಾರಗಳು ಆ ಯೋಜನೆಯನ್ನು ಹಳ್ಳ ಹಿಡಿಸಿದ್ದು ನಿಜಕ್ಕೂ ದೇಶದ ಹಿನ್ನಡೆಯೇ ಸರಿ. ಪ್ರಸ್ತುತ ಸರ್ಕಾರ ಆ ನಿಟ್ಟಿನಲ್ಲಿ ಗುರುತರವಾದ ಪ್ರಗತಿಯನ್ನ್ನು ಸಾಧಿಸಿದ್ದರೂ, ಸಾಧಿಸುವುದು ಬಹಳವಿದೆ

WhatsApp Image 2019-10-24 at 11.56.51 PM

 

 

 

 

 

 

 

 

 

ರ್ಕಾರ ಸುಗಮ ಸಂಚಾರಕ್ಕೆ ಮತ್ತು ಅಪಘಾತ ತಡೆಯಲು ನೂರಾರು ರಸ್ತೆ ನಿಯಮಗಳನ್ನು ರೂಪಿಸುವುದರ ಜೊತೆಗೆ, ಸರಿಯಾದ ರಸ್ತೆಗಳನ್ನು ನಿರ್ಮಿಸಿದರೆ, ರಸ್ತೆಗಳ ಅಪಘಾತಗಳನ್ನೂ ತಡೆಯಬಹುದು ಮತ್ತು ಸಂಚಾರವೂ ಸುಗಮವಾಗಿರುತ್ತದೆಯಲ್ಲವೇ? ಜನರು ಸಂಚಾರಿ ನಿಯಮಗಳನ್ನು ಮೀರಿದರೆ ದಂಡ ವಿಧಿಸುತ್ತದೆ ಸರ್ಕಾರ. ಅದರೆ ರಸ್ತೆ ಅಭಿವೃದ್ಧಿಗೆಂದೇ ಲಕ್ಷಾಂತರ ಹಣವನ್ನು ವಾಹನ ಖರೀದಿಸುವಾಗ ನಮ್ಮಿಂದ ಹಣ ಪೀಕುವ ಮತ್ತು ಪ್ರತೀ ವರ್ಷವೂ ತೆರಿಗೆ ರೂಪದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸುವ ಅದೇ ಸರ್ಕಾರ, ರಸ್ತೆಗಳ ಅಭಿವೃಧ್ದಿಗೆ ಗಮನ ಹರಿಸದಿರುವುದಕ್ಕೆ ಯಾವ ಶಿಕ್ಷೆ ಕೊಡಬೇಕು? ಒಟ್ಟಿನಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರಾರು? ಎಂದು ತಿಳಿಯದಾಗಿದೆ.

ಏನಂತೀರೀ?

One thought on “ದಿನಾ ಸಾಯುವವರಿಗೆ ಅಳುವವರು ಯಾರು?

  1. ನಿಜವಾಗ್ಲೂ ಬೇಸರದ ಸಂಗತಿ ದಿನಕೊಂದು ಕಡೆ ಈ BBMP ಯವರೇ ಅಗಿಯುತ್ತಾರೆ ರೋಡ್ ಮಧ್ಯದಲ್ಲಿ ಒಂದು ಕೆರೆ ಎಂದರೆ ತಪ್ಪಾಗಲಾರದು

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s