ಜೀವ ಇರುವ ಪ್ರತೀ ವ್ಯಕ್ತಿಗೂ ಆಹಾರ ಅತ್ಯಾವಶ್ಯಕ. ಹಾಗಾಗಿ ಅವನ ಪ್ರತಿಯೊಂದು ಕಾರ್ಯಗಳೂ ತನ್ನ ಎರಡು ಹೊತ್ತಿನ ಆಹಾರವನ್ನು ಗಳಿಸುವ ನಿಟ್ಟಿನಲ್ಲಿಯೇ ಇರುತ್ತದೆ. ಅದನ್ನೇ ಪುರಂದರ ದಾಸರು ಅತ್ಯಂತ ಸರಳವಾಗಿ ಎಲ್ಲರೂ ಮಾಡುವುದು ಹೊಟ್ಟೆಗಾಗಿ. ಗೇಣು ಬಟ್ಟೆಗಾಗಿ ಎಂದು ತಿಳಿಸಿದ್ದಾರೆ.
ಹಿಂದೆಲ್ಲಾ ಮಳೆ ಬೆಳೆ ಇಂದಿಗಿಂತಲೂ ಚೆನ್ನಾಗಿ ಆಗುತ್ತಿದ್ದರೂ ಅದೇಕೋ ಹೊತ್ತು ಹೊತ್ತಿನ ಊಟಕ್ಕೆ ಬರವೇ. ಈಗಿನಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಹೊತ್ಟಿಗೆ ಹೊಟ್ಟೆ ತುಂಬುವ ಊಟ ಸಿಕ್ಕರೇ ಅದುವೇ ಅವರಿಗೆ ಮಹದಾನಂದ. ಕೆಲವೊಮ್ಮೆ ಅದೂ ಸಿಕ್ಕರೆ ಸಿಕ್ಕಿತು ಇಲ್ಲದಿದ್ದರೆ ಇಲ್ಲಾ ಎನ್ನುವ ಪರಿಸ್ಥಿತಿ. ಮನೆಗಳಲ್ಲಿ ಅನ್ನಪೂರ್ಣೆಯರು ಇದ್ದರೂ ಅನ್ನಕ್ಕೇಕೋ ಬರ. ಇಂತಹ ಬರವನ್ನು ನೀಗಿಸಲೆಂದೇ ಎಲ್ಲಾಕಡೆಗಳಲ್ಲಿ ಹುಟ್ಟಿಕೊಂಡದ್ದು ಖಾನಾವಳಿಗಳು ಇಲ್ಲವೇ ಊಟದ ಮನೆಗಳು.
ಈ ಖಾನಾವಳಿಗಳು ಮತ್ತು ಊಟದ ಮನೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ರುಚಿರುಚಿಯಾದ ತಿಂಡಿ ಪದಾರ್ಥಗಳು, ಮಧ್ಯಾಹ್ನ ಮತ್ತು ರಾತ್ರಿ ಊಟಗಳು ಕೈಗೆಟುಕುವ ಬೆಲೆಯಲ್ಲಿ ಸಿಗತೊಡಗಿದವು. ಆರಂಭದಲ್ಲಿ ಅವರು ಯಾರೂ ಲಾಭ ನಷ್ಟದ ಬಗ್ಗೆ ಚಿಂತಿಸದೆ, ನಾಲ್ಕು ಜನಗಿರ ಹಸಿವನ್ನು ನೀಗಿಸುವುದೇ ಒಂದು ಕಾಯಕ ಎಂದು ತಿಳಿದವರಾಗಿದ್ದರು. ಊಟ ಮಾಡಿ ಸಂತೃಪ್ತಗೊಂಡ ನಂತರ ಇಷ್ಟೇ ಕೊಡಬೇಕು ಮತ್ತು ಅಷ್ಟೇ ಕೊಡಬೇಕು ಎಂದು ಒತ್ತಾಯಿಸದೇ ಅವರು ಕೊಟ್ಟಷ್ಟನ್ನೇ ತೆಗೆದುಕೊಳ್ಳುತ್ತಿದ್ದರು. ಅವರು ಕೇಳುವುದಿಲ್ಲ ಎಂದು ನಮ್ಮ ಜನರೂ ಸುಮ್ಮನೆ ಪುಗಸಟ್ಟೆ ತಿನ್ನುತ್ತಿರಲಿಲ್ಲ. ಅವರ ಹಂಗೇಕೆ ಎಂದು ಯಥಾ ಶಕ್ತಿ ದಾರಾಳಿಗಳಾಗಿಯೇ ದುಡ್ಡು ಕೊಡುತ್ತಿದ್ದರು. ಒಟ್ಟಿನಲ್ಲಿ ಎಲ್ಲವೂ ನಂಬಿಕೆ ಮತ್ತು ಸಮನ್ವಯ ರೀತಿಯಲ್ಲಿ ನೆಡೆದುಕೊಂಡು ಹೋಗುತ್ತಿತ್ತೇ ಹೊರತು ಅದೊಂದು ವ್ಯಾಪಾರವಾಗಿರಲಿಲ್ಲ. ಎಷ್ಟೋ ಸಲಾ ಹಸಿದು ಬಂದವರಿಗೆ ಉಚಿತವಾಗಿಯೇ ಮೃಷ್ಟಾನ್ನ ಭೋಜನ ಬಡಿಸಿ ಕಳುಹಿಸಿದ ಉದಾಹರಣೆಗಳು ಸಾಕಷ್ಟಿದ್ದವು. ದೂರದ ಸಿಂಗಾಪೂರದಲ್ಲಿರುವ ಅನ್ನಪೂರ್ಣ ಎಂಬ ಭಾರತೀಯ ರೆಸ್ಟೋರೆಂಟಿನಲ್ಲಿ ಇಂದಿಗೂ ಊಟಕ್ಕೆ ಬೆಲೆ ಕಟ್ಟುವುದಿಲ್ಲ, ಜನ ತಮಗೆ ಏನು ಬೇಕೋ? ಎಷ್ಟು ಬೇಕೋ ತಿಂದ ನಂತರ ಅವರ ಮನಸ್ಸಿಗೆ ಇಷ್ಟ ಬಂದಷ್ಟು ಹಣವನ್ನು ಅಲ್ಲಿರುವ ಹುಂಡಿಯಲ್ಲಿ ಹಾಗಿದರೆ ಸಾಕು. ಹಣ ಕೊಡದೆ ಸುಮ್ಮನೇ ಹೋದರೋ ಅವರೇನು ಕೇಳುವುದಿಲ್ಲವಾದರೂ, ಇನ್ನೂ ನಂಬಿಕೆಗೆ ಬೆಲೆ ಇರುವ ಕಾರಣ, ಆ ರೆಸ್ಟೋರೆಂಟ್ ಇಂದಿಗೂ ಚೆನ್ನಾಗಿಯೇ ಕಾರ್ಯ ನಿರ್ವಹಿಸಿತುತ್ತಿದೆ
ಈ ರೀತಿಯಾದ ಊಟದ ವ್ಯವಸ್ಥೆ ಇದೆ ಎಂದು ಜನರೂ ಸಹಾ ಹುಚ್ಚಾಪಟ್ಟೆ ಅಲ್ಲಿಗೆ ಹೋಗದೇ, ಯಾರ ಮನೆಗಳಲ್ಲಿ ಆಹಾರವನ್ನು ತಯಾರಿಸಲು ಅನಾನುಕೂಲವೋ, ಇಲ್ಲವೇ ಯಾರಿಗೆ ಪ್ರತಿನಿತ್ಯ ಮನೆಯೂಟ ತಿಂದು ಬೇಜಾರಾಗಿ ನಾಲಿಗೆ ಬೇರೆ ರುಚಿಯನ್ನು ಬಯಸುತ್ತದೆಯೋ ಅಂತಹವರು, ಇಲ್ಲವೇ ಪರ ಊರಿನಿಂದ ಉಪಾಧ್ಯಾಯರಾಗಿಯೋ ಇಲ್ಲವೇ ಇತರೇ ಸರ್ಕಾರಿ ಕೆಲಸದ ನಿಮಿತ್ತವಾಗಿ ಬಂದವರು ಈ ರೀತಿಯ ಊಟದ ಮನೆ ಮತ್ತು ಖಾನಾವಳಿಗಳಲ್ಲಿ ತಮ್ಮ ನಾಲಿಗೆ ಬರವನ್ನು ಹೊಟ್ಟೆಯ ಹಸಿವನ್ನು ನಿವಾರಿಸಿ ಕೊಳ್ಳುತ್ತಿದ್ದರು. ಕ್ರಮೇಣ ಈ ರೀತಿಯ ಪದ್ದತಿ ಎಲ್ಲೆಡೆಯಲ್ಲಿಯೂ ಪ್ರಖ್ಯಾತವಾಗುತ್ತಾ ಹೋಗುತ್ತಾ ಹೋಟೆಲ್ಎಂಬುದು ಒಂದು ದೊಡ್ದ ಉದ್ಯಮವೇ ಆಗಿ ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ದೊರಕಿಸಿಕೊಟ್ಟಿತಲ್ಲದೆ ಲಕ್ಷಾಂತರ ಜನರ ಹಸಿವನ್ನು ನೀಗಿಸತೊಡಗಿದವು.
ಮನೆಗಳಲ್ಲಿ ನೆಲದ ಮೇಲೆ ಕುಳಿತು ಊಟಮಾಡುತ್ತಿದ್ದವರು ಕ್ರಮೇಣ ನೆಲದಿಂದ ಟೇಬಲ್ ಮತ್ತು ಖುರ್ಚಿಗಳಿಗೆ ಭಢ್ತಿ ಹೊಂದಿದರು. ಅಲ್ಲಿ ಮಾಡಿಟ್ಟಿದ್ದನ್ನು ತಿಂದು ಹೋಗುತ್ತಿದ್ದವರು, ಈಗ ತಮಗೆ ಏನು ಬೇಕೋ ಅದನ್ನು ಕೇಳಿ ಮಾಡಿಸಿಕೊಂಡು ತಿನ್ನುವಷ್ಟರ ಮಟ್ಟಿಗೆ ಬೆಳೆದು ಬಂದಿದ್ದರು. ಹೊಟೇಲ್ಗಳು ಐಶಾರಾಮ್ಯವಾಗ ತೊಡಗಿದವು. ಪಂಚತಾರ ಹೋಟೆಲ್ಗಳಾಗಿ ಪರಿವರ್ತಿತವಾಗಿ ಊಟಕ್ಕಿಂತ ನೋಟಕ್ಕೇ ಪ್ರಧಾನ್ಯತೆ ಹೊಂದ ತೊಡಗಿದಾಗಿ ಮೂಲ ಉದ್ದೇಶವೇ ಬದಲಾಗಿ ದುಬಾರಿಯಾಗ ತೊಡಗಿದಾಗ ಜನರು ಈ ಹೋಟೆಲ್ಗಳಿಂದ ವಿಮುಖರಾಗ ತೊಡಗಿದಾಗಲೇ ಹುಟ್ಟಿಕೊಂಡಿದ್ದೇ ದರ್ಶಿನಿ ಹೋಟೆಲ್ಗಳು.
ಬಸವನ ಗುಡಿಯಲ್ಲಿ ಉಪಹಾರ ದರ್ಶಿನಿ ಎಂಬ ಹೆಸರಿನಲ್ಲಿ ಶುಚಿ ರುಚಿಯಾದ ಊಟಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ತ್ವರಿತವಾಗಿ ಎಲ್ಲರಿಗೂ ಸಿಗುವಂತೆ ಲಭ್ಯವಾಯಿತೂ ಅಲ್ಲಿಂದ ಈ ರೀತಿಯ ದರ್ಶಿನಿಗಳು ಗಲ್ಲಿ ಗಲ್ಲಿಗೊಂದಂತೆ ನಾಯಿಕೊಡೆಗಳಂತೆ ಹುಟ್ತುಕೊಂಡವು. ಜನಾ ಇಲ್ಲಿ ಆರಾಮವಾಗಿ ಬಂದು ಕುಳಿತುಕೊಂಡು ನಿಧಾನವಾಗಿ ತಮಗೆ ಏನು ಬೇಕೋ ಅದನ್ನು ಆರ್ಡರ್ ಮಾಡಿ ಊಟ ತಿಂಡಿ ಮಾಡಲು ಸಾಧ್ಯವಿರಲಿಲ್ಲ. ಇಲ್ಲಿ ಬಂದವರೆಲ್ಲರೂ ಸ್ವಸಹಾಯ ಪದ್ದತಿಯಲ್ಲಿ ಅಲ್ಲಿ ಏನು ಲಭ್ಯವಿರುತ್ತದೆಯೋ ಅದನ್ನು ಮುಂಗಡವಾಗಿ ಟೋಕನ್ ಪಡೆದು, ನಿಂತು ಕೊಂಡೇ ಗಬಗಬನೆ ತಿಂದು, ಸೊರ ಸೊರನೇ ಕಾಫೀ/ಟೀ ಹೀರಿ ಲಗುಬಗನೇ ಓಡತೊಡಗಿದರು.
ಕ್ರಮೇಣ ಈ ದರ್ಶಿನಿ ಹೋಟೆಲ್ಗಳು ಫಾಸ್ಟ್ ಫುಡ್ ಗಳಾಗಿ ಮಾರ್ಪಾಟಗತೊಡಗಿದವು. ಬೆಳಗಿನ ಹೊತ್ತು ನಮ್ಮ ಸಂಪ್ರದಾಯಿಕ ತಿಂಡಿಗಳಾದ ಉಪ್ಪಿಟ್ಟು, ದೋಸೆ, ಇಡ್ಲಿ, ಪೂರಿಗಳಾದರೆ ಸಂಜೆ ಹೊತ್ತು, ಪಾನಿಪೂರಿ, ಮಸಾಲೆ ಪೂರಿ, ಬೇಲ್ ಪೂರಿ, ನೂಡಲ್ಸ್, ಫ್ರೈಡ್ ರೈಸ್ ಮತ್ತು ತರತರಹದ ಮಂಚೂರಿಯನ್ಗಳು ಒಂದೆಡೆಯಾದರೇ ಪಿಡ್ಜಾ, ಬರ್ಗರ್ ಅವರ ಹಾವಳಿ ಮತ್ತೊಂದು, ಈ ದಿಢೀರ್ ಆಹಾರಗಳು ಜನರ ನಾಲಿಗೆಯ ರುಚಿಯನ್ನು ತಣಿಸುತ್ತಿತ್ತಾದರೂ, ಆಹಾರ ಸಂಪೂರ್ಣವಾಗಿ ಬೆಂದಿರದ ಕಾರಣ, ಮತ್ತು ಇಲ್ಲಿಯ ಪರಿಸರಕ್ಕೆ ಸರಿಯಾಗಿ ಹೊಂದದಿರುವ ಕಾರಣ ಜೀರ್ಣವಾಗದೆ ಆರೋಗ್ಯಕ್ಕೆ ಮಾರಕವಾಗುತ್ತಾ , ಜನಾ ನಿಧಾನವಾಗಿ ಸ್ಥೂಲಕಾಯರಾಗ ತೊಡಗಿದರು.
ಯಾವಾಗ ಜನಾ ಮನೆಯಿಂದ ಹೊರಗೆ ನಡೆಯಲು ಸಾಧ್ಯವಾಗಲಿಲ್ಲವೋ, ಆಗ ಮನೆಗೇ ಆಹಾರವನ್ನು ಯಾರಾದರೂ ತಲುಪಿಸಿದರೆ ಚೆನ್ನಾಗಿರುತ್ತದೆ ಎಂದು ಯೋಚಿಸುತ್ತಿರುವಾಗಲೇ ಹುಟ್ಟುಕೊಂಡಿದ್ದೇ ಈ Swiggy & Zomato ಮುಂತಾದ ಕಂಪನಿಗಳು. ಒಂದಷ್ಟು ಬುದ್ಧಿವಂತ ಜನಾ ಆಧುನಿಕ ತಂತ್ರಜ್ಞಾನವನ್ನು ಬಳೆಸಿಕೊಂಡು ಸಾಫ್ಟ್ವೇರ್ ಸಿದ್ಧ ಪಡಿಸಿ ಸುತ್ತಮುತ್ತಲಿನ ಹೋಟೆಲ್ಗಳನ್ನು ಅವರ ಜಾಲದಲ್ಲಿ ಅಳವಡಿಸಿಕೊಂಡು ಜನರು ತಮ್ಮ ಮೊಬೈಲ್ ಆಪ್ಗಳ ಮೂಲಕ ತಮಗೆ ಏನು ಬೇಕೋ ಅದನ್ನು ತಮ್ಮ ಮೊಬೈಲ್ಗಳ ಮೂಲಕವೇ ಅರ್ಡರ್ ಮಾಡಿದಲ್ಲಿ , ನಿಗಧಿತ ಸಮಯದಲ್ಲಿ ನಿಗಧಿತ ಸ್ಥಳಕ್ಕೆ ಬಂದು ತಲುಪತೊಡಗಿದವು. ಈ ರೀತಿಯ ವ್ಯವಸ್ಥೆ ಹೋಟೆಲ್ ಉದ್ಯಮಿಗಳಿಗೆ ಒಂದು ರೀತಿಯ ವರದಾನವೇ ಆಯಿತು. ತಮ್ಮ ಆಹಾರಗಳು ಬಹುಜನರಿಗೆ ಸುಲಭವಾಗಿ ಯಾವುದೇ ಹೆಚ್ಚಿನ ಖರ್ಚಿಲ್ಲದೇ ತಲುಪತೊಡಗಿದವ. ಹೋಟೆಲ್ಗಳಿಂದ ಆಹಾರವನ್ನು ಪಡೆದುಕೊಂಡು ಎಲ್ಲರ ಮನೆಗಳಿಗೂ ತಲುಪಿಸುವ ವ್ಯವಸ್ಥೆಯಿಂದಾಗಿ ಸಾವಿರಾರು ಯುವಕರಿಗೆ ಕೆಲಸ ಸಿಕ್ಕಿತು. ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಈ ರೀತಿಯ ಪಾರ್ಟ್ ಟೈಮ್ ಕೆಲಸಗಳಿಂದ ಕೈತುಂಬಾ ಸಂಪಾದನೆ ಮಾಡುತ್ತಾ , ಕೆಲವೇ ಕೆಲವು ವಿದ್ಯಾಸಕ್ತ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಉದ್ದಾರವಾದರೆ, ಬಹುತೇಕ ಯುವಕರು ಸುಲಭವಾಗಿ ಸಿಕ್ಕುವ ಹಣದಿಂದ ಹಾದಿ ತಪ್ಪಿದ್ದೇ ಅಧಿಕ.
ಆಹಾರ ಉದ್ಯಮದಲ್ಲಿ ಈ ರೀತಿಯಾಗಿ ಕ್ರಾಂತಿಕಾರಿ ಬದಲಾವಣೆಯಾಗ ತೊಡಗಿದರೆ ಮನೆಗಳಲ್ಲಿಯೂ ಇದರ ಪರಿಣಾಮ ವ್ಯತಿರಿಕ್ತವಾಗತೊಡಗಿತು ಮನೆಗಳಲ್ಲಿ ಕುಟ್ಟುವುದು, ರುಬ್ಬುವುದು, ಒಗ್ಗರಣೆ ಹಾಕುವುದು ಕ್ರಮೇಣ ಮಾಯವಾಗ ತೊಡಗಿತು. ಒಂದು ಕಾಲದಲ್ಲಿ ಮನೆಯ ಹೆಂಗಳೆಯರು ಹುಳಿ ಪುಡಿ, ಸಾರಿನ ಪುಡಿ, ಚಟ್ನೀಪುಡಿ, ಮೆಂತ್ಯದ ಹಿಟ್ಟು, ಹಪ್ಪಳ ಸಂಡಿಗೆ, ಬಾಳಕ, ಪುಳಿಯೋಗರೆ ಗೊಜ್ಜನ್ನು ಮನೆಗಳಲ್ಲಿಯೇ ಬಿಡುವಿನ ಸಮಯದಲ್ಲಿ ತಯಾರಿಸುತ್ತಿದ್ದವರು ನೋಡ ನೋಡುತ್ತಿದ್ದಂತೆಯೇ, MTR ಪುಳಿಯೋಗರೆ ತರಿಸಲು ಶುರುಮಾಡಿಬಿಟ್ಟರು. ಇನ್ನು ಒತ್ತು ಶ್ಯಾವಿಗೆ ಮಾಡುವುದನ್ನೇ ಮರೆತು ಎಲ್ಲರೂ Instant Noodles ಮೋರೆ ಹೋಗಿಬಿಟ್ತಿದ್ದು ನಿಜಕ್ಕೂ ದುಃಖಕರವೇ ಸರಿ.
ಇನ್ನು ಹಬ್ಬಹರಿದಿನಗಳು ಬಂದರೆ ಶ್ರದ್ಧಾ ಭಕ್ರಿಯಿಂದ ಮಡಿಯಿಂದ ನಾನಾ ರೀತಿಯ ಭಕ್ಷ ಭೋಜನಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡುವುದು ನಮ್ಮ ಸಂಪ್ರದಾಯ. ಆದರೆ ಈಗ ಬಹುತೇಕರ ಮನೆಗಳಲ್ಲಿ ಆ ರೀತಿಯ ಎಲ್ಲಾ ಸಂಪ್ರದಾಯಗಳಿಗೂ ತಿಲಾಂಜಲಿ ಕೊಟ್ಟು ಬಹುತೇಕ ಸಮಯಗಳಾಗಿಬಿಟ್ಟಿದೆ. ದೇವರ ನೈವೇದ್ಯಕ್ಕೆ, ಮೋದಕ, ಕಡುಬು, ಒಬ್ಬಟ್ಟು ಎಲ್ಲವೂ ಸಿದ್ಧವಾಗಿಯೇ ಸಿಗುತ್ತದೆ. ಆಯಾಯಾ ಹಬ್ಬಗಳ ಅನುಗುಣವಾಗಿ ಹಬ್ಬದ ಅಡುಗೆಗಳನ್ನೇ ಮಾಡಿಕೊಡಲು ನೂರಾರು ಜನರು ಸಿದ್ಧರಿರುವಾಗ ಬಹುತೇಕ ಮನೆಗಳಲ್ಲಿ ಹಬ್ಬದ ದಿನ ಹಚ್ಚದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಈ ಹಿಂದೆ ಮದುವೆಗೆ ಮುನ್ನ ಹೆಣ್ಣು ನೋಡಲು ಬಂದಾಗ, ಹುಡುಗೀಗೆ ಅಡುಗೆ ಬರುತ್ತದೆಯೇ? ಎಂಬ ಪ್ರಶ್ನೆ ಸಹಜವಾಗುತ್ತಿತ್ತು. ಓ ನಮ್ಮ ಹುಡುಗಿ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾಳೆ. ನೀವೀಗ ತಿಂದ ಉಪ್ಪಿಟ್ಟು (ಆಕೆ ಮಾಡದಿದ್ದರೂ ಸಹಾ) ಕೇಸರಿ ಬಾತ್ ಆಕೆಯೇ ಮಾಡಿದ್ದು. ನಮ್ಮ ಹುಡುಗೀಗೆ ಆಡುಗೆ, ಹಾಡು ಹಸೆ ಎಲ್ಲವನ್ನೂ ಕಲಿಸಿದ್ದೇವೆ ಎಂದು ಹೆಮ್ಮೆಯಿಂದ ಕನ್ಯಾಪಿತೃಗಳು ಹೇಳುತ್ತಿದ್ದರು. ಈಗ ಅ ರೀತಿಯ ಹೆಣ್ಣು ಗಂಡು ನೋಡುವ ಸಂಪ್ರದಾಯವೂ ಯಾವುದೋ ಒಂದು ಹೋಟಲಿನ್ನಲ್ಲಿಯೋ ಇಲ್ಲವೇ ಕಾಫೀ ಬಾರ್ ಗಳಲ್ಲಿ ಆಗುತ್ತಿರುವ ಕಾರಣ ಮತ್ತು ಬಹುತೇಕ ಹೆಣ್ಣು ಮಕ್ಕಳಿಗೆ ಅಡುಗೆ ಬಾರದಿರುವ ಕಾರಣ ಆ ರೀತಿಯ ಸಂಪ್ರದಾಯ ಮತ್ತು ಆ ಪ್ರಶ್ನೆಗಳು ಮಾಯವಾಗಿಯೇ ಹೋಗಿದೆ.
ಹೌದು ನಿಜ. ಅಡುಗೆ ಎನ್ನುವುದು ಸುಲಭದ ಕೆಲಸವಲ್ಲ. ಅದಕ್ಕೆ ತಾಳ್ಮೆ ಬೇಕು ಮತ್ತು ಸಮಯಪ್ರಜ್ಞೆ ಬೇಕು. ಯಾವ ಯಾವ ಪದಾರ್ಧಗಳನ್ನು ಎಷ್ಟೆಷ್ಟು ಮತ್ತು ಹೇಗೆ ಬೆಳೆಸಿದಲ್ಲಿ ರಸಗವಳ ಸಿದ್ದಪಡಿಸಬಹುದೆಂಬ ಕಲೆಯನ್ನು ಕೈವಶ ಮಾಡಿಕೊಳ್ಳಬೇಕು. ಆದರೆ ನಿಜ ಹೇಳುತ್ತೇನೆ. ಒಮ್ಮೆ ಮನಸ್ಸಿಟ್ಟು ಅಡುಗೆ ಮಾಡಲು ಹೊರಟಲ್ಲಿ ಆ ಕಲೆ ತಾನಾಗಿಯೇ ಒಲಿದುಬಿಡುತ್ತದೆ. ಮನೆಯವರೆಲ್ಲರ ಮನಗಳನ್ನು ಗೆಲ್ಲಬಹುದಾದ ಏಕೈಕ ಅಸ್ತ್ರವೇ ತಿಂಡಿ ಅಡುಗೆ. ಅಮ್ಮನ ಕೈ ರುಚಿಯ ಮುಂದೆ ಜಗತ್ತಿನ ಯಾವುದೇ ಅಡುಗೆಗಳನ್ನು ನೀವಾಳಿಸಿ ಹಾಗಬಹುದು. ಕೇವಲ ಹಾಸ್ಟೆಲ್ಲಿನಲ್ಲಿ ಓದುವ ಮಕ್ಕಳಿಗೆ ಮತ್ತು ಮನೆಯಿಂದ ದೂರವಿದ್ದು ಹೊರ ಊರಿನಲ್ಲಿ ಕೆಲಸಮಾಡುವವರಿಗೆ ಮಾತ್ರವೇ ಮನೆ ಊಟದ ಮಹತ್ವ ತಿಳಿದಿರುತುತ್ತದೆ, ಹಾಗಾಗಿ ಸಾಧ್ಯವಾದಷ್ಟು ಹೊರಗಿನ ಊಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡದೆ, ಉಪ್ಪು ಗಂಜಿಯಾಗಲೀ, ಮೊಸರನ್ನವೇ ಆಗಲೀ ಮನೆಯಲ್ಲಿಯೇ ಮಾಡಿಕೊಂಡು ತಿನ್ನೋಣ. ಆರೋಗ್ಯವಾಗಿರೋಣ.
ಏನಂತೀರೀ?
Very nicely & elaborately narrated Shri…
Hats off to you…🙏
LikeLike
ಧನ್ಯೋಸ್ಮಿ
LikeLike
Pls write about difference between traditional food v/s dominos and pizza .
LikeLike
ಖಂಡಿತವಾಗಿಯೂ ಮುಂದೊಂದು ದಿವಸ ಅದರ ಕುರಿತು ಬರೆಯುತ್ತೇನೆ. ನಿಮ್ಮ ಸಲಹೆಗೆ ಧನ್ಯವಾದಗಳು
LikeLike