ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯ, ಹೆಡತಲೆ

ನಂಜನಗೂಡಿನಿಂದ ಚಾಮರಾಜ ನಗರದ ಕಡೆ ಸುಮಾರು 10 ಕಿಮೀ ನಷ್ಟು ದೂರ ಕ್ರಮಿಸಿದರೆ ಬದನವಾಳು ಎಂಬ ಗ್ರಾಮಕ್ಕೆ ತಲುಪಿ ಅಲ್ಲಿಂದ ಬಲಕ್ಕೆ ತಿರುಗಿದಲ್ಲಿ ದೊಡ್ಡದಾದ ಶ್ರೀ ಕೌಂಡಿನ್ಯ ಮಹರ್ಷಿ ಕ್ಷೇತ್ರ ಸಂತಾನ ವೇಣುಗೋಪಾಲಸ್ವಾಮಿ ದೇವಾಲಯ, ಹೆಮ್ಮರಗಾಲ ಎಂಬ ಕಮಾನು ನಮ್ಮನ್ನು ಸ್ವಾಗತಿಸುತ್ತದೆ. ಆ ಕಮಾನನ್ನು ದಾಟಿ ಕೇವಲ 2.5 ಕಿಮೀ ದೂರ ಕ್ರಮಿಸಿದರೆ ಸಿಗುವುದೇ ಅತ್ಯಂತ ಪುರಾಣ ಪ್ರಸಿದ್ಧ ಹೆಡೆತಲೆ ಎಂಬ ಗ್ರಾಮದ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯ.

ದ್ವಾಪರಯುಗದಲ್ಲಿ ಕೌಂಡಿನ್ಯ ಋಷಿಗಳು ಈ ಪ್ರದೇಶದಲ್ಲಿ ತಮ್ಮ ಆಶ್ರಮ ಕಟ್ಟಿಕೊಂದು ತಪಸ್ಸು ಮಾಡುತ್ತಿದ್ದರು. ಅಲ್ಲೊಬ್ಬ ರಾಕ್ಷಸ ಅವರ ತಪಸ್ಸನ್ನು ಭಂಗ ಮಾಡುತ್ತಿದ್ದಲ್ಲದೇ, ಊರ ಜನರಿಗೂ ಬಹಳವಾಗಿ ತೊಂದರೆ ಕೊಡುತ್ತಿದ್ದನಂತೆ. ಆ ರಾಕ್ಷಸನ ಹಾವಳಿಯಿಂದ ಎಲ್ಲರನ್ನೂ ಪಾರು ಮಾಡೆಂದು ಕೌಂಡಿನ್ಯರು ಲಕ್ಷ್ಮೀಕಾಂತ ಸ್ವಾಮಿಯ ಮೊರೆ ಹೊಕ್ಕರಂತೆ. ಭಗವಂತ ಆ ಅಸುರನ್ನು ನಿಗ್ರಹಹಿಸುವಾಗ ಆತನ ತಲೆ ಎಡಭಾಗಕ್ಕೆ ಈ ಪ್ರದೇಶದಲ್ಲಿ ಬಿದ್ದ ಕಾರಣ ಈ ಊರಿಗೆ ಎಡತಲೆ ಎಂಬ ಹೆಸರಾಗಿ ಮಂದೆ ಅದು ಜನರ ಆಡು ಭಾಷೆಯಲ್ಲಿ ಹೆಡತಲೆ ಎಂದು ಆಯಿತು. ರಾಕ್ಷಸನ ಹೆಮ್ಮರದಂತಹ ಕಾಲು ಇಲ್ಲಿಂದ ಸುಮಾರು 2.5 ಕಿಮೀ ದೂರದಲ್ಲಿದ ಹೇಮಪುರಿ ಎಂಬ ಜಾಗದಲ್ಲಿ ಬಿದ್ದಾಗ ಆ ಪ್ರದೇಶ ಹೆಮ್ಮರಗಾಲ ಎಂದು ಪ್ರಸಿದ್ಧವಾಯಿತು. ಅಲ್ಲಿ ಕೌಂಡಿನ್ಯ ಮಹರ್ಷಿಗಳಿಂದ ಸ್ಥಾಪಿತವಾದ ಸಂತಾನ ಗೋಪಾಲಸ್ವಾಮಿಯ ದೇವಾಲಯವಿದೆ. ತಲೆ ಬಿದ್ದ ಜಾಗಕ್ಕೂ ಕಾಲು ಬಿದ್ದ ಜಾಗಕ್ಕೂ ಸರಿ ಸುಮಾರು 2.5 ಕಿಮೀ ದೂರದ ಅಂತರವಿತ್ತೆಂದರೆ ಆ ರಾಕ್ಷಸ ಎಷ್ಟು ಅಗಾಧವಾಗಿದ್ದ ಎಂಬುದರ ಅರಿವಾಗುತ್ತದೆ.

ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿ ಸುಮಾರು 800 ವರ್ಷಗಳ ಕಾಲದ ಹಿಂದೆ ನಿರ್ಮಿಸಲಾಗಿರುವ ಹೆಡತಲೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಸ್ಥಾನದಲ್ಲಿ ಮೂರು ದೇವರುಗಳನ್ನು ಒಟ್ಟೊಟ್ಟಿಗೆ ಪ್ರತಿಷ್ಟಾಪಿಸಿರುವ ಕಾರಣ ಇದನ್ನು ತ್ರಿಕೂಟಾಚಲ ಎಂದೂ ಪ್ರಸಿದ್ಧಿಯಾಗಿದೆ. ಈ ದೇವಾಲಯವನ್ನು ಕ್ರಿ.ಶ. 1292 ರಲ್ಲಿ 3ನೇ ಬಲ್ಲಾಳ ಕಟ್ಟಿಸಿದನೆಂದು ತಿಳಿದವವರು ಹೇಳುತ್ತಾರೆ. ಇಲ್ಲಿರುವ ಮೂರು ಗರ್ಭಗುಡಿಗಳಲ್ಲಿಯೂ ಕರೀ ಶಿಲೆಯಲ್ಲಿ ನಿರ್ಮಿಸಿರುವ , ಪೂರ್ವಾಭಿಮುಖವಾಗಿರುವ ಮೂಲಗರ್ಭ ಗುಡಿಯಲ್ಲಿ ಶ್ರೀ ಲಕ್ಷ್ಮೀಕಾಂತಸ್ವಾಮಿಯವರ ವಿಗ್ರಹವಿದ್ದರೆ ಅದರ ಎಡ ಭಾಗದಲ್ಲಿ ದಕ್ಷಿಣಾಭಿಮುಖವಾಗಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮತ್ತು ಉತ್ತರಾಭಿಮುಖವಾಗಿ ಅದರ ಎದುರಿನಲ್ಲಿಯೇ, ಶ್ರೀ ವೇಣುಗೋಪಾಲಸ್ವಾಮಿಯ ಸುಂದರ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗಿದೆ. ಈ ಮೂರು ದೇವರುಗಳಲ್ಲದೆ ಮೂಲ ದೇವರ ಎಡ ಭಾಗದಲ್ಲಿ ಆಂಡಾಳ್‌ ದೇವಿಯ ವಿಗ್ರಹವಿದ್ದರೆ ಅದರ ಪಕ್ಕದಲ್ಲಿ ದಕ್ಷ್ಣಿಣಾಭಿಮುಖವಾಗಿ ಆಚಾರ್ಯರುಗಳ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. ಇಲ್ಲಿನ ಆಂಡಾಳ್ ಅಮ್ಮನವರ ವಿಗ್ರಹ ತುಂಬಾ ಸೊಗಸಾಗಿದ್ದು, ಅರ್ಚಕರು ಮಂಗಳಾರತಿ ಮಾಡುವಾಗ, ಆರತಿಯ ತಟ್ಟೆಯನ್ನು ಅಮ್ಮನವರ ಹಣೆಯಿಂದ ಕೆಳಗೆ ನಿಧಾನವಾಗಿ ತಂದಾಗ, ದೇವಿಯ ಕಣ್ಣುಗಳು ಕಾಂತಿಯುತವಾಗಿ ಹೊಳೆಯುತ್ತವೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಮಂಗಳಾರತಿಯತ್ತವೇ ಕಣ್ಣುಗಳು ಹೊರಳುತ್ತವೆ ಎಂದೂ ಹೇಳುತ್ತಾರೆ. ಬೇರೆ ದೇವಸ್ಥಾನಗಳಿಗೆ ಗಡಿಬಿಡಿಯಲ್ಲಿ ಹೋಗಿ ದೇವರ ದರ್ಶನ ಮಾಡಿ ಮಂಗಳಾರತಿ ತೆಗೆದುಕೊಂಡಂತೆ ಈ ದೇವಸ್ಥಾನದಲ್ಲಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಪ್ರಸ್ತುತ ಇಲ್ಲಿರುವ ಅರ್ಚಕರು ಬಹಳ ತಾಳ್ಮೆಯಿಂದ ಸಾಂಗೋಪಾಂಗವಾಗಿ ಪ್ರತೀ ಭಕ್ತಾದಿಗಳಿಗೂ ಸಂಕಲ್ಪ ಮಾಡಿ ಮೂರೂ ದೇವರುಗಳನ್ನು ಪೂಜಿಸಿದ ನಂತರವೇ ಮುಂದಿನ ಭಕ್ತರತ್ತ ಹರಿಸುತ್ತಾರೆ ತಮ್ಮ ಚಿತ್ತ . ಅದಲ್ಲದೇ ಆಂಗ್ಲ ಭಾಷೆಯನ್ನೂ ಒಳಗೊಂಡು ನಾಲ್ಕೈದು ಭಾಷೆಗಳಲ್ಲಿ ಸುಲಲಿತವಾಗಿ ಈ ದೇವಸ್ಥಾನದ ಇತಿಹಾಸವನ್ನು ವಿವರಿಸುತ್ತಾರೆ. ದೇವಸ್ಥಾನದ ಮುಂಭಾಗದಲ್ಲಿ ಹೊರಗಡೆ ಒಂದು ವಸಂತ ಕೊಳವಿದ್ದು, ಅದಕ್ಕೆ ನಾಲ್ಕು ಕಡೆಯೂ ಮೆಟ್ಟಿಲುಗಳಿದ್ದು ಇಳಿಯಲು ಅನುಕೂಲವಿದೆ.

WhatsApp Image 2019-10-30 at 8.13.03 PMಅತ್ಯಂತ ಪುರಾತನವಾದ ಈ ದೇವಸ್ಥಾನದ ಸರಿಯಾದ ನಿರ್ವಹಣೆ ಇಲ್ಲದೇ ಪಾಳು ಬೀಳುವಂತಹ ಸ್ಥಿತಿಯಲ್ಲಿದ್ದಾಗ 02-07.-1999 ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಮತ್ತು ಶ್ರೀ ಶ್ರೀ ಶ್ರೀ ರಂಗಪ್ರಿಯ ಮಾಹಾದೇಶಿಕ ಸ್ವಾಮಿಗಳ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಾಮಸ್ಥರು ಮತ್ತು ತುಮಕೂರಿನ ಟಿವಿಎಸ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಎಂಡಿ ಶ್ರೀ ಗೋಪಾಲ ಶ್ರೀನಿವಾಸನ್ ಅವರ ಸಹಕಾರದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನೆರವೇರಿಸಿ ಪ್ರಸ್ತುತ ದೇವಾಲಯ ಭಕ್ತಾದಿಗಳ ದರ್ಶನಕ್ಕೆ ಯೋಗ್ಯವಾದ ಸುಸ್ಥಿತಿಯಲ್ಲಿದೆ. ಹೆಡತಲೆ ಶ್ರೀ ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳ ಹುಟ್ಟೂರು ಹೌದು ಎನ್ನುವುದು ಹೆಮ್ಮೆಯ ವಿಷಯವಾಗಿದೆ.

ಈ ದೇವಸ್ಥಾನದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಹದಿನಾರು ಮುಖದ ಚಾವಡಿ

ಹೆಡತಲೆಯಲ್ಲಿ ರಾಜ ಭೀಮಣ್ಣ ನಾಯಕ ಎಂಬುವನು ಆಳ್ವಿಕೆ ನಡೆಸುತ್ತಿದ್ದು ಆತನಿಗೆ 16 ಹೆಣ್ಣು ಮಕ್ಕಳಿದ್ದರು. ಮದುವೆ ವಯಸ್ಸಿಗೆ ಬಂದಾಗ ಎಲ್ಲಾ ಹೆಣ್ಣು ಮಕ್ಕಳಿಗೂ ಸೂಕ್ತ ವರಗಳನ್ನು ಹುಡುಕಿ ಮದುವೆ ಮಾಡಿ ರಾಜಾ ರಾಣಿ ತನ್ನ ಮಕ್ಕಳು ಮತ್ತು ಅಳಿಯಂದಿರೊಂದಿಗೆ ಸುಖವಾಗಿ ಸಂಭ್ರಮಿಸಬೇಕೆಂದು ಆಸೆ ಪಟ್ಟನು. ಆದರೆ ಆ ಹದಿನಾರು ಅಳಿಯಂದಿರೂ ಒಟ್ಟಿಗೆ ಇದ್ದಾಗ ಯಾವ ಅಳಿಯ ಯಾವ ಮಗಳ ಗಂಡ ಎಂಬುದು ಗೊತ್ತಾಗದೆ, ಗೊಂದಲ ಮಯವಾಗುತ್ತಿತ್ತು. ಅದಲ್ಲದೆ ಅಂದಿನ ಕಾಲದಲ್ಲಿ ಹೆಣ್ಣು ಕೊಟ್ಟ ಅತ್ತೆಯರು ತನ್ನ ಅಳಿಯಂದಿರನ್ನು ನೋಡಿದರೆ ಶ್ರೇಯಸ್ಕರವಲ್ಲ ಎಂಬ ಕಾರಣದಿಂದ ಅತ್ತೆಯರು ತಮ್ಮ ಅಳಿಯಂದಿರನ್ನು ನೋಡ ಬಾರದೆಂಬ ಸಂಪ್ರದಾಯವಿತ್ತು.

ಇಂತಹ ಜಟಿಲ ಸಮಸ್ಯೆಯನ್ನು ಪರಿಹರಿಸಲು, ರಾಜ ತನ್ನ ತನ್ನ ಆಸ್ಥಾನದಲ್ಲಿದ್ದ ಶಿಲ್ಪಿಗಳನ್ನು ಕರೆಸಿ, ರಾಜ, ರಾಣಿ ಮತ್ತವರ ಆಳಿಯಂದಿರೊಂದಿಗಿರುವ 16 ಹೆಣ್ಣು ಮಕ್ಕಳು ಸೇರಿ ಒಟ್ಟು 34 ಜನರೂ ಒಂದೇ ಜಾಗದಲ್ಲಿ ಕೂರುವಂತಹ ಆಸನ ವ್ಯವಸ್ಥೆಯಿರಬೇಕು ಮತ್ತು ಆ ರಾಜನಿಗೆ ಎಲ್ಲರೂ ಕಾಣಿಸುವಂತಿರ ಬೇಕು, ಆದರೆ ರಾಣಿಗೆ ಮಾತ್ರ ಕೇವಲ ತನ್ನ ಹೆಣ್ಣುಮಕ್ಕಳು ಮಾತ್ರ ಕಾಣಿಸುವಂತಿದ್ದು ಆವರ ಪಕ್ಕದಲ್ಲಿ ಕುಳಿತಿರುವ ಅವರ ಗಂಡಂದಿರು ಕಾಣದಂತಿರುವಂತಹ ಚಾವಡಿಯನ್ನು ವಿನ್ಯಾಸಗೊಳಿಕೊಡಲು ಸೂಚಿಸುತ್ತಾನೆ. ರಾಜಾಜ್ಞೆಯಂತೆ ಅಂದಿನ ಹೊಯ್ಸಳ ವಾಸ್ತುಶಿಲ್ಪಿಗಳು ಅದ್ಭುತವಾಗಿ ಹದಿನಾರು ಮುಖದ ಚಾವಡಿಯ ಸಭಾಂಗಣವನ್ನು ನಿರ್ಮಿಸಿ ಕೊಡುತ್ತಾರೆ. ಈ ಚಾವಡಿಗೆ, ನಾಲ್ಕೂ ಮೂಲೆಗಳಿದ್ದು, ಒಟ್ಟು 16 ಕಂಭಗಳಿವೆ. ಪ್ರತಿ ಕಂಭಕ್ಕೆ ತಾಗಿಕೊಂಡಂತೆ ಇಬ್ಬರು ಕೂರುವಂತ ಕಲ್ಲಿನ ಜಗುಲಿ ಇದ್ದು, ಚಾವಡಿಯ ಮಧ್ಯ ಭಾಗದಲ್ಲಿಯೂ ವಿಶೇಷ ಕೆತ್ತನೆಯುಳ್ಳ ಕಂಭಗಳಿವೆ.

ರಾಜ ತಾನು ಕುಳಿತ ಜಾಗದಿಂದ ನೋಡಿದರೆ ಇಡೀ ಸಭಾಂಗಣ ಕಾಣಿಸುತ್ತದೆ. ರಾಣಿ ಕೂರುತ್ತಿದ್ದ ಜಾಗದಿಂದ ನೋಡಿದರೆ, ಪ್ರತೀ ಜಗುಲಿಯ ಅರ್ಧ ಭಾಗ ಕಾಣಿಸುವಂತಿದ್ದು, ಆ ಜಾಗದಲ್ಲಿ ಕುಳಿತಿರುತ್ತಿದ್ದ ತನ್ನ ಹೆಣ್ಣುಮಕ್ಕಳು ಮಾತ್ರ ಕಾಣಿಸುವಂತೆ ವಿನ್ಯಾಸ ಗೊಳಿಸಲಾಗಿದೆ. ಈ ರೀತಿಯ ಸುಂದರ ವಾಸ್ತುಶಿಲ್ಪ ಕಲೆ ಇಂದಿನ ವಾಸ್ತುಶಿಲ್ಪಿಗಳಿಗೂ ಮಾದರಿ ಎನಿಸುವಂತಿದೆ.

ಈ ಲೇಖನ ಓದಿದ ನಂತರವಾದರೂ ಸ್ವಲ್ಪ ಸಮಯ ಮಾಡಿಕೊಂಡು ಹೆಡೆತಲೆಯ ಲಕ್ಷ್ಮೀಕಾಂತ ದೇವಸ್ಥಾನ ಮತ್ತು ಹೆಮ್ಮರಗಾಲದ ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ದರ್ಶನ ಮಾಡಿ ಆ ದೇವರ ಅನುಗ್ರಹಕ್ಕೆ ಪ್ರಾತ್ರರಾಗ ಬೇಕೆಂದು ಸವಿನಯ ಪ್ರಾರ್ಥನೆ. ನಮ್ಮ ಗಮನಕ್ಕೆ ಬಾರಂತಹ ಇನ್ನೂ ಸಾವಿರಾರು ದೇವಾಲಯಗಳು ನಮ್ಮ ಸುತ್ತಮುತ್ತಲೂ ಸರಿಯಾದ ಜೀರ್ಣೋದ್ದಾರವಿಲ್ಲದೇ, ನಿತ್ಯ ಪೂಜೆಯಿಲ್ಲದೆ ಪಾಳು ಬಿದ್ದಿವೆ. ಎಲ್ಲದ್ದಕ್ಕೂ ಸರ್ಕಾರವನ್ನೇ ನಂಬಿಗೊಳ್ಳದೇ ಅಂತಹ ದೇವಾಲಯಗಳನ್ನು ಪುನರುಜ್ಜೀವನ ಮಾಡುವ ಕರ್ತವ್ಯ ನಮ್ಮ ಮೇಲಿದೆ.

ಏನಂತೀರೀ?

3 thoughts on “ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯ, ಹೆಡತಲೆ

Leave a comment