ಶ್ರೀ ಕೌಂಡಿನ್ಯ ಮಹರ್ಷಿ ಕ್ಷೇತ್ರ, ಸಂತಾನ ವೇಣುಗೋಪಾಲಸ್ವಾಮಿ, ಹೆಮ್ಮರಗಾಲ

ಮೈಸೂರು ಮತ್ತು ಸುತ್ತ ಮುತ್ತಲಿನ ಪ್ರದೇಶ ದೇವಸ್ಥಾನಗಳಿಗೆ ಸುಪ್ರಸಿದ್ದವಾಗಿದೆ. ನಾವಿಂದು ಇತಿಹಾಸ ಪ್ರಸಿದ್ಧವಾದ ಮತ್ತು ಅತ್ಯಂತ ಪುರಾತನ ಪುರಾಣ ಕ್ಷೇತ್ರವಾದ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರಸ್ವಾಮಿಯ ದಿವ್ಯಸನ್ನಿಧಾನದಿಂದ ಚಾಮರಾಜ ನಗರದ ಕಡೆ ಸುಮಾರು 15 ಕಿಮೀ ದೂರದಲ್ಲಿರುವ ಹೆಮ್ಮರಗಾಲದ ಶ್ರೀ ಸಂತಾನ ಗೋಪಾಲಸ್ವಾಮಿಯ ದರ್ಶನವನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ಮಾಡೋಣ ಬನ್ನಿ.

ನಂಜನಗೂಡಿನಿಂದ ಕೇವಲ 10 ಕಿಮೀ ದೂರ ಕ್ರಮಿಸಿದಲ್ಲಿ ಸಿಗುವ ಬದನವಾಳು ಎಂಬ ಗ್ರಾಮದಲ್ಲಿ ಮಹಾತ್ಮ ಗಾಂಧಿಯವರು, 1927ರಲ್ಲಿಯೇ ಮೂರು ದಿನಗಳ ಕಾಲ ವಾಸ್ತವ್ಯ ಮಾಡಿ, ಅಲ್ಲಿನ ಜನರಿಗೆ ಗುಡಿ ಕೈಗಾರಿಕೆ ಆರಂಭಿಸಲು ಪ್ರೇರಣೆ ನೀಡಿದ್ದಲ್ಲದೆ, ಬದನವಾಳು ನೂಲುವ ಪ್ರಾಂತ್ಯ ಎಂಬ ಕಲ್ಲನ್ನು ಶಿಲಾನ್ಯಾಸ ಮಾಡುವ ಮೂಲಕ ಬದನವಾಳು ಖಾದಿ ಗ್ರಾಮೋದ್ಯೋಗ ಸಹಕಾರ ಸಂಘ ಎಂಬ ಸಂಸ್ಥೆ ಉದಯಕ್ಕೆ ಕಾರಣಭೂತರಾದರು. ಅಂದಿನಿಂದ ಬದನವಾಳಿನಲ್ಲಿ ಖಾದಿ ಬಟ್ಟೆ, ಅವಲಕ್ಕಿ, ಎಣ್ಣೆ, ಬೆಂಕಿ ಪೊಟ್ಟಣ, ಕಾಗದ ತಯಾರಿ ಸೇರಿದಂತೆ ಸರಿ ಸುಮಾರು 10 – 15 ಬಗೆಯ ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ಕಾರ್ಯ ಆರಂಭಗೊಂಡಿತ್ತು. ಆದಾದ ನಂತರ 1932ರಲ್ಲಿ ಮತ್ತೊಮ್ಮೆ ಬದನವಾಳಿಗೆ ಭೇಟಿ ನೀಡಿದ ಗಾಂಧೀಜಿ, ನೂರಾರು ಜನರಿಗೆ ಗುಡಿ ಕೈಗಾರಿಕೆಯ ಮೂಲಕ ಉದ್ಯೋಗಾವಕಾಶ ನೀಡಿ ಗ್ರಾಮೀಣಾಭಿವೃದ್ಧಿ ಆಗಿದ್ದನ್ನು ನೋಡಿ ಸಂತಸ ಪಟ್ಟಿದ್ದರು.

ಹೀಗೆ ಮಹಾತ್ಮ ಗಾಂಧಿಯವರು ಎರೆಡೆರಡು ಬಾರಿ ಭೇಟಿ ಕೊಟ್ಟಿದ್ದ ಬದನವಾಳು ಹೆಮ್ಮೆಯ ಪ್ರದೇಶವಾಗಿದ್ದರೆ, ಅದಕ್ಕೆ ಕಪ್ಪು ಚುಕ್ಕೆ ಇಟ್ಟಂತೆ ಅದೇ ಬದನವಾಳು ಗ್ರಾಮದಲ್ಲಿರುವ ಸಿದ್ದೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ 1993 ರಲ್ಲಿ ನಡೆದ ಸಂಘರ್ಷ 3 ದಲಿತರು ಹತ್ಯೆಯೊಂದಿಗೆ ಅಂತ್ಯವಾದದ್ದು ಅತ್ಯಂತ ನೋವಿನ ಸಂಗತಿಯಾಗಿದೆ.

WhatsApp Image 2019-10-29 at 7.25.31 AM

ಆದರೆ ಈ ಎರಡೂ ಸಂಗತಿಗಳಿಗಿಂತಲೂ ಪುರಾತನವಾದ ನಂಜನಗೂಡಿನ ಹೆದ್ದಾರಿಯಿಂದ ಬದನವಾಳು ಗ್ರಾಮ ತಲುಪಿ ಬಲಕ್ಕೆ ನೋಡಿದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಅತ್ಯಂತ ದೊಡ್ಡದಾದ ಶ್ರೀ ಕೌಂಡಿನ್ಯ ಮಹರ್ಷಿ ಕ್ಷೇತ್ರ ಸಂತಾನ ವೇಣುಗೋಪಾಲಸ್ವಾಮಿ ದೇವಾಲಯ , ಹೆಮ್ಮರಗಾಲ ಎಂಬ ಕಮಾನು ನಮ್ಮನ್ನು ಸ್ವಾಗತಿಸುತ್ತದೆ. ಆ ಕಮಾನನ್ನು ದಾಟಿ ಕೇವಲ 5 ಕಿಮೀ ದೂರ ಕ್ರಮಿಸಿದರೆ ಸಿಗುವುದೇ ಹೆಮ್ಮರಗಾಲದ ಪುರಾಣ ಪ್ರಸಿದ್ಧ ಸುದರ್ಶನ ನಾರಸಿಂಹ ಕ್ಷೇತ್ರ.

WhatsApp Image 2019-10-29 at 7.31.43 AM

ಈ ದೇವಾಲಯದ ಮುಂಭಾಗ ಉಳಿದ ದೇವಾಲಯಕ್ಕಿಂತಲೂ ಬಹಳ ವಿಭಿನ್ನವಾಗಿದ್ದು ದಕ್ಷಿಣ ಕನ್ನಡದ ಶೈಲಿಯ ಮಂಗಳೂರು ಹೆಂಚಿನ ಸೂರಿರುವ ದೊಡ್ಡ ಪ್ರಾಂಗಣ ಇದ್ದು ಅದು ಒಳಗೆ ಅಷ್ಟು ದೊಡ್ಡದಾದ ಪುರಾಣ ಪ್ರಸಿದ್ದ ದೇವಾಲಯವಿದೇ ಎಂಬುದನ್ನೇ ಮರೆಮಾಚುವಂತಿದೆ. ಈ ಪ್ರಾಂಗಣದೊಳಗೆ ಪ್ರವೇಶಿಸಿ ಮುಂದೆ ಹೋಗಿತ್ತಿದ್ದಂತೆಯೇ, ದ್ವಾಪರ ಯುಗದಲ್ಲಿ ಮಹರ್ಷಿ ಶ್ರೀ ಕೌಂಡಿನ್ಯರಿಂದ ಪ್ರತಿಷ್ಟಾಪಿಸಲ್ಪಟ್ಟು 1800 ವರ್ಷಗಳಷ್ಟು ಹಿಂದೆ ಚೋಳ ರಾಜನಿಂದ ಕಟ್ಟಿಸಲ್ಪಟ್ಟ ಸುಂದರವಾದ ಶ್ರೀ ವೇಣುಗೋಪಾಲನ ದೇವಾಲಯವನ್ನು ಕಾಣಬಹುದಾಗಿದೆ.

ದ್ವಾಪರಯುಗದಲ್ಲಿ ಹೇಮಪುರಿ ಎಂದು ಹೆಸರಾಗಿದ್ದ ಈ ಊರಿಗೆ ಹೆಮ್ಮರಗಾಲ ಎಂಬ ಹೆಸರು ಬರಲು ಹಿಂದಿರುವ ಕಥೆಯು ಬಹಳ ರೋಚಕವಾಗಿದೆ. ಈ ಪ್ರದೇಶದಲ್ಲಿ ಕೌಂಡಿನ್ಯ ಮಹರ್ಷಿಗಳು ತಪಸ್ಸನ್ನು ಮಾಡುತ್ತಿದ್ದ ಸಂದರ್ಭದಲ್ಲಿ ದೈತ್ಯಾಕಾರದ ರಾಕ್ಷಸನೊಬ್ಬ ಪದೇ ಪದೇ ಅವರ ತಪಸ್ಸನ್ನು ಭಂಗ ಮಾಡುತ್ತಿದ್ದಲ್ಲದೇ, ಊರ ಜನರಿಗೂ ಬಹಳ ರೀತಿಯಲ್ಲಿ ತೊಂದರೆ ಕೊಡುತ್ತಿದ್ದನಂತೆ. ಆ ರಾಕ್ಷಸನ ಹಾವಳಿಯಿಂದ ಎಲ್ಲರನ್ನೂ ಪಾರು ಮಾಡೆಂದು ಭಗವಾನ್ ವಿಷ್ಣುವನ್ನು ಕೌಂಡಿನ್ಯರು ಪ್ರಾರ್ಥಿಸಿದಾಗ, ಶ್ರೀಮನ್ನಾರಾಯಣನು ನರಸಿಂಹನ ರೂಪದಲ್ಲಿ ಬಂದು ಅ ರಾಕ್ಷಸನನ್ನು ಸಂಹಾರ ಮಾಡಿದನಂತೆ. ಹೀಗೆ ರಾಕ್ಷಸ ಸಂಹಾರ ಮಾಡುವಾಗ ಆ ದೈತ್ಯಾಕಾರದ ರಾಕ್ಷಸನ ದೊಡ್ಡ ಮರದಂಥಹ ಕಾಲು ಈ ಊರಿನಲ್ಲಿ ಮುರಿದು ಬಿದ್ದ ಕಾರಣ ಈ ಊರನ್ನು ಅಂದಿನಿಂದ ಹೆಮ್ಮರಗಾಲ ಎಂದು ಕರೆಯಲಾರಂಭಿಸಿದರೆ, ಆತನ ದೇಹ ಮತ್ತು ತಲೆ ಇದೇ ಊರಿನಿಂದ ಸುಮಾರು 2.5 ಕಿಮೀ ದೂರದಲ್ಲಿ ಬಿದ್ದ ಕಾರಣ ಆ ಪ್ರದೇಶ ಹೆಡತಲೆ ಎಂದು ಪ್ರಸ್ಸಿದ್ಧವಾಯಿತು ಎಂಬ ಕಥೆಯೂ ಪ್ರಚಲಿತದಲ್ಲಿದೆ.

ಭಗವಾನ್ ವಿಷ್ಣುವು ಆ ಊರನ್ನು ರಾಕ್ಷಸನಿಂದ ಪಾರು ಮಾಡಿದ ನೆನಪಿನಾರ್ಥ ಕೌಂಡಿನ್ಯ ಮಹರ್ಷಿಗಳು ಅಲ್ಲೊಂದು ವೇಣುಗೋಪಾಲಸ್ವಾಮಿಯನ್ನು ಪ್ರತಿಷ್ಠಾಪಿಸಿ ಅದಕ್ಕೊಂದು ಸುಂದರವಾದ ದೇವಾಲಯವನ್ನು ನಿರ್ಮಿಸಿ, ಆ ದೇವಾಲಯದ ಗರ್ಭಗುಡಿಯ ದ್ವಾರದ ಮೇಲಿರುವ ಸರಸಿಂಹ ಸ್ವಾಮಿಯನ್ನು ಕೆತ್ತಿಸಿದ ಕಾರಣ, ಈ ಕ್ಷೇತ್ರವನ್ನು ಶ್ರೀ ಸುದರ್ಶನ ನಾರಸಿಂಹ ಕ್ಷೇತ್ರ ಎಂದಲ್ಲದೇ, ಕೌಂಡಿನ್ಯರು ತಪಸ್ಸು ಮಾಡಿದ ಕಾರಣ ಈ ಪ್ರದೇಶವನ್ನು ಕೌಂಡಿನ್ಯ ಮಹರ್ಷಿ ಗೋವರ್ಧನ ಕ್ಷೇತ್ರವೆಂದೂ ಕರೆಯಲಾಗುತ್ತದೆ.

ಮಂಗಳೂರು ಹೆಂಚಿನ ಪ್ರಾಂಗಣ ದಾಟಿ ಒಳಹೋಗುತ್ತಿದ್ದಂತೆಯೇ ಇತ್ತೀಚೆಗೆ ಗ್ರಿಲ್ಲಿನಿಂದ ನಿರ್ಮಿಸಲಾಗಿರುವ ವಿಶಾಲವಾದ ಪ್ರಾಂಗಣ ಎಡ ಭಾಗದಲ್ಲಿ ಭಾವಿ ಮತ್ತು ಅದರ ಪಕ್ಕದಲ್ಲೇ ಕೌಂಡಿನ್ಯ ಪ್ರಚಚನ ಮಂದಿರ ಕಾಣಸಿಕ್ಕರೆ, ದೇವಾಲಯದ ಮಂದೆ ನವೀಕೃತ ಹಿತ್ತಾಳೆ ಕವಚ ಹೊಂದಿರುವ ಗರುಡ ಗಂಬ ಎದುರಾಗುತ್ತದೆ. ದೇವಸ್ಥಾನದ ಎಡಭಾಗದಿಂದ ಸುಮಾರು ಏಳೆಂಟು ಮೆಟ್ಟಿಲು ಹತ್ತಿಕೊಂಡು ಒಳಗೆ ಪ್ರವೇಶಿದಲ್ಲಿ ಕೊಳಲನ್ನು ಹಿಡಿದ ಸುಂದರವಾದ ವೇಣುಗೋಪಾಲನ ದರ್ಶನವಾಗುತ್ತದೆ, ಹಾಗೆ ಗರ್ಭ ಗುಡಿಯ ಎಡಭಾಗದಲ್ಲಿ ಉತ್ಸವ ಮೂರ್ತಿ ಇದ್ದರೆ ಗರ್ಭಗುಡಿಯ ಅಕ್ಕ ಪಕ್ಕದಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆಯರ ಸುಂದರವಾದ ವಿಗ್ರಹಗಳಿವೆ. ಅಡ್ಡಗಾಲನ್ನು ಹಾಕಿಕೊಂಡು ಕೊಳಲನ್ನು ಊದುತ್ತಾ ನಿಂತಿರುವ ಸುಮಾರು ಎರಡು ಅಡಿ ಎತ್ತರವಿರುವ ಮುದ್ದಾದ ವೇಣುಗೋಪಾಲನನ್ನು ನೋಡಲು ಎರಡು ಕಣ್ಣುಗಳು ಸಾಲವು. ಈ ಮೂರ್ತಿಯ ಪ್ರಭಾವಳಿಯ ಎರಡೂ ಕಡೆ ಗೋಪಾಲಕ ಹಾಗೂ ಗೋವುಗಳಿದ್ದರೆ, ಶಿರದಲ್ಲಿ ಆದಿಶೇಷನ ಕೆತ್ತನೆ ಇದೆ. ಇನ್ನು ಗರ್ಭಗುಡಿಯ ದ್ವಾರದ ಮೇಲೆ ನರಸಿಂಹನ ಕೆತ್ತನೆ ಇದ್ದು, ಈಗಾಗಲೇ ತಿಳಿಸಿದಂತೆ ಶ್ರೀ ನರಸಿಂಹನ ಕೆತ್ತನೆ ಇದ್ದು, ಪ್ರತೀ ಬಾರಿಯೂ ಶ್ರೀ ವೇಣುಗೋಪಾಲ ಮತ್ತು ನರಸಿಂಹ ಸ್ವಾಮಿ ಇಬ್ಬರಿಗೂ ಮಂಗಳಾರತಿ ಮಾಡಲಾಗುತ್ತದೆ.

ಈ ಕ್ಷೇತ್ರದ ಮತ್ತೊಂದು ಖ್ಯಾತಿ ಎಂದರೆ ಸಂತಾನ ಪ್ರಾಪ್ತಿ. ಮಕ್ಕಳಿಲ್ಲದವರು ಇಲ್ಲಿಗೆ ಬಂದು ಭಕ್ತಿಯಿಂದ ಹರಕೆ ಹೊತ್ತರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಈ ವೇಣುಗೋಪಾಲನನ್ನು ಸಂತಾನ ವೇಣುಗೋಪಾಲ ಎಂದೂ ಕರೆಯುತ್ತಾರೆ. ಹಾಗೆ ತಮ್ಮ ಹರಕೆ ಈಡೇರಿ ಮಕ್ಕಳಾದ ಬಳಿಕ ಶ್ರೀ ಕೃಷ್ಣನ ಹರಕೆ ತೀರಿಸಲು ತೊಟ್ಟಿಲು ಕಟ್ಟುವ ಸಂಪ್ರದಾಯವೂ ಇಲ್ಲಿ ಪ್ರಚಲಿತದಲ್ಲಿದೆ.

ಸಂತಾನಕ್ಕೆ ಸಂಬಂಧಿಸಿದಂತೆ ಇಲ್ಲಿ ಮತ್ತೊಂದು ಸ್ವಾರಸ್ಯಕರವಾದ ಕಥೆಯೂ ಇಲ್ಲಿ ಪ್ರಚಲಿತದಲ್ಲಿದೆ. ಈ ಹಿಂದೆ ಚೋಳ ರಾಜನ ಪಟ್ಟದ ರಾಣಿಗೆ ಬರೀ ಹೆಣ್ಣು ಮಕ್ಕಳೇ ಹುಟ್ಟುತ್ತಿದ್ದವಂತೆ. ಹೇಳಿ ಕೇಳಿ ಪುರುಷ ಪ್ರಾಧಾನ್ಯವಾದ ಈ ಸಂಸ್ಕೃತಿಯಲ್ಲಿ, ಗಂಡು ಮಕ್ಕಳಿಲ್ಲದಿದ್ದರೇ ರಾಜ್ಯಕ್ಕೆ ಉತ್ತರಾಧಿಕಾರಿಯೇ ಇಲ್ಲದೇ ಹೋಗುತ್ತದೆ ಎಂಬ ಕೊರಗಿನಲ್ಲಿದ್ದ ರಾಜಾ ರಾಣಿಯರಿಗೆ ಯಾರಿಂದಲೋ ಈ ಸಂತಾನ ಗೋಪಾಲನ ಮಹಿಮೆಯನ್ನು ತಿಳಿದು, ರಾಜ ರಾಣಿಯರು ಈ ಶ್ರೀ ಕ್ಷೇತ್ರಕ್ಕೆ ಬಂದು ಭಕ್ತಿಯಿಂದ ತಮಗೆ ಪುತ್ರ ಸಂತಾನ ಪ್ರಾಪ್ತಿಯಾಗುವಂತೆ ಬೇಡಿಕೊಂಡು ಹೋದ ನಂತರ ರಾಣಿಯು ಗರ್ಭವತಿಯಾದಾಗ, ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗಳಿಗೆ ಮತ್ತೆ ಹೆಣ್ಣು ಮಗುವೇ ಜನಿಸಿದಾಗ. ಮನನೊಂದ ರಾಣಿಯು, ಇದೇ ವೇಣುಗೋಪಾಲನ ಪದತಲದಲ್ಲಿ ನವಜಾತ ಹೆಣ್ಣು ಮಗುವನ್ನು ಇಟ್ಟು, ಭಗವಂತಾ ನಾನು ಗಂಡು ಸಂತಾನಕ್ಕೆ ನಿನ್ನನ್ನು ಕೋರಿದರೆ ಮತ್ತದೇ ಹೆಣ್ಣು ಸಂತಾನ ಪ್ರಾಪ್ತಿಸಿದ್ದೀಯಲ್ಲಾ! ಎಂದು ಕಣ್ಣೀರಿಡುತ್ತಾ, ಬೆಳಗಾಗುವುದರೊಳಗೆ ಈ ಹೆಣ್ಣು ಮಗವನ್ನು ಗಂಡು ಮಗುವಾಗಿಸದಿದ್ದಲ್ಲಿ, ನಿನ್ನೀ ಪಾದದ ಬಳಿಯೇ ಪ್ರಾಣತ್ಯಾಗ ಮಾಡುತ್ತೇನೆ ಎಂದು ಶಪಥಗೈದು ಮಹಾದ್ವಾರದ ಬಳಿಯೇ ಧ್ಯಾನಕ್ಕೆ ಕುಳಿತಳಂತೆ. ರಾಣಿಯ ಅನನ್ಯ ಭಕ್ತಿಗೆ ಮೆಚ್ಚಿದ ಈ ವೇಣುಗೋಪಾಲ ಸ್ವಾಮಿಯು ತನ್ನ ಪದತಲದಲ್ಲಿದ್ದ ಹೆಣ್ಣು ಮಗುವನ್ನು ಗಂಡು ಮಗುವಾಗಿ ಪರಿವರ್ತಿಸಿದನಂತೆ. ಬೆಳಗಾದಾಗ, ತನ್ನ ಹೆಣ್ಣು ಮಗುವು ಗಂಡಾಗಿ ಪರಿವರ್ತನೆ ಆಗಿದ್ದ ಈ ಪವಾಡವನ್ನು ನೋಡಿದ ರಾಣಿ ಅಪ್ಪಾ ತಂದೆ ಭಕ್ತರ ಭವರೋಗವನ್ನು ನಿವಾರಿಸುವ ನಿನ್ನದೇನಿದು ಈ ರೀತಿಯ ಹುಚ್ಚಾಟ? ಮೊದಲು ಹೆಣ್ಣು ಮಗವನ್ನು ಕರುಣಿಸುವುದು ಆನಂತರ ಅದನ್ನು ಗಂಡು ಮಗುವಾಗಿ ಪರಿವರ್ತಿಸುವುದು? ನಿಜಕ್ಕೂ ನೀನೊಬ್ಬ ಹುಚ್ಚನಪ್ಪಾ! ಎಂದು ಆನಂದಭರಿತಳಾಗಿ ಉಧ್ಘರಿಸಿದಳಂತೆ. ಅಂದಿನಿಂದ ಈ ಸಂತಾನ ವೇಣು ಗೋಪಾಲನಿಗೆ ಹುಚ್ಚು ಗೋಪಾಲ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಇನ್ನು ಅಲಮೇಲಮ್ಮ, ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ ಎಂದು ಶಾಪ ಹಾಕಿದ ಪರಿಣಾಮವಾಗಿ ಮೈಸೂರು ರಾಜವಂಶದ ಪ್ರತೀ ಎರಡನೇ ಪೀಳಿಗೆಗೆ ಪುತ್ರಸಂತಾನವಾಗದೇ ದತ್ತು ಪುತ್ರರನ್ನು ಪಡೆಯುತ್ತಿದ್ದ ಸಂಗತಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅದೇ ರೀತಿಯಾಗಿ ಅಂದಿನ ಮೈಸೂರಿನ ಒಡೆಯರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ದಂಪತಿಗಳಿಗೂ ಕೂಡಾ ಮಕ್ಕಳಾಗದೇ ಇರುವಾಗ, ಯಾರಿಂದಲೂ ಸಂತಾನ ಗೋಪಾಲನ ವಿಷಯ ತಿಳಿದು ದಂಪತಿಗಳಿಬ್ಬರೂ ಇಲ್ಲಿಗೆ ಬಂದು ಈ ದೇವರಿಗೆ ಹರಕೆ ಹೊತ್ತ ಬಳಿಕವೇ, ಮುಮ್ಮಡಿ ಕೃಷ್ಣರಾಜ ಒಡೆಯರು ಜನಿಸಿದರೆಂಬ ಪ್ರತೀತಿ ಇದ್ದು, ಅದಕ್ಕೆ ಪ್ರತಿಫಲದಂತೆ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ್ದಲ್ಲದೇ, ಅಂದಿನಿಂದ ಮೈಸೂರು ಅರಸರು ಈ ದೇವಾಲಯಕ್ಕೆ ವಿವಿಧ ರೀತಿಯ ಕಾಣಿಕೆಗಳನ್ನು ನೀಡುತ್ತಲೇ ಇದ್ದರು ಎಂಬುದನ್ನು ಇಲ್ಲಿನ ಅರ್ಚಕರು ವಿವರಿಸುತ್ತಾರೆ.

ಎಲ್ಲಾ ದೇವಸ್ಥಾನಗಳಿಗೂ ಪೂಜೆ ಮಾಡಿಸಲು ಹೂವು, ಹಣ್ಣು ಕಾಯಿ ತೆಗೆದುಕೊಂಡು ಹೋಗುವುದು ವಾಡಿಕೆಯಾದರೇ, ಈ ದೇವಸ್ಥಾನದಲ್ಲಿ ಭಕ್ತಾದಿಗಳು ಹೂ, ಹಣ್ಣು ಕಾಯಿಯ ಜೊತೆಗೆ ಅವಲಕ್ಕಿ ಮತ್ತು ತುಪ್ಪವನ್ನು ಸಹಾ ವಿಶೇಷವಾಗಿ ಅರ್ಪಿಸುವ ಸಂಪ್ರದಾಯವಿದೆ. ಈ ರೀತಿಯಾಗಿ ಭಕ್ತರು, ಭಕ್ತಿಯಿಂದ ಸಮರ್ಪಿಸಿದ ಅವಲಕ್ಕಿ ಮತ್ತು ತುಪ್ಪನ್ನು ದೇವರಿಗೆ ನೈವೇದ್ಯ ಮಾಡಿದ ನಂತರ ಅದರಿಂದಲೇ ರುಚಿಕರವಾದ ಖಾರದ ಅವಲಕ್ಕಿಯನ್ನು ತಯಾರಿಸಿ ಅದನ್ನೇ ಪ್ರಸಾದ ರೂಪದಲ್ಲಿ ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಹಂಚುವುದು ಇಲ್ಲಿನ ಸಂಪ್ರದಾಯವಾಗಿದ್ದು ಆ ಪ್ರಸಾದವನ್ನು ರುಚಿಯನ್ನು ಬಣ್ಣಿಸಲಸದಳವಾಗಿದೆ

ದೇವಸ್ಥಾನದ ಪಕ್ಕದಲ್ಲೇ ಇರುವ ದೇವಸ್ಥಾನದ ಅರ್ಚಕರಾದ ಶ್ರೀ ವೀರರಾಘವ ಭಟ್ಟರ್ ಮತ್ತು ಶ್ರೀ ಮಧುಸೂದನ ಭಟ್ಟರ್ ಅವರು ದೇವಾಲಯಕ್ಕೆ ಬರುವ ಸಕಲ ಭಕ್ತಾದಿಗಳನ್ನು ನಗುಮುಖದಿಂದಲೇ ಸ್ವಾಗತಿಸುತ್ತಾ, ಯಾವುದೇ ರೀತಿಯ ಜಾತಿಯ ತಾರತಮ್ಯವಿಲ್ಲದೇ, ಬಹಳ ತಾಳ್ಮೆಯಿಂದಲೇ ಎಲ್ಲರಿಗೂ ಮೇಲೆ ತಿಳಿಸಿದ ದೇವಾಲಯದ ಎಲ್ಲಾ ಪುರಾಣವನ್ನೂ ಸವಿವರವಾಗಿ ವಿವರಿಸಿ ಸಾಂಗೋಪಾಂಗವಾಗಿ ಭಕ್ತರ ಮನಸ್ಸಿಗೆ ಒಪ್ಪುವಂತೆ ಪೂಜಾಕೈಂಕರ್ಯಗಳನ್ನು ನೆರೆವೇರಿಸಿ ಕೊಡುವುದು ವಿಶೇಷವಾಗಿದೆ.

ಇನ್ನು ಈ ದೇವಾಲಯದ ಮತ್ತೊಂದು ವಿಶೇಷತೆ ಎಂದರೆ, ಆ ಮಂಗಳೂರು ಹೆಂಚಿನ ಪ್ರಾಂಗಣದಲ್ಲಿ ಈ ಊರಿನ ಕೆಲವು ವಯಸ್ಸಾದ ಮಾತೆಯರು, ಸ್ಥಳೀಯವಾಗಿ ಬೆಳೆದ ಹೆಸರುಕಾಳು, ಕಡಲೇ ಕಾಳು, ಹುರಳೀಕಾಳು, ಹುಚ್ಚೆಳ್ಳು, ಸಾಸಿವೆ ಮುಂತಾದ ಬೇಳೇ ಕಾಳುಗಳನ್ನು ಕೈಗೆಟುಕುವ ಬೆಲೆಯಲ್ಲಿ ಇನ್ನೂ ಹಳೆಯ ಕಾಲದ ಸೇರು ಪಾವು ಚಟಾಕುವಿನ ರೂಪದಲ್ಲಿ ಮಾರಾಟ ಮಾಡುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದ್ದು. ದೇವಾಲಯದಿಂದ ಹೊರಬರುವ ಭಕ್ತರು ಆ ವಯಸ್ಸಾದ ಮಹಿಳೆಯರ ಮಾತಿನ ಮೋಡಿಗೆ ಮರುಳಾಗಿ ಒಂದಲ್ಲಾ ಒಂದು ಬೇಳೆ ಕಾಳುಗಳನ್ನು ಖರೀಧಿ ಮಾಡುವುದನ್ನು ಇಲ್ಲಿ ಕಾಣಬಹುದಾಗಿದೆ.

hemmaragala_shasana.jpg

ಈ ಪುರಾಣ ಪ್ರಸಿದ್ಧ ವೇಣುಗೋಪಾಲ ಸ್ವಾಮಿಯ ದೇವಸ್ಥಾನವಲ್ಲದೇ, ಇದೇ ಗ್ರಾಮದಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯದ ಸಮೀಪ ಇರುವ ರೈತ ಗೋಪಯ್ಯ ಎಂಬುವವರ ಜಮೀನಿನಲ್ಲಿ ರುವ ವೀರಗಲ್ಲಿನ ಮೇಲ್ಭಾಗದಲ್ಲಿ ನಾಲ್ಕು ಸಾಲುಗಳ ಕನ್ನಡ ಭಾಷೆಯ ಅಪ್ರಕಟಿತ ಶಾಸನವಿದ್ದು, 17ನೇ ಶತಮಾನದ ಲಿಪಿ ಲಕ್ಷಣಗಳನ್ನು ಹೊಂದಿದೆ. ಹೆಮ್ಮರಗಾಲದ ಜವನಪ್ಪನ ಮಗ ಸಿರಿಸೆಟ್ಟಿಯು ತಮ್ಮ ಹೆತ್ತಪ್ಪ ಕುರುಳಪ್ಪ ಜವನಪ್ಪ ಕಾಮಣ ಎಂಬುವವರಿಗೆ ವೀರಗಲ್ಲನ್ನು ಕೆತ್ತಿಸಿದ್ದು ಹಾಗೂ ಈ ವೀರಗಲ್ಲನ್ನು ಕೆತ್ತಿದ ನಂಜೋಜ ಮತ್ತು ಚಿನ್ನೋಜರಿಗೆ ಕುದುರೆ ಹಾಗೂ ಸತ್ತಿಗೆಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಶಾಸನ ತಿಳಿಸುತ್ತದೆ. ಈ ವೀರಗಲ್ಲಿ ನಲ್ಲಿರುವ ಮೂರು ಮಂದಿ ವೀರರ ಶಿಲ್ಪಗಳನ್ನು ಶಾಸನೋಕ್ತ ವೀರರೆಂದು ಗುರುತಿಸಬಹುದಾಗಿದೆ ಎಂದು ಇತಿಹಾಸಕಾರರು ತಿಳಿಸಿರುತ್ತಾರೆ. ಇನ್ನು ಮೂರು ಬಾರಿ ಶಾಸಕರಾಗಿದ್ದು ಎಸ್. ಎಂ ಕೃಷ್ಣಾರವರ ಸಂಪುಟದಲ್ಲಿ ಸಕ್ಕರೆ ಖಾತೆಯ ಸಚಿವರಾಗಿದ್ದ ಮಹದೇವು ಅರ್ಥಾಥ್ ಬೆಂಕಿ ಮಹದೇವು ಅವರ ಜನ್ಮಸ್ಥಳವೂ ಇದೇ ಹೆಮ್ಮರಗಾಲವಾಗಿದೆ.

ಮೈಸೂರು ಮತ್ತು ನಂಜನಗೂಡಿನಿಂದ ಬದನವಾಳುವಿನವರಿಗೂ ಯಥೇಚ್ಚವಾದ ಬಸ್ಸಿನ ಸೌಕರ್ಯವಿದ್ದು ಅಲ್ಲಿಂದ ಸ್ಥಳೀಯವಾಗಿ ದೊರೆಯುವ ಆಟೋವಿನ ಮೂಲಕ ಈ ದೇವಾಲಯವನ್ನು ತಲುಪಬಹುದಾಗಿದೆ. ಸ್ವಂತ ವಾಹನದ ಮೂಲಕ ಇಲ್ಲಿಗೆ ಬರುವುದು ಉತ್ತಮವಾಗಿದೆ.

ಹೀಗೆ ಪೌರಾಣಿಕವಾಗಿಯೂ, ಐತಿಹಾಸಿಕವಾಗಿಯೂ ಮತ್ತು ರಾಜಕೀಯವಾಗಿಯೂ ಪ್ರಸಿದ್ಧವಾದ ಈ ಹೆಮ್ಮರಗಾಲದ ಬಗ್ಗೆ ಇಷ್ಟೆಲ್ಲಾ ಮಾಹಿತಿಯನ್ನು ತಿಳಿದ ನಂತರ ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಸಕಲ ಇಷ್ಟಾರ್ಥಗಳನ್ನೂ ಈಡೇರಿಸುವ ಈ ಹುಚ್ಚು ಸಂತಾನ ಗೋಪಾಲ ಕೃಷ್ಣನ ಸನ್ನಿಧಿಗೆ ಕುಟುಂಬ ಸಮೇತ ಭೇಟಿ ನೀಡಿ ಸ್ವಾಮಿಯ ಅನುಗ್ರಹವನ್ನು ಪಡೆದು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

9 thoughts on “ಶ್ರೀ ಕೌಂಡಿನ್ಯ ಮಹರ್ಷಿ ಕ್ಷೇತ್ರ, ಸಂತಾನ ವೇಣುಗೋಪಾಲಸ್ವಾಮಿ, ಹೆಮ್ಮರಗಾಲ

  1. ಬಹಳ ಚೆನ್ನಾಗಿ, ಸಂಕ್ಷಿಪ್ತವಾಗಿ ಸಂಪೂರ್ಣ ಮಾಹಿತಿ ತಿಳಿಸಿದ್ದೀರಿ.
    ಧನ್ಯವಾದಗಳು.
    ಈ ಸ್ಥಳದ ಬಗ್ಗೆ ಇದೆ ಮೊದಲು ಓದಿದ್ದು.

    Like

Leave a comment