ಶ್ರೀ ಆಲೂರು ವೆಂಕಟರಾಯರು

ಭಾರತದ ಸ್ವಾತಂತ್ರ್ಯಾನಂತರ ಹತ್ತು ಹದಿನಾರು ಪ್ರಾಂತ್ಯ್ರಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡನಾಡನ್ನು ಒಗ್ಗೂಡಿಸಿದ ಭೀಷ್ಮ ಪಿತಾಮಹರೆಂದರೆ ಶ್ರೀ ಆಲೂರು ವೆಂಕಟರಾಯರು. ತಮ್ಮ ಇಡಿ ಜೀವನವನ್ನು ಸಂಪೂರ್ಣವಾಗಿ ಕರ್ನಾಟಕದ ಏಕೀಕರಣಕ್ಕಾಗಿಯೇ ಮುಡಿಪಾಗಿಟ್ಟವರು. ಹಾಗಾಗಿ ಪ್ರತಿಯೊಬ್ಬ ಕನ್ನಡಿಗರ ಪಾಲಿಗೆ ಅವರು ಪ್ರಾತಃ ಸ್ಮರಣೀಯರೇ ಹೌದು. ಹಾಗಾಗಿಯೇ ಕನ್ನಡಿಗರು ಆವರನ್ನು ಹೆಮ್ಮೆಯಿಂದ ಕನ್ನಡದ ಕುಲಪುರೋಹಿತರು ಎಂದು ಕರೆದದ್ದರಲ್ಲಿ ಅತಿಶಯೋಕ್ತಿಯೇನಿಲ್ಲ.

ವೆಂಕಟರಾವ್ ಅವರು ಬಿಜಾಪುರದಲ್ಲಿ ಸಾಂಪ್ರದಾಯಿಕ ದೇಶಸ್ಥ ಮಾಧ್ವ ಬ್ರಾಹ್ಮಣ ಕುಟುಂಬದ ಕಂದಾಯ ಇಲಾಖೆಯಲ್ಲಿ ಶೆರಿಸ್ತಾರ್ ಆಗಿದ್ದ ಶ್ರೀ ಭೀಮಾ ರಾವ್ ಅವರಿಗೆ ಜುಲೈ 12, 1880 ರಂದು ಜನಿಸಿದರು. ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಅತ್ಯಂತ ಚುರುಕಾದಿದ್ದ ಶ್ರೀ ವೆಂಕಟರಾಯರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕರ್ನಾಟಕದಲ್ಲೇ ಮುಗಿಸಿ, ಪದವಿ ಮತ್ತು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪೂನಾದ ಫರ್ಗುಸನ್ ಕಾಲೇಜಿಗೆ ಸೇರಿಕೊಂಡು ಅಲ್ಲಿ ಬಿಎ ಮತ್ತು ಎಲ್ಎಲ್ಬಿ ಅಧ್ಯಯನ ಮಾಡಿದರು. ಇದೇ ಸಮಯದಲ್ಲೇ ಅವರಿಗೆ ಅಂದಿನ ಸ್ವಾತ್ರಂತ್ಯ್ರ ಹೋರಾಟಗಾರರಲ್ಲಿ ಅತ್ಯಂತ ಪ್ರಮುಖರಾಗಿದ್ದ ಶ್ರೀ ವಿನಾಯಕ ದಾಮೋದರ್ ಸಾವರ್ಕರ್, ಸೇನಾಪತಿ ಬಾಪಟ್ ಮತ್ತು ಬಾಲಗಂಗಾಧರ ತಿಲಕ್ ಅವರ ಸಂಪರ್ಕಕ್ಕೆ ದೊರೆತು ಅವರೆಲ್ಲರ ಪ್ರಭಾವಗಳೂ ರಾಯರ ಮೇಲೆ ಅಚ್ಚಳಿಯದೇ ಉಳಿಯಿತು. ತಿಲಕರರೊಂದಿಗಿನ ಅವರ ಆತ್ಮೀಯತೆಯಿಂದಾಗಿಯೇ ತಿಲಕರು ಮರಾಠಿ ಭಾಷೆಯಲ್ಲಿ ಬರೆದಿದ್ದ ಗೀತ ರಹಸ್ಯವನ್ನು ರಾಯರು ಕನ್ನಡಕ್ಕೆ ಅನುವಾದಿಸಿದರು.

ಕನ್ನಡಿಗರಲ್ಲಿ ವಿವಿಧತೆಯಲ್ಲಿ ಏಕತೆಯ ಭಾವನೆಯನ್ನು ಮೂಡಿಸುವುದಕ್ಕೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡವರು ಶ್ರೀ ವೆಂಕಟರಾಯರು. ಕನ್ನಡಿಗರ ವಿಜಯ ನಗರ ಸಾಮ್ರಾಜ್ಯದ ಮೂಲಕ ಪ್ರೇರಣೆ ಪಡೆದು, ಕನ್ನಡಾಂಬೆಯು ಪ್ರತಿ ಕನ್ನಡಿಗನ ಹೃದಯದಲ್ಲಿ ಸ್ಥಾಪನೆಯಾದಾಗ ಮಾತ್ರವೇ ನವ ಕರ್ನಾಟಕದ ನಿರ್ಮಾಣ ಸಾಧ್ಯ ಎಂಬುದನ್ನು ಅಚಲವಾಗಿ ನಂಬಿದ್ದ ಶ್ರೀಯುತರು ಅದಕ್ಕಾಗಿ ಹಲವಾರು ಪತ್ರಿಕೆಗಳನ್ನು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ, ಸೇರಿದಂತೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಹುಟ್ಟಿಗೆ ಕಾರಣೀಭೂತರಾದರು.

ಆಲೂರು ವೆಂಕಟರಾಯರು ತಮ್ಮ ವಿದ್ಯಾಭ್ಯಾಸ ಮುಗಿಸಿದ ನಂತರ ತಮ್ಮ ಕಾರ್ಯಕ್ಶೇತ್ರವನ್ನು ಮತ್ತೆ ಕರ್ನಾಟಕ್ಕೆ ಬದಲಿಸಿಕೊಂಡು  ಕೇವಲ ಕನ್ನಡ ಮತ್ತು ಕರ್ನಾಟಕದ ಏಕೀಕರಣಕ್ಕೆ ಮಾತ್ರವೇ ತಮ್ಮ ಕಾರ್ಯ ಚಟುವಟಿಗೆಯನ್ನು ಸೀಮಿತಗೊಳಿಸದೇ ಮಹಾತ್ಮ ಗಾಂಧಿಯವರು ಆರಂಭಿಸಿದ ಸತ್ಯಾಗ್ರಹ ಚಳುವಳಿಯಲ್ಲಿಯೂ ಸ್ವಪ್ರೇರಣೆಯಿಂದ ಭಾಗವಹಿಸಿದ್ದರು. ಭಾಷೆಯ ಮುಖಾಂತರವೇ ಜನರನ್ನು ಒಗ್ಗೂಡಿದಬಹುದೆಂಬುದನ್ನು ಚೆನ್ನಾಗಿ ಬಲ್ಲವರಾಗಿದ್ದ ಆಲೂರರು ಕನ್ನಡ ಭಾಷೆಯ ಅಭಿವೃದ್ಧಿಗಾಗಿ ನಾನಾ ವಿದ್ಯಾ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಲ್ಲದೇ ತಾವು ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಗಳಲ್ಲಿ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ಬೆಂಕಿಪೊಟ್ಟಣ, ಪೆನ್ಸಿಲ್, ಉಡುಗೆ ತೊಡುಗೆಗಳ ತಯಾರಿಕೆಯ ಪ್ರಾಯೋಗಿಕ ತರಭೇತಿ ನೀಡುತ್ತಿದ್ದಲ್ಲದೆ, ಲಲಿತ ಕಲೆಗಳಾದ ಚಿತ್ರ ಕಲೆ, ಸಾಹಿತ್ಯ ಮತ್ತು ಮುದ್ರಣಗಳಲ್ಲಿಯೂ ಅಲ್ಲಿಯ ವಿಧ್ಯಾರ್ಥಿಗಳಿಗೆ ತರಭೇತಿ ನೀಡಿ ಕನ್ನಡಿಗರು ಸ್ವಾವಲಂಭಿಗಳಾಗಿ ಬೆಳೆಯುವಂತಾಗಲು ಪ್ರೇರೇಪಿಸಿದವರು. ಸಕ್ಕರೆ ಕಾರ್ಖಾನೆ, ಬೆಳಗಾವಿ ಬಳಿಯ ಖಾನಾಪುರದಲ್ಲಿ ಹೆಂಚಿನ ಕಾರ್ಖಾನೆ, ,ಹೊಳೆ ಆಲೂರಿನಲ್ಲಿ ಹತ್ತಿಯ ಗಿರಣಿ ಹೀಗೆ ಅನೇಕ ಉದ್ಯಮಗಳನ್ನು ಹುಟ್ಟುಹಾಕಿ ಜನರ ಆಶಾಕಿರಣವಾಗಿದ್ದರು. ಕೇವಲ ಶಿಕ್ಷಣ ಮತ್ತು ಔದ್ಯೋಗೀಕರಣಕ್ಕೆ ಮಾತ್ರವೇ ತಮ್ಮನ್ನು ಸೀಮಿತ ತೊಳಿಸದೇ ಕೃಷಿ ಕ್ಷೇತ್ರ ಮತ್ತು ಬಟ್ಟೆಯ ವ್ಯಾಪಾರ ಮತ್ತು ಸಹಕಾರಿ ಸಂಘಗಳನ್ನು ಆರಂಭಿಸುವ ಮೂಲಕ ಕನ್ನಡಿಗರ ಅಭಿವೃದ್ಧಿಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟಿದ್ದವರು ಶ್ರೀ ವೆಂಕಟರಾಯರು.

Alooruಆರಂಭದಲ್ಲಿ ಜೀವನ ನಡೆಸುವ ಸಲುವಾಗಿ ವಕೀಲಿಕೆಯನ್ನು ಆರಂಭಿಸಿದರಾದರೂ, ವೃತ್ತಿಗಿಂತಲೂ, ಪ್ರವೃತ್ತಿಯಲ್ಲಿಯೇ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ಆಲೂರರೇ ಸ್ವತಃ ಸಾಹಿತಿಗಳಾಗಿ ಅನೇಕ ಕೃತಿಗಳನ್ನು ರಚಿಸಿದರೂ ತಾವೆಂದೂ ಮಹಾನ್ ಸಾಹಿತಿ ಎಂದು ಬೀಗಲೇ ಇಲ್ಲ. ಅದರ ಬದಲಾಗಿ, ಜಯ ಕರ್ನಾಟಕ ವೃತ್ತ ಪತ್ರಿಕೆ ಮತ್ತು ಕರ್ಮವೀರ ವಾರಪತ್ರಿಕೆಯ ಸಂಪಾದಕರಾಗಿದ್ದಾಗ ದ.ರಾ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂ.ಭಾ ಜೋಷಿ, ರಂಗರಾವ್ ದಿವಾಕರ ಮುಂತಾದ ಹಲವಾರು ಸಾಹಿತಿಗಳಿಗೆ ಬೆನ್ನುಲುಬಾಗಿ ನಿಂತು ಅವರ ಮೂಲಕ ಕನ್ನಡ ಸಾಹಿತ್ಯ ಉತ್ತುಂಗ ಸ್ಥಿತಿಗೆ ಏರಲು ಕಾರಣಕರ್ತರಾದರು. ಒಬ್ಬ ಸಾಮಾನ್ಯ ಕವಿ ಅಥವ ಲೇಖಕನ ಕೃತಿಗಳು ಸಾಧಾರವಾಗಿದ್ದರೂ ಕರ್ನಾಟಕಾದ್ಯಂತ ಸಾಹಿತ್ಯ ಕೃಷಿ ನಿರಂತರವಾಗಿದ್ದು ಕರ್ನಾಟಕದ ಎಲ್ಲಾ ಭಾಗಗಳಲ್ಲಿಯೂ ಲೇಖಕರು ಕವಿಗಳೂ ಹುಟ್ಟಬೇಕೆಂಬುದೇ ಅವರ ಉದ್ದೇಶವಾಗಿತ್ತು.

ಆಲೂರರರು ತಮ್ಮ ಗತವೈಭವ’ದಲ್ಲಿ ಬರೆದಿರುವ ಸಾಲುಗಳು

ನಾನು ಕನ್ನಡಿಗ, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾರ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುವುದಿಲ್ಲವೋ, ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾರ ಹೃದಯವು ತಲ್ಲಣಿಸುವುದಿಲ್ಲವೋ, ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ. ಮರಾಠಿಗರ ಪ್ರಾಭಲ್ಯವೇ ಬಹು ಪಾಲಿದ್ದ ಆ ಪ್ರದೇಶಗಳಲ್ಲಿ ಕನ್ನಡ ಮತ್ತು ಕನ್ನಡಿಗರ ದುರ್ಗತಿ, ಅದಕ್ಕಾಗಿ ಅವರು ರೂಢಿಸಿಕೊಂಡ ಮನೋಧರ್ಮವನ್ನು ಎತ್ತಿ ತೋರುತ್ತವೆ.

ಆಲೂರರು, ಆಡಿ ತೋರಿಸುವುದಕ್ಕಿಂತ ತಮ್ಮ ಕೃತಿಗಳ ಮೂಲಕ ಮಾಡಿದ ತೋರಿದ ಕೆಲಸಗಳ ಮೂಲಕ ಕನ್ನಡಿಗರಲ್ಲಿ ಕಿಚ್ಚೆಬ್ಬಿಸಿದ್ದಲ್ಲದೇ, ಅತ್ಮಸ್ಥೈರ್ಯವನ್ನು ಹೆಚ್ಚಿಸಿ ಕನ್ನಡದ ಕೆಲಸ ನನ್ನ ಕೆಲಸ. ಕನ್ನಡದ ಉಳಿವೇ ನನ್ನ ಉಳಿವು ಹಾಗಾಗಿ ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಕನ್ನಡದ ಕೆಲಸ ಮಾಡಬೇಕು. ಹೆಚ್ಚೇನು ಮಾಡದಿದ್ದಲ್ಲಿ, ಕನಿಷ್ಟ ಪಕ್ಷ, ಕನ್ನಡದ ಪುಸ್ತಕಗಳನ್ನು ಮತ್ತು ಕನ್ನಡದ ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಒಬ್ಬ ಲೇಖಕ, ಕವಿ, ಸಾಹಿತಿ ಅಥವಾ ಒಬ್ಬ ಪತ್ರಿಕೋದ್ಯಮಿಯನ್ನು ಪೋಷಿಸಿದಂತಾಗುತ್ತದೆ ಎಂದು ಸಾರಿ ಹೇಳಿದಂತಹವರು ಶ್ರೀ ಆಲೂರು ವೆಂಕಟರಾಯರು.

1956 ರ ನವೆಂಬರ್ 1 ರಂದು ಕರ್ನಾಟಕ ಏಕೀಕರಣಗೊಂಡಾಗ ರಾಯರು ಹಂಪಿಗೆ ಹೋಗಿ ಅಲ್ಲಿನ ಶ್ರೀ ವಿರೂಪಾಕ್ಷ ದೇವಾಲಯದಲ್ಲಿ ಕನ್ನಡದ ತಾಯಿ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಏಕೀಕರಣವನ್ನು ಇಷ್ಟು ಮಾತ್ರಾ ಒಗ್ಗೂಡಿದಲು ಸಾಧ್ಯವಾಯಿತು. ಈ ಪ್ರಕ್ರಿಯೆಯಲ್ಲಿ, ಕನ್ನಡಿಗರೇ ಬಹುಸಂಖ್ಯಾತರಾದ, ಸೊಲ್ಲಾಪುರ, ಕೊಲ್ಹಾಪುರ ಮಹಾರಾಷ್ಟ್ರಕ್ಕೆ ಸೇರಿಕೊಂಡರೆ, ಕಾಸರಗೋಡು ಕೇರಳಕ್ಕೆ ಸೇರಿಕೊಂಡಿದ್ದು ಮತ್ತು ಬಳ್ಳಾರಿಯ ಸುತ್ತಮುತ್ತಲಿನ ಬಹುಭಾಗ ಆಂಧ್ರ ಪ್ರದೇಶಕ್ಕೆ ಸೇರಿ ಹೋಗಿದ್ದಕ್ಕೆ ವಿಷಾಧ ವ್ಯಕ್ತಪಡಿಸಿದ್ದರು. ರಾಷ್ಟ್ರಗೀತೆಯಲ್ಲಿ ನಮೂದಿಸಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರಿಗೆ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡು ಅಂದಿನ ಭಾರತದ ಪ್ರಧಾನಿಗಳಾಗಿದ್ದ ಶ್ರೀ ಜವಹರ್ ಲಾಲ್ ನೆಹರು ಅವರಿಗೆ ಮತ್ತು ರಾಷ್ಟ್ರಪತಿಗಳಿಗೆ ರಾಷ್ಟ್ರಗೀತೆಯಲ್ಲಿ ಕರ್ನಾಟಕದ ಹೆಸರನ್ನು ಸೇರ್ಪಡೆ ಮಾಡಬೇಕು ಎಂದು ಪತ್ರವನ್ನು ಬರೆದಿದ್ದರು 1963 ರಲ್ಲಿ ರಾಜ್ಯ ರಚನೆಯ ಎಂಟನೇ ವಾರ್ಷಿಕೋತ್ಸವದಂದು ಬೆಂಗಳೂರಿನ ರಾಜಧಾನಿಯಲ್ಲಿ ಅವರನ್ನು ಗೌರವಿಸಲಾಗಿತ್ತು. 25 ಫೆಬ್ರವರಿ 1964 ರಂದು ಧಾರವಾಡದ ತಮ್ಮ ನಿವಾಸದಲ್ಲಿ ವಯೋಸಹಜವಾಗಿ ನಿಧನರಾಗುವ ಮೂಲಕ ಕನ್ನಡಾಂಬೆ ಅಕ್ಷರಶಃ ತನ್ನ ಹಿರಿಯ ಪುತ್ರನನ್ನು ಕಳೆದುಕೊಂಡಂತಾಯಿತು ಎಂದರೂ ಅತಿಶಯವಲ್ಲ.

ವಕೀಲರಾಗಿ, ಸಾಹಿತಿಗಳಾಗಿ, ಪತ್ರಿಕಾ ಸಂಪಾದಕರಾಗಿ, ಪ್ರಕಾಶಕರಾಗಿ, ಅನೇಕ ಸಂಘ ಸಂಸ್ಥೆಗಳ ಸಂಸ್ಕಾಪಕರಾಗಿ, ಸಂಘಟಿಕರಾಗಿ, ಸಂಶೋಧಕರಾಗಿ, ಸ್ವಾತಂತ್ಯ್ರ ಹೋರಾಟಗಾರರಾಗಿ ಒಟ್ಟಿನಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಆಲೂರು ವೆಂಟರಾಯರು ಮಾಡದ ಕೆಲಸವಿಲ್ಲ ಎಂದರೂ ತಪ್ಪಾಗಲಾರದು. ಅಂತಹ ಮಹನೀಯರ ಅನನ್ಯ ಸೇವೆಯನ್ನು ಕೇವಲ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಮಾತ್ರವೇ ನೆನಪಿಸಿ ಕೊಳ್ಳುವಂತಾಗದೇ ಅವರ ನನಸಾದ ಕರ್ನಾಟಕದ ಏಕೀಕರಣವನ್ನು ಸದಾಕಾಲವೂ ಚಿರಸ್ಥಾಯಿಯಾಗಿಡುವಂತೆ ಮತ್ತೆ ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕೈವಾಡದಿಂದ ಚೂರಾಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮ ನಿಮ್ಮ ಮೇಲೆಯೇ ಇದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

4 thoughts on “ಶ್ರೀ ಆಲೂರು ವೆಂಕಟರಾಯರು

  1. ಲೇಖನಸರಣಿ ಆಲೋಚನೆ ಚೆನ್ನಾಗಿದೆ. ಮುಂದುವರೆಸಿ.

    Like

Leave a comment