ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀಗಂಧ ಕನ್ನಡ ಸಂಘದ ವತಿಯಿಂದ 64ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮತ್ತು ಸಡಗರಗಳಿಂದ ಅಧ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮವನ್ನು ಸ್ಥಳೀಯ ಮುಖಂಡರುಗಳಾದ ಶ್ರೀಯುತ ತಿಂಡ್ಲು ಬಸವರಾಜ್ ಅವರ ಸಮ್ಮುಖದಲ್ಲಿ ಶ್ರೀ ಹರಿಯವರು ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಧ್ವಜವನ್ನು ತಿಂಡ್ಲುವಿನ ಬಸವೇಶ್ವರ ಪ್ರತಿಮೆಯ ಆವರಣದಲ್ಲಿ ಆರೋಹಣ ಮಾಡುವುದರ ಮೂಲಕ ಉಧ್ಘಾಟಿಸಲಾಯಿತು. ನಂತರ ಎಲ್ಲರ ಒಕ್ಕೊರಲಿನ ಕಂಠಗಳಿಂದ ಸುಂದವಾಗಿ ಮೂಡಿಬಂದ ನಾಡ ಗೀತೆ ಜೈ ಭಾರತ ಜನನಿಯ ತನುಜಾತೆ ಎಲ್ಲರ ಗಮನ ಸೆಳೆಯಿತು. ಶ್ರೀಯುತ ಹರಿಯವರು ತಮ್ಮ ಭಾಷಣದಲ್ಲಿ ಕನ್ನಡದ ಕುಲ ಪುರೋಹಿತ ಶ್ರೀ ಆಲೂರು ವೆಂಕಟರಾಯರನ್ನು ನೆನೆಸಿಕೊಳ್ಳುತ್ತಾ ಹರಿದು ಹಂಚಿಹೋಗಿದ್ದ ಕರುನಾಡನ್ನು ಒಗ್ಗೂಡಿಸಲು ಅವರ ಮಾಡಿದ ಕಾರ್ಯಗಳು ಭಾಷಾವಾರು ಆಧಾರದಲ್ಲಿ 1950ರಲ್ಲಿ ಮೈಸೂರು ಸಂಸ್ಥಾನದ ಉದಯ ನಂತರ ಮೈಸೂರು ರಾಜ್ಯ 1973 ನವೆಂಬರ್ 1 ರಂದು ಕರ್ನಾಟಕ ಎಂದು ಪುನರ್ನಾಮಕರಣ ಗೊಂಡದ್ದನ್ನು ವಿವರಿಸಿ ಕನ್ನಡಿಗರ ಹೃದಯ ವೈಶಾಲ್ಯತೆಯನ್ನು ಕೊಂಡಾಡಿದರು. ಅವರ ನಂತರ ನೆರೆದಿದ್ದ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ರಾಜಗೋಪಾಲ್ ಅವರೂ ಸಹಾ ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಷಯಗಳನ್ನು ಕೋರಿ ಈ ಕನ್ನಡದ ಹಬ್ಬವನ್ನು ಸಂಭ್ರಮ ಸಡಗರದಿಂದ ಹೆಮ್ಮೆಯಿಂದ ಆಚರಿಸುವಂತೆ ಕರೆಕೊಟ್ಟರು. ಇಡೀ ಕಾರ್ಯಕ್ರಮವನ್ನು ಪ್ರಜ್ವಲ್ ಗೌಡ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.
ಹೀಗೆ ಧ್ವಜಾರೋಃರಣ ಪೂರ್ಣವಾದ ನಂತರ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು. ನಂದಿ ಕೋಲು ಮತ್ತು ವೀರಗಾಸೆ ಕುಣಿತ ನೆರೆದಿದ್ದವರ ಮನಸ್ಸನ್ನು ಸೆಳೆದರೆ, ಹತ್ತಾರು ಜನರ ತಮಟೆಯ ಗತ್ತು ನೆರೆದಿದ್ದವರೆಲ್ಲರೂ ಸುಮ್ಮನೆ ನಿಂತ ಜಾಗದಲ್ಲಿ ನಿಲ್ಲಲಾಗದೇ, ಕಾಲನ್ನು ಅತ್ತಿತ್ತ ಸರಿಸುತ್ತಾ ಒಂದೆರದು ಹೆಜ್ಜೆ, ಕುಣಿತವನ್ನು ಹಾಕದೇ ಸುಮ್ಮನಿರಲು ಸಾಧ್ಯವೇ ಇರಲಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ಇನ್ನು ದೊಡ್ಡದಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದ ಡಿಜೆಯಲ್ಲಿಯೂ ಕೂಡಾ ಚಿತ್ರ ವಿಚಿತ್ರ ಚಿತ್ರ ಗೀತೆಗಳ ಭರಾಟೆಯಿಲ್ಲದೇ ಕೇವಲ ಕನ್ನಡ ಸ್ವಾಭಿಮಾನ ಹೆಚ್ಚಿಸುವ ಮತ್ತು ಗೌರವವನ್ನು ಎತ್ತಿ ಹಿಡಿಯುವ ಗೀತೆಗಳಿಗೆ ಮೀಸಲಾಗಿದ್ದು ಕಾರ್ಯಕ್ತಮದ ಘನತೆಯನ್ನು ಹೆಚ್ಚಿಸಿತು ಎಂದರೆ ತಪ್ಪಾಗಲಾರದು. ಎಲ್ಲದರ ಹಿಂದೆ ದೊಡ್ಡದಾಗಿ ಟ್ರಾಕ್ಟರ್ ಮೇಲೆ ಕೂರಿಸಿದ್ದ ತಾಯಿ ಭುವನೇಶ್ವರಿಯ ಚಿತ್ರವ ಎಲ್ಲರ ಗಮನ ಸೆಳೆಯಿತು. ಅದರ ಜೊತೆಗಿದ್ದ ಬೆದರು ಗೊಂಬೆಗಳೂ ಸಣ್ಣ ಪುಟ್ಟ ಮಕ್ಕಳ ಮನಸ್ಸೂರೆಗೊಂಡವು.
ನೆರೆದಿದ್ದ ನೂರಾರು ಕನ್ನಡಿಗರು ಮತ್ತು ಕನ್ನಡದ ಬಾವುಟ ಹಿಡಿದ್ದಿದ್ದ ನೂರಾರು ಶಾಲ ಮಕ್ಕಳೊಂದಿಗೆ ನಂಜಪ್ಪ ವೃತ್ತ ದಾಟಿ ವಿದ್ಯಾರಣ್ಯಪುರ ಮುಖ್ಯ ರಸ್ತೆಯ ಮುಖಾಂತರ ವಿದ್ಯಾರಣ್ಯ ಪುರ ಸುವರ್ಣ ಮುಹೋತ್ಸವ ಕ್ರೀಡಾಂಗಣದವರೆಗೂ ಅದ್ಧೂರಿಯಾಗಿ ಬಾಜಾ ಭಜಂತ್ರಿಯೊಂದಿಗೆ ಎಲ್ಲರ ಕುಣಿತಗಳೊಂದಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಇಡೀ ಕಾರ್ಯಕ್ರಮದಲ್ಲಿ ಶಿಸ್ತಿಗೆ ಒತ್ತುಕೊಟ್ಟಿದ್ದು ಮತ್ತು ರಸ್ತೆಗಳಲ್ಲಿ ಯಾವುದೇ ವಾಹನಗಳ ಓಡಾಟಕ್ಕೆ ತೊಂದರೆ ಕೊಡದಂತೆ ನೋಡಿಕೊಂಡಿದ್ದು ಇಡೀ ಶ್ರೀಗಂಧ ಕನ್ನಡ ಸಂಘದ ಪದಾದಿಕಾರಿಗಳ ಶ್ರಮ ಮತ್ತು ಆಸ್ಥೆಯನ್ನು ಎದ್ದು ತೋರಿಸುತ್ತಿತ್ತು. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗಳಿಗೆ ಸದಾ ಒತ್ತನ್ನು ನೀಡುತ್ತಾ ರಾಜ್ಯದೆಲ್ಲಡೆಯಾದರೂ ವಿಪತ್ತು ಸಂಭವಿಸಿದಾಗ ತುರ್ತಾಗಿ ಹೋಗಿ ತಮ್ಮ ಕೈಲಾದ ಸಹಾಯ ಮಾಡುವುದರಲ್ಲಿ ಎತ್ತಿದ ಕೈಯಾಗಿರುವ ಶ್ರೀಗಂಧ ಕನ್ಣಡ ಸಂಘದ ಈ ಸಮಾಜ ಮುಖೀಕಾರ್ಯಕ್ರಮಗಳು ನಿರಂತರವಾಗಿರಲಿ ಎಂದು ಆಶಿಸುತ್ತೇವೆ.
ಕನ್ನಡ ಬಗ್ಗೆಯ ಆಸ್ಥೆ ಕೇವಲ ನವೆಂಬರ್ 1 ರಂದು ಅಥವಾ ಇಡೀ ನವೆಂಬರ್ ತಿಂಗಳು ಮಾತ್ರಕ್ಕೆ ಮೀಸಲಾಗಿಡದೆ ಇಡೀ ವರ್ಷಾದ್ಯಂತ ನಮ್ಮೆಲ್ಲರ ಹೃದಯದಲ್ಲಿರಲಿ. ಕನ್ನಡಕ್ಕೆ ಕೈ ಎತ್ತು ಕಂದಾ ನಿನ್ನ ಬಾಳು ಕಲ್ಪವೃಕ್ಷವಾಗುತ್ತದೆ.
ಏನಂತೀರೀ