ಅಲ್ಲಿ ಹಾರ ತುರಾಯಿಗಳಿರಲಿಲ್ಲ. ಬಾಜಾ ಭಜಂತ್ರಿಯ ಅಬ್ಬರವಿರಲಿಲ್ಲ. ಹೇಳಿಕೊಳ್ಳುದಕ್ಕೆ ದೊಡ್ಡವರಾರು ಇರರಲಿಲ್ಲ. ಅಲ್ಲಿದ್ದ ಬಹುತೇಕರು ಸಣ್ಣ ವಯಸ್ಸಿನ ಮಕ್ಕಳೇ. ಇನ್ನೂ ಹೇಳಬೇಕೆಂದರೆ ಅಲ್ಲಿದ್ದವರ ಹೆಚ್ಚಿನ ಮಾತೃಭಾಷೆ ಕನ್ನಡವೇ ಆಗಿರಲಿಲ್ಲ. ಆದರೂ ಅವರೆಲ್ಲರೂ ಸುಲಲಿತವಾಗಿ ಕನ್ನಡ ಮಾತನಾಡುವ ಮೂಲಕ ಕನ್ನಡಿಗರೇ ಆಗಿದ್ದರು ಮತ್ತು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಕಠಿ ಬದ್ದರಾಗಿದ್ದರು.
ಹೌದು. ನೆನ್ನೆ ಬೆಳಿಗ್ಗೆ ಬೆಂಗಳೂರಿನ ತಿಂಡ್ಲುವಿನ ವಿಶ್ವೇಶ್ವರಯ್ಯ ಬಡಾವಣೆಯ ಏಕದಂತ ಮಿತ್ರ ವೃಂದದ ಸಣ್ಣ ವಯಸ್ಸಿನ ಮಕ್ಕಳು ತಮ್ಮ ಪೋಷಕರೊಡಗೂಡಿ ಕರುನಾಡ ಹೆಮ್ಮೆಯ ಹಬ್ಬ ಕರ್ನಾಟಕ ರಾಜ್ಯೋತ್ಸವ ಅರ್ಥಾತ್ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಮತ್ತು ಅಷ್ಟೇ ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮದ ರಂಗ ಸಜ್ಜಿಕೆಯನ್ನು ಆ ಹುಡುಗರೇ ಸ್ವತಃ ಹೆಚ್ಚಿನ ಖರ್ಚಿಲ್ಲದೇ ಮಾಡಿದ್ದರು. ದೊಡ್ಡ ಹುಡುಗರು ಕನ್ನಡದ ಬಾವುಟವನ್ನು ಅಕ್ಕ ಪಕ್ಕದ ಮರಗಳಿಗೆ ಕಟ್ಟಿ ಕನ್ನಡ ಕಂಪನ್ನು ಹರಿಸಲು ಪ್ರಯತ್ನಿಸುತ್ತಿದ್ದರೆ, ಚಿಕ್ಕ ಚಿಕ್ಕ ಹುಡುಗರು ಸುತ್ತ ಮುತ್ತಲಿನ ಎಲ್ಲಾ ಮನೆಗಳಿಗೂ ಹೋಗಿ ಕಾರ್ಯಕ್ರಮಕ್ಕೆ ಬರಲು ಮತ್ತೊಮ್ಮೆ ನೆನಪಿಸುತ್ತಿದ್ದದ್ದು ಕಾರ್ಯಕ್ರಮದ ಯಶಸ್ವಿಯಾಗಲು ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಸಹಕರಿಸುತ್ತಿದ್ದದ್ದು ಎತ್ತಿ ತೋರುತ್ತಿತ್ತು.
ನಿಗಧಿತ ಸಮಯಕ್ಕಿಂತ ತುಸು ತಡವಾದರೂ ಕನ್ನಡದ ಹಳದಿ ಮತ್ತು ಕೆಂಪು ಬಾವುಟದ ಜೊತೆ ತ್ರಿವರ್ಣ ಧ್ವಜವನ್ನೂ ಕನ್ನಡ ನಾಡ ಗೀತೆ ಜಯ ಭಾರತ ಜನನಿಯ ತನುಜಾತೆಯ ಮೂಲಕ ಏರಿಸಿದ್ದಲ್ಲದೆ, ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಸ್ಥಳಿಯ ಜನಪ್ರಿಯ ನಗರ ಸಭಾ ಸದಸ್ಯೆ ಶ್ರೀಮತಿ ಕುಸುಮಾ ಮಂಜುನಾಥ್ ಮತ್ತು ವಕ್ತಾರರು ಹಚ್ಚೇವು ಕನ್ನಡ ದೀಪ ಎನ್ನುವ ಹಿನ್ನಲೆ ಹಾಡಿನೊಂದಿಗೆ ದೀಪ ಬೆಳಗಿಸಿ, ತಾಯಿ ಭುವನೇಶ್ವರಿಗೆ ಮತ್ತು ಧ್ವಜಗಳಿಗೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೆರೆದಿದ್ದವರೆಲ್ಲರೂ ಭುವನೇಶ್ವರಿ ತಾಯಿಗೆ ಪೂಜಿಸಿದ ನಂತರ ಮುಖ್ಯ ಅತಿಥಿಗಳು ಸಭಿಕರನ್ನು ಉದ್ದೇಶಿಸಿ ಕನ್ನಡ ರಾಜ್ಯೋತ್ಸವದ ಔಚಿತ್ಯ ಕನ್ನಡ ನಾಡು ಬೆಳೆದುಬಂದ ಪರಿಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಾ
ತಿದ್ದದೆ ತೀಡದೆ ಅಂದ ಕಾಣದು ಗೊಂಬೆ. ಬಿತ್ತದೆˌ ಕೆತ್ತದೆˌ ಬೆಳೆಯ ಬೆಳೆಯದು ಭೂಮಿ. ನಿಂದನೆಗೆ ನೋವಿಗೆ ಅಳುಕಿದರೆ ರೂಪುಗೊಳ್ಳದು ಮಾನವನ ಬದುಕು. ಎನ್ನುವ ಹಾಗೆ ಪರಭಾಷೆಯರ ನಡುವೆಯೂ ಕನ್ನಡಿಗರು ಕೆಚ್ಚದೆಯಿಂದ ಸೆಟೆದು ನಿಲ್ಲಬೇಕು ಎಂದು ತಿಳಿಸಿದರು. ಹಾಗೆಯೇ ಶಿಲ್ಪಕಲೆ, ಸಾಹಿತ್ಯ,ಸಂಸ್ಕೃತಿ ಮತ್ತು ಸಂಸ್ಕಾರಗಲಲ್ಲಿ ಸಂಪದ್ಭರಿತವಾದ ಕನ್ನಡ ನಾಡನ್ನು ಒಬ್ಬ ಲಾವಣಿಕಾರ ಹೇಳಿದಂತೆ ಒಳ್ಳೇ ವಿದ್ಯಾವಂತರ್ಯಾರ್? ಒಳ್ಳೇ ಬುದ್ದಿವಂತರ್ಯಾರ್? ಕಲ್ಲಿನ ಚಿತ್ರ ಕೊರೆದೋರ್ಯಾರ್? ನಾವಲ್ಲವೇ, ನಮ್ಮ ಜನರಲ್ಲವೇ? ಎಂದು ನಮ್ಮ ಬೇಲೂರು ಹಳೇಬೀಡು ಶ್ರವಣ ಬೆಳಗೊಳ ಮತ್ತಿತರ ಪ್ರದೇಶಗಳನ್ನು ಉಲ್ಲೇಖಿಸುತ್ತಾ ಕನ್ನಡಿಗರನ್ನು ಹೊಗಳಿ, ನಾವೆಲ್ಲರೂ ಕನ್ನಡಿಗರು ಎಂದು ಹೆಮ್ಮೆಯಿಂದ, ಶಾಂತಿ ಸಹಬಾಳ್ವೆಯಿಂದ ಇರಲು ತಿಳಿಸಿದರು
ಕಾರ್ಯಕ್ರಮದ ವಕ್ತಾರ ಭಾಷಣದಲ್ಲಿ ಶ್ರೀಕಂಠ ಬಾಳಗಂಚಿಯವರು, ಹಿಂದೂಸ್ಥಾನದಲ್ಲಿದ್ದವರೆಲ್ಲರೂ ಹೇಗೆ ಹಿಂದೂಗಳಾಗುತ್ತಾರೋ ಅದೇ ರೀತಿ ಕರ್ನಾಟಕದಲ್ಲಿ ವಾಸಮಾಡುವವರೆಲ್ಲರೂ ಕನ್ನಡಿಗರೇ ಎಂದು ಹೇಳುತ್ತಾ ಕನ್ನಡಿಗರ ಹಿರಿಮೆ ಗರಿಮೆಯನ್ನು ಎತ್ತಿ ತೋರಿಸಿ ಆ ಮೂಲಕ ನೆರೆದಿದ್ದ ಕನ್ನಡಿಗರಲ್ಲರಿಗೂ ಹೆಮ್ಮೆ ಪಡುವಂತೆ ಮಾಡಿ ಕೇವಲ ನವೆಂಬರ್ ಮಾಸದಲ್ಲಿ ಮಾತ್ರವೇ ಕನ್ನಡಿಗರಾಗದೇ ಕನ್ನಡವನ್ನು ತಮ್ಮ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲೆಸಿದಬೇಕೆಂದು ತಿಳಿಸಿ, ಕಡೆಯಲ್ಲಿ ಕನ್ನಡವನ್ನು ಹೇಗೆ ಉಳಿಸಿ ಬೆಳೆಸಬೇಕು ಎಂದು ನೆರೆದಿದ್ದ ತಾಯಂದಿರಿಗೆ ಕೆಲ ಕಿವಿಮಾತನ್ನು ಹೇಳುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯ ಮಾಡಿದರು.
ವಕ್ತಾರ ಭಾಷಣವನ್ನು ಈ ಕೆಳಗಿರುವ ವಿಡೀಯೋದಲ್ಲಿ ಕೇಳಬಹುದಾಗಿದೆ.
ಈ ಎರಡೂ ಭಾಷಣಗಳು ಮುಗಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪುಟ್ಟ ಪುಟ್ಟ ಮಕ್ಕಳು ಮೂರ್ನಾಲ್ಕು ಕನ್ನಡದ ಜನಪ್ರಿಯ ಹಾಡುಗಳ ನೃತ್ಯ ಪ್ರದರ್ಶಿಸಿದರೆ, ಮತ್ತೊಬ್ಬ ಪ್ರತಿಭಾವಂತ ಯುವತಿ ಕೀಬೋರ್ಡಿನಲ್ಲಿ ಐದಾರು ಸಂಗೀತ ಕೃತಿಗಳನ್ನು ನುಡಿಸಿ ನೆರೆದಿದ್ದ ಎಲ್ಲರನ್ನೂ ರಂಜಿಸಿದರು.
ರಾಷ್ಟ್ರಗೀತೆಯಾದ ಜನಗಣ ಮನವನ್ನು ಎಲ್ಲರೂ ಒಕ್ಕೊರಿನಿಂದ ಹಾಡುವ ಮೂಲಕ ಕಾರ್ಯಕ್ರಮ ಚಿಕ್ಕದಾಗಿ ಆದರೆ ಅಷ್ಟೇ ಜೊಕ್ಕದಾಗಿ ಮುಕ್ತಾಯವಾಯಿತು. ಕಾರ್ಯಕ್ರಮದ ನಂತರ ಎಲ್ಲರಿಗೂ ಪ್ರಸಾದ ವಿನಿಯೋಗ ಮಾಡಿದ್ದದ್ದು ವಿಶೇಷವಾಗಿತ್ತು. ನವೆಂಬರ್ ಮಾಸಾದ್ಯಂತ ಎಲ್ಲೆಲ್ಲೂ ಕಾಣ ಸಿಗುವ ಖನ್ನಡ ಓರಾಟಗಾರರು ಇಲ್ಲವೇ ಓಲಾಟಗಾರರ ರೋಲ್ಕಾಲ್ ರಾಜ್ಯೋತ್ಸವಕ್ಕಿಂತ ಇಂತಹ ಅರ್ಥಪೂರ್ಣ ರಾಜ್ಯೋತ್ಸವಗಳು ಮಹತ್ವ ಪಡೆಯುತ್ತವೆ
ಏನಂತೀರೀ?