ಕನ್ನಡದ ಕಣ್ವ  ಬಿ.ಎಂ.ಶ್ರೀಕಂಠಯ್ಯ

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು| ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು|| ಈ ಹಾಡನ್ನು ಕೇಳದಿರುವ ಕನ್ನಡಿಗನೇ ಇಲ್ಲ ಎಂದರೂ ತಪ್ಪಾಗಲಾರದು. ಈ ಕವಿತೆ ಮೂಲತಃ ಆಂಗ್ಲ ಸಾಹಿತಿ ಶ್ರೀ ನ್ಯೂಮನ್ ಅವರು ಬರೆದ Lead Kindly Light ಎಂಬ ಕವಿತೆಯ ಕನ್ನಡದ ಅನುವಾದ ಎಂದರೆ ಆಶ್ವರ್ಯವಾಗುತ್ತದಲ್ಲವೇ? ಹೌದು ಇಂಗ್ಲೀಷ್ ಭಾಷೆಯ ಅನೇಕ ಸುಪ್ರಸಿದ್ದ ಕೃತಿಗಳನ್ನು ಕನ್ನಡದ ಸೊಗಡಿಗೆ ತಕ್ಕಂತೆ ಇಲ್ಲಿಯ ಸಂಸ್ಕೃತಿಗೆ ಹೊಂದುವಂತೆ ಕನ್ನಡಕ್ಕೆ ಅನುವಾದಿಸುವ ಭಾಷಾ ಪ್ರಾವೀಣ್ಯತೆ ಮತ್ತು ಚಾಕಚಕ್ಯತೆ ಹೊಂದಿದ್ದಂತಹ, ಆರಂಭದಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಇಂಗ್ಲೀಷಿನಲ್ಲಿ ಆರಂಭಿಸಿ ನಂತರ ಕನ್ನಡದ ಸಾಹಿತಿಗಳಾಗಿ ಪರಿವರ್ತಿರಾದ ಮತ್ತು ನೂರಾರು ಕನ್ನಡ ಲೇಖಕರಿಗೆ ಗುರುಗಳಾಗಿ ಅವರ ಬರವಣಿಗೆಯನ್ನು ಪ್ರೋತ್ಸಾಹಿಸಿದ ಮತ್ತು ಕನ್ನಡದ ಕಣ್ವ ಎಂದೇ ಖ್ಯಾತರಾಗಿದ್ದಂತಹ ಬಿ.ಎಂ.ಶ್ರೀಕಂಠಯ್ಯ ಅಂದರೆ ನಮ್ಮೆಲ್ಲರ ಪ್ರೀತಿಯ ಬಿ.ಎಂ.ಶ್ರೀ ಅವರನ್ನು ಅರಿಯೋಣ,

bms1

ಮೂಲತಃ ಬೆಳ್ಳೂರಿನವರಾದ ಮೈಲಾರಯ್ಯ ಮತ್ತು ಭಾಗೀರಥಮ್ಮ ದಂಪತಿಗಳ ಮಗನಾಗಿ ತಮ್ಮ ಅಜ್ಜನ ಊರಾದ ಸಂಪಿಗೆಯಲ್ಲಿ ಬಿ. ಎಂ. ಶ್ರೀಯವರು ಜನವರಿ 3, 1884 ರಂದು ಜನಿಸಿದರು ತಮ್ಮ ಬಾಲ್ಯದ ಶಿಕ್ಷಣವನ್ನು ತಮ್ಮ ಊರಾದ ಬೆಳ್ಳೂರಿನಲ್ಲಿಯೇ ಆರಂಭಿಸಿ ಮುಂದೆ ಶ್ರೀರಂಗಪಟ್ಟಣ ಹಾಗೂ ಮೈಸೂರಿನಲ್ಲಿ ಮುಂದುವರೆಸಿ, ಬಿ. ಎ. ಪದವಿಯನ್ನು ಬೆಂಗಳೂರಿನಲ್ಲಿ ಮುಗಿಸಿ, ಎಂ. ಎ. ಹಾಗೂ ಎಲ್. ಎಲ್. ಬಿ. ಪದವಿಯನ್ನು ಮದರಾಸಿನಲ್ಲಿ ಪೂರ್ಣಗೊಳಿಸಿದರು. ಅವರ ತಂದೆಗೆ ಮಗ ವೈದ್ಯನಾಗಲಿ ಎಂಬ ಆಸೆ. ಆದರೆ ಶ್ರೀಕಂಠಯ್ಯನವರು ತಮ್ಮ ತಂದೆಯಂತೆಯೇ ಇಂಗ್ಲಿಷ್‌ ಮತ್ತು ಕಾನೂನು ಪದವಿ ಪಡೆದರಾದರೂ ಆದರೆ ವಕೀಲಿ ವೃತ್ತಿಯಲ್ಲಿ ಮುಂದುವರೆಯದೆ. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್‌ ಅಧ್ಯಾಪಕ ವೃತ್ತಿಗೆ ಸೇರಿಕೊಂಡರು. ಆಗೆಲ್ಲಾ ಬ್ರಿಟಿಷರದ್ದೇ ಪ್ರಾಭಲ್ಯ. ಅವರ ದಾಸ್ಯದಿಂದ ಹೊರಬರಲು ಸಾದ್ಯವೇ ಆಗುತ್ತಿರಲಿಲ್ಲ. ಅದು ಎಲ್ಲಿಯ ವರೆಗೆ ಇತ್ತೆಂದರೆ, ಇವರಿಗೆ ಕನ್ನಡವೇ ಬರುವುದಿಲ್ಲವೇನೋ? ಅವರು ಇಂಗ್ಲೇಂಡಿನಿಂದ ಬಂದವರೇನೋ? ಎನ್ನುವಂತಹ ಮಾತು ಕಥೆ , ವ್ಯವಹಾರ ಉಡುಗೆ ತೊಡುಗೆ ಎಲ್ಲವೂ ಅವರದ್ದೇ ಅನುಕರಣೆ. ಅವರ ಬಣ್ಣ ಮಾತ್ರ ಭಾರತೀಯ ಉಳಿದದ್ದೆಲ್ಲಾ ಬ್ರಿಟೀಷ್ ಅಂಧಾನುಕರಣೆ. ಇಂಗ್ಲೀಷಿನ ಜೊತೆ ಜೊತೆಯಲ್ಲಿಯೇ ಕನ್ನಡವನ್ನೂ ಭೋಧಿಸುತ್ತಿದ್ದರಾದರೂ, ಆಂಗ್ಲ ಭಾಷೆಯ ಮೇಲೆಯೇ ಅಪಾರವಾದ ಮೋಹ. ಆ ಮೋಹ ಎಷ್ಟಿತ್ತೆಂದರೆ, ಕನ್ನಡದ ಪಾಠ ಪ್ರವಚನವನ್ನೂ ಶ್ರೀಕಂಠಯ್ಯನವರು ಇಂಗ್ಲೀಷಿನಲ್ಲೇ ಮಾಡುತ್ತಾರೆ ಎಂದು ಜನ ಆಡಿಕೊಳ್ಳುವಷ್ಟಿತ್ತು.

ಕನ್ನಡ ಎಂದರೆ ಎಲ್ಲರಿಗೂ ತಾತ್ಸಾರದ ಭಾವನೆ ಕನ್ನಡದಲ್ಲಿ ಏನಿದೆ? ಎನ್ನುವಂತಹ ಉದ್ದಟತನ. ಕನ್ನಡಿಗರೇ ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅದೊಂದು ದಿನ ಇದ್ದಕ್ಕಿದ್ದಂತೆಯೇ, ಶ್ರೀಕಂಠಯ್ಯನವರಿಗೆ ಸ್ವತಃ ಜ್ಞಾನೋದಯವಾಗಿ ಕನ್ನಡವನ್ನು ಮತ್ತು ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯಲು ನಿರ್ಧರಿಸಿ, ತಮ್ಮ ಇಡೀ ಜೀವನವನ್ನು ಕನ್ನಡಕ್ಕಾಗಿಯೇ ಮುಡಿಪಾಗಿಟ್ಟವರು . ಅದಕ್ಕಾಗಿಯೇ ಧಾರವಾಡದಲ್ಲಿ 1910ರಲ್ಲಿ ಪ್ರಥಮಬಾರಿಗೆ ಎಲ್ಲರನ್ನೂ ಒಗ್ಗೂಡಿಸಿ ಕನ್ನಡ ಮಾತು ತಲೆಯೆತ್ತುವ ಬಗೆ ಎಂಬ ಭಾಷಣ ಮಾಡಿ ಎಲ್ಲರನ್ನೂ ಒಗ್ಗೂಡಿಸುವ ಕಾಯಕದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ಪುರಾಣದಲ್ಲಿ ವಿಶ್ವಾಮಿತ್ರರ ತಪಸ್ಸನ್ನು ಭಂಗಗೊಳಿಸಲು ಮೇನಕೆ ಬಂದು, ಅವರಿಬ್ಬರ ಪ್ರೇಮಾಂಕುರದ ಪರಿಣಾಮವಾಗಿ ಶಕುಂತಲೆಯ ಜನನವಾಗುತ್ತದೆ. ನಂತರ ವಿಶ್ವಾಮಿತ್ರರಿಗೆ ತಮ್ಮ ತಪ್ಪಿನ ಅರಿವಾಗಿ ಮೇನಕೆಯನ್ನು ಬಿಟ್ಟು ಹೊರಟಾಗ, ಮೇನಕೆಯೂ ತಾನು ಬಂದಿದ್ದ ಕೆಲಸವಾಯಿತೆಂದು ಆ ಪುಟ್ಟ ಕಂದ ಶಕುಂತಳೆಯನ್ನು ಅನಾಥವಾಗಿ ಕಾಡಿನಲ್ಲಿ ಬಿಟ್ಟು ಹೋದಾಗ, ಯಾರ ದಿಕ್ಕು ದೆಸೆಯಿಲ್ಲದಿದ್ದ ಆ ಅನಾಥ ಮಗುವನ್ನು ಕಣ್ವ ಮಹರ್ಷಿಗಳು ಸಾಕಿ ಸಲಹಿ ದೊಡ್ಡವಳನ್ನಾಗಿ ಮಾಡಿ ಆಕೆಯ ಜೀವನವನ್ನು ಒಂದು ದಡಕ್ಕೆ ಸೇರಿಸುತ್ತಾರೆ. ಅಂತೆಯೇ ಕನ್ನಡಿಗರಿಂದಲೇ ಅನಾಥವಾಗಿದ್ದ ಕನ್ನಡವನ್ನು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀಕಂಠಯ್ಯನವರು ಎತ್ತಿ ಹಿಡಿದು, ಲಾಲಿಸಿ, ಪಾಲಿಸಿ, ಪೋಷಿಸಿ, ಕನ್ನಡ ನಾಡಿನ ಮೂಲೆ ಮೂಲೆಗಳನ್ನೂ ಸುತ್ತಿ ತಮ್ಮ ಪ್ರಖರವಾದ ಭಾಷಣಗಳ ಮೂಲಕ ಕನ್ನಡಿಗರಲ್ಲಿ ಕನ್ನಡತನವನ್ನು ಜಾಗೃತಗೊಳಿಸಿ, ಕಣ್ವರು ಅನಾಥ ಶಕುಂತಲೆಯನ್ನು ಬೆಳಸಿದಂತೆ ಅನಾಥ ವಾಗಿದ್ದ ಕನ್ನಡ ಭಾಷೆಯನ್ನು ಬೆಳೆಸಲು ಬಿ.ಎಂ.ಶ್ರೀ, ತಮ್ಮ ಸಂಪೂರ್ಣ ತನು ಮನ ಧನ ಮತ್ತು ಶಕ್ತಿಯನ್ನು ಧಾರೆಯೆರೆದು ಕನ್ನಡಕ್ಕೆ ಗೌರವವನ್ನು ತಂದು ಕೊಟ್ಟಿದ್ದಕ್ಕಾಗಿ ಜನರು ಪ್ರೀತಿಯಿಂದ ಅವನ್ನು ಕನ್ನಡದ ಕಣ್ವ ಎಂದು ಕರೆದದ್ದಲ್ಲಿ ಅತಿಶಯೋಕ್ತಿಯೇನಲ್ಲ.

ಮೈಸೂರು ಮಹಾರಾಜ ಕಾಲೇಜಿನಲ್ಲಿ ಇವರ ಶಿಷ್ಯಂದಿರೇ ಆದ, ಮಾಸ್ತಿ ಕುವೆಂಪು, ಎಸ್. ವಿ. ರಂಗಣ್ಣ, ತೀ. ನಂ. ಶ್ರೀಕಂಠಯ್ಯ, ಜಿ. ಪಿ. ರಾಜರತ್ನಂ, ಡಿ. ಎಲ್. ನರಸಿಂಹಚಾರ್, ಪು.ತಿ.ನ, ರಂ. ಶ್ರೀ ಮುಗಳಿ ಮುಂತಾದವರು, ಬಿಎಂಶ್ರೀ ಅವರಿಂದ ಇಂಗ್ಲೀಷ್ ಅಭ್ಯಾಸ ಮಾಡಿದರಾದರೂ ಅವರಿಂದ ಫ್ರಭಾವಿತರಾಗಿ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಆರಂಭಿಸಿ ಮುಂದೆ ಆಧುನಿಕ ಕನ್ನಡ ಸಾಹಿತ್ಯದ ಆಧಾರ ಸ್ಥಂಭಗಳಾಗಿ, ಗುರುಗಳನ್ನು ಮೀರಿಸಿದ ಶಿಷ್ಯಂದಿರಾಗಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳನ್ನೂ ತಂದು ಕೊಡುವಷ್ಟರ ಮಟ್ಟಿಗೆ ಬೆಳೆದದ್ದು ಹೆಮ್ಮೆಯ ವಿಷಯ.

ಅವರು ತಮ್ಮ ಅಧ್ಯಾಪಕ ವೃತ್ತಿಯನ್ನು ಅದೆಷ್ಟು ಪ್ರೀತಿಸುತ್ತಿದ್ದರು ಮತ್ತು ತಮ್ಮ ವಿದ್ಯಾರ್ಥಿಗಳ ಮೇಲೆ ಅದೆಷ್ಟು ಕಾಳಜಿ ಇತ್ತು ಎಂಬುದನ್ನು ವಿವರಿಸಲು ಈ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳಲೇ ಬೇಕು.

ಅದೊಂದು ದಿನ ಬೆಳಿಗ್ಗೆ ತಮ್ಮ ಮನೆಯ ಬಚ್ಚಲು ಮನೆಯಲ್ಲಿ ಜಾರಿಬಿದ್ದ ಪರಿಣಾಮ ಬಿಎಂಶ್ರೀಯವರ ಕಾಲು ಉಳುಕಿದ್ದಲ್ಲದೇ, ಮಂಡಿ ತರಚಿ, ಬಲಗೈ ಮೂಳೆ ಮುರಿದು ಹೋಯಿತು. ಕೂಡಲೇ ಹತ್ತಿರವಿದ್ದ ಪುತ್ತೂರು ಬೋನ್ ಸೆಟ್ಟರ್ಸ್ ಎಂಬಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಮುರಿದ ಕೈಯ್ಯಿಗೆ ಪ್ಲಾಸ್ಟರ್ ಹಾಕಿ, ಕಾಲಿನ ಉಳುಕು, ಮಂಡಿಯ ತರಚುಗಳಿಗೂ ಚಿಕಿತ್ಸೆ ನೀಡಿ, ಕನಿಷ್ಟ ಪಕ್ಷ ಒಂದು ತಿಂಗಳಾದರೂ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದರು. ಬಿಎಂಶ್ರೀಗಳು ಅಲ್ಲಿಂದ ಸೀದಾ ತಮ್ಮ ಮನೆಗೆ ಹೋಗದೇ, ನೇರವಾಗಿ ಕುಂಟುತ್ತ, ನರಳುತ್ತಲೇ ಕಾಲೇಜಿಗೆ ಹೋದರು, ತಮ್ಮ ನೆಚ್ಚಿನ ಗುರುಗಳನ್ನು ಈ ದುಃಸ್ಥಿತಿಯಲ್ಲಿ ಕಂಡು ಇಡೀ ಕಾಲೇಜಿಗೆ ಕಾಲೇಜೇ ಮರುಗಿತು.

ಅಷ್ಟರಲ್ಲಿ ಕಾಲೇಜಿನ ಪ್ರಾಚಾರ್ಯರಾಗಿದ್ದ ಜೆ.ಸಿ.ರಾಲೋ ಅವರಿಗೆ ಈ ವಿಷಯ ತಿಳಿದು ಅವರು ಶ್ರೀ ಗಳತ್ತ ಓಡೋಡಿ ಬಂದು, ಅವರ ಯಾತನಾಮಯ ಸ್ಥಿತಿ ನೋಡಿ, ನೀವು ದಯವಿಟ್ಟು ಮನೆಯಲ್ಲಿದ್ದು ವಿಶ್ರಾಂತಿ ಪಡೆಯಿರಿ ಎಂದು ಒಂದು ತಿಂಗಳ ಕಾಲ ರಜೆಯನ್ನು ಆ ಕೂಡಲೇ ಮಂಜೂರು ಮಾಡಿದರು, ಅದಕ್ಕೆ ಬಿಲ್ ಕುಲ್ ಒಪ್ಪದ ಶ್ರೀಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬರುತ್ತಿದೆ, ಇನ್ನೂ ಅನೇಕ ಪಾಠಗಳನ್ನು ಮುಗಿಸಬೇಕಿದೆ ಇಂತಹ ಸ್ಥಿತಿಯಲ್ಲಿ ನಾನು ರಜೆ ತೆಗೆದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆದರೆ ನನ್ನ ವಿದ್ಯಾರ್ಥಿಗಳ ಗತಿಯೇನು? ಕೈಮೂಳೆ ಮುರಿತಕ್ಕೆ ಚಿಕಿತ್ಸೆ ಮಾಡಿಸಿಯಾಗಿದೆ ಅದು ಮೂರ್ನಾಲ್ಕು ವಾರಗಳಲ್ಲಿ ವಾಸಿಯಾಗುತ್ತದೆ. ಹಾಗಾಗಿ ನಾನು ಪ್ರಾಣ ಹೋಗುವವರೆಗೂ ಪಾಠ ಮಾಡುವುದನ್ನು ಮಾತ್ರ ಬಿಡುವುದಿಲ್ಲ. ಎಂದು ಹೇಳುತ್ತಾ ಕುಂಟುತ್ತಲೇ ಕಾಲೆಳೆದುಕೊಂಡು, ಮೂಳೆ ಮುರಿದಿದ್ದ ಕೈಯನ್ನು ಇನ್ನೊಂದು ಕೈಯಿಂದ ಹಿಡಿದುಕೊಂಡು, ತರಗತಿಗೆ ತೆರಳಿ ತಮಗೆ ಏನೂ ಆಗಿಯೇ ಇಲ್ಲವೆಂಬಂತೆ ನಗುನಗುತ್ತಲೆ ಅಂದೂ ಎಂದಿನಂತೆಯೇ ಪಾಠ ಮಾಡಿದ್ದರಂತೆ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸುಮಾರು 25 ವರ್ಷ ಸೇವೆ ಸಲ್ಲಿಸಿದ ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವಾಗಿ, ಆ ಕಾಲೇಜಿನ ಏಳಿಗೆಗಾಗಿ ದುಡಿದು ಅಲ್ಲಿಯೇ ನಿವೃತ್ತರಾದರು. ಸದಾ ಕನ್ನಡದ ಕುರಿತಂತೆ ಒಂದಲ್ಲ ಒಂದು ಕಾರ್ಯಗಳನ್ನು ಕೈಗೆತ್ತಿಕೊಂಡು ಚಟುವಟಿಕೆಯಿಂದಲೇ ಇರುತ್ತಿದ್ದ ಬಿ.ಎಂ.ಶ್ರೀಗಳು ತಮ್ಮ ನಿವೃತ್ತಿಯ ನಂತರ 1942ರ ವರೆಗೆ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಅಧ್ಯಕ್ಷರಾದರು. ಆಗ ಕನ್ನಡವನ್ನು ಜನಪ್ರಿಯ ಮಾಡಲು ಲಿಪಿ ಸುಧಾರಣೆಗೂ ಪ್ರಯತ್ನಿಸಿದರು. ತಲೆಕಟ್ಟು, ಧೀರ್ಘ, ಗುಡಿಸಿಗಳಿಂದ ಓದಲುಬರೆಯಲು ಮತ್ತು ಕಲಿಯಲು ತೊಡಕು,ಅವನ್ನು ನಿವಾರಿಸಿದರೆ ಕಲಿಕೆ ಸುಲಭ ಮುದ್ರಣ ಸರಳ ಎಂದು ಪ್ರತಿಪಾದಿಸಿದರು.ತಮಿಳಿನಂತೆ ಎಲ್ಲವನ್ನೂ ಒಂದೇ ಸಾಲಿನಲ್ಲಿ ಬರೆಯಬಹುದಾಗಿತ್ತು ದೀರ್ಘ ಚಿಹ್ನೆಗಳನ್ನು ಎಲ್ಲ ಕಡೆ ಒಂದೇ ರೀತಿಬರೆಯುವುದು ಒತ್ತಕ್ಷರಗಳನ್ನು ಪಕ್ಕದಲ್ಲಿ ಬರೆಯುವುದು ,ಎಲ್ಲ ಮಹಾಪ್ರಾಣಗಳನ್ನು ಅಲ್ಪಪ್ರಾಣಗಳ ಹೊಕ್ಕಳು ಸೀಳಿ ಅಂದರೆ ಪ-ಫ, ದ-ಧ ಡ-ಢ ಗಳಂತೆ ಬರೆಯುವುದು ಒತ್ತಕ್ಷರಗಳನ್ನು ಪಕ್ಕದಲ್ಲಿ ಬರೆಯುವುದು, ಕನ್ನಡ – ಕನ್‌ನಡ ತಮ್ಮ- ತಮ್‌ಮ ಹೀಗೆ ನಾಲ್ಕು ಹಂತಗಳಲ್ಲಿ ಬದಲಾವಣೆ ತಂದರೆ ಅಕ್ಷರಗಳ ಸಂಖ್ಯೆ ಕಡಿಮೆಯಾಗಿ ಕಲಿಕೆಯ ಒತ್ತಡ ಕಡಿಮೆ ಮಾಡುವುದು ಅವರ ಉದ್ದೇಶವಾಗಿತ್ತು. 1944 ರಲ್ಲಿ ‘ಧಾರವಾಡದ ಕೆ.ಇ.ಬೋರ್ಡ್‌ನ ಮುಖ್ಯಸ್ಥರಾಗಿ ನೇಮಕಗೊಂಡು ಅಲ್ಲಿಯ ಆರ್ಟ್ಸ್ ಕಾಲೆಜಿಗೆ ಪ್ರಾಂಶುಪಾಲಕರಾಗಿ ಸೇವೆ ಸಲ್ಲಿಸುತ್ತಿರುವಾಗಲೇ 1946ರ ಜನವರಿ 5 ರಂದು ನಮ್ಮನ್ನಗಲಿದರು. ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲು ನಾಡಿನ ಪ್ರಖ್ಯಾತ ಸಾಹಿತಿಗಳು, ಸಾರಸ್ವತ ಲೋಕದ ದಿಗ್ಗಜರು ಮತ್ತು , ಅಪಾರ ಸಂಖ್ಯೆಯ ಜನಸ್ತೋಮ ಸ್ವಪ್ರೇರಣೆಯಿಂದ ಬಂದಿರುವುದನ್ನು ನೋಡಿ ಆನಂದ ಭಾಷ್ಪದಿಂದ ಬೇಂದ್ರೆಯವರು ಆಹಾ! ಸತ್ತ ವ್ಯಕ್ತಿಗೆ ಇಂತಹ ಸಂಭ್ರಮದ ಬೀಳ್ಕೊಡುಗೆ ಸಿಗುವುದಾದರೆ ಸಾವೂ ಸಹ ಸ್ವಾಗತಾರ್ಹವಾದದ್ದೇ ಎಂದು ಉದ್ಗರಿಸಿದ್ದು ಬಿ.ಎಂ.ಶ್ರೀಗಳ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ.

  • 1926-1930 ರವರೆಗೆ ನಾಲ್ಕು ವರ್ಷಗಳ ಕಾಲ ಕುಲಸಚಿವರಾಗಿದ್ದರು.
  • 1928ರಲ್ಲಿ ಗುಲಬರ್ಗಾ’ದಲ್ಲಿ ನಡೆದ 14 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  • 1938-1942 ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
  • 1938ರಲ್ಲಿ ಮೈಸೂರಿನ ಮಹಾರಾಜರಿಂದ ರಾಜ ಸೇವಾಸಕ್ತ ಎಂಬ ಬಿರುದನ್ನು ಪಡೆದಿದ್ದರು.

ಅರವತ್ತು ಅನುವಾದಿತ ಆಂಗ್ಲ ಗೀತೆಗಳಿರುವ ಇಂಗ್ಲೀಷ್ ಗೀತೆಗಳು ಎಂಬ ಕವನ ಸಂಕಲನ, ಗದಾಯುದ್ಧ, ಅಶ್ವತ್ಥಾಮನ್, ಪಾರಸಿಕರು ಎಂಬ ಮೂರು ನಾಟಕಗಳು ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಬಾವುಟ ಎಂಬ ಪುಸ್ತಕಗಳಲ್ಲದೆ, ಕೆಲವು ಕವನಗಳನ್ನು ಸೇರಿಸಿ ಹೊಂಗನಸುಗಳು ಎಂಬ ಕವನ ಸಂಕಲನ ಹೀಗೆ ಒಟ್ಟಾರೆಯಾಗಿ 1925-1935ರ ವರೆವಿಗೆ ಸುಮಾರು ಹದಿನೈದು ವರ್ಷಗಳ ಅವಧಿಯಲ್ಲಿ ಶ್ರೀ ಅವರು ಸೃಜನಶೀಲರಾಗಿ ಬರೆದರು. ಅವರು ಬರೆದದ್ದಕ್ಕಿಂತ ಇತರರನ್ನು ಪ್ರೇರೇಪಿಸಿ, ಪ್ರೋತ್ಸಾಹಿಸಿ, ಆವರಂದ ಬರೆಸಿದ್ದೇ ಅಗಣಿತ.

ಅವರು ಬರೆದ ಅಶ್ವತ್ಥಾಮನ್ ನಾಟಕ, ಗ್ರೀಕ್ ಕಥೆ ಆಧರಿಸಿದ್ದು. ಭಾರತೀಯ ಪೌರಾಣಿಕವಾಗಿ ಆಶ್ವತ್ಥಾಮ ಒಬ್ಬ ಚಿರಂಜೀವಿ. ಆತ ಪರಾಕ್ರಮಿ ಮತ್ತು ಪ್ರಾಮಾಣಿಕ. ಮಹಾಭಾರತದ ಯುದ್ಧದಲ್ಲಿ ತನ್ನ ನಾಯಕ ದುರ್ಯೋಧನನ ಮರಣದಿಂದ ಬೇಸತ್ತು ಪಾಂಡವರ ಮೇಲೆ ಕೋಪದಿಂದ ಸೇಡು ತೀರಿಸಿಕೊಳ್ಳಲು ಅರ್ಧರಾತ್ರಿ ಸಮಯದಲ್ಲಿ ಪಾಂಡವರ ಪಾಳಯಕ್ಕೆ ನುಗ್ಗಿ, ಪಾಂಡವರೆಂದು ಕೊಂಡು ಪಾಂಡವರ ಐವರು ಮಕ್ಕಳನ್ನು ಮತ್ತು ಕೆಲ ಹೆಂಗಸರನ್ನೂ ಕೊಲ್ಲುತ್ತಾನೆ. ಬೆಳಕು ಹರಿದ ಮೇಲೇ ತಾನು ಕೊಂದಿದ್ದು ಪಾಂಡವರಲ್ಲಾ. ಎಂದು ತಿಳಿದ ಮೇಲೆ, ಛೇ!, ನಿದ್ರೆಯಲ್ಲಿದ್ದ ಪ್ರಾಣಿಗಳನ್ನು, ಮಕ್ಕಳನ್ನು, ಹೆಂಗಸರನ್ನು ತನ್ನಂಥ ವೀರ ಕೊಂದದ್ದು ಹೇಡಿತನ ಎನಿಸಿ ಇದೆಂತಹ ಪಾಪದ ಕೆಲಸ ಮಾಡಿಬಿಟ್ಟೆ ಎಂದು ಪಶ್ಚಾತ್ತಾಪ ಪಡುತ್ತಾ, ಅಶ್ವಥ್ಥಾಮ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ದುರಂತಮಯವಾಗಿ ಅಶ್ವತ್ಥಾಮನ್ ನಾಟಕವನ್ನು ಅಂತ್ಯಗೊಳಿಸುತ್ತಾರೆ. ಹೀಗೆ ಚಿರಂಜೀವಿ ಅಶ್ವಥ್ಥಾಮ ಆತ್ಮಹತ್ಯೆ ಮಾಡಿಕೊಂಡನೆಂದು ನಾಟಕವನ್ನು ಮುಕ್ತಾಯಗೊಳಿಸಿದ್ದಕ್ಕಾಗಿ ಅಂದಿನ ಕಾಲದಲ್ಲೇ ಸಂಪ್ರದಾಯವಾದಿಗಳು ವಿವಾದವನ್ನೆಬಿಸಿದ್ದದ್ದು ಈಗ ಇತಿಹಾಸ.

ಹೀಗೆ ಕನ್ನಡಿಗರಲ್ಲಿ ಕನ್ನಡದ ಅಸ್ಮಿತೆಯನ್ನು ಜಾಗೃತಗೊಳಿಸಿ ಕನ್ನಡಿಗರಲ್ಲಿ ಕನ್ನಡತನವನ್ನು ಅಪ್ಪಿಕೊಳ್ಳಲು ಪ್ರೇರೇಪಿಸಿ, ಯಾರಿಗೂ ಬೇಡವಾಗಿ ಅನಾಥವಾಗಿದ್ದ ಕನ್ನಡವನ್ನು ಕೈಹಿಡಿದು ಇಂಗ್ಲೀಷ್ ಬೀಜ ಬಿತ್ತಿ ಅದರಿಂದ ಕನ್ನಡದ ಬೆಳೆ ಬೆಳೆದ ಕನ್ನಡದ ಕಣ್ವ ಬಿ. ಎಂ. ಶ್ರೀಕಂಠಯ್ಯನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s