ನವ್ಯ ಕವಿ ಗೋಪಾಲಕೃಷ್ಣ ಅಡಿಗ

ಸ್ವಾತಂತ್ರ್ಯ ಪೂರ್ವದ ಬಹುತೇಕ ಕನ್ನಡದ ಸಾಹಿತಿಗಳು ಪೌರಾಣಿಕ, ಐತಿಹಾಸಿಕ ಮತ್ತು ಕೆಲವೊಬ್ಬರು ಸಾಮಾಜಿಕವಾದ ವಿಷಯಗಳನ್ನೇ ತಮ್ಮ ಬಹುತೇಕ ಬರವಣಿಗೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ಅವರಲ್ಲೊಬ್ಬರು ಮಾತ್ರವೇ ಕನ್ನಡ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ ಹೊಸ ಸಂಪ್ರದಾಯ ಬೆಳೆಸಿದವರು. ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮದ ಯುವಪ್ರವರ್ತಕರು. ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಿಗೆ ಹೊಸ ರೂಪು ಕೊಟ್ಟವರು. ಬೇಂದ್ರೆ, ಕಾರಂತರಂತಹ ದಿಗ್ಗಜರುಗಳೇ ಅವರ ಕಾವ್ಯ ಸೃಷ್ಟಿಗಳಿಗೆ ಮಾರು ಹೋಗಿದ್ದರು. ಸಾಕ್ಷಿ ಎಂಬ ಪತ್ರಿಕೆಯ ಸಂಪಾದಕರಾಗಿ ಸುಮಾರು ಇಪ್ಪತ್ತು ವರ್ಷಗಳಷ್ಟು ಅದನ್ನು ಮುನ್ನಡಿಸಿದ್ದವರು, ಗಾಂಧಿಯವರ ಸ್ವಾತಂತ್ರ್ಯ ಹೋರಾಟದ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಾಗವಹಿಸಿದ್ದ ಹೋರಾಟಗಾರ, ಕವಿ, ಪ್ರಾಧ್ಯಾಪಕ, ಸಾಹಿತ್ಯ ಸಂಘಟಕ, ಬಲಪಂತೀಯ ರಾಜಕಾರಣಿ ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದಂತಹ ಶ್ರೀ ಎಂ. ಗೋಪಾಲಕೃಷ್ಣ ಅಡಿಗರ ಬಗ್ಗೆ ತಿಳಿಯೋಣ.

adiga_house
ಆಡಿಗರ ಮೊಗೇರಿಯ ಮನೆ

8 ಫೆಬ್ರುವರಿ 1918ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಪುರೋಹಿತ ಮನೆತನದಲ್ಲಿ ಶ್ರೀ ಗೋಪಾಲಕೃಷ್ಣ ಅಡಿಗರ ಜನನವಾಯಿತು. ಅಡಿಗರ ತಂದೆ, ಅಜ್ಜ ಅಜ್ಜಿ, ಸೋದರತ್ತೆಯರು, ಚಿಕ್ಕಪ್ಪ ಎಲ್ಲರಿಗೂ ಪದ್ಯ ರಚನೆ ಮಾಡುವ ಅಭ್ಯಾಸವಿತ್ತು. ಅಡಿಗರ ತಂದೆ ರಾಮಪ್ಪ ಅಡಿಗ ಸಂಸ್ಕೃತದಲ್ಲಿ ಶ್ಲೋಕಗಳನ್ನು ಕನ್ನಡದಲ್ಲಿ ದೇಶಭಕ್ತಿ ಗೀತೆಗಳನ್ನು ರಚಿಸುತ್ತಿದ್ದರು. ಅಡಿಗರ ಅಜ್ಜಿಯ ತಮ್ಮ ಬವಳಾಡಿ ಹಿರಿಯಣ್ಣ ಹೆಬ್ಬಾರ ಹೆಸರಾಂತ ಯಕ್ಷಗಾನ ಪಾತ್ರಧಾರಿಯಾಗಿದ್ದರು. ಹೀಗಾಗಿಯೇ ಕಲೆ ಮತ್ತು ಸಾಹಿತ್ಯ ಎನ್ನುವುದು ಅವರಿಗೆ ಹುಟ್ಟಿನಿಂದಲೇ ರಕ್ತಗತವಾಗಿ ಬಂದಿತ್ತು ಎಂದರೂ ತಪ್ಪಾಗಲಾರದು. ಬಾಲ್ಯದಲ್ಲಿ ತಮ್ಮೂರಿನ ಸುತ್ತಮುತ್ತಲಲ್ಲಿ ಎಲ್ಲೇ ಯಕ್ಷಗಾನ ಪ್ರಸಂಗಗಳು ನಡೆದರೂ ಅಲ್ಲಿಗೆ ತಪ್ಪದೇ ಅಡಿಗರು ಹಾಜರಾಗುತ್ತಿದ್ದರಂತೆ. ಅಲ್ಲಿ ನೋಡಿದ ಪ್ರಸಂಗಗಳು, ಹಾಡುಗಳು, ಮಟ್ಟುಗಳ ಕುಣಿತದ ಭಂಗಿಗಳನ್ನು ಮನೆಗೆ ಹಿಂದಿರಿಗೆ ಬಂದ ಮೇಲೆ ಮನೆಯವರ ಮುಂದೆ ಮಾಡಿ ತೋರಿಸುತ್ತಿದ್ದರಂತೆ. ಇಂತಹ ವಾತಾವರಣದಲ್ಲಿ ಬೆಳೆದ ಅಡಿಗರು ತಮ್ಮ ಹದಿಮೂರನೇ ವಯಸ್ಸಿನಲ್ಲೇ ಪದ್ಯ ರಚನೆಗೆ ಮುಂದಾಗಿ, ಅದರಲ್ಲೂ ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿಗಳ ಕಂದ ಪದ್ಯಗಳನ್ನು ರಚಿಸುತ್ತಿದ್ದರಲ್ಲಿ ಅತಿಶಯೋಕ್ತಿಯೇನಲ್ಲ.

ಬೈಂದೂರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅಡಿಗರು ಕುಂದಾಪುರದ ಹೈಸ್ಕೂಲಿನಲ್ಲಿ ಶಿಕ್ಷಣ ಮುಗಿಸಿದರು. ಇದೇ ಸಮಯದಲ್ಲಿ ಶಿವರಾಮ ಕಾರಂತರ ಅಣ್ಣ ಕೋಲ ಕಾರಂತರು ಅಡಿಗರಿಗೆ ಪರಿಚಯವಾಗಿ, ಅವರು ಒಳ್ಳೊಳ್ಳೆಯ ಪುಸ್ತಕಗಳನ್ನು ಅಡಿಗರಿಗೆ ಕೊಟ್ಟು ಅವುಗಳನ್ನು ಹೆಚ್ಚು ಹೆಚ್ಚಾಗಿ ಓದಲು ಪ್ರೋತ್ಸಾಹಿಸುತ್ತಿದ್ದರು. ಆಗೆಲ್ಲಾ ದೇಶಾದ್ಯಂತ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಪರಾಕಾಷ್ಠೆಯ ಕಾಲ. ಶಾಲಾ ಕಾಲೇಜಿನ ಹುಡುಗರೆಲ್ಲರೂ ಸ್ವಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುತ್ತಿದ್ದ ಕಾಲ. ಅಡಿಗರೂ ಇದಕ್ಕೆ ಹೊರತಾಗದೇ, ಅವರೂ ಕೂಡಾ ಹುಮ್ಮಸ್ಸಿನಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಹೆಂಡದಂಗಡಿಯ ಮುಂದೆ ಜನರನ್ನು ಕಟ್ಟಿಕೊಂಡು ಧರಣಿ ನಡೆಸಿದ್ದರು. ಇದರ ಪರಿಣಾಮವಾಗಿ ಅಡಿಗರು ರಚಿಸಿದ ದೇಶಭಕ್ತಿಯ ಕುರಿತಾದ ಕವನಗಳು ಬೆಂಗಳೂರು, ಮಂಗಳೂರಿನ ಪತ್ರಿಕೆಗಳಲ್ಲಿ ಪ್ರಕಟವಾದವು. ಎಸ್.ಎಸ್.ಎಲ್.ಸಿ ಮುಗಿದ ನಂತರ ಅಡಿಗರು ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿ ಕೊಂಡಾಗಲೇ ಅಡಿಗರ ಬದುಕಿನಲ್ಲಿ ಮಹತ್ವದ ತಿರುವನ್ನು ಪಡೆದು ಕೊಂಡಿತು.

adiga4

ಅಲ್ಲಿ ಅವರಿಗೆ ಬಿ.ಎಚ್. ಶ್ರೀಧರ್, ಹೆಚ್ ವೈ.ಶಾರದಾಪ್ರಸಾದ್, ಚದುರಂಗ, ಟಿ.ಎಸ್.ಸಂಜೀವ ರಾವ್. ಎಂ.ಶಂಕರ್, ಕೆ.ನರಸಿಂಹಮೂರ್ತಿ ಮುಂತಾದವರ ಒಡನಾಟ ಮತ್ತು ಸ್ನೇಹ ಲಭ್ಯವಾಯಿತು. ಭಾವತರಂಗ ಕವನ ಸಂಕಲನದ ಬಹುತೇಕ ಕವನಗಳು ಈ ಅವಧಿಯಲ್ಲಿ ರಚಿತವಾದವು. ಅದರಲ್ಲಿ ಒಳತೋಟಿ ಎಂಬ ಕವನ ಬಿ.ಎಂ.ಶ್ರೀ ರಜತ ಮಹೋತ್ಸವದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾದ ಸುವರ್ಣ ಪದಕವನ್ನು ತಂದುಕೊಟ್ಟಿತು. ಇಷ್ಟರಲ್ಲಿಯೇ ತಮ್ಮ ಬಿ.ಎ.(ಆನರ್ಸ್), ಮತ್ತು ಎಂ.ಎ.(ಇಂಗ್ಲೀಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. ತಮ್ಮ ವಿದ್ಯಾಭ್ಯಾಸ ಮುಗಿಸಿದ ಬಳಿಕ ಅಡಿಗರು ಕೆಲ ಕಾಲ ತುಮಕೂರು, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಮುಂತಾದ ಊರುಗಳಲ್ಲಿ ಅಧ್ಯಾಪಕರಾಗಿ ದುಡಿದು. ಸ್ವಲ್ಪ ಕಾಲ ಅಠಾರ ಕಚೇರಿಯಲ್ಲಿಯೂ ಗುಮಾಸ್ತರಾಗಿ ದುಡಿದ ನಂತರ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾದರು. ಆದಾದ ಬಳಿಕ ಎರಡು ವರ್ಷಗಳ ಕಾಲ ಕುಮಟಾದ ಕೆನರಾ ಕಾಲೇಜಿನಲ್ಲೂ, ಅನಂತರ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿಯೂ, ಇಂಗ್ಲಿಷ್ ಉಪನ್ಯಾಸಕರಾಗಿ ಹತ್ತು ವರ್ಷ ಕಾಲ ಕೆಲಸ ಮಾಡುತ್ತಾರೆ. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸ್ವಲ್ಪ ಕಾಲವಿದ್ದು ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿಗೆ ಪ್ರಾಂಶುಪಾಲರಾಗಿ ಕೆಲಸಕ್ಕೆ ಸೇರಿ ಆ ಹೊಸ ಕಾಲೇಜನ್ನು ಕಟ್ಟಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಾಗರದಲ್ಲಿದ್ದಾಗಲೇ ಅಡಿಗರು ಬಹಳವಾಗಿ ಸಕ್ರೀಯರಾದರು ಎಂದರೆ ತಪ್ಪಾಗಲಾರದು. ತಮ್ಮ ಕಾಲೇಜಿಗೆ ಹೆಸರಾಂತ ಸಾಹಿತಿಗಳನ್ನು ಕರೆಸಿ,ಅವರ ಮಾತುಗಳಿಂದ ತಮ್ಮ ವಿದ್ಯಾರ್ಥಿಗಳ ಬೌಧ್ಧಿಕ ಮತ್ತೆಯನ್ನು ಹೆಚ್ಚಿಸುವಂತೆ ಮಾಡಿದರಲ್ಲದೆ, ಗ್ರಂಥಾಲಯಗಳಲ್ಲಿ ಒಳ್ಳೊಳ್ಳೆಯ ಪುಸ್ತಕಗಳನ್ನು ತರಿಸಿ, ಅವುಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಓದಲು ಪ್ರೇರೇಪಿಸುತ್ತಿದ್ದರು. ತಮ್ಮ ಕಾಲೇಜಿನ ಉಪನ್ಯಾಸಕರನ್ನು ತಮ್ಮ ಗೆಳೆಯರಂತೆಯೇ ಪರಿಗಣಿಸಿ, ಅವರನ್ನು ತಮ್ಮೊಟ್ಟಿಗೆ ಸದಾ ಕರೆದೊಯ್ಯುತ್ತಿದ್ದರು. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಳ್ಳಲು ಅಥವಾ ಪರೀಕ್ಷೆಯ ಶುಲ್ಕವನ್ನು ಕಟ್ಟಲು ಸಾಧ್ಯವಾಗದಿದ್ದಾಗ ಅಡಿಗರು ಅದೆಷ್ಟೋ ಬಾರಿ ತಮ್ಮ ಕೈಯಿಂದಲೇ ಕಟ್ಟಿ ಅನೇಕ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ. ಅವರ ಮನೆಯಲ್ಲಿಯೇ ಇದ್ದುಕೊಂಡು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಅದೆಷ್ಟೋ ಏನೋ? ಲೆಕ್ಕ ಇಟ್ಟವರಿಲ್ಲ.

adiga5

1971ರಲ್ಲಿ ಅಡಿಗರ ಬದುಕಿನಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ಬಂದು, ಅಂದಿನ ಲೋಕಸಭಾ ಚುನಾವಣೆಯಲ್ಲಿ 9 ಪಕ್ಷಗಳ ಒಕ್ಕೂಟದ ಪರವಾಗಿ ಬೆಂಗಳೂರಿನಿಂದ ಸ್ಪರ್ಧಿಸಬೇಕೆಂಬ ಸ್ನೇಹಿತರ ಒತ್ತಡಕ್ಕೆ ಮಣಿದು ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಇಂದಿರಾಗಾಂಧಿಯವರ ಅಲೆಯಲ್ಲಿ ಅಡಿಗರು ಕೊಚ್ಚಿಹೋದರು. ಚುನಾವಣೆ ಸ್ಪರ್ಥಿಸಿದ್ದ ಕಾರಣ ಅವರು ತಮ್ಮ ಪ್ರಾಂಶುಪಾಲ ಹುದ್ದೆಗೆ ರಾಜಿನಾಮೆ ಕೊಡಬೇಕಾಯಿತು. ಅದಾದ ನಂತರ ದೆಹಲಿಯ ನ್ಯಾಶನಲ್ ಬುಕ್ ಟ್ರಸ್ಟ್ ನಲ್ಲಿ ಉಪನಿರ್ದೇಶಕರಾಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದ ನಂತರ ಶಿಮ್ಲಾದ ಇಂಡಿಯನ್ ಇನ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡಿಸ್ ಸಂಸ್ಥೆಯಲ್ಲಿ ಮೂರು ವರ್ಷ ವಿಸಿಟಿಂಗ್ ಫೇಲೋ ಆಗಿ ಕೆಲಸ ಮಾಡಿದರು.

adiga2

ಅಡಿಗರು, ಕನ್ನಡದ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ ಹೊಸ ಸಂಪ್ರದಾಯವನ್ನು ಬೆಳೆಸಿ, ಅದನ್ನು ಪರಾಕಾಷ್ಠೆಗೊಯ್ದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಲು ಕಾರಣರಾದ ಯುಗ ಪ್ರವರ್ತಕ ಕವಿ. ನವ್ಯದ ಸಾಹಿತ್ಯದ ನಾಯಕತ್ವ ವಹಿಸಿ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದ ಶಿಖರದಲ್ಲಿದ್ದರು. ಕಾವ್ಯದಲ್ಲಿ ಅವರು ಮಾಡಿದ ಕ್ರಾಂತಿಕಾರಿ ಪರಿವರ್ತನೆ ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಇತರ ಸಾಹಿತ್ಯ ಪ್ರಕಾರಗಳ ಮೇಲೂ ಪ್ರಭಾವ ಬೀರಿ, ಸಮಗ್ರ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿತು. ಅಡಿಗರು ಕನ್ನಡ ವಿಮರ್ಶೆಯಲ್ಲೂ ಪ್ರಬುದ್ಧತೆಯನ್ನು ತಂದರು. ಸಾಕ್ಷಿ ಎಂಬ ಉನ್ನತ ಮಟ್ಟದ ಸಾಹಿತ್ಯ ಪತ್ರಿಕೆಯನ್ನು ಸುಮಾರು ಇಪ್ಪತ್ತು ವರ್ಷ ಕಾಲ ನಡೆಸಿ, ಹೊಸ ಸಂವೇದನೆಯನ್ನು ಹೊಸ ಲೇಖಕರನ್ನು ಪ್ರೋತ್ಸಾಹಿಸಿದರು. ತಮ್ಮ ಕಾವ್ಯ, ಗದ್ಯ, ವೈಚಾರಿಕತೆ, ವ್ಯಕ್ತಿತ್ವ, ಪ್ರಭಾವ, ಮಾರ್ಗದರ್ಶನಗಳ ಮೂಲಕ ಅಡಿಗರು ಮಾಡಿದ ಸಾರಸ್ವತ ಸಾಧನೆ ಅನನ್ಯವಾದುದು.ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ.

adiga

1968 ರಲ್ಲಿ ಅಡಿಗರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಉಡುಪಿಯಲ್ಲಿ ಪ್ರೊ. ಕು.ಶಿ.ಹರಿದಾಸ ಭಟ್ಟ ಮತ್ತು ವಿಜಯನಾಥ ಶೇಣೈ ಮುಂತಾದ ಸಾಹಿತ್ಯಾಭಿಮಾನಿಗಳು ಒಂದು ಅಪೂರ್ವ ಸಮಾರಂಭವನ್ನು ಏರ್ಪಡಿಸಿದರು. ಅದರಲ್ಲಿ ಹೊಸ ಪೀಳಿಗೆಯ ಮಹತ್ವದ ಕವಿ, ಸಾಹಿತಿ, ವಿಮರ್ಶಕರುಗಳಾದ ಲಂಕೇಶ್, ಚಂದ್ರಶೇಖರ ಕಂಬಾರ,ಎಂ.ಜಿ. ಕೃಷ್ಣಮೂರ್ತಿ, ಶಾಂತಿನಾಥ ದೇಸಾಯಿ, ಜಿ. ಎಚ್. ನಾಯಕ, ಕಿ ರಂ. ನಾಗರಾಜ. ಗಿರಡ್ಡಿ ಗೋವಿಂದರಾಜ, ಬನ್ನಂಜೆ ಗೋವಿಂದಾಚರ್ಯ, ಡಿ. ಎಸ್. ರಾಯ್ಕರ್ ಮುಂತಾದವರು ಭಾಗವಹಿಸಿದ್ದರು. ವಿಮರ್ಶಕ ನಿಸ್ಸಿಂ ಇಝೆಕಿಲ್ ಅವರು` ಅಡಿಗರು ಕನ್ನಡದಲ್ಲಿ ಬರೆಯುತ್ತಿರುವ ಒಬ್ಬ ಶ್ರೇಷ್ಠ ಭಾರತೀಯ ಕವಿ ಎಂದು ಕೊಂಡಾಡಿದ್ದರು.

  • 1974ರಲ್ಲಿ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ
  • 1975ರಲ್ಲಿ ಅಡಿಗರಿಗೆ `ವರ್ಧಮಾನ’ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ
  • 1979ರಲ್ಲಿ ಕೇರಳದ ಪ್ರತಿಷ್ಠಿತ `ಕುಮಾರ್ ಸಮ್ಮಾನ್’ ಪ್ರಶಸ್ತಿ
  • 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
  • 1980ರಲ್ಲಿ `ಸಮಗ್ರ ಕಾವ್ಯಕ್ಕೆ ಮೂಡಬಿದ್ರೆಯ ವರ್ಧಮಾನ ಪ್ರಶಸ್ತಿ
  • 1982ರಲ್ಲಿ ಪ್ಯಾರಿಸ್, ಯುಗೋಸ್ಲಾವಿಯಗಳಲ್ಲಿ ನಡೆದ ವಿಶ್ವಕವಿ ಸಮ್ಮೇಳನದಲ್ಲಿ ಆಹ್ವಾನಿತರಾಗಿ ಭಾಗವಹಿಸಿದರು.
  • 1986ರಲ್ಲಿ ಮಧ್ಯಪ್ರದೇಶ ಸರಕಾರ ಆರಂಭಿಸಿದ ಪ್ರಥಮ ಕಬೀರ್ ಸನ್ಮಾನ್ ಪ್ರಶಸ್ತಿ
  • 1986ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
  • 1988ರಲ್ಲಿ ಥೈಲ್ಯಾಂಡಿನ ಬ್ಯಾಂಕಾಕ್ ನಗರದಲ್ಲಿ ನಡೆದ ಜಾಗತಿಕ ಕವಿ ಸಮ್ಮೇಳನದಲ್ಲಿ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಸಂಸ್ಥೆ ಅವರಿಗೆ ಡಾಕ್ಟರೇಟ್ ಆಫ್ ಲಿಟರೇಚರ್ ಪ್ರಶಸ್ತಿ
  • 1993ರಲ್ಲಿ ಸುವರ್ಣ ಪುತ್ಥಳಿ ಕೃತಿಗೆ ಮರಣೋತ್ತರ ಪಂಪ ಪ್ರಶಸ್ತಿ

ಹೀಗೆ ಕನ್ನಡದ ಮಹತ್ವದ ನವ್ಯ ಕವಿಯಾಗಿ ಮೂರು ದಶಕಗಳ ಕಾಲ ಬೆಳಗಿದ ಅಡಿಗರು 14 ನವೆಂಬರ್ 1992ರಂದು ಬೆಂಗಳೂರಿನಲ್ಲಿ ನಿಧನರಾದರು. ತಮ್ಮ ಸೈದ್ಧಾಂತಿಕ ನಿಲುವುಗಳಿಂದಾಗಿಯೇ ಬಹುಶಃ ಅಡಿಗರಿಗೆ ಸಲ್ಲಬೇಕಾಗಿದ್ದ ಇನ್ನೂ ಅನೇಕ ಮಾನ ಸನ್ಮಾನಗಳು ಮತ್ತು ಪ್ರಶಸ್ತಿಗಳು ಸಿಗಲಿಲ್ಲ ಎನ್ನುವುದು ಇಂದಿಗೂ ಬಹುತೇಕ ಕನ್ನಡಿಗರಿಗೆ ಕಾಡುತ್ತಿರುವುದಂತೂ ಸುಳಲ್ಲ.

ಒಂದು ಕವನ ಒಂದು ಶತಮಾನದ ನಂತರವೂ ಸಂತೋಷ ಕೊಟ್ಟು , ಪುಳಕಿತ ಗೊಳಿಸಲು ಸಾಧ್ಯವಾದರೆ, ಒಂದು ಶತಮಾನದ ಹಿಂದೆ ಇದ್ದ ಕಾವ್ಯಪ್ರಿಯನೊಬ್ಬ ಎದ್ದು ಬಂದು ಇದನ್ನು ಓದಿ ಮೆಚ್ಚುವುದು ಸಾಧ್ಯವಾದರೆ ಆಗ ಮಾತ್ರ ಕೃತಿ ಕೃತಾರ್ಥ ಎನಿಸುತ್ತದೆ. ಹುಡುಗರಲ್ಲಿ ಕಪಿ ಅಂಶವೂ ಇದೆ, ಆಂಜನೇಯನಂತೆ ಅದ್ಭುತವಾಗಿ ಬೆಳೆಯಬಲ್ಲ ಸಾಧ್ಯತೆಯೂ ಇದೆ. ಹನುಮದ್ವಿಲಾಸ ಕಾವ್ಯ ಸಂಪ್ರದಾಯ ಬದ್ಧವಾಗಬಾರದು. ಆಗ ಕಾವ್ಯದಲ್ಲಿ ಮುಗ್ಗಲು ವಾಸನೆ ಬರುತ್ತದೆ.ಪಂಪ ಕುಮಾರವ್ಯಾಸರನ್ನು ಓದಿ ಸಂತೋಷ ಪಡಲಾರದವನು, ಆಧುನಿಕ ಕಾವ್ಯವನ್ನೋದಿ ನಿಜವಾಗಿಯೂ ಪುಳಕಿತನಾಗುತ್ತಾನೆ ಎಂದು ನಂಬುವುದು ಕಷ್ಟ. ಹೊಸತು ಹಳೆಯದರ ಜೊತೆಗೂ, ಹಳೆಯದು ಹೊಸದರ ಜೊತೆಗೂ ಹೊಂದಿಕೊಳ್ಳದೆ ಬದುಕು ಸುಸಂಸ್ಕೃತವಾಗುವುದಿಲ್ಲ, ಕಾವ್ಯವು ಶ್ರೇಷ್ಠವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾ ನವ್ಯ ಸಾಹಿತ್ಯದ ಮುಂದಾಳತ್ವ ವಹಿಸಿ ತಾವೂ ಬರೆದದ್ದಲ್ಲದೇ, ಇನ್ನೂ ನೂರಾರು ಲೇಖಕರಿಗೆ ಪ್ರೋತ್ಸಾಹ ನೀಡುತ್ತಾ ದಾರಿದೀಪವಾದ ಶ್ರೀ ಎಂ. ಗೋಪಾಲ ಕೃಷ್ಣ ಅಡಿಗರು ನಿಜವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳು.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s