ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ನಮ್ಮಬೆಂಗಳೂರು ಒಂದು. ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ.
ಶ್ರಾವಣ ಮಾಸ ಮತ್ತು ಆಶ್ವಯುಜ ಮಾಸದ ಸಾಲು ಸಾಲು ಹಬ್ಬಗಳು ಮುಗಿದು ಇನ್ನೇನು ಮಾಗಿಯ ಚಳಿ ನಮ್ಮೆಲ್ಲರನ್ನು ಅಪ್ಪುವುದಕ್ಕೆ ಶುರುವಾಗುತ್ತಿದ್ದಂತೆಯೇ ಬರುವುದೇ ಕಾರ್ತೀಕ ಮಾಸ. ಶೈವಾರಾಧಕರಿಗೆ ಪ್ರತೀ ಕಾರ್ತೀಕ ಸೋಮವಾರವೂ ಅತ್ಯಂತ ಪುಣ್ಯಕರವಾದ ದಿನ. ಬಹುತೇಕರು ಕಾರ್ತೀಕ ಸೋಮವಾರ ಶ್ರಧ್ಥೆಯಿಂದ ದಿನವಿಡೀ ಉಪವಾಸ ಮಾಡಿ ಸಂಜೆ ಹತ್ತಿರದ ಶಿವ ದೇವಾಲಯಕ್ಕೆ ಹೋಗಿ ಶಿವದರ್ಶನ ಮಾಡಿಯೇ ಫಲಾಹಾರವನ್ನು ಸ್ವೀಕರಿಸುವ ಪದ್ದತಿಯನ್ನು ರೂಢಿಯಲ್ಲಿಟ್ಟುಕೊಂಡಿದ್ದಾರೆ. ಬೆಂಗಳೂರಿನವರಿಗೆ ಕಡೇ ಕಾರ್ತೀಕ ಸೋಮವಾರ ಬಂದಿತೆಂದರೆ ಅವರೆಲ್ಲರ ಗಮನ ಬಸವನಗುಡಿಯ ಪ್ರತಿಷ್ಠಿತ ಕಡಲೇಕಾಯಿ ಪರಿಷೆಯತ್ತ ಹರಿಸುತ್ತಾರೆ.
ನೂರಾರು ವರ್ಷಗಳಿಂದ ಬಸವನಗುಡಿಯಲ್ಲಿ ನಡೆಯುತ್ತಿದ್ದ ಕಡಲೇ ಪರಿಷೆಯನ್ನು ನಗರದ ಇನ್ನೂ ಹಲವಾರು ಬಡವಣೆಗಳ ನಾಗರೀಕರು ಅಯ್ಯೋ ನಮ್ಮ ಪ್ರದೇಶದಲ್ಲಿಯೂ ಇಂತಹ ಜಾತ್ರೆ/ಪರಿಷೆ ನಡೆದರೆ ಎಷ್ಟು ಚೆನ್ನಾ, ಎಲ್ಲರೂ ಹೋಗಿ ಸಂಭ್ರಮ ಪಡಬಹುದಿತ್ತು ಎಂದು ಯೋಚಿಸುತ್ತಿರುವಾಗಲೇ, ಮಲ್ಲೇಶ್ವರ ಮತ್ತು ಯಲಹಂಕದ ವೆಂಕಟಾಲ, ವಿದ್ಯಾರಣ್ಯಪುರದ ನಾಗರೀಕರು ಸೂಕ್ತವಾಗಿ ಸ್ಪಂದಿಸಿ, ಅವರರವರ ಬಡಾವಣೆಗಳಲ್ಲಿಯೂ ಕಡಲೇ ಕಾಯಿ ಪರಿಷೆಯನ್ನು ಆಚರಿಸಲು ಆರಂಭಿಸಿದರು. ಎಲ್ಲರೂ ಒಂದೇ ಸಮಯದಲ್ಲಿ ಆಚರಿಸಿದರೆ ಭಕ್ತಾದಿಗಳಿಗೆ ಬರಲು ತೊಂದರೆ ಆಗಬಹುದೆಂದು ನಿರ್ಧರಿಸಿ ವೆಂಕಟಾಲದದಲ್ಲಿ ಪ್ರತೀ ವರ್ಷ ನವೆಂಬರ್ ತಿಂಗಳ ಮೊದಲ ಶನಿವಾರ, ಭಾನುವಾರ ಮತ್ತು ಸೋಮವಾರ ಅಲ್ಲಿನ ಯುವವೇದಿಕೆಯ ನೇತೃತ್ವದಲ್ಲಿ ಕಡಲೇಕಾಯಿ ಪರಿಷೆ ಏರ್ಪಡಿಸಲು ನಿರ್ಧರಿಸಿದರೆ, ಮಲ್ಲೇಶ್ವರ ಬಡಾವಣೆಯವರು ಪ್ರತೀ ವರ್ಷದ ಕಾರ್ತೀಕ ಮಾಸದ ಮೂರನೇ ಸೋಮವಾರಕ್ಕೆ ಮುಂಚಿನ ಎರಡು ದಿನಗಳು ಅಂದರೆ ಕಾರ್ತೀಕ ಮಾಸದ ಎರಡನೇ ಶನಿವಾರ, ಭಾನುವಾರ ಮತ್ತು ಮೂರನೇ ಸೋಮವಾರ ಮಲ್ಲೇಶ್ವರದ 15ನೇ ಅಡ್ಡರಸ್ತೆ, ದೇವಸ್ಥಾನಗಳ ಸಂಕೀರ್ಣವಾದ ಕಾಡು ಮಲ್ಲೇಶ್ವರ ಸ್ವಾಮಿಯ ಎದುರಿಗೆ ಅತ್ಯಂತ ಸಂಭ್ರಮ ಸಡಗರಗಳಿಂದ ವಿಜೃಂಭಣೆಯಿಂದ ಕಳೆದ 9 ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿ ದಶಮಾನೋತ್ಸವ, ಹಾಗಾಗಿ ಪ್ರತೀ ವರ್ಷಕ್ಕಿಂತಲೂ ಮತ್ತಷ್ಟೂ ಮಗದಷ್ಟೂ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.
ಕಾಡು ಮಲ್ಲೇಶ್ವರ ದೇವಸ್ಥಾನದ ಎದುರಿಗಿರುವ 15ನೇ ಅಡ್ಡ ರಸ್ತೆಯಿಂದ ಹಿಡಿದು 8 ನೇ ಅಡ್ಡರಸ್ತೆಯವರೆಗೂ ಏಕವಾದ ರಸ್ತೆ ಅತ್ಯಂತ ಕಿರಿದಾಗಿದ್ದರೂ ಅಲ್ಲಿನ ಜನರ ಮನಸ್ಸು ಹಿರಿಯದಾಗಿರುವ ಕಾರಣ ರಸ್ತೆ ಇಕ್ಕೆಲಗಳಲ್ಲಿಯೂ ತರತರಹದ ಕಡಲೆಕಾಯಿಗಳು, ಕಡಲೇಪುರಿ, ಬೆಂಡು, ಬತ್ತಾಸು, ಕಲ್ಯಾಣ ಸೇವೆ, ಚೌಚೌ ಹೀಗೆ ಎಲ್ಲವೂ ಒಂದೇ ಜಾಗದಲ್ಲಿ ಸಿಗುವುದು ನಿಜಕ್ಕೂ ಅಭಿನಂದನಾರ್ಹ.
ಜಾತ್ರೆ ಎಂದರೆ, ಬಣ್ಣ ಬಣ್ಣದ ಉಸಿರುಬುಡ್ಡೆ (ಬೆಲೂನ್) ಗಿರಿಗಿಟ್ಟಲೆ, ಬೊಂಬಾಯಿ ಮಿಠಾಯಿ, ಕಬ್ಬಿನ ಹಾಲು, ತರತರಹದ ಪೀಪೀಗಳು, ಮಣ್ಣಿನ ಗೊಂಬೆಗಳು, ಹೆಣ್ಣುಮಕ್ಕಳಿಗೆ ಬಣ್ಣ ಬಣ್ಣದ ಬಳೆಗಳು, ಹೀಗೇ ಒಂದೇ ಎರಡೇ ಈ ಎಲ್ಲವೂ ಒಂದೇ ಕಡೆ ಸಿಗುವ ಸ್ಥಳವಾಗಿದೆ. ಸುಮಾರು ದಿನಗಳಿಂದ ಬೆಂಗಳೂರಿಗರು ಮರೆತು ಹೋಗಿರುವ ಪಿಂಗಾಣಿ ಉಪ್ಪಿನ ಮತ್ತು ಉಪ್ಪಿನ ಕಾಯಿ ಜಾಡಿಗಳು, ಅಲ್ಯೂಮಿನಿಯಂ ಪಾತ್ರೆಗಳು, ಬಣ್ಣ ಬಣ್ಣದ ಮಕ್ಕಳ ಆಟಿಕೆಗಳು, ಬಣ್ಣ ಬಣ್ಣದ ಗೋಣೀಚೀಲದ ಚೀಲಗಳು ಇಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದ ಕಾರಣ ಜನ ಮರುಳೋ ಜಾತ್ರೆ ಮರಳೋ ಎನ್ನುವಂತೆ ಖರೀದಿಸಲು ನಾಮುಂದು ತಾಮುಂದು ಎನ್ನುವಂತೆ ವ್ಯಾಪಾರ ಮಾಡುತ್ತಿದ್ದದ್ದು ನೋಡಲು ಬಲು ಮಜ ಕೊಡುತ್ತಿತ್ತು.
ಇನ್ನು ಕೋದಂಡರಾಮ ಪುರದ ರಸ್ತೆಕಡೆ ತಿರುಗಿದರೆ, ಮೂಗಿಗೆ ಘಕ್ ಎಂದು ಕರಿದ ಆಲೂಗೆಡ್ಡೆಯ ಬಜ್ಜಿ ಬೋಂಡದ ವಾಸನೆ ಆಹಾರ ಪರಿಷೆಯತ್ತ ಎಲ್ಲರನ್ನೂ ಸೆಳೆಯುತ್ತಿತ್ತು. ತರತರಹದ ರೊಟ್ಟಿಗಳು, ದಾವಣಗೆರೆಯ ನರ್ಗೀಸ್, ಗಿರ್ಮಿಟ್, ಚುರುಮುರಿ, ಮಿರ್ಜಿಯ ಜೊತೆಗೆ, ಚಿತ್ರ ವಿಚಿತ್ರದ ಚಿತ್ರಾನ್ನ, ಬಗೆ ಬಗೆಯ ಕಲೆಸಿದ ಅನ್ನಗಳು, ಪುಳಿಯೋಗರೆ, ನಾನಾ ರೀತಿಯ ದೋಸೆಗಳು ಹೀಗೆ ಒಂದೇ ಎರಡೇ, ಯಾವುದನ್ನು ತಿನ್ನುವುದು ಯಾವುದನ್ನು ಬಿಡುವುದು. ಬೆಂಗಳೂರಿನ ಫಿಟ್ನೆಸ್ ಜನರೂ ಸಹಾ ಈ ಮೂರು ದಿನಗಳು ಎಲ್ಲಾ ಡಯೆಟ್ ಮರೆತು ಹೊಟ್ಟೆ ಭರ್ತಿ ತಿನ್ನುತ್ತಿದ್ದದ್ದು ಮೋಜಿನ ಸಂಗತಿಯಾಗಿತ್ತು.
ಕೋಡಂಡರಾಮ ಪುರದ ಸಣ್ಣ ಕ್ರೀಡಾಂಗಣದಲ್ಲಿ ದೊಡ್ಡದಾದ ಗಿರಿಗಿಟ್ಲೆ, ಏತಂಬೂತ (ಕೊಲಂಬಸ್) ಚಿಕ್ಕಮಕ್ಕಳ ರೈಲುಗಳು, ಹೀಗೆ ನಾನಾ ರೀತಿಯ ಆಟಗಳು ಮಕ್ಕಳ ಮನಸೂರೆ ಗೊಳ್ಳುತ್ತಿತ್ತು. ಮಕ್ಕಳೂ ಸಹಾ ಎಲ್ಲಾ ಆಟಗಳನ್ನು ಆಡಿಸಲು, ತಮ್ಮ ಅಪ್ಪಾ ಅಮ್ಮಂದಿರಿಗೆ ದಂಬಾಲು ಬೀಳುತ್ತಾ ರಚ್ಚೆ ಹಿಡಿಯುತ್ತಿದ್ದದ್ದು ನಮ್ಮ ಬಾಲ್ಯದ ನೆನಪನ್ನು ಮರುಕಳಿಸಿತ್ತು ಎಂದರೆ ಅತಿಶಯೋಕ್ತಿಯೇನಲ್ಲ.
ಮತ್ತೊಂದು ಕಡೆ ಚಿತ್ರಪರಿಷೆಯಲ್ಲಿ ವಿವಿಧ ಕಲಾವಿದರುಗಳು ತಮ್ಮ ಚಿತ್ರಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿದ್ದರು. ಅಕ್ಕಿಯ ಕಾಳಿನ ಮೇಲೆ ಹೆಸರನ್ನು ಬರೆದು ಕೊಡುವುದು, ಕೀಚೈನ್ಗಳ ಮೇಲೆ ತಮ್ಮ ನೆಚ್ಚಿನವರ ಹೆಸರನ್ನು ಬರೆಸಿಕೊಳ್ಳಲು ಜನ ಸರದಿಯಲ್ಲಿ ನಿಂತಿದ್ದದ್ದು ಕಲಾವಿದರುಗಳಿಗೆ ತೃಪ್ತಿ ತಂದಿತ್ತು.
ಮೇಳ ಎಂದ ಮೇಲೆ ಹಿಮ್ಮೇಳವು ಇರಲೇ ಬೇಕಲ್ಲವೇ. ಅದಕ್ಕೆ ತಕ್ಕಂತೆ ಮೂರೂ ದಿನಗಳೂ ಹೆಸರಾಂತ ಕಲಾವಿದರುಗಳ ಕಾರ್ಯಕ್ರಮಕ್ಕೆ ಜನ ಕಿಕ್ಕಿರಿದು ತುಂಬಿದ್ದದ್ದು ಆಯೋಜಕರಿಗೆ ಸಾರ್ಥಕತೆ ನೀಡಿದ್ದರಲ್ಲಿ ಸಂದೇಹವೇ ಇಲ್ಲ, ಮೊದಲನೇ ದಿನ ಪಂಡಿತ್ ವೆಂಕಟೇಶ್ ಕುಮಾರ್ ಅವರ ದಾಸ ವಚನ ಸಂಗಮ ಕಾರ್ಯಕ್ರಮವಿದ್ದರೆ, ಎರಡನೆಯ ದಿನ ಸೃಷ್ಟಿ ನಿರಂತರ ತಂಡದಿಂದ ಮತ್ತೆ ಡಾ.ರಾಜ್ ಮರೆಯಲಾರದ ಗೀತೆಗಳು ಕಾರ್ಯಕ್ರಮದಲ್ಲಿ ಅರವತ್ತು, ಎಪ್ಪತ್ತು ಮತ್ತು ಎಂಭತ್ತರ ದಶಕದ ಡಾ.ರಾಜ್, ಪಿ.ಬಿ.ಶ್ರೀನಿವಾಸ್ ಅವರ ಸುಮಧುರ ಹಾಡುಗಳು ಎಲ್ಲರನ್ನೂ ಮೂರು ದಶಕದ ಹಿಂದಿನ ಪ್ರಪಂಚಕ್ಕೆ ಕೊಂಡು ಹೋಗಿದ್ದಂತೂ ಸುಳ್ಳಲ್ಲ. ಮೂರನೆಯ ದಿನವಾದ ಇಂದು ಬಾಲೇಖಾನ್ ಸಹೋದರಿಯರಿಂದ ಸಿತಾರ್ ಮತ್ತು ಗಾನ ಖಂಡಿತವಾಗಿಯೂ ಸಂಗೀತಾಸಕ್ತರ ಮನವನ್ನು ತಣಿಸುವುದರಲ್ಲಿ ಎರಡು ಮಾತಿಲ್ಲ.
ಪಬ್, ಬಾರು, ಶಾಪಿಂಗ್ ಮಾಲುಗಳು, ಮಲ್ಟಿಪ್ಲೆಕ್ಸ್ಗಳು ವರ್ಷದ ಮುನ್ನೂರ ಅರವತ್ತೈದು ದಿನವೂ ಇದ್ದೇ ಇರುತ್ತದೆ. ನಮ್ಮೆಲ್ಲರ ಕೆಲಸಗಳ ಮಧ್ಯೆಯೂ ಅಲ್ಪ ಸ್ವಲ್ಪ ಬಿಡುವು ಮಾಡುಕೊಂಡು ಒಮ್ಮೆ ಇಂತಹ ಗ್ರಾಮೀಣ ಸೊಗಡಿನ ಹಬ್ಬಗಳನ್ನು ನಾವೆಲ್ಲರೂ ಸಕುಟುಂಬ ಸಮೇತವಾಗಿ ಭಾಗವಹಿಸುವುದರ ಮೂಲಕ ನಮ್ಮ ಸಂಪ್ರದಾಯ, ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಉಳಿಸೋಣ ಮತ್ತು ಬೆಳೆಸೋಣ. ಈ ರೀತಿಯ ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸುವ ಮೂಲಕ ಆ ಕಾರ್ಯಕ್ರಮಗಳ ಆಯೋಜಕರಿಗೆ ಮತ್ತವರ ಸ್ವಂಯಸೇವಕರ ನಿಸ್ವಾರ್ಥ ಸೇವೆಗೆ ನಮ್ಮ ಅಭಿನಂದನೆಗಳನ್ನು ಸಲ್ಲಿಸೋಣ. ಅದರ ಜೊತೆಯಲ್ಲಿ ಈ ಅಭೂತ ಪೂರ್ವ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಕಲಾವಿದರುಗಳಿಗೂ ಪ್ರೋತ್ಸಾಹ ನೀಡಿದಂತಾಗುವುದಲ್ಲದೇ ಎಲ್ಲಾ ಕಡೆಯಿಂದಲೂ ವ್ಯಾಪಾರ ಮಾಡಲು ಬಂದಿದ್ದಂತಹ ವ್ಯಾಪಾರಿಗಳಿಗೆ ನಮ್ಮಿಂದ ನಾಲ್ಕು ಕಾಸು ಸಂಪಾದನೆಯಾಗಿ ಎರಡು ಹೊತ್ತು ನೆಮ್ಮದಿಯ ಊಟಮಾಡಲು ಸಹಕಾರಿಯಾಗುತ್ತದೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಗ್ರಾಮೀಣ ಸೊಗಡನ್ನು ಪರಿಚಯ ಮಾಡಿಸಿಕೊಡುವ ಅತ್ಯುತ್ತಮ ವಿಧಾನವಾಗಿದೆ.
ಇನ್ನೇಕೆ ತಡ. ಇನ್ನೂ ತಡರಾತ್ರಿಯವರೆಗೂ ನಡೆಯುವ ಮಲ್ಲೇಶ್ವರದ ಕಡಲೇ ಕಾಯಿ ಪರಿಷೆಯಲ್ಲಿ ಪಾಲ್ಗೊಂಡು ಸಂಭ್ರಮಿಸೋಣ. ಒಂದು ಪಕ್ಷ ಸಾಧ್ಯವಾಗದಿದ್ದರೆ ಬೇಸರ ಬೇಡ. ಇದೇ ಶನಿವಾರ, ಭಾನುವಾರ ಮತ್ತು ಸೋಮವಾರ ಹೇಗೂ ಬಸವನಗುಡಿಯ ಪರಿಷೆಯಲ್ಲಿ ಭೇಟಿ ಮಾಡುವ ಸುವರ್ಣಾವಕಾಶವಂತೂ ಇದ್ದೇ ಇರುತ್ತದೆ.
ನಿಮ್ಮ ಆಗಮನಕ್ಕಾಗಿ ನಾವು ಕಾಯ್ತ ಇರ್ತೀವಿ. ಬರ್ತೀರೀ ತಾನೇ?
ಏನಂತೀರೀ?