ರೆವರೆಂಡ್ ಫರ್ಡಿನ್ಯಾಂಡ್‌ ಕಿಟೆಲ್‌

ಕನ್ನಡಿಗ ಅಥವಾ ಕನ್ನಡತಿ ಎಂದೆನಿಸಿಕೊಳ್ಳಲು ಅವರು ಕರ್ನಾಟಕದಲ್ಲಿಯೇ ಹುಟ್ಟಬೇಕು ಎಂದೇನಿಲ್ಲಾ. ಆವರ ಮಾತೃ ಭಾಷೆ ಕನ್ನಡವೇ ಆಗಿರಬೇಕು ಎಂದೇನಿಲ್ಲ. ಕನ್ನಡ ಭಾಷೆಯನ್ನು ಯಾರು ಒಪ್ಪಿಕೊಂಡು ಅಪ್ಪಿಕೊಳ್ಳುತ್ತಾರೋ ಅವರೆಲ್ಲರೂ ಕನ್ನಡಿಗರೇ.  ಅದೊಬ್ಬ ತರುಣ ಕ್ರೈಸ್ತ ಧರ್ಮ ಪ್ರಚಾರಕ್ಕೆಂದು ದೂರದ ಜರ್ಮನಿಯಿಂದ ಧಾರವಾಡಕ್ಕೆ ಬರುತ್ತಾನೆ. ಸ್ಥಳೀಯರೊಂದಿಗೆ ಬೆರೆಯುವ ಸಲುವಾಗಿ ಕನ್ನಡ ಕಲಿತು ಕೊಳ್ಳುತ್ತಾನೆ. ಕನ್ನಡ ಕಂಪನ್ನು ಆತ ಅಪ್ಪಿ ಮು..ದ್ದಾಡುತ್ತಾನೆ ಮತ್ತು ಕೆಲವೇ ಕೆಲವು ವರ್ಷಗಳಲ್ಲಿಯೇ ಕನ್ನಡಿಗರಿಗೇ ಕನ್ನಡ ಪದಗಳ ಅರ್ಥವನ್ನು ತಿಳಿಸುವ ನಿಘಂಟನ್ನು ರಚಿಸಿ ಅಜರಾಮರನಾಗುತ್ತಾನೆ. ಬಹುಶಃ ನಿಮಗೀಗಾಲೇ ನಾನು ಯಾರ ಬಗ್ಗೆ ಹೇಳುತ್ತಿದ್ದೇನೆ ಎಂದು ತಿಳಿದಿರಬಹುದು. ಹೌದು ನಿಮ್ಮ ಉಹೆ ಸರಿ. ನಾವೀಗ ರೆವರೆಂಡ್ ಫರ್ಡಿನ್ಯಾಂಡ್‌ ಕಿಟೆಲ್‌ ಬಗ್ಗೆ ತಿಳಿದುಕೊಳ್ಳೋಣ.

kitಜರ್ಮನಿಯ ರೋಸ್ಟರ್ ಹಾಫೆ ಎಂಬಲ್ಲಿ 1832ರ ಏಪ್ರಿಲ್ 7ರಂದು ಕ್ರೈಸ್ತ ಧರ್ಮದ ಪ್ರಾಟಿಸ್ಟೆಂಟ್ ಪಂಗಡಕ್ಕೆ ಸೇರಿದ ಚರ್ಚಿನ ಧರ್ಮಾಧಿಕಾರಿಗಳಾಗಿದ್ದ ಗ್ಯಾಟ್ ಫ್ರೀಡ್ ಮತ್ತು ಹೆಲೆನ್ ದಂಪತಿಗಳಿಗೆ ಕಿಟಲ್ ಅವರು ಜನಿಸುತ್ತಾರೆ. ಆವರ ಪ್ರಾಥಮಿಕ ಶಿಕ್ಷಣವೆಲ್ಲಾ ಜೌರಿಕ್‌ನಲ್ಲಿ ನಡೆದು ಬಾಸೆಲ್ ನಗರದ ಮಿಷನ್ ಕಾಲೇಜಿನಲ್ಲಿ ಮೂರು ವರ್ಷಗಳ ವ್ಯಾಸಂಗದ ಬಳಿಕ ಪಾದ್ರಿಯಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನಿರ್ಧರಿಸುತ್ತಾರೆ.

ಆಗ ಬಾಸೆಲ್ ಮಿಶನ್ ಅವರು, 1853 ರಲ್ಲಿ  ಕಿಟೆಲ್ ಅವರನ್ನು ಭಾರತದ ಧಾರವಾಡ ಪಟ್ಟಣಕ್ಕೆ ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಕಳಿಸಿಕೊಟ್ಟರು. ಹಾಗೆ ತಮ್ಮ 21ನೇ ವಯಸ್ಸಿಗೆ ಧಾರವಾಡಕ್ಕೆ ಬಂದ ಕಿಟಲ್ ಅವರು ಸ್ಥಳೀಯರೊಡನೆ ಸುಲಭವಾಗಿ ಬೆರೆಯುವ ಸಲುವಾಗಿ ಮೊದಲು ಕನ್ನಡವನ್ನು ಕಲಿಯಲು ನಿರ್ಧರಿಸುತ್ತಾರೆ. ಕಾಲುನಡಿಗೆಯಲ್ಲೇ ಧಾರವಾಡದ ಸುತ್ತಮುತ್ತಲಿನ ಹಳ್ಳಿಗಾಡುಗಳಲ್ಲಿ, ಗುಡ್ಡಗಾಡುಗಳಲ್ಲಿ, ನಿರ್ಗಮ ಕಾಡು-ಮೇಡುಗಳಲ್ಲಿ ಊರೂರು ಅಲೆದು, ಆ ಪ್ರದೇಶಗಳ ಆಡುಭಾಷೆಯ ಪರಿಚಯ ಮಾಡಿಕೊಂಡು ಇಷ್ಟ ಪಟ್ಟು ಕಷ್ಟ ಪಟ್ಟು ಶ್ರಮವಹಿಸಿ ಸುಲಲಿತವಾಗಿ ಕನ್ನಡವನ್ನು ಮತ್ತು ಅದರ ಜೊತೆ ಜೊತೆಗೆ ಸಂಸ್ಕೃತವನ್ನು ಓದಲು ಮತ್ತು ಬರೆಯಲು ಕಲಿತು ಕೊಳ್ಳುತ್ತಾರೆ. ತಮ್ಮ ಕನ್ನಡಾಭ್ಯಾಸವನ್ನು ಕೇವಲ ಆಡು ಭಾಷೆಗಷ್ಟೇ ಮೀಸಾಲಾಗಿರದೇ, ಹಳಗನ್ನಡವನ್ನು ಹೇಗೆ ಅಭ್ಯಾಸ ಮಾಡುತ್ತಾರೆಂದರೆ, ಕೇಶೀರಾಜನ ಶಬ್ದಮಣಿದರ್ಪಣ ಕಿಟೆಲ್‌ ಅವರಿಗೆ ಅಂಗೈನೆಲ್ಲಿಯಾಗಿತ್ತು ಪ್ರಾಚೀನ ಕವಿಗಳ ಕವನದ ಸಾಲುಗಳು ನಾಲಗೆ ತುದಿಯಲ್ಲಿ ಕುಣಿಯುತ್ತಿದ್ದವು. ಹಳೇ ಗನ್ನಡದ ವ್ಯಾಕರಣ ಸೂತ್ರಗಳು ಎಂಬ ಗ್ರಂಥವನ್ನು ಪ್ರಕಟಣೆ ಮಾಡುವಷ್ಟು ಪ್ರಭುದ್ಧತೆಯನ್ನು ಪಡೆದು ಕೊಳ್ಳುತ್ತಾರೆ.

ತಮ್ಮ ಮತ ಪ್ರಚಾರಕ್ಕೆ ಅನುಕೂಲವಾಗುವಂತೆ ಕಥಾಮಾಲೆ ಎಂಬ ಪುಸ್ತಕವನ್ನೂ ಮತ್ತು ಏಸುವಿನ ಕುರಿತಾದ ಏಸುಕ್ರಿಸ್ತನ ಶ್ರಮೇ ಚರಿತ್ರೆ, ಪರಮಾತ್ಮನ ಜ್ಞಾನ ಎಂಬ ಪುಸ್ತಕಗಳನ್ನು ಪ್ರಕಟಿಸುತ್ತಾರೆ. ಕಿಟಲ್ ಅವರ ಕನ್ನಡ ಭಾಷೆಯ ಮೇಲಿನ ಪಾಂಡಿತ್ಯವನ್ನು ಗಮನಿಸಿದ ಬಾಸೆಲ್ ಮಿಷನ್ನಿನವರು ಈ ಮುಂಚೆ ರೆವರೆಂಡ್ ರೀವ್ ಸಿದ್ಧಪಡಿಸಿದ್ದ ನಿಘಂಟನ್ನು ಉತ್ತಮ ಪಡಿಸುವ ಜವಾಬ್ದಾರಿಯನ್ನು ವಹಿಸುತ್ತಾರೆ, ಅಲ್ಲಿಂದ ಮುಂದೆ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ತಪಸ್ಸಿನಂತೆ ಆಸ್ಥೆ ವಹಿಸುತ್ತಾರೆ. ಈ ನಿಟ್ಟಿನಲ್ಲಿ ಹಿಂದಿನ ನಿಘಂಟಿನಲ್ಲಿದ್ದ ಲೋಪದೋಷಗಳನ್ನು ಪಟ್ಟಿ ಮಾಡಿಕೊಂಡು, ಅವುಗಳನ್ನು ಸರಿಪಡಿಸಲು ಗ್ರಾಮ ಗ್ರಾಮಗಳನ್ನು ಸುತ್ತಿ ತಮ್ಮ ಜೋಳಿಗೆಯಲ್ಲಿದ್ದ ಏಲಕ್ಕಿ, ಗೋಡಂಬಿ, ಚಕ್ಕೆ ಮೊಗ್ಗು ಮುಂತಾದ ಅನೇಕ ವಸ್ತುಗಳನ್ನು ಅಲ್ಲಿಯ ಜನರುಗಳಿಗೆ ತೋರಿಸಿ ಅಲ್ಲಿಯ ಜನ ಅದಕ್ಕೆ ಏನೆಂದು ಕರೆಯುತ್ತಾರೆ, ಅದಕ್ಕೆ ಬೇರೆ ಬೇರೆ ಹೆಸರುಗಳಿವೆಯೇ ಎಂಬುದೆಲ್ಲವನ್ನೂ ತಮ್ಮ ಪುಸ್ತಕದಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಾರೆ. ಅಗತ್ಯ ಬಿದ್ದಾಗಲೆಲ್ಲಾ ಕನ್ನಡದ ಪ್ರಸಿದ್ಧ ಗ್ರಂಥಗಳನ್ನು ಓದುತ್ತಾ ಗಾದೆ ಮಾತುಗಳಲ್ಲಿ ಬರುವ ಪದಗಳನ್ನು ಅವುಗಳ ಅರ್ಥಗಳನ್ನು ಸಂಗ್ರಹಿಸಿ, ಪ್ರತಿ ಶಬ್ದದ ಉಚ್ಛಾರಣೆಯನ್ನು ಇಂಗ್ಲಿಷ್‌ನಲ್ಲಿ ನಮೂದಿಸಿಕೊಳ್ಳುತ್ತಿದ್ದರು. ಹೀಗೆ ನಿರಂತರವಾಗಿ ಹಗಲು ರಾತ್ರಿಯೆನ್ನದೆ ನಿಘಂಟಿನ ಕೆಲಸದಲ್ಲಿ ತೊಡಗಿದ್ದ ಕಾರಣ ಅವರ ಆರೋಗ್ಯ ಕೆಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ಹಿಂದಿರುಗಿದರೂ ಅಲ್ಲಿಯೂ ತಮ್ಮ ನಿಘಂಟಿನ ಕೆಲಸವನ್ನು ಮುಂದುವರೆಸಿ ಆರೋಗ್ಯ ಸುಧಾರಿಸಿದ ಮೇಲೆ ಪುನಃ ಭಾರತಕ್ಕೆ ಮರಳಿ ಬಂದು ಅನೇಕ ವಿದ್ವಾಂಸರೊಡನೆ ವಿಚಾರ ವಿನಿಮಯ ಮಾಡಿ ತಮ್ಮ 52ನೇ ವಯಸ್ಸಿನಲ್ಲಿ ತನ್ನದಲ್ಲದ ಭಾಷೆಗೆ ಮರೆಯಲಾಗದಂತಹ ಎಪ್ಪತ್ತು ಸಾವಿರ ಪದಗಳಿರುವ ನಿಘಂಟಿನ ಮೊದಲ ಪ್ರತಿಯನ್ನು ಮಂಗಳೂರಿನ ಬಾಸೆಲ್ ಮಿಷನ್‌ಗೆ 1894ರಲ್ಲಿ ಒಪ್ಪಿಸಿದಾಗ ಕಿಟಲ್ ಅವರಿಗೆ ಏನೋ ಮಹತ್ಕಾರ್ಯ ಸಾಧಿಸಿದ ಮಹದಾನಂದ.ಈ ನಿಘಂಟಿನ ಮತ್ತೊಂದು ವಿಶೇಷವೆಂದರೆ ಕನ್ನಡ ಪದಗಳಿಗೆ ಸಮಾನವಾಗಿ ಇತರ ದ್ರಾವಿಡ ಭಾಷೆಗಳ ಪದಗಳ ಜೊತೆ ಸಂಸ್ಕೃತ ಪದ ಮತ್ತು ತದ್ಭವ ಪದಗಳಿಗೆ ತತ್ಸಮದ ಅರ್ಥವನ್ನೂ ಬರೆದಿದ್ದಾರೆ. ಈ ಮಹತ್ಕಾರ್ಯಕ್ಕಾಗಿ ಜರ್ಮನಿಯ ಟ್ಯೂಬಿಂಗನ್ ವಿಶ್ವವಿದ್ಯಾಲಯವು ಕಿಟಲ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು. ಕಿಟಲ್ ಅವರ ಬಗ್ಗೆ ನಮ್ಮ ನಮ್ಮ ವರಕವಿ, ದ.ರಾ.ಬೇಂದ್ರೆಯವರು ಕನ್ನಡಕ್ಕೆ ಕನ್ನಡಿಯ ಹಿಡಿದು, ದುಡಿದವ ನೀನು ಎಂದಿದ್ದರು ಎಂದರೆ ಕಿಟಲ್ ಅವರ ಹಿರಿಮೆ ಮತ್ತು ಗರಿಮೆ ಎಷ್ಟಿತ್ತು ಎಂಬ ಅರಿವಾಗುತ್ತದೆ.

ಕೇವಲ ನಿಘಂಟಲ್ಲದೇ, ಕರ್ನಾಟಕ ಕಾವ್ಯಮಾಲೆ, ಶಬ್ದಮಣಿ ದರ್ಪಣ, ಛಂದೋಂಬುಧಿ, ಹತ್ತನೆಯ ಶತಮಾನದಿಂದ ತಮ್ಮ ಕಾಲದವರೆಗೆ ಸಂಗ್ರಹಿಸಿ ರೂಪಿಸಿದ ಕನ್ನಡ ಸಾಹಿತ್ಯ ಚರಿತ್ರೆ, ಕಥಾಮಾಲೆ, ಕ್ರೈಸ್ತ ಸಭಾ ಚರಿತ್ರೆ ಮತ್ತು ಕನ್ನಡದ ಪ್ರೌಢವ್ಯಾಕರಣ ಹೀಗೆ ಹತ್ತಾರು ಕೃತಿಗಳು ಜೊತೆ ಜೊತೆಯಲ್ಲಿಯೇ ಅನೇಕ ಕವನಗಳನ್ನು ರಚಿಸುತ್ತಾರೆ. ಜೊತೆ ಜೊತೆಯಲ್ಲಿಯೇ ತಮ್ಮ ಧರ್ಮದ ಇಂಗ್ಲೀಷಿನ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುತ್ತಾರೆ. ಕೇವಲ ನಿಘಂಟು ಮತ್ತು ಸಾಹಿತ್ಯಕ್ಕೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ ಪತ್ರಿಕೋದ್ಯಮದಲ್ಲೂ ತಮ್ಮ ಕೈಯಾಡಿಸಿದ ಕಿಟೆಲ್‌ ವಿಚಿತ್ರ ವಾರ್ತಾ ಸಂಗ್ರಹ ಎಂಬ ಪತ್ರಿಕೆಯನ್ನು ಆರಂಭಿಸುವುದರ ಜೊತೆಗೆ, ಇಂಡಿಯನ್‌ ಆ್ಯಂಟಿಕ್ವೆರಿ ಎಂಬ ವಿಭಿನ್ನ ಪತ್ರಿಕೆಯನ್ನೂ ಹೊರತರುತ್ತಾರೆ.

ಕಿಟಲ್ ಅವರ ವಯಕ್ತಿಕ ಜೀವನ ಅಷ್ಟೇನೂ ಸುಖಮಯವಾಗಿರಲಿಲ್ಲ. ಮದುವೆಯಾದ ಕೇವಲ ನಾಲ್ಕೇ ವರ್ಷಗಳಲ್ಲಿ ಎರಡು ಮಕ್ಕಳಾದ ಮೇಲೆ ತಮ್ಮ ಮೊದಲ ಹೆಂಡತಿಯನ್ನು ಕಳಕೊಳ್ಳುತ್ತಾರೆ. ನಂತರ ಎರಡನೆಯ ಮದುವೆಯಾದರೂ ಆಕೆಯೂ ಕೆಲ ವರ್ಷಗಳ ನಂತರ ನಿಧನರಾಗುತ್ತಾರೆ. ಇವೆಲ್ಲವನ್ನೂ ಸಹಿಸಿಕೊಂಡೇ ಜರ್ಮನಿಗೆ ಹಿಂದಿರುಗಿ ಅಲ್ಲಿ ಅದು ಸುಮ್ಮನೆ. ಕರ್ನಾಟಕವೇ ನಮ್ಮನೆ, ಕಥಾಮಾಲೆ, ಪರಮಾತ್ಮನ ಜ್ಞಾನ, ಕರ್ನಾಟಕ ಕಾವ್ಯಮಾಲೆ ಎಂಬ ಕನ್ನಡ ಪುಸ್ತಕಗಳನ್ನು ಅಲ್ಲಿಂದಲೇ ಪ್ರಕಟಿಸುತ್ತಾರೆ.

ತಮ್ಮ ಇಳಿವಯಸ್ಸಿನಲ್ಲಿಯೂ ಸುಮ್ಮನಿರದೇ, ಕನ್ನಡ ವ್ಯಾಕರಣದ ಬಗ್ಗೆ ಇಂಗ್ಲಿಷಿನಲ್ಲಿ ಒಂದು ಪುಸ್ತಕ ಬರೆಯುತ್ತಾರೆ. 1903, ಡಿಸೆಂಬರ್‌ 18ರಂದು ಆ ಪುಸ್ತಕದ ಮೊದಲ ಪ್ರತಿ ಕಿಟಲ್ ಅವರ ಕೈ ಸೇರಿತ್ತದೆ. ಆ ಪುಸ್ತಕವನ್ನು ನೋಡಿ ತಮಗರಿವಿಲ್ಲದಂತೆಯೇ ಅವರ ಕಣ್ಗಳಲ್ಲಿ ಆನಂದ ಭಾಷ್ಪ ಉಕ್ಕಿ ಹರಿಯುತ್ತದೆ. ಆದರೆ ದುರ್ವಿಧಿಯೆಂದರೆ ಆ ರೀತಿಯಾದ ಆನಂದವನ್ನು ಸವಿಯುತ್ತಲೇ ನಿದ್ದೆಗೆ ಜಾರಿದ ಕಿಟಲ್, ಮಾರನೆಯ ದಿನ ಬೆಳಿಗ್ಗೆ ಹಾಸಿಗೆಯಿಂದ ಏಳಲೇ ಇಲ್ಲ.

ಕಿಟೆಲ್ ಅವರ ಕನ್ನಡ ಪ್ರೇಮ ಎಷ್ಟಿತ್ತು ಎಂಬುದಕ್ಕೆ ಈ ಪ್ರಸಂಗವನ್ನು ಹೇಳದೇ ಇದ್ದರೆ ಅವರ ಬಗ್ಗೆಯ ಲೇಖನ ಕಳೆ ಕಟ್ಟುವುದೇ ಇಲ್ಲ. ಜರ್ಮನಿಯಲ್ಲಿ ತಮ್ಮ ಅಂತಿಮ ದಿನಗಳನ್ನು ಎಣಿಸುತ್ತಾ, ಹಾಸಿಗೆ ಹಿಡಿದಿದ್ದಾಗ ಅವರನ್ನು ನೋಡಲು ಕನ್ನಡಿಗರೊಬ್ಬರು ಅವರ ಮನೆಗೆ ಹೋಗುತ್ತಾರೆ. ಕನ್ನಡಿಗರು ತಮ್ಮನ್ನು ನೋಡಲು ಬಂದಿರುವುದನ್ನು ಕಂಡು ಆನಂದ ತುಮುಲರಾದ ಕಿಟ್ಟಲ್ ಅವರ ಕುಶಲೋಪರಿಯನ್ನು ವಿಚಾರಿಸಿದಾಗ, ಆ ಕನ್ನಡಿಗರು ಇಂಗ್ಲೀಷಿನಲ್ಲಿ ಉತ್ತರ ನೀಡಲು ಪ್ರಾರಂಭಿಸಿದಾಗ, ಅವರ ಮಾತನ್ನು ಮಧ್ಯದಲ್ಲಿಯೇ ತುಂಡರಿಸಿದ ಕಿಟಲ್ ಅವರು, ನನ್ನನ್ನು ನೋಡಲು ಅಷ್ಟು ದೂರದಿಂದ ಬಂದಿದ್ದೀರಿ. ನನಗೂ ನನ್ನ ಕನ್ನಡವನ್ನು ಕೇಳಿ ಬಹಳ ದಿನಗಳಾಗಿವೆ. ದಯವಿಟ್ಟು ಕನ್ನಡದಲ್ಲಿ ಮಾತನಾಡುವಿರಾ ಎಂದು ವಿನಂತಿಸಿದಾಗ, ಆ ಕನ್ನಡಿಗನ ಮನಸ್ಸು ಇಂಗು ತಿಂದ ಮಂಗನಂತಾಗಿ, ತಕ್ಷಣವೇ ತಮ್ಮ ತಪ್ಪಿನ ಅರಿವಾಗಿ ಕಿಟಲ್ ಅವರ ಬಳಿ ಕ್ಷಮೆಯಾಚಿಸಿ ಕನ್ನಡಲ್ಲೇ ತಮ್ಮ ಸಂಭಾಷಣೆಯನ್ನು ಮುಂದುವರಿಸಿದರಂತೆ.

  • 1890ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಸಂಸ್ಥೆ ಆಬರಿಗೆ ಗೌರವ ಸದಸ್ಯತ್ವವನ್ನು ಕೊಡುತ್ತದೆ.
  • 1896 ಜೂನ್, 6, ರಲ್ಲಿ ಜರ್ಮನಿಯ ಟ್ಯುಬಿಂಗನ್ ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಾರೆ.
  • 2003 ರಲ್ಲಿ ಅವರ ಮರಣ ಶತಮಾನೋತ್ಸವವನ್ನು ಜರ್ಮನಿ ಮತ್ತು ಕರ್ನಾಟಕದಲ್ಲಿ ಆಚರಿಸಲಾಯಿತು.

kit3ಕಿಟಲ್ ಅವರ ಕನ್ನಡದ ಸೇವೆಯ ನೆನಪಿಗಾಗಿ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮೇಯೋಹಾಲ್ ಬಳಿ, ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆದಲ್ಲದೆ, ಬೆಂಗಳೂರಿನ ಪ್ರತಿಷ್ಟಿತ ಆಸ್ಟಿನ್ ಟೌನ್ ಪ್ರದೇಶವನ್ನು ರೆವರೆಂಡ್ ಕಿಟೆಲ್ ನಗರ ಎಂದೂ ಮರು ನಾಮಕರಣ ಮಾಡಿದ್ದಲ್ಲದೆ, ಅವರ ನೆನಪಿನಲ್ಲಿಯೇ ಧಾರವಾಡದಲ್ಲಿ ಕಿಟೆಲ್ ಕಾಲೇಜು ಸ್ಥಾಪನೆಯಾಗಿದೆ.

ಸೂರ್ಯ ಚಂದ್ರ ಇರುವವರೆಗೂ ನಮ್ಮ ಕನ್ನಡ ಭಾಷೆ ಇದ್ದೇ ಇರುತ್ತದೆ. ಕನ್ನಡ ಭಾಷೆ ಇರುವವರೆಗೂ ಕಿಟಲ್ ಅವರ ನಿಘಂಟು ಕನ್ನಡಿಗರ ಆಸ್ತಿಯಾಗಿಯೇ ಉಳಿಯುತ್ತದೆ. ಹೀಗೆ ಕನ್ನಡಿಗರ ಹೃದಯದಲ್ಲಿ ರೆವರೆಂಡ್ ಕಿಟಲ್ ಅವರು ಎಂದೆದಿಗೂ ಅಜರಾಮರವಾಗಿಯೇ ಇರುತ್ತಾರೆ. ಧರ್ಮ ಯಾವುದಿದ್ದರೇನೂ, ಮಾಡುವ ಕರ್ಮ ಕನ್ನಡದ್ದಾಗಿದ್ದರೇ ಆತ ನಮ್ಮ ಹೆಮ್ಮೆಯ ಕನ್ನಡಿಗನೇ. ಹಾಗಾಗಿ ರೆವರೆಂಡ್ ಫರ್ಡಿನ್ಯಾಂಡ್‌ ಕಿಟೆಲ್‌ ಅವರು ಸದಾ ಕಾಲವೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

 

ಏನಂತೀರೀ?

2 thoughts on “ರೆವರೆಂಡ್ ಫರ್ಡಿನ್ಯಾಂಡ್‌ ಕಿಟೆಲ್‌

  1. ಓದುತ್ತಾ ಓದುತ್ತಾ ಅತಿ ಹೆಚ್ಚು ಭಾವುಕನಾದೆ. ಕಿಟೆಲ್ ಬಗ್ಗೆ ಮೊದಲು ತಿಳಿಸಿದ್ದು ರಂಗನಾಥ್ ಮೇಷ್ಟ್ರು , ಅವರು ತಮ್ಮ ಮನೆಯಲ್ಲಿಯೇ ನಡೆಸುತ್ತಿದ್ದ ಸಣ್ಣ ಗ್ರಂಥಾಲಯದಲ್ಲಿ ಕಿಟೆಲ್ ಅವರ ನಿಘಂಟು ನೋಡಿ ಕನ್ನಡೇತರರು ಅದರಲ್ಲೂ ವಿದೇಶಿಗರು ಇಂತಹ ಕಾರ್ಯ ಸಾಧಿಸಲು ಸಾಧ್ಯವೇ ಎಂದು ಕೇಳಿದ್ದೆ. ಕನ್ನಡ ಮತ್ತು ಕನ್ನಡಿಗರ ಸರಳತೆ ಅವರಿಗೆ ಪ್ರೇರಣೆ ನೀಡಿರಬಹುದು ಎಂದರು. ಜನಮಾನಸದಲ್ಲಿ ಹುದುಗಿ
    ಹೋಗಿದ್ದ ಹಲವು ಪದಗಳನ್ನು ಹೆಕ್ಕಿ ತೆಗೆದು ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಮಾಡಿದ ಕಿಟೆಲ್ ಅವರ ಕನ್ನಡಾಂಬೆಯ ಸೇವೆಯನ್ನು ಪ್ರತಿಯೊಬ್ಬ ಕನ್ನಡಿಗನು ಸ್ಮರಿಸಬೇಕು. ಕಿಟೆಲ್ ಅವರ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಬಯಸಿ ಈ ಲೇಖನ ಮಾಲೆಯಲ್ಲಿ ಅವರು ಬಗ್ಗೆ ಬರೆಯುವ ನನ್ನ ಕೋರಿಕೆಯನ್ನು ಮನ್ನಿಸಿ ಈ ಲೇಖನವನ್ನು ಬರೆದಿದ್ದಕ್ಕೆ ಸದಾ ಆಭಾರಿಯಾಗಿದ್ದೇನೆ. ಧನ್ಯವಾದಗಳು.

    Like

    1. ಈ‌ ಮೂವತ್ತು ದಿನಗಳಲ್ಲಿ ಖಂಡಿತವಾಗಿಯೂ ಕಿಟಲ್ ಅವರ ಬಗ್ಗೆ ಬರೆಯಬೇಕೆಂದು ನಿರ್ಧರಿಸಿಯಾಗಿತ್ತು. ಅದರ ಮೇಲೆ ನಿಮ್ಮ ವಯಕ್ತಿಕ ಕೋರಿಕೆ ಮನ್ನಿಸಿ ಮೂರ್ನಾಲ್ಕು ದಿನ ಮುಂಚಿತವಾಗಿ ಪ್ರಕಟಿಸಿದ್ದೇನೆ ಅಷ್ಟೇ.

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s