ಕನ್ನಡ ಸುಗಮ ಸಂಗೀತದ ಪ್ರವರ್ತಕರಾಗಿ ಕನ್ನಡದ ಬಹುತೇಕ ಕವಿಗಳ ಭಾವಗೀತೆಗಳಿಗೆ ಧ್ವನಿಯಾಗಿದ್ದ ಶ್ರೀ ಪಿ ಕಾಳಿಂಗರಾಯರ ಕುರಿತು ಹಿಂದಿನ ಮಾಲಿಕೆಯಲ್ಲಿ ಪರಿಚಯ ಮಾಡಿಕೊಂಡ ಮೇಲೆ ನಾವಿಂದು ಅವರ ಉತ್ತರಾಧಿಕಾರಿಗಳ ಪರಿಚಯ ಮಾಡಿಕೊಳ್ಳಲೇ ಬೇಕಲ್ಲವೆ? ತಮ್ಮ ಅದ್ಭುತ ಗಾಯನ ಮತ್ತು ರಾಗ ಸಂಯೋಜನೆಗಳಿಂದ ಸುಗಮ ಸಂಗೀತ ಕ್ಷೇತ್ರದ ಅನುಭಿಷಕ್ತ `ದೊರೆಯಾಗಿ ಮೆರೆದವರು, ಮ್ಯಾಂಡೊಲಿನ್, ತಬಲ, ಕೊಳಲು, ಹಾರ್ಮೋನಿಯಂ ಮುಂತಾದ ವಾದ್ಯಗಳನ್ನು ಸುಲಲಿತವಾಗಿ ನುಡಿಸಬಲ್ಲವರೂ ಮತ್ತು ಕವನಗಳನ್ನು ರಚಿಸಬಲ್ಲ ಸಾಮರ್ಥ್ಯ ಹೊಂದಿದ್ದಂತಹ ಶ್ರೀ ಮೈಸೂರು ಅನಂತಸ್ವಾಮಿಗಳ ಬಗ್ಗೆ ನಾವಿಂದು ಅರಿತುಕೊಳ್ಳೋಣ.
ನೀರಿನಲ್ಲಿ ಹುಟ್ಟುವ ಮೀನಿಗೆ ಈಜುವುದು ಕಷ್ಟವೇ ಎನ್ನುವಂತೆ . ಮೈಸೂರು ಅರಸರ ಆಸ್ಥಾನದ ಸಂಗೀತ ವಿದ್ವಾಂಸರಾಗಿದ್ದ , ತಾಳ ಬ್ರಹ್ಮ ಎಂದೇ ಹೆಸರುವಾಸಿಯಾಗಿದ್ದಂತಹ ಚಿಕ್ಕರಾಮರಾಯರ ಮೊಮ್ಮಗನಾದ ಅನಂತಸ್ವಾಮಿಯವರಿಗೆ ಸಂಗೀತವನ್ನು ಹೇಳಿ ಕೊಡಬೇಕೇ? ಅನಂತಸ್ವಾಮಿಯವರಿಗೆ ಸಂಗೀತ ರಕ್ತಗತವಾಗಿಯೇ ಮೈಗೂಡಿತ್ತು. ಅಕ್ಟೋಬರ್ 25 , 1936 ವಿಜಯದಶಮಿಯ ದಿನದಂದು ಮೈಸೂರಿನ ದಂಪತಿಗಳಾದ ಶ್ರೀ ಸುಬ್ಬರಾಯರು ಮತ್ತು ಶ್ರೀಮತಿ ಕಮಲಮ್ಮನವರಿಗೆ ಜನಿಸಿದರು. ಸಂಗೀತದ ಬಾಲಪಾಠಗಳು ಮನೆಯಲ್ಲಿಯೇ ಆಗಿ ಓದಿಗಿಂತ ಸಂಗೀತದ ಗೀಳೇ ಹೆಚ್ಚಾದ ಕಾರಣ ಇಂಟರ್ಮೀಡಿಯಟ್ ಕಲಿಯುವ ಹೊತ್ತಿಗೆ ತಮ್ಮ ಆರಾಧ್ಯದೈವವಾಗಿದ್ದ ಆಗ ಮದರಾಸಿನಲ್ಲಿದ್ದ ಮತ್ತೊಬ್ಬ ಸುಗಮ ಸಂಗೀತದ ದಿಗ್ಗಜ ಶ್ರೀ ಪಿ ಕಾಳಿಂಗರಾಯರ ತಂಡದಲ್ಲಿ ಮ್ಯಾಂಡೋಲಿನ್ ವಾದಕರಾಗಿ ಸೇರಿಕೊಳ್ಳುತ್ತಾರೆ.
ಅಲ್ಲಿಂದ ಆರಂಭವಾದ ಅವರ ಸುಗಮ ಸಂಗೀತದ ಪಯಣ ಜೀವಿತಾವಧಿಯವರೆಗೂ ಮತ್ತೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಅರಂಭದಲ್ಲಿ ಅನೇಕ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರಾದರೂ ಅವರ ಕೆಲಸ ಮತ್ತು ಅವರ ಸಂಗೀತದ ಜ್ಞಾನದ ಪರಿಚಯವಿದ್ದ ಕಾಳಿಂಗರಾಯರು ಮನಃಪೂರ್ವಕವಾಗಿ ಹರಸಿ, ಸಂಗೀತ ಕ್ಷೇತ್ರದಲ್ಲಿ ನಿನಗೆ ಉಜ್ವಲ ಭವಿಷ್ಯವಿದೆ. ನಿನ್ನ ಕಾಲಮೇಲೇ ನೀನೇ ನಿಲ್ಲುವಂತಾಗು ಎಂದು ಹೇಳಿ ಬೆಂಗಳೂರಿಗೆ ಕಳುಹಿಸುತ್ತಾರೆ. ಬೆಂಗಳೂರಿಗೆ ಹಿಂದಿಗಿದ ಅನಂತಸ್ವಾಮಿಗಳು ಕನ್ನಡದ ಪ್ರಸಿದ್ಧ ಕವಿಗಳ ಕವನಗಳಿಗೆ ಕೊಳಲಾದರು ಮತ್ತು ಕೊರಳಾದರು ಕನ್ನಡ ಕವಿಗಳ ಭಾವಗೀತೆಗಳನ್ನು ಜನಪ್ರಿಯಗೊಳಿಸಲು ತಮ್ಮನ್ನು ತಾವೇ ಮುಡಿಪಾಗಿರಿಸಿಕೊಂಡರು. ಹಿರಿಯ ಕವಿಗಳಾದ ಬೇಂದ್ರೆ, ಕುವೆಂಪು, ಪು.ತಿ.ನ., ಡಿ.ವಿ.ಜಿ. ಮಾಸ್ತಿ ಮುಂತಾದವರಿಂಂದ ಹಿಡಿದು ನವ್ಯ ಕವಿಗಳಾದ ಅಡಿಗರು, ಪರಮೇಶ್ವರ ಭಟ್ಟ, ನಿಸಾರ್ ಅಹಮದ್, ಜಿ.ಪಿ.ರಾಜರತ್ನಂ, ಜಿ.ಎಸ್.ಶಿವರುದ್ರಪ್ಪನವರ ಕವನಗಳನ್ನು ಕವಿಗಳ ಭಾವನೆಯನ್ನೂ ಮತ್ತು ಭಾವಾರ್ಥವನ್ನು ಹೇಗಿತ್ತೋ ಹಾಗೆಯೇ ಜನರಿಗೆ ತಲುಪಿಸುವ ಮಹತ್ತರ ಸಾಧನೆಯನ್ನು ಮಾಡಿದರು. ಅವರ ಸಂಗೀತ ನಿರ್ದೇಶನದಲ್ಲಿ ಬಿ.ಎಂ.ಶ್ರೀಗಳ ಕರುಣಾಳು ಬಾ ಬೆಳಕೆ, ಕುವೆಂಪುರವರ ಓ ನನ್ನ ಚೇತನ, ನಿಸಾರರ, ಬೆಣ್ಣೆಕದ್ದ, ಡಿ. ವಿ. ಜಿಯವರ ಅಂತಃಪುರ ಗೀತೆಗಳು, ರಾಜರತ್ನಂ ಅವರ ರತ್ನನ್ ಪದಗಳು, ಜಿ. ಎಸ್. ಶಿವರುದ್ರಪ್ಪನವರ, ಎದೆ ತುಂಬಿ ಹಾಡಿದೆನು, ಅಡಿಗರ ಯಾವ ಮೋಹನ ಹೀಗೆ ಸಾವಿರಾರು ಗೀತೆಗಳಿಗೆ ತಮ್ಮ ಅಧ್ಭುತ ಶಾರೀರದಿಂದ ಜನಪ್ರಿಯಗೊಳಿಸಿದರು.
ಎಪ್ಪತ್ತರ ದಶಕದ ಅಂತ್ಯದಲ್ಲಿ ಆಗ ತಾನೇ ಜನಪ್ರಿಯಗೊಳ್ಳುತ್ತಿದ್ದ ಧ್ವನಿಸುರಳಿಗಳಲ್ಲಿ ಕನ್ನಡದಲ್ಲಿ ಪ್ರಪ್ರಥಬಾರಿಗೆ ನಿಸಾರ್ ಅಹಮದ್ ಅವರ ನಿತ್ಯೋತ್ಸವ ಧ್ವನಿಸುರಳಿಗೆ ತಾವೇ ಸಂಗೀತ ಸಂಯೋಜಿಸಿ ಧ್ವನಿಯಾಗಿ ನಾಡಿನ ಮೂಲೆ ಮೂಲೆಗಳಲ್ಲಿಯೂ ನಿತ್ಯಹರಿದ್ವರ್ಣ ಕನ್ನಡವನ್ನು ನಿತ್ಯೋತ್ಸವ ಗೊಳಿಸುವ ಮೂಲಕ ಕ್ಯಾಸೆಟ್ ಲೋಕದ ಯುಗಪ್ರವರ್ತಕರಾದರು. ಅವರ ಸಂಗೀತ ನಿರ್ದೇಶನ ಮತ್ತು ಗಾಯನದ ಸುಮಾರು 25ಕ್ಕೂ ಹೆಚ್ಚು ಧ್ವನಿಸುರುಳಿಗಳು ಬಿಡುಗಡೆಯಾಗಿ ನಾಡಿನಾದ್ಯಂತ ಕನ್ನಡದ ಕಂಪನ್ನು ಝೇಂಕರಿಸಿವೆ ನಾಡಿನಾದ್ಯಂತ ಸುಗಮ ಸಂಗೀತದ ಸಾವಿರಾರು ಕಛೇರಿಗಳನ್ನು ನಡೆಸಿ, ಅದರ ಜನಪ್ರಿಯತೆಗೆ ಕಾರಣರಾಗಿದ್ದಲ್ಲದೇ. ಮೊಟ್ಟ ಮೊದಲ ಬಾರಿಗೆ ವಿದೇಶದಲ್ಲೂ ಸುಗಮ ಸಂಗೀತ ಕಚೇರಿ ನಡೆಸಿದ ಹೆಗ್ಗಳಿಗೂ ಅನಂತಸ್ವಾಮಿಯವರು ಪಾತ್ರರಾಗುತ್ತಾರೆ.
ಮೈಸೂರು ಅನಂತಸ್ವಾಮಿಯವರು ಜಿ.ಎಸ್.ಎಸ್ ಅವರ ಎದೆ ತುಂಬಿ ಹಾಡುವೆನು ಅಂದು ನಾನು ಎಂಬ ಹಾಡಿಗೆ ರಾಗ ಸಂಯೋಜಿಸಿ ಎದೆ ತುಂಬಿ ಹಾಡಿದ್ದನ್ನು ಸಮಸ್ತ ಕನ್ನಡಿಗರು ಮನವಿಟ್ಟು ಕೇಳಿದ್ದಲ್ಲದೇ ಅವರನ್ನು ಹುಚ್ಚರಂತೆ ಆರಾಧಿಸತೊಡಗಿದರು. ಮನೆಯಲ್ಲಿ ಅವರನ್ನು ಎಲ್ಲರೂ ಪ್ರೀತಿಯಿಂದ ದೊರೆ ಎಂದು ಕರೆಯುತ್ತಿದ್ದರೆ, ತಮ್ಮ ಅಪಾರ ಶ್ರೋತೃಗಳಿಗೆ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಅಕ್ಷರಶಃ ಸುಗಮ ಸಂಗೀತ ಕ್ಷೇತ್ರದ ದೊರೆಯಾಗಿ ಕಂಡಿದ್ದರು ಎಂದರೆ ಅತಿಶಯೋಕ್ತಿಯೇನಲ್ಲ.
ಸುಗಮ ಸಂಗೀತದ ಜೊತೆಜೊತೆಯಲ್ಲಿಯೇ ಯಾರು ಹಿತವರು, ಪುಣ್ಯಕೋಟಿ, ಚಿತ್ರಕೂಟ, ಶಿವಯೋಗಿ ಅಕ್ಕಮಹಾದೇವಿ, ಘಳಿಗೆ. ಮಾಡಿ ಮಡಿದವರು ಮುಂತಾದ ಹತ್ತಾರು ಕನ್ನಡ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದರಾದರೂ ಸಿನೆಮಾದಲ್ಲಿ ಏನಿದೆ? ಎಂದು ತಮ್ಮನ್ನೇ ತಾವು ಪ್ರಶ್ನಿಸಿಕೊಂಡು ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವೇ ಸಂಪೂರ್ಣವಾಗಿ ಸಮರ್ಪಿಸಿಕೊಂಡು ಕನ್ನಡದ ನೂರಾರು ಹೆಸರಾಂತ ಕವಿಗಳ ಕವನಗಳು ಜನಮನವನ್ನು ತಲುಪಲು ಕಾರಣರಾಗಿದ್ದಲ್ಲದೆ ಅವರ ಗರಡಿಯಲ್ಲಿ ಸಾವಿರಾರು ಗಾಯಕರಿಗೆ ಸುಗಮ ಸಂಗೀತದ ಕಿಚ್ಚನ್ನು ಹಚ್ಚಿಸಿ ಅವರಿಗೆಲ್ಲರಿಗೂ ಮಾರ್ಗದರ್ಶಕರಾದರು ಮತ್ತು ಆಶ್ರಯದಾತರಾದರು.
ಮೈಸೂರು ಅನಂತಸ್ವಾಮಿಗಳು ರಾಗ ಸಂಯೋಜನೆಯಲ್ಲಿ ಜನಪ್ರಿಯವಾದ ಕೆಲವು ಧ್ವನಿಸುರುಳಿಗಳು
- ನಿತ್ಯೋತ್ಸವ (ಕವಿ – ಕೆ.ಎಸ್.ನಿಸಾರ್ ಅಹಮದ್)
- ಕೆಂದಾವರೆ (ಕವಿ – ಗೋಪಾಲಕೃಷ್ಣ ಅಡಿಗ)
- ಪ್ರೇಮ ತರಂಗ ( ಕವಿ – ಕೆ.ಎಸ್.ನರಸಿಂಹಸ್ವಾಮಿ)
- ಹೇಳತೇನ ಕೇಳ ( ಕವಿ – ಚಂದ್ರಶೇಖರ ಕಂಬಾರ)
- ರತ್ನನ ಪದಗಳು ( ಕವಿ – ಜಿ.ಪಿ.ರಾಜರತ್ನಂ)
- ತಾರಕ್ಕ ಬಿಂದಿಗೆ (ಪುರಂದರದಾಸರು)
- ನೀಲಾಂಜನ ( ಕವಿ – ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ)
- ಭಾವಸಂಗಮ ( ಹಲವರ ಕವನಗಳು)
ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎಂದು ಹಾಡುತ್ತಲೇ,
- ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ.
- ರಾಜ್ಯೋತ್ಸವ ಪ್ರಶಸ್ತಿ ಗಳನ್ನು ಪಡೆದುಕೊಂಡರು.
ತಮ್ಮೀ ಕಲೆ ಕೇವಲ ತಮ್ಮಲ್ಲಿಯೇ ಅಳಿದು ಹೋಗ ಬಾರದೆಂದು ನಿಶ್ಚಯಿಸಿ ಸಾವಿರಾರು ಗಾಯಕ/ಗಾಯಕಿಯರಿಗೆ ಪ್ರೀತಿಯಿಂದ ಸುಗಮ ಸಂಗೀತವನ್ನು ಕಲಿಸಿದ್ದಲ್ಲದೇ, ತಮ್ಮ ಮಕ್ಕಳಾದ ಸುನೀತ, ಅನೀತ ಮತ್ತು ರಾಜು ಅನಂತಸ್ವಾಮಿಯವರ (ಈಗ ನಮ್ಮೊಂದಿಗಿಲ್ಲ) ಮೂಲಕ ತಮ್ಮ ಕಲೆ ಚಿರಸ್ಥಾಯಿಯಾಗುವಂತೆ ಮಾಡಿದರು. ಹೀಗೆಲ್ಲಾ ಜನಪ್ರಿಯರಾಗಿದ್ದಾಗಲೇ ಗಂಟಲಿನ ಕ್ಯಾನ್ಸರ್ ಎಂಬ ಮಹಾ ಮಾರಿಗೆ ತುತ್ತಾಗಿ, ಹಾಡುವುದಿರಲಿ ಮಾತಾನಾಡುವುದಕ್ಕೂ ಕಷ್ಟವಾಗಿ ತಮ್ಮ ದಿನ ನಿತ್ಯದ ಸಂಭಾಷಣೆಯನ್ನೂ ಹಾಳೆಯಲ್ಲಿ ಬರೆದು ತೋರಿಸುವಷ್ಟರ ಮಟ್ಟಿಗೆ ಹೋಗಿ ಜನವರಿ 9, 1995ರಂದು ಬೆಂಗಳೂರಿನಲ್ಲಿ ನಿಧನರಾದರು.
ಭೌತಿಕವಾಗಿ ಅನಂತಸ್ವಾಮಿಯವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ರಾಗ ಸಂಯೋಜನೆಗಳ ಮೂಲಕ ಮತ್ತು ಹಾಡುಗಳ ಮೂಲಕ ಸದಾಕಾಲವೂ ಮೈಸೂರು ಅನಂತಸ್ವಾಮಿಯವರನ್ನು ಕನ್ನಡಿಗರ ಮನಗಳಲ್ಲಿ ಜೀವಂತವಾಗಿ ಇರುವುದರಿಂದಲೇ ಆವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು
ಏನಂತೀರೀ?
l
I am proud to say that Ananthaswamy and IBS were working together for more than 25 years in LRDE / DRDO… it is still in Memory….
LikeLike