ಗಾಯನ ಚಕ್ರವರ್ತಿ ಪಿ ಕಾಳಿಂಗರಾವ್

ಮನುಷ್ಯರಿಗೆ ಸುಖಃ ಇಲ್ಲವೇ ದುಃಖದ ಸಂದರ್ಭದಲ್ಲಿ ಎಲ್ಲಿಯಾದರೂ ಯಾರಾದರೂ ಸ್ರುಶ್ರಾವ್ಯವಾದ ಸಂಗೀತ ಕೇಳಿದೊಡನೆಯೇ
ಅವರ ಮನಸ್ಸು ಹಗುರವಾಗುವುದು. ಅದು ಶಾಸ್ತ್ರೀಯ ಸಂಗೀತವಿರಬಹುದೂ, ಚಿತ್ರಗೀತೆಗಳಾಗಿರಬಹುದು, ಜನಪದ ಗೀತೆಗಳಿರಬಹುದು ಇಲ್ಲವೇ ಭಾವ ಗೀತೆಗಳಿರಬಹುದು ಈ ರೀತಿಯಾಗಿ ಎಲ್ಲಾ ಸಂಗೀತದ ಪ್ರಾಕಾರಗಳಲ್ಲಿಯೂ ಸಿದ್ಧಹಸ್ತರಾಗಿದ್ದ ಸುಮಾರು ಮೂರು ದಶಕಗಳ ಕಾಲ ಕರ್ನಾಟಕದ ಸಂಗೀತ ಪ್ರಿಯರನ್ನು ರಂಜಿಸಿದ ಪಿ ಕಾಳಿಂಗರಾವ್ ಎಲ್ಲರ ಪ್ರೀತಿಯ ಕಾಳಿಂಗ ರಾಯರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

kalinga1ಉಡುಪಿ ಜಿಲ್ಲೆಯ ಆರೂರಿನ ನಾರಾಯಣರಾವ್‌ (ಪಾಂಡೇಶ್ವರ ಪುಟ್ಟಯ್ಯ) ಮತ್ತು ನಾಗರತ್ನಮ್ಮ ದಂಪತಿಗಳಿಗೆ 31-8-1914ರಲ್ಲಿ ಕಾಳಿಂಗರಾಯರರು ಜನಿಸಿದರು.ಬಾಲ್ಯದಿಂದಲೂ ಸಂಗೀತದಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದ ಕಾಳಿಂಗರಾಯರಿಗೆ, ತಮ್ಮ ಸೋದರ ಮಾವನವರಾದ ಶ್ರೀ ಸೂರಾಲ್‌ ಮಂಜಯ್ಯನವರೇ ಮೊದಲ ಗುರುಗಳು. ಅವರಿಂದ ದೇವರನಾಮ ಭಕ್ತಿ ಗೀತೆಗಳನ್ನು ಕಲಿತುಕೊಂಡರು. ಅದೊಮ್ಮೆ, ಅವರ ಶಾಲೆಯ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿದ್ದ ಬ್ರಿಟಿಷ್‌ ಅಧಿಕಾರಿ ಗೌನ್ ಅವರು ಕಾಳಿಂಗರಾಯರ ಚಂದ್ರಹಾಸನ ಅಭಿನಯ ಮೆಚ್ಚಿ ಅವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದರು ಹಾಗೆ ಚಿನ್ನದ ಪದಕ ಪಡೆದ ಹುಡುಗನನ್ನು ಆಕಾಲದಲ್ಲೇ ಪ್ರಸಿದ್ದ ರಂಗಭೂಮಿಯ ನಟರಾಗಿದ್ದ ಮುಂಡಾಜೆ ರಂಗನಾಥಭಟ್ಟರು ತಮ್ಮ ಅಂಬಾಪ್ರಸಾದ ನಾಟಕ ಮಂಡಳಿಗೆ ಬಾಲನಟನಾಗಿ ಸೇರಿಸಿಕೊಂಡು, ಅವರ ಕೈಯ್ಯಲ್ಲಿ ಭಕ್ತ ಪ್ರಹ್ಲಾದ, ಲೋಹಿತಾಶ್ವ, ಧ್ರುವ ಮುಂತಾದ ಬಾಲ ಪಾತ್ರಗಳನ್ನು ಮಾಡಿಸಿದ್ದಲ್ಲದೇ ಅವರಿಗೆ ಶಾಸ್ತ್ರೀಯ ಸಂಗೀತವನ್ನು ಶ್ರೀ ರಾಮಚಂದ್ರ ಬುವಾ ಅವರ ಬಳಿ ಕಲಿಸಿ ಕೊಡಿಸುತ್ತಾರೆ . ರಾಯರು ತಮ್ಮ ಹದಿನಾರನೆಯ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನೀಡಲು ಪ್ರಾರಂಭಿಸುತ್ತಾರೆ.ಕರ್ನಾಟಕ ಶಾಸ್ತ್ರೀಯ ಸಂಗೀತದ ಜೊತೆ ಅವರಿಗೆ , ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತವೂ ಅವರಿಗೆ ಕರಗತವಾಗಿರುತ್ತದೆ ಇಂತಹ ಬಾಲಕನ ಅದ್ಭುತ ಪ್ರತಿಭೆ ಕೇವಲ ಈ ನಾಟಕ ಮಂಡಳಿಗಳಲ್ಲಿಯೇ ವ್ಯರ್ಥವಾಗಬಾರದೆಂದು ನಿರ್ಧರಿಸಿದ ಅವರ ಗುರುಗಳಾದ ಶ್ರಿ ಬುವಾರವರು ಕಾಳಿಂಗ ರಾಯರನ್ನು ಮದ್ರಾಸಿಗೆ ಕರೆದೊಕೊಂಡು ಹೋಗಿ ಅಲ್ಲಿಯ ಸಂಗೀತ ಶಾಲೆಯೊಂದರಲ್ಲಿ, ಅವರನ್ನು ಸಂಗೀತ ಶಿಕ್ಷಕರನ್ನಾಗಿ ಸೇರಿಸುತ್ತಾರೆ, ತಮ್ಮ ಪ್ರತಿಭೆ ಮತ್ತು ಕಠಿಣ ಶ್ರಮಗಳಿಂದ ಕೆಲವೇ ವರ್ಷಗಳಲ್ಲಿ ಆ ಶಾಲೆಯ ಪ್ರಾಂಶುಪಾಲರಾಗಿಯೂ ಭಢ್ತಿ ಹೊಂದುತ್ತಾರೆ, ಇದೇ ಸಮಯದಲ್ಲಿಯೇ ಆವರಿಗೆ ಸಿನಿಮಾ ರಂಗದವರ ಪರಿಚಯವಾಗುತ್ತದೆ.

ಮೊತ್ತ ಮೊದಲ ಬಾರಿಗೆ ಹಿಂದಿಯ ಪ್ರೇಮ್‍ಸಾಗರ್ ಎಂಬ ಚಿತ್ರಕ್ಕೆ ಸಂಗೀತ ನೀಡುವ ಸಮಯದಲ್ಲಿಯೇ ಅವರಿಗೆ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಮತ್ತು ನಿರ್ಮಾಪಕರಾದ ನಾಗೇಂದ್ರರಾಯರ ಪರಿಚಯವಾಗಿ, ನಾಗೇಂದ್ರರಾಯರು ನಿರ್ಮಿಸಿದ ವಸಂತಸೇನಾ ಕನ್ನಡ ಚಲನಚಿತ್ರಕ್ಕೆ ಸಂಗೀತ ನಿರ್ದೇಶನದ ಜೊತೆಗೆ ಜೈನ ಸನ್ಯಾಸಿಯ ಪಾತ್ರವನ್ನೂ ಮಾಡುತ್ತಾರೆ.

ಇದೇ ಸಮಯದಲ್ಲಿ ಗುಬ್ಬಿ ವೀರಣ್ಣನವರ ಪರಿಚಯವಾಗಿ ಅವರ ದಶಾವತಾರ ನಾಟಕಕ್ಕೆ ಕಾಳಿಂಗ ರಾಯರು ಸಂಗೀತವನ್ನು ನೀಡುತ್ತಾರೆ. ನಂತರ ಸುಮಾರು ಐದಾರು ವರ್ಷಗಳ ಕಾಲ ಗುಬ್ಬಿ ಕಂಪನಿಯಲ್ಲಿಯೇ ಸಂಗೀತ ನಿರ್ದೇಶಕರಾಗಿ ಮುಂದುವರೆದು ತಮ್ಮ ವಿನೂತನ ಶೈಲಿಯ ಹೊಚ್ಚ ಹೊಸ ರಾಗರೂಪಗಳ ಮೂಲಕ ಪ್ರಸಿದ್ದಿ ಪಡೆಯುತ್ತಾರೆ. ಹೀಗೆ ಗುಬ್ಬಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ, ಗುಬ್ಬಿ ವೀರಣ್ಣನವರ ಮಗಳಾದ ಸ್ವರ್ಣಮ್ಮ ಅವರ ಪರಿಚಯವಾಗಿ ನಂತರ ಆ ಸ್ನೇಹ ಪ್ರೇಮಕ್ಕೆ ತಿರುಗಿ ಈಗಾಗಲೇ ಮೀನಾಕ್ಷಿಯೆಂಬವರೊಡನೆ ಮದುವೆಯಾಗಿದ್ದರೂ ಸ್ವರ್ಣಮ್ಮನವರೊಂದಿಗೆ ಎರಡನೇ ಮದುವೆ ಮಾಡಿಕೊಳ್ಳುತ್ತಾರೆ.

ಮದರಾಸಿನಲ್ಲಿಯೇ ಇದ್ದು ಕೊಂಡು ಹತ್ತಾರು ಚಲನ ಚಿತ್ರಗಳಿಗೆ ಸಂಗೀತ ನೀಡುತ್ತಾರೆ. ಅವುಗಳಲ್ಲಿ ಅನೇಕ ಗೀತೆಗಳು ಜನಪ್ರಿಯವಾಗಿ ಕಾಳಿಂಗರಾಯರಿಗೆ ಅಪಾರವಾದ ಹೆಸರನ್ನು ತಂದು ಕೊಡುತ್ತದೆ. ಅದೇ ಸಮಯದಲ್ಲಿ ಅ.ನ. ಕೃಷ್ಣರಾಯರ ಪರಿಚಯವಾಗಿ ಅವರ ಸಲಹೆಯಂತೆ ಚಿತ್ರಗೀತೆಗಳೊಂದಿಗೆ ಕನ್ನಡದ ಸಾಹಿತಿಗಳ ಕೃತಿಗಳನ್ನು ಜನರಿಗೆ ತಲುಪಿಸುವ ಮಹತ್ವದ ಕೆಲಸಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ.

1946ರಲ್ಲಿ ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆಯನ್ನು ಸ್ವರ ಸಂಯೋಜಿಸುವುದರ ಜೊತೆಗೆ ತಾವೇ ಹಾಡುತ್ತಾರೆ. ಆ ಗೀತೆ ಅತ್ಯಂತ ಜನಪ್ರಿಯವಾಗಿ ಮುಂದೇ ಅದೇ ಗೀತೆಗಾಗಿ ಕರ್ನಾಟಕ ಸರ್ಕಾರದ ಸನ್ಮಾನವನ್ನೂ ಪಡೆಯುತ್ತಾರೆ. ತಮ್ಮ ವಿನೂತನ ಶೈಲಿಯ ಸಂಗೀತದ ಮೂಲಕ ಕವಿಗಳಾದ ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಕೆ ಎಸ್ ನರಸಿಂಹ ಸ್ವಾಮಿ  ಮುಂತಾದ ಅನೇಕ ಕವಿಗಳ ಸಾಹಿತ್ಯಕ್ಕೆ ಹೊಸಾ ರೀತಿಯ ಭಾವಾರ್ಥವನ್ನು ದೊರಕಿಸಿಕೊಡುತ್ತಾರೆ. ಭಾವಗೀತೆಗಳ ಜೊತೆಯಲ್ಲಿಯೇ ದಾಸರಪದಗಳನ್ನು ಮತ್ತು ಜಾನಪದ ಗೀತೆಳಿಗೂ ರಾಗ ಸಂಯೋಜನೆ ಮಾಡಿ ಜನಪ್ರಿಯರಾಗುತ್ತಾರೆ. ಜಿ.ಪಿ. ರಾಜರತ್ನಂರವರ ರತ್ನನ ಪದಗಳು ಕಾಳಿಂಗ ರಾಯರ ಸಿರಿ ಕಂಠದಲ್ಲಿ ವಿಭಿನ್ನವಾಗಿ ಮೂಡಿಬರುತ್ತದೆ. ಅದರಲ್ಲೂ ಬ್ರಹ್ಮಾ ನಿಂಗೆ ಜೋಡಿಸ್ತೀನಿ ಯೆಂಡಾ ಮುಟ್ಟಿದ್‌ ಕೈನಾ ಆಗಿನ ಕಾಲದಲ್ಲಿ ಜನರನ್ನು ಹುಚ್ಚೆಬ್ಬಿಸಿ ಕುಣಿಸಿತ್ತು ಎಂದರೆ ಅತಿಶಯೋಕ್ತಿಯೇನಲ್ಲ.

kalinga3ತೂಗಿರೇ ರನ್ನವಾ, ತೂಗಿರೇ ಚಿನ್ನವಾ, ಬಾರಯ್ಯ ಬೆಳುದಿಂಗಳೇ, ಅಮ್ಮಕ ಜಮ್ಮಕದಿಂದ ಬರುತಾಳೇ ರತುನಾ, ಮೂಡಲ್‌ ಕುಣಿಗಲ್‌ ಕೆರೆ, ಬೆಟ್ಟ ಬಿಟ್ಟಿಳಿಯುತ್ತ ಬಂದಾಳೆ ಚಾಮುಂಡಿ ಮುಂತಾದ ಜನಪದ ಗೀತೆಗಳು, ಎಲ್ಲಾದರು ಇರು, ಎಂತಾದರು ಇರು, ಏರಿಸಿ ಹಾರಿಸಿ ಕನ್ನಡದ ಬಾವುಟ, ಯಾರು ಹಿತವರು ನಿನಗೆ, ಮಾಡು ಸಿಕ್ಕದಲ್ಲ, ಮನವೆಂಬ ಸರಸಿಯಲಿ, ಪರಚಿಂತೆ ನಮಗೆ ಏಕೆ ಅಯ್ಯಾ, ಹೋದ ವರ್ಷ ಬಂದ ಹಬ್ಬ ಮಂತಾದ ಭಾವಗೀತೆಗಳ ಜೊತೆಗೆ ಮಂಕುತಿಮ್ಮನ ಕಗ್ಗವನ್ನು ಹಾಡುವ ಮೂಲಕ ಇಡೀ ಕರ್ನಾಟಕದ ಕಲಾಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಕಾಳಿಂಗರಾಯರ ಕಚೇರಿ ಎಂದರೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು. ಕಾಳಿಂಗ ರಾಯರ ಜನಪ್ರಿಯತೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಾದ ದೆಹಲಿ, ಕೊಲ್ಕತ್ತ, ಮುಂಬಯಿ, ಮದ್ರಾಸ್‌, ಪೂನಾ, ನಾಗಪುರ ಮುಂತಾದ ಕಡೆಗಳಲ್ಲಿಯೂ ಹರಡಿ ದೇಶಾದ್ಯಂತ ತಮ್ಮ ತಂಡದೊಡನೆ ಸುತ್ತಾಡಿ ಎಲ್ಲಾ ಸಂಗೀತಾಸಕ್ತರ ಮನವನ್ನು ತಣಿಸುತ್ತಾರೆ. ಹೂವಿನ ಜೊತೆ ನಾರೂ ಸ್ವರ್ಗ ಸೇರಿದಂತೆ ಕಾಳಿಂಗ ರಾಯರ ಜೊತೆಯಲ್ಲಿ ಮೋಹನಕುಮಾರಿ ಮತ್ತು ಸೋಹನ್ ಕುಮಾರಿ ಸಹೋದರಿಯರೂ ಅಪಾರವಾದ ಕೀರ್ತಿಯನ್ನು ಪಡೆಯುತ್ತಾರೆ. ಇವರ ಗಾಯನವನ್ನು ಧ್ವನಿ ಮುದ್ರಿಸಿಕೊಳ್ಳಲು ಎಚ್‌.ಎಂ.ವಿ. ಮತ್ತು ಸರಸ್ವತಿ ಸಂಸ್ಥೆಗಳು ತಾಮುಂದು, ನಾಮುಂದು ಎಂದು ಪೈಪೋಟಿಯನ್ನೇ ನಡೆಸುತ್ತವೆ ಎನ್ನುವುದು ಕಾಳಿಂಗರಾಯರ ಜನಪ್ರಿಯತೆಗೆ ಸಾಕ್ಷಿ.

ಕಾಳಿಂಗ ರಾಯರಿಗೆ ಸಂದ ಬಿರುದು ಬಾವಲಿಗಳು, ಪ್ರಶಸ್ತಿಗಳು ಮತ್ತು ಗೌರವಗಳು ಹೀಗಿವೆ

  • ಜಾನಪದ ಸಂಗೀತ ರತ್ನ,
  • ಬಾಲ ಗಂಧರ್ವ
  • ಜಾನಪದ ಕಲಾ ಚಕ್ರವರ್ತಿ
  • ಗಾಯನ ಚಕ್ರವರ್ತಿ
  • ಗಾಯನ ಕಂಠೀರವ
  • ಕನ್ನಡ ಉದಯಗಾನ ಕೋಗಿಲೆ
  • ಸಂಗೀತ ರಸ ವಿಹಾರಿ

ಆಷ್ಟೆಲ್ಲಾ ಉತ್ತುಂಗಕ್ಕೇರಿದ್ದ ಕಾಳಿಂಗರಾಯರ ಅಂತಿಮ ದಿನಗಳು ಅಷ್ಟೇ ಯಾತನಾಮಯವಾಗಿದ್ದವು. ದುಶ್ಚಟಗಳಿಂದಾಗಿ ಆರೋಗ್ಯಹಾಳಾದ ಪರಿಣಾಮ ಹಾಡಲು ಆಗುತ್ತಿರಲಿಲ್ಲವಾದ್ದ ಕಾರಣ, ಜನರೂ ಕೂಡಾ ನಿಧಾನವಾಗಿ ಅವರನ್ನು ಮರೆಯತೊಡಗಿದರು. ಅದೇ ಸಮಯದಲ್ಲಿ ಎಚ್‌ಎಂಟಿ ಕನ್ನಡ ಸಂಘ ಅವರ ಕಾರ್ಯಕ್ರಮಕ್ಕೆ ಕಾಳಿಂಗರಾಯರನ್ನು ಆಹ್ವಾನಿಸಲು ಬಯಸಿದ್ದದಾದರೂ ಅವರ ಬಳಿ ಸಾಕಷ್ಟು ಹಣವಿಲ್ಲ ಎಂದು ಕಾಳಿಂಗರಾಯರ ಬಳಿ ತಿಳಿಸಿದಾಗ, ಕಾಳಿಂಗರಾಯರು, ನೀವೇನೂ ಚಿಂತಿಸುವ ಅಗತ್ಯವಿಲ್ಲ. ಕಳೆದೆರಡು ದಿನಗಳಿಂದ ಊಟವನ್ನೂ ಮಾಡಲು ಹಣವಿಲ್ಲದಿರುವ ಸಮಯದಲ್ಲಿ ನೀವು ಕೊಡುವ ಈ ಹಣವೂ ಕೆಲವು ದಿನಗಳವರೆಗೆ ನನ್ನ ಆಹಾರವನ್ನು ನೋಡಿಕೊಳ್ಳುತ್ತದೆ ಎಂದು ಹೇಳಿದಾಗ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದ ಅನೇಕರು ಸ್ವಯಂಪ್ರೇರಣೆಯಿಂದ ಕೈತುಂಬಾ ಹಣವನ್ನು ನೀಡಿದ್ದರು ಎಂಬುದನ್ನು ನನ್ನ ಸ್ನೇಹಿತರಾದ ಭರತ್ ಆವರು ತಿಳಿಸಿದಾಗ, ಕಲಾವಿದನ ಬದುಕು ಎಷ್ಟು ಯಾತನಾಮಯವಾಗಿರುತ್ತದೆ ಎಂಬುದರ ಅರಿವಾಯಿತು.

ಹೀಗೆ ಜನಪ್ರಿಯತೆಯ ತುತ್ತ ತುದಿಯಲ್ಲಿಯೇ ಇರುವಾಗಲೇ ತಮ್ಮ ಮಧ್ಯಪಾನದ ದುಶ್ಚಟದಿಂದಾಗಿ ಅನಾರೋಗ್ಯಕ್ಕೆ ತುತ್ತಾದ ಶ್ರಿ ಕಾಳಿಂಗರಾಯರು 1981ರ ಸೆಪ್ಟೆಂಬರ್ 22ರಂದು ನಿಧನರಾದಾಗ ಇಡೀ ಕರ್ನಾಟಕ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗುತ್ತದೆ. ಅಂತಿಮ ವಿಧಿ ವಿಧಾನಗಳಿಗಾಗಿ ಅವರ ಪಾರ್ಥೀವ ಶರೀರವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋದ ಮೇಲೂ ಅವರ ಅಪಾರವಾದ ಕಲಾಭಿಮಾನಿಗಳ ಕೋರಿಕೆಯ ಮೇರೆಗೆ ಮತ್ತೆ ಅವರ ಪಾರ್ಥೀವ ಶರೀರವನ್ನು ಸಂಪಂಗಿರಾಮ ನಗರದ ಸಾಂಸ್ಕೃತಿಕ ವೇದಿಕೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಬೇಕಾಗಿ ಬಂದದ್ದು ಕಾಳಿಂಗರಾಯರ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ.

ಕಾಳಿಂಗ ರಾವ್ ಅವರನ್ನು ಕನ್ನಡ ಸುಗಮ ಸಂಗೀತ ಪ್ರಕಾರದ ಪ್ರವರ್ತಕ ಎಂದರೂ ತಪ್ಪಾಗಲಾರದು. 1950 ರಿಂದ ಅಕ್ಷರಶಃ ಮೂರು ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಅನಭಿಶಕ್ತ ದೊರೆಯಾಗಿ, ಅನೇಕ ಕವಿಗಳ ಭಾವಗೀತೆಗಳಿಗೆ ಧ್ವನಿಯಾಗಿ, ಸಂಗೀತ ಕಚೇರಿಗಳು, ಚಲನ ಚಿತ್ರಗೀತೆಗಳು ಆಕಾಶವಾಣಿಯ ಮೂಲಕ ಮತ್ತು ಗ್ರಾಮಫೋನ್ ಗಳ ಮೂಲಕ ಲಕ್ಷಾಂತರ ಮನೆಮನೆಯನ್ನು ತಲುಪಿ ಜನಪ್ರಿಯರಾಗಿದ್ದ ಶ್ರೀ ಕಾಳಿಂಗರಾಯರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s