ಸ್ವಾತಂತ್ಯ್ರ ಪೂರ್ವದಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಲು ಹಲವಾರು ಜನ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದರೆ ಇಲ್ಲೊಬ್ಬ ಮಹಾಶಯರು ರಂಗಭೂಮಿಯ ಮುಖಾಂತರ ಏಕೀಕರಣಕ್ಕೆ ಪ್ರಯತ್ನಿಸಿದ, ಕರ್ನಾಟಕದ ಹಲವಾರು ಪ್ರಪ್ರಥಮಗಳ ನಾಯಕ, ನಟ, ನಿರ್ದೇಶಕ, ನಿರ್ಮಾಪಕ, ಪೈಲ್ವಾನ್, ರಂಗಭೂಮಿ ಮತ್ತು ಚಲನಚಿತ್ರರಂಗ ಎರಡರಲ್ಲೂ ಸೈ ಎನಿಸಿಕೊಂಡವರು, ಹೀಗೆ ಹೇಳುತ್ತಾ ಹೋದರೆ ಹೇಳುತ್ತಲೇ ಹೋಗ ಬೇಕಾಗುವಂತಹ ವ್ಯಕ್ತಿತ್ವ ಹೊಂದಿದ್ದ ಅಭಿಜಾತ ಕಲಾವಿದರರಾಗಿದ್ದ ಶ್ರೀ ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಕುರಿತಾಗಿ ತಿಳಿದುಕೊಳ್ಳೋಣ.
1896 ರಲ್ಲಿ ಮೈಸೂರು ಜಿಲ್ಲೆಯ ಮಾದಲಾಪುರದಲ್ಲಿ ಸುಬ್ಬಯ್ಯನವರ ಜನನವಾಗುತ್ತದೆ. ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ತಂದೆಯವರನ್ನು ಕಳೆದುಕೊಂಡು ಹೆಗ್ಗಡದೇವನಕೋಟೆಯಲ್ಲಿದ್ದ ತಮ್ಮ ಸೋದರ ಮಾವನ ಮನೆಗೆ ಸೇರಿಕೊಳ್ಳುತ್ತಾರೆ, ಅಲ್ಲಿ ಮನೆಯ ಚಾಕರಿಯ ಜೊತೆಗೆ ಎಮ್ಮೆ ಮೇಯಿಸುವ ಕಾಯಕ ಮತ್ತು ಅಲ್ಲಿಯ ಕಷ್ಟಗಳನ್ನು ಸಹಿಸಲಾರದೇ ಮಾವನ ಮನೆಯಿಂದ ಓಡಿ ಹೋಗಿ ಮೈಸೂರಿಗೆ ಬಂದು ಮಂಡಿಯಲ್ಲಿ ಮೂಟೆ ಹೊರುವ ಕೂಲಿ, ಸೌದೆ ಮಂಡಿಯಲ್ಲಿ ಸೌದೆ ಒಡೆಯುವ, ಮರಕೊಯ್ಯುವ ಕೆಲಸ ಮಾಡುತ್ತಲೇ ದೇಹಧಾಡ್ಯಕ್ಕಾಗಿ ಹತ್ತಿರವೇ ಇದ್ದ ಗರಡಿ ಮನೆಗೆ ಸೇರಿ ಕುಸ್ತಿ ಪಟ್ಟುಗಳನ್ನು ಕಲಿತು ಅನೇಕ ಪಂದ್ಯಾವಳಿಗಳಲ್ಲಿ ಪ್ರಶಸ್ತಿಗಳನ್ನು ಗಳಿಸುತ್ತಾರೆ, ಇದೇ ಸಮಯದಲ್ಲಿ ತಮ್ಮ ಮನೆಯ ಹತ್ತಿರವೇ ಇದ್ದ ಅಂದಿನ ಕಾಲದ ನಟ ಮತ್ತು ಸಂಗೀತಗಾರರಾಗಿದ್ದ ಶ್ರೀ ಎಂ.ವಿ. ಮಾದಪ್ಪನವರ ಬಳಿ ಸಂಗೀತ ಮತ್ತು ಅಭಿನಯದಲ್ಲಿ ತರಬೇತಿ ಪಡೆದು ರಂಗಭೂಮಿಯತ್ತ ಹರಿಸುತ್ತಾರೆ ತಮ್ಮ ಚಿತ್ತ. ಮೈಸೂರಿನ ಶಾಕುಂತಲಾ ಕಂಪನಿ, ತುಮಕೂರಿನ ಮನೋಹರ ನಾಟಕ ಮಂಡಳಿ, ಜನಮನೋಲ್ಲಾಸಿನಿ ಕಂಪನಿ ಎಲ್ಲಾ ಕಡೆಯಲ್ಲೂ ಸೇವೆ ಸಲ್ಲಿಸಿ ಕಡೆಗೆ ರಂಗಭೂಮಿಯ ತವರೂರಾದ ಗುಬ್ಬಿ ಕಂಪನಿಗೆ ಸೇರಿ ಪ್ರಬುದ್ಧರಾದ ನಟರಾಗಿ ಪ್ರವರ್ಧಮಾನಕ್ಕೆ ಬರುತ್ತಾರೆ. ಗುಬ್ಬಿ ಕಂಪನಿಯಲ್ಲಿ ಅವರು ಮಾಡಿದ ಸ್ತ್ರೀ ಪಾತ್ರಗಳು ಇವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟು ನಂತರ ಗುಬ್ಬಿ ಕಂಪನಿಯ ಅತ್ಯಂತ ಪ್ರಮುಖ ನಟರಾಗುತ್ತಾರೆ . ರಾಜಭಕ್ತಿ ನಾಟಕದಲ್ಲಿನ ವಿಕ್ರಾಂತನ ಪಾತ್ರ , ಕರ್ನಾಟಕ ಸಾಮ್ರಾಜ್ಯ ನಾಟಕದಲ್ಲಿ ತಿರುಮಲರಾಯ, ಸ್ವಾಮಿನಿಷ್ಠೆ ನಾಟಕದಲ್ಲಿ ಶಿವಾಜಿಯ ಪಾತ್ರಗಳ ಮೂಲಕ ಜನಪ್ರಿಯತೆಯ ತುತ್ತ ತುದಿಗೇರುತ್ತಾರೆ. ಇಲ್ಲಿಯೇ ಅವರಿಗೆ ಬಿ.ವಿ.ಗುರುಮೂರ್ತಪ್ಪ, ಗಂಗಾಧರರಾವ್, ಎಂ.ಸುಬ್ಬರಾವ್, ಮಹಮ್ಮದ್ ಪೀರ್ ಮೊದಲಾದ ಶ್ರೇಷ್ಠ ನಟರ ಪರಿಚಯವಾಗಿ ಅವರಿಂದ ನಾಟಕರಂಗದ ಎಲ್ಲಾ ಒಳಹೊರವುಗಳನ್ನು ಅರಿತು, ಕಡೆಗೆ 1932ರಲ್ಲಿ ತಮ್ಮದೇ ಆದ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯನ್ನು ಸ್ಥಾಪಿಸುತ್ತಾರೆ. ಅದೇ ಸಮಯದಲ್ಲಿ ಅವರಿಗೆ ಮತ್ತೊಬ್ಬ ಪ್ರತಿಭಾವಂತ ಮತ್ತು ಪ್ರಯೋಗಶೀಲರಾಗಿದ್ದ ಶ್ರೀ ಆರ್. ನಾಗೇಂದ್ರರಾಯರ ಪರಿಚಯವಾಗಿ ಇಬ್ಬರೂ ಸೇರಿ ಭೂಕೈಲಾಸ, ವಸಂತಸೇನಾ, ನಿರುಪಮಾ, ಕೀಚಕವಧೆ ಮುಂತಾದ ನಾಟಕಗಳ ಮೂಲಕ ಎಲ್ಲರ ಮನ್ನಣೆಗೆ ಪಾತ್ರರಾಗುತ್ತಾರೆ.
ಗುಬ್ಬಿ ವೀರಣ್ಣನವರು ತಯಾರಿಸಿದ ಹಿಸ್ ಲವ್ ಹಿಸ್ ಲವ್ ಅಫೇರ್ ಎಂಬ ಮೂಕಿ ಚಿತ್ರದಲ್ಲಿ ಅವಕಾಶ ಗಿಟ್ಟಿಸಿ ಕೊಳ್ಳುವ ಮೂಲಕ ಸುಬ್ಬಯ್ಯ ನಾಯ್ಡುರವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಆದಾದ ನಂತರ ಕನ್ನಡದ ಮೊತ್ತ ಮೊದಲ ಟಾಕೀ ಚಿತ್ರ ಸತಿ ಸುಲೋಚನಾ ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗುವ ಮೂಲಕ ಕನ್ನಡ ಚಲನಚಿತ್ರದ ಪ್ರಪ್ರಥಮ ನಾಯಕ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಅದೇ ಚಿತ್ರಕ್ಕೆ ಸಂಗೀತ ನಿರ್ದೇಶಕ ಮತ್ತು ನಟರಾಗಿ ನಾಗೇಂದ್ರರಾಯರೂ ಆಯ್ಕೆಯಾಗುತ್ತಾರೆ. ಅವರಿಬ್ಬರ ಗೆಳೆತನ ಇಷ್ಟಕ್ಕೇ ಸೀಮಿತವಾಗದೇ, ಆ ಚಿತ್ರದಲ್ಲಿ ಮಂಡೋದರಿಯ ಪಾತ್ರ ವಹಿಸಿದ್ದ ನಟಿ ಲಕ್ಷ್ಮೀ ಬಾಯಿ ಅವರನ್ನು ನಾಯ್ಡು ಅವರು ಮದುವೆಯಾದರೆ, ಅದೇ ಚಿತ್ರದಲ್ಲಿ ನಟಿಸಿದ್ದ ಲಕ್ಷ್ಮೀ ಬಾಯಿಯವರ ತಂಗಿಯಾದ ಕಮಲಾಬಾಯಿಯವರನ್ನು ನಾಗೇಂದ್ರರಾಯರು ಮದುವೆಯಾಗುವ ಮೂಲಕ ಗೆಳೆತನವನ್ನು ನೆಂಟಸ್ತಿಕೆಯಾಗಿ ಪರಿವರ್ತಿಸಿಕೊಳ್ಳುತ್ತಾರೆ.
ಇದೇ ಜೋಡಿ ಪಾಲುದಾರಿಕೆಯಲ್ಲಿ ಚಿತ್ರ ನಿರ್ಮಾಣಕ್ಕೆ ಕೈಹಾಕಿ ವಸಂತಸೇನಾ ನಾಟಕವನ್ನು ಚಲನಚಿತ್ರವನ್ನಾಗಿಸುತ್ತಾರೆ. ಅದರಲ್ಲಿ ನಾಯ್ಡುರವರು ಚಾರುದತ್ತನ ಪಾತ್ರ ವಹಿಸಿದರೆ ಆರೆನ್ನಾರ್ ‘ಶ’ಕಾರನ ಪಾತ್ರವಹಿಸುತ್ತಾರೆ ಮುಂದೆ ಅವರ ಸತ್ಯ ಹರಿಶ್ಚಂದ್ರ ಚಿತ್ರ ಹೊಸದೊಂದು ಇತಿಹಾಸವನ್ನೇ ಬರೆಯಿತು. ಇಲ್ಲಿ ಸುಬ್ಬಯ್ಯನಾಯ್ಡುರವರು ಹರಿಶ್ಚಂದ್ರ ಚಿತ್ರವನ್ನು ಪ್ರಥಮಬಾರಿಗೆ ನಿರ್ದೇಶನ ಮಾಡುವ ಜೊತೆಗೆ ಹರಿಶ್ಚಂದ್ರ ಪಾತ್ರ ವಹಿಸಿದರೆ ನಾಗೇಂದ್ರ ರಾಯರು ವಿಶ್ವಾಮಿತ್ರನ ಪಾತ್ರದ ಮೂಲಕ ಜನರ ಮೇಲೆ ಮೋಡಿ ಮಾಡುತ್ತಾರೆ. ಸುಮಾರು ಹದಿನೇಳು ವರ್ಷಗಳ ಕಾಲ ಒಟ್ಟಾಗಿಯೇ ದುಡಿದ ನಂತರ ಕಾರಣಾಂತರಗಳಿಂದ ಈ ಜೋಡಿ ಬೇರಾದ ಕಾರಣ ಕನ್ನಡ ವೃತ್ತಿ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಪಾರ ನಷ್ಟವಾಗಿದ್ದು ಸತ್ಯವೇ ಸರಿ.
ಸಾಧಾರವಾಗಿ ರಾವಣನ ಪಾತ್ರ ಎಂದರೆ ಅದು ಅಬ್ಬರವೇ ಇರಬೇಕು ಎಂಬುದು ಅಂದಿನ ಸ್ವೀಕೃತ ನೀತಿ. ಆದರೆ ನಾಯ್ಡು-ರಾಯರ ಜೋಡಿಯಲ್ಲಿ ಈ ನಿಯಮಕ್ಕೆ ತದ್ವಿರುದ್ಧವಾಗಿ ರಾವಣ ಒಬ್ಬ ಮಾನವೀಯ ಗುಣದ ಚಕ್ರವರ್ತಿಯಾಗಿ, ತಾಯಿಗಾಗಿ ಆತ್ಮಲಿಂಗವನ್ನು ಹುಡುಕಿ ತರುವ ಭಾವುಕ ಮಗನಾಗಿ ಪರಿವರ್ತನೆಗೊಂಡಿದ್ದ. ಇದೇ ನಾಟಕ ತೆಲುಗಿನಲ್ಲಿ ಚಿತ್ರವಾಗಿ ತಯಾರಾದಾಗ ಸುಬ್ಬಯ್ಯನಾಯ್ಡುರವರೇ ರಾವಣನ ಪಾತ್ರ ವಹಿಸಿದ್ದರು. ರಾಜಕುಮಾರ್ ಅವರು ರಾವಣನಾಗಿ ಭೂಕೈಲಾಸ ಚಿತ್ರದ ಅಭಿನಯವನ್ನು ಎಲ್ಲರೂ ಮೆಚ್ಚಿ ಅಭಿನಂದನಾ ಸುರಿಮಳೆಯನ್ನು ಹರಿಸಿದರೆ, ಡಾ. ರಾಜ್ ಆವರು ಮಾತ್ರಾ ವಿನಮ್ರರಾಗಿ ತಮಗೆ ರಂಗಭೂಮಿಯಲ್ಲಿ ದೊಡ್ಡ ದೊಡ್ಡ ಪಾತ್ರಗಳನ್ನು ನೀಡುವ ಮೂಲಕ ಅವರ ಪ್ರತಿಭೆಯನ್ನು ಪ್ರಚುರ ಪಡಿಸಿದ ಸುಬ್ಬಯ್ಯ ನಾಯ್ಡುರವರೇ . ರಾವಣನ ಪಾತ್ರಕ್ಕೆ ಸೂಕ್ತವಾದ ವ್ಯಕ್ತಿ ಅವರ ಮುಂದೆ ನಮ್ಮದೇನೂ ಇಲ್ಲಾ ಎಂದು ಹೊಗಳಿದ್ದರೆಂದರೆ ಸುಬ್ಬಯ್ಯನಾಯ್ಡುರವರ ಪಾತ್ರದ ಗತ್ತು ಮತ್ತು ತಾಕತ್ತು ಎಷ್ಟಿದ್ದಿರಬಹುದೆಂಬ ಅರಿವಾಗುತ್ತದೆ.
1958ರಲ್ಲಿ ಎಂ.ಎಸ್. ಸುಬ್ಬಯ್ಯನಾಯ್ಡುರವರು ಮತ್ತು ಎಚ್.ಎಸ್. ಕೃಸ್ವಾಮಿಯವರ ಜಂಟಿ ನಿರ್ದೇಶನದಲ್ಲಿ ಬಂದ ಭಕ್ತ ಪ್ರಹ್ಲಾದ ಚಿತ್ರ ಅವರು ಅಭಿನಯದ ಕೊನೆಯ ಚಿತ್ರವಾದರೆ, ಕಾಕತಾಳೀಯವೆಂಬತೆ ಅದೇ ಚಿತ್ರದಲ್ಲಿ ಅವರ ಮಗ ಲೋಕೇಶ್ ಪ್ರಹ್ಲಾದನ ಪಾತ್ರ ವಹಿಸುವ ಮೂಲಕ ಅವರ ಎರಡನೆಯ ತಲೆಮಾರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಾಗುತ್ತದೆ.
ಮಂದೆ ಚಿತ್ರರಂಗದ ನಂಟನ್ನು ಬಿಟ್ಟರೂ ರಂಗಭೂಮಿಯಲ್ಲಿ ತಮ್ಮನ್ನು ಸದಾ ಒಂದಲ್ಲಾ ಒಂದು ಹೊಸಾ ಪ್ರಯೋಗಗಳನ್ನು ಮಾಡುತ್ತಲೇ ಹೋಗುತ್ತಾರೆ. ಬೆಂಗಳೂರಿನಲ್ಲಿ ಶ್ರೀರಾಮ ಜನನ ಎಂಬ ನಾಟಕಕ್ಕಾಗಿ ಚಲಿಸುವ ರಂಗ ವೇದಿಕೆಯನ್ನು ಅಪಾರ ವೆಚ್ಚಮಾಡಿ ನಿರ್ಮಿಸಿದರಾದರೂ ಅದು ಜನ ಮನ್ನಡೆ ಪಡೆಯದೇ ಆರ್ಥಿಕವಾಗಿ ಅವರನ್ನು ಸಾಕಷ್ಟು ಸಂಕಷ್ಟಕ್ಕೆ ಈಡುಮಾಡುತ್ತದೆ. ಅದೇ ಕೊರಗಿನಲ್ಲಿಯೇ ಇದ್ದ ನಾಯ್ಡುರವರ ಕಂಪನಿ ಮಂಡ್ಯದಲ್ಲಿ ಮೊಕ್ಕಾಂ ಮಾಡಿದ್ದಾಗ ಜುಲೈ 21, 1962ರಂದು ಹೃದಯಾಘಾತದಿಂದ ನಿಧನರಾದರು. ತಮ್ಮ ಪತಿಯ ಈ ರೀತಿಯ ಅಕಾಲಿಕ ಮರಣವನ್ನು ತಾಳಲಾಗದ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀಬಾಯಿಯವರೂ ಸಹಾ ಅದೇ ಕ್ಷಣದಲ್ಲಿಯೇ ಅಸುನೀಗಿ ಸಾವಿನಲ್ಲೂ ಸತಿಪತಿಗಳಾಗಿಯೇ ಚಿತೆಯನ್ನೇರಿದ್ದದ್ದು ಈಗ ಇತಿಹಾಸ.
ಕನ್ನಡ ಚಿತ್ರರಂಗದ ಪ್ರಥಮ ವಾಕೀ ಚಿತ್ರದ ನಾಯಕ ನಟರಾಗಿದ್ದ ಸುಬ್ಬಯ್ಯನಾಯ್ಡುರವರ ನನಪಿನಲ್ಲಿಯೇ ಕರ್ನಾಟಕ ಸರ್ಕಾರ ನೀಡುವ ಅತ್ಯುತ್ತಮ ನಾಯಕನಟನ ಪ್ರಶಸ್ತಿಗೆ ಸುಬ್ಬಯ್ಯ ನಾಯ್ಡು ಪ್ರಶಸ್ತಿ ಎಂದೇ ಕರೆಯುವ ಮೂಲಕ ಸುಬ್ಬಯ್ಯ ನಾಯ್ಡುರವರ ಕಲಾಸೇವೆಯನ್ನು ಇನ್ನೂ ಜನಮಾನಸದಲ್ಲಿ ಇರುವ ಹಾಗೆಯೇ ಮಾಡಿದ್ದಾರೆ. ಸುಬ್ಬಯ್ಯನಾಯ್ಡುರವರ ನಂತರ ಅವರ ಮಗ ದಿ. ಲೋಕೇಶ್ ಮತ್ತು ಅವರ ಸೊಸೆ ಗಿರಿಜಾ ಲೋಕೇಶ್ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ತಮ್ಮದೇ ಛಾಪನ್ನು ಮುಂದುವರಿಸಿಕೊಂಡು ಹೋದರೆ, ಪ್ರಸ್ತುತವಾಗಿ ಅವರ ಮೂರನೇ ತಲೆಮಾರಾಗಿ ಮೊಮ್ಮಕ್ಕಳಾದ ಸೃಜನ್ ಲೋಕೇಶ್ ಮತ್ತು ಪೂಜಾ ಲೋಕೇಶ್ ಕಿರುತೆರೆ ಮತ್ತು ಹಿರಿ ತೆರೆಗಳಲ್ಲಿ ತಮ್ಮದೇ ಆದ ನಟನಾ ಶೈಲಿಗಳಿಂದ ಸುಬ್ಬಯ್ಯನಾಯ್ಡುರವರ ಕೀರ್ತಿಪತಾಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹೀಗೆ ಕನ್ನಡ ವೃತ್ತಿ ರಂಗ ಭೂಮಿ ಮತ್ತು ಚಲನಚಿತ್ರರಂಗದಲ್ಲಿ ತಮ್ಮದೇ ಛಾಪಿನ ಮೂಲಕ ಮೂರು ತಲೆಮಾರುಗಳಿಂದ ಕನ್ನಡದ ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ಹಿಡಿಯುತ್ತಿರುವ ಎಂ.ವಿ. ಸುಬ್ಬಯ್ಯ ನಾಯ್ಡುರವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?