ಸಾಹಿತ್ಯರತ್ನ ಚಿ. ಉದಯಶಂಕರ್

ಕನ್ನಡ ಚಿತ್ರರಂಗ ಎಂದರೆ ನಮಗೆಲ್ಲಾ ಥಟ್ ಅಂತಾ ನೆನಪಾಗೋದೇ ಡಾ.ರಾಜಕುಮಾರ್. ತಮ್ಮ ಅಮೋಘ ಅಭಿನಯ, ತಮ್ಮ ಹಾಡು, ತಮ್ಮ ಸಂಭಾಷಣೆಯ ಮೂಲಕ ರಸಿಕರ ರಾಜ ಗಾನ ಗಂಧರ್ವ ಎಂದೇ ಖ್ಯಾತರಾಗಿದ್ದರು. ಜೀವನ ಚೈತ್ರ ಚಿತ್ರದಲ್ಲಿ ನಾದಮಯಾ ಈ ಲೋಕವೆಲ್ಲಾ….. ಎಂದು ತಮ್ಮ ಕಂಚಿನ ಕಂಠದಲ್ಲಿ ಸುಶ್ರಾವ್ಯವಾಗಿ ಹಾಡುತ್ತಾ ತಮ್ಮ ಭಾವಾಭಿನಯದಿಂದ ಡಾ. ರಾಜ್ ಅಭಿನಯಿಸುತ್ತಿದ್ದರೆ, ಅವರ ಶಾರೀರ ಮತ್ತು ಸಂಭಾಷಣೆಯ ಹಿಂದಿದ್ದ ಮಹಾನ್ ಚೇತನವನ್ನು ಮರೆಯಲು ಖಂಡಿತವಾಗಿಯೂ ಸಾಧ್ಯವೇ ಇಲ್ಲ. ಹೌದು ನಿಮ್ಮೆಲ್ಲರ ಊಹೆ ಸರಿ. ನಾವಿಂದು ಕನ್ನಡ ಚಿತ್ರರಂಗ ಕಂಡ ಅನನ್ಯ, ಅನರ್ಘ್ಯ ಗೀತರಚನೆಕಾರ, ಸಂಭಾಷಣೆಕಾರ, ಕಥೆಗಾರ ಸಾಹಿತ್ಯ ರತ್ನ ಶ್ರೀ ಚಿ. ಉದಯಶಂಕರ್ ಅವರ ಬಗ್ಗೆ ತಿಳಿದುಕೊಳ್ಳೋಣ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚಿಟ್ನಹಳ್ಳಿಯ (ಈಗ ಚಂದ್ರಶೇಖರಪುರ) ಖ್ಯಾತ ಚಲನಚಿತ್ರ ಸಾಹಿತಿ ಚಿ.ಸದಾಶಿವಯ್ಯನವರ ಪುತ್ರರಾಗಿ ಫೆಬ್ರವರಿ 18, 1934ರಲ್ಲಿ ತಮ್ಮ ತಾಯಿಯವರ ತವರೂರಾದ ಹೊಳೇನರಸೀಪುರದಲ್ಲಿ ಜನಿಸಿದರು. ಅದಾಗಲೇ ಅವರ ತಂದೆ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ಸಾಹಿತಿಗಳಾಗಿದ್ದರಿಂದ ಬರವಣಿಗೆ ಅವರಿಗೆ ರಕ್ತಗತವಾಗಿತ್ತು ಎಂದರೆ ತಪ್ಪಾಗಲಾರದು. ಆವರ ವಿದ್ಯಾಭ್ಯಾಸವೆಲ್ಲಾ ಬೆಂಗಳೂರಿನಲ್ಲಿಯೇ ಆಗುತ್ತದೆ.

uday3

ಉದಯಶಂಕರ್ ಅವರು ತಮ್ಮ ಆರನೇ ವಯಸ್ಸಿನಲ್ಲಿಯೇ ನಾನೂ ಚಂದೂ ಕೆರೆ ಕಟ್ಟಿದೆವು ಎಂಬ ಕಥೆ, ಮತ್ತು ಕರಡಿಗಳ ಸಿನಿಮಾ ಎನ್ನುವ ಹಾಸ್ಯಕತೆ ಬರೆದಿದ್ದರು. ಬೆಂಗಳೂರಿನ ಮಕ್ಕಳ ಕೂಟದ ಸ್ಥಾಪಕಿ ಆರ್.ಕಲ್ಯಾಣಮ್ಮನವರು ತಮ್ಮ ಮಕ್ಕಳ ಬಾವುಟ ಎನ್ನುವ ಮಕ್ಕಳ ಪತ್ರಿಕೆಗೆ ಉದಯಶಂಕರ್ ಅವರನ್ನೇ ಸಂಪಾದಕರನ್ನಾಗಿಸಿದ್ದರು. ಬಾಲಕ ಉದಯಶಂಕರ್ ಅವರ ಪ್ರತಿಭೆಯನ್ನು ಅಂದಿನ ಕಾಲದ ಖ್ಯಾತ ಸಾಹಿತಿಗಳಾದ ದೇವುಡು, ಮಾಸ್ತಿ, ಬೇಂದ್ರೆಯವರು ಅಪಾರವಾಗಿ ಮೆಚ್ಚಿಕೊಂಡಿದ್ದರು. ಬೇಂದ್ರೆಯವರಂತೂ ಉದಯಶಂಕರರಿಗೆ ಮುಂದೆ ದೊಡ್ಡ ಕವಿಯಾಗುತ್ತೀಯೇ ಎಂದು ಹೃದಯಪೂರ್ವಕವಾಗಿ ಹರಸಿದ್ದರು. ಸಾಹಿತ್ಯದ ಜೊತೆಯಲ್ಲಿಯೇ ತಕ್ಕ ಮಟ್ಟಿಗೆ ಸಂಗೀತ ಮತ್ತು ಗಮಕ ಅಭ್ಯಾಸವನ್ನು ಮಾಡಿದ್ದರು. ಸಾಹಿತ್ಯಪರಿಷತ್ ನಡೆಸುವ ಗಮಕ ಪರೀಕ್ಷೆಯಲ್ಲಿ ಅಂದಿನ ಕಾಲದಲ್ಲಿಯೇ ಎರಡನೇ ರಾಂಕ್ ಪಡೆದಿದ್ದರು ನಮ್ಮ ಉದಯಶಂಕರರು.

ಅಂದಿನ ಕಾಲದಲ್ಲಿ ಚಿತ್ರರಂಗದ ಸಾಹಿತ್ಯದ ಕೆಲಸದಲ್ಲಿ ಕೈತುಂಬಾ ನಿರತರಾಗಿದ್ದ ತಮ್ಮ ತಂದೆ ಸದಾಶಿವಯ್ಯನವರಿಗೆ ಸಹಾಯಕರಾಗಿ ಉದಯಶಂಕರ್ ಆರಂಭದಲ್ಲಿ ಸಾಹಿತ್ಯ ಬರೆಯತೊಡಗಿದರು. ಸಾಹಿತ್ಯ ಬರೆಯುವುದರ ಜೊತೆಗೆ ಉದಯಶಂಕರ್ ಸಂಭಾಷಣೆ ಬರೆಯುವುದು ಮತ್ತು ತಮ್ಮದೇ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಲು ಆರಂಭಿಸಿದರು. ಮಗನ ಸಾಮರ್ಥ್ಯವನ್ನು ಕೂಡಲೇ ಅರಿತ ತಂದೆ ಸದಾಶಿವಯ್ಯನವರು ತಮ್ಮನ್ನು ಹುಡುಕಿಕೊಂಡು ಬರುತ್ತಿದ್ದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ತಮ್ಮ ಮಗನ ಸಾಹಿತ್ಯ ರಚನೆಯ ಸಾಮರ್ಥ್ಯವನ್ನು ಸಮರ್ಥಿಸಿಕೊಂಡು ಮಾತನಾಡುತ್ತಾ ಅವರಿಗೆ ಸಣ್ಣ ಪುಟ್ಟ ಕೆಲಸ ಕೊಡಿಸತೊಡಗಿದರು.

uday4

1963 ರಲ್ಲಿ ರಾಜಕುಮಾರ್ ಆಭಿನಯದಲ್ಲಿ ತೆರೆಕಂಡ ಸಂತ ತುಕಾರಾಮ ಚಿತ್ರಕ್ಕೆ ಸ್ವತಂತ್ರ್ಯವಾಗಿ ಸಂಭಾಷಣೆ ಬರೆಯಲು ಆರಂಭಿಸಿದ ಉದಯಶಂಕರ್ ಆ ಚಿತ್ರ ಅತ್ಯಂತ ಯಶಸ್ವಿಯಾಗಿ ಅಲ್ಲಿಂದ ಮುಂದೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಅವರ ಸರಳ ಸುಂದರ ಸಾಹಿತ್ಯಕ್ಕೆ ಮಾರು ಹೋದ ಡಾ.ರಾಜ್ ಅಲ್ಲಿಂದ ಮುಂದಿನ ತಮ್ಮ ಬಹುತೇಕ ಚಿತ್ರಗಳಿಗೆ ಉದಯಶಂಕರ್ ಖಾಯಂ ಸಾಹಿತಿಗಳಾಗಿ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಗೀತರಚನಕಾರರಾಗಿ ನೇಮಿಸಿ ಬಿಟ್ಟರು. ನಮ್ಮ ಕಾಲದಲ್ಲಿ ಹೇಗೆ ರವಿಚಂದ್ರನ್ ಮತ್ತು ಹಂಸಲೇಖ ಜೋಡಿ ಪ್ರಸಿದ್ಧಿ ಪಡೆದಿತ್ತೋ ಹಾಗೆಯೇ ಆ ಕಾಲದಲ್ಲಿ ರಾಜಕುಮಾರ್ ಮತ್ತು ಉದಯ್ ಶಂಕರ್ ಜೋಡಿ ಅತ್ಯಂತ ಯಶಸ್ವಿಯಾಗಿ ಮುಟ್ಟಿದ್ದೆಲ್ಲಾ ಚಿನ್ನವಾಗ ತೊಡಗಿತು. ರಾಜಕುಮಾರ್ ಅವರ ಸರಿ ಸುಮಾರು 88 ಚಿತ್ರಗಳಿಗೆ ಉದಯ ಶಂಕರ್ ಸಂಭಾಷಣೆ ಬರೆದಿದ್ದಾರೆ. ಡಾ. ರಾಜ್ ಅವರಿಗಾಗಿಯೇ ಸುಮಾರು 400ಕ್ಕೂ ಹೆಚ್ಚು ಚಲನಚಿತ್ರಗೀತೆಗಳು ಮತ್ತು ಭಕ್ತಿಗೀತೆಗಳನ್ನು ಬರೆದಿದ್ದಾರೆ.

uday

ಡಾ. ರಾಜ್ ಮತ್ತು ಉದಯಶಂಕರ್ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಒಡಹುಟ್ಟಿದವರಂತೆಯೇ ಸದಾಕಾಲವೂ ಇರುತ್ತಿದ್ದರು ಎನ್ನುದಕ್ಕೆ ಉದಯಶಂಕರರನ್ನು ರಾಜ್ ಕೂಸು ಮರೀ ಮಾಡಿಕೊಂಡಿರುವ ಈ ಚಿತ್ರವೇ ಸಾಕ್ಷಿ. ರಾಜ್ ಚಿತ್ರಕ್ಕೆ ಕೇವಲ ಖಾಯಂ ಸಾಹಿತಿಗಳಷ್ಟೇ ಆಗಿರದೇ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದಲ್ಲಿಯೂ ಉದಯಶಂಕರ್ ಇರಲೇ ಬೇಕೆಂಬ ಅಲಿಖಿತ ನಿಯಮ ಅವರಿಬ್ಬರ ನಡುವೆ ಇತ್ತು. ತಾವೇ ಬರೆದಿದ್ದ ಸಂಭಾಷಣೆಯನ್ನು ಅನೇಕ ಸಲಾ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದಲ್ಲಿಯೇ ಅಲ್ಲಿಯ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಾ ಚಿತ್ರದ ಘನತೆಯನ್ನು ಮತ್ತಷ್ಟೂ ಹೆಚ್ಚಿಸುತ್ತಿದ್ದರಂತೆ ಉದಯಶಂಕರ್. ಅದೊಂದು ದಿನ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ರಾಜ್ ಅತ್ತಿಂದಿತ್ತ ತಿರುಗಾಡುತ್ತಿರುವುದನ್ನು ಕಂಡ ಆ ಚಿತ್ರದ ನಿರ್ದೇಶಕರು ಅಣ್ಣಾ, ಇದೇನೂ ನೀವು ಹೀಗೆ ಸುತ್ತಾಡುತ್ತಿದ್ದೀರಿ ಎಂದು ಜೋರಾಗಿ ಕೇಳಿದಾಗ, ರಾಜಕುಮಾರರು ಬಾಯಿಯ ಮೇಲೆ ಬೆರಳಿಟ್ಟು ಉಶ್!!! ಮೆಲ್ಲಗೆ ಮಾತನಾಡಿ, ಒಳಗಡೆ ನಮ್ಮ ಉದಯಶಂಕರ್ ಅವರು ಮಲಗಿದ್ದಾರೆ. ನಿಮ್ಮ ಕೂಗಾಟದಿಂದಾಗಿ ಅವರಿಗೆ ಎಚ್ಚರಿಕೆ ಆಗಿ, ಅವರ ನಿದ್ದೆಗೆ ಭಂಗ ಬಾರದಿರಲೆಂದೇ ನಾನು ಇಲ್ಲಿ ಕಾವಲು ಕಾಯುತ್ತಿದ್ದೇನೆ ಎಂದಿದ್ದರಂತೆ. ಹೀಗಿತ್ತು ಅವರಿಬ್ಬರ ಗೆಳೆತನ.

uday

ನಿಜ ಹೇಳಬೇಕೆಂದರೆ ಉದಯಶಂಕರ್ ಅವರು ಚಿತ್ರರಂಗಕ್ಕೆ ಸಾಹಿತಿಯಾಗುವುದಕ್ಕಿಂತಲೂ ನಾಯಕರಾಗಲು ಇಚ್ಚಿಸಿದರು. ಆಗ ನೊಡಲು ಅತ್ಯಂತ ತೆಳ್ಳಗೆ ಬೆಳ್ಳಗೆ, ಸುರದ್ರೂಪಿಯಾಗಿದ್ದ ಉದಯಶಂಕರ್ ಅದೊಮ್ಮೆ ತಮ್ಮನ್ನು ನಾಯಕನನ್ನಾಗಿ ಮಾಡಲು ತಮಗೆ ಪರಿಚಯವಿದ್ದ ಒಬ್ಬ ನಿರ್ಮಾಪಕರನ್ನು ಸಂಪರ್ಕಿಸಿದರು. ಆಗ ಉಯಯಶಂಕರ್ ತುಂಬಾ ತೆಳ್ಳಗಿದ್ದ ಕಾರಣ ಸ್ವಲ್ಪ ತೂಕವನ್ನು
ಹೆಚ್ಚಿಸಿ ಕೊಳ್ಳುವ ಸಲುವಾಗಿ ರಾತ್ರಿಯ ಹೊತ್ತು ನೆನೆಸಿದ ಕಡಲೆ ಕಾಳನ್ನು ತಿನ್ನಲು ಸೂಚಿಸಿದ್ದರಂತೆ. ಆ ನಿರ್ಮಾಪಕರ ಮಾತನ್ನು ಬಹಳ ಗಂಭೀರವಾಗಿ ಸ್ವೀಕರಿಸಿದ ಉದಯಶಂಕರ್ ಸತವಾಗಿ ಆರು ತಿಂಗಳ ಕಾಲ ನೆನೆಸಿದ ಕಡಲೇ ಕಾಳನ್ನು ತಿಂದ ನಂತರ ಮತ್ತೆ ಅದೇ ನಿರ್ಮಾಪಕರನ್ನು ಸಂಪರ್ಕಿಸಿದರು. ಆಗ ಉದಯಶಂಕರ್ ಅವರ ದೇಹದ ಗಾತ್ರವನ್ನು ನೋಡಿ ಆಘಾತಕ್ಕೊಳಗಾದ ಆ ನಿರ್ಮಾಪಕರು ಈಗ ನೀವು ಕೀಚಕ ಅಥವಾ ದುರ್ಯೋಧನನ ಪಾತ್ರಗಳಿಗೆ ಮಾತ್ರವೇ ಸೂಕ್ತರು ಹೀರೋ ಆಗಲು ಲಾಯಕ್ಕಿಲ್ಲ ಎಂದು ತಿಳಿಸಿದ್ದರಂತೆ. ನಾಯಕರಾಗದಿದ್ದರೇನಂತೆ ಅಲ್ಲಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ತಮ್ಮ ನಟನಾ ಕೌಶ್ಯಲ್ಯವನ್ನು ಕನ್ನಡಿಗರಿಗೆ ಉಣಬಡಿಸಿದ್ದರು. ಅದಕ್ಕೆ ಲಗ್ನಪತ್ರಿಕೆ ಚಿತ್ರದಲ್ಲಿ ಹಿರಿಯ ನಟ ಶಿವರಾಮ್ ಜೊತೆಯಲ್ಲಿ ಬಲು ಅಪರೂಪ ನಮ್ ಜೋಡಿ. ಎಂಥಾ ಕಛೇರಿಗೂ ನಾವ್ ರೆಡಿ ಎನ್ನುವ ಹಾಡಿನ ಆಭಿನಯವೇ ಸಾಕ್ಷಿ.

ಕೇವಲ ಡಾ.ರಾಜ್ ಅವರಿಗಲ್ಲದೇ ಕನ್ನಡದ ಬಹುತೇಕ ನಟರುಗಳ ಚಿತ್ರಗಳಿಗೆ ಕಥೆ, ಚಿತ್ರ ಕಥೆ, ಗೀತರಚನೆಗಳನ್ನು ಮಾಡಿರುವ ಉದಯ ಶಂಕರ್ ಚಿತ್ರ ಸಾಹಿತಿಯಾಗಿ ಅವರು 4000ಕ್ಕೂ ಹೆಚ್ಚಿನ ಗೀತೆಗಳನ್ನು ರಚಿಸಿ ಗಿನ್ನಿಸ್ ದಾಖಲೆಯನ್ನೂ ಮಾಡಿದ್ದಾರೆ. ಕೇವಲ ಸಾಹಿತಿಯಲ್ಲದೇ ಒಂದು ಚಿತ್ರವನ್ನೂ ನಿರ್ದೇಶಿಸಿದ್ದಾರೆ.

ಶ್ರೀ ಉದಯಶಂಕರ್ ಮತ್ತು ಶ್ರೀಮತಿ ಶಾರದಮ್ಮನವರಿಗೆ ಗುರುದತ್, ರವಿಶಂಕರ್ ಎಂಬ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿದ್ದಾರೆ. ಹಿರಿಯ ಮಗ ಸುರದ್ರೂಪಿ ಗುರುದತ್ ಕೆಲಚಿತ್ರಗಳಲ್ಲಿ ನಟನಾಗಿ ಆಭಿನಯಿಸಿ ನಂತರ ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕೆಲ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ವಯಸ್ಸಿಗೆ ಬಂದ ಮಗಳಿಗೆ ಅನೇಕ ವರ್ಷ ಸೂಕ್ತ ವರ ಸಿಕ್ಕದೇ ಬಹಳವಾಗಿ ನೊಂದಿದ್ದ ಉದಯಶಂಕರ್ ಅವರಿಗೆ ಆಗ ತಾನೇ ಚಿತ್ರರಂಗದಲ್ಲಿ ಹಾಸ್ಯನಟನಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಅವರ ಎರಡನೆಯ ಮಗ ರವಿಶಂಕರ್ ನಂಜುಂಡೀ ಕಲ್ಯಾಣ ಚಿತ್ರದ ಶತದಿನೋತ್ಸವ ಸಮಾರಂಭಕ್ಕಾಗಿ ಬರುತ್ತಿದ್ದಾಗ ಕಾರಿನ ಅಪಘಾತದಲ್ಲಿ ನಿಧನರಾಗಿದ್ದು ಅವರ ಮನಸ್ಸಿನ ಮೇಲೆ ಬಹಳವಾಗಿ ಘಾಸಿಯನ್ನುಂಟು ಮಾಡಿತ್ತು . ಪುತ್ರ ಶೋಕಂ ನಿರಂತರಂ ಎನ್ನುವ ಹಾಗೆ ಅವರ ಮಗನ ಅಕಾಲಿಕ ಮರಣದ ದುಖಃದಿಂದ ಹೊರಬರಲು ಸಾಧ್ಯವಾಗದೇ ಕನ್ನಡ ಚಿತ್ರರಂಗಕ್ಕೆ ಸಾಹಿತಿಯಾಗಿ, ಗೀತರಚನೆಗಾರನಾಗಿ, ಸಂಭಾಷಣಕಾರನಾಗಿ, ಸಂಗೀತ ನಿರ್ದೇಶಕನಾಗಿ, ನಟನಾಗಿ ಮತ್ತು ನಿರ್ದೇಶಕನಾಗಿ ಹೀಗೆ ಬಹುಮುಖದ ಮೇರು ಕೊಡುಗೆ ಸಲ್ಲಿಸಿದ್ದ ಉದಯಶಂಕರ್ ಅವರು 3 ಜುಲೈ 1993 ರಂದು ಬೆಂಗಳೂರಿನಲ್ಲಿ ತಮ್ಮ 59ನೆಯ ವಯಸ್ಸಿಗೇ ನಿಧನ ಹೊಂದಿದರು.

ಉದಯಶಂಕರ್ ಚಿತ್ರಗೀತೆಗಳು ಮತ್ತು ಭಕ್ತಿಗೀತೆಗಳು ಸೇರಿದಂತೆ 4000ಕ್ಕೂ ಅಧಿಕ ಗೀತೆಗಳನ್ನು ರಚಿಸಿದ್ದರೂ ಸಾಹಿತ್ಯಲೋಕದ ಮಂದಿಗಳು ಅವರನ್ನು ಸಾಹಿತಿಗಳೆಂದು ಒಪ್ಪಲೇ ಇಲ್ಲದೇ ಹೋದದ್ದು ನಿಜಕ್ಕೂ ವಿಷಾಧನೀಯವೇ ಸರಿ. ಮತ್ತೊಂದು ಅಘಾತಕಾರಿ ವಿಷಯವೇನೆಂದರೇ ಆಷ್ಟೋಂದು ಜನಪ್ರಿಯ ಹಾಡುಗಳನ್ನು ರವಿಸಿದ್ದರೂ ಅವರ ಒಂದೂ ಹಾಡುಗಳಿಗೆ ಪ್ರಶಸ್ತಿ ಬಾರದಿರುವುದು ನಿಜಕ್ಕೂ ಸೋಜಿಗವೇ.

ಕನ್ನಡ ಚಿತ್ರರಂಗದಲ್ಲಿ ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದ ಉದಯಶಂಕರ್ ಅವರುಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜರಾಗಿದ್ದಾರೆ.

  • 1970-71 – ಕುಲ ಗೌರವ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
  • 1972-73 -ನಾಗರಹಾವು ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
  • 1975-76 – ಪ್ರೇಮದ ಕಾಣಿಕೆ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
  • 1985-86 -ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ – (ಸಿಂಗೀತಂ ಶ್ರೀನಿವಾಸ ರಾವ್ ಅವರೊಂದಿಗೆ ಹಂಚಿಕೊಳ್ಳಲಾಗಿದೆ)
  • 1986-87 -ಆನಂದ್ ಚಿತ್ರದ ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ – (ಸಿಂಗೀತಂ ಶ್ರೀನಿವಾಸ ರಾವ್ ಅವರೊಂದಿಗೆ ಹಂಚಿಕೊಳ್ಳಲಾಗಿದೆ)
  • 1992-93 -ಜೀವನ ಚೈತ್ರ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ

ಕೇವಲ ಮೂರು ದಶಕಗಳಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಸಾಹಿತಿಯಾಗಿ, ಗೀತರಚನೆಗಾರನಾಗಿ, ಸಂಭಾಷಣಕಾರನಾಗಿ, ಸಂಗೀತ ನಿರ್ದೇಶಕನಾಗಿ, ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಕನ್ನಡ ಚಲನಚಿತ್ರ ರಂಗ ಎಂದೂ ಮರೆಯಲಾದರ ಅದ್ಭುತ ಕಾರ್ಯಗಳನ್ನು ಮಾಡಿದ್ದ ನಮ್ಮೆಲ್ಲರ ಮೆಚ್ಚಿನ ಸಾಹಿತ್ಯರತ್ನ ಚಿ. ಉದಯಶಂಕರ್ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತಿರೀ?

One thought on “ಸಾಹಿತ್ಯರತ್ನ ಚಿ. ಉದಯಶಂಕರ್

  1. ನಿಜವಾಗಲೂ ನೀವು ತಿಳಿಸಿರುವ ಮಾಹಿತಿ ಅತಿಮುಖ್ಯ ಹಾಗೂ ಅಕ್ಷರಶಃ ಸತ್ಯ’ ನನ್ನ ಒಂದು ಮನವಿ ಏನೆಂದರೆ ಇಂತಹ ಸಾಹಿತ್ಯ ಬ್ರಹ್ಮರ ಜಯಂತಿ ಆಚರಣೆ ಆಗಬೇ ಕು.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s