ಬೋಲ್ ಮಾಡ್ಲಿಲ್ಲಾ , ಬ್ಯಾಟ್ ಮಾಡ್ಲಿಲ್ಲಾ . ಆದ್ರೂ ಪಂದ್ಯ ಪುರುಷೋತ್ತಮ

ಕ್ರಿಕೆಟ್ ಆಡುವ ಮತ್ತು ನೋಡುವರೆಲ್ಲರಿಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿ ಹೇಗೆ ಕೊಡ್ತಾರೆ ಅಂತಾ ಗೊತ್ತೇ ಇರುತ್ತದೆ. ಯಾವುದೇ ಪಂದ್ಯದಲ್ಲಿ ಯಾರು ಒಳ್ಳೆಯ ಬ್ಯಾಟಿಂಗ್ ಅಥವಾ ಬೋಲಿಂಗ್ ಪ್ರದರ್ಶನ ಮಾಡ್ತಾರೋ, ಇಲ್ಲವೇ ಆಲ್ರೌಂಡ್ ಪ್ರದರ್ಶನ ನೀಡಿ ಪಂದ್ಯವನ್ನು ಗೆಲ್ಲಲು ಸಹಾಯ ಮಾಡಿರ್ತಾರೋ ಅವರನ್ನು ಪಂದ್ಯದ ಕಡೆಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಅಂತ ಘೋಷಿಸುವುದು ಸಹಜ ಪ್ರಕ್ರಿಯೆ.

ಇಂದಿಗೆ ಸರಿಯಾಗಿ 33 ವರ್ಷಗಳ ಹಿಂದೆ ಅಂದ್ರೆ, ನವೆಂಬರ್ 28, 1986ರಲ್ಲಿ ಶಾರ್ಜಾದಲ್ಲಿ ನಡೆದ ವೆಸ್ಟ್ಇಂಡೀಸ್ ಮತ್ತು ಪಾಕೀಸ್ಥಾನದ ವಿರುದ್ದದ ಛಾಂಪಿಯನ್ ಟ್ರೋಫಿ ಪಂದ್ಯಾವಳಿಯಲ್ಲಿ ಒಬ್ಬ ಆಟಗಾರ ಆ ಪಂದ್ಯದಲ್ಲಿ ಒಂದೇ ಒಂದು ಬೌಲ್ ಮಾಡದೇ, ಮತ್ತು ಬ್ಯಾಟಿಂಗ್ ಆವಕಾಶವೂ ಸಿಗದೇ ಇದ್ರೂ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ರೋಚಕವಾದ ಸಂಗತಿಯನ್ನು ನಾವೀಗ ಮೆಲಕು ಹಾಕೋಣ.

1980ರ ದಶಕದಲ್ಲಿ ಕ್ಲೈವ್ ಲಾಯ್ಡ್ ನಾಯಕತ್ವದ, ವಿವಿಯನ್ ರಿಚರ್ಡ್ಸ್ ಡೆಸ್ಮಂಡ್ ಹೇನ್ಸ್, ಗ್ರೀನಿಜ್ ಅಂತಹ ದಾಂಡಿಗರು, ಮಾರ್ಷಲ್, ವಾಲ್ಷ್, ಬೆಂಜಮೀನ್ ಅಂತಹ ಬೆಂಕಿಯಂತೆ ಉಗುಳುವ ಚೆಂಡನ್ನು ಎಸೆಯುವ ಬೋಲರ್ಗಳಿಂದ ಕೂಡಿದ್ದ ವೆಸ್ಟ್ ಇಂಡೀಸ್ ತಂಡ ಎದುರಾಳಿಗಳಿಗೆ ಸಿಂಹ ಸ್ವಪ್ನವೇ ಆಗಿತ್ತು . 1983ರ ಪ್ರುಡನ್ಷಿಯಲ್ ವರ್ಲ್ದ್ ಕಪ್ಪಿನಲ್ಲಿ ಅಚಾನಕ್ಕಾಗಿ ಭಾರತದ ವಿರುದ್ಧ ಸೋಲನ್ನು ಅನುಭವಿಸಿದ ಮೇಲಂತೂ ಗಾಯಗೊಂಡ ಹುಲಿಗಳಂತಾಗಿ ಎಲ್ಲರ ಮೇಲೂ ಎಗರು ಬೀಳುತ್ತಿದ್ದ ತಂಡವದು.

logi4

ಶಾರ್ಜಾದಲ್ಲಿ ನಡೆಯುತ್ತಿದ್ದ ಛಾಂಪಿಯನ್ ಟ್ರೋಫಿಯ ಎರಡನೇಯ ಪಂದ್ಯಾವಳಿಯಲ್ಲಿ ವಿಂಡೀಸ್ ವಿರುದ್ಧ ಜಾವೇದ್ ಮಿಯಾಂದಾದ್ ನೇತೃತ್ವದ ಪಾಕಿಸ್ತಾನದ ತಂಡ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿ 43.4 ಓವರ್ಗಳಲ್ಲಿ ಕೇವಲ , 143ರನ್ಗಳಿಗೆ ಆಲ್ ಔಟ್ ಆಗಿದ್ದರು. ವಾಲ್ಷ್ ತನ್ನ ಬೆಂಕಿಯಂತ ಚೆಂಡುಗಳಿಂದ 4 ವಿಕೆಟ್ ಉರುಳಿಸಿದ್ದರೂ ಪಾಕ್ ತಂಡ ಈ ರೀತಿಯ ಹೀನಾಯಮಾನವಾಗಿ ಔಟ್ ಆಗಲು ವಿಂಡೀಸ್ ತಂಡದ ಒಬ್ಬ ಕ್ಷೇತ್ರರಕ್ಷಕನ ಚುರುಕಾದ ಕೈಚಳಕವೇ ಕಾರಣ ಎಂದರೆ ಆಶ್ಚರ್ಯವಾಗಬಹುದು.

logi2

ನಿಜ ಹೇಳಬೇಕು ಅಂದ್ರೇ ಕ್ರಿಕೆಟ್ಟಿನಲ್ಲಿ ಕ್ಷೇತ್ರರಕ್ಷಣೆ ಹೇಗೆ ಮಾಡಬಹುದು ಮತ್ತು ಹೇಗೆ ಮಾಡಬೇಕು ಅನ್ನೋದು ಗೊತ್ತಾಗಿದ್ದೇ 1992ರಲ್ಲಿ ದಕ್ಷಿಣ ಆಫ್ರೀಕಾ ತಂಡದ ಮೇಲಿನ ದಿಗ್ಭಂಧನ ಕಳೆದು ಪುನಃ ಕ್ರಿಕೆಟ್ ಜಗತ್ತಿಗೆ ಮರಳಿದ ಮೇಲೆಯೇ. ಇವತ್ತಿಗೂ ಕ್ರಿಕೆಟ್ ಜಗತ್ತಿನ ಸರ್ವ ಶ್ರೇಷ್ಠ ಫೀಲ್ಡರ್ ಅಂದ ಕೂಡಲೇ ನಮಗೆ ಥಟ್ ಅಂತಾ ನೆನಪಾಗೋದೇ ಜಾಂಟಿ ರೋಡ್ಸ್. ಆದ್ರೇ ಜಾಂಟಿ ರೋಡ್ಸ್ ಬರುವುದಕ್ಕೂ ಮೊದಲೇ ಏಕನಾಥ್ ಸೋಲ್ಕರ್, ಜಯಸಿಂಹ, ಯಜುರ್ವೇದ ಸಿಂಗ್ ಮುಂತಾದ ಭಾರತೀಯರ ಜೊತೆಗೆ ಹಲವು ಫೀಲ್ಡರ್ಗಳು ತಮ್ಮ ಛಾಪು ಮೂಡಿಸಿದ್ದರು. ಸಾಧರಣವಾಗಿ ಬಹಳ ಎತ್ತರವಿರುತ್ತಿದ್ದ ವಿಂಡೀಸ್ ತಂಡದ ಆಟಗಾರರು ಬಗ್ಗಲು ಸಾಧ್ಯವಾಗದೇ ಅಂತಹ ಉತ್ತಮವಾಗಿ ಕ್ಷೇತ್ರರಕ್ಷಣೆ ಮಾಡುತ್ತಿರಲಿಲ್ಲ. ಆದರೆ ಅವರಲ್ಲೊಬ್ಬ ವಾಮನ ಮೂರ್ತಿ ಚುರುಕಾಗಿ ಅತ್ತಿಂದಿತ್ತ ಓಡಾಡುತ್ತಾ ಬಾಲ್ ತನ್ನ ಕೈಗೆ ಬಂದ ತಕ್ಷಣವೇ ಗಬಕ್ಕನೆ ಹಿಡಿಯುವ ಮತ್ತು ಕ್ರೀಡಾಂಗಣದಲ್ಲಿ ಎಲ್ಲೇ ಕ್ಷೇತ್ರರಕ್ಷಣೆ ಮಾಡುತ್ತಿದ್ದರೂ ನೇರವಾಗಿ ವಿಕೆಟ್ಗೆ ಇಲ್ಲವೇ ಕೀಪರ್ ಕೈಗೆ ಚೆಂಡನ್ನು ಎಸಯ ಬಲ್ಲಂತಹ ಆಟಗಾರನೆಂದರೆ ಅಗಸ್ಟೀನ್ ಲೋಗಿ. ಎಲ್ಲರೂ ಅವರನ್ನು ಪ್ರೀತಿಯಿಂದ ಗಸ್ ಲೋಗಿ ಎಂದೇ ಕರೆಯುತ್ತಿದ್ದರು. ಗಸ್ ಲೋಗಿ ಯಾವುದೇ ಕ್ಯಾಚ್ ಮಿಸ್ ಮಾಡಲ್ಲ, ಮತ್ತು ಆತನ ಬಳಿ ಬಾಲ್ ಹೋದ್ರೆ ರನ್ ಓಡುವ ಮೊದಲು ಒಂದು ಸಲಾ ಯೋಚನೆ ಮಾಡ್ತಿದ್ರೂ ಕಾರಣ, ಲೋಗಿ ಸ್ಟಂಪ್ಗೆ ಗುರಿ ಇಟ್ರೆ ಅದು ತಪ್ಪಲ್ಲ ಅನ್ನೋ ಭಯ ಎಲ್ಲರಲ್ಲೂ ಮೂಡುತ್ತಿತ್ತು. ಈ ಪಂದ್ಯದಲ್ಲೂ ಆಗಿದ್ದು ಇದೇ. ಆ ಪಂದ್ಯದಲ್ಲಿ ಲೋಗಿ 3 ಕ್ಯಾಚ್ ಮತ್ತು 2 ರನ್ ಔಟ್ ಮಾಡುವ ಮೂಲಕ 5 ಪಾಕ್ ಆಟಗಾರರಿಗೆ ದುಸ್ವಪ್ನವಾಗಿ ಕಾಡಿದ್ದರು.

logi3

ಆ ನಂತರ ಆಡಲು ಬಂದ ದೈತ್ಯಕಾಯರಾದ ಮತ್ತು ಅಂದಿನ ಕಾಲದ ಅತ್ಯಂತ ಯಶಸ್ವೀ ಆರಂಭದ ಜೋಡಿಯಾದ ಗ್ರೀನಿಜ್ ಮತ್ತು ಹೇನ್ಸ್ ಕೇವಲ 33.2 ಓವರ್ಗಳಲ್ಲಿಯೇ ಒಂದು ವಿಕೆಟ್ ನಷ್ಟಕ್ಕೆ 145 ರನ್ನುಗಳನ್ನು ಗಳಿಸಿ ವೆಸ್ಟ್ ಇಂಡೀಸರಿಗೆ 9 ವಿಕೆಟ್ಗಳ ಸುಲಭ ಜಯವನ್ನು ತಂದಿತ್ತಿದ್ದರು. ಪಂದ್ಯದಲ್ಲಿ ಪಾಕೀಸ್ಥಾನದ ಪತನಕ್ಕೆ ನೇರವಾಗಿ ಕಾರಣರಾಗಿದ್ದ ಗಸ್ ಲೋಗಿಯವರಿಗೆ ಆ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದರು, ಅಲ್ಲಿಯವರೆಗೂ ಕ್ರಿಕೆಟ್ ಇತಿಹಾಸದಲ್ಲಿ ಫೀಲ್ಡಿಂಗ್ ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಘೋಷಿಸಿದ್ದ ದಾಖಲೆಯೇ ಇರಲಿಲ್ಲ. ಹಾಗಾಗಿ ಪ್ರಪ್ರಥಮ ಬಾರಿಗೆ ಗಸ್ ಲೋಗಿ ಫೀಲ್ಡಿಂಗ್ಗಾಗಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದು ಇತಿಹಾಸ ನಿರ್ಮಿಸಿದ ಆಟಗಾರನಾದರು.

ಈಗೆಲ್ಲಾ ಪ್ರತಿಯೊಬ್ಬ ಆಟಗಾರನೂ ಬ್ಯಾಟಿಂಗ್ ಮತ್ತು ಬೋಲಿಂಗ್ ಜೊತೆಗೆ ಚುರುಕಾಗಿ ಕ್ಷೇತ್ರರಕ್ಷಣೆ ಮಾಡಿದರೆ ಮಾತ್ರವೇ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ ಇಲ್ಲದಿದ್ದಲ್ಲಿ ಅವರನ್ನು ತಂಡದಿಂದ ಹೊರದಬ್ಬಲು ಮತ್ತೊಬ್ಬ ಚುರುಕಾದ ಕ್ಷೇತ್ರರಕ್ಷಕ ಸಿದ್ಧನಾಗಿಯೇ ಇರ್ತಾನೆ. ಅದಕ್ಕೇ ಅಲ್ವೇ ಬಾಲ್ ಹೋದ್ಮೇಲೆ ಡೈವ್ ಹಾಕುತ್ತಿದ್ದ ನಮ್ಮ ಕುಂಬ್ಲೆ ಮತ್ತು ಸಿದ್ಧು ಕೂಡಾ ತಮ್ಮ ನಿವೃತ್ತಿ ವಯಸ್ಸಿನಲ್ಲಿ ಕಷ್ಟ ಪಟ್ಟು ಎದ್ದೂ ಬಿದ್ದೂ ಚುರುಕಾಗಿ ಫೀಲ್ಡಿಂಗ್ ಮಾಡಲು ಕಲ್ತಿದ್ದು. ಏನೇ ಹೇಳಿ Catches win Matches ಅನ್ನುದಂತೂ ಸತ್ಯವೇ ಸರಿ.

ಏನಂತೀರೀ?

One thought on “ಬೋಲ್ ಮಾಡ್ಲಿಲ್ಲಾ , ಬ್ಯಾಟ್ ಮಾಡ್ಲಿಲ್ಲಾ . ಆದ್ರೂ ಪಂದ್ಯ ಪುರುಷೋತ್ತಮ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s