ಕಳೆದ ವಾರಾಂತ್ಯದಲ್ಲಿ ಮನೆಗೆ ಅವಶ್ಯಕವಿದ್ದ ತರಕಾರಿಗಳನ್ನು ಕೊಳ್ಳಲು ರಸ್ತೆಯ ಬದಿಯಲ್ಲಿದ್ದ ವ್ಯಾಪಾರಿಗಳ ಬಳಿ ಹೋಗಿದ್ದೆ. ನಮಗೆ ಬೇಕಾದ ತರಕಾರಿಗಳನ್ನೆಲ್ಲಾ ಕೊಂಡು ದುಡ್ಡು ಎಷ್ಟಾಯಿತು ಎಂದೆ? ಅಲ್ಲಿ ವ್ಯಾಪಾರ ಮಾಡುತ್ತಿದ್ದ ಸುಮಾರು 18-20ರ ವಯಸ್ಸಿನ ತರುಣ ತರಕಾರಿ ಕೊಡುವಾಗ ಇದ್ದ ಚುರುಕು ಲೆಕ್ಕ ಹಾಕುವಾಗ ತಡಕಾಡತೊಡಗಿದ್ದ. ಕಡೆಗೆ ಕ್ಯಾಲುಕ್ಯುಲೇಟರ್ ಸಹಾಯದಿಂದ ಲೆಖ್ಖಾ ಹಾಕಿ ಅಂಕಲ್ 235 ಆಯ್ತು ಎಂದ. ಸರಿ ಎಂದು 500 ರೂಪಾಯಿ ಕೊಟ್ಟರೆ ಪುನಃ ಕ್ಯಾಲುಕ್ಯುಲೇಟರ್ ತೆಗೆದುಕೊಂಡು 500-235 ಲೆಖ್ಖ ಹಾಕಿ ಚಿಲ್ಲರೆ 265 ರೂಗಳನ್ನು ಹಿಂದಿರುಗಿಸಿದ.
ಮತ್ತೊಂದು ದಿನ ನಮ್ಮ ಮಕ್ಕಳು ಪುಸ್ತಕ, ಪೆನ್ನುಗಳು ಬೇಕು ಎಂದಾಗ ಮಕ್ಕಳಿಗೂ ವ್ಯವಹಾರದ ಜ್ಞಾನ ಬರಲಿ ಎಂದು ಹೈಸ್ಕೂಲ್ ಓದುತ್ತಿದ್ದ ಮಗ ಮತ್ತು ಪ್ರೈಮರಿಯಲ್ಲಿದ್ದ ಮಗಳು ಇಬ್ಬರಿಗೂ ಸೇರಿ 500ರೂಗಳನ್ನು ಕೊಟ್ಟು ನಿಮಗೆ ಬೇಕಾದದ್ದನ್ನು ತೆಗೆದುಕೊಂಡು ಬಿಲ್ ಸಹಿತ ಚಿಲ್ಲರೆ ವಾಪಸ್ಸು ಕೊಡಿ ಎಂದು ತಿಳಿಸಿದೆ. ಅಂಗಡಿಗೆ ಹೋದ ಸ್ವಲ್ಪ ಸಮಯದಲ್ಲಿಯೇ ಹ್ಯಾಪು ಮೊರೆ ಹಾಕಿಕೊಂಡು ಬರೀ ಕೈಯಲ್ಲಿ ಮನೆಗೆ ಹಿಂದಿರುಗಿದರು. ಯಾಕ್ರೋ ಅಂಗಡಿ ತೆಗೆದಿರಲಿಲ್ವಾ ಎಂದು ಕೇಳಿದೆ. ಅದಕ್ಕೆ ಮಗ ಅಂಗಡಿ ತೆಗೆದಿತ್ತು ಎಂದ. ನಿಮಗೆ ಬೇಕಾದದ್ದು ಅಂಗಡಿಯಲ್ಲಿ ಇರಲಿಲ್ವಾ ಎಂದೇ? ಎಲ್ಲಾ ಇತ್ತು ಎಂದಳು ಮಗಳು. ಮತ್ತೇ ಬರೀ ಕೈಯಲ್ಲಿ ಯಾಕೆ ಬಂದ್ರಿ ? ಎಂದು ಮತ್ತೆ ಕೇಳಿದಾಗ, ಎಲ್ಲಾ ಅವನಿಂದಾನೇ ಅಂತಾ ಮಗಳು, ಇಲ್ಲಾಪ್ಪಾ ನಂದೇನೂ ತಪ್ಪಿಲ್ಲ ಎಲ್ಲಾ ಅವಳೇ ಮಾಡಿದ್ದು ಎಂದು ಪರಸ್ಪರ ದೂಷಣೆ ಮಾಡತೊಡಗಿದರು. ನಂತರ ಇಬ್ಬರನ್ನೂ ಸಮಾಧಾನ ಪಡಿಸಿ ನಿಧಾನವಾಗಿ ಕೇಳಿದಾಗ ತಿಳಿದು ಬಂದಿದ್ದೇನೆಂದರೆ, ಕೊಟ್ಟ 500ರೂಗಳನ್ನು ಕೈಯ್ಯಲ್ಲಿ ಹಿಡಿದಿದ್ದ ಮಗ ತನಗೆ ಬೇಕಾದದ್ದನ್ನು ತೆಗೆದುಕೊಳ್ಳುವಾಗ ತಂಗಿಯ ಕೈಗೆ ಹಣವನ್ನು ಕೊಟ್ಟಿದ್ದಾನೆ. ತಂಗಿ ಅವಳಿಗೆ ಬೇಕಾದದ್ದನ್ನು ತೆಗೆದುಕೊಳ್ಳುವಾಗ ಹಣವನ್ನು ಪಕ್ಕಕ್ಕಿಟ್ಟು ಮರೆತು ಬಿಟ್ಟಿದ್ದಾಳೆ. ಯಾರೋ ಅಂಗಡಿಗೆ ಬಂದಿದ್ದವರು ಆ ಹಣವನ್ನು ನೋಡಿ ತೆಗೆದುಕೊಂಡು ಹೋಗಿದ್ದರು. ಅವರಿಬ್ಬರನ್ನು ಸಮಾಧಾನ ಪಡಿಸಿ ಪುನಃ 500ರೂಗಳನ್ನು ಆವರಿಬ್ಬರಿಗೂ ಕೊಟ್ಟು ಜೋಪಾನವಾಗಿ ಹೋಗಿ ತೆಗೆದುಕೊಂಡು ಬನ್ನಿ ಎಂದಾಗ ಇಬ್ಬರೂ ಸಂತೋಷದಿಂದ ಹೋಗಿ ತಮಗೆ ಬೇಕಾದದ್ದನ್ನು ಕೊಂಡು ತಂದು ಚಿಲ್ಲರೆ ಹಿಂದುರಿಗಿಸಿದರು.
ಈ ಎರಡೂ ಪ್ರಸಂಗಗಳನ್ನು ಅವಲೋಕನ ಮಾಡುತ್ತಿದ್ದಾಗ ನನ್ನ ಮನಸ್ಸಿಗೆ ಅನ್ನಿಸಿದ್ದು, ಈ ಶತಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ? ನಮ್ಮ ಹಿರಿಯರು, ವೇದಗಳನ್ನು, ಇಡೀ ಭಗವದ್ಗೀತೆಯ ಜೊತೆಗೆ ನೂರಾರು ಶ್ಲೋಕಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ಅನಕ್ಷರಸ್ಥರಾಗಿದ್ದರೂ ಲಕ್ಷಾಂತರ ಏಕೆ? ಕೊಟ್ಯಾಂತರ ರೂಪಾಯಿಗಳ ವ್ಯವಹಾರವನ್ನು ಬರೀ ಬಾಯಿಮಾತಿನಲ್ಲಿಯೇ ಜೋಪಾನವಾಗಿ ಮಾಡುತ್ತಿದ್ದರೆ ಹೊರತು ಈಗಿನ ತರಹ ಸಣ್ಣ ಪುಟ್ಟ ಸಂಕಲನ ವ್ಯವಕಲನಕ್ಕೂ ಕ್ಯಾಲುಕ್ಲೇಟರ್ ಉಪಯೋಗಿಸುತ್ತಿರಲಿಲ್ಲ.
ಹೌದು. ನಿಜವಾಗಿಯೂ ನಾವು ನಮ್ಮ ಮಕ್ಕಳನ್ನು ರೂಪಿಸಿವುದರಲ್ಲಿ ಖಂಡಿತವಾಗಿಯೂ ಎಡವುತ್ತಿದ್ದೇವೆ.
ಹಿಂದಿನ ಕಾಲದಲ್ಲಿ ನಮ್ಮ ಶಿಕ್ಷಣ ಪದ್ದತಿಯೆಲ್ಲವೂ ನಿಸರ್ಗದ ಅಡಿಯಲ್ಲಿಯೇ ಪ್ರಾಯೋಗಿಕವಾಗಿಯೇ ನಡೆಯುತ್ತಿತ್ತು. ವಯಸ್ಸಿಗೆ ಬಂದ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ದೂರದ ಗುರುಕುಲಕ್ಕೆ ಕಳುಹಿಸುತ್ತಿದ್ದರು ಅಲ್ಲಿ ಬಡವ ಬಲ್ಲದ, ಅರಸ ಆಳು ಎನ್ನುವ ಬೇಧ ಭಾವವಿಲ್ಲದೇ ಎಲ್ಲರಿಗೂ ಸಮಾನರೀತಿಯಾಗಿ 64 ವಿದ್ಯೆಗಳನ್ನೂ ಕಲಿಸುತ್ತಿದ್ದರು. ಪ್ರತಿ ಶಿಕ್ಷಾರ್ಥಿಗಳೂ ಪ್ರತಿ ದಿನ ತಮ್ಮ ಅಕ್ಕ ಪಕ್ಕದ ಊರುಗಳಿಗೆ ಹೋಗಿ ಆ ದಿನಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಭಿಕ್ಷೆ ಬೇಡಿ ತಂದು ಅದರಿಂದ ಜೀವಿಸುತ್ತಿದ್ದರು. ಗುರುಗಳು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪ್ರಕೃತಿಯ ಅಡಿಯಲ್ಲಿರುವ ಎಲ್ಲಾ ಕೆಲಸಗಳನ್ನು ನೀಡಿ ನಂತರ ಆತ ಯಾವ ವಿದ್ಯೆಯಲ್ಲಿ ಹೆಚ್ಚಿನ ಪ್ರಾವೀಣ್ಯತೆ ಗಳಿಸುತ್ತಾನೋ ಅದನ್ನೇ ಮುಂದೆ ತನ್ನ ವೃತ್ತಿಯನ್ನಾಗಿ ಮಾಡಿ ಕೊಂಡು ಜೀವನವನ್ನು ಸಾಗಿಸುತ್ತಿದ್ದರು.
ಅವರೆಲ್ಲರೂ ಅನಕ್ಷರಸ್ಥರಾಗಿದ್ದರೂ, ಎಲ್ಲರಿಗೂ ಲೆಖ್ಖದ ಮಗ್ಗಿ ಕಂಠ ಪಾಠವಾಗಿ, ದೈನಂದಿನ ವ್ಯವಹಾರಕ್ಕೆ ತಕ್ಕಷ್ಟು ಲೆಕ್ಕಾಚಾರ ಬಲ್ಲವರಾಗಿರುತ್ತಿದ್ದರು .ಅವರೆಲ್ಲರಿಗೂ ಶ್ಲೋಕದ ಮುಖೇನ, ಸುಭಾಷಿತ ಮುಖೇನ, ನೀತಿ ಕಥೆಗಳನ್ನು ಹೇಳುವ ಮೂಲಕ ಹಬ್ಬ ಹರಿದಿನಗಳನ್ನು ಆಚರಿಸುವ ಮುಖಾಂತರ ಶಾಸ್ತ್ರ ಸಂಪ್ರದಾಯಗಳನ್ನು ಬದುಕುವ ಜೀವನ ಕಲೆಯನ್ನು ಕಲಿಸಿಕೊಡಲಾಗುತ್ತಿತ್ತು.
ಕಳ್ಳತನ ಮಾಡುವುದು, ಭಿಕ್ಷೆ ಬೇಡುವುದು ಅಪರಾಧ. ಹಾಗಾಗಿ ಎಲ್ಲರೂ ಮೈ ಮುರಿದು ಯಾವುದಾದರೂ ಕೆಲಸ ಮಾಡಿ ದುಡಿದು ತಿನ್ನುವಂತಹ ಆಭ್ಯಾಸವನ್ನು ರೂಢಿಯಲ್ಲಿಟ್ಟಿದ್ದರು.
ಕೆಲವೇ ಕೆಲವು ನೂರು ವರ್ಷಗಳ ಹಿಂದೆ ನಮ್ಮ ದೇಶ ಅತ್ಯಂತ ಸುಭಿಕ್ಷವಾಗಿ ಜಗತ್ತಿನಲ್ಲಿಯೇ ಅತ್ಯಂತ ಒಳ್ಳೆಯ ನಾಗರೀಕತೆ ಹೊಂದಿರುವಂತಹ ಎಲ್ಲರೂ ಸುಖಃ ಶಾಂತಿಯಿಂದ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಂತಹ ರಾಷ್ಟ್ರವಾಗಿತ್ತು. ನಮ್ಮ ನಳಂದ ವಿಶ್ವವಿದ್ಯಾನಿಯಕ್ಕೆ ಅಭ್ಯಾಸಕ್ಕೆಂದು ಬಂದ ಹುಯ್ಯನ್ ಸ್ಯಾಂಗ್ ಮತ್ತು ಪಾಹಿಯಾನ್ ಅಂತಹ ವಿದೇಶಿಗರೇ ಬರೆದಿರುವಂತೆ ಇಡೀ ದೇಶದಲ್ಲಿ ಹುಡುಕಿದರೂ ಒಬ್ಬನೇ ಒಬ್ಬ ಭಿಕ್ಷುಕನನ್ನು ನೋಡಿರಲಿಲ್ಲವಂತೆ. ವಿಜಯನಗರದ ಕಾಲದಲ್ಲಿ ಮುತ್ತು ರತ್ನಗಳನ್ನು ಬಳ್ಳ ಬಳ್ಳಗಳಲ್ಲಿ ಈಗ ರಸ್ತೆಗಳ ಬದಿಯಲ್ಲಿ ತರಕಾರಿ ಮಾರುವಂತೆ ಮಾರುತ್ತಿದ್ದರಂತೆ. ಆದರೆ ನಳಂದ ವಿಶ್ವವಿದ್ಯಾನಿಲಯ ಧಾಳಿಕೋರರ ಬೆಂಕಿಗೆ ಆಹುತಿಯಾಗಿ ಆರು ತಿಂಗಳುಗಳ ಕಾಲ ಸುಟ್ಟುಹೋದ ನಂತರ ಶಿಕ್ಷಣದಲ್ಲಿಯೂ ಕುಂಠಿತವಾಗ ತೊಡಗಿತು. ನಂತರ ವ್ಯಾಪಾರಕ್ಕೆಂದು ಬಂದು ನಮ್ಮ ನಮ್ಮ ಒಳಜಗಳಗಳನ್ನೇ ಆಧಾರವಾಗಿಟ್ಟು ಕೊಂಡು ನಮ್ಮ ನಮ್ಮಲಿಯೇ ಜಗಳತಂದು ದೇಶವನ್ನು ದಾಸ್ಯಕ್ಕೆ ತಳ್ಳಿದ ಬ್ರಿಟೀಷರಿಗೆ ತಮ್ಮ ಆಳ್ವಿಕೆಯನ್ನು ಜಾರಿಗೊಳಿಸಲು ಪ್ರತೀಬಾರಿಯೂ ಇಂಗ್ಲೇಂಡಿನಿಂದ ಜನರನ್ನು ಕರೆತರುವುದು ದುಬಾರಿ ಎನಿಸಿದಾಗಲೇ ಲಾರ್ಡ್ ಮೆಕಾಲೆ ಸರಿಯಾಗಿ ಯೋಚಿಸಿ, ಬಣ್ಣದಲ್ಲಿ ಭಾರತೀಯರು ಬುದ್ಧಿ ಮತ್ತು ಆಲೋಚನೆಯಲ್ಲಿ ಬ್ರಿಟಿಷರಂತೆ ಇರುವಂತೆ ಸ್ಥಳೀಯರನ್ನು ತಯಾರು ಮಾಡಲೆಂದೇ ನಮ್ಮ ಸಂಸ್ಕೃತಿಯ ತಳಹಳಿಯಾದ ಭಧ್ರ ಬುನಾದಿಯಾದ ಗುರುಕುಲದ ವಿದ್ಯಾಭ್ಯಾಸ ಪದ್ದತಿಗೆ ಕೊಡಲಿ ಹಾಕಿ ಪಾಶ್ವ್ಯಾತ್ಯ ರೀತಿಯ ಶಿಕ್ಷಣ ಪದ್ದತಿ ಬಲವಂತವಾಗಿ ಹೇರಿದ ಪರಿಣಾಮವೇ ಇಂದಿನ ಎಲ್ಲಾ ಅದ್ವಾನಗಳಿಗೆ ಮತ್ತು ಅಭಾಸಗಳಿಗೆ ಕಾರಣ ಎಂದರೆ ತಪ್ಪಾಗಲಾರದು.
ಹಿಂದೆಲ್ಲಾ ಪೋಷಕರು ಮನೆಯೇ ಮೊದಲ ಪಾಠ ಶಾಲೆ ಎಂದು ವಿದ್ಯೆಯ ಜೊತೆಗೆ, ಮನೆಯಲ್ಲಿಯೇ ಸಂಗೀತ, ನಾಟಕ, ನೃತ್ಯ ಪಕ್ಕವಾದ್ಯ, ಸಂಸ್ಕೃತ, ವೇದ, ಪುರಾಣ, ಯೋಗ, ಅಡುಗೆ ಮುಂತಾದ ವಿಷಯಗಳಲ್ಲಿ ತಮ್ಮ ಮಕ್ಕಳನ್ನು ತಯಾರು ಮಾಡುತ್ತಿದ್ದರು. ತಮ್ಮ ಮಕ್ಕಳು ಸಮಾಜದಲ್ಲಿ ಒಳ್ಳೆಯ ನಾಗರೀಕರಾಗ ಬೇಕೆಂದು ಬಯಸಿದ್ದರೇ ಹೊರತು ಆವರಿಂದ ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯನ್ನು ಬಯಸುತ್ತಿರಲಿಲ್ಲ.
ಆದರೆ ಇಂದು ಅದಕ್ಕೆ ತದ್ವಿರುದ್ಧವಾಗಿದೆ. ಪ್ರತಿ ಪೋಷಕರೂ, ತಮ್ಮ ತಮ್ಮ ಮಕ್ಕಳು ಆಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲವನ್ನೂ ಬದಿಕೊತ್ತಿ ತಮ್ಮ ಮಕ್ಕಳು ಕೇವಲ ಓದಿದ್ದೇ ಓದುತ್ತಾ ಮಕ್ಕೀಕಾಮಕ್ಕಿ ಉರು ಹೊಡಿಸುವುದನ್ನೇ ವಿದ್ಯಾಭ್ಯಾಸ ಎಂದು ತಿಳಿದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಪೋಷಕರೂ ಅಂಕಗಳ ಹಿಂದೆಯೇ ಬಿದ್ದಿದ್ದಾರೆ. ಮೊದಲೆಲ್ಲಾ ಹಿಂದೆ ಪರೀಕ್ಷೆಗಳಲ್ಲಿ ಪಾಸ್ ಆಗಿದ್ದರೆ ಸಾಕಿತ್ತು. ನಂತರ ಫಸ್ಟ್ ಕ್ಲಾಸ್ ಬಂದರೆ ಓಹೋ ಎನ್ನುತ್ತಿದ್ದರು. ಈಗ ಡಿಸ್ಟಿಂಗ್ಷನ್ ತೆಗೆದುಕೊಂಡರೂ ಅಯ್ಯೋ ಇಷ್ಟೇನಾ? ಈ ಸ್ಪರ್ಥಾತ್ಮಕ ಜಗತ್ತಿನಲ್ಲಿ ಪ್ರತೀ ವಿಷಯದಲ್ಲೂ ನೂರಕ್ಕೆ ನೂರು ಅಂಕವನ್ನೇ ಬ. ಡಾಕ್ಟರ್ ಇಲ್ಲವೇ ಇಂಜೀನಿಯರ್ ಆಗಲೇ ಬೇಕು. ಡಿಗ್ರಿ ಮುಗಿದ ನಂತರ ವಿದೇಶಕ್ಕೆ ಫಲಾಯನ ಮಾಡಿ ಹೆತ್ತ ಅಪ್ಪಾ ಅಮ್ಮನನ್ನು ಮರೆತು ಲಕ್ಷ ಲಕ್ಷ ಸಂಪಾದಿಸ ಬೇಕು ಎಂಬುದನ್ನೇ ಬಯಸುವುದರಿಂದ ವಿದ್ಯಾರ್ಥ್ದಿಗಳ ಮೇಲೆ ಅನಗತ್ಯ ಹೇರಿಕೆಯಾಗುತ್ತಿದೆ. ಬಾಲ್ಯದಿಂದಲೇ ಅವರ ಆಟ, ಸಾಂಸ್ಕೃತಿಯ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಹೇರಲ್ಪಟ್ಟಿರುತ್ತದೆ. ಸದಾಕಾಲವೂ ಪುಸ್ತಕದ ಹುಳುವಾಗಿ, ವಿಷಯವನ್ನು ಅರ್ಥಮಾಡಿಕೊಳ್ಳದೇ, ಉರು ಹೊಡೆದು ಮಕ್ಕೀ ಕಾ ಮಕ್ಕಿಯಾಗಿ ಓದಿದ್ದನ್ನು ಕಕ್ಕಿ ಅಂಕ ಗಳಿಸುವ ಭರದಲ್ಲಿರುತ್ತಾರೆ. ಕೇವಲ ಅಂಕಗಳನ್ನು ಗಳಿಸುವ ಭರದಲ್ಲಿ ಲೋಕ ಜ್ಞಾನ, ವ್ಯಾವಹಾರಿಕ ಜ್ಞಾನ, ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳ ಬಗ್ಗೆ ಕಲಿಯುವ ಆಸಕ್ತಿಯೇ ಇರುವುದಿಲ್ಲವಾದ ಕಾರಣದಿಂದಾಗಿಯೇ ಅಪ್ಪಾ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೂ ಶ್ರಾಧ್ದಕ್ಕೂ ವೆತ್ಯಾಸವೇ ತಿಳಿದಿರುವುದಿಲ್ಲ. ಅಂತೆಯೇ ಅಂಕಗಳಿಸುವುದರಲ್ಲಿ ಒಂದಿಷ್ಟು ಆಚೀಚೆಯಾದರೂ ಅತ್ಯಂತ ದುರ್ಬಲ ಮನಸ್ಸಿನವರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ದುರ್ಬಲ ಹೃದಯಿಗಳನ್ನಾಗಿ ಮಾಡುತ್ತಿದ್ದೇವೆ.
ಗಂಡ ಮತ್ತು ಹೆಂಡತಿ ಇಬ್ಬರೂ ದುಡಿಯುವುದಕ್ಕೆ ಹೋಗುತ್ತಾರೆ. ಕಾಟಾಚಾರಕ್ಕೆ ಮಕ್ಕಳಿಗೆ ಜನ್ಮ ನೀಡಿ, ಅ ಮಕ್ಕಳನ್ನು ಹತ್ತಿರದ ಪ್ಲೇಹೋಮ್ ಗಳಲ್ಲಿ ಬಿಟ್ಟು, ಸ್ವಲ್ಪ ದೊಡ್ಡವರಾದ ಮೇಲೆ ಒಳ್ಳೋಳ್ಳೆ ಶಾಲಾ ಕಾಲೇಜುಗಳಲ್ಲಿ ವಿದ್ಯೆ ಕೊಡಿಸಿ, ಅ ಅವರಿಗೆ ಬೇಕಾದದ್ದೆಲ್ಲವನ್ನೂ ತಿನ್ನಸುತ್ತಾ , ಕಾಲ ಕಾಲಕ್ಕೆ ಕೇಳಿದ್ದನ್ನು ಕೊಡಿಸಿ, ಐಶಾರಾಮ್ಯ ಗಾಡಿಗಳಲ್ಲಿ ಓಡಾಡಿಸಿ, ತಮ್ಮ ಪಾಡಿಗೆ ತಮ್ಮ ಕೆಲಸಗಳಲ್ಲಿ ಮಗ್ನರಾಗಿ ಹೋಗುವುದೇ, ತಂದೆ ಮತ್ತು ತಾಯಿಯರ ಕರ್ತವ್ಯ ಎಂದು ಭಾವಿಸಿರುವುದೇ ದುರದೃಷ್ಟಕರ. ಇನ್ನು ಕೆಲಸದಿಂದ ಮನೆಗೆ ಬಂದ ಕೂಡಲೇ ಮಕ್ಕಳ ಜೊತೆ ಸ್ವಲ್ಪವೂ ಹೊತ್ತು ಸಮಯ ಕಳೆಯದೆ, ಮನೆಗೆ ಬಂದ ತಕ್ಷಣವೇ ಮೊಬೈಲ್ ಇಲ್ಲವೇ ಟಿವಿಯಲ್ಲಿ ಮಗ್ನರಾಗಿ ಹೋಗುವುದನ್ನು ನೋಡುವ ಮಕ್ಕಳು ನೊಲಿ ನಂತೆ ಸೀರೆ, ತಾಯಿಯಂತೆ ಮಗಳು ಎನ್ನುವ ಹಾಗೆ ತಾವೂ ಸಹಾ ತಮ್ಮ ಪೋಷಕರ ಮೇಲೆ ಯಾವುದೇ ರೀತಿಯ ಮಮಕಾರವಿಲ್ಲದೇ ಅವರು ಕೇವಲ ದುಡ್ಡನ್ನು ನೀಡುವ ಎಟಿಎಂ ಮೆಷಿನ್ ಎಂದು ಭಾವಿಸುವಂತಾಗಿದೆ.
ಮಾತೃದೇವೋಭವ, ಪಿತೃದೇವೋಭವ ಅಂತಾ ತಂದೆ ತಾಯಿಯರ ನಂತರದ ಸ್ಥಾನವನ್ನು ಅಚಾರ್ಯದೇವೋಭವ ಎಂದು ಗುರುಗಳಿಗೆ ಮಹತ್ತರ ಸ್ಥಾನವನ್ನು ನಮ್ಮ ಹಿರಿಯರು ಕಲ್ಪಿಸಿದ್ದರು. ಒಂದಕ್ಷರವಂ ಕಲಿಸಿದಾತಂ ಗುರು ಅಂದರೆ ಒಂದು ಅಕ್ಷವನ್ನು ಕಲಿದವರೂ ನಮಗೆ ಗುರುವಾಗುತ್ತಾನೆ ಎಂಬ ನಾಣ್ಣುಡಿ ನಮ್ಮಲ್ಲಿ ಪ್ರಚಲಿತದಲ್ಲಿತ್ತು. ತಂದೆ ತಾಯಿಯರು ಜನ್ಮದಾತರಾಗಿ ನಮ್ಮ ಹೊತ್ತು ಹೆತ್ತು ಪೋಷಿಸಿದರೆ, ನಮ್ಮ ಗುರುಗಳು ನಿಸ್ವಾರ್ಥವಾಗಿ ನಮಗೆ ನಾಲ್ಕಕ್ಷರವನ್ನು ಕಲಿಸುವುದರ ಜೊತೆಗೆ ನಮ್ಮನ್ನು ಒಳ್ಳೆಯ ವ್ಯಕ್ತಿತ್ವಕ್ಕೆ ಕಾರಣೀಭೂತರಾಗುತ್ತಾರೆ. ಗುರುವಿನ ಗುಲಾಮ ನಾಗದ ತನಕ ದೊರೆಯದಣ್ಣ ಮುಕುತಿ ಎನ್ನುವುದನ್ನು ನಮ್ಮ ಮಕ್ಕಳಿಗೆ ಕಲಿಸಿಕೊಡಲಾಗುತ್ತಿತ್ತು. ಆದರೆ ಇಂದು ವಿದ್ಯಾರ್ಥಿಗಳಿಗೆ ಗುರುವಿನ ಮೇಲೆ ಎಳ್ಳಷ್ಟೂ ಭಕ್ತಿ ಭಾವವೇ ಇಲ್ಲದಂತಾಗಿ, ವಿದ್ಯಾರ್ಥಿಗಳು ಗುರುವಿನ ಗುಲಾಮನಾವುದು ಬಿಡಿ ಗುರುವೇ ವಿದ್ಯಾರ್ಥಿಯ ಗುಲಾಮನಾಗುವಂತಹ ಪರಿಸ್ಥಿತಿ ಬಂದೊದಗಿರುವುದೇ ದೌರ್ಭಾಗ್ಯವೇ ಸರಿ.
ಹಿಂದೆಲ್ಲಾ ಈ ರೀತಿಯ ಅಭಾಸಗಳು ಆಗುವುದಕ್ಕೆ ಅವಕಾಶವೇ ಇರದಂತೆ ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಯೇ ಮೊದಲ ಗುರುವಾಗುತ್ತಿದ್ದರು, ಇಲ್ಲವೇ ಬಹುತೇಕವಾಗಿ ಇರುತ್ತಿದ್ದ ಅವಿಭಕ್ತ ಕುಟುಂಬಳಲ್ಲಿ ಮನೆಯಲ್ಲಿರುವ ಹಿರಿಯರಾದ ಅಜ್ಜಿ ತಮ್ಮ ಮೊಮ್ಮಕ್ಕಳನ್ನು ತೊಡೆಯ ಮೇಲೆ ಕುಳ್ಳಸಿಕೊಂಡು ಅವರಿಗೆ ನಮ್ಮ ಪುರಾಣ ಪುರುಷರ ಕಥೆಗಳನ್ನು ಹೇಳುತ್ತಾ ಹಾಡು ಹಸೆಗಳನ್ನು ಹೇಳಿಕೊಡುತ್ತಿದ್ದರೆ , ತಾತ ಅವರ ಮೊಮ್ಮಕ್ಕಳಿಗೆ ಬಾಲ ಪಾಠಗಳನ್ನೂ, ಶ್ಲೋಕಗಳನ್ನು ಶಾಸ್ತ್ರ ಸಂಪ್ರದಾಯಗಳನ್ನೂ ವೀರ ಯೋಧರ, ಸ್ವಾತಂತ್ಯ್ರ ಹೋರಾಟಗಾರರ ಯಶೋಗಾಥೆಯನ್ನು , ಗುರು ಹಿರಿಯರಿಗೆ ಮತ್ತು ಗುರುಗಳಿಗೆ ತಗ್ಗಿ ಬಗ್ಗಿ ನಡೆದುಕೊಂಡು ಅವರು ಹೇಳಿ ಕೊಟ್ಟಿದ್ದನ್ನು ಚಾಚೂ ತಪ್ಪದೇ ಪಾಲಿಸ ಬೇಕೆಂದು ಮಕ್ಕಳಿಗೆ ಅರ್ಥವಾಗುವಂತೆ ಮನನಮಾಡಿಸುತ್ತಿದ್ದರು.
ಆದರೆ ಇಂದು ಅದೆಲ್ಲವನ್ನು ಮರೆತು ಪ್ರತೀ ಕೆಲವನ್ನೂ ಸರ್ಕಾರವೇ ಮಾಡಲೀ ಎಂದೋ ಎಲ್ಲಾ ಸವಲತ್ತುಗಳನ್ನು ಸರ್ಕಾರವೇ ಮಾಡಿ ಕೊಡಬೇಕು ಅಂತಾನೇ ಯೋಚಿಸುತ್ತಾ ನಮ್ಮ ಮಕ್ಕಳಿಗೆ ಸ್ವಾಭಿಮಾನಿಗಳಾಗಿ, ಸ್ವಾವಲಂಭಿಗಳಾಗಿ ಲೋಕಜ್ಞಾನವನ್ನು ರೂಢಿ ಮಾಡಿಸದಿರುವುದೇ ಈ ಎಲ್ಲಾ ಅವನತಿಗೆ ಕಾರಣವಾಗಿದೆ.
ಮಕ್ಕಳು ನಾಲ್ಕಾರು ಪದವಿ ಪಡೆದಿದ್ದರೇನು? ವಿದೇಶದಲ್ಲಿ ಓದಿದ್ದರೇನು?
ವಿನಯ ಮತ್ತು ವಿವೇಚನೆ ಇಲ್ಲದಿದ್ದರೆ, ಪಡೆದ ವಿದ್ಯೆಯೆಲ್ಲವೂ ತೃಣಕ್ಕೆ ಸಮಾನ
ಮಕ್ಕಳಿಗೆ ವಿದ್ಯೆಯ ಜೊತೆಗೆ ವಿನಯ ಮತ್ತು ವಿವೇಚನೆ ಹೆಚ್ಚಿಸುವತ್ತ ಹರಿಸೋಣ ಚಿತ್ತ.
ಮಕ್ಕಳಿಗೆ ನಾವು ಕಲಿಯುತ್ತಿರುವ ವಿದ್ಯೆ , ಕೇವಲ ಡಿಗ್ರಿ ಪಡೆದು
ನೌಕರಿ ಗಿಟ್ಟಿಸಿ ಐದಂಕಿಯ ಸಂಬಳ ಪಡೆಯುವುದಕ್ಕಲ್ಲ
ಅವರು ಕಲಿತ ಡಿಗ್ರಿಗಳು ಕೆಲ ಸಮಯ ಉಪಯೋಗಕ್ಕೆ ಬಾರದಿದ್ದರೂ,
ಸಾಮಾನ್ಯ ಜ್ಞಾನ ಜೀವನದಲ್ಲಿ ಖಂಡಿತಾ ಉಪಯೋಗಕ್ಕೆ ಬಂದೇ ಬರುತ್ತದೆ.
ಆದ ಕಾರಣ, ನಮ್ಮ ಮಕ್ಕಳಿಗೆ ವಿದ್ಯೆಯ ಜೊತೆ ಸಾಮಾನ್ಯ ಜ್ಞಾನಾರ್ಜನೆಯನ್ನು ಹೆಚ್ಚಿಸೋಣ
ಸಮಾಜದಲ್ಲಿ ವಿವೇಕವಂತರಾಗಿ, ಸತ್ಪ್ರಜೆಯಾಗಿ, ನೆಮ್ಮದಿಯ ಜೀವನ ನಡೆಸುವಂತೆ ಮಾಡೋಣ.
ದುಡ್ಡಿನಿಂದ ಏನು ಬೇಕಾದರೂ ಕೊಂಡು ಕೊಳ್ಳಬಹುದು
ಏಂದು ಎಣಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು.
ದುಡ್ದಿನಿಂದ ಆಸ್ತಿ ಪಾಸ್ತಿ ಕೊಳ್ಳಬಹುದೇ ಹೊರತು ಮನ ಶಾಂತಿಯನ್ನಲ್ಲಾ
ಆತ್ಮ ಸಂತೃಪ್ತಿಯ ಮುಂದೆ ಕೋಟ್ಯಾಂತರ ರೂಪಾಯಿಯೂ ನಗಣ್ಯ.
ಇಂದಿನ ಮಕ್ಕಳಿಗೆ ಆತ್ಮವಿಶ್ವಾಸ ಮತ್ತು ವ್ಯವಹಾರ ಜ್ಞಾನವೇ ಇಲ್ಲದಂತಾಗಿ ಪ್ರತಿಯೊಂದಕ್ಕೂ ಪರಾವಲಂಭಿಗಳಾಗಿಯೇ ಇರುತ್ತಾರೆ. ಭಟ್ಟರ ಲೈಫು ಇಷ್ಟೇನ ಹಾಡಿನಲ್ಲಿ ಹೇಳಿದಂತೆ ಮನೆಯಲ್ಲಿ ಇಲಿ ಹೊಕ್ಕಿದರೆ ಅದನ್ನು ಹಿಡಿಯುವುದು ಹೇಗೆ ಎಂಬುದಕ್ಕೂ ಇಂಟರ್ನೆಟ್ ಹುಡುಕುವಂತಹ ಬೌಧ್ಧಿಕ ದೌರ್ಭಲ್ಯಕ್ಕೆ ಒಳಗಾಗಿರುವುದು ನೋಡಿದರೆ ನಿಜಕ್ಕೂ ನಮ್ಮ ಮಕ್ಕಳಿಗೆ ಈಗ ಹೇಳಿ ಕೊಡುವುದರಲ್ಲಿ ನಾವು ಎಡುವುತ್ತಿದ್ದೇವೆ ಎಂದನಿಸುತ್ತಿದೆಯಲ್ಲವೇ?
ಏನಂತೀರೀ?