ಪ್ರತಿದಿನ ಮಧ್ಯಾಹ್ನ ನಮ್ಮ ಕಛೇರಿಯ ಊಟದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದನ್ನು ಬಹಳ ವರ್ಷಗಳಿಂದ ರೂಢಿ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಒಬ್ಬರು ಪ್ರತಿದಿನವೂ ಅವರ ಮನೆಯಾಕಿ ಶ್ರಧ್ದೆಯಿಂದ ಪ್ರೀತಿಯಿಂದ ಅಡುಗೆ ಮಾಡಿ ಊಟದ ಡಬ್ಬಿಯನ್ನು ಕಟ್ಟಿ ಕಳುಹಿಸಿದ್ದರೂ ಅದೇಕೋ ಏನೋ ಬಹಳಷ್ಟು ಬಾರಿ ಯಾರು ಹೋಟೆಲ್ನಿಂದ ಊಟ ತರಿಸಿರುತ್ತಾರೋ ಅವರಿಗೆ ತಮ್ಮ ಮನೆಯ ಊಟವನ್ನು ಕೊಟ್ಟು ತಾವು ಹೋಟೆಲ್ ಊಟ ಮಾಡುತ್ತಾರೆ. ಕುತೂಹಲದಿಂದ ಹಾಗೇಕೆ ಮಾಡುತ್ತೀರೆಂದು ಕೇಳಿದರೆ ಇದು ಒಂದು ಊಟವೇ ಒಳ್ಳೇ ದನದ ಆಹಾರ ಇದ್ದ ಹಾಗೆ ಇದೆ ಎನ್ನುತ್ತಾರೆ. ನಿಜವಾಗಲೂ ಆವರ ಮನೆಯ ಅಡುಗೆ ತುಂಬಾನೇ ರುಚಿಯಾಗಿರುತ್ತದೆ. ಈ ವಿಷಯವನ್ನು ಹೇಳಲು ಹೊರಟಾಗಲೇ ನಮ್ಮ ತಂದೆಯವರ ದೊಡ್ಡಪ್ಪನವರ ಇದೇ ರೀತಿಯ ಒಂದು ಮೋಜಿನ ಪ್ರಸಂಗವನ್ನು ಎಲ್ಲರೊಂದಿಗೆ ಹಂಚಿ ಕೊಳ್ಳಲೇ ಬೇಕೆನಿಸಿತು.
ಅಂದಿನ ಕಾಲಕ್ಕೆ ನಮ್ಮೂರು ಸುಮಾರು ನೂರು ನೂರೈವತ್ತು ಮನೆಗಳಿರುವ ಸಣ್ಣ ಹಳ್ಳಿ, ಅ ಕಾಲದಲ್ಲಿ ನಮ್ಮದೇ ಸಂಬಂಧೀಕರ ಸುಮಾರು ಎಂಟು ಹತ್ತು ಮನೆಗಳಿದ್ದವು. ಅದೊಮ್ಮೆ ನಮ್ಮ ತಂದೆಯವರ ತಂದೆ ಅಂದರೆ ನಮ್ಮ ತಾತ ಮತ್ತು ಅವರ ಅಣ್ಣ ರಾಮಯ್ಯನವರು ಯಾವುದೋ ಕೆಲಸದ ನಿಮಿತ್ತ ಪರ ಊರಿಗೆ ಮೂರ್ನಾಲ್ಕು ದಿನ ಹೋಗಿದ್ದರು. ಮನೆಯ ಗಂಡಸರು ಇಲ್ಲದಿದ್ದಾಗ ಅಡುಗೆ ಮಾಡಲು ಮನಸ್ಸೊಪ್ಪದ ಹೆಂಗಸರು ಗೊಡ್ಡುಸಾರು, ಉಪ್ಪು ಮೆಣಸಿನಪುಡಿ, ಮೆಂತ್ಯದ ಹಿಟ್ಟು ಹೀಗೇ ಏನೋ ಮಾಡಿಕೊಂಡು ದಿನಕಳೆಯುತ್ತಿದ್ದರು. ಹೋದ ಕೆಲಸ ಬೇಗನೆ ಮುಗಿದು, ಅಣ್ಣಾ ತಮ್ಮ ಇದ್ದಕ್ಕಿದ್ದಂತೆಯೇ ಮಟ ಮಟ ಮಧ್ಯಾಹ್ನ ಉರಿ ಬಿಸಿಲಿನಲ್ಲಿ ಬಂದು ಕೈಕಾಲು ತೊಳೆದುಕೊಂಡು ಲೇ!! ಇವಳೇ!! ತಟ್ಟೆ ಹಾಕ್ತೀಯಾ? ಹೊಟ್ಟೆ ತುಂಬಾನೇ ಹಸಿವಾಗುತ್ತಿದೆ ಎಂದಾಗ, ಮನೆಯಲ್ಲಿದ್ದ ಓರಗಿತ್ತಿಯರಿಗೆ ದಿಕ್ಕೇ ತೋಚದಂತಾಯಿತು. ಕಡೆಗೆ ನಮ್ಮ ಅಜ್ಜಿಯೇ ಸ್ವಲ್ಪ ಬುದ್ಧಿ ಓಡಿಸಿ. ಸ್ವಲ್ಪ ಇರಿ ಅನ್ನಕ್ಕೆ ಇಟ್ಟಿದ್ದೀವಿ ಒಂದು ಹತ್ತು ನಿಮಿಷ ಅನ್ನ ಆದ ಕೂಡಲೇ ಬಿಸಿ ಬಿಸಿ ಊಟ ಮಾಡುವಿರಂತೆ ಎಂದು ಹೇಳಿ, ಕೂಡಲೇ ಅನ್ನಕ್ಕೆ ಸೌದೇ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ತಮ್ಮ ಅಕ್ಕನಿಗೆ ನೋಡಿ ಕೊಳ್ಳಲು ಹೇಳಿ ಹಿತ್ತಲ ಬಾಗಿಲಿನಿಂದ ಹೊರ ಹೋಗಿ ಅಲ್ಲಿಯೇ ಸ್ವಲ್ಪ ದೂರದಲ್ಲಿಯೇ ಇದ್ದ ನಮ್ಮ ಮತ್ತೊಬ್ಬ ಸಂಬಂಧೀಕರಾದ ಸುಬ್ಬಮ್ಮನವರ ಮನೆಗೆ ಬಂದು ಲೇ ಸುಬ್ಬು, ಸ್ವಲ್ಪ ಸಾರೋ ಇಲ್ಲವೇ ಹುಳಿನೋ ಮಾಡಿದ್ರೆ ಕೊಡೇ, ನಮ್ಮನೆಲೀ ಗಂಡಸರು ಯಾರೂ ಇಲ್ಲಾ ಅಂತ ಅಡುಗೆನೇ ಮಾಡಿಲ್ಲ . ಈಗ ನೋಡಿದರೆ ಇಬ್ಬರೂ ಬಂದು ಬಿಟ್ಟಿದ್ದಾರೆ ಎಂದಾಗ, ಅನ್ನಪೂರ್ಣೆ ಸುಬ್ಬಮ್ಮನವರೂ ಮರುಮಾತಿಲ್ಲದೇ ತಮ್ಮದೇ ಮನೆಯ ಪಾತ್ರೆಯೊಂದರಲ್ಲಿ ಮಾಡಿದ್ದ ಹುಳಿಯನ್ನು ಕೊಟ್ಟರು. ಬದುಕಿದೆಯಾ ಬಡಜೀವ ಎಂದು ಸೆರಗಿನಲ್ಲಿ ಪಾತ್ರೆಯನ್ನು ಮುಚ್ಚಿಟ್ಟುಕೊಂಡು ಪುನಃ ಹಿತ್ತಲಿನ ಬಾಗಿಲಿನಿಂದ ಮನೆಗೆ ಬರುವಷ್ಟರಲ್ಲಿ ಅನ್ನವೂ ಸಿದ್ಧವಾಗಿ ಮನೆಯವರಿಗೂ ಮತ್ತು ಭಾವನವರಿಗೂ ಬಿಸಿ ಬಿಸಿ ಅಡುಗೆಯನ್ನು ಬಡಿಸಿದರು. ಮೊದಲೇ ಹೊಟ್ಟೆ ಹಸಿದಿದ್ದ ಅಣ್ಣ ತಮ್ಮಂದಿರಿಬ್ಬರೂ ಗಬ ಗಬನೆ ತಿಂದು ಮುಗಿಸಿ ಡರ್ ಎಂದು ತೇಗಿ ಎದ್ದಿದ್ದರು.
ಮಾರನೇಯ ದಿನ ಅದೇ ರೀತೀ ಅಣ್ಣ ತಮ್ಮಂದಿರಿಬ್ಬರೂ ಊಟಕ್ಕೆ ಕುಳಿತಿದ್ದಾಗ, ಒಂದೆರಡು ತುತ್ತನ್ನು ಬಾಯಿಗಿಟ್ಟ ನಮ್ಮ ದೊಡ್ಡ ತಾತ ರಾಮಯ್ಯನವರು ಅರೇ ಇಂದೇಕೋ ರುಚಿ ಬೇರೆ ರೀತಿಯಾಗಿ ಇದೆಯಲ್ಲಾ? ನೆನ್ನೆ ಮಾಡಿದ್ದ ಹುಳಿ ಅಧ್ಭುತವಾಗಿತ್ತು. ಇವತ್ತೇಕೆ ಹೀಗಿದೆ ಎಂದು ಕೇಳಿದರು. ಸುಳ್ಳು ಹೇಳಲು ಬಾರದ ನಮ್ಮ ದೊಡ್ಡ ಅಜ್ಜಿಯವರು ನೆನ್ನೆ ತಿಂದಿದ್ದು ನಮ್ಮಮನೆ ಹುಳಿಯಲ್ಲ, ಅದು ಸುಬ್ಬು ಮನೆ ಹುಳಿ ಎಂದು ಬಾಯ್ತಪ್ಪಿ ಹೇಳಿಯೇ ಬಿಟ್ಟರು. ನಮ್ಮ ಅಜ್ಜಿ ಹಾಗೆ ಹೇಳಿದ್ದೇ ಸಾಕಾಯ್ತು. ಅಂದಿನಿಂದ ಪ್ರತಿದಿನವೂ ನಮ್ಮ ದೊಡ್ಡ ತಾತ ಸುಬ್ಬು ಮನೆ ಹುಳಿಯೋ ಇಲ್ಲವೇ ಸಾರೋ ಬೇಕೇ ಬೇಕು ಎಂದು ಒಂದು ರೀತಿಯ ಹಠ ಮಾಡುತ್ತಿದ್ದರು. ಸರಿ ಮನೆಯವರು ಊಟ ಮಾಡುವುದಿಲ್ಲವಲ್ಲಾ ಎಂದು ಬೇಸರದಿಂದಲೇ ನಮ್ಮ ಮನೆಯ ಸಾರನ್ನು ಅವರ ಮನೆಗೆ ಕೊಟ್ಟು ಅವರ ಮನೆಯ ಅಡುಗೆಯನ್ನು ನಮ್ಮ ಮನೆಗೆ ತಂದು ಬಡಿಸುವುದನ್ನು ರೂಢಿ ಮಾಡಿಕೊಂಡರು. ಏನೋ? ಒಂದೆರಡು ದಿನ ಆದರೆ ಪರವಾಗಿಲ್ಲ ಅದನ್ನೇ ದುರಭ್ಯಾಸ ಮಾಡಿಕೊಂಡ ನಮ್ಮ ದೊಡ್ಡ ತಾತನವರ ಈ ಮೊಂಡು ಹಠಕ್ಕೆ ತಕ್ಕ ಪಾಠವನ್ನು ಕಲಿಸಲೇ ಬೇಕು ಎಂದು ನಮ್ಮ ಅಜ್ಜಿಯರಿಬ್ಬರೂ ಯೋಚಿಸುತ್ತಲೇ ಇದ್ದಾಗ ಅವರಿಗೊಂದು ಅದ್ಭುತ ಉಪಾಯ ಹೊಳದೇ ಬಿಟ್ಟಿತು.
ಎಂದಿನಂತೆ ನಮ್ಮ ಅಜ್ಜಿ ಮಧ್ಯಾಹ್ನ ಸುಬ್ಬಮ್ಮನವರ ಮನೆಗೆ ನಮ್ಮ ಮನೆ ಹುಳಿ ಕೊಟ್ಟು ಅವರ ಮನೆಯ ತೆಗೆದುಕೊಂಡು ಬರಲು ಹೋಗಿದ್ದನ್ನು ನಮ್ಮ ದೊಡ್ದ ತಾತನವರು ನೋಡುತ್ತಲೇ ಇದ್ದರು. ಆದರೆ ನಮ್ಮಜ್ಜಿ ಅಂದು ಸ್ವಲ್ಪ ಬದಲಾವಣೆ ಮಾಡಿದ್ದರು. ನಮ್ಮ ಅಜ್ಜಿ ಖಾಲಿ ಪಾತ್ರೆಯೊಂದನ್ನು ತೆಗೆದುಕೊಂಡು ಹೋಗಿ ಅದನ್ನು ಸುಬ್ಬಮ್ಮನವರಿಗೆ ಕೊಟ್ಟು ಅವರ ಮನೆಯಿಂದ ಒಂದು ಪಾತೆಯನ್ನು ಇಸ್ಕೊಂಡು ಮನೆಗೆ ಬಂದು ಅದೇ ಪಾತ್ರೆಯಲ್ಲಿ ನಮ್ಮ ಮನಯದ್ದೇ ಹುಳಿಯನ್ನು ಹಾಕಿ ಊಟಕ್ಕೆ ಬಡಿಸಿದರು. ಸುಬ್ಬನ್ನವರ ಮನೆಯ ಪಾತ್ರೆ ನೋಡುತ್ತಿದ್ದಂತೆಯೇ, ನಮ್ಮ ದೊಡ್ಡ ತಾತನವರ ಮುಖ ಇಷ್ಟಗಲ ಅರಳಿ, ಊಟಕ್ಕೆ ಕುಳಿತು ಭೇಷ್! ಭೇಷ್! ವಾಹ್! ಎಷ್ಟು ಚೆನ್ನಾಗಿ ಮಾಡಿದ್ದಾಳೆ ನೋಡು ಸುಬ್ಬು. ನೀವು ಇಬ್ಬರು ಇದ್ದೀರಿ ದಂಡಕ್ಕೆ. ಒಳ್ಳೇ ಕಲಗಚ್ಚಿನ ತರಹ ಹುಳೀ ಸಾರು ಮಾಡ್ತೀರಿ. ಹೋಗಿ ಸುಬ್ಬು ಮನೆಗೆ ಹೋಗೆ ಅದು ಹೇಗೆ ಮಾಡ್ತಾಳೇ ಅಂತಾ ತಿಳ್ಕೊಂಡು ಬನ್ನಿ ಎಂಬ ಮಾತು. ಸರಿ ಬಿಡಿ ನಿಮಗೆಲ್ಲಿ ಅವಳ ರೀತಿ ಮಾಡೋದಿಕ್ಕೆ ಬರುತ್ತೆ. ಸುಮ್ಮನೆ ಇಸ್ಕೊಂಡು ಬನ್ನಿ ಸಾಕು ಎಂದು ಹೇಳುತ್ತಿದ್ದರೆ ನಮ್ಮ ಅಜ್ಜಿಯರಿಬ್ಬರೂ ತಲೆಯ ಮೇಲೆ ಸೆರಗು ಹಾಕಿಕೊಂಡು ಮುಸಿ ಮುಸಿ ನಕ್ಕಿದ್ದೇ ನಕ್ಕಿದ್ದು ನಮ್ಮ ದೊಡ್ಡ ತಾತನವರಿಗೆ ಗೊತ್ತೇ ಆಗಿರಲಿಲ್ಲ. ತಾವು ಮಾಡಿದ ಉಪಾಯ ಗೊತ್ತಾಗದಿರಲೆಂದೇ ನಮ್ಮ ದೊದ್ಡ ತಾತನವರಿಗೆ ಮಾತ್ರವೇ ಪತ್ಯೇಕವಾಗಿ ಊಟ ಹಾಕುತ್ತಿದ್ದರು.
ಇದೇ ನಾಟಕ ಅನೇಕ ದಿನಗಳವರೆಗೆ ಮುಂದುವರಿದು ಅದೊಂದು ದಿನ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುವಾಗ ಸುಬ್ಬಬ್ಬನವರ ಮನೆಯ ಪಾತ್ರೆಯಲ್ಲಿದ್ದ ಸಾರು ಖಾಲಿಯಾಗಿದ್ದಾಗ ಮತ್ತೊಂದು ಪಾತ್ರೆಯಿಂದ ಸಾರನ್ನು ಬಡಿಸಿದಾಗ ಅರೇ ಇದೇನಿದೂ ಎರಡೂ ಸಾರೂ ಒಂದೇ ರುಚಿ ಇದೆಯಲ್ಲಾ ಎಂದಾಗ ಅದುವರೆಗೂ ಮುಚ್ಚಿಟ್ಟುಕೊಂಡು ಬಂದಿದ್ದ ಗುಟ್ಟನ್ನು ರಟ್ಟು ಮಾಡಲೇ ವೇಕಾಯಿತು. ವಿಷಯ ತಿಳಿದು ರಾಮಯ್ಯನವರು ಎಲ್ಲಿ ರಂಪ ರಾಮಾಯಣವನ್ನು ಮಾಡಿಬಿಡುತ್ತಾರೋ ಎಂದು ಅಜ್ಜಿಯಂದಿರು ಭಯದಿಂದಲೇ ಕೆಕ್ಕರಿಸಿ ಅವರನ್ನೇ ನೋಡುತ್ತಿದ್ದರೆ, ಇಷ್ಟು ದಿನ ತಾನು ಬೇಸ್ತು ಬಿದ್ದೆನಲ್ಲಾ ಎಂದೂ ಮತ್ತು ತಮ್ಮ ಮನೆಯ ಅಡುಗೆಯೇ ಇಶ್ಘೊಂಡು ರುಚಿಯಾಗಿ ಇರುವಾಗ ಕಂಡೋರ ಮನೆಯ ಆಡುಗೆಗೆ ದಾಕರ ಪಡುತ್ತಿದ್ದೆನಲ್ಲಾ ಎಂದು ಅವರ ಮೇಲೆ ಅವರಿಗೇ ಬೇಸರವಾಗಿ ಅ ವಿಷಯವನ್ನು ಹೆಚ್ಚು ಮುಂದುವರೆಸದಿದ್ದಾಗ, ಬದುಕಿದೆಯಾ ಬಡ ಜೀವ ಎಂದು ನಮ್ಮ ಅಜ್ಜಿಯರಿಬ್ಬರೂ ನಿಟ್ಟುಸಿರು ಬಿಟ್ಟಿದ್ದರಂತೆ.
ನಮ್ಮ ಅಜ್ಜಿಯರು ಅಂದಿನ ಕಾಲಕ್ಕೆ ಹೆಚ್ಚೇನೂ ಓದಿರಲಿಲ್ಲ, ಮೂರೋ ಇಲ್ಲವೇ ನಾಲ್ಕನೇ ಕ್ಲಾಸಿಗೇ ಶಾಲೆ ಬಿಡಿಸಿ ಮನೆಯಲ್ಲಿಯೇ ಹಾಡು, ಹಸೆ, ಅಡುಗೆ ಕಲಿತಿದ್ದರೂ,ಲೋಕಜ್ಞಾನ, ವ್ಯವಹಾರದ ಕುಶಲತೆ ಮತ್ತು ಬುದ್ಧಿವಂತಿಕೆಯಲ್ಲಿ ಡಿಗ್ರಿ ಓದಿದವರಿಗಿಂತಲೂ ಒಂದು ಕೈ ಹೆಚ್ಚು ಎಂದು ಈ ಪ್ರಸಂಗದಲ್ಲೇ ತೋರಿಸಿಕೊಟ್ಟಿದ್ದರು. ಅದಕ್ಕೇ ಹೇಳುವುದು ಹೆಣ್ಣು ಸಂಸಾರದ ಕಣ್ಣು ಎಂದು
ಏನಂತೀರೀ?
ಸೊಗಸಾದ ಬರಹ, ನಮ್ಮಲ್ಲೂ ಹಾಗೇನೇ ನೆರಮನೆ ಪದಾರ್ಥಗಳನ್ನು ಇಷ್ಟಪಟ್ಟು ತಿಂತಾಯಿದ್ದೆವು
LikeLike