ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ! ಅಂದರೆ ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳಿರುತ್ತಾರೆ. ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆ ಎಂದು ಹೇಳುವ ಮೂಲಕ ಜಗತ್ತಿನ ಬೇರಾವ ಸಂಸ್ಕೃತಿಯೂ ನೀಡದಂತಹ ಪೂಜ್ಯಸ್ಥಾನವನ್ನು ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ನೀಡುತ್ತೇವೆಯಾದರೂ ನಮ್ಮಲ್ಲಿ ಅಂದಿನಿಂದಲೂ ಇಂದಿನವರೆಗೂ ಪುರುಷಪ್ರಧಾನವಾದ ಸಮಾಜವೇ. ವಂಶೋದ್ಧಾರಕ್ಕೆ ಗಂಡು ಮಕ್ಕಳೇ ಬೇಕು ಎಂದು ಬಯಸಿ, ಕಂಡ ಕಂಡ ದೇವರುಗಳಲ್ಲಿ ಸೆರಗೊಡ್ಡಿ, ಹರಕೆಯೊಡ್ಡಿ ಗಂಡು ಮಕ್ಕಳು ಆಗುವವರೆಗೂ ಸಂತಾನವನ್ನು ಬೆಳೆಸುತ್ತಲೇ ಹೋಗುವ ಪದ್ದತಿ ಇಂದಿಗೂ ನಮ್ಮ ಕಣ್ಣ ಮುಂದೆ ಕಾಣಸಿಗುತ್ತದೆ.
ಇದಕ್ಕೆ ನಮ್ಮ ಕುಟುಂಬವೂ ಹೊರತಾಗಿರಲಿಲ್ಲ. ಆದಾಗಲೇ ಮುದ್ದಾದ ಮಗಳಿದ್ದರೂ ಅವಳಿಗೆ ಮುಂದೆ ಆಸರೆಯಾಗುವಂತೆ ಮತ್ತೊಂದು ಮಗು ಬೇಕು ಎಂದು ನಾವಿಬ್ಬರೂ ನಿರ್ಧರಿಸಿದ್ದವೇ ಹೊರತು ಗಂಡು ಮಗುವೇ ಬೇಕೆಂದು ಎಂದೂ ಬಯಸದಿದ್ದರೂ, ನಮ್ಮ ಪೋಷಕರಿಗೆ ಎರಡನೆಯ ಮಗು ಗಂಡೇ ಆದರೆ ಚೆನ್ನಾ ಎಂದು ಆಗಲೇ ನಿರ್ಧರಿಸಿಯಾಗಿತ್ತು. ಅದಕ್ಕೆ ಬೇಕಾದ ರೀತಿಯ ವಾಸ್ತು ಬದಲಾವಣೆಗಳನ್ನೂ ಸದ್ದಿಲ್ಲದೇ ಮಾಡಿಯೂ ಬಿಟ್ಟಿದ್ದರು. ಮಗಳಿಗೆ ತಮ್ಮ ಬೇಕೋ, ತಂಗಿ ಬೇಕೋ ಎಂದು ಕೇಳಿದರೆ ಛಕ್ಕನೆ, ತಮ್ಮನೇ ಬೇಕು ಎನ್ನುವುದನ್ನೂ ಹೇಳಿ ಕೊಟ್ಟು ಬಿಟ್ಟಿದ್ದರು ತಾತ ಮತ್ತು ಅಜ್ಜಿ.
ಆದರೆ ಇದಕ್ಕೆ ತದ್ವಿರುದ್ಧವಾಗಿ ನನ್ನ ಮಡದಿ ಪ್ರತೀ ಬಾರಿಯೂ ನಿಮಗೆ ಮತ್ತೊಂದು ಹೆಣ್ಣು ಮಗುವಾದರೇ ಬೇಜಾರಿಲ್ಲ ತಾನೇ? ನೀವು ನನ್ನನ್ನು ದೂಷಿಸುವುದಿಲ್ಲ ತಾನೇ? ಮತ್ತೊಂದು ಮಗುವೂ ಹೆಣ್ಣಾದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ನೀವು ಯಾವರೀತಿಯಲ್ಲಿ ಸ್ಪಂದಿಸುತ್ತೀರಿ? ಎಂದು ಪದೇ ಪದೇ ನನ್ನನ್ನು ಕೇಳುತ್ತಾ ನಮಗೆ ಹುಟ್ಟುವ ಮಗುವು ಗಂಡಾಗಲೀ, ಹೆಣ್ಣಾಗಲೀ ಮಕ್ಕಳೆರಡಿರಲಿ ಎನ್ನುವ ನಮ್ಮ ಭಾವನೆ ಮನಸ್ಸಿಲ್ಲಿ ಎರಕವಾಗುವಂತೆ ಮಾಡಿದ್ದಳು.
ದೇವರ ದಯೆ, ಗುರು ಹಿರಿಯರ ಆಶೀರ್ವಾದಿಂದ ನಮ್ಮ ಪೋಷಕರ ಆಶೆಯಂತೆಯೇ ಹದಿನಾರು ವರ್ಷಗಳ ಹಿಂದೆ 18 ಡಿಸೆಂಬರ್, 2003, ಮಧ್ಯಾಹ್ನ ಸುಮಾರು 2 ಗಂಟೆಯ ಆಸು ಪಾಸಿನ ಹೊತ್ತಿಗೆ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತಾ, ತೊಂಡೇ ಹಣ್ಣಿನಂತೆ ಕೆಂಪಾಗಿದ್ದ, ಉದ್ದ ನಾಸಿಕದ ಗಂಡು ಮಗುವನ್ನು ದಾದಿಯವರು ನಮ್ಮ ತಾಯಿಯ ಕೈಗಿತ್ತೊಡನೆಯೇ ನಮ್ಮ ಪೋಷಕರ ಆನಂದ ಹೇಳ ತೀರದು. ಸುಮ್ಮನೆ ನಮ್ಮ ತಂದೆ ತಾಯಿಯರ ಕಾಲೆಳೆಯಲು, ಅರೇ ಸ್ವಲ್ಪ ವಿಚಾರಿಸಿ ನೋಡೀ ಬೇರೆಯವರ ಮನೆಯ ಗಂಡು ಮಗುವನ್ನು ತಂದು ಕೊಟ್ಟಿರಬಹುದೇನೋ ಎಂದು ಕಿಚಾಯಿಸಿದಾಗ, ಅಬ್ಬಬ್ಬಾ ಅದು ಹೇಗೆ ಆಗುತ್ತೇ? ನೋಡು ಕಣ್ಣು ಮೂಗು ಬಾಯಿ ಎಲ್ಲವೂ ಥೇಟ್ ನಿನ್ನ ತರಹವೇ ಇದೆ. ಅದೂ ಅಲ್ಲದೇ ಇವತ್ತು ಇಡೀ ದಿನ ಇದೊಂದೇ ಮಗು ಈ ಆಸ್ಪತ್ರೆಯಲ್ಲಿ ಹುಟ್ಟಿರೋದು ಎಂಬ ಸಮಜಾಯಿಷಿ ಬೇರೆ.
ಕೇವಲ ಮೂರು ವಾರಗಳ ಹಿಂದೆಯಷ್ಟೇ ಮನೆಕಟ್ಟಿ ಗೃಹಪ್ರವೇಶ ಮಾಡಿ ಆರ್ಥಿಕವಾಗಿ ಬಸವಳಿದಿದ್ದ ನನಗೆ ಗಂಡು ಮಗು ಎಂದು ಧಾಂ ಧೂಂ ಎಂದು ಖರ್ಚುಮಾಡಿ ನಾಮಕರಣ ಮಾಡಿ ಎಲ್ಲರನ್ನೂ ಕರೆಯಲು ಸಾಧ್ಯವಿಲ್ಲ ಎಂದು ಖಡಾಕಂಡಿತವಾಗಿ ಹೇಳಿದಾಗ ಒಲ್ಲದ ಮನಸ್ಸಿನಿಂದಲೇ ಮನೆಯ ಮಟ್ಟಿಗೆ ನಾಮಕರಣ ಮಾಡಲು ಒಪ್ಪಿಕೊಂಡು, ಸರಿಯಾಗಿ ಹನ್ನೊಂದನೇ ದಿನ 93 ವರ್ಷದ ಮುತ್ತಜ್ಜಿಯ ತೊಡೆಯ ಮೇಲೆಯೇ ಮಗುವಿಗೆ ಸಾಗರ್ ಎಂದು ನಾಮಕರಣ ಮಾಡಿದ್ದೆವು.



ನಮ್ಮ ಮಕ್ಕಳ ಹೆಸರು ಮತ್ತು ಮನೆಯ ಹೆಸರಿನ ಹಿಂದಿನ ತರ್ಕವೇ ರೋಚಕವಾಗಿದೆ. ಮಗಳು ಸೃಷ್ಟಿ ಎಂದರೆ ನಿರಂತರ ಎಂದರ್ಥ. ಮನೆ ಸಂಭ್ರಮ ಎಂದರೆ ಸದಾ ಆನಂದದಿಂದ ಇರುವಂತಿರಲಿ ಎಂದರ್ಥ. ಇನ್ನು ಮಗ ಸಾಗರ ಎಂದರೆ ಅಗಾಧ. ಸಾಗರದ ಮುಂದೆ ನಿಂತು ಎತ್ತ ನೋಡಿದರೂ ಕಣ್ಣ ಮುಂದೆ ಅಗಾಧವಾದ ನೀರೇ ಕಾಣುತ್ತದೆ ಹೀಗೆ ನೇರ, ದಿಟ್ಟ ಮತ್ತು ನಿರಂತರ ಎನ್ನುವ ಹಾಗೆ ನಮ್ಮ ಮಕ್ಕಳ ಮತ್ತು ಮನೆಯ ಹೆಸರಿನ ಹಿಂದಿನ ರೋಚಕತೆ.
ಅಪ್ಪಾ ಮತ್ತು ಅಮ್ಮಾ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದ ಪರಿಣಾಮ ತಾತ ಮತ್ತು ಅಜ್ಜಿಯ ಆಶ್ರಯದಲ್ಲೇ ಬೆಳೆದರು ನಮ್ಮಿಬ್ಬರು ಮಕ್ಕಳು. ಕೇವಲ ಎಂಟೇ ತಿಂಗಳಿಗೆ ಸರಾಗವಾಗಿ ನಡೆಯುತ್ತಾ, ಒಂದು ವರ್ಷದೊಳಗೇ ಸ್ಪಷ್ಟವಾಗಿ ಮಾತಾನಾಡಿದರು ನಮ್ಮ ಇಬ್ಬರೂ ಮಕ್ಕಳು. ಮಗನಿಗೆ ವರ್ಷ ತುಂಬುವುದರೊಳಗೆ ಅರ್ಥಿಕವಾಗಿ ಸ್ವಲ್ಪ ಸುಧಾರಣೆಗೊಂಡ ಪರಿಣಾಮವಾಗಿ, ಮಗನ ವರ್ಷದ ಹೆಚ್ಚಿನ (ಹುಟ್ಟುಹಬ್ಬದ) ಜೊತೆಗೆ ಮುತ್ತಜ್ಜಿಗೆ ಕನಕಾಭಿಷೇಕವನ್ನೂ ಅದ್ದೂರಿಯಾಗಿ ಮಾಡಿ ಬಂದ ಬಂಧು ಮಿತ್ರರೆಲ್ಲರಿಗೂ ಚಿರೋಟಿ ಊಟ ಹಾಕಿಸಿದ ಲಭ್ಯವೂ ಸಾಗರನಿಗೇ ಲಭಿಸಿತು. ಮರಿಮಗ ಹುಟ್ಟಿ ನನಗೆ ಕನಕಾಭಿಷೇಕ ಮಾಡಿಸಿದ, ಈಗ ನಮ್ಮ ಮನೆಯವರು ಇದ್ದರೆ ಎಷ್ಟು ಸಂತೋಷ ಪಡುತ್ತಿದ್ದರೂ ಎನೋ? ಎಂದು ನಮ್ಮ ಅಜ್ಜಿ ಊರಲೆಲ್ಲಾ ಹೆಮ್ಮೆಯಾಗಿ ಹೇಳಿಕೊಂಡು ಓಡಾಡುತ್ತಿದ್ದರೆ, ಮುತ್ತಜ್ಜಿಯನ್ನು ಚೆನ್ನಮ್ಸ್ (ಚೆನ್ನಮ್ಮ) ಎಂದು ಪ್ರೀತಿಯಿಂದ ಕರೆಯುವಷ್ಟರ ಮಟ್ಟಿಗಾಗಿ ಹೋಗಿದ್ದ ನಮ್ಮ ಸಾಗರ.

ತಾತ ತಮ್ಮ ಟಿವಿಎಸ್ ಶುರು ಮಾಡಿದರೆ ಸಾಕು ಛಂಗನೆ ಹಾರಿ ಗಾಡಿಯಲ್ಲಿ ನಿಂತು ಕೊಂಡು ತಾತ ಅಜ್ಜಿ ಹೋದ ಕಡೆಯಲ್ಲೆಲ್ಲಾ ಓಡಾಡುತ್ತಾ ಅವರ ಪ್ರೀತಿಪಾತ್ರದ ಮೊಮ್ಮನಾಗಿಬಿಟ್ಟ. ಕೇವಲ ಮೂರು ವರ್ಷಗಳಾಗುವಷೃರಲ್ಲಿ ಬಹುತೇಕ ಬಾಲಪಾಠಗಳು, ಭಗವಧ್ಗೀತೆಯ ಧ್ಯಾನ ಶ್ಲೋಕಗಳು, ಮುದಾಕರಾತ್ತ ಮೋದಕಂ, ವೇಂಕಟೇಶ್ವರ ಸುಪ್ರಭಾತ ಹೀಗೆ ಹಲವಾರು ಶ್ಲೋಕಗಳು ಅವನಿಗೆ ತಾತನ ಮೂಲಕ ಕಂಠಪಾಠವಾಗಿ ಹೋಗಿದ್ದವು. ತಾತನಿಂದ ಪ್ರತೀ ದಿನವೂ ರಾಮಾಯಣ ಮತ್ತು ಮಹಾಭಾರತಗಳನ್ನು ಕೇಳಿದ ಮಕ್ಕಳಿಬ್ಬರೂ ಪುರಾಣ ಪುಣ್ಯ ಕಥೆಗಳಲ್ಲಿ ಕರಗತವಾಗಿ ಹೋದರು. ಒಂದು ಕೊಂಡರೆ ಒಂದು ಉಚಿತ ಎನ್ನುವಂತೆ ತನಗಿಂತ ಮೂರೂವರೆ ವರ್ಷದ ಅಕ್ಕನ ಜೊತೆ ಉಚಿತವಾಗಿ ಸಂಗೀತ ಪಾಠಕ್ಕೂ ಹೋಗುತ್ತಾ ಅಕ್ಕನ ಜೊತೆ ಸುಶ್ರಾವ್ಯವಾಗಿ ಸಂಗೀತ ಹಾಡುವುದರಲ್ಲೂ ಎತ್ತಿದ ಕೈ ನಮ್ಮ ಸಾಗರ.
ಮೂರುವರೆ ವರ್ಷದಲ್ಲಿ ಶಾಸ್ತ್ರೋಕ್ತವಾಗಿ ಚೌಲ ಮತ್ತು ಅಕ್ಷರಾಭ್ಯಾಸ ಮಾಡಿಸಿ ಅಕ್ಕ ಓದುವ ಶಾಲೆಗೆ ಸೇರಿಸಿದರೆ, ಅಲ್ಲೂ ಓದಿನಲ್ಲಿ ಚುರುಕು ಆದರೆ ಬರೆಯಲು ಮಾತ್ರವೇ ಸ್ವಲ್ಪ ಅಳುಕು ತೋರುತ್ತಿದ್ದವ. ಸತತವಾಗಿ ಶ್ಲೋಕ ಕಂಠ ಪಾಠ, ಏಕಪಾತ್ರಾಭಿನಯ, ವಿವಿಧ ವೇಷ ಭೂಷಣ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯುತ್ತಾ ಕಲಾರಾಧಕ ಕುಟುಂಬದ ಘನತೆಯನ್ನು ಹೆಚ್ಚಿಸಿದ್ದಂತೂ ಸುಳ್ಳಲ್ಲ.
ಎಂಟನೆಯ ವರ್ಷಕ್ಕೇ ಉಪನಯನ ಮಾಡಿದರೆ ಚೆನ್ನಾ ಎಂದು ನಿರ್ಧರಿಸಿ, ಅದಕ್ಕೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಳ್ಳುತ್ತಿದ್ದರೆ, ಅಚಾನಕ್ಕಾಗಿ ನಮ್ಮ ತಾಯಿಯವರು ನಿಧನರಾದಾಗ ನಮ್ಮ ಇಡೀ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಅಮ್ಮ ಇಲ್ಲದ ಸಮಯದಲ್ಲಿ ಸದಾ ಕಾಲವೂ ಅಜ್ಜಿಯ ಸೆರಗನ್ನೇ ಹಿಡಿದುಕೊಂಡು ಓಡಾಡುತ್ತಾ ,ಅದೊಂದು ಮಧ್ಯಾಹ್ನ ಅಜ್ಜಿ ಆಯಾಸದಿಂದ ಮಲಗಿದ್ದಾಗ ಅಲ್ಲೆಲ್ಲೋ ಸಿಕ್ಕಿದ ಕತ್ತರಿ ತೆಗೆದುಕೊಂಡು ಉದ್ದಗೆ ಇದ್ದ ಅಜ್ಜಿಯ ಜಡೆಯನ್ನು ತುಂಡರಿಸಿ ಭಯದಿಂದ ಕೂದಲನ್ನು ಮಂಚದ ಕೆಳಗೆ ಹಾಕಿ ಅಜ್ಜಿಯನ್ನು ಗೋಳು ಹೊಯ್ದುಕೊಂದಿದ್ದ ನಮ್ಮ ಮಗನಿಗೆ ಮತ್ತು ಮಗಳಿಗೆ ಅಜ್ಜಿಯ ಅಕಾಲಿಕ ಅಗಲಿಕೆಯಿಂದ ಹೊರಬರುವುದು ತುಸು ಕಷ್ಟವೇ ಎನಿಸಿದಾಗ, ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿಯೇ ಸರ್ಕಾರಿ ನೌಕರಿಗೆ ಸ್ವಯಂಪ್ರೇರಿತಳಾಗಿ ರಾಜಿನಾಮೆ ಕೊಟ್ಟು ವಯಸ್ಸಾದ ಮಾವನವರು ಮತ್ತು ಪುಟ್ಟ ಪುಟ್ಟ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸಂತೋಷವಿಂದ ನಿಭಾಯಿಸಿದವಳು ನನ್ನೊಡತಿ.

ಅಜ್ಜಿಯ ಆಗಲಿಯಾಗಿ ಒಂದು ವರ್ಷದ ನಂತರ ಮನೆಯಲ್ಲಿಯೇ ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ಉಯನಯನ ಮಾಡಿ ಅರ್ಧ ಕೊಬ್ಬರೀ ಬಟ್ಟಲಿನ ರೀತಿಯಲ್ಲಿ ವಪನ ಮಾಡಿಸಿಕೊಂಡಿದ್ದ ವಟು ಸಾಗರನನ್ನು ನೋಡುವುದಕ್ಕೆ ಎರಡೂ ಕಣ್ಣುಗಳು ಸಾಲದಾಗಿದ್ದವು. ತಾತನಿಂದಲೇ ಸಂಧ್ಯಾವಂದನೆ ಕಲಿತರೆ ಚಿಕ್ಕಪ್ಪನಿಂದ (ನಮ್ಮಾಕಿಯ ದೊಡ್ಡಪ್ಪನ ಅಳಿಯ) ವೇದಾಧ್ಯಯನ ಮಾಡುತ್ತಾ ಗಣಪತಿ ಅಥರ್ವಶೀರ್ಷ ಮಂತ್ರ, ಪುರುಷಸೂಕ್ತ, ಶ್ರೀಸೂಕ್ತ, ರುದ್ರ,ಚಮೆ ಸಾಗರನ ಮಸ್ತಕದಲ್ಲಿ ಅಚ್ಚಾಗಲು ಹೆಚ್ಚಿನ ಸಮಯ ಬೇಕಾಗಲಿಲ್ಲ.
ಇನ್ನು ತಾತ ಮತ್ತು ಮೊಮ್ಮಗನ ಅವಿನಾಭಾವ ಸಂಬಂಧದ ಬಗ್ಗೆ ಹೇಳುತ್ತಾ ಹೋದರೆ ಪುಟಗಟ್ಟಲೇ ಬರೆಯ ಬೇಕಾಗ ಬಹುದೇನೋ? ಅಕ್ಕ ಸ್ವಲ್ಪ ದೊಡ್ಡವಳಾದ ಕೂಡಲೇ ಅವಳನ್ನು ಪ್ರತ್ಯೇಕ ಕೋಣೆಗೆ ವರ್ಗಾಯಿಸಿದ ನಂತರ ತಾತ ಮತ್ತು ಮೊಮ್ಮಗ ಮತ್ತಷ್ಟೂ ಹತ್ತಿರವಾದರು. ಒಟ್ಟಿಗೆ ಕುಳಿತು ಊಟ ಮಾಡುವುದು, ಒಟ್ಟಿಗೆ ಕುಳಿತುಕೊಂಡು ಕ್ರಿಕೆಟ್ ಪಂದ್ಯಾವಳಿಗಳು, ಪ್ರೋಕಬ್ಬಡ್ಡಿ, ಸಿನಿಮಾ ಹೀಗೆ ಎಲ್ಲವೂ ಒಟ್ಟಿಗೆಯೇ. ತಾತ ಏನಾದರೂ ಬೇರೆ ಛಾನೆಲ್ ಇಲ್ಲವೇ ವಾರ್ತೆಗಳನ್ನು ನೋಡುಲಾರಂಭಿಸಿದರೆ, ರಿಮೋಟ್ ಬಚ್ಚಿಡುವುದು, ತಾತನ ನಶ್ಯದ ಡಬ್ಬಿಯನ್ನು ಮುಚ್ಚಿಟ್ಟು ತಾತನನ್ನು ಗೋಳು ಹೊಯ್ದುಕೊಳ್ಳುವುದು, ಆಗಾಗ ಹುಸಿ ಕೋಪದಿಂದ ತಾತನ ಮೇಲೆ ಮುನಿಸಿಕೊಂಡು ತನ್ನ ಬೆಡ್ಷೀಟ್ ತೆಗೆದುಕೊಂಡು ನಮ್ಮ ಕೋಣೆಗೆ ಬಂದು ನಿಮ್ಮ ಕೋಣೆಗೆ ಮತ್ತೆಂದೂ ಬರುವುದಿಲ್ಲ ಎಂದು ಹೇಳಿದ ಕೆಲವೇ ನಿಮಿಷಗಳಲ್ಲಿ ತಾತ ಒಡ್ಡುವ ಆಮೀಷಗಳಿಗೆ ಬಲಿಯಾಗಿ ತಾತನ ಮಡಿಲಲ್ಲೇ ಕುಳಿತುಕೊಳ್ಳುತ್ತಿದ್ದ ನಮ್ಮ ಸಾಗರ. ಅದೇಕೋ ಏನೋ ಆ ಭಗವಂತನಿಗೂ ಇವರಿಬ್ಬರ ಜೋಡಿಯನ್ನು ನೋಡಿ ಸಹಿಸಲಾರದೇ, ಸಾಗರ್ ಕ್ಯಾಂಪಿಗೆ ಹೋಗಿದ್ದ ಸಮಯದಲ್ಲಿಯೇ ತಾತನನ್ನು ಶಾಶ್ವತವಾಗಿ ತನ್ನ ಬಳಿಗೆ ಕರೆದುಕೊಂಡು ಬಿಟ್ಟಿದ್ದ. ತಾತನ ಶವವನ್ನು ನೋಡುತ್ತಿದ್ದಂತೆಯೇ ಒಂದು ರೀತಿಯ ಮಂಕು ಕವಿದಂತಾಗಿ ಮೂರ್ನಾಲ್ಕು ದಿನ ಜ್ವರದಿಂದ ಬಳಲಿದ್ದು ಅವರಿಬ್ಬರ ಅನ್ಯೋನ್ಯತೆಯನ್ನು ತೋರಿಸಿತ್ತು. ನೋಡಲು ಅಪ್ಪನಂತೆಯೇ ಇದ್ದರೂ ಸಾಗರನ ಸಕಲ ಗುಣಗಳು ಮತ್ತು ಹಾವಭಾವಗಳು ಯಥಾವತ್ತಾಗಿ ಅವನ ತಾತನನ್ನೇ ಹೋಲುವುದರಿಂದ ನಮಗೆ ನಮ್ಮ ತಂದೆಯವರ ಭೌತಿಕ ಅಗಲಿಕೆಯನ್ನು ದೂರಪಡಿಸಿದ್ದಾನೆ ಎಂದರೂ ಸುಳ್ಳಾಗದು.
ತಾತನನ್ನು ಕಳೆದುಕೊಂಡ ಮೇಲೆ ಆ ಪ್ರೀತಿಯನ್ನು ಕೂಡಲೇ ತನ್ನ ಅಜ್ಜ ಅಜ್ಜಿಯರೊಂದಿಗೆ ಪಡೆಯಲು ಸಫಲನಾದ ಸಾಗರ್. ವಾರವಿಡೀ ನಮ್ನ ಮನೆಯಲ್ಲಿ, ವಾರದಾದ್ಯಂತ್ಯದಲ್ಲಿ ಅಜ್ಜನ ಮನೆಯ ವಾಸ. ಅಲ್ಲಿಗೆ ಹೋಗುವ ಮೊದಲೇ ತನ್ನ ನೆಚ್ಚಿನ ಅಡುಗೆಗಳನ್ನು ತಿಳಿಸಿ ಅಜ್ಜಿಯ ಕೈಯಲ್ಲಿ ಮಾಡಿಸಿ ಕೊಂಡು ತಿನ್ನುವ ಛಾತಿ ಸಾಗರನದ್ದು.
ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಮಗಳು ಅತ್ಯುತ್ತಮ ಕಲಾವಿದೆ ಎಂಬ ಪ್ರಶಸ್ತಿಗೆ ಭಾಜನಳಾಗಿ ಕಲಾವಿದ ಮನೆತನದ ಗೌರವನ್ನು ಎತ್ತಿಹಿಡಿದರೆ ಆವಳ ತಮ್ಮ ಸಾಗರ್ ತನ್ನ ಹದಿಮೂರು ವರ್ಷದ ಶಾಲಾಭ್ಯಾಸ ಮುಗಿಸಿ ಹೊರಬರುವಾಗ ಕಷ್ಟದಲ್ಲಿ ಆಗುವ ಅತ್ಯುತ್ತಮ ವಿದ್ಯಾರ್ಥಿ ಎಂಬ ಪ್ರಶಸ್ತಿ ಪಡೆದದ್ದಲ್ಲದೇ, 86.2% ರಷ್ಟು ಅಂಕಗಳನ್ನು ಗಳಿಸಿ ಪೋಷಕರಿಗೆ ಗೌರವವನ್ನು ತಂದಿದ್ದ.
ಸದ್ಯಕ್ಕೆ ಕಂಪ್ಯೂಟರ್ ಸೈನ್ಸ್ ನಲ್ಲಿ ಮೊದಲ ವರ್ಷದ ಪದವಿ ಪೂರ್ವ ಶಿಕ್ಷಣವನ್ನು ಪಡೆಯುತ್ತ ಜೊತೆ ಜೊತೆಯಲ್ಲಿಯೇ ಕೀಬೋರ್ಡ್ ಅಭ್ಯಾಸ ಮಾಡುತ್ತಾ ವೃತ್ತಿಯಲ್ಲಿ ಇಂಜೀನಿಯರ್ ಮತ್ತು ಪ್ರವೃತ್ತಿಯಲ್ಲಿ ಸಂಗೀತಗಾರನಾಗುವತ್ತ ಹರಿಸಿದ್ದಾನೆ ತನ್ನ ಚಿತ್ತ. ಇಂದಿಗೆ ಸರಿಯಾಗಿ ಅವನಿಗೆ ಹದಿನಾರು ವರ್ಷಗಳು ಸಂಪೂರ್ಣವಾಗಿ ಹದಿನೇಳಕ್ಕೆ ಕಾಲಿಡುತ್ತಿದ್ದಾನೆ.
ಹದಿನಾರು ವರ್ಷ ದಾಟಿದ ಮೇಲೆ ಮಕ್ಕಳನ್ನು ಗೆಳೆಯರಂತೆ ಕಾಣಬೇಕಂತೆ. ಅಂತೆಯೇ ಅಮ್ಮನೊಡನೆ ತುಸು ಹೆಚ್ಚಿನ ಸದರವಾಗಿ ವರ್ತಿಸುವ, ಅಪ್ಪ ಬಂದೊಡನೆಯೇ ಅದರ ತದ್ವಿರುದ್ಧವಾಗಿ ವರ್ತಿಸುವ ಗೋಸಂಬೆಯೂ ಹೌದು. ರೆಕ್ಕೆ ಬಲಿತಿದೆ ಎಂದು ಆಗಾಗ ಸ್ಚಚ್ಚಂದವಾಗಿ ಹಾರುವ ಮನಸ್ಥಿತಿಯನ್ನು ಪ್ರಕಟಿಸುವನಾದರೂ, ಇದುವರೆವಿಗೂ ಅಪ್ಪಾ ಅಮ್ಮನ ಮಧುರ ಬಾಂಧವ್ಯ ಅವನನ್ನು ಕಟ್ಟಿ ಹಾಕುವುದರಲ್ಲಿ ಯಶಸ್ವಿಯಾಗಿದೆಯಾದರೂ ಮುಂದೆ ಹೇಗೋ ಏನೋ ಎಂದು ಆ ಭಗವಂತನ ಮೇಲೆ ಭಾರ ಹಾಕಿರುವುದಂತೂ ಸುಳ್ಳಲ್ಲ.
ಮಾನಸಿಕವಾಗಿ ಮತ್ತು ದೈಹಿಕವಾಗಿ ಅಪ್ಪಾ ಅಮ್ಮನಿಗಿಂತ ತುಸು ಹೆಚ್ಚಾಗಿಯೇ ಬೆಳೆದಿದ್ದಾನೆ. ಹುಚ್ಚುಕೋಡಿ ಮನಸು ಹದಿನಾರರ ವಯಸು ಎನ್ನುವ ಹಾಗೆ ಅವರನ ಮನಸ್ಸು ಅತ್ತಿಂದಿತ್ತ ಚಂಚಲತೆಗೆ ಒಳಗಾಗದೇ ತನ್ನ ಗುರಿಯನ್ನು ಮುಟ್ಟುವಂತಾಗಲೀ ಎಂದು ಬಯಸುತ್ತೇವೆ. ನಿಮ್ಮಂತಹ ಸಜ್ಜನರು ಮತ್ತು ಹಿರಿಯರ ಹಾರೈಕೆಗಳು ಬಹಳ ಬೇಗ ಫಲಪ್ರದವಾಗುತ್ತದೆ ಎನ್ನುವುದು ನಮ್ಮೆಲ್ಲರ ಆಶಯ. ದಯವಿಟ್ಟು ಅಲ್ಲಿಂದಲೇ ನಮ್ಮ ಸಾಗರನಿಗೆ ಅವನ ಹದಿನಾರನೇ ಹುಟ್ಟು ಹಬ್ಬದಂದು ನಿಮ್ಮೆಲ್ಲರ ತುಂಬು ಹೃದಯದ ಹಾರೈಕೆಗಳು ಮತ್ತು ಆಶೀರ್ವಾದಗಳು ಇರಲಿ ಎಂದು ಕೇಳಿಕೊಳ್ಳುತ್ತೇವೆ.
ಏನಂತೀರೀ?
ಹುಟ್ಟು ಹಬ್ಬದ ಶುಭಾಶಯಗಳು
LikeLike