ಆಗ ಎಪ್ಪತ್ತರ ದಶಕ. ಆಗ ತಾನೆ ಓದಲು ಬರೆಯಲು ಕಲಿತ ಸಮಯ. ಅಮ್ಮಾ ಮೊದಲು ಪ್ರಜಾವಾಣಿ ಪತ್ರಿಕೆಯ ದಪ್ಪಕ್ಷರದ ಹೆಡ್ ಲೈನ್ ಓದುವ ಅಭ್ಯಾಸ ಮಾಡಿಸಿದರು. ಸ್ವಲ್ಪ ಅಕ್ಷರಗಳನ್ನು ಜೋಡಿಸಿ ಓದುವುದನ್ನು ಕರಗತ ಮಾಡಿಕೊಳ್ಳುತ್ತಿದ್ದಂತೆಯೇ, ತಂದೆಯವರು ಕೈಗಿತ್ತ ಪುಸ್ತಕ ಭಂಡಾರವೇ ಭಾರತ ಭಾರತಿ ಪುಸ್ತಕ ಸಂಪದ. ಚಿಕ್ಕ ಚಿಕ್ಕದಾದ ಬಹಳ ಸರಳ ಭಾಷೆಯಲ್ಲಿದ್ದರೂ ಅಷ್ತೇ ಮಹತ್ವಪೂರ್ಣ ವಿಷಯಗಳನ್ನೊಳಗೊಂಡ ದೇಶಭಕ್ತರ ಕಥಾ ಪುಸ್ತಕಗಳು. ಆರಂಭದಲ್ಲಿ ವಾರಕ್ಕೊಂದು ಪುಸ್ತಕವನ್ನು ಓದಿ ಅದನ್ನು ತಂದೆಯವರ ಸಮ್ಮುಖದಲ್ಲಿ ಓದಿದ ಪುಸ್ತಕದ ಬಗ್ಗೆ ವಿಚಾರ ವಿನಿಮಯಮಾಡಿಕೊಳ್ಳುತ್ತಿದ್ದವ್ವ ನಾನು ಕೆಲವೇ ದಿನಗಳಲ್ಲಿ ವಾರಕ್ಕೆ ಮೂರ್ನಾಲ್ಕು ಪುಸ್ತಕಳನ್ನು ಓದಿ ಮುಗಿಸುವ ಹಂತಕ್ಕೆ ತಲುಪಿದ್ದೆ. ನಾನು ಓದಿ ಮುಗಿಸಿದೆ ಎನ್ನುವುದಕ್ಕಿಂತ ಅ ಪುಸ್ತಕಗಳೇ ನನ್ನನ್ನು ಓದಿಸಿಕೊಂಡು ಹೋಗುತ್ತಿದ್ದವು ಎಂದರೆ ತಪ್ಪಾಗಲಾರದು. ಸುಮಾರು 500ಕ್ಕೂ ಹೆಚ್ಚು ಅಂತಹ ಪುಸ್ತಕಗಳನ್ನು ನಾಡಿನ ಹೆಸರಾಂತ ಸಾಹಿತಿಗಳ ಕೈಯಲ್ಲಿ ಮಕ್ಕಳಿಗೆ ಓದುವ ಶೈಲಿಯಲ್ಲಿ ಬರೆಸಿದ ಮಹಾನ್ ಚೇತನವೇ, ಶ್ರೀ ಎಲ್ ಎಸ್ ಶೇಷಗಿರಿ ರಾವ್. ನಾಡು ಕಂಡ ಅತ್ಯಂತ ಸರಳ ಸಜ್ಜನ, ನಿಗರ್ವಿ ಅಷ್ಟೇ ಮೇಧವಿಗಳಾಗಿದ್ದರು ಶೀ ಶೇಷರಿಗಿರಿ ರಾಯರು. ಅವರ ಪ್ರಧಾನ ಸಂಪಾದಕತ್ವದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಹೆಮ್ಮೆಯ ಪುಸ್ತಕಮಾಲೆಯಾಗಿ ಹೊಮ್ಮಿದ ಭಾರತ-ಭಾರತಿ ಪುಸ್ತಕ ಸಂಪದಮಾಲೆಯಿಂದಾಗಿಯೇ ಅಂದು ಇಂದು ಮತ್ತು ಮುಂದಿನ ದಿನದ ಮಕ್ಕಳೂ ಸಹಾ ನಾಡು ನುಡಿ ಸಂಸ್ಕೃತಿಯ ಏಳ್ಗೆಗಾಗಿ ಬದುಕಿದ ಭಾರತೀಯ ಸಾಧನಾಶೀಲ ಹಿರಿಯರ ಜೀವನಚರಿತ್ರೆಗಳನ್ನು ತಿಳಿಯುವಂತಹ ಮಹಾನ್ ಸಾಧನೆಯನ್ನು ಮಾಡಿದ್ದವರು ಶ್ರೀಯುತ ರಾಯರು.
ಧಾರವಾಡದ ಹತ್ತಿರದ ಲಕ್ಷ್ಮೇಶ್ವರ ದೇಶಪಾಂಡೆ ಮನೆತನದ ಶ್ರೀ ಲಕ್ಷ್ಮೇಶ್ವರ ಸ್ವಾಮಿರಾವ್ ಮತ್ತು ಕಮಲಾಬಾಯಿ ದಂಪತಿಗಳಿಗೆ 16-2-1925ರಂದು ಬೆಂಗಳೂರಿನಲ್ಲಿ ಶ್ರೀ ಶೇಷಗಿರಿರಾಯರು ಜನಿಸುತ್ತಾರೆ ಅವರ ತಂದೆಯವರು ಶಿಕ್ಷಕರಾಗಿದ್ದರು ಮತ್ತು ಎಲ್ಲದ್ದಕ್ಕಿಂತ ಹೆಚ್ಚಾಗಿ ಸಾಹಿತ್ಯಾಸಕ್ತರಾಗಿದ್ದರು. ಹಾಗಾಗಿ ಅವರ ಮನೆಗ ಅಂದಿನ ಕಾಲದ ಅನೇಕ ಹಿರಿಯ ಸಾಹಿತಿಗಳು ಬಂದು ಹೋಗುತ್ತಿದ್ದರಿಂದ ರಾಯರಿಗೆ ಚಿಕ್ಕ ವಯಸ್ಸಿನಿಂದಲೇ ಸಾಹಿತ್ಯಾಸಕ್ತಿ ಮೂಡಿದ್ದರಲ್ಲಿ ಆಶ್ಚರ್ಯವೇನಿಲ್ಲ ಮಲ್ಲೇಶ್ವರದಲ್ಲಿ ತಮ್ಮ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿ . ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕಗಳಿಸಿ ಎಂಜನಿಯರಿಂಗ್ ಸೀಟು ಪಡೆದು ಕೊಂಡರಾದರೂ, ಸಾಹಿತ್ಯದ ಮೇಲೆ ಅವರಿಗಿದ್ದ ಆಸಕ್ತಿಯಿಂದಾಗಿ ಇಂಟರ್ ಮೀಡಿಯೆಟ್‌ಗೆ ಸೆಂಟ್ರಲ್ ಕಾಲೇಜು ಸೇರಿ ಇಂಗ್ಲಿಷ್ ಆನರ್ಸ್ ಓದಿದರು, ಆಗ ಅವರ ಅಧ್ಯಾಪಕರಾಗಿದ್ದವರು ಕನ್ನಡದ ಕಣ್ವ ಎಂದೇ ಹೆಸರಾಗಿದ್ದ ಬಿ.ಎಂ.ಶ್ರೀ.ಯವರು ಅವರ ಶಿಷ್ಯರಾಗಿ ಚಿನ್ನದ ಪದಕದೊಂದಿಗೆ ಪದವಿ ಮುಗಿಸಿ, ದೂರದ ನಾಗಪುರ ವಿಶ್ವವಿದ್ಯಾಲಯದಿಂದ ಬಾಹ್ಯ ವಿದ್ಯಾರ್ಥಿಯಾಗಿ ಎಂ.ಎ. ಪದವಿಯನ್ನು ಮುಗಿಸಿದಾಗ ಅವರ ವಯಸ್ಸು ಕೇವಲ ಹತ್ತೊಂಬತ್ತು ಎಂದರೆ ಅವರ ಬುದ್ದಿ ಮತ್ತೆ ಎಷ್ಟಿತ್ತು ಎಂಬ ಅರಿವಾಗುತ್ತದೆ. ಆ ಕಿರಿಯ ವಯಸ್ಸಿನಲ್ಲಿಯೇ ತಂದೆಯವರಂತೆಯೇ ಇಂಟರ್ ಮೀಡಿಯೆಟ್ ಕಾಲೇಜಿನ ಅಧ್ಯಾಪಕರ ಹುದ್ದೆಗೆ ಸೇರಿ . ಕೋಲಾರ, ದಾವಣಗೆರೆ, ಮಡಿಕೇರಿ, ಬೆಂಗಳೂರು ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಹೊಂದಿದ್ದು ಅವರ ಜೀವನದ ಒಂದು ಮಜಲು.
ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ಮೇಲೆ ಅಪಾರವಾದ ಹಿಡಿತವನ್ನು ಹೊಂದಿದ್ದ ರಾಯರು ಅನೇಕ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಲ್ಲದೆ. ಹಂಪಿ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕೆಲಸ ಮಾಡಿದರು. ಆದಾದ ನಂತರ ರಾಷ್ಟ್ರೋತ್ಥಾನದ ಭಾರತ-ಭಾರತಿ ಪುಸ್ತಕಗಳ ಪ್ರಧಾನ ಸಂಪಾದಕರಾಗಿ ಸುಮಾರು 510ಕ್ಕೂ ಹೆಚ್ಚಿನ ಪುಸ್ತಕಗಳನ್ನು ಹೊರೆತಂದರು. 80ರ ದಶಕದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಆರ್. ಗುಂಡೂರಾಯರ ಪತ್ರಿಕಾ ಕಾರ‍್ಯದರ್ಶಿಯಾಗಿಯೂ ಕೆಲಕಾಲ ಸೇವೆ ಸಲ್ಲಿದ್ದರು. ಅದೇ ಸಮಯದಲ್ಲಿಯೇ ಕನ್ನಡ ಲೇಖಕರ ಕೃತಿಗಳಿಗೆ ಸರಿಯಾದ ಪ್ರಕಾಶಕರು ದೊರೆಯುತ್ತಿರಲಿಲ್ಲ. ಹಾಗೇನಾದರೂ ದೊರೆತರೂ ಅವರ ಕೃತಿಗೆ ಸಲ್ಲಬೇಕಿದ್ದ ಸರಿಯಾದ ಸಂಭಾವನೆ ದೊರೆಯುವುದು ಮರೀಚಿಕೆಯಾಗಿದ್ದ ಸಂದರ್ಭದಲ್ಲಿ ಸರ್ಕಾರವೇ ಕನ್ನಡ ಪುಸ್ತಕಗಳ ಪ್ರಕಾಶನ, ಪ್ರದರ್ಶನ ಮತ್ತು ಮಾರಾಟ ಮಾಡಲು ನಿರ್ಧರಿಸಿ ಕನ್ನಡ ಪುಸ್ತಕ ಪ್ರಾಕಾರದ ರಚನೆಯಾದಾಗ ಶ್ರೀ ಶೇಷಗಿರಿರಾಯರು ಅದರ ಪ್ರಥಮಾಧ್ಯಕ್ಷರಾಗಿ ಪ್ರಾಧಿಕಾರಕ್ಕೆ ಭಧ್ರ ಬುನಾದಿಯನ್ನು ಹಾಕಿಕೊಟ್ಟರು. ಅದೇ ಸಂದರ್ಭದಲ್ಲಿ ಕನ್ನಡ ಅನೇಕ ಹಳೆಯ ಮತ್ತು ಹೊಸಾ ಲೇಖಕರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಹೆಗ್ಗಳಿಗೆ ರಾಯರಿಗೆ ಸಲ್ಲುತ್ತದೆ. ಪುಸ್ತಕದ ಬೆಲೆ ಹೆಚ್ಚಾದಲ್ಲಿ ಕೊಂಡುಕೊಳ್ಳುವುದಿಲ್ಲ ಎಂಬುದನ್ನು ಮನಗಂಡ ರಾಯರು ಪ್ರಾಧಿಕಾರದಿಂದ ಪ್ರಕಾಶಿಸುತ್ತಿದ್ದ ಪುಸ್ತಕಗಳ ಬೆಲೆ ಎಲ್ಲರ ಕೈಗೆಟುಕುವಂತೆ ಇಡುತ್ತಿದ್ದಲ್ಲದೇ ಅತ್ಯಂತ ರಿಯಾಯಿತಿ ದರದಲ್ಲಿಯೂ ಪ್ರಾಧಿಕಾರದ ಮೂಲಕ ಕರ್ನಾಟಕ ರಾಜ್ಯಾದ್ಯಂತ ಪುಸ್ತಕಗಳ ಮಾರಾಟ ಮಾಡುವ ವ್ಯವಸ್ಥೆಯನ್ನು ತಂದು ಕನ್ನಡಿಗರಿಗೆ ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿಯನ್ನು ಬೆಳೆಸುವುದರಲ್ಲಿ ಮಹತ್ತರ ಪಾತ್ರವಹಿಸಿದ್ದರು. ಕೆಲ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಇದು ಜೀವನ ಎಂಬ ಕಥಾ ಸಂಕಲನದ ಮೂಲಕ ರಾಯರ ಸಾಹಿತ್ಯ ಕೃಷಿ ಆರಂಭವಾಗಿ ಮಕ್ಕಳ ಜ್ಞಾನವರ್ಧನೆಗೆಂದು ನೂರಾರು ಚಿಕ್ಕ-ಪುಟ್ಟ ಹೊತ್ತಿಗೆಗಳನ್ನು ಅವರ ರಾಷ್ಟ್ರೀಯ ಉತ್ಥಾನ ಪರಿಷತ್ ವತಿಯಿಂದ ಪ್ರಕಟಿಸುವ ಮೂಲಕ ಸಾಹಿತ್ಯ ರಚನೆಯನ್ನು ಮುಂದುವರೆಸಿದರು. ಈ ಪುಸ್ತಕಗಳ ಅಂದಿನ ಬೆಲೆ ಕೇವಲ, 75 ಪೈಸೆಗಳಿದ್ದರೂ, ಅದರಲಿದ್ದ ಜ್ಞಾನ ಭಂಡಾರ ಆಬಾಲವೃದ್ಧರ ಜ್ಞಾನ ದಾಯವನ್ನು ತೀರಿಸುವುದರಲ್ಲಿ ಅತ್ಯಂತ ಯಶಸ್ವಿಯಾಗಿತ್ತು. ರಾಯರ ಸಂಪಾದನೆಯ ಚಟುವಟಿಕೆಯಲ್ಲಿ, ಬೆಂಗಳೂರು ದರ್ಶನ ಸಂಪುಟಗಳು, ಅತ್ಯಂತ ಉಪಯುಕ್ತಮಾಹಿತಿಗಳನ್ನು ಬೆಂಗಳೂರಿನ ಜನರಿಗೆ ಕೊಟ್ಟಿವೆ. ವಿಶ್ವಕೋಶದತರಹವೇ ಸಂಯೋಜಿಸಿರುವ ಈ ಬೃಹದ್ ಸಂಪುಟಗಳು, ಅತ್ಯಂತ ಶ್ರಮವಹಿಸಿ, ವಿದ್ವಾಂಸರಿಂದ ತಯಾರಿಸಲ್ಪಟ್ಟ ಮಾಹಿತಿಗಳು. ಪ್ರತಿಯೊಬ್ಬ ಬೆಂಗಳೂರಿನ ನಾಗರಿಕನ ಮನೆಯಲ್ಲೂ ಪಡಸಾಲೆಯ ಕಪಾಟಿನ ಶೋಭೆಯನ್ನು ವಿಜೃಂಭಿಸುವ ಕೃತಿಗಳಾಗಿವೆ.
ಪ್ರತೀ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯ ಪಾತ್ರ ಇದ್ದೇ ಇರುತ್ತದೆ ಎನ್ನುವಂತೆ ರಾಯರ ಯಶಸ್ಸಿನಲ್ಲಿ ಅವರ ಶ್ರೀಮತಿಯವರ ಪಾತ್ರ ಬಹಳ ಪ್ರಮುಖ ಪಾತ್ರವಹಿಸಿದ್ದರು. ಸದಾ ಒಂದಲ್ಲಾ ಒಂದು ಸಾಹಿತ್ಯದ ಕೆಲಸದಲ್ಲಿ ನಿರತರಾಗಿರುತ್ತಿದ್ದ ರಾಯರಿಗೆ ಅವರ ಶ್ರೀಮತಿಯವರು ಕುಟುಂಬದ ಯಾವುದೇ ಕೆಲಸಗಳನ್ನು ಹೇಳದೇ ಎಲ್ಲವನ್ನೂ ತಾವೇ ನಿರ್ವಹಿಸುತ್ತಿದ್ದರಂತೆ. ಅದರಲ್ಲೂ ಭಾರತ-ಭಾರತಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಸಮಯದಲ್ಲಿ ಹಗಲು ರಾತ್ರಿಯ ಪರಿವಿಲ್ಲದೇ ದುಡಿಯುತ್ತಿದ್ದ ಸಮದಲ್ಲಿಯೇ ಅವರ ಶ್ರೀಮತಿಯವರು ನಿಧನರಾಗುತ್ತಾರೆ. ಹಾಗೆ ಅವರ ಪತ್ನಿಯವರು ನಿಧನರಾದ ಕೆಲ ದಿನಗಳ ನಂತರ ಅವರ ಮನೆಯ ವರ್ತನೆಯ ಹಾಲಿನಾಕೆ ಮನೆಯ ಮುಂದೆ ಬಂದು ಹಾಲು ಎಂದು ಜೋರಾಗಿ ಕೂಗಿದಾಗ ಅವರಿಗೆ ಹಾಲನ್ನು ಯಾವ ಪಾತ್ರೆಯಲ್ಲಿ ತೆಗೆದುಕೊಳ್ಳಬೇಕು ಮತ್ತು ಹೇಗೆ ತೆಗೆದುಕೊಳ್ಳಬೇಕೂ ಎಂಬ ಕಲ್ಪನೆಯೂ ಇರಲಿಲ್ಲವಂತೆ. ರಾಯರ ಈ ಕಸಿವಿಸಿಯನ್ನು ಅರ್ಥ ಮಾಡಿಕೊಂಡ ಹಾಲಿನಾಕೆ ತಾನೇ ಮನೆಯೊಳಗೆ ಹೋಗಿ ಪ್ರತೀ ದಿನ ಹಾಲನ್ನು ತೆಗೆದುಕೊಳ್ಳುತ್ತಿದ್ದ ಪಾತ್ರೆಯನ್ನು ಹುಡುಕಿ ತಂದು ಹಾಲನ್ನು ಹಾಕಿ ಹೋದಳಂತೆ. ಈ ರೀತಿಯಾಗಿ ಕಾಯಾ ವಾಚಾ ಮನಸಾ ಶ್ರೀ ಎಲ್. ಎಸ್. ಶೇಷಗಿರಿ ರಾವ್ ಅವರು ಸಾಹಿತ್ಯ ಲೋಕಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.
ಆವರ ಪ್ರಮುಖ ಕೃತಿಗಳು
- ಸಣ್ಣಕಥೆಗಳ ಸಂಕಲನಗಳು
- ಇದು ಜೀವನ
- ಜಂಗಮ ಜಾತ್ರೆಯಲ್ಲಿ
- ಮುಟ್ಟಿದ ಗುರಿ
- ಮುಯ್ಯಿ.
- ಇತರ ಕಥೆಗಳು
ಸಾಹಿತ್ಯವಿಮರ್ಶೆ
- ಕಾದಂಬರಿ-ಸಾಮಾನ್ಯಮನುಷ್ಯ.
- ಆಲಿವರ್ ಗೋಲ್ಡ್ ಸ್ಮಿತ್,
- ಮಾಸ್ತಿ ವೆಂಕಟೇಶ ಐಯ್ಯಂಗಾರ್
- ಇಂಗ್ಲೀಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ.
ರಾಯರು ತಮ್ಮ ಕೃತಿಗಳಿಗಿಂತಲೂ ತಮ್ಮ ವಿಮರ್ಶಾತ್ಮಕ ಕೃತಿಗಳಿಂದಾಗಿಯೇ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದ್ದರು.
- ಪಾಶ್ಚಾತ್ಯಸಾಹಿತ್ಯ ವಿಹಾರ.
- ಸಾಹಿತ್ಯ ವಿಶ್ಲೇಷಣೆ.
- ಹೊಸಗನ್ನಡ ಸಾಹಿತ್ಯ .
- ಫ್ರಾನ್ಸ್ ಕಾಫ್ಕಾ,
- ಗ್ರೀಕ್ ರಂಗಭೂಮಿ ಮತ್ತು ನಾಟಕ.
- ವಿಲಿಯಮ್ ಶೇಕ್ಸ್ ಪಿಯರ್,
- ಸಾಹಿತ್ಯ-ಬದುಕು,
- ಟಿ. ಪಿ. ಕೈಲಾಸಂ,
- ಪಾಶ್ಚಾತ್ಯ ಮತ್ತು ಭಾರತೀಯಮಹಾಕಾವ್ಯ ಪರಂಪರೆಗಳ ಮನೋಧರ್ಮ,
- ಮಾಸ್ತಿ : ಜೀವನ ಮತ್ತು ಸಾಹಿತ್ಯ,
- ಇಂಗ್ಲೀಷ್ ಸಾಹಿತ್ಯ ಚರಿತ್ರೆ,
- ಸಾಹಿತ್ಯದ ಕನ್ನಡಿಯಲ್ಲಿ,
- ಪಾಶ್ಚಾತ್ಯಸಾಹಿತ್ಯಲೋಕದಲ್ಲಿ,
- ಎಲ್. ಎಸ್. ಎಸ್. ಕಂಡ ತ. ರಾ. ಸು.
- ಮಹಾಭಾರತ( ನಾಲ್ಕು ಸಂಪುಟಗಳು)
ನಾಟಕಗಳು
- ಆಕಾಂಕ್ಷೆ ಮತ್ತು ಆಸ್ತಿ.
- ಜೀವನ ಚರಿತ್ರೆ
- ಸಾರ್ಥಕ ಸುಬೋಧ,
- ಎಂ. ವಿಶ್ವೇಶ್ವರಯ್ಯ,
ತಮ್ಮ ಕನ್ನಡ ಮತ್ತು ಇಂಗ್ಲೀಶ್ ಭಾಷಾ ಪ್ರೌಡಿಮೆಯಿಂದ ಐ.ಬಿ.ಎಚ್ ಪ್ರಕಾಶನದಡಿಯಲ್ಲಿ ಅನೇಕ ನಿಂಘಂಟುಗಳನ್ನು ಕನ್ನಡಿಗರಿಗೆ ಕೊಡುಗೆಯನ್ನಾಗಿ ಇಟ್ಟಿದ್ದಾರೆ.
- ಐ.ಬಿ.ಎಚ್. ಕನ್ನಡ- ಕನ್ನಡ-ಇಂಗ್ಲೀಷ್ ನಿಘಂಟು,
- ಐ.ಬಿ.ಎಚ್ ಇಂಗ್ಲೀಷ್-ಕನ್ನಡ ನಿಘಂಟು,
- ಐ. ಬಿ. ಎಚ್ ಕನ್ನಡ -ಕನ್ನಡ ನಿಘಂಟು,
- ಸುಭಾಸ್ ಇಂಗ್ಲೀಷ್-ಇಂಗ್ಲೀಷ್-ಕನ್ನಡ ನಿಘಂಟು,
- ಸುಭಾಶ್ ವಿದ್ಯಾರ್ಥಿ ಮಿತ್ರ ಇಂಗ್ಲೀಷ್-ಕನ್ನಡ್ ನಿಘಂಟು,
- ಸುಲಭ ಇಂಗ್ಲೀಷ್
ವಿದ್ವಾನ್ ಸರ್ವತ್ರ ಪೂಜ್ಯತೆ ಎನ್ನುವಂತೆ ಅವರ ವಿದ್ವತ್ತಿಗೆ ಅನುಗುಣವಾಗಿ ನೂರಾರು ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಹುಡುಕಿ ಬಂದವು ಎಂದರೂ ತಪ್ಪಾಗಲಾರದು.
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
- ಸಾಹಿತ್ಯಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ.
- ವರ್ಧಮಾನ ಪ್ರಶಸ್ತಿ.
- ಡಾ. ಅ.ನ.ಕೃ. ಪ್ರಶಸ್ತಿ.
- ಬಿ.ಎಮ್.ಶ್ರೀ ಪ್ರಶಸ್ತಿ.
- ಬಿ.ಎಮ್.ಇನಾಮದಾರ ಪ್ರಶಸ್ತಿ.
- ಕಾವ್ಯಾನಂದ ಪ್ರಶಸ್ತಿ.
- ದೇವರಾಜ ಬಹಾದ್ದೂರ ಪ್ರಶಸ್ತಿ.
- ಮಾಸ್ತಿ ಪ್ರಶಸ್ತಿ.
- 2007ರಲ್ಲಿ ಉಡುಪಿಯಲ್ಲಿ ನಡೆದ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅದ್ಯಕ್ಶರಾಗಿದ್ದರು
ಒಟ್ಟಿನಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಕನ್ನಡ ಸಾಹಿತ್ಯ ಲೋಕದಲ್ಲಿ ಶೇಷಗಿರಿರಾಯರು ಮಾಡದ ಕೆಲಸವಿಲ್ಲ ಎನ್ನುವಷ್ಟರ ಮಟ್ಟಿಗೆ ಜನಪ್ರಿಯರಾಗಿದ್ದ ಶ್ರೀ ಎಲ್. ಎಸ್. ಶೇಷಗಿರಿರಾಯರು ತಮ್ಮ 95 ವಯಸ್ಸಿನಲ್ಲಿ ವಯೋಸಹಜವಾಗಿ 20 ಡಿಸೆಂಬರ್2019ರಂದು ಬೆಂಗಳೂರಿನಲ್ಲಿ ದೈವಾಧೀನರಾದರು. ಈ ನಾದು ಕಂಡ ಅತ್ಯಂತ ಸರಳ, ಸಜ್ಜನಿಕೆಯ ಮೂರ್ತಿವೆತ್ತಂತಿದ್ದ ಹಿರಿಯ ಸಾಹಿತಿ ಡಾ. ಎಲ್. ಎಸ್. ಶೇಷಗಿರಿರಾವ್ ಅವರ ನಿಧನದಿಂದಾಗಿ ಕನ್ನಡ ಸಾರಸ್ವತ ಲೋಕದ ನಕ್ಷತ್ರವೊಂದು ಮರೆಯಾದಂತಾಗಿದೆ. ಇಂತಹ ಮಹನೀಯರ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕ ನಿಜವಾಗಿಯೂ ಬಡವಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ.
ಭೌತಿಕವಾಗಿ ಶೇಷಗಿರಿರಾಯರು ಇನ್ನು ಮುಂದೆ ನಮ್ಮೊಂದಿಗೆ ಇಲ್ಲದಿರ ಬಹುದು ಅದರೆ ಅವರ ಕೃತಿಗಳ ಮೂಲಕ ಅಚಂದ್ರಾರ್ಕವಾಗಿ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಇದ್ದೇ ಇರುತ್ತಾರೆ. ಅವರ ಕೃತಿಗಳಿಂದ ಪ್ರಭಾವಿತರಾಗಿ ಅವರು ಹಾಕಿಕೊಟ್ಟ ಮಾರ್ಗವನ್ನು ಮುಂದುವರೆಸಿಕೊಂಡು ಹೋಗುವುದೇ ನಾವು ಶೇಷಗಿರಿ ರಾಯರಿಗೆ ಸಲ್ಲಿಸ ಬಹುದಾದಂತಹ ಗೌರವ ಮತ್ತು ಶ್ರದ್ಧಾಂಜಲಿ ಎಂದೇ ನನ್ನ ಭಾವನೆ.
ಏನಂತೀರೀ?