ಮೊನ್ನೆ ತಾನೇ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಭಗವಾನ್ ವಿಷ್ಣುವಿಗೆ ಸಹಸ್ರನಾಮವಿರುವಂತೆ ನಮ್ಮೀ ಲೇಖನದ ನಾಯಕ ಶ್ರೀನಿವಾಸನಿಗೂ ಹಲವಾರು ನಾಮಗಳು. ಮನೆಯಲ್ಲಿ ಪೋಷಕರು ನಾಮಕರಣ ಮಾಡಿದ್ದು ಗಿಣಿಯ ಕೃಷ್ಣಮೂರ್ತಿ ಶ್ರೀನಿವಾಸ. ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದದ್ದು ಮುರಳಿ ಎಂದು. ಇನ್ನು ಬಾಲ್ಯದಿಂದಲೂ ನೋಡಲು ಸ್ವಲ್ಪ ದಷ್ಟ ಪುಷ್ಟವಾಗಿದ್ದ ನಮ್ಮ ಶ್ರೀನಿವಾಸ, ವಿಷ್ಣುವರ್ಧನ್ ಮತ್ತು ಅಂಬರೀಷ್ ಅಭಿನಯದ ನಾಗರಹೊಳೆ ಸಿನಿಮಾದಲ್ಲಿ ಬರುವ ಪಿಂಟೋ (ದಪ್ಪನೆಯ ಹುಡುಗ)ನನ್ನು ಹೋಲುತ್ತಿದ್ದ ಕಾರಣ ನೆರೆಹೊರೆಯವರು ಪ್ರೀತಿಯಿಂದ ಪಿಂಟೂ ಎಂದು ಕರೆಯುತ್ತಿದ್ದರೆ, ಶಾಲಾ ಕಾಲೇಜುಗಳಲ್ಲಿ G K ಎಂಬ ಇನಿಷಿಯಲ್ಸ್ ನಿಂದಲೇ ಪ್ರಖ್ಯಾತ. ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಹಿರಣ್ಯಕಷುಪು ಪ್ರಹ್ಮಾದನನ್ನು ಕುರಿತು ಎಲ್ಲಿರುವನು ನಿಮ್ಮ ಹರಿ? ಈ ಕಂಬದಲ್ಲಿರುವನೇ? ಈ ಕಂಬದಲ್ಲಿರುವನೇ ಎಂದು ಕೇಳಿದರೆ, ಎಲ್ಲಾ ಕಡೆಯಲ್ಲೂ ಇರುವನು ನಮ್ಮ ಹರಿ ಎನ್ನುವಂತೆ ನಮ್ಮ ಈ ಶ್ರೀನಿವಾಸನೂ ಒಂದು ರೀತಿಯಲ್ಲಿ ಎಲ್ಲಾ ಕಡೆಯಲ್ಲೂ, ಎಲ್ಲರ ಮನದಲ್ಲೂ ಇರುವ ಸರ್ವಾಂತರ್ಯಾಮಿ. ಇಷ್ಟೆಲ್ಲಾ ಉಪಮಾನ ಉಪಮೇಯಗಳೊಂದಿಗೆ ವಿವರಿಸುತ್ತಿರುವ ಈ ಶ್ರೀನಿವಾಸ ಯಾರು? ಎಂಬ ಕುತೂಹಲ ಎಲ್ಲರಿಗೂ ಮೂಡುವುದು ಸಹಜ. ಬನ್ನೀ ನಮ್ಮ ಪ್ರೀತಿಯ ಶ್ರೀನಿವಾಸ (ಪಿಂಟೂ) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
G K ಶೀನಿವಾಸ, ಅಲಿಯಾಸ್ ಪಿಂಟೂ ಉರ್ಘ್ G K, ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನ ಶ್ರೀರಾಂಪುರದ ದೇವಯ್ಯಪಾರ್ಕಿನ ಬಳಿ. ಹೇಳೀ ಕೇಳೀ ಶ್ರೀರಾಂಪುರದಲ್ಲಿ ಒಂದು ರೀತಿಯ ಮಧ್ಯಮ ವರ್ಗದವರೇ ಹೆಚ್ಚು. ಒಂದು ಕಡೆ ಮಧ್ಯಮವರ್ಗದವರಿದ್ದರೆ ಮತ್ತೊಂದು ಕಡೆ ಸ್ಲಂ. ನಮ್ಮ ಶ್ರೀನಿವಾಸನ ತಂದೆ ತಾಯಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಆರ್ಥಿಕವಾಗಿ ಸ್ವಲ್ಪ ಸಧೃಡರು. ಒಬ್ಬ ಅಕ್ಕ ಮತ್ತು ಒಬ್ಬಳು ತಂಗಿಯ ಮಧ್ಯೆ ಬೆಳೆದ ಶ್ರೀನಿವಾಸನಿಗೆ ದುಡ್ಡಿನದ್ದೇನೂ ಕೊರತೆ ಇರಲಿಲ್ಲ. ಸಕ್ಕರೆ ಇದ್ದ ಕಡೆ ಇರುವೆ ಮುತ್ತುವ ಹಾಗೆ ನಮ್ಮ ಮುದ್ದು ಮುದ್ದಾದ ಶ್ರೀನಿವಾಸನ ಸುತ್ತ ಸದಾ ಗೆಳೆಯರ ಗುಂಪೇ ಇರುತ್ತಿತ್ತು. ಅಮ್ಮಾ ಬೆಳಿಗ್ಗೆ ಕಷ್ಟ ಪಟ್ಟು ಎರಡೂ ಹೊತ್ತಿಗೆ ಅಡುಗೆ ಮಾಡಿಟ್ಟು ಹೋಗಿ, ಸಂಜೆ ಉಸ್ಸಪ್ಪಾ ಎಂದು ಕಛೇರಿ ಮುಗಿಸಿ ಆಡುಗೆ ಮನೆಗೆ ಬಂದು ನೋಡಿದರೆ ಪಾತ್ರೆ ಪಗಡಗಳೆಲ್ಲಾ ಚೆಲ್ಲಾ ಪಿಲ್ಲಿ. ಮಾಡಿದ ಅಡುಗೆಯೆಲ್ಲಾ ಖಾಲಿ ಖಾಲಿ. ಸಂಜೆ ಶಾಲೆ ಮುಗಿದ ಮೇಲೆ ನಮ್ಮ ಪಿಂಟೋ ತನ್ನ ಪಟಾಲಂ ನೆಲ್ಲಾ ಕರೆತಂದು ಅಮ್ಮಾ ಮಾಡಿದ ಅಡುಗೆಯನ್ನೆಲ್ಲಾ ಗೆಳೆಯರೊಡನೆ ಖಾಲಿ ಮಾಡಿಬಿಡುತ್ತಿದ್ದರೂ, ಸ್ವಲ್ಪವೂ ಬೇಸರಿಕೊಳ್ಳದೇ ಮತ್ತೆ ಪ್ರೀತಿಯಿಂದ ಅನ್ನ ಮಾಡಿ ಬಡಿಸುತ್ತಿದ್ದ ಅನ್ನಪೂರ್ಣೆ ಅವರ ಅಮ್ಮಾ.
ಅದೊಮ್ಮೆ ಬೆಂಗಳೂರಿನಿಂದ ಚಿಕ್ಕಮಗಳೂರಿನ ಕೊಪ್ಪಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಒಬ್ಬ ಮಧ್ಯಮ ವಯಸ್ಸಿನವರು ಮತ್ತೊಬ್ಬ ತರುಣ ಅವರ ಪಕ್ಕದಲ್ಲಿ ಮತ್ತೊಬ್ಬ ವಯಸ್ಕರು ಪ್ರಯಾಣಿಸುತ್ತಿದ್ದರು. ಹಾಗೆ ಹೋಗುವಾಗ ಆ ಮಧ್ಯಮ ವಯಸ್ಸಿನವರೂ ಮತ್ತು ತರುಣ ಪರಸ್ಪರ ಪರಿಚಯಿಸಿಕೊಂಡು ಎಲ್ಲಿಗೇ ಪ್ರಯಾಣ ಎಂದು ಕೇಳಿಕೊಂಡರು ಅಗ ಹುಡುಗ ಕೊಪ್ಪಾದ ಕಡೆಗೆ ಅಂದನಂತೆ ಅದಕ್ಕೆ ಅವರು ಓಹೋ!! ನಾನು ಕೂಡ ಕೊಪ್ಪಾಕ್ಕೇ ಹೋಗುತ್ತಿರುವುದು, ಅಲ್ಲಿಂದೆ ಮುಂದೇ ಎಲ್ಲಿ? ಅಂದದ್ದಕ್ಕೆ ಗಿಣಿಯಕ್ಕೆ ಹೋಗುತ್ತಿದ್ದೀನಿ ಎಂದನಂತೆ ಆ ತರುಣ. ಅಯ್ಯೋ ರಾಮಾ! ನಾನೂ ಕೂಡಾ ಗಿಣಿಯಾಕ್ಕೆ ಹೋಗಿತ್ತಿರುವುದು. ಗಿಣಿಯಾದಲ್ಲಿ ಯಾರ ಪೈಕಿ? ಎಂದಾಗ ಅ ತರುಣ ಅವರ ಮನೆಯ ಹಿರಿಯರ ಹೆಸರನ್ನು ಹೇಳಿದಾಗ, ಅಯ್ಯಯ್ಯೋ ನಮ್ಮದೂ ಅವರ ಕುಟುಂಬವೇ!! ಏನು ಋಣಾನು ಸಂಬಂಧ ನೋಡಿ ನಾವಿಬ್ಬರೂ ಸಂಬಧಿಗಳೂ ಒಂದೇ ಸಮಯದಲ್ಲಿ ಒಟ್ಟಿಗೆ ಊರಿಗೆ ಹೋಗುತ್ತಿದ್ದೇವೆ ಎಂದರಂತೆ. ಇವರಿಬ್ಬರ ಸಂಭಾಷಣೆಯು ಬೇಕೋ ಬೇಡವೋ ಅ ವೃದ್ಧರ ಕಿವಿಗೆ ಬೀಳುತ್ತಿತ್ತು. ಆರಂಭದಲ್ಲಿ ಮತ್ತೊಬ್ಬರ ವಿಷಯ ತಮಗೇಕೆ ಎಂದು ಸುಮ್ಮನಾಗಿದ್ದರೂ, ಇವರಿಬ್ಬರ ಸಂಭಾಷಣೆ ಕೇಳಲಾಗದೇ, ಇದೇನು ಸ್ವಾಮೀ ಇಬ್ಬರೂ ಒಂದೇ ಕುಟುಂಬದವರು ಅಂತೀರೀ? ಒಬ್ಬರಿಗೊಬ್ಬರ ಪರಿಚಯವೇ ಇಲ್ಲವೇ ಎಂದು ಕುತೂಹಲದಿಂದ ಕೇಳಿದಾಗ. ಇಬ್ಬರೂ ಗಹ ಗಹ ನಗುವುದನ್ನು ನೋಡಿ ಆಶ್ಚರ್ಯ ಚಕಿತರಾಗಿ ಇದೇನು ಸ್ವಾಮಿ ಹೀಗೆ ನಗ್ತಾ ಇದ್ದೀರಿ? ಕೇಳ್ಬಾರದ್ದೇನಾದ್ರೂ ಕೇಳ್ಬಿಟ್ನಾ? ಎಂದಾಗ ಮತ್ತೊಮ್ಮೆ ಜೋರಾಗಿ ನಗುತ್ತಾ ಇಲ್ಲಾ ಸ್ವಾಮೀ, ಹಾಗೇನಿಲ್ಲಾ. ನಾವಿಬ್ಬರೂ ಅಪ್ಪಾ ಮಗ. ಸುಮ್ಮನೆ ಪ್ರಯಾಣದ ಏಕನತೆಯನ್ನು ಕಳೆಯಲು ಈ ರೀತಿಯಾಗಿ ಮಾತನಾದ್ವೀ ಎಂದಾಗ ಬೇಸ್ತು ಬಿದ್ದ ವಯಸ್ಕರ ಪರಿ ಯಾರಿಗೂ ಬೇಡ. ಈ ರೀತಿಯಾಗಿತ್ತು ಶ್ರೀ ಕೃಷ್ಣಮೂರ್ತಿಗಳು ಮತ್ತು ಅವರ ಮಗ ಶ್ರೀನಿವಾಸನ ಸಂಬಂಧ. ಅಪ್ಪಾ ಮಗ ಎನ್ನುವು ಸಂಬಂಧಕ್ಕಿಂತ ಆತ್ಮೀಯ ಗೆಳೆಯರಂತೆಯೇ ಸದಾಕಾಲವೂ ಇರುತ್ತಿದ್ದರು.
ಇನ್ನು ಪ್ರೀತಿಯ ಅಕ್ಕ ಮಂಜುಳ ಮತ್ತು ಮಮತೆಯ ತಂಗಿ ಮಮತ ಇಬ್ಬರೂ Partners in crime ಎನ್ನುವಂತೆ ಸಹೋದರನ ಎಲ್ಲಾ ಆಟ-ಪಾಠ ಮತ್ತು ಚೇಷ್ಟೆಗಳಲ್ಲಿಯೂ ಸಹಭಾಗಿತ್ವ. ಪಿಂಟೂವಿನ ಎಲ್ಲಾ ಸ್ನೇಹಿತರಿಗೂ ಇವರಿಬ್ಬರೂ ಪ್ರೀತಿಯ ಅಕ್ಕ ತಂಗಿಯರು. ಪಿಂಟೂನನ್ನು ಹುಡುಕಿಕೊಂಡು ಆವರ ಮನೆಗೆ ಯಾರೇ ಹೋದರೂ ಅವರನಿಲ್ಲದಿದ್ದರೂ ಮೆನೆಯಲ್ಲಿ ಉಳಿದ ನಾಲ್ವರಲ್ಲಿ ಯಾರಿದ್ದರೂ ಅತಿಥ್ಯಕ್ಕೇನು ಕಡಿಮೆ ಇಲ್ಲದಂತೆ ನೋಡಿ ಕಳುಹಿಸುತ್ತಿದ್ದಂತಹ ಸ್ನೇಹಮಯೀ ಕುಂಟುಂಬ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದರೂ ಯಾವುದೇ ಮುಜುಗರವಿಲ್ಲದೇ ಅವರ ಮನೆಯೆ ಎಲ್ಲಾ ಕಡೆಗೂ ಮುಕ್ತವಾಗಿ ಹೋಗಬಹುದಾಗಿತ್ತು.
ಇಂತಾ ಪಿಂಟೂ ನನಗೆ ಪರಿಚಯವಾಗಿದ್ದು ಆರ್. ಟಿ. ನಗರದ ಆದರ್ಶ ಪಾಲಿಟೆಕ್ನಿಕ್ ನಲ್ಲಿ. ನಾನು ಮೊದಲ ವರ್ಷಕ್ಕೆ ಸೇರಿಕೊಂಡಾಗ ಪಿಂಟೂ ಎರಡನೇ ವರ್ಷದಲ್ಲಿದ್ದ. ಅಗಾಗಲೇ ಅವರನ ಕೀರ್ತಿ ಪತಾಕೆ ಕಾಲೇಜಿನಲ್ಲಿ ಹಬ್ಬಿಯಾಗಿತ್ತು. ಅವನದ್ದೇ ಆದ ಒಂದು ಗುಂಪಿತ್ತು. ಮಲ್ಲೇಶ್ವರಂ ಸುತ್ತ ಮುತ್ತಲಿಂದ ಬರುತ್ತಿದ್ದ 115A ಮತ್ತು 176 ಬಸ್ಸಿನ ಅಷ್ಟೂ ಹುಡುಗರಿಗೆ ಅವನದ್ದೇ ನಾಯಕತ್ವ. ಕಾಲೇಜು ಶುರುವಾದ ಒಂದೆರಡು ವಾರಗಳಲ್ಲಿನಡೆದ ಮೊದಲ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಏಕಪಾತ್ರಾಭಿನಯ, ಮಿಮಿಕ್ರಿ, ಹಾಡು ಹೀಗೆ ಹತ್ತಾರು ಸ್ಪರ್ಥೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದು ಎಲ್ಲರ ಗಮನ ಸೆಳೆದ ನನ್ನನ್ನು ಗಮನಿಸಿ ಏನೋ ರಾಜಾ! ಏನೋ ನಿನ್ನ ಹೆಸ್ರೂ?? ಯಾವ ಬ್ರಾಂಚು? CS ಇಲ್ವಾ ECನಾ? ಎಲ್ಲಿಂದ ಬರೋದು ಅಂತಾ ಒಂದೇ ಸಮನೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದು ಇನ್ನೂ ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ. ಅಷ್ಟರಲ್ಲಿ ನನ್ನ ಮಕ್ಕದಲ್ಲಿದ್ದ ಮತ್ತು ಪಿಂಟೂ ಮನೆಯ ರಸ್ತೆಯಲ್ಲಿಯೇ ವಾಸವಾಗಿದ್ದ ನನ್ನ ಸಹಪಾಠಿ ವಿಜಯ್ ನಮ್ಮಿಬ್ಬರನ್ನೂ ಪರಸ್ಪರ ಪರಿಚಯ ಮಾಡಿಕೊಟ್ಟಿದ್ದ. ಅಲ್ಲಿಂದ ಮುಂದೆ ನಮ್ಮಿಬ್ಬರ ಅವಿನಾಭಾವ ಸಂಬಂಧ ಅವಿಸ್ಮರಣಿಯವಾಗಿ ಮುಂದುವರೆಯಿತು
ವಯಸ್ಸಿನಲ್ಲಿ ಪಿಂಟೂ ನನಗಿಂತ ಚಿಕ್ಕವ(ನಾನು PUC ಮುಗಿಸಿ Diploma)ನಾದರೂ ನೋಡಲು ನನಗೆ ಅಣ್ಣನಂತೆಯೇ ಇದ್ದ. ನೋಡ್ ಮಗಾ, ಯಾರೇ ಏನ್ ಮಾಡಿದ್ರೂ ನನ್ಗೆ ಹೇಳು ನಾನು ನೋಡ್ಕೋತೀನಿ ಅಂತ ಅಭಯ ಹಸ್ತ ನೀಡಿದ್ದ ಪಿಂಟೂ ಅದನ್ನು ಚಾಚೂ ತಪ್ಪದೇ ಪಾಲಿಸುತ್ತಲೂ ಇದ್ದ. ಒಂದು ರೀತಿ ಕೈಲಾಸಂ ಅವರ ಪೋಲಿ ಕಿಟ್ಟಿಯ ತರಹ. ಹೊರ ಜಗತ್ತಿಗೆ ಆತ ಸ್ವಲ್ಪ ಒರಟ ಅಥವಾ ಹುಂಬನಂತೆ ಕಂಡರೂ ಮೃದು ಮನಸ್ಸು, ದಾನ ಶೂರ ಕರ್ಣ, ಆಪದ್ಭಾಂಧವ ಎಂತಹ ಕಾಲದಲ್ಲೂ ಎಂತಹ ಉಪಕಾರಕ್ಕೂ ಸೈ ಎನ್ನುವಂತಹ ಆಪ್ತಮಿತ್ರ ಎಂದರೂ ಸೈ. ಗೆಳೆಯರ ಕಷ್ಟ ಸುಖಃಗಳಲ್ಲಿ ಸದಾ ಬಾಗಿ. ಎಷ್ಟೋ ಬಾರಿ ತನ್ನ ಕೈಯಿಂದಲೇ ಆಗಿನ ಕಾಲದಲ್ಲಿಯೇ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದ್ದ ನಮ್ಮ ಪಿಂಟೂ. ದೇವನೊಬ್ಬ ನಾಮ ಹಲವು ಎನ್ನುವಂತೆ ವ್ಯಕ್ತಿಯಾಗಿ ಪಿಂಟೂ ಒಬ್ಬನಾದರೂ, ನಾನಾ ರೂಪಗಳಲ್ಲಿ ನಾನಾ ತರಹ ಸಹಾಯ ಮಾಡುತ್ತಿದ್ದ
ಕಾಲೇಜು ಎಂದ ಮೇಲೆ ಕಾಲೇಜಿನ ಚುನಾವಣೆ ಎನ್ನುವುದು ಸಹಜ ಪ್ರಕ್ರಿಯೆ. ನಮ್ಮ ಕಾಲೇಜಿನಲ್ಲಿಯೂ ಚುನಾವಣೆ ನಡೆದಾಗ ಎರಡನೇ ವರ್ಷದಲ್ಲಿ ಓದುತ್ತಿದ್ದರೂ ಕಾಲೇಜ್ ಪ್ರೆಸಿಡೆಂಟ್ ಶಿಪ್ಪಿಗೆ ಪಿಂಟೂ ಸ್ಪರ್ಧಿಸಿದಾಗ ನಮ್ಮೆಲ್ಲರ ಸಹಕಾರ ಅವನಿಗೇ ಎಂದು ಪ್ರತ್ಯೇಕ ಹೇಳ ಬೇಕಿಲ್ಲ. ಮೊದಲು ಕ್ಲಾಸ್ ರೆಪ್ರೆಸೆಂಟಿಟಿವ್ ನಮ್ಮವರೇ ಚುನಾಯಿತರಾಗಿ ಅದಾದ ನಂತರ ಸಾಂಸ್ಕೃತಿಕ, ಕ್ರೀಡೆ, ಇತ್ಯಾದಿ, ಇತ್ಯಾದಿಗಳೆಲ್ಲವೂ ನಮ್ಮವರೇ. ಈಗ ನಾವೇನು ಕಿರಿಕ್ ಪಾರ್ಟಿ ಸಿನಿಮಾದಯಲ್ಲಿ ನೋಡಿದ್ವೋ ಅದೇ ರೀತಿಯ ಜಿದ್ದಾ ಜಿದ್ದಿ ಚುನಾವಣೆಗಳು ಆ ಕಾಲದಲ್ಲೇ ನಡೆದು ಆ ಚಿತ್ರದ ನಾಯಕ ಕರ್ಣನಂತೆಯೇ ನಮ್ಮ ಪಿಂಟೂ ಅನಾಯಾಸವಾಗಿ ಗೆದ್ದು ಕಾಲೇಜ್ ಪ್ರೆಸಿಡೆಂಟ್ ಆಗಿಯೇ ಬಿಟ್ಟ. ಓದಿನಲ್ಲಿ ಅಷ್ಟಕ್ಕಷ್ಟೇ ಇದ್ದರೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎತ್ತಿದ ಕೈ. ಕಾಂಚೀ ರೇ ಕಾಂಚಿರೇ.. ಅಂತ ಬಲಗೈ ಚಿಟಿಕೆ ಹೊಡೆದುಕೊಂಡು ಹಾಡಲು ಶುರು ಹಚ್ಚಿಕೊಂಡಾ ಅಂತಂದ್ರೇ, ಒಂದೋ ಬೆಂಚನ್ನೇ ಡ್ರಮ್ಸ್ ಮಾಡಿಕೊಂಡ ನುಡಿಸುತ್ತಿದ್ದ ನಮ್ಮಂತಹವರ ಕೈ ನೋವಾಗ ಬೇಕು ಇಲ್ಲವೇ ಚಪ್ಪಾಳೆ ಸಿಳ್ಳೇ ಹೊಡೆದು ಎಲ್ಲರ ಕೈ ನೋವಾಗ ಬೇಕು ಆಗಲೇ ಆ ಸಂಗೀತ ಗೋಷ್ಟಿ ಮುಗಿಯುತ್ತಿದ್ದದ್ದು. ಇನ್ನು ಕೇರಂ ಮತ್ತು ಕ್ರಿಕೆಟ್ ಕಾಲೇಹಿನಲ್ಲಿ ಅವನಿಷ್ಟವಾದ ಆಟವಾದರೂ ಅವರ ಮನೆಯ ಮೇಲಿನ ಕೋಣೆಯಲ್ಲಿ ಆಪ್ತ ಗೆಳೆಯರೊಡನೆ ಇಸ್ಪೀಟ್ ಆಟವನ್ನೂ ಆಡುತ್ತಿದ್ದ. ಅಪ್ಪೀ ತಪ್ಪೀ ನಾವು ಅಲ್ಲಿಗೇ ಹೋದರೇ, ಅಲಲಲಲೇ ಕಂಠಾ, ನೀವೆಲ್ಲಾ ಇಲ್ಲಿಗೆ ಬರ್ಬಾದಪ್ಪಾ, ಹೋಗಪ್ಪಾ ಎಂದೂ ಮೊದಲು ಪ್ರೀತಿಯಿಂದ ಹೇಳಿದ್ದಕ್ಕೆ ಬಗ್ಗದಿದ್ದರೇ, ಹೋಗಲೇಲೇ…. ಅಂತ ಪ್ರೀತಿಯಿಂದ ಗದರಿ ಕಳಿಸುವಂತಹ ಸಲುಗೆ ನಮ್ಮಲ್ಲಿತ್ತು.
ಕಾಲೇಜ್ ಸ್ಪೋಟ್ಸ್ ಡೇ ಮತ್ತು ಕಲ್ಚರ್ಲ್ಸ್ ಡೇನಲ್ಲಿ ಅವನದ್ದೇ ಪಾರುಪತ್ಯ. ಸ್ವತಃ ಒಳ್ಳೆಯ ಕ್ರಿಕೆಟ್ ಮತ್ತು ಕೇರಂ ಆಟಗಾರನಾಗಿದ್ದ ಪಿಂಟುವಿಗೆ ಒಂದಂಲ್ಲಾ ಒಂದು ಪ್ರಶಸ್ತಿಗಳು ಕಟ್ಟಿಟ್ಟ ಬುತ್ತಿ. ಇನ್ನು ರಿಹರ್ಸಲ್ ನಲ್ಲಿ ಅವನು ಮತ್ತು ಅವನ ತಂಡ ಮಾಡಿ ತೋರಿಸಿ ಪ್ರಿನ್ಸಿಪಾಲರನ್ನು ಒಪ್ಪಿಸಿದ ಸಣ್ಣ ಸಣ್ಣ ನಗೆ ನಾಟಕಗಳು ಮತ್ತು ಹಾಡುಗಳು ಕಾರ್ಯಕ್ರಮದಂದು ತನ್ನದೇ ಆದ ರೂಪವನ್ನು ಪಡೆದು ಕೆಲವೊಂದು ಬಾರಿ ಕಾಲೇಜಿನ ಆಡಳಿತವರ್ಗಕ್ಕೆ ಮುಜುಗರಕ್ಕೆ ಒಳಪಡಿಸಿದರೂ ಅದಕ್ಕೆಲ್ಲಾ ಕೇರೇ ಮಾಡುತ್ತಿರಲಿಲ್ಲ ನಮ್ಮ ಪಿಂಟೂ. ಆನೆ ನಡೆದದ್ದೇ ದಾರಿ ಎನ್ನುವಂತಿದ್ದ.
ಇನ್ನು ಪರೀಕ್ಷೇ ಬಂದಿತೆಂದರೆ ಪ್ರಾಕ್ಟಿಕಲ್ಸ್ ಪರೀಕ್ಷೆಗೆ ಹೊರಗಿನಿಂದ ಯಾವ ಪರಿಕ್ಷಕರು ಬರುತ್ತಾರೆ ಎಂಬ ಕೂತೂಹಲ ನಮಗಿದ್ದರೆ ಅದರ ಪರಿಹಾರಕ್ಕೆ ನಾವೆಲ್ಲಾ ಹೋಗುತ್ತಿದ್ದದ್ದೇ ಪಿಂಟೂವಿನ ಬಳಿ. ಸ್ಟಾಫ್ ರೂಮ್ ಮತ್ತು ಆಫೀಸ್ ರೂಮಿನಲ್ಲಿ ಎಲ್ಲರ ಪರಿಚಯವನ್ನೂ ಮಾಡಿ ಕೊಂಡಿರುತ್ತಿದ್ದ ನಮ್ಮ ಹೀರೋ, ಪರೀಕ್ಷೇಗೆ ಒಂದು ವಾರ ಮುಂಚೆಯೇ ಯಾವ ಕಾಲೇಜಿನಿಂದ ಯಾರು ಬರುತ್ತಾರೆ? ಅವರ ಸ್ವಭಾವ ಎಂತಹದ್ದು. ಹೋದ ವರ್ಷ ಅವರು ಯಾವ ಕಾಲೇಜಿಗೆ ಹೋಗಿದ್ದರು ಅಲ್ಲಿ ಯಾವ ರೀತಿಯ ಅಂಕಗಳನ್ನು ಕೊಟ್ಟಿದರು. ಅವರ ಸ್ವಭಾವ ಸರಳವೋ ಇಲ್ಲವೇ ಶಿಸ್ತಿನವರೋ, ಅಂಕ ಕೊಡುವುದರಲ್ಲಿ ದಾರಾಳಿಯೋ ಇಲ್ಲವೇ ಹಿಡಿತವೋ ಎಲ್ಲವನ್ನೂ ಪತ್ತೆ ಹಚ್ಚಿ, ಲೇ ಏನು ಭಯ ಪಡ್ಬೇಡ್ರೋ.. ಒಳ್ಳೇ ಮನುಶ್ಯ. ನೋಡೋಕೆ ಸ್ವಲ್ಪ ಸ್ಟ್ರಿಕ್ಟ್ ಆದ್ರೇ ಚೆನ್ನಾಗಿ ಮಾಡಿದ್ರೇ ಮಾರ್ಕ್ ಕೊಡ್ತಾರಂತೆ ಅಂತ ಎಲ್ಲರನ್ನೂ ಹುರಿದುಂಬಿಸುತ್ತಿದ್ದ ನಮ್ಮ ಪಿಂಟು.
ಓ ಲೇಖನ ಓದುತ್ತಿರುವ ಎಲ್ಲರಿಗೂ ನಮ್ಮ ಕಾಲೇಜಿನ ವಿದ್ಯಾರ್ಥಿ ನಾಯಕ ಪಿಂಟೂವಿನ ಪ್ರತಾಪ ನಿಮ್ಮ ಕಾಲೇಜಿನ ಹೀರೋಗಳೋ ಇಲ್ಲವೇ ರಣರಂಗದ ಶಿವರಾಜ್ ಕುಮಾರ್, ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ನೆನಪು ಮಾಡಿಸತ್ತೇ ಅಂದ್ರೇ ಖಂಡಿತ ಅತಿಶಯೋಕ್ತಿ ಏನಲ್ಲ. ಇಂತಾ ಪಿಂಟೋ ಓದಿ ಮುಗಿಸಿದ್ನಾ? ಆಮೇಲೇ ಏನ್ಮಾಡ್ದಾ? ಈಗ ಎಲ್ಲಿದ್ದಾನೇ? ಅನ್ನೂದನ್ನಾ ಮುಂದಿನ ಭಾಗದಲ್ಲಿ ಭಾಗದಲ್ಲಿ ತಿಳಿದು ಕೊಳ್ಳೋಣ.ಅಲ್ಲಿವರೆಗೂ ಶ್ರೀನಿವಾಸನನ್ನು ಸ್ಮರಣೆ ಮಾಡೋಣ. ಅರರೇ ನಮ್ಮ ಶ್ರೀನಿವಾಸನಲ್ಲಾ ಸಾಕ್ಷಾತ್ ಆ ಭಗವಂತ ಶ್ರೀನಿವಾಸನನ್ನು ಸ್ಮರಿಸೋಣ.
ಏನಂತಿರೀ?
ಸಶೇಷ
ಕಥೆ ಮುಂದುವರೆಯುತ್ತದೆ…………….