ಭಾರತ / ಆಸ್ಟ್ರೇಲಿಯ ಟೈಟಾನ್ ಕಪ್ 1996

ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ಒಂದೊಂದು ಪಂದ್ಯವನ್ನು ಗೆದಿದ್ದು ಸರಣಿ ಗೆಲ್ಲಲು ಎರಡೂ ತಂಡಗಳಿಗೆ ಈ ಪಂದ್ಯ ಬಹಳ ಮುಖ್ಯವಾಗಿರುವ ಪರಿಣಾಮವಾಗಿ ಈ ಪಂದ್ಯ ಬಹಳ ಜಿದ್ದಾ ಜಿದ್ದಿನಿಂದ ರೋಚಕವಾಗಿರುವುದರಲ್ಲಿ ಸಂದೇಹವೇ ಇಲ್ಲ. ಈ ಸಮಯದಲ್ಲಿ, ಇದೇ ಕ್ರೀಡಾಂಗಣದಲ್ಲಿ , ಇದೇ ತಂಡಗಳ ನಡುವೆ 1996ರಲ್ಲಿ ರೋಚಕವಾಗಿ ನಡೆದ ಟೈಟಾನ್ ಕಪ್ ಪಂದ್ಯವಳಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಹೊನಲು ಬೆಳಕಿನ ಆ ಪಂದ್ಯವನ್ನು ಕ್ರೀಡಾಂಗಣದಲ್ಲಿ ನೇರವಾಗಿ ನೋಡಲು ಹೋಗಿದ್ದ ನನ್ನ ಅನುಭವನ್ನು ನಿಮ್ಮೊಡನೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.

ನನ್ನ ಗೆಳೆಯ ನರಹರಿ, ಅರ್ಥಾತ್ ನಮ್ಮ ಪ್ರೀತಿಯ ಹರಿಯವರ ಮನೆಯನ್ನು ಬಿಇಎಲ್ ಕ್ರಿಕೆಟ್ ತಂಡಕ್ಕೆ ಆಡುತ್ತಿದ್ದ ಆಟಗಾರರೊಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದರು. ಹಾಗಾಗಿ ಬೆಂಗಳೂರಿನಲ್ಲಿ ನಡೆವ ಬಹುತೇಕ ಪಂದ್ಯಗಳಿಗೆ ಅವರೇ ಎರಡು ಟಿಕೆಟ್ ತಂದು ಕೊಟ್ಟು ಆದರ ಮೊತ್ತವನ್ನು ಮುಂದಿನ ತಿಂಗಳ ಬಾಡಿಗೆಯಲ್ಲಿ ಹಿಡಿದುಕೊಳ್ಳವ ಅಲಿಖಿತ ಒಪ್ಪಂದವಾಗಿದ್ದ ಕಾರಣ, ಈ ಪಂದ್ಯಕ್ಕೂ ನಮಗೆ ಸುಲಭವಾಗಿ ಟಿಕೆಟ್ ಸಿಕ್ಕಿ, ನಾನೂ ಮತ್ತು ನನ್ನ ಗೆಳೆಯ ಹರಿ ಮಟ ಮಟ ಮಧ್ಯಾಹ್ನ ಸುಡು ಬಿಸಿಲಿನಲ್ಲಿ ನನ್ನ ಹೀರೋ ಪುಕ್ ಗಾಡಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಗ್ಗೆ ಹಾಕಿದ್ದೆವು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈ ವೋಲ್ಟೇಜ್ ಪಂದ್ಯ ಒಂದು ಕಡೆಯಾದಲ್ಲಿ ಕರ್ನಾಟಕದ ಪಾಲಿಗೆ ಒಂದು ಮಹತ್ವ ಪೂರ್ಣ ಪಂದ್ಯವಾಗಿತ್ತು ಎಕೆಂದರೆ ಕರ್ನಾಟಕದ ಆರು ಮಂದಿ ಈ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದರು. ಆರಂಭಿಕ ಆಟಗಾರ ಸುಜಿತ್ ಸೋಮಸುಂದರ್, ರಾಹುಲ್ ದ್ರಾವಿಡ್ ಬ್ಯಾಟಿಂಗ್ ಕಲಿಗಳಾದರೆ, ಶ್ರೀನಾಥ್, ಪ್ರಸಾದ್, ಕುಂಬ್ಲೆ ಮತ್ತು ಸುನೀಲ್ ಜೋಷಿ ಬೋಲಿಂಗ್ ಜವಾಬ್ಧಾರಿಯನ್ನು ಹೊತ್ತಿದ್ದರು.

ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ನಾಯಕ ಮಾರ್ಕ್ ಟೇಲರಿಗೂ ಚಿನ್ನಸ್ವಾಮಿ ಕ್ರೀಂಡಾಂಗಣಕ್ಕೂ ಅವಿನಾಭಾವ ಸಂಬಂಧ. ಪ್ರತೀ ಬಾರಿ ಈ ಕ್ರೀಡಾಂಗಣದಲ್ಲಿ ರನ್ಗಳ ಮಳೆ ಸುರಿಸುವಂತೆ ಈ ಬಾರಿಯೂ 105 ರನ್ನುಗಳನ್ನು ಬಾರಿಸಿದರೆ, ಅವರಿಗೆ ಆಧಾರವಾಗಿ ಮತ್ತೊಂದು ತುದಿಯಲಿ ಸ್ಟೀವ್ ವಾ 41 ಮತ್ತು ಒಂಡೇ ಸ್ಪೆಶಲಿಸ್ಟ್ ಮೈಕಲ್ ಬೆವನ್ 36 ರನ್ನುಗಳ ಬಲದಿಂದ ನಿಗಧಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ಸಾಧಾರಣ ಮೊತ್ತಗಳಿಸಿತು. ಟೇಲರ್ ನಂತೆ ವೆಂಕೀಯೂ ಕೂಡಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸದಾಕಾಲವೂ ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬರುವಂತೆ ಈ ಬಾರಿಯೂ ಮತ್ತೊಮ್ಮೆ ಅಪದ್ಭಾಂಧವನಾಗಿ 37ರನ್ನುಗಳನ್ನಿತ್ತು 3 ವಿಕೆಟ್ ಗಳಿಸಿದರೆ, ಅವರಿಗೆ ಸಾತ್ ಕೊಟ್ಟ ಅನಿಲ್ 40/2 ವಿಕೆಟ್ ಗಳಿಸಿದ್ದರು.

ಸಂಜೆ ವಿರಾಮದ ಸಮಯದಲ್ಲಿ ಅಸ್ತ್ರೇಲಿಯಾ ಸಾಧಾರಣ ಮೊತ್ತಗಳಿಸಿದ್ದ ಕಾರಣ ಭಾರತಕ್ಕೆ ಗೆಲುವು ಸುಲಭದ ತುತ್ತು ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆರಂಭ ಆಟಗಾರರಾಗಿ ಬಂದ ಸುಜಿತ್ ಸೋಮಸುಂದರ್ ಒಂದು ಬೌಂಡರಿ ಬಾರಿಸಿ ಆಟಕ್ಕೆ ಕುದುರಿಕೊಳ್ಳುತ್ತಿದ್ದಾನೆ ಎನ್ನುವಷ್ಟರಲ್ಲಿ ಮೆಗ್ರಾತ್ ಬೋಲಿಂಗಿಗೆ ಮೊದಲ ಆಹುತಿಯಾದರೆ ನಂತರ ಬಂದ ಬಹುತೇಕ ದಾಂಡಿಗರು ಆತುರಾತುರವಾಗಿ ಪೆವಿಲಿಯನ್ ಸೇರಿಕೊಂಡರು. ನಾಯಕ ಅಜರುದ್ದೀನ್ ವಿವಾದಾತ್ಮಕವಾಗಿ ಔಟಾದಾಗ, ಪ್ರೇಕ್ಷರ ಸಹನೆಯ ಕಟ್ಟೆಯೊಡೆದು ಮೈದಾನದತ್ತ ಕೈಗೆ ಸಿಕ್ಕ ವಸ್ತುಗಳನ್ನು ಎಸೆಯತೊಡಗಿದಾಗ ಪಂದ್ಯ ಕೆಲಕರ ಸ್ಥಗಿತಗೊಂಡಿತ್ತು. ಸ್ವತಃ ಅಜರುದ್ದೀನ್ ಮತ್ತೊಮ್ಮೆ ಮೈದಾನಕ್ಕೆ ಬಂದು ಪ್ರೇಕ್ಷಕರತ್ತ ಕೈಜೋಡಿಸಿ ತಾಳ್ಮೆಯಿಂದ ಸಹಕರಿಸಲು ಕೋರಿಕೊಂಡಾಗಲೇ ಪಂದ್ಯ ಪುನರಾರಂಭವಾಯಿತು. ಒಂದು ಕಡೆ ವಿಕೆಟ್ ಮೇಲೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದು ತುದಿಯಲ್ಲಿ ಭದ್ರವಾಗಿ ತಳವೂರಿದ್ದ ಸಚಿನ್ ಭರ್ಜರಿಯಾಗಿ ಆಟವಾಡುತ್ತಾ ಎಲ್ಲರಲ್ಲೂ ಗೆಲುವಿನ ಭರವಸೆಯನ್ನು ಮೂಡಿಸಿದ್ದರು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ 111 ಚೆಂಡುಗಳಲ್ಲಿ 88 ರನ್ನುಗಳನ್ನು ಗಳಿಸಿದ್ದ ಸಚಿನ್ ಸ್ಟೀವ್ ವಾ ಬೋಲಿಂಗಿನಲ್ಲಿ ಔಟಾಗುತ್ತಿದ್ದಂತೆಯೇ, ಪಂದ್ಯದ ಫಲಿತಾಂಶ ನಿರ್ಧಾರವಾಗಿ ಭಾರತ ತಂಡ ಇಷ್ಟು ಕಳಪೆಯಗಿ ಆಡುತ್ತಿದೆಯಲ್ಲಾ ಎಂಬ ನೋವಿನಿಂದ ಮತ್ತೊಮ್ಮೆ ಪೇಕ್ಷಕರ ದಾಂಧಲೆ ಆರಂಭವಾಯಿತು.

ಪಂದ್ಯ ಭಾರತದ ಕೈ ಜಾರುತ್ತಲಿದೆ ಮತ್ತು ನಾವಿದ್ದ ಸ್ಟಾಂಡಿನಲ್ಲಿಯೇ ಜೋರಾದ ಗಲಭೆ ನಡೆಯುತ್ತಿದ್ದ ಕಾರಣ ಸುಮ್ಮನೆ ಅಲ್ಲೇಕೆ ಸಿಕ್ಕಿ ಹಾಕಿಕೊಳ್ಳಬೇಕೆಂದು ನಿರ್ಧರಿಸಿದ ನಾನು ಮತ್ತು ನನ್ನ ಗೆಳೆಯ ಹರಿ ಮೈದಾನದಿಂದ ಹೊರಬರಲು ಹೊರಟೆವು. ಅಲ್ಲಿಂದ ಒಂದು ಹತ್ತು ಹದಿನೈದು ಸೀಟ್ ದಾಟುತ್ತಿದ್ದಂತೆಯೇ ನನ್ನ ಮತ್ತಿಬ್ಬರು ಗೆಳೆಯರು ಸಿಕ್ಕರು. ಅವರಿಗೂ ಪರಿಸ್ಥಿತಿಯನ್ನು ವಿವರಿಸಿ ಅವರಲ್ಲೂ ಭಯದ ವಾತಾವಾಣ ಬಿತ್ತಿ ಅವರನ್ನೂ ಮೈದಾನದಿಂದ ಹೊರತರುವುದರಲ್ಲಿ ನಾನು ಸಫಲನಾಗಿ ಎಲ್ಲರನ್ನೂ ಕಾಪಾಡದೆನೆಂಬ ಸಾರ್ಥಕತೆ ನನ್ನಲ್ಲಿ ಮೂಡಿತ್ತು.

kumle1ಛೇ!! ನಾವು ನೋಡಲು ಹೋಗಿದ್ದ ಪಂದ್ಯವನ್ನೇ ಈ ರೀತಿಯಾಗಿ ಸೋಲಬೇಕೇ? ಅದೂ ಸಾಧಾರಣ ಮೊತ್ತ ಎಂದು ಮನಸ್ಸಿನಲ್ಲಿಯೇ ಭಾರತದ ಆಟಗಾರರನ್ನು ಶಪಿಸುತ್ತಾ ಇನ್ನೇನು ಮನೆಯ ಹತ್ತಿರತ್ತರ ಹೋಗುತ್ತಿರುವಾಗ, ಇದ್ದಕ್ಕಿದ್ದಂತೆಯೇ ಪಟಾಕಿ ಶಬ್ಧ ಕೇಳಿಸಿತು. ಪಟಾಕಿ ಶಬ್ಧ ಕೇಳಿದ ಮೇಲಂತೂ ನಮ್ಮ ಕೋಪ ಮತ್ತಷ್ಟೂ ಹೆಚ್ಚಾಗಿ, ಅದ್ಯಾರಪ್ಪಾ ಆ ದೇಶದ್ರೋಹಿಗಳು ನಮ್ಮ ಮನೆಯ ಹತ್ತಿರ ಇರುವವರು?. ಭಾರತ ಸೋತಿದ್ದಕ್ಕೆ ಪಟಾಕಿ ಹೊಡೆಯುತ್ತಿರುವುದು? ಎಂದು ಅವರನ್ನು ಶಪಿಸುತ್ತಾ ನನ್ನ ನ್ಸೇಹಿತನ ಮನೆಯ ಬಾಗಿಲನ್ನು ಬಡಿದಾಗ, ಬಾಗಿಲನ್ನು ತೆರೆದ ನನ್ನ ಸ್ನೇಹಿತನ ತಂಗಿ, ಅರೇ ಏನ್ರೋ? ಆಟಾನೇ ನೋಡ್ದೇ ಬಂದುಬಿಟ್ರಾ? ಅಂದ್ಲು. ಏ ಹೋಗೇ.. ಹೋಗೇ… ಆ ಸೋಲೋ ಪಂದ್ಯಾನಾ ಯರು ನೋಡ್ತಾರೇ? ಇಂತಾ ಕಳಪೆ ಆಟ ಆಡ್ತಾರಲ್ಲಾ ಆದನ್ನು ನೋಡೋ ನಾವು ಮುಟ್ಥಾಳರು ಎಂದೆ. ಏ ಇಲ್ವೋ ಭಾರತ ಗೆದ್ಬಿಡ್ತು ಅಂತಾ ಚಿತ್ತು ಹೇಳಿದಾಗ, ಏ ಹೋಗೇ, ಸುಮ್ಮನೆ ಸುಳ್ಳು ಹೇಳಬೇಡ. ನಾವು ಸಚಿನ್ ಔಟಾದ ಮೇಲೇನೇ ಬಂದಿದ್ದು. ಬಾಲಂಗೋಚಿಗಳಾದ ಕುಂಭ್ಲೆ. ಶ್ರೀನಾಥ್ ಮತ್ತು ಪ್ರಸಾದ್ ಮಾತ್ರ ಆಡ್ಬೇಕಿತ್ತು. ಪಂದ್ಯ ಗೆಲ್ಲಲು ಇನ್ನೂ 50 ರನ್ ಬೇಕಿತ್ತು. ಆ ಕೊಲ್ಟೇಗಳು ಹೊಡ್ಬಿಟ್ರಾ ಎಂದೆ. ಹೌದು ಕಣ್ರೋ ಅವರೇ ಹೊಡಿದಿದ್ದು. ಬೇಕಿದ್ರೇ ನೋಡಿ ಎಂದಾಗ, ಮನೆಯೊಳಗೆ ಹೋಗಿ ಟಿವಿ ನೋಡಿದ್ರೇ ಟೇಲರ್ ಹ್ಯಾಪು ಮೋರೆ ಹಾಕಿಕೊಂಡು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಮಾತನಾಡುತ್ತಿದ್ದ. ಒಂದು ಕಡೆ ಪಂದ್ಯ ಗೆದ್ದದ್ದು ಮನಸ್ಸಿಗೆ ಖುಷಿ ಕೊಡ್ತಾದ್ರೂ, ಮೈದಾನಕ್ಕೇ ಹೋಗಿ ನಮ್ಮ ಪೆದ್ದು ತನದಿಂದ ಅಂತಹ ರೋಚಕ ಕ್ಷಣಗಳನ್ನು ಮಿಸ್ ಮಾಡ್ಕೊಂಬಿಟ್ವಲ್ಲಾ ನಾವಿಬ್ಬರೂ ಹೋಗ್ಲೀ ನಮ್ಮ ಮತ್ತಿಬ್ಬರು ಸ್ನೇಹಿತರನ್ನು ಬಲವಂತವಾಗಿ ಕರೆದು ಕೊಂಡು ಬಂದ್ವಲ್ಲಾ ಅಂತ ತುಂಬಾ ಬೇಜಾರಾಯ್ತು

kumble3ಸುಮ್ಮನೆ ಹಾಗೇ ಮನೆಗೆ ಹೋದ್ರೆ ನಮ್ಮ ಮನೆಯಲ್ಲೂ ಇದೇ ರೀತಿಯ ಅಭಾಸ ಆಗುತ್ತದೆ ಎಂದು ಭಾವಿಸಿ ಅಲ್ಲೇ ಕುಳಿತು ಪಂದ್ಯ ಹೈಲೈಟ್ಸ್ ನೋಡಿದಾಗ ಗೊತ್ತಾಗಿದ್ದು ಎನಪ್ಪಾ ಅಂದ್ರೇ, ಬೆಂಗಳೂರಿನ. ಸ್ಥಳೀಯ ಹುಡುಗರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರ ಅಮೋಘ ಆಟದ ಪರಿಣಾಮವಾಗಿ ಸೋಲುತ್ತಿದ ಪಂದ್ಯವನ್ನು ಭರ್ಜರಿಯಾಗಿ ಗೆಲುವು ಪಡೆದಿತ್ತು. 164/8 ವಿಕೆಟ್ ಕಳೆದು ಕೊಂಡು ಹೀನಾಮಾನ ಸ್ಥಿತಿಯಲ್ಲಿದ್ದ ತಂಡಕ್ಕೆ ಆಸರೆಯಾಗಿ ಇನ್ನೂ 7ಚೆಂಡುಗಳು ಬಾಕಿ ಇರುವಷ್ಟರಲ್ಲಿಯೇ 216 ರನ್ನುಗಳನ್ನು ಗಳಿಸುವ ಮೂಲಕ ಕೆಲವರ ಹೃದಯಾಘಾತಕ್ಕೆ ಕಾರಣರಾದರೇ ಕೊಟ್ಯಾಂತರ ಭಾರತದ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಗೆದ್ದು ಬಿಟ್ಟಿದ್ದರು ಎಂದರೆ ಅತಿಶಯೋಕ್ತಿಯೇನಲ್ಲ. ಆ ಪಂದ್ಯದ ಮತ್ತೊದು ವಿಶೇಷವೇನಂದರೆ, ತಮ್ಮ ಮಗ/ಮೊಮ್ಮಗ ಆಡುವುದನ್ನು ಕಣ್ತುಂಬಿಸಿಕೊಳ್ಳಲು ಅನಿಲ್ ಕುಂಬ್ಳೆ ಅವರ ತಾಯಿ ಮತ್ತವರ ಅಜ್ಜಿ ಖುದ್ದಾಗಿ ಪ್ರೇಕ್ಷಕರ ನಡುವೆ ಮೈದಾನದಲ್ಲಿದ್ದರು. ಶ್ರೀನಾಥ್ ಮತ್ತು ಕುಂಬ್ಲೆ ಪ್ರತೀಬಾರಿ ರನ್ನುಗಳನ್ನು ಗಳಿಸಿದಾಗಲೂ ಟಿವಿ ಕ್ಯಾಮೆರಾಗಳು ಆ ಇಬ್ಬರು ಮಹಿಳೆಯರತ್ತವೇ ತೋರಿಸುತ್ತಾ ಅವರ ಕ್ಷಣ ಕ್ಷಣದ ಪ್ರತಿಕ್ರಿಯೆಗಳನ್ನು ಸೆರೆ ಹಿಡಿದಿಟ್ಟಿದ್ದರು. ಅಂತಿಮ ಜಯದ ರನ್ ಗಳಿಸಿದಾಗಲಂತಲೂ ಕುಂಬ್ಲೆಯವರ ತಾಯಿಯವರ ಹರ್ಷೋಧ್ಗಾರ ಇಡೀ ಪಂದ್ಯದ ಹೈಲೈಟ್ ಎಂದರೂ ತಪ್ಪಾಗಲಾರದು. ಆ ಅದ್ಭುತ ರಸಕ್ಷಣ ಮತ್ತು ಕುಂಬ್ಳೆ ಅವರ ತಾಯಿಯವರರು ತಮ್ಮ ಮಗನ ಸಾಧನೆಯನ್ನು ಸಂಭ್ರಮಿಸಿದ ಪರಿ ಇಂದಿಗೂ ಲಕ್ಷಾಂತರ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದೆದೇ ಎಂದೇ ಭಾವಿಸುತ್ತೇನೆ.

kumble2ಶ್ರೀನಾಥ್ 23 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದರೆ ಅವರಿಗೆ ಬೆಂಬಲವಾಗಿ ಮತ್ತೊಂದು ತುದಿಯಲ್ಲಿ ಕುಂಬ್ಳೆ 19 ಎಸೆತಗಳಲ್ಲಿ 16 ರನ್ ಗಳಿಸಿ ಪಂದ್ಯವನ್ನು ಭಾರತದ ಪರ ಗೆಲ್ಲಿಸಿಕೊಟ್ಟಿದ್ದರು. ಭಾರತದ ತಂಡದ ಪರವಾಗಿ ಅತೀ ಹೆಚ್ಚಿನ ರನ್ ಗಳಿಸಿದ್ದ ಸಚಿನ್ ಅವರನ್ನು ಪಂದ್ಯಶ್ರೇಷ್ಠ ಎಂದು ಪುರಸ್ಕರಿಸಲಾಯಿತಾದರೂ, ಮೈದಾನದಲ್ಲಿದ್ದ ಪ್ರೇಕ್ಷಕರಿಗೂ ಮತ್ತು ಸಮಸ್ಥ ಕ್ರಿಕೆಟ್ ಪ್ರೇಮಿಗಳಿಗೂ ಅಂದಿನ ಪಂದ್ಯದ ಗೆಲುವಿನ ನಿಜವಾದ ರೂವಾರಿಗಳಾದ ಶ್ರೀನಾಥ್ ಮತ್ತು ಕುಂಬ್ಳೆ ಅವರುಗಳೇ ಪಂದ್ಯ ಪುರುಶೋತ್ತಮರಾಗಿದ್ದರು. ಈ ಪಂದ್ಯ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ರೋಮಾಂಚಕವಾದ ಪಂದ್ಯ ಎಂದೇ ಖ್ಯಾತಿಯಾಗಿದೆ. ಅಂತಿಮವಾಗಿ ಭಾರತ ಕುಂಬ್ಲೆ ಅವರ ಅಮೋಘ ಬೋಲಿಂಗಿನಿಂದಾಗಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಸುವ ಮೂಲಕ ಟೈಟಾನ್ ಕಪ್ ಎತ್ತಿ ಹಿಡಿಯಿತು.

ಇಂದೂ ಕೂಡಾ ಅದೇ ಕ್ರೀಡಾಂಗಣ, ಅದೇ ಎರಡು ತಂಡಗಳು, ಕರ್ನಾಟಕದ ಇಬ್ಬರು ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಮನೇಷ್ ಪಾಂಡೆ ಆಡುತ್ತಿದ್ದಾರೆ. ಹಾಗಾಗಿ ಅಂದಿನ ಪಂದ್ಯದಂತೆಯೇ ರೋಚಕವಾಗಿ ಭಾರತ ತಂಡ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳಲಿ ಎನ್ನುವುದೇ ಸಮಸ್ತ ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಸೆ

ನನ್ನ ಕಾರಣದಿಂದಾಗಿ ಪಂದ್ಯ ರೋಚಕ ಕ್ಷಣಗಲನ್ನು ಮೈದಾನದಲ್ಲಿದ್ದರೂ ನೋಡಲಾಗ ಗೆಳೆಯರಾದ ಹರಿ ಮತ್ತು ಕೃಷ್ಣರಲ್ಲಿ ಮತ್ತೊಮ್ಮೆ ಕ್ಷಮೆ ಕೋರುತ್ತಾ ಈ ಲೇಖನವನ್ನು ಅವರಿಬ್ಬರಿಗೂ ಅರ್ಪಿಸುತ್ತಿದ್ದೇನೆ,

ಏನಂತೀರೀ?

One thought on “ಭಾರತ / ಆಸ್ಟ್ರೇಲಿಯ ಟೈಟಾನ್ ಕಪ್ 1996

Leave a comment