ಹಿಂದಿನ ಲೇಖನದಲ್ಲಿ ನಮ್ಮ ಗಿಣಿಯ ಕೃಷ್ಣಮೂರ್ತಿ ಶ್ರೀನಿವಾಸ ಅಲಿಯಾಸ್, ಜಿ.ಕೆ. ಉರ್ಫ್ ಪಿಂಟು ಅಂದ್ರೇ ಯಾರು? ಅವನ ಪೂರ್ವಾಪರ ಏನು ಅಂತಾ ತಿಳಿದುಕೊಂಡಿದ್ವಿ. ಈ ಭಾಗದಲ್ಲಿ ನನಗೇಕೆ ಪಿಂಟೂನ ಬಗ್ಗೆ ಯಾಕೆ ಇಷ್ಟೊಂದು ಕಾಳಜಿ? ಅಂತಾಹದ್ದೇನು ಮಾಡಿದ್ದ ಎಂಬುದನ್ನು ತಿಳಿಯೋಣ.
ಈಗಾಗಲೇ ತಿಳಿಸಿದ್ದಂತೆ ವಯಸ್ಸಿನಲ್ಲಿ ನನಗಿಂತ ಒಂದು ವರ್ಷ ಚಿಕ್ಕವನಾದರೂ ಅವನ ವ್ಯಕ್ತಿತ್ವ ಮತ್ತು ಆಕಾರದಿಂದಾಗಿ ನನಗೆ ಅಣ್ಣನ ಸ್ಥಾನದಲ್ಲಿದ್ದ. ನಾನು ಮೊದಲನೇ ವರ್ಷದ ಡಿಪ್ಲಮೋ ಓದುತ್ತಿರುವಾಗ ನನ್ನ ಸಹೋದರಿಯ ಮದುವೆಯ ಸಂಧರ್ಭದಲ್ಲಿ ನನ್ನ ಉಪನಯನವಾಗಿತ್ತು. ಆಗ ತಾನೇ ಕಾಲೇಜಿಗೆ ಸೇರಿದ್ದ ಕಾರಣ, ಕೇವಲ ನನ್ನ ತರಗತಿಯಲ್ಲಿ ಆತ್ಮೀಯರಾಗಿದ್ದ ಬೆರಳೆಣಿಕೆಯ ಸ್ನೇಹಿತರಿಗೆ ನನ್ನ ಉಪನಯನ ಮತ್ತು ಸಹೋದರಿಯ ಮದುವೆಗೆ ಆಮಂತ್ರಣ ನೀಡಿದ್ದೆ. ಮದುವೆ ಮತ್ತು ಮುಂಜಿ ಎರಡೂ ಅದ್ದೂರಿಯಾಗಿ ನಡೆದು ಒಂದು ವಾರದ ನಂತರ ಕಾಲೇಜಿಗೆ ಮರಳಿದಾಗ, ಹಣೆಯಲ್ಲಿ ಗೋಪಿಚಂದನದಿಂದಲೋ ಅಥವಾ ಮತ್ತಾರಿಂದಲೋ ನನ್ನ ಉಪನಯನದ ವಿಷಯ ತಿಳಿದ ಪಿಂಟು ಅಲಲಲೇ ಕಂಠಾ, ನಮ್ಮನ್ನೆಲ್ಲಾ ಯಾಕಪ್ಪಾ ಕರೀಲಿಲ್ಲಾ ಮುಂಜಿಗೇ ಅಂತ ನೇರವಾಗಿ ಪ್ರಶ್ನೆ ಮಾಡಿದಾಗ ಏನು ಹೇಳ್ಬೇಕು ಅಂತಾನೇ ಗೊತ್ತಾಗ್ದೇ ಬೆಬ್ಬೆಬ್ಬೇ ಅಂದಾಗ, ಪರ್ವಾಗಿಲ್ಲ ಬಿಡು ಹೇಳಿ ಕೇಳೀ ನಾವು ಶ್ರೀರಾಂಪುರದ ಹುಡುಗ್ರು ಹೇಳ್ಕೊಂಡ್ರೇ ಮಾತ್ರ ಬ್ರಾಹ್ಮಣರು ಅಂತಾ ಗೊತ್ತಾಗೊದು. ನಡೆ, ನುಡಿ, ಆಚಾರ, ವಿಚಾರವೆಲ್ಲಾ ಪಕ್ಕಾ ಲೋಕಲ್ ಎಂದು ಹೇಳಿ, ತನ್ನ ಜನಿವಾರ ತೋರಿಸುತ್ತಾ ಹುಶಾರಪ್ಪಾ. ಅದ್ರಲ್ಲೂ ಬನಿಯನ್ ತೆಗೆಯುವಾಗ ನೋಡ್ಕೊಂಡು ತೆಗಿ. ನನ್ನ ಮುಂಜಿ ಆದ ಮೊದಲ್ನೇ ದಿನದ ಸಂಜೆ ಸಾಯಂ ಸಂಧ್ಯಾವಂದನೆ ಮಾಡಲು ಅಂಗಿ ತೆಗ್ದು ಗೂಟಕ್ಕೆ ನೇತು ಹಾಕಿ ಮಡಿ ಉಟ್ಕೊಂಡು ಸಂಧ್ಯಾವಂದನೆಗೆ ಕೂತ್ಕೊಂಡಾಗ ಪುರೋಹಿತರು, ಮುರಳೀ ಜನಿವಾರ ಎಲ್ಲೋ ಎಂದಾಗಲೇ ಗೊತ್ತಾಗಿದ್ದು ಅಂಗಿ ಜೊತೆ ಜನಿವಾರನೂ ಗೊತ್ತಿಲ್ಲದೇ ಗೂಟಕ್ಕೆ ನೇತು ಹಾಕ್ಬಿಟ್ಟಿದ್ದೇ ಅಂತ ಎಂದು ತನ್ನನ್ನೇ ತಾನು ಅಪಹಾಸ್ಯ ಮಾಡಿಕೊಂಡಾಗಲೇ ನನಗೂ ಆತನ ಜಾತಿ ಗೊತ್ತಾಗಿದ್ದು. ಏಕೆಂದರೆ ಜಾತಿ, ಧರ್ಮ, ಭಾಷೆ ಇದಾವುದರ ಹಂಗೂ ಇಲ್ಲದೇ ಎಲ್ಲರ ಸಹಾಯಕ್ಕೆ ಮುನ್ನುಗ್ಗುತ್ತಿದ್ದ ನಮ್ಮ ಪಿಂಟು.
ಸ್ವತಃ ಶ್ರೀನಿವಾಸನೇ ಪಿಂಟು/ಜಿಕೆ ಅಂತಾ ಕರೆಸಿಕೊಳ್ಳುತ್ತಿದ್ದ ನಮ್ಮ ಪಿಂಟು ಯಾರನ್ನೇ ಆಗಲೀ ಅವರ ಪೂರ್ತಿಯಾದ ಹೆಸರನ್ನು ಇಟ್ಟು ಕರೆದವನೇ ಅಲ್ಲಾ. ಎಲ್ಲರಿಗೂ ಪಕ್ಕಾ ಶ್ರೀರಾಂ ಪುರದ ಅಡ್ಡಾದ ರೀತಿಯಲ್ಲಿ ಒಂದೊಂದು ಅಡ್ಡ ಹೆಸರನ್ನು ಇಡುವುದರಲ್ಲಿ ಎತ್ತಿದ ಕೈ. ಬಾಮೈದ, ವಾಲಿ, ಡಗಾರ್, ಬ್ಯಾಂಡ್, ಕಳ್ಳಾ, ಪಿಳ್ಳಂಗೋವಿ, ಮಚ್ಚಾ, ಕಡ್ಡಿ, ಗಾಡಿ, ಲಾರಿ, ಬೋಂಡಾ, ದಡಿಯಾ, ಕಟ್ಟಾಸ್ ಇತ್ಯಾದಿ, ಇತ್ಯಾದಿ. ಈ ಎಲ್ಲಾ ಹೆಸರುಗಳು ಎಷ್ಟು ಪ್ರಸಿದ್ಧವಾಗಿದೆಯೆಂದರೆ ಈಗಲೂ ಸಹಾ ಅವರ ನಿಜವಾದ ಹೆಸರನ್ನು ಹೇಳಿದರೆ ನಮಗೆ ಅವರನ್ನು ಗುರುತಿಸಲು ಕಷ್ಟಪಡುತ್ತೇವೆ ಆದರೆ ಅವರ ಅಡ್ಡ ಹೆಸರು ಹೇಳಿದ್ರೇ ಸಾಕು ತಕ್ಷಣ ನೆನಪಿಗೆ ಬಂದುಬಿಡ್ತಾರೆ.
ಕಿರಿಕ್ ಪಾರ್ಟಿ ನಾಯಕ ಕರ್ಣನಂತೆ ನಮ್ಮ ಪಿಂಟೂ ಕೂಡ ಇದ್ದಕ್ಕಿದ್ದಂತೆಯೇ ಅವಾಗವಾಗ ಒಂದು ವಾರ ಇಲ್ಲವೇ ಹತ್ತು ದಿನ ಕಾಲೇಜಿನಿಂದ ಮಾಯವಾಗಿ ಬಿಡ್ತಿದ್ದ. ಈಗಿನ ತರಹ ಮೊಬೈಲ್ ಇಲ್ಲದಿದ್ದ ಕಾರಣ ಅವನನ್ನು ಪತ್ತೆ ಹಚ್ಚೋದೇ ಕಷ್ಟವಾಗುತ್ತಿತ್ತು. ಅದೊಂದು ದಿನ ಬೆಳಿಗ್ಗೆ ಕಾಲೇಜಿಗೆ ಬಂದ ತಕ್ಷಣವೇ ಕಾಲೇಜಿನ ನೋಟಿಸ್ ಬೋರ್ಡಿನ ಬಳಿ ತುಂಬಾ ಹುಡುಗಾ ಹುಡುಗಿಯರು ಸುತ್ತುವರಿದ್ದಿದ್ದಾರೆ. ಏನಪ್ಪಾ ಆಯ್ತು ಎಂದು ನುಗ್ಗಿ ಬಗ್ಗಿ ನೋಟೀಸ್ ಬೋರ್ಡ್ ನೋಡಿದ್ರೇ, ನಮ್ಮ ಪಿಂಟೂವಿನ ಫೋಟೋ ಜೊತೆಗೆ ಅವನ ವೈಕುಂಠ ಸಮಾರಾಧನೆಯ ಆಹ್ವಾನ ಪತ್ರಿಕೆ ಅಂಟಿಸಿ ಬಿಟ್ಟಿದ್ದಾರೆ. ಛೇ!! ಇದೇನಪ್ಪಾ ಹೀಗಾಗಿ ಹೋಯ್ತು? ಎಂತಾ ಒಳ್ಳೇ ಮನುಷ್ಯ. ಏನಾಗಿತ್ತಂತೇ? ಹೇಗಾಯ್ತಂತೇ ಅಂತಾ ಎಲ್ಲರೂ ಪರಸ್ಪರ ಕೇಳಿಕೊಳ್ಳುವವರೇ, ಈ ವಿಷಯ ಕಾಲೇಜಿನ ಸ್ಟಾಫ್ ರೂಮಿಗೆ ತಲುಪಿ ಈ ವಿಷಯವನ್ನು ನಂಬದೇ, ಸತ್ಯಾ ಸತ್ಯತೆಯನ್ನು ತಿಳಿಯಲು ಕಾಲೇಜಿನ ಆಫೀಸ್ ರೂಮಿನಿಂದಲೇ ಅವನ ಮನೆಗೆ ಫೋನ್ ಮಾಡಿದಾಗ ತಿಳಿದಿದ್ದೇನೆಂದರೆ ಊರಿನಲ್ಲಿ ಅಡಿಕೆ ಕುಯ್ಲಿಗೆ ಬಂದಿತ್ತು ಹಾಗಾಗಿ ಪಿಂಟು ಕಾಲೇಜಿನಲ್ಲಿ ಯಾರಿಗೂ ಹೇಳ್ದೇ, ಕೇಳ್ದೇ ತನ್ನೂರಾದ ಗಿಣಿಯಾಕ್ಕೆ ಹೋಗಿದ್ದ. ಇಂತಹ ಸಂಧರ್ಭಕ್ಕೇ ಕಾಯುತ್ತಿದ್ದ ಹುಡುಗು ಬುದ್ಧಿಯ ಕೆಲ ಹುಡುಗ್ರು ಈ ರೀತಿಯ ಒಂದು ದೊಡ್ಡ ಅನಾಹುತಕ್ಕೇ ಕಾರಣೀಭೂತರಾಗಿದ್ದರು. ತಕ್ಷಣವೇ ಟೆಲಿಗ್ರಾಂ ಕೊಟ್ಟು ಮಾರನೇಯ ದಿನವೇ ಕಾಲೇಜಿಗೆ ಪಿಂಟು ಹಿಂದಿರುವಂತೆ ಮಾಡಲು ನಮ್ಮ ಪ್ರಿನ್ಸಿಪಾಲ್ ಸಫಲರಾಗಿದ್ದರು ಮತ್ತು ಆ ದಿನ ಪ್ರೇಯರ್ ಹಾಲಿನಲ್ಲಿ ಎಲ್ಲರ ಮುಂದೇ ಪಿಂಟುನನ್ನು ಪ್ರಸ್ತುತಪಡಿಸಿ ಇಂತಹ ಅಚಾತುರ್ಯ ನಡೆದದ್ದಾಕ್ಕಾಗಿ ಕ್ಷಮೆಯನ್ನೂ ಕೋರಿ, ಇಂತಹ ಕೆಲಸ ಮಾಡಿದ ಹುಡುಗರನ್ನು ಪತ್ತೆ ಹಚ್ಚಿ ಶೀಘ್ರವೇ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿದರು. ಅದಾಗಲೇ ಪಿಂಟುವಿಗೆ ಈ ಕಾರ್ಯವನ್ನು ಎಸಗಿದ್ದವರು ಯಾರು ಎಂದು ತಿಳಿದಿದ್ದರೂ ಅದನ್ನು ಯಾರಿಗೂ ತಿಳಿಸಿದೇ, ಹೋಗ್ಲಿ ಬಿಡಿಸಾರ್! ಪಾಪಿ ಚಿರಾಯು ಅಂತಾರೆ. ಈ ರೀತಿ ಮಾಡಿದ್ದಕ್ಕೆ ನನ್ನ ಆಯಸ್ಸು ಇನ್ನೂ ಜಾಸ್ತಿ ಆಗತ್ತೆ ಅಂತಾ ಮಾತನ್ನು ತೇಲಿಸಿ ಬಿಟ್ಟಿದ್ದಂತಹ ಸಹೃದಯಿ ನಮ್ಮ ಪಿಂಟು.
ಊರೂರು ಸುತ್ತುವುದೆಂದರೆ ನಮ್ಮ ಪಿಂಟುವಿಗೆ ಪಂಚ ಪ್ರಾಣ. ಅದರಲ್ಲೂ ಗೆಳೆಯರೊಡನೆ ಟೂರುಗಳಿಗೆ ಹೋಗಲು ಬಹಳ ಇಷ್ಟ ಪಡುತ್ತಿದ್ದ. ಮೇಲಾಗಿ ಕಾಲೇಜಿನ ಪ್ರೆಸಿಡೆಂಟು ಬೇರೆ. ಎಲ್ಲರನ್ನೂ ಒಟ್ಟು ಹಾಕಿಕೊಂಡು ಮೇಕೆ ದಾಟುವಿಗೆ ನಮ್ಮೆಲ್ಲರನ್ನೂ ಕರೆದುಕೊಂಡು ಹೊರಟೇ ಬಿಟ್ಟ ಪಿಂಟು. ಇಂದಿನ ರವಿಶಂಕರ್ ಆಶ್ರಮದ ಬಳಿಯಲ್ಲೇ ನಮ್ಮೆಲ್ಲರಿಗೂ ಹೊಟ್ಟೆ ಭರ್ತಿ ತಿಂಡಿ ತಿನ್ನಿಸಿದ ಮೇಲೆ ಶುರುವಾಯ್ತು ನೋಡಿ ಅಂತ್ಯಾಕ್ಷರಿಯ ಆಟ. ಕನ್ನಡ ಮತ್ತು ಹಿಂದಿ ಹಾಡುಗಳನ್ನು ಬಹಳ ಸುಶ್ರಾವ್ಯವಾಗಿ ಹಾಡುತ್ತಿದ್ದ ನಮ್ಮ ಪಿಂಟು ನನಗೆ ತಿಳಿದ ಮಟ್ಟಿಗೆ ಕಾಂಚಿರೇ ಕಾಂಚಿರೇ ಹಿಂದಿ ಹಾಡು ಅವನ ಪ್ರಿಯವಾದರೇ ಕನ್ನಡಲ್ಲಿ ಯಾಕೇ ಬಡಾದಾಡ್ತೀ ತಮ್ಮಾ.. ಮಾಯಾ ಮೆಚ್ಚಿ .. ಸಂಸಾರ ನೆಚ್ಚಿ.. ಅವನ ಪ್ರಿಯವಾದ ಗೀತೆ ಒಂದರ ಮೇಲೆ ಒಂದು ಹಾಡನ್ನು ಹಾಡ್ತಾ ಹೋಗ್ತಾ ಇದ್ದ ಹಾಗೆ ಸಂಗಮಕ್ಕೆ ತಲುಪಿದ್ದೇ ಗೊತ್ತಾಗಲಿಲ್ಲ ಅಲ್ಲಿಂದ ಉರಿ ಬಿಸಿಲಿನಲ್ಲಿ ಮೇಕೆ ದಾಟುವರೆಗೂ ನಡೆಸಿಕೊಂಡು ಕರೆದುಕೊಂಡು ಹೋಗಿ ಮೇಕೇ ದಾಟುವಿನ ಕಲ್ಲುಗಳ ಕೊರೆತ ಪ್ರದೇಶ ತೋರಿಸಿದ್ದು ಇನ್ನು ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ಬಾಲವಿಲ್ಲದ ಕಪಿಗಳಂತೆ ಬಂಡೆಗಳಿಂದ ಬಂಡೆಗಳನ್ನು ಹತ್ತಿ ಇಳಿತಾ ಇದ್ದ ನಮಗೆ ಹುಶಾರು ಮಗಾ. ಹೋದ್ ಸಾರ್ತಿ ಇಲ್ಲೇ ಬಾಮೈದ ಕಾಲು ಜಾರಿ ನೀರಿಗೆ ಬಿದ್ ಹೋಗಿದ್ದಾ! ಆ ರಭಸದ ನೀರಿನಲ್ಲಿ ಅವವನ್ನು ಬಚಾವ್ ಮಾಡುವಷ್ಟ್ರಲ್ಲಿ ನಮ್ಮ ಹೆಣ ಬಿದ್ ಹೋಗಿತ್ತು ಎಂದು ಎಚ್ಚರಿಕೆಯ ಗಂಟೆಯನ್ನೂ ಕೊಡುವುದರ ಮೂಲಕ ಗೆಳೆಯರನ್ನು ಕರೆದುಕೊಂಡು ಹೋದಾಗ ಹೇಗೆ ಎಚ್ಚರ ವಹಿಸಬೇಕು ಎಂದು ಪರೋಕ್ಷವಾಗಿ ತಿಳಿಸಿಕೊಟ್ಟಿದ್ದ,. ಪುನಃ ಸಂಗಮಕ್ಕೆ ಹಿಂದಿರುಗಿ ಊಟ ಮಾಡಿ ನೀರಿನಲ್ಲಿ ಆಟವಾಡಿ ಸಂತೋಷದಿಂದ ಮನೆಗೆ ಬಂದಿದ್ದೆವು. ಮುಂದೆ ನಾವುಗಳು ಸೀನಿಯರ್ಸ್ ಆದಾಗ ನಾವುಗಳು ಹೇಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಬಹುದು (ಆ ಬಲಮುರಿಯ ರೋಚಕ ಕಥೆಯನ್ನು ಮತ್ತೊಂದು ಲೇಖನದಲ್ಲಿ ವಿವರಿಸುತ್ತೇನೆ) ಎಂಬುದನ್ನು ತೋರಿಸಿಕೊಟ್ಟಿದ್ದ.
ಹುಡುಗರೊಡನೆ ಪಿಂಟುವಿಗೆ ಹೇಗೆ ಸಲಿಗೆಯಿತ್ತೋ ಅದೇ ಸಲಿಗೆ ಅವನಿಗೆ ಹುಡುಗಿಯರೊಂದಿಗೂ ಇತ್ತು. ಹಾಗೆಂದ ಮಾತ್ರಕ್ಕೆ ಅದನ್ನೆಂದೂ ಆತ ದುರುಪಯೋಗ ಪಡಿಸಿಕೊಳ್ಳಲಿಲ್ಲ ಮತ್ತು ಆ ರೀತಿಯ ಮನೋಭಾವವೂ ಅವನಿಗಿರಲಿಲ್ಲ. ಆದರೆ ಸಮಯ ಸಿಕ್ಕಾಗಲೆಲ್ಲಾ ಗೋಳು ಹುಯ್ದುಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಹುಡುಗಿಯರೂ ಅಷ್ಟೇ ಪಿಂಟು ಎಷ್ಟೇ ಚೇಡಿಸಿದರೂ ಅದನ್ನೆಂದು ಅವರು ವಿಪರೀತಕ್ಕೆ ಕೊಂಡೊಯ್ಯದೇ ಎಂಜಾಯ್ ಮಾಡುತ್ತಿದ್ದರು. ಅದೇ ರೀತಿ ಬೇರೆ ಯಾವ ಹುಡುಗರೇನಾದ್ರೂ ಕೀಟಲೆ ಮಾಡಿದ್ರೇ ಉರಿದು ಬೀಳ್ತಾ ಇದ್ರು. ಅವರ ಕೀಟಲೆ ವಿಪರೀತಕ್ಕೆ ಹೋದ್ರೇ ಮತ್ತೆ ನಮ್ಮ ಪಿಂಟೂನೇ ಅದನ್ನು ಪರಿಹರಿಸ ಬೇಕು. ನೋಡು ಮಗಾ ನಮ್ಮ ಡವ್ ಯಾಕೋ ಮೂರು ದಿನದಿಂದ ಮಾತಾಡಿಸ್ತಾನೇ ಇಲ್ಲಾ ಅಂದ್ರೇ, ಸೀದಾ ಆಕೆಯ ಬಳಿ ಹೋಗಿ ಯಾಕೇ ರಾಣಿ ನಮ್ಮ ರಾಜನ್ನ ಮಾತಾಡಿಸ್ತಾ ಇಲ್ವಂತೇ? ಏನು ಸಮಾಚಾರ? ಅಂತ ನೇರವಾಗಿ ಕೇಳುವ ಛಾತಿ ಮತ್ತು ಸಲುಗೆ ಆತನಿಗಿತ್ತು.
ಕಾಮನ ಹಬ್ಬ ಬಂದಿತೂ ಅಂದ್ರೇ ಕಾಲೇಜ್ ಪೂರ್ತಿ ಬಣ್ಣಗಳಿಂದ ಗಲೀಜು ಮಾಡ್ತಾರೇ ಅಂತ ರಜಾ ಕೊಟ್ರೇ, ಕಾಲೇಜಿನ ಹೊರಗೆ ಆಡೋದಿಕ್ಕೆ ಏನು ತೊಂದ್ರೇ ಅನ್ನೋದು ನಮ್ಮ ಪ್ರೆಸಿಡೆಂಟ್ ಪಿಂಟುವಿನ ಪ್ರಶ್ನೆ. ಎಲ್ಲರೂ ಕಾಲೇಜ್ ಹತ್ರ ಒಟ್ಟಾಗಿ ಸೇರಿ, ಕಾಲೇಜಿನ ಹೊರಗೆ ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಮಜಾ ಮಾಡ್ತಾ ಇದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ.
ಇನ್ನು ಕಾಲೇಜು ಹುಡುಗ ಹುಡುಗಿಯರು ಹೋಗ್ಲಿ ಕಾಲೇಜು ಆಫೀಸಿನಲ್ಲಿಯೂ ಇವನದ್ದೇ ಹವಾ. ನಮ್ಮ ಗೆಳೆಯನ ಚಿಕ್ಕಮ್ಮ ಅಡ್ಮಿನ್ ಆಗಿ ಕೆಲಸ ಮಾಡ್ತಾ ಇದ್ರು. ಅಷ್ಟು ಗೊತ್ತಾಗಿದ್ದೇ ತಡಾ, ಆಕೆಯನ್ನು ಮೇಡಂ ಅಂತ ಕರೆಯೋದೇ ನಿಲ್ಲಿಸಿ ಇವನೂ ಸಹಾ ಚಿಕ್ಕಮ್ಮ ಎನ್ನಲು ಶುರು ಹಚ್ಕೊಂಡ. ಇನ್ನು ಪಿಂಟು ಕರೆಯೋಕೆ ಶುರು ಮಾಡಿದ್ಮೇಲೆ ಇಡೀ ಕಾಲೇಜಿಗೇ ಆಕೆ ಪ್ರೀತಿಯ ಚಿಕ್ಕಮ್ಮ ಆಗಿ ಹೋಗಿ ಬಿಟ್ರು. ಸುರೇಶ್, ಚಂದ್ರ ಪ್ರಭಾಕಾಂತ್ ಝಾ ಅಂತ ನಮ್ಮ ಲೆಕ್ಚರೆರ್ಸ್ ಇದ್ರು. ಕ್ಲಾಸಿನಲ್ಲಿ ಪಾಠ ಮಾಡ್ಬೇಕಾದ್ರೇ ಮಾತ್ರ ಲೆಕ್ಚರೆರ್ಸ್ ಹೊರಗೆ ಬಂದ್ರೇ ಅವರೆಲ್ಲರೂ ಪಿಂಟುವಿಗೇ ಆತ್ಮೀಯ ಗೆಳೆಯರು. ಅದೆಷ್ಟೋ ಬಾರಿ ಸುರೇಶ್ ಅವರ ರೂಮಿನಲ್ಲಿ ಅಥವಾ ಮಲ್ಲೇಶ್ವರಂ ಸಂಪಿಗೆ ರಸ್ತೆಯ ಅಯ್ಯರ್ ಮೆಸ್ಸಿನಲ್ಲಿ ಒಟ್ಟಿಗೆ ಕುಳಿತು ಊಟ ಮಾಡಿದ್ದು ಲೆಖ್ಖವಿಲ್ಲ. ಇನ್ನು ಚಂದ್ರ ಮತ್ತು ಝಾ ಜೊತೆ ಇನ್ನೂ ಒಂದು ಹೆಜ್ಜೆ ಹೆಚ್ಚಿನ ಸಲುಗೆ. ಚಂದ್ರಾ, ಝಾ.. ಸಿಗರೇಟ್ ರಖಾಹೈ ಕ್ಯಾ? ಎಂದು ನೇರವಾಗಿಯೇ ಕೇಳಿಬಿಡುತ್ತಿದ್ದ. ಆಗ ITC King ಸಿಗರೇಟ್ ಒಂದೋ ಇಲ್ಲವೇ ಒಂದುವರೆ ರೂಪಾಯಿಗಳಾದರೇ Burkely ಎಪ್ಪತ್ತು ಪೈಸೆಗೆ ಸಿಗುತ್ತಿದ್ದ ಕಾರಣ ಝಾ Burkely ಸಿಗರೇಟ್ ಸೇದುತ್ತಿದ್ದರು. ಅರೇ ಕ್ಯಾ ಕಂಜೂಸ್ ಯೇ ಯ್ಯಾರ್? ಇತನಾ ಪೈಸೇ ಕಮಾತೇ ಹೋ! ITC King filter ಪೀ ನಹಿ ಸಕ್ತಾ ಹೈ ಕ್ಯಾ ?ಎಂದು ಛೇಡಿಸುತ್ತಿದ್ದ. ಕೈಯಲ್ಲಿ ಕಾಸಿಲ್ಲದಿದ್ದಾಗ ರವೀ ಟೆಂಟಿನ ಬಳಿ ಇದ್ದ ಪೆಟ್ಟಿಗೆ ಅಂಗಡಿಯಲ್ಲಿ ಲೆಖ್ಖಾ ಬೇರೆ ಇತ್ತು. ಹಣಾ ಸಿಕ್ಕ ಕೂಡಲೇ ಲೆಖ್ಖಾ ಚುಕ್ತಾ ಪಕ್ಕಾ ಮಾಡ್ತಾ ಇದ್ದ ಕಾರಣ ಅಂಗಡಿಯವನೂ ಇವನಿಗೆ ಉದ್ರಿ ಕೊಡಲು ಬೇಸರ ಮಾಡಿಕೊಳ್ತಾ ಇರಲಿಲ್ಲ. ಪಿಂಟುವಿನ ಲೆಖ್ಖದಲ್ಲಿ ಎಷ್ಟೋಂದು ಜನ ಸೇದಿ ಬಿಸಾಡಿದ ಸಿಗರೇಟುಗಳಿಗೆ ಲೆಖ್ಖವೇ ಇಲ್ಲಾ. ಅಪ್ಪಿ ತಪ್ಪಿ ನಾವುಗಳು ಏನಾದ್ರೂ ಆ ಕಡೆ ಹೋದ್ರೇ ಯಾವುದಾದರೂ ಮಿಂಟ್ ಚಾಕ್ಲೇಟ್ ಇಲ್ಲವೇ ಚಿಕ್ಕೀಸ್ ಕೊಡಿಸಿ, ಇಲ್ಲೆಲ್ಲಾ ಇನ್ನೊಮ್ಮೆ ಬರ್ಬೇಡಿ ಅಂತ ವಾತ್ಸಲ್ಯದಿಂದ ಗದರಿಸಿ ಕಳುಹಿಸುತ್ತಿದ್ದ ನಮ್ಮ ಪಿಂಟು.
ಅಪ್ಪಿ ತಪ್ಪಿ ಕಾಲೇಜ್ ಬಸ್ ಮಿಸ್ಸಾಯ್ತು ಇಲ್ವೇ ಅವನು ಎಲ್ಲಿಗಾದ್ರೂ ಹೋಗ್ಬೇಕು ಅಂತಾದ್ರೇ ಅವರ ತಂದೆಯವರ ಕೈನೆಟಿಕ್ ಹೊಂಡಾದಲ್ಲಿ ಕಾಲೇಜಿಗೆ ಬರುತ್ತಿದ್ದ. ಒಮ್ಮೊಮ್ಮೆ ಆವರ ಚಿಕ್ಕಪ್ಪನ ಬೈಕನ್ನೂ ತರುತ್ತಿದ್ದ ಅನ್ನೋ ನೆನಪು. ಪಿಂಟು ಗಾಡಿ ತಂದಾ ಅಂದ್ರೇ ನಮಗೆಲ್ಲಾ ಸುಗ್ಗಿ. ಪಿಂಟೂ ಒಂದು ರೈಡು ಅಂತಾ ಒಂದು ಇಪ್ಪತ್ತು ಮೂವತ್ತು ಹುಡುಗರು ಕಾಲೇಜಿನ ಸುತ್ತಾ ಮುತ್ತಾ ರೌಂಡ್ ಹಾಕಿ ಪೆಟ್ರೋಲ್ ಖಾಲಿ ಮಾಡಿ ಕೊನೆಗೆ ಮುನಿರೆಡ್ಡಿ ಪಾಳ್ಯಾನೋ ಇಲ್ವೇ ಗಂಗಾನಗರದ ಮೇನ್ ರೋಡಿಗೆ ಸೈಕಲ್ ಹಾಕಿಕೊಂಡು ಬಾಟೆಲ್ನಲ್ಲಿ ಪೆಟ್ರೋಲ್ ತಂದು ಗಾಡಿಯನ್ನು ಶುರು ಮಾಡಿಸ್ಕೊಂಡು ಓಡಿಸಿ ಹೋಗಿರುವ ಸಂದರ್ಭವೂ ಇದೆ.
ನಮ್ಮ ಕಾಲೇಜಿನ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಚಾಮರಾಜಪೇಟೆಯ ಕೇಶವ ಶಿಲ್ಪಾದಲ್ಲೋ ಇಲ್ಲವೇ ಮಲ್ಲೇಶ್ವರದ ಕೆನರಾ ಯೂನಿಯನ್ ಸಭಾಂಗಣದಲ್ಲಿ ಮಾಡುತ್ತಿದ್ದರು. ಆ ದಿನ ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನ ಆಡಳಿತ ಮಂಡಳಿಯ ವತಿಯಿಂದಲೇ ಭೂರೀ ಭೋಜನವಾದರೆ ಸಂಜೆ ವಿದ್ಯಾರ್ಥಿಗಳಿಂದ ಭರಪೂರ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತಿದ್ದವು. ಕೇಶವ ಶಿಲ್ಪದಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ನಾನು ನಟಿಸಿ ನಿರ್ದೇಶನ ಮಾಡಿದ್ದ ನಾಟಕ ಸಂಜೆ ಇತ್ತು. ಅದಕ್ಕೆ ತಕ್ಕ ತಯಾರಿಯೂ ನಡೆದಿತ್ತು. ಮಧ್ಯಾಹ್ನ ಭೂರೀ ಭೋಜನ ಮಾಡಿದ ಕೆಲವೇ ಸಮಯದಲ್ಲಿ ನನ್ನ ನಾಟಕ ತಂಡದಲ್ಲಿದ್ದ ಒಂದಿಬ್ಬರು ನಿರಂತರವಾಗಿ ಶೌಚಾಲಯಕ್ಕೆ ಹೋಗಿ ನಿತ್ರಾರಣರಾದಾಗಲೇ ನಮಗೆ ಗೊತ್ತಾಗಿದ್ದು ಯಾರೋ ನಮ್ಮ ಕಾಲೇಜಿನ ಕೆಲ ಕಿಡಿಗೇಡಿಗಳೇ ಕಿತಾಪತಿಗೆಂದು ಕೆಲವು ಹುಡುಗರ ಊಟದಲ್ಲಿ ಜಾಪಾಳ್ ಬೀಜ ಸೇರಿಸಿಬಿಟ್ಟಿದ್ದರು. ಸಂಜೆ ನಾಟಕವಿದ್ರೆ ನಮ್ಮ ಹುಡುಗರು ನಿತ್ರಾಣರಾಗಿದ್ದಾರೆ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಮತ್ತದೇ ನಮ್ಮಪಿಂಟು ಆಪದ್ಭಾಂಧವನಂತೆ ಬಂದು ಆವರಿಗೆ ಬ್ಲಾಕ್ ಕಾಫಿ ಕುಡಿಸಿ ಹತ್ತಿರದಲ್ಲೇ ಇದ್ದ ವೈದ್ಯರಿಗೆ ತೋರಿಸಿ ಸಂಜೆ ಹೊತ್ತಿಗೆ ಅವರು ಹುಷಾರುವಂತೆ ಮಾಡಿದ ಆಪ್ತ ರಕ್ಷಕ. ಕೆನರಾ ಯೂನಿಯನ್ ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವದ ಸಮಯದಲ್ಲಿ ಹುಡುಗಿಯರ ನೃತ್ಯವೊಂದಕ್ಕೆ ಹಿಂದಿನ ಸಾಲಿನ ಹುಡುಗರು ತೂರಿದ ಪೇಪರ್ ರಾಕೆಟ್ ಗುರಿ ತಪ್ಪಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ಅತಿಥಿಗಳ ಮೇಲೆ ಬಿದ್ದು ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಾಗ ವಿಷಯ ತಿಳಿದು ಮತ್ತದೇ ಪಿಂಟೂನೇ ಗ್ರೀನ್ ರೂಮಿನಿಂದ ಹೊರಬಂದು ಪರಿಸ್ಥಿತಿ ನಿಭಾಯಿಸಿದ್ದ.
ಅಂತೂ ಇಂತೂ ಹೀಗೆ ಆಟವಾಡುತ್ತಲೇ ಮೂರು ವರ್ಷ ಕಾಲೇಜಿನ ವಿದ್ಯಾಭ್ಯಾಸ ಮುಗಿಸಿ ಪರೀಕ್ಷೆಯೂ ಮುಗಿದ ಮೇಲೆ ಕಡೆಯ ವರ್ಷದ ವಿದ್ಯಾರ್ಥಿಗಳು indristrial tourಗೆ ಹೋದರೆ Railways ಅವರು Students concession ಕೊಡ್ತಾರೆ ಅನ್ನೋ ವಿಷಯ ಗೊತ್ತಾಗಿದ್ದೇ ತಡಾ, ಮತ್ತೆ ಕೆಲವು ಹುಡುಗರನ್ನು ಸೇರಿಸಿಕೊಂಡು ಪರೀಕ್ಷೇ ಮುಗಿದ ಮೇಲೂ ಆಲ್ ಇಂಡಿಯಾ ಟೂರಿಗೆ ಹೊರಟೇ ಬಿಟ್ಟ ಪಿಂಟು. ಪ್ರತಿಯೊಬ್ಬರೂ ಇಷ್ಟಿಷ್ಟು ಹಣವನ್ನು ಪ್ರವಾಸದ ಖರ್ಚಿಗೆ ತರಲೇ ಬೇಕು ಎಂಬ ಅಲಿಖಿತ ನಿಯಮವಿದ್ದರೂ ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಹಣವನ್ನು ಹೊಂಚಿಕೊಂಡು ಬಂದಿದ್ದರು. ಅದರಲ್ಲೊಬ್ಬ ಕೇವಲ ಐದು ರೂಪಾಯಿಗಳೊಡನೇ ಭಾರತ ಪ್ರವಾಸಕ್ಕೆ ಹೊರಟಿದ್ದ. ಆ ಐದು ರೂಪಾಯಿಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ಸ್ಟೇಷನಿನ್ನಲ್ಲಿಯೇ ಎರಡು ರೂಪಾಯಿ ಎರಡು ವಿಲ್ಸ್ ಫಿಲ್ಟರ್ ಕಿಂಗ್ ಸಿಗರೇಟ್ ಕೊಂಡು ಅವನು ಮತ್ತು ಪಿಂಟು ಒಂದೊಂದನ್ನು ಸುಟ್ಟು ಬಿಸಾಡಿದ್ದರು. ಅಕ್ಷರಶಃ ಅವನ ಬಳಿಯಲ್ಲಿ ಕೇವಲ ಒಂದು ರೂಪಾಯಿ ಮಾತ್ರವಿತ್ತಾದರೂ ನಮ್ಮ ಪಿಂಟು ಗೆಳೆತನದ ಪ್ರತೀಕವಾಗಿ ಅವನ ಪ್ರವಾಸದ ಇಡೀ ಖರ್ಚನ್ನು ಪಿಂಟೂನೇ ನಿಭಾಯಿಸಿದ್ದ. ಕೇವಲ ಅವನಿಗಲ್ಲದೇ ಇನ್ನೂ ಅನೇಕರ ದುಡ್ಡು ಮಧ್ಯದಲ್ಲಿಯೇ ಖರ್ಚಾದಾಗ ಅವರ ಪ್ರವಾಸದ ಉಳಿದ ವ್ಯವಸ್ಥೆಯನ್ನು ಪಿಂಟೂನೇ ನೋಡಿಕೊಂಡಿದ್ದ. ಇದು ಗೆಳೆತನಕ್ಕೆ ಪಿಂಟೂ ಕೊಡುತ್ತಿದ್ದ ಪ್ರಾಮುಖ್ಯತೆ.
ಇಷ್ಟೆಲ್ಲಾ ಹುಡುಗಾಟಿಕೆಗಳಿಂದ ಕೂಡಿದ್ದ ನಮ್ಮ ಶ್ರೀನಿವಾಸನ ಮುಂದಿನ ಬದುಕು ಹೇಗಿತ್ತು? ಶ್ರೀನಿವಾಸ ಕಾಲೇಜ್ ಮುಗಿಸಿ ಕೆಲ್ಸಕ್ಕೇ ಸೇರಿದ್ನಾ? ಜೀವನದಲ್ಲಿ ಮುಂದೇ ಬಂದ್ನಾ? ಸಕ್ಕರೆಯ ಸಿಹಿಗೆ ಮುತ್ತುವ ಇರುವೆಗಳಂತೆ ಅಕ್ಕರೆಯಿಂದ ಪಿಂಟುವಿನ ಸುತ್ತ ಮುತ್ತಲಿರುತ್ತಿದ್ದ ಗೆಳೆಯರ ಗುಂಪು ಮುಂದೆಯೂ ಹೀಗೆಯೇ ಮುಂದುವರೆಯಿತಾ??
ಅದನ್ನೆಲ್ಲಾ ಮುಂದಿನ ಸಂಚಿಕೆಯಲ್ಲಿ ಸವಿರವಾಗಿ ವಿವರಿಸುತ್ತೇನೆ. ಅಲ್ಲಿಯವರೆಗೂ ಕಾಯ್ತಿರೀ ತಾನೇ?
ಏನಂತೀರೀ?
ಎಲ್ಲ ವಿಚಾರಗಳೂ ಅಚ್ಚಳಿಯದೆ ಇದೆ ಎಂದರೆ ಪಿಂಟೂ ಪ್ರತಾಪ ಜೋರಾಗಿಯೇ ಇದೆ
LikeLike
ಪಿಂಟೂವಿನ ಪ್ರತಾಪ ಆ ರೀತಿಯಾಗಿ ನಮ್ಮಗಳ ಮೇಲೆ ಪ್ರಭಾವ ಬೀರಿದೆ
LikeLike
Seeing this article it bring back our good-days
LikeLike
seeing this photos ,i just went back to my college days which was relishing movement .special the group photo on holi festival is awesome .So many things this picture is expressing
LikeLike