ರಥಸಪ್ತಮಿಯ ಅಂಗವಾಗಿ 108 ಸೂರ್ಯನಮಸ್ಕಾರ ಯಜ್ಞ

WhatsApp Image 2020-02-01 at 1.20.14 PM

ಆರೋಗ್ಯಭಾರತಿ ಯಲಹಂಕ ಭಾಗ ಮತ್ತು ಪಂತಜಲಿ ಯೋಗ ಶಾಖೆ ಸಹಯೋಗದಲ್ಲಿ ರಥಸಪ್ತಮಿಯ ಪ್ರಯುಕ್ತವಾಗಿ 108 ಸೂರ್ಯನಮಸ್ಕಾರಗಳ ಯಜ್ಞವನ್ನು ಪ್ರತ್ಯಕ್ಷ ದೇವರಾದ ಸೂರ್ಯನಾರಾಯಣನಿಗೆ ಸಮರ್ಪಿಸುವ ಕಾರ್ಯಕ್ರಮ ಇಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. ನಿಗಧಿತ ಸಮಯಕ್ಕೆ ಸರಿಯಾಗಿ ದೊಡ್ಡಬೊಮ್ಮಸಂದ್ರದ ಕೆರೆಯಂಗಳದಲ್ಲಿರುವ ಕಲ್ಯಾಣಿಯ ಪ್ರಾಂಗಣಕ್ಕೆ ಬಂದಲ್ಲಿ , ಚುಮು ಚುಮ್ ಚಳಿಯ ವಾತಾವರಣ. ಸುತ್ತಮುತ್ತಲೂ ಮುಂಜಾನೆಯ ಮಬ್ಬುಗತ್ತಲು. ಆರಂಭದಲ್ಲಿ ಕೆಲವೇ ಕೆಲವು ಬೆರಳೆಣಿಕೆಯ ಮಂದಿ ಕೈಕಾಲು ಸಡಿಲಗೊಳಿಸುವ ವ್ಯಾಯಾಮಗಳನ್ನು ಮಾಡಿ, ಧನ್ವಂತ್ರಿ ಮುನಿಗಳಿಗೆ ದೀಪವನ್ನು ಬೆಳಗಿ, ಹೂವಿನ ಮಾಲಾರ್ಪಣೆ ಮಾಡಿ, ಸೂರ್ಯದೇವನ ಧ್ಯಾನ ಶ್ಲೋಕ

ಧ್ಯೇಯ: ಸದಾ ಸವಿತೃಮಂಡಲ ಮಧ್ಯವರ್ತೀ ನಾರಾಯಣ: ಸರಸಿಜಾಸನ ಸನ್ನಿವಿಷ್ಟ: |

ಕೇಯೂರವಾನ್ ಮಕರಕುಂಡಲವಾನ್ ಕಿರೀಟೀ ಹಾರೀ ಹಿರಣ್ಮಯ ವಪುಧೃತಶಂಖಚಕ್ರ: |

ಎಂಬ ಶ್ಲೋಕವನ್ನು ಸಾಮೂಹಿಕವಾಗಿ ಪಠಿಸುವ ಮೂಲಕ ಆರಂಭಿಸಲಾಯಿತು.

ಯೋಗ ಗುರುಗಳು ಹ್ರಾಂ.. ಮಿತ್ರಾಯ ನಮಃ ಎಂದು ಹೇಳಿ, ಏಕಂ.. ದ್ವೇ.. ತ್ರೀಣೀ.. ಎಂದು ಅಂಕ ಕೊಡುತ್ತಿದ್ದಂತೆಯೇ ಎಲ್ಲರೂ ಪೂರಕ -> ಉಸಿರನ್ನು ಒಳಗೆ ಎಳೆದುಕೊಳ್ಳುವುದು, ರೇಚಕ -> ಉಸಿರನ್ನು ಹೊರಹಾಕುವುದು, ಕುಂಬಕ -> ಉಸಿರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ನಿಧಾನವಾಗಿ ಸೂರ್ಯನಮಸ್ಕಾರದ ಒಂದೊಂದೇ ಆಸನಗಳನ್ನು ಮಾಡತೊಡಗಿದಂತೆ ಸೂರ್ಯದೇವನೂ ಕೂಡ ಅವನ ಹುಟ್ಟುಹಬ್ಬವಾದ ರಥಸಪ್ತಮಿಯಂದು ಅದೇಕೋ ಏನೋ ನಿಧಾನವಾಗಿ, ಸೋಮಾರಿಯಂತೆ, ಕಣ್ಣಾಮುಚ್ಚಾಲೆಯಾಡುತ್ತಾ , ಮೋಡದ ಮರೆಯಿಂದ ಹೊರಗೆ ಬರಲೋ ಬೇಡೋವೋ ಎಂದು ಇಣುಕಿ ನೋಡುತ್ತಿದ್ದ. ನೋಡ ನೋಡುತ್ತಿದ್ದಂತೆಯೇ

  1. ಓಂ ಮಿತ್ರಾಯ ನಮಃ
  2. ಓಂ ರವಯೇ ನಮಃ
  3. ಓಂ ಸೂರ್ಯಾಯ ನಮಃ
  4. ಓಂ ಭಾನವೇ ನಮಃ
  5. ಓಂ ಖಗಾಯ ನಮಃ
  6. ಓಂ ಪೂಷ್ಣೇ ನಮಃ
  7. ಓಂ ಹಿರಣ್ಯಗರ್ಭಾಯ ನಮಃ
  8. ಓಂ ಮರೀಚ್ಯೇ ನಮಃ
  9. ಓಂ ಆದಿತ್ಯಾಯ ನಮಃ
  10. ಓಂ ಸವಿತ್ರೇ ನಮಃ
  11. ಓಂ ಅರ್ಕಾಯ ನಮಃ
  12. ಓಂ ಭಾಸ್ಕರಾಯ ನಮಃ
  13. ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮಃ

surya_namasakara

ಎಂದು 13 ಸೂರ್ಯನಮಸ್ಕಾರಗಳ ಒಂದು ಸುತ್ತನ್ನು ಮುಗಿಸಿ ಎರಡನೆಯ ಸುತ್ತಿಗೆ ತಲುಪಿದ್ದು ಗೊತ್ತಾಗಲೇ ಇಲ್ಲ. ಪ್ರತೀ ಎರಡು ಸುತ್ತುಗಳ ಮಧ್ಯೆ ಎರಡು ನಿಮಿಷಗಳ ತುಸು ವಿರಾಮ ತೆಗೆದು ಕೊಂಡು ಸೂರ್ಯನಮಸ್ಕಾರಗಳನ್ನು ಮುಂದುವರೆಸುತ್ತಿದ್ದರೆ

ಕೆರೆಯಂಗಳದ ಪ್ರಶಾಂತವಾದ ವಾತಾವರಣ, ಬೀಸುತ್ತಿದ್ದ ತಂಗಾಳಿಯ ಪರಿಣಾಮದಿಂದ ದೇಹವೆಲ್ಲಾ ತಂಪಾಗಿ ಸೂರ್ಯನಮಸ್ಕಾರದ ಆಯಾಸವೇ ನಮಗಾಗದಿದ್ದದ್ದು ನಿಜಕ್ಕೂ ಅವರ್ಣನೀಯ. ನಮ್ಮೊಡನೆ ಸೂರ್ಯನಮಸ್ಕಾರ ಮಾಡಲು ಬಂದಿದ್ದ ಮಾತೆಯರು ನಮ್ಮ ಕೈಯಲ್ಲಿ 108 ಸೂರ್ಯನಮಸ್ಕಾರ ಖಂಡಿತವಾಗಿಯೂ ಮಾಡಲು ಸಾಧ್ಯವಿಲ್ಲ. ಅಬ್ಬಬ್ಬಾ ಹೆಚ್ಚೆಂದರೆ ಎರಡು ಮೂರು ಸುತ್ತುಗಳವರೆಗೆ 30-40 ಸೂರ್ಯನಮಸ್ಕಾರಗಳನ್ನು ಮಾಡಬಹುದು ಎನ್ನುತ್ತಿದ್ದವರು, ಅನಾಯಾಸವಾಗಿ ನಾಲ್ಕು ಸುತ್ತು ಮುಗಿಸುತ್ತಿದ್ದಂತೆಯೇ, ಹೇ!! ನಾಲ್ಕು ಸುತ್ತುಗಳನ್ನೇ ಮಾಡಿ ಮುಗಿಸಿದ್ದೇವೆ ದೇಹದಲ್ಲಿ ಇನ್ನೂ ಕಸುವಿದೆ ಹಾಗಾಗಿ, ಇನ್ನು ನಾಲ್ಕು ಸುತ್ತು ಯಾವ ಮಹಾ? ನಾವು ಖಂಡಿತವಾಗಿಯೂ ಸಂಪೂರ್ಣ 108 ಸೂರ್ಯನಮಸ್ಕಾರಗಳನ್ನು ಮಾಡಿಯೇ ತೀರುತ್ತೇವೆ ಎಂದು ಹೇಳಿದಾಗ ಉಳಿದವರಿಗೆಲ್ಲಾ ಮತ್ತಷ್ಟೂ ಪ್ರೋತ್ಸಾಹ ದೊರೆತಂತಾಯಿತು. ಆಷ್ಟರಲ್ಲಾಗಲೇ ನಮ್ಮೊಂದಿಗೆ ಮತ್ತಷ್ಟೂ ಜನರು ಕೂಡಿಕೊಂಡು ಅಂತಿಮವಾಗಿ 5 ಮಾತೆಯರೂ ಸೇರಿದಂತೆ ಒಟ್ಟು 28 ಜನರು ಸೇರಿ ಕೊಂಡು 8 ಸುತ್ತುಗಳ 104 ಸೂರ್ಯನಮಸ್ಕಾರಗಳನ್ನು ಮಾಡಿಯಾಗಿತ್ತು. 108 ಸೂರ್ಯನಮಸ್ಕಾರಗಳಿಗೆ ಇನ್ನು ಕೇವಲ 4 ಮಾತ್ರ ಬಾಕಿ ಇತ್ತಾದಾರೂ ಯಾರೂ ಕೂಡಾ ಹೆಚ್ಚಿನ ದಣಿಯದಿದ್ದ ಕಾರಣ ಮತ್ತೊಂದು ಸುತ್ತನ್ನು ಮುಗಿಸಿ ಒಟ್ಟು 117 ಸೂರ್ಯನಮಸ್ಕಾರಗಳನ್ನು ಮಾಡುವ ಮೂಲಕ ಸೂರ್ಯದೇವನಿಗೆ ತಮ್ಮನ್ನು ತಾವು ಭಕ್ತಿಪರವಶದಿಂದ ಅರ್ಪಿಸಿಕೊಂಡಿದ್ದು ಮೆಚ್ಚುಗೆಯ ಸಂಗತಿಯಾಗಿತ್ತು

ಆದಿತ್ಯಸ್ಯ ನಮಸ್ಕಾರಾನ್, ಯೇ ಕುರ್ವಂತಿ ದಿನೆ ದಿನೇ |

ಆಯುಃ ಪ್ರಜ್ಞಾ ಬಲಂವೀರ್ಯಂ ತೇಜಸ್ತೇಷಾಂಚ ಜಯತೇ ||

ಎಂಬ ಮಂತ್ರವನ್ನು ಪಟಿಸಿ ಮತ್ತೊಮ್ಮೆ ದೇಹವನ್ನು ಸಡಿಲಗೊಳಿಸುವ ವ್ಯಾಯಾಮವನ್ನು ಒಂದೆರಡು ನಿಮಿಷಗಳ ಕಾಲ ಮಾಡುವ ಮೂಲಕ ರಥಸಪ್ತಮಿಯ ಸೂರ್ಯನಮಸ್ಕಾರ ಯಜ್ಞವನ್ನು ನಿರ್ವಿಘ್ನವಾಗಿ ಮತ್ತು ಅಷ್ಟೇ ಯಶಸ್ವಿಯಾಗಿ ಸಂಪೂರ್ಣಗೊಳಿಸಲಾಯಿತು.

Screenshot 2020-02-01 at 1.23.18 PM

ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಪ್ರಸಾದ ರೂಪದಲ್ಲಿ ಬೆಲ್ಲ ಮತ್ತು ಕಲ್ಲು ಸಕ್ಕರೆಯ ತುಣುಕನ್ನು ವಿತರಿಸಲಾಯಿತು. ಜಗತ್ತಿನ ಸಕಲ ಜೀವರಾಶಿಗಳ ಜೀವ ಶಕ್ತಿ ಮತ್ತು ಆಶಾಕಿರಣವಾದ ಸೂರ್ಯಭಗವಾನನ ಅನುಗ್ರಹ ಮತ್ತು ಆಶೀರ್ವಾದ ನಮ್ಮೆಲ್ಲರ ಮೇಲೂ ಸದಾಕಾಲವೂ ಹೀಗೇ ಇರಲಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s