ಥೈಲ್ಯಾಂಡ್ ಪ್ರವಾಸದ ಮಾರ್ಗದರ್ಶಿ/ಕೈಪಿಡಿ

ಕಳೆದ ನವೆಂಬರ್ ನಲ್ಲಿ ನಮ್ಮ 21ನೇ ವಿವಾಹವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಾಗ ಎಲ್ಲಿಯಾದರೂ ದೂರದ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗೋಣ ಎಂದು ನಿರ್ಧರಿಸಿದಾಗ ಹಲವಾರು ಪ್ರದೇಶಗಳು ನಮ್ಮ ಮನಸ್ಸಿಗೆ ಬಂದು ಅಂತಿಮವಾಗಿ ಥೈಲ್ಯಾಂಡ್ ದೇಶಕ್ಕೆ ಹೋಗುವಂತೆ ನಿರ್ಧರಿಸಲಾಯಿತು. ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವ ಬಗೆಗೆ ಒಂದಿಬ್ಬರು ಸ್ನೇಹಿತರನ್ನು ವಿಚಾರಿಸಿದರೆ, ಅವರಿಂದ ಸಕಾರಾತ್ಮಕ ಸ್ಪಂದನೆಗಿಂತ ಒಂದು ರೀತಿಯ ಕುಹಕಾತ್ಮಕ ಸ್ಪಂದನೆಯೇ ಬಂದಿತು. ಈ ವಯಸ್ಸಿನಲ್ಲಿ, ನೀವೂ ಅದೂ ಸಂಸಾರ ಸಮೇತರಾಗಿ ಥೈಲ್ಯಾಂಡಿಗೆ ಹೋಗುವುದು ಉಚಿತವಲ್ಲ. ಅದರಲ್ಲೂ ಸಸ್ಯಹಾರಿಗಳಿಗೆ ಅಲ್ಲಿ ಊಟೋಪಚಾರಗಳು ಸರಿಹೊಂದುವುದಿಲ್ಲ. ಅಲ್ಲಿಯ ಜನರು ಸುಖಾಸುಮ್ಮನೆ ಮೈಮೇಲೆ ಬಿದ್ದು ಕಾಡುತ್ತಾರೆ. ಕಳ್ಳಕಾಕರು ಹೆಚ್ಚು ಎಂದು ಹೀಗೆ ಹಾಗೆ ಭಯ ಪಡಿಸಿದ್ದೇ ಹೆಚ್ಚು. ಹೇಗೂ ಥೈಲ್ಯಾಂಡಿಗೆ ಹೋಗುವುದೆಂದು ನಿರ್ಧರಿಸಿಯಾಗಿದೆ. ಲಕ್ಷಾಂತರ ಜನ ಭಾರತೀಯರು ಪ್ರವಾಸಿಗರಾಗಿ ಹೋಗುತ್ತಿದ್ದಾರೆ. ಕೋಶ ಓದಿ ನೋಡು. ದೇಶ ಸುತ್ತಿ ನೋಡು ಎನ್ನುವಂತೆ ಥೈಲ್ಯಾಂಡ್ ಪ್ರವಾಸವೇನೋ ನಿರ್ಧರಿಸಿಯಾಗಿದೆ ಅಲ್ಲಿಗೆ ಹೋಗಿ ನೋಡೇ ಬಿಡುವ ಎಂದು ತೀರ್ಮಾನಿಸಿಯೇ ಬಿಟ್ಟೆವು. ಹೇಗೂ ಥೈಲ್ಯಾಂಡಿಗೆ ಹೋಗುತ್ತಿದ್ದೇವೆ. ನಮ್ಮ ಪ್ರವಾಸದ ಪ್ರತೀ ಕ್ಷಣದ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಂಡಲ್ಲಿ ಮುಂದೆ ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವವರಿಗೆ ಅನುಕೂಲವಾಗಲಿ ಎಂದೇ ಈ ಲೇಖನ.

ಬೆಂಗಳೂರಿನಿಂದ ಬ್ಯಾಂಕಾಕ್ ದೂರ : ವಿಮಾನದಲ್ಲಿ ಸುಮಾರು 2500 kilometers.

ಪ್ರಯಾಣದ ಸಮಯ : ವಿಮಾನದಲ್ಲಿ ಸುಮಾರು 3 ಗಂಟೆ 45 ನಿಮಿಷಗಳು.

ಯಾವ ಯಾವ ವಿಮಾನಗಳಲ್ಲಿ ಹೋಗಬಹುದು : ಭಾರತದ ಎಲ್ಲಾ ಪ್ರಮುಖ ನಗರಗಳಿಂದಲೂ ಥೈಲ್ಯಾಂಡಿನ ಪ್ರಮುಖ ನಗರಗಳಿಗೆ ಅನೇಕ ವಿಮಾನ ಸಂಸ್ಥೆಗಳ ನೇರವಾದ ವಿಮಾನಗಳಿವೆ. ಆದರೆ ಕಡಿಮೆ ದರ ಇರುವ ಕಾರಣ ಪ್ರವಾಸಿಗರು ಹೆಚ್ಚಾಗಿ Air Asia thai & GoAir ಬಳಸುತ್ತಾರೆ.

ಸಾಮಾನು ಸರಂಜಾಮು : ಭಾರತದಿಂದ ಥೈಲ್ಯಾಂಡ್ ಬಹಳ ಹತ್ತಿರವಿರುವ ಕಾರಣ ಅಂತರಾಷ್ಟ್ರೀಯ ವಿಮಾನಗಳಲ್ಲಿ ಪ್ರತಿಯೊಬ್ಬರಿಗೂ 10-15KG ಯಷ್ಟು ಮಾತ್ರವೇ ಸಾಮಾನು ಸರಂಜಾಮುಗಳನ್ನು ತೆಗೆದು ಕೊಂಡು ಹೋಗ ಬಹುದಾದ ಕಾರಣ, ಅದಷ್ಟೂ ಕಡಿಮೆ ಸಾಮಾನುಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.

ಥೈಲ್ಯಾಂಡಿಗೆ ಹೋಗುವ ವ್ಯವಸ್ಥೆ : ಸಾಧಾರಣವಾಗಿ ಬಹುತೇಕರು ಯಾವುದಾದರೂ ಯಾವುದೇ ತೊಂದರೆ ಇರಬಾರದೆಂದು ಟ್ರಾವೆಲ್ಸ್ ಮುಖಾಂತರವೋ ಇಲ್ಲವೇ ನಾನಾ ರೀತಿಯ online travels portal ಮುಖಾಂತರ ಪ್ರವಾಸವನ್ನು ಬುಕ್ ಮಾಡುತ್ತಾರೆ. ಇಲ್ಲಿ ಯಾವುದೇ ಟ್ರಾವೆಲ್ಸ್ ಮುಖಾಂತರ ಬುಕ್ ಮಾಡಿದರೂ ಥೈಲ್ಯಾಂಡಿನಲ್ಲಿ ಆವರೆಲ್ಲರೂ ಸ್ಥಳೀಯ ಟೂರ್ ಏಜೆಂಟ್ಸ್ ಗಳನ್ನೇ ಅವಲಂಭಿಸಿರುತ್ತಾರೆ. ಹಾಗಾಗಿ ಇಲ್ಲಿಂದ ಅಲ್ಲಿಗೆ ಹೋಗುವವರೆಲ್ಲರನ್ನೂ ಕೆಲವೇ ಬೆರಳೆಣಿಕೆಯ ಟ್ರಾವಲ್ಸ್ ಕಂಪನಿಗಳು ಅವರವರ ಹೋಟೆಲ್ಲಿನಿಂದ ನೇರವಾಗಿ ಕರೆದುಕೊಂಡು ಒಟ್ಟಾಗಿ ಗುಂಪು ಗುಂಪಾಗಿ ಪ್ರವಾಸವನ್ನು ಮಾಡಿಸುತ್ತಾರೆ.

ಆದರೆ ಪ್ರವಾಸ ಸ್ವಲ್ಪ ರೋಚಕವಾಗಿರಲಿ ಎಂದು ಸ್ವಲ್ಪ ಹೆಚ್ಚಿನ ಶ್ರಮ ಮತ್ತು ಆಸ್ಥೆ ವಹಿಸುವವರು ಇಲ್ಲಿಂದಲೇ ಎಲ್ಲವನ್ನೂ online booking ಮಾಡಿ ಸ್ವಂತವಾಗಿಯೂ ಹೋಗಬಹುದು. ಹೀಗೆ ಮಾಡುವುದರಿಂದ 15-20% ಹಣವನ್ನು ಉಳಿಸಬಹುದಾದರೂ ಸ್ವಲ್ಪ ರಿಸ್ಕ್ ತೆಗೆದು ಕೊಳ್ಳಬೇಕಾಗಬಹುದು ಮತ್ತು ಎಲ್ಲವೂ ನಾವು ಅಂದು ಕೊಂಡಂತೆ ನಡೆಯದೆಯೂ ಇರಬಹುದು.

ಪ್ರಮುಖ ನಗರಗಳು : ಬ್ಯಾಂಕಾಕ್, ಪಟ್ಟಾಯ, ಕ್ರಾಬಿ, ಫುಕೆಟ್

ಭಾಷೆ: ಥೈ ಭಾಷೆ ಮಾತನಾಡುತ್ತಾರಾದರೂ ಬಹುತೇಕರಿಗೆ ಇಂಗ್ಲೀಷ್ ಅರ್ಥವಾಗುತ್ತದೆ ಅರ್ಥವಾಗದಿದ್ದಲ್ಲಿ ತಮ್ಮ ಮೊಬೈಲಿನಲ್ಲಿ Google Transalator ಮೂಲಕ ವ್ಯವಹರಿಸುತ್ತಾರೆ. ರಸ್ತೆ ಬದಿಯ ವ್ಯಾಪಾರಿಗಳು cacluclator ಮೂಲಕ ಚೌಕಾಸಿ ವ್ಯಾಪಾರ ಮಾಡುತ್ತಾರೆ.

Screenshot 2020-02-03 at 11.28.56 AM

ಹಣ : ಥೈ ಬಾತ್. ಸದ್ಯಕ್ಕೆ 1 Thai Baht (TBH) = 2.5Rs. ಇಲ್ಲಿಂದಲೇ ಹಣವನ್ನು ಪರಿವರ್ತನೆ ಮಾಡಿಕೊಂಡರೆ ಉತ್ತಮ. ಅಲ್ಲಿಯೂ ಸಹಾ ಹೆಜ್ಜೆ ಹೆಜ್ಜೆಗೂ ಹಣ ವಿನಿಮಯ ಕೇಂದ್ರಗಳು ಇರುತ್ತವೆಯಾದರೂ ಅವರ ಪರಿವರ್ತನಾ ದರ ಅತ್ಯಂತ ದುಬಾರಿಯಾಗಿರುತ್ತದೆ.

Screenshot 2020-02-03 at 1.28.59 PM

ಧರ್ಮ : 94.5% ಬೌಧ್ಧರು 2.3% ಮುಸಲ್ಮಾನರು 1.17% ಕ್ರಿಶ್ಚಿಯನ್ನರು 0.03% ಹಿಂದೂಗಳು 0.01% ಇತರೇ ಧರ್ಮದವರು ಈ ದೇಶದಲ್ಲಿ ವಾಸಿಸುತ್ತಿದ್ದಾರಾದರೂ ಕೆಲವೊಂದು ಪಟ್ಟಣಗಳಲ್ಲಿ (ಕ್ರಾಬಿ, phang nga bay ) ಮುಸಲ್ಮಾನರು 50% ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಾಹುಳ್ಯ ಪಡೆದಿದ್ದಾರೆ. ಇಲ್ಲಿಯಂತೆ ಅಲ್ಲಿನ ಮುಸ್ಲಿಂ ಮಹಿಳೆಯರು ಬುರ್ಕಾ ಧರಿಸಿ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯದೆ, ತಲೆಯ ಮೇಲೆ ಕೇವಲ ಹಿಜಬ್ ಧರಿಸಿ ಪುರುಷರ ಸರಿಸಮಾನರಾಗಿ ದುಡಿಯುವುದನ್ನು ಕಾಣಬಹುದಾಗಿದೆ. ಅಲ್ಲಿನ ಬಹುತೇಕ ಅಂಗಡಿಗಳಲ್ಲಿ ಇದೇ ಮಹಿಳೆಯರು ಕಾರ್ಯನಿರ್ವಹಿಸಿಸುತ್ತಿದ್ದಾರೆ. ಟುಕ್ ಟುಕ್ ಮತ್ತು ಕ್ಯಾಬ್ಗಳನ್ನೂ ಚಾಕಚಕ್ಯತೆಯಿಂದ ಚಾಲನೆ ಮಾಡುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ. ಧರ್ಮ ಯಾವುದೇ ಇದ್ದರೂ ಅವರೆಲ್ಲರಿಗೂ ತಮ್ಮ ದೇಶದ ಬಗ್ಗೆ ಹೆಮ್ಮೆಯಿದೆ ಮತ್ತು ಅಭಿಮಾನದಿಂದ ಎಲ್ಲರೂ ಥೈ ಭಾಷೆಯನ್ನೇ ಮಾತಾನಾಡುವುದು ಮತ್ತೊಂದು ಗಮನಾರ್ಹವಾದ ವಿಚಾರವಾಗಿದೆ.

ವೀಸಾ: ಅಲ್ಲಿ ಹೋಗಿಯೇ ಪಡೆಯಬಹುದು (On arriavl Visa) Apri 30, 2020ರ ವರೆಗೆ ಭಾರತೀಯರಿಗೆ ಉಚಿತವಾದ ಪರವಾನಗಿ ಕೊಡುತ್ತಿದ್ದಾರೆ. ಇಲ್ಲದಿದ್ದಲ್ಲಿ, ಪ್ರತೀ ಪ್ರವಾಸಿಗರು ಸುಮಾರು 2000 ಬಾತ್ ವೀಸಾಕ್ಕಾಗಿ ಖರ್ಚುಮಾಡಬೇಕಾಗುತ್ತದೆ.

ವೀಸ ಮಾಡಿಸಲು ಏನೇನು ತೆಗೆದುಕೊಂಡು ಹೋಗಬೇಕು : ಇತ್ತೀಚಿನ ಒಂದು ಪಾಸ್ ಪೋರ್ಟ್ ಅಳತೆಯ ಫೋಟೋ, ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವ ಮತ್ತು ಹಿಂತಿರುಗುವ ಧೃಡಪಡಿಸಲಾದ ವಿಮಾನದ ಟಿಕೆಟ್, ಅಲ್ಲಿ ಉಳಿದುಕೊಳ್ಳುವ ಹೋಟೆಲ್ ಹೆಸರು.

ಪ್ರವಾಸಕ್ಕೆ ಎಷ್ಟು ಹಣ ತೆಗೆದುಕೊಂಡು ಹೋಗಬೇಕು? : ವೀಸಾ ಕೊಡುವಾಗ ಪ್ರತಿಯೊಬ್ಬ ಪ್ರಯಾಣಿಕರ ಬಳಿ 10000 TBH ಅಥವಾ ಇಡೀ ಕುಟುಂಬಕ್ಕೆ 20000 TBH ಇರಬೇಕೆಂಬ ನಿಯಮವಿದೆ. ಅನುಮಾನ ಬಂದಲ್ಲಿ ಕೆಲವೊಮ್ಮೆ ಪರೀಕ್ಷಿಸಲೂ ಬಹುದು

ಪ್ರಮುಖ ಆಕರ್ಷಣೆಗಳು : ಆಸ್ತಿಕರಾಗಿದ್ದಲ್ಲಿ ನೂರಾರು ಬೌದ್ಧ ದೇವಸ್ಥಾನಗಳನ್ನು ನೋಡಬಹುದಾಗಿದೆ. ಪಕೃತಿ ಸೌಂದರ್ಯ ಸವಿಯುವವರಿಗೆ ನೂರಾರು ರಮಣೀಯ, ಮನೋಲ್ಲಾಸಿತ ಸಮುದ್ರ ದಂಡೆಗಳಿವೆ. ಮೋಜು ಮಸ್ತಿ ಮಾಡುವ ಯುವಕ ಯುವತಿಯರಿಗೆ ತರತಹದ ಸಾವಿರಾರು ಪಬ್ ಮತ್ತು ಬಾರ್ ಗಳು ಇವೆ.

ಉಳಿದುಕೊಳ್ಳುವ ವ್ಯವಸ್ಥೆ : ಕಾಸಿಗೆ ತಕ್ಕಂತೆ ಕಜ್ಜಾಯ ಎನ್ನುವಂತೆ ನಮ್ಮ ಅನುಕೂಲಕ್ಕೆ ತಕ್ಕಂತೆ ಸಾಮಾನ್ಯ ರೀತಿಯಿಂದ ಹಿಡಿದು ಐಶಾರಾಮ್ಯದ ಸಾವಿರಾರು ಹೋಟೆಲ್ಗಳು ಥೈಲ್ಯಾಂಡಿನ ಪ್ರತೀ ಪ್ರಮುಖ ನಗರಗಳಲ್ಲಿ ಇವೆ. ಇಲ್ಲಿಂದಲೇ ಇಂಟರ್ನೆಟ್ ಮುಖಾಂತರ ಮುಂಗಡವಾಗಿ ಕಾಯ್ದಿರಿಸಿದರೆ ಉತ್ತಮ ನಮ್ಮಲ್ಲಿ http://www.oyorooms.com ಪ್ರಖ್ಯಾತವಾಗಿರುವಂತೆ ಥೈಲ್ಯಾಂಡಿನಲ್ಲಿ https://www.airbnb.co.in ಪ್ರಸಿದ್ಧಿಯಾಗಿದ್ದು ಅವಶ್ಯಕತೆಯ ಅನುಕೂಲಕ್ಕೆ ತಕ್ಕಂತೆ ವಸತಿಯನ್ನು ಪಡೆದುಕೊಳ್ಳಬಹುದಾಗಿದೆ.

ಹೋಟೆಲ್ Check in timings : 2.p.m.
ಹೋಟೆಲ್ Check out timings : 11 a.m.

ಆಹಾರ ಪದ್ದತಿ : ಪ್ರಮುಖವಾಗಿ ಥೈ ಆಹಾರ ಪದ್ದತಿ ಇದ್ದರೂ ಎಲ್ಲಾ ಕಡೆಯಲ್ಲೂ ಪ್ರಪಂಚದ ಎಲ್ಲಾ ರೀತಿಯ ಆಹಾರಗಳು ಲಭ್ಯವಿದೆ. ಅದರಲ್ಲೂ ಭಾರತೀಯ ಆಹಾರಗಳು (ಸಸ್ಯಾಹಾರಿ ಮತ್ತು ಮಾಂಸಹಾರಿ) ಸುಲಭವಾಗಿ ಎಲ್ಲಾ ಕಡೆಯಲ್ಲೂ ಸಿಗುತ್ತದೆಯಾದರೂ ಸ್ವಲ್ಪ ಹೆಚ್ಚಿನ ಬೆಲೆ ತೆರೆಬೇಕಷ್ಟೇ. ಮಾಂಸಾಹಾರಿಗಳಿಗೆ ಥೈಲ್ಯಾಂಡ್ಒಂದು ರೀತಿಯ ಸ್ವರ್ಗವಿದ್ದಂತೆ ಅದರಲ್ಲಿಯೂ ಸಮುದ್ರಾಹಾರ ಪ್ರಿಯರಿಗಂತೂ ರಸ್ತೆಗಳ ಬದಿಗಳಲ್ಲಿ ಕೇವಲ 10-50TBH ಗಳಿಗೆ ಹುರಿದ, ಕರಿದ, ಬೇಯಿಸಿದ, ಸುಟ್ಟ ಬಗೆ ಬಗೆಯ ಮಾಂಸಾಹಾರಗಳು ಸಿಗುತ್ತವೆ.

ಅನೇಕ ರೀತಿಯ ಹಣ್ಣುಗಳು ಮತ್ತು ಎಳನೀರು ರಸ್ತೆಯ ಬದಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಮತ್ತು ಶುಚಿಯಾದ ವಾತಾವರಣದಲ್ಲಿ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮದೇ ಆದ ಏನಂತೀರೀ YouTube Channel https://youtu.be/o0jhX84JJSQ ಮತ್ತು ಮುಂದಿನ ದಿನಗಳಲ್ಲಿ ಮೂಡಿಬರಲಿರುವ ವೀಡೀಯೋಗಳನ್ನು ನೋಡಿದಲ್ಲಿ ತಿಳಿಯುತ್ತದೆ.

WhatsApp Image 2020-02-03 at 10.22.15 PM

ಫೋನ್ ಮತ್ತು ಇಂಟರ್ನೆಟ್ : ಅವಶ್ಯಕತೆ ಮತ್ತು ಅನುಕೂಲ ಇದ್ದವರು ಭಾರತದಿಂದಲೇ ರೋಮಿಂಗ್ ಸಕ್ರೀಯಗೊಳಿಸಿಕೊಳ್ಳಬಹುದು. ಇಲ್ಲದಿದ್ದಲ್ಲಿ ಇಮಿಗ್ರೇಷನ್ ಮುಗಿಸಿ ಹೊರಗೆ ಬರುತ್ತಿದ್ದಂತೆಯೇ ಅವಶ್ಯಕತೆ ತಕ್ಕಂತೆ Temporary Sim 300-500 THB ಗಳಲ್ಲಿ Local Call & 10-20GB Internet Pack ಸುಲಭವಾಗಿ ಸಿಗುತ್ತದೆ. ಇಡೀ ಥೈಲ್ಯಾಂಡಿನಲ್ಲಿ ಹತ್ತಾರು ಕಿಮೀ ದೂರದಲ್ಲಿ ಸಮುದ್ರದ ಮದ್ಯೆ ಇರುವ ದ್ಚೀಪಗಳಲ್ಲಿಯೂ ಸಹಾ ಅತ್ಯುತ್ತವಾದ ನೆಟ್‌ವರ್ಕ್ ಸಿಗ್ನಲ್ ದೊರೆಯುತ್ತದೆ.

 

ಸ್ಥಳೀಯ ಸಾರಿಗೆ : ಬ್ಯಾಂಕಾಕ್ ನಗರದಲ್ಲಿ ಮಾತ್ರ ಸುಸುಜ್ಜಿತ MRT ಮೆಟ್ರೋ ರೈಲಿನ ವ್ಯವಸ್ಥೆಯಿದ್ದು ಉಳಿದೆಲ್ಲಾ ಕಡೆ ಸ್ಥಳೀಯ ಬಸ್ ವ್ಯವಸ್ಥೆ ಇದೆಯಾದರೂ, ಸಮಯಕ್ಕೆ ಸಿಗುವ ಕಾರಣ ಹೆಚ್ಚಿನ ಜನ ಟ್ಯಾಕ್ಸಿ ಬಳಸುತ್ತಾರೆ. ನಮ್ಮಲ್ಲಿ OLA & Uber ಇರುವಂತೆ ಅಲ್ಲಿ https://www.grab.com/th/en/transport/taxi/ ಪ್ರಸಿದ್ಧವಾಗಿದೆಯಾದರೂ ಇನ್ನೂ ಅನೇಕ ಸ್ಥಳೀಯ ವಾಹನಗಳೂ ಬಳಕೆಯಲ್ಲಿವೆ.

Screenshot 2020-02-03 at 11.01.24 AM

ನಮ್ಮಲ್ಲಿರುವ ಆಟೋಗಳನ್ನು ಅಲ್ಲಿ ಟುಕ್ ಟುಕ್ ಎಂದು ಕರೆಯುತ್ತಾರೆ. ಹತ್ತಿರದ ಸ್ಥಳಗಳಿಗೆ ಟುಕ್ ಟುಕ್ ಬಳಸಬಹುದಾಗಿದೆ. ಅದೇ ರೀತಿ ನಮ್ಮಲ್ಲಿರುವ ಮೋಟರ್ ಬೈಕುಗಳಿಗೆ ಎಡಬದಿಯಲ್ಲಿ ಮತ್ತೊಂದು ಚಕ್ರ ಅಳವಡಿಸಿ ಅದಕ್ಕೆ ಸರಿಯದ ಹೊದಿಕೆಯನ್ನು ಹೊದಿಸಿ ಅದನ್ನೂ ಸಹಾ ಟುಕ್ ಟುಕ್ ಮಾದರಿಯಲ್ಲಿ ಕೆಲವೊಂದು ಕಡೆ ಬಳಸುತ್ತಾರೆ.

Screenshot 2020-02-03 at 11.00.46 AM

ಒಬ್ಬರೇ ಹತ್ತಿರದ ಸ್ಥಳಗಳಿಗೆ ಹೋಗಬೇಕಿದ್ದಲ್ಲಿ ಮೋಟರ್ ಬೈಕ್ ಟ್ಯಾಕ್ಸಿಯನ್ನೂ ಬಳಸಬಹುದಾಗಿದೆ. ರಸ್ತೆ ಬದಿಯಲ್ಲಿ ಕೆಂಪು ಜ್ಯಾಕೇಟ್ ಧರಿಸಿರುವ ಬೈಕ್ ಸವಾರರು ನಿರ್ಧಿಷ್ಟ ಪ್ರದೇಶಗಳಿಗೆ ಸುರಕ್ಷಿತವಾಗಿ ಮತ್ತು ವೇಗವಾಗಿ ತಲುಪಿಸುತ್ತಾರೆ.

ಅದೇ ರೀತಿ ಪಟ್ಟಣಗಳಿಂದ ಪಟ್ಟಣಗಳಿಗೆ ಮತ್ತು ನಗರಗಳಿಂದ ಪ್ರಮುಖ ದ್ವೀಪಗಳಿಗೆ ತಲುಪಲು ಜಲಸಾರಿಗೆಯ ವ್ಯವಸ್ಥೆ ಅತ್ಯಂತ ವ್ಯವಸ್ಥಿತವಾಗಿದೆ. ನಮ್ಮ ಅನುಕೂಲಕ್ಕೆ ಸಣ್ಣ ಫೆರ್ರಿಗಳು ಮತ್ತು ಸ್ಪೀಡ್ ಬೋಟ್ಗಳನ್ನು ಬಳಸುತ್ತಾರೆ.

ನಮ್ಮಲ್ಲಿ bounce ಮತ್ತು VOGO ರೀತಿಯ ಬಾಡಿಗೆ ದ್ವಿಚಕ್ರ ವಾಹನಗಳು ಅಲ್ಲಿಯೂ ಸಹಾ ಇವೆಯಾದರೂ, ಅಂತರಾಷ್ಟ್ರೀಯ ಚಾಲನೆಯ ಪರವಾನಗಿ ಇದ್ದಲ್ಲಿ ಮಾತ್ರವೇ ಬಳಸುವುದು ಉತ್ತಮವಾಗಿದೆ. ಅದಿಲ್ಲದೇ ಬೈಕ್ ಓಡಿಸಿ ಅಪ್ಪೀ ತಪ್ಪೀ ಸ್ಥಳೀಯ ಪೋಲಿಸರ ಕೈಗೆ ಸಿಕ್ಕಿಬಿದ್ದರಂತೂ ಆ ಭಗವಾನ್ ಬುದ್ಧನೇ ಬಂದರೂ ಬಿಡಿಸಿಕೊಂಡು ಬರಲು ಸಾಧ್ಯವಿಲ್ಲ. ದುಬಾರಿ ದಂಡವನ್ನು ತೆತ್ತಲೇ ಬೇಕಿದೆ.

ವಾಹನ ದಟ್ಟಣೆ : ನಾವು ನೋಡಿದ ಹಾಗೆ ಬ್ಯಾಂಕಾಕ್, ಫುಕೆಟ್ ಮತ್ತು ಕ್ರಾಬಿ ಪಟ್ಟಣಗಳಲ್ಲಿ ನೂರಾರು ದೊಡ್ಡದೊಡ್ಡದಾದ ಮತ್ತು ವಿಶಾಲವಾದ ಫ್ಲೈಓವರ್ಗಳು ಇದ್ದರೂ ಬೆಂಗಳೂರಿನಂತೆಯೇ ನಗರ ಪ್ರದೇಶಗಳಲ್ಲಿ ವಿಪರೀತವಾದ ವಾಹನ ದಟ್ಟಣೆ ಇರುತ್ತದೆ. ನಾವೂ ಒಮ್ಮೆ ಕೇವಲ 1.8 ಕಿಮೀ ದೂರಕ್ಕೆ ಸುಮಾರು ಒಂದೂವರೆ ಗಂಟೆ ಕಾರಿನಲ್ಲಿಯೇ ಕಳೆದ ಕರಾಳ ಅನುಭವವಾಗಿದೆ. ಅಷ್ಟೆಲ್ಲಾ ವಾಹನ ದಟ್ಟಣೆ ಇದ್ದರೂ ನಾವಿದ್ದ ಎಂಟು ದಿನಗಳಲ್ಲಿ ಒಮ್ಮೆಯೂ ಸಹಾ ಯಾರೂ ಕೂಡಾ ಹಾರ್ನ್ ಮಾಡಿದ್ದನ್ನು ನೋಡಲೇ ಇಲ್ಲ. ಎಲ್ಲಾ ವಾಹನ ಚಾಲಕರೂ ಅತ್ಯಂತ ತಾಳ್ಮೆಯಿಂದ ಸುಗಮವಾಗಿ ಸಂಚಾರ ನಡೆಸುತ್ತಾರೆ. ಪ್ರತೀ ಕಾರಿನ ಮಧ್ಯೆಯೂ ಸುಮಾರು 5-6 ಅಡಿಗಳಷ್ಟು ಅಂತರವನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಮೆಚ್ಚಬೇಕಾದ ಅಂಶ. ಎಷ್ಟೇ ದಟ್ಟಣೆಯಲ್ಲಿಯೂ ಯಾವುದೇ ವಾಹನದ ಚಾಲಕ ತಾಳ್ಮೆಗೆಟ್ಟು ಕರ್ಕಶವಾಗಿ ಹೋಗಲೀ ಮೆದುವಾಗಲೀ ಹಾರ್ನ್ ಮಾಡುವುದಿಲ್ಲ ಮತ್ತು ಅನಾವಶ್ಯಕ ಜಗಳ ಕಾಯುವುದೇ ಇಲ್ಲ. ಟ್ರಾಫಿಕ್ಕಿನಲ್ಲಿ ಸಿಲುಕಿಕೊಂಡಾಗ ತಮ್ಮ ಪಾಡಿಗೆ ತಾವು ಸದಾಕಾಲವೂ ಯಾರೊಂದಿಗೋ ಮೊಬೈಲಿನಲ್ಲಿ ಮಾತಾನಾಡುತ್ತಾ ಕಾಲ ಕಳೆಯುತ್ತಾರೆ.

ಹವಾಮಾನ : ಹವಾಮಾನದ ವಿಷಯದಲ್ಲಿ ಥೈಲ್ಯಾಂಡಿಗರು ನಿಜಕ್ಕೂ ಅದೃಷ್ಟವಂತರೇ ಸರಿ. ವರ್ಷದ 365 ದಿನಗಳಲ್ಲಿ 340-350 ದಿನಗಳೂ ಅತ್ಯುತ್ತಮ ಹವಾಮಾನದಿಂದ ಪ್ರವಾಸಿಗರು ಆನಂದದಿಂದ ಕಳೆಯಬಹುದಾಗಿದೆ. ಹಾಗಾಗಿ ವರ್ಷವಿಡೀ ಥೈಲ್ಯಾಂಡಿಗೆ ಭೇಟಿ ನೀಡಬಹುದಾದರೂ,ನವೆಂಬರ್ ಮತ್ತು ಏಪ್ರಿಲ್ ಆರಂಭದ ನಡುವಿನ ತಂಪಾದ ಮತ್ತು ಶುಷ್ಕ ಕಾಲದಲ್ಲಿ ಪ್ರಯಾಣಿಸಲು ಉತ್ತಮ ಸಮಯವಾಗಿರುತ್ತದೆ.

Screenshot 2020-02-03 at 9.51.09 PM

ಕುಡಿಯುವ ನೀರು : ಥೈಲ್ಯಾಂಡ್ ಸುತ್ತಲೂ ನೀರು ಇರುವ ದ್ವೀಪಗಳ ಸಮೂಹವಾದರೂ ಅಲ್ಲಿ ಸಾಧಾರಣ ನೀರನ್ನು ಕುಡಿಯಲು ಬಳಸುವುದಿಲ್ಲ. ನಲ್ಲಿಯ ನೀರನ್ನು ಕೇವಲ ಸ್ನಾನ ಮಾಡಲು, ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಯಲು ಬಳಸುತ್ತಾರೆ. ಎಲ್ಲಾ ಕಡೆಯಲ್ಲೂ ಶುದ್ದೀಕರಿಸಿದ ಮತ್ತು ಸಂಸ್ಕರಿಸಿದ ಬಾಟೆಲ್ ನೀರನ್ನೇ ಬಳಸುತ್ತಾರೆ. ಹೋಟೆಲ್ಗಳಲ್ಲಿಯೂ ಸಹಾ ಸಾಧಾರಣ ನೀರನ್ನು ಕೊಡುವುದೇ ಇಲ್ಲ. ಕುಡಿಯಲು ನೀರು ಬೇಕಾಗಿದ್ದಲ್ಲಿ 500 ml ನೀರಿನ ಬಾಟೆಲ್ಲಿಗೆ 20-30 TBH ವ್ಯಯಿಸಲೇ ಬೇಕಾಗುತ್ತದೆ.

beach-clean-up-rayong-thailand-jul-people-clearing-contaminated-sand-aou-prow-jul-spilled-oil-came-32707287

ಸ್ವಚ್ಚತೆ : ಪ್ರತಿದಿನವೂ ಲಕ್ಷಾಂತರ ಜನ ಪ್ರವಾಸಿಗರು ಥೈಲ್ಯಾಂಡಿಗೆ ಹೋಗಿ ಬರುತ್ತಿದ್ದರೂ ಅಲ್ಲಿಯ ಜನ ಸ್ವಚ್ಚತೆಯ ಬಗ್ಗೆ ವಿಶೇಷವಾದ ಕಾಳಜಿ ಹೊಂದಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ. ಅಲ್ಲಿಯೂ ಸಹಾ ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಬಹಳಷ್ಟು ಪ್ರಯತ್ನಿಸುತ್ತಿದ್ದಾರೆ ಮತ್ತು ಆ ಬಗ್ಗೆ ಅನೇಕ ಬೋರ್ಡ್ಗಳನ್ನು ಎಲ್ಲೆಡೆಯಲ್ಲೂ ತೂಗು ಹಾಕಿ ಜನರಿಗೆ ಎಚ್ಚರಿಗೆ ವಹಿಸಲು ತಿಳಿಸುತ್ತಿದ್ದಾರೆ. ರಸ್ತೆಬದಿಗಳಲ್ಲಿ ಮತ್ತು ಹೋಟೆಲ್ಗಳಲ್ಲಿ ಶೌಚಾಲಯದ ವ್ಯವಸ್ಥೆ ಇರುವ ಕಾರಣ, ನಾವೆಲ್ಲೂ ರಸ್ತೆಯ ಬದಿಯಲ್ಲಿ ಬಹಿರ್ದಶೆಗೆ ಹೋಗುವುದನ್ನು ಕಾಣಲಾಗಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ನಿಗಧಿತ ಪ್ರದೇಶಗಳಲ್ಲಿ ಮಾತ್ರವೇ ಧೂಮಪಾನ ಮಾಡಿದ ನಂತರ ಎಲ್ಲರೂ ಸಹಾ ಸಿಗರೇಟ್ ತುಂಡನ್ನು ಮತ್ತು ಕಸವನ್ನು ಕಸದ ಬುಟ್ಟಿಗೇ ಎಸೆಯುವುದು ಮೆಚ್ಚಬೇಕಾದ ಅಂಶವಾಗಿದೆ. ನಗರಾದ್ಯಂತ ರಸ್ತೆಗಳನ್ನು ಬಹಳ ಅಚ್ಚುಕಟ್ಟಾಗಿ ಸ್ಚಚ್ಚವಾಗಿ ಇಟ್ಟುಕೊಂಡಿರುವುದನ್ನು ನೋಡಬಹುದಾಗಿದೆ. ಪ್ರತೀ ದಿನ ಮುಂಜಾನೆ ಅಲ್ಲಿಯ ಪೌರಕಾರ್ಮಿಕರು ಸ್ಚಚ್ಚ ಗೊಳಿಸುವುದನ್ನು ಕಣ್ಣಾರೆ ಕಂಡಿದ್ದೇನೆ.

ರಸ್ತೆಗಳು : ನಾವು ಪ್ರಯಾಣಿಸಿದ ಬಹುತೇಕ ರಸ್ತೆಗಳು ಹೆದ್ದಾರಿಯಾಗಿದ್ದ ಕಾರಣ ಅದು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಗರದ ವ್ಯಾಪ್ತಿಯಲ್ಲಿ ಗಂಟೆಗೆ 60ಕಿಮೀ ದೂರ ಕ್ರಮಿಸಿಬಹುದು ಮತ್ತು ಹೆದ್ದಾರಿಗಳಲ್ಲಿ ಗಂಟೆಗೆ 80-120 ಕಿಮೀ ವೇಗದಲ್ಲಿ ಚಲಿಸಬಹುದಾಗಿದೆ. ಹಲವಾರು ಕಡೆ ಸಿಸಿ ಟಿವಿ ಕ್ಯಾಮೆರಾಗಳಿದ್ದು, ಅದಕ್ಕಿಂತಲೂ ವೇಗದಿಂದ ಚಾಲನೆ ಮಾಡಿ ಸಿಕ್ಕಿಬಿದ್ದರೆ, ಸ್ಥಳದಲ್ಲೇ ದುಬಾರಿಯಾದ ದಂಡವನ್ನು ವಿಧಿಸಲಾಗುತ್ತದೆ. ಥೈಲ್ಯಾಂಡ್‌ನ ಕೆಲವು ಎಕ್ಸ್‌ಪ್ರೆಸ್‌ವೇಗಳು ಟೋಲ್‌ಗಳನ್ನು ವಿಧಿಸುತ್ತವೆ.

ಧಾರ್ಮಿಕ ಆಚರಣೆಗಳು : ನಮ್ಮ ದೇಶದಂತೆ ಥೈಲ್ಯಾಂಡಿನಲ್ಲೂ ದೇವರಿಗೆ ಮತ್ತು ಗುರು ಹಿರಿಯರಿಗೆ ಅಪಾರವಾದ ಶ್ರದ್ಧಾ ಭಕ್ತಿಯನ್ನು ತೋರುತ್ತಾರೆ. ಅಲ್ಲಿನ ದೇವಾಲಯಗಳಿಗೆ ಪ್ರವೇಶಿಸಲು ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಗಂಡಸರು ಬರ್ಮುಡಾಗಳಲ್ಲಿ ದೇವಾಲಯ ಪ್ರವೇಶಿಸಬಹುದಾದರೂ ಹೆಂಗಸರು ಅರೆ ನಗ್ನ ಮೇಲುಡುಗೆ ಮತ್ತು ಮಂಡಿಯ ಮೇಲಿರುವ ಉಡುಗೆಗಳನ್ನು ತೊಟ್ಟು ದೇವಾಲಯವನ್ನು ಪ್ರವೇಶಿಸುವ ಹಾಗಿಲ್ಲ. ಅದಕ್ಕೆಂದೇ ಅಲ್ಲಿಯೇ ನಮ್ಮ ಬಹುತೇಕ ದೇವಾಲಯಗಳ ಬಳಿ ದೊರೆಯುವಂತೆ ಅಲ್ಲಿಯೂ ಸಹಾ ಶಲ್ಯದಂತಹ ಬಣ್ಣ ಬಣ್ಣದ ವಸ್ತ್ರಗಳು 20 TBHಗೆ ಬಾಡಿಗೆಗೆ ದೊರೆಯುತ್ತವೆ. ಅಂತಹ ವಸ್ತ್ರಗಳು ಧರಿಸಿಯೋ ಇಲ್ಲವೇ ಹೊದ್ದು ಕೊಂಡು ದೇವಾಲಯ ಪ್ರವೇಶಿಸಬಹುದಾಗಿದೆ. ಭಕ್ತಾದಿಗಳು ದೇವರ ಮುಂದೆ ಗಂಧಕಡ್ಡಿ ಹಚ್ಚಿ ಮಂಡಿಯೂರಿ ಕಣ್ಣು ಮುಚ್ಚಿ ಪ್ರಾರ್ಥಿಸಿದ ನಂತರ ಅಲ್ಲಿಯೇ ಇರುವ ಬೌಧ್ಧ ಬಿಕ್ಕುಗಳು ಅವರ ಮೇಲೆ ಮಂತ್ರದ ನೀರನ್ನು ಪ್ರೋಕ್ಷಿಸುತ್ತಾರೆ. ನಮ್ಮ ದೇವಾಲಯದಂತೆ ಅಲ್ಲಿಯೂ ಹುಂಡಿಯ ವ್ಯವಸ್ಥೆ ಇದ್ದು ಇಚ್ಚೆ ಉಳ್ಳವರು ಕೈಲಾದ ಮಟ್ಟಿಗೆ ಕಾಣಿಕೆಯನ್ನು ಕೊಡಬಹುದಾಗಿದೆ. ಸ್ಥಳೀಯರು ದೇವಾಲಯದ ಹುಂಡಿ ಮತ್ತು ಗುರುಗಳಿಗೂ ಯಥಾಶಕ್ತಿ ಕಾಣಿಕೆಯನ್ನು ಅರ್ಪಿಸಿ ಅವರಿಗೆ ಭಕ್ತಿಪೂರ್ವಕವಾಗಿ ನಮಿಸುವುದನ್ನು ಕಾಣಬಹುದು.

ಆಕರ್ಷಣೆಗಳು : ಪ್ರವಾಸೋದ್ಯಮವೇ ಇಲ್ಲಿನ ಜನರ ಪ್ರಮುಖ ಆದಾಯ ಹಾಗಾಗಿ ಇಲ್ಲಿನ ಜನರು ಪ್ರವಾಸಿಗಳನ್ನು ಅತಿಥಿಗಳ ರೂಪದಲ್ಲಿಯೇ ನೋಡುತ್ತಾರೆ ಮತ್ತು ಬಹಳ ಆಸ್ಥೆಯಿಂದ ವ್ಯವಹಾರ ಮಾಡುತ್ತಾರೆ. ಬುದ್ಧನ ಪವಿತ್ರ ದೇವಾಲಯಗಳ ಜೊತೆ ಜೊತೆಯಲ್ಲಿ ದೇವದತ್ತವಾಗಿ ಮತ್ತು ಪ್ರಾಕೃತಿಕವಾಗಿ ನಿರ್ಮಿತವಾದ ಅನೇಕ ದ್ವೀಪಗಳು ಮತ್ತು ನಡುಗಡ್ಡೆಗಳು ಇಲ್ಲಿಯ ಪ್ರಮುಖ ಆಕರ್ಷಣೆ. ಇದರ ಜೊತೆಗೆ, ತರತರಹದ ಸ್ಥಳೀಯವಾದ ಅಗ್ಗದ ಮದ್ಯಗಳು, ದೇಹದ ಮಸಾಜ್, ಬೆಲ್ಲೀ ಡಾನ್ಸ್, ಕೆಲವೊಂದು ಪ್ರದೇಶಗಳಲ್ಲಿ ವೇಶ್ಯಾವಾಟಿಕೆಗೆಂದೇ ಬಹುತೇಕ ಪಡ್ಡೇ ಹುಡುಗರು ಥೈಲ್ಯಾಂಡಿಗೆ ಬರುತ್ತಾರೆ.

IMG_20200125_221340

ಮಸಾಜ್ : ನಿಜವಾಗಿಯೂ ಇದೊಂದು ಅದ್ಭುತವಾದ ಅನುಭವ. ಬಾಡಿ ಮಸಾಜ್ ದೇಹದ ವಿವಿಧ ಭಾಗಗಳನ್ನು ತಲೆಯಿಂದ ಪಾದಗಳವರೆಗೆ ಒಳಗೊಂಡಿರುತ್ತದೆ, ಇದು ಒಟ್ಟಾರೆ ಉದ್ವೇಗ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಥಾಯ್ ಮಸಾಜ್ ಒತ್ತಡವನ್ನು ಕಡಿಮೆ ಮಾಡುವುದರಿಂದ ಹಿಡಿದು ಸ್ನಾಯುಗಳ ಒತ್ತಡವನ್ನು ನಿವಾರಿಸುವವರೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬಹು ಕಾಲದಿಂದಲೂ ದೇಹದ ಸ್ನಾಯುಗಳ ನೋವುಗಳನ್ನು ಶಮನಗೊಳಿಸುತ್ತವೆ. ಇಲ್ಲಿನ ಬಹುತೇಕ ಮಧ್ಯಮವರ್ಗದ ಹೆಂಗಸರು ಮಸಾಜ್ ಮಾಡುವ ಕಲೆಯಲ್ಲಿ ನಿಷ್ಣಾತರಗಿರುತಾರೆ, ಥಾಯ್ ಮಸಾಜ್, ತೈಲ ಮಸಾಜ್, ಥಾಯ್ ಹರ್ಬಲ್ ಬಾಲ್ ಹಾಟ್ ಕಂಪ್ರೆಸ್ ಮಸಾಜ್, ಕಾಲು ಮಸಾಜ್, ರಿಫ್ಲೆಕ್ಸೊಲಜಿ ಮಸಾಜ್, ಆಯುರ್ವೇದ ಮಸಾಜ್, ಸುಖುಮ್ವಿತ್ ಮಸಾಜ್, ಸಿಲೋಮ್ ಮಸಾಜ್ ಹೀಗೆ ತರ ತರಹದ ಮಸಾಜ್ ಗಳನ್ನು ಮಾಡುತ್ತಾರೆ. ರಸ್ತೆಯ ಬದಿಗಳಲ್ಲಿ ಪಾರದರ್ಶಿಕವಾಗಿ ಅನೇಕ ಮಸಾಜ್ ಪಾರ್ಲರ್ ಗಳು ಇರುತ್ತವೆಯಾದರೂ ಸ್ವಲ್ಪ ಗಮನಿಸಿ ನೋಡಿಕೊಂಡು ಹೋಗುವುದು ಉತ್ತಮ.

Screenshot 2020-02-03 at 10.11.38 PM

ಮೊಬೈಲ್ ಚಾರ್ಚರ್ : ಇಲ್ಲಿಯೂ ಸಹಾ 3pin electrical Socket ಬಳಸುತ್ತಾರಾದರೂ ನಮ್ಮ ದೇಶಕ್ಕಿಂತ ಸಣ್ಣದಾಗಿರುವುದರಿಂದ , 2 pin ಲ್ಯಾಪ್ ಟ್ಯಾಪ್ ಮತ್ತು ಮೊಬೈಲ್ ಚಾರ್ಜರ್ ತೆಗೆದುಕೊಂಡು ಹೋಗುವುದು ಉತ್ತಮ. ಇಲ್ಲದಿದ್ದಲ್ಲಿ ಬಹಳ ಕಷ್ಟವಾಗುವುದು ಖಂಡಿತ.

ಮೋಸ ಮತ್ತು ಕಳ್ಳತನ : ಇಲ್ಲಿಯ ಜನ ಪ್ರತಿಯೊಂದನ್ನು ವ್ಯಾವಹಾರಿಕವಾಗಿಯೇ ನೋಡುತ್ತಾರೆ. ಪ್ರತಿಯೊಂದು ಸೇವೆಗಳಿಗೂ ಇಂತಿಷ್ಟು ಹಣ ಎಂದು ಪೂರ್ವನಿರ್ಧಾರವಾಗಿರುತ್ತದೆ. ಉದಾಹಣೆಗೆ ಮೂತ್ರ ವಿಸರ್ಜನೆಗೂ 20 TBH ಕೊಡಲೇ ಬೇಕು. ಅದಲ್ಲದ್ದೇ ತಮ್ಮಲ್ಲಿರುವ ಸಣ್ಣ ಸಣ್ಣದ್ದನ್ನೂ ಅತ್ಯಂತ ಚೆನ್ನಾಗಿ ಮಾರ್ಕೆಟಿಂಗ್ ಮಾಡಿ ವ್ಯಾಪಾರ ಮಾಡುವುದು ಇವರಿಗೆ ಕರಗತ. ಹಾಗಾಗಿ ಅವರು ಹೇಳಿದ್ದಕ್ಕೆಲ್ಲಾ ಕೋಲೇ ಬಸವನಂತೆ ತಲೆಯಾಡಿಸದೇ, ಸ್ವಲ್ಪ ಅವರಿವರ ಹತ್ತಿರ ವಿಚಾರಿಸಿ ಇಲ್ಲವೇ ಇಂಟರ್ನೆಟ್ಟಿನಲ್ಲಿ ಓದಿ ತಿಳಿದುಕೊಂಡು ವ್ಯವಹರಿಸಿವುದು ಉತ್ತಮ.

ಶಾಪಿಂಗ್: ಥೈಲ್ಯಾಂಡ್ನಲ್ಲಿ ಶಾಪಿಂಗ್ ಮಾಡಲು ಎರಡು ರೀತಿಯ ಅವಕಾಶಗಳಿವೆ ಒಂದು ಎಲ್ಲಾ ಕಡೆಯಂತೆಯೇ ಯಾವುದಾದರೂ ಹವಾನಿಯಂತ್ರಿತ ಮಾಲ್ಗಳಿಗೆ ಹೊಕ್ಕಿ ಅವರು ಹೇಳಿದಂತಹ ಬೆಲೆ ಕೊಟ್ಟು ನೋಡಿದ್ದನ್ನು ಕೊಂಡು ಕೊಳ್ಳಬಹುದು ಇಲ್ಲವೇ ಸ್ಥಳೀಯ ಮಾರುಕಟ್ಟೆಗಳು, ವಾರಾಂತ್ಯದ ಬಜಾರ್‌ಗಳು, ರಾತ್ರಿ ಮಾರುಕಟ್ಟೆಗಳು ಮತ್ತು ತೇಲುವ ಬಜಾರ್‌ಗಳಲ್ಲದೇ ರಸ್ತೆ ಬದಿಯಲ್ಲಿಯೂ ವ್ಯಾಪಾರ ಮಾಡಬಹುದಾಗಿದೆ. ಇಲ್ಲಿ ಖರೀದಿಸಬೇಕಾದ ಕೆಲವು ಉತ್ಪನ್ನಗಳು ಈ ಕೆಳಗಿನಂತಿವೆ.

ಥಾಯ್ ಮಸಾಲೆಗಳು, ಸಾಸ್ ಗಳು ಬಗೆ ಬಗೆಯ ಟೀ ಗಳು, ಬಗೆ ಬಗೆಯ ಮರಗಳಿಂದ ಕೆತ್ತಿರುವ ಆನೆಗಳು, ಬುದ್ಧನ ವಿಗ್ರಹಗಳು, ಗಣೇಶನ ವಿಗ್ರಹಗಳು, ಕೈಯಿಂದ ತಯಾರಿಸಿದ ಸೊಗಸಾದ ಆಭರಣಗಳು, ಬೆಂಚರಾಂಗ್ ಪಿಂಗಾಣಿ ಮತ್ತು ಸಂಘಖಲೋಕ್ ಸ್ಟೋನ್‌ವೇರ್, ತೇಗದಿಂದ ಮಾಡಿದ ಅಲಂಕಾರಿಕ ಮರದ ಕೆತ್ತನೆಗಳು ಮತ್ತು ಪೀಠೋಪಕರಣಗಳು, ತೆಂಗಿನ ಚಿಪ್ಪಿನಿಂದ ಮಾಡಿದ ಬಗೆ ಬಗೆಯ ವಸ್ತುಗಳು ಈ ರೀತಿಯಾಗಿ ಅನೇಕ ವಸ್ತುಗಳನ್ನು ಖರೀದಿಸಬಹುದಾಗಿದೆ. ನಮ್ಮನ್ನು ನೋಡಿದ ಕೂಡಲೇ ಒಂದಕ್ಕೆ ನಾಲ್ಕು ಬೆಲೆಯನ್ನು ಹೇಳುವ ಕಾರಣ, ಇಷ್ಟು ಕಡಿಮೆ ಕೇಳಿದರೆ ಬೇಜಾರು ಮಾಡ್ಕೋಳ್ತಾರೇ ಅಂತಾ ಯೋಚಿಸದೇ, ಚೆನ್ನಾಗಿ ಚೌಕಾಸಿ ಮಾಡಲು ಗೊತ್ತಿದ್ದರೆ ಒಳ್ಳೆಯದು.

100 Baht Shop
100 Baht Shop

ಇದಲ್ಲದ್ದಕ್ಕಿಂತಲೂ ಸ್ಥಳೀಯ 100 baht ಅಂಗಡಿಗಳಿಗೆ ಭೇಟಿ ಕೊಟ್ಟು ಸಣ್ಣ ಸಣ್ಣ ವಸ್ತುಗಳನ್ನು ಉಡುಗೊರೆಯಾಗಿ ಕೊಡಲು ಖರೀದಿಸುವುದು ಉತ್ತಮ.

ಥೈಲ್ಯಾಂಡಿನ ಜನ ಮುಖಾ ನೋಡಿ ಮಣೆ ಹಾಕುವುದನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುತ್ತಾರೆ. ಪ್ರವಾಸಿಗರ ಮುಖಭಾವ, ಹಾವ ಭಾವ, ಮಾತು ಕಥೆ ನೋಡಿದ ತಕ್ಷಣವೇ ಅವರ ಅಗತ್ಯತೆಗಳನ್ನು ತಿಳಿಯಬಲ್ಲವರಾಗಿರುತ್ತಾರೆ. ಯಧ್ಬಾವಂ ತದ್ಭವತಿ ಎನ್ನುವಂತೆ ನಮ್ಮ ಮನಸ್ಸಿನ ಭಾವನೆಗಳಿಗೆ ಅನುಗುಣವಾಗಿ ಅವರು ಅವಶ್ಯಕವಾದ ಸೇವೆಗಳನ್ನು ಸಲ್ಲಿಸಲು ಸದಾ ಕಾಲವೂ ಸಿದ್ಧರಾಗಿರುತ್ತಾರೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಜನನೀ ಜನ್ಮ ಭೂಮಿಶ್ವ ಸ್ವರ್ಗಾದಪಿ ಗರೀಯಸೀ ಎನ್ನುವಂತೆ ನಮ್ಮ ದೇಶದಲ್ಲಿ ಇಲ್ಲದೇ ಇರುವುದು ಹೆಚ್ಚಿನದಾಗಿ ಅಲ್ಲಿ ಇಲ್ಲದಿದ್ದರೂ, ಒಮ್ಮೆ ಥೈಲ್ಯಾಂಡ್ ನೋಡಿಬರಲು ಅಡ್ಡಿಯಿಲ್ಲ.

ನಾವು ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವಾಗ ನಮಗಿದ್ದ ಅನೇಕ ಪ್ರಶ್ನೆಗಳಿಗೆ ಹತ್ತಾರು ಕಡೆ ಓದಿ ನೀಡಿ ತಿಳಿದು ಕೊಂಡಿದ್ದೆವು ಆದರೆ ನಮಗಾದ ಅನಾನುಕೂಲಗಳು ಬೇರೆಯವರಿಗೆ ಆಗಬಾರದು ಎಂದು ಈ ಸುದೀರ್ಘ ಲೇಖನ ಬರೆದಿದ್ದೇನೆ ನಮ್ಮೀ ಪ್ರಯತ್ನ ನಿಮ್ಮೆಲ್ಲರಿಗೂ ಮೆಚ್ಚಿಗೆಯಾದಲ್ಲಿ ದಯವಿಟ್ಟು ಲೈಕ್ ಮಾಡಿ. ಶೇರ್ ಮಾಡಿ ನಮ್ಮ ಏನಂತೀರೀ ಬ್ಲಾಗ್ ಮತ್ತು YouTube ಛಾನೆಲ್ಲಿಗೆ Subscribe ಆಗುವುದಕ್ಕೆ ಮರೆಯದಿರಿ.

ಏನಂತೀರೀ?

ನಿರೀಕ್ಷಿಸಿ : ಬ್ಯಾಂಕಾಕ್, ಕ್ರಾಬಿ ಮತ್ತು ಫುಕೆಟ್ ಕುರಿತಾದ ನಮ್ಮ ಪ್ರವಾಸದ ಸುಂದರ, ರೋಚಕ ಅನುಭವದ ಕಥನ ಅತೀ ಶೀಘ್ರದಲ್ಲಿ….

5 thoughts on “ಥೈಲ್ಯಾಂಡ್ ಪ್ರವಾಸದ ಮಾರ್ಗದರ್ಶಿ/ಕೈಪಿಡಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s