ಕಳೆದ ಎರಡು ಸಂಚಿಕೆಗಳಲ್ಲಿ ನಮ್ಮ ಪಿಂಟು ಅರ್ಥಾತ್ ಶ್ರೀನಿವಾಸನ ಬಾಲ್ಯ, ಕುಟುಂಬ ಮತ್ತು ಅವನ ಯೌವನದ ಆಟಪಾಠಗಳ ಬಗ್ಗೆ ತಿಳಿದುಕೊಂಡಿದ್ದೆವು ಈ ಸಂಚಿಕೆಯಲ್ಲಿ ಅವನ ವಿದ್ಯಾಭ್ಯಾಸದ ನಂತರದ ಅವನ ಜೀವನದ ಪ್ರಮುಖ ಘಟ್ಟದ ಬಗ್ಗೆ ತಿಳಿಯೋಣ.
ಈ ಮೊದಲೇ ತಿಳಿಸಿದಂತೆ ನಮ್ಮ ಪಿಂಟೂವಿನ ಅಪ್ಪಾ ಮತ್ತು ಅಮ್ಮಾ ಇಬ್ಬರೂ ಕೇಂದ್ರಸರ್ಕಾರಿ ಕೆಲಸದಲ್ಲಿ ಇದ್ದದ್ದರಿಂದ ಆರ್ಥಿಕವಾಗಿ ತಕ್ಕ ಮಟ್ಟಿಗೆ ಇದ್ದರೂ ಸಹಾ, ಉದ್ಯೋಗಂ ಪುರುಷ ಲಕ್ಷಣಂ ಎನ್ನುವಂತೆ ನಮ್ಮ ಪಿಂಟು ಸಹಾ ತನ್ನ ಡಿಪ್ಲಮೋ ಕೋರ್ಸ್ ಮುಗಿಸಿದ ಮೇಲೆ ಯಾವುದಾದರೂ ಕೆಲಸ ಮಾಡಬೇಕು ಎಂದು ನಿರ್ಧರಿಸಿ, ಒಂದೆರದು ಕಡೆ ಕೆಲಸಕ್ಕೂ ಪ್ರಯತ್ನಿಸಿದ. ಆದರೆ ಆನೆ ನಡೆದದ್ದೇ ದಾರಿ ಎನ್ನುವಂತಹ ಮನಸ್ಥಿತಿಯ ನಮ್ಮ ಪಿಂಟುವಿಗೆ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಲು ಆಗದೇ, ಮಗಾ ನಮ್ಮದೇ ಒಂದು ಕಂಪನಿ ಶುರು ಮಾಡಿ ನಮ್ಮ ಹುಡುಗ್ರಗೆಲ್ಲರಿಗೂ ನಾವೇ ಕೆಲ್ಸಾ ಕೊಟ್ರೇ ಹೆಂಗ್ರೋ? ಎನ್ನುವ ಯೋಚನೆ ಅದೊಂದು ಬಾರಿ ಪಿಂಟುವಿನ ಮನೆಯ ಮೇಲಿನ ಕೋಣೆಯಲ್ಲಿ ಗೆಳೆಯರೆಲ್ಲಾ ಸೇರೀ ಇಸ್ಪೀಟ್ ಆಟ ಆಡುವಾಗ ಮೊಳಕೆಯೊದಾಗ, ಆ ಕೂಡಲೇ ಅಲ್ಲಿದ್ದ ಗೆಳೆಯನೊಬ್ಬ ತನ್ನ ಜೇಬಿನಿಂದ 50ರೂಪಾಯಿಗಳನ್ನು ತೆಗೆದು ಇದೋ ನನ್ನ ಷೇರು ಎಂದು ಕೊಟ್ಟಿದ್ದ (ಇಂದು ಆತಾ ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಡೈರೆಕ್ಟರ್ ಆಗಿದ್ದಾನೆ) ಅಷ್ಟರಲ್ಲಿ ನಮ್ಮದೇ ಕಾಲೇಜಿನ ಸಹಪಾಠಿ ಮತ್ತು ಸಾಗರದ ಮತೊಬ್ಬ ಸ್ನೇಹಿತ ಸೇರಿ ಒಂದು ಕಂಪ್ಯೂಟರ್ ಸೇಲ್ಸ್ ಮತ್ತು ಸರ್ವಿಸಿಂಗ್ ಕಂಪನಿ ಆರಂಭಿಸಿಬೇಕು ಎಂದು ನಿರ್ಧರಿಸಿದಾಗ. ಅವರ ಜೊತೆ ನಮ್ಮ ಪಿಂಟೂ ಕೂಡ ಸೇರಿ ಕೊಂಡು ಒಟ್ಟು ಮೂವರು ಗೆಳೆಯರ ಸ್ನೇಹದ ಕುರುಹಾಗಿ ಶ್ರೀರಾಮಪುರದ ಮುಖ್ಯರಸ್ತೆಯ ಮಹಡಿಯ ಮೇಲಿನ ಸಣ್ಣದಾದ ಕೊಠಡಿಯಲ್ಲಿ ಸ್ನೇಹ ಕಂಪ್ಯೂಟರ್ ಆರಂಭವಾಯಿತು.
ಆಗ ತಾನೇ ಕಾಲೇಜು ಮುಗಿಸಿದ್ದ ಉತ್ಸಾಹಿ ತರುಣರ ಗುಂಪು ಚೈತನ್ಯದ ಚಿಲುಮೆಗಳಾಗಿದ್ದರು. ಬಲು ಅಪರೂಪ ನಮ್ ಜೋಡಿ. ಎಂತಹ ಕೆಲಸಕ್ಕೂ ನಾವ್ ರೆಡಿ ಅನ್ನುವಂತಿದ್ದರು. ಸಿಕ್ಕ ಕೆಲಸಳನ್ನೆಲ್ಲಾ ಅಚ್ಚುಕಟ್ಟಾಗಿ ನಿಭಾಯಿಸುವ ಛಾತಿ ಹೊಂದಿದ್ದ ಕಾರಣ ಎಲ್ಲರೂ ಕರೆದೂ ಕರೆದು ಕೈ ತುಂಬಾ ಕೆಲಸ ಕೊಟ್ಟರೇ ವಿನಃ ಕೈ ತುಂಬುವಷ್ಟು ಸಂಪಾದನೆಯಂತೂ ಆಗಲಿಲ್ಲ. ಏ ನಮ್ಮ ಹುಡುಗರಲ್ವಾ ಅಂತ ಸದರದಲ್ಲೇ ಪುಗಸಟ್ಟೆ ಕೆಲಸ ಮಾಡಿಸಿಕೊಂಡವರೇ ಹೆಚ್ಚು. ಆರಂಭದಲ್ಲಿ ಇಂತದ್ದೆಲ್ಲಾ ಇದ್ದೇ ಇರುತ್ತದೆ ಎಂದು ಛಲ ಬಿಡದ ತ್ರಿವಿಕ್ರಮರಂತೆ ಮೈಬಗ್ಗಿಸಿ ದುಡಿಯ ತೊಡಗಿದರು ಅ ಗೆಳೆಯರು. ಒಮ್ಮೊಮ್ಮೆ ಕೆಲಸದ ಒತ್ತಡ ಎಷ್ಟು ಇತ್ತು ಎಂದರೆ, ಎಷ್ಟೋ ಬಾರಿ ಊಟಕ್ಕೆ ಮನೆಗೂ ಹೋಗಲಾರದೇ, ಹತ್ತಿರದ ಸಂಪಿಗೆ ರಸ್ತೆಯ ಅಯ್ಯರ್ ಮೆಸ್ಸನ್ನೇ ಆಶ್ರಯಿಸಬೇಕಾದ ಪರಿಸ್ಥಿತಿಯಾಗಿತ್ತು.
ಕಾಲೇಜು ಮುಗಿದ ನಂತರ ಹರಿದು ಹಂಚಿಹೋಗಿದ್ದ ಗೆಳೆಯರನ್ನು ಒಂದೆಡೆ ಒಗ್ಗೂಡಿಸಲು ಗೆಳೆಯರು ಆರಂಭಿಸಿದ ಈ ಕಂಪನಿಯೇ ಒಂದು ಪ್ರಮುಖ ತಾಣವಾಯಿತು. ಆಗಿನ್ನೂ ಈಗಿನಂತೆ ಮೊಬೈಲ್ ಬಂದಿರಲಿಲ್ಲವಾದ್ದರಿಂದ ಕಷ್ಟ ಪಟ್ಟು ಹಾಕಿಸಿಕೊಂಡಿದ್ದ ಒಂದೇ ಒಂದು ಟೆಲಿಫೋನ್ ಲ್ಯಾಂಡ್ ಲೈನ್ ಎಲ್ಲರ ಪಾಲಿಗೆ ಸ್ನೇಹದ ಕೊಂಡಿಯಾಗಿತ್ತು. ಬೆಳಗಿನಿಂದ ಸಂಜೆಯವರೆಗೆ ಕತ್ತೆಯಂತೆ ದುಡಿದು ದಣಿವಾಗಿದ್ದವರಿಗೆ ಸಂಜೆಯ ಹೊತ್ತು ಗೆಳೆಯರೆಲ್ಲಾ ಕೂಡಿ ಬೈಟೂ ಟೀ/ಕಾಫಿ/ಬಾದಾಮಿ ಹಾಲು ಜೊತೆಗೆ ಯಾರಾದರೂ ತುಂಬು ಹೃದಯದಿಂದ ಪ್ರಾಯೋಜಿಸಿದರೆ ಬೊಂಡಾ ಬಜ್ಜಿಯೇ ಆಪ್ಯಾಯಮಾನವಾಗಿತ್ತು.
ಅಷ್ಟರಲ್ಲಿ ನನ್ನದೂ ಕೂಡಾ ಫೈನಲ್ ಇಯರ್ ಕಂಪ್ಯೂಟರ್ ಸೈನ್ಸ್ ಡಿಪ್ಲಮೋ ಮುಗಿಸಿ ಮುಂದೇನು ಮಾಡುವುದು ಎಂದು ತಿಳಿಯದೆ ಕಂಪ್ಯೂಟರ್ ಸಂಬಂಧಿತ ಸಣ್ಣ ಪುಟ್ಟ ಕಲಸಗಳನ್ನು ಮಾಡುತ್ತಾ ಓದಿನ ನಂತರವೂ ಪೋಷಕರಿಗೆ ಹೊರೆಯಾಗದಂತೆ ಇದ್ದಾಗ ಮಲ್ಲೇಶ್ವರಂನಲ್ಲಿ ಸಿಕ್ಕ ಪಿಂಟು ಅಲಲಲಲೇ ಕಂಠಾ ಏನೋ ಇಲ್ಲಿ ಎಂದು ಬಾಯಿ ತುಂಬಾ ಮಾತನಾಡಿಸಿ ಬಾ ಎಂದು ಸ್ನೇಹ ಪೂರ್ವಕವಾಗಿ ಸ್ನೇಹ ಕಂಪ್ಯೂಟರ್ಸ್ಗೆ ಮೊದಲ ಬಾರಿ ನನ್ನನ್ನು ಕರೆದು ಕೊಂಡು ಹೋಗಿ ಅದಾದ ನಂತರ ಐಯ್ಯರ್ ಮೆಸ್ಸಿನಲ್ಲಿ ಹೊಟ್ಟೆ ತುಂಬಾ ಊಟ ಹಾಕಿಸಿ ಕಳುಹಿಸಿಕೊಟ್ಟಿದ್ದ. ಆಷ್ಟರಲ್ಲಾಗಲೇ ನನಗೆ Brigade ರೋಡಿನ pirated Software ಪಂಡಿತರ ಪರಿಚಯವಿದ್ದು ಯಾವುದೇ ತಂತ್ರಾಶವನ್ನು ಅಳವಡಿಸುವುದರಲ್ಲಿ ತಕ್ಕಮಟ್ಟಿಗಿನ ಪರಿಣಿತಿ ಹೊಂದಿದ್ದೆ ಹಾಗಾಗಿ ನನ್ನ ಮತ್ತು ಸ್ನೇಹ ಕಂಪ್ಯೂಟರ್ಸ್ ಅವರ ಒಡನಾಟ ಹೆಚ್ಚಾಯಿತು. ಅವರ ಗ್ರಾಹಕರಿಗೆ ಬೇಕಾದ ವಿಶೇಷ ತಂತ್ರಾಂಶಗಳಿಗೆ ನನ್ನ ಬಳಿಗೇ ಬರುತ್ತಿದ್ದರು. ಇದರ ಕುರಿತಾದ ಒಂದು ಸ್ವಾರಸ್ಯವಾದ ಘಟನೆಯನ್ನು ಹಂಚಿಕೊಳ್ಳಲೇ ಬೇಕು.
ಅದೊಂದು ಸಂಜೆ ಪಿಂಟೂ ಮತ್ತು ಅವನ ಇತರೇ ಗೆಳೆಯರು ಘಮ್ಮತ್ತನ್ನು ಏರಿಸಿಕೊಂಡು ಮಜಬೂತಾಗಿದ್ದಾಗ ಇದ್ದಕ್ಕಿದ್ದಂತೆಯೇ ಮಾರನೇಯ ದಿನ ಬೆಳಿಗ್ಗೆ ಯಾರಿಗೋ ಕೆಲವೊಂದು ತಂತ್ರಾಂಶಗಳನ್ನು ಕೊಡುತ್ತೇವೆ ಎಂಬ ವಾಗ್ದಾನ ಮಾಡಿದ್ದು ನೆನೆಪಿಗೆ ಬಂದು ಅಷ್ಟು ಹೊತ್ತಿನಲ್ಲಿ ಪಿಂಟೂ ಮತ್ತು ಅವನ ಸಹಪಾಠಿನಮ್ಮ ಮನೆಗೆ ಬಂದು ಗೇಟ್ ಶಬ್ಧ ಮಾಡಿದರು ಗಂಟೆ ಅದಾಗಲೇ ಹತ್ತೂವರೆಯಾಗಿತ್ತು. ಇದ್ಯಾರಪ್ಪಾ ಈ ಹೊತ್ತಿನಲ್ಲಿ ಎಂದು ಆತಂಕದಿಂದಲೇ ನಾನು ಹೊರ ಹೋಗಿ ನೋಡಿದರೆ ನಮ್ಮ ಪಿಂಟೂ. ಮಗಾ ಅರ್ಜೆಂಟಾಗಿ ಈ ಮೂರು ಹಾರ್ಡ್ ಡಿಸ್ಕಿನಲ್ಲಿ ಎಲ್ಲಾ ಸಾಫ್ಟವೇರ್ ಇನ್ಸಸ್ಟಾಲ್ ಮಾಡಿಕೊಡು ನಾಳೆ ಬೆಳಿಗ್ಗೆ ಎಂಟು ಗಂಟೆಗೇ ಡೆಲಿವರಿ ಮಾಡ್ಬೇಕು ಅಂದ. ಸರಿ ಒಂದು ಅರ್ಧ ಮುಕ್ಕಾಲು ಗಂಟೆ ಆಗುತ್ತೇ. ಬನ್ನಿ ಒಳಗೆ ಕುಳಿತ್ಕೊಳ್ಳಿ ಎಂದೇ. ಬೇಡ ಮಗಾ!! ನಾನು ಒಳಗೆ ಬಂದ್ರೆ ಸೀನ್ ಆಗುತ್ತೇ. ಅದೂ ಅಲ್ದೇ ನನ್ನ ನೋಡಿದ್ರೇ ನಿಮ್ಮಪ್ಪ ಬಂದು ಮಾತನಾಡಿಸಿ ಬಿಟ್ರೇ ಬಂಡವಾಳ ಎಲ್ಲಾ ಬಯಲಾಗಿ ಬಿಡುತ್ತದೆ ಎಂದ. ಅಪ್ಪಾ ಅಮ್ಮಾ ಎಲ್ಲಾ ಮಲಗಿದ್ದಾರೆ. ಒಳಗೆ ಜಗುಲಿ ಮೇಲೆ ಕುಳಿತ್ಕೊಳ್ಳಿ ಎಂದು ಬಲವಂತದಿಂದ ನಾನೇ ಒಳಗೆ ಕರೆದು ತಂದು ಕುಳ್ಳರಿಸಿ ನಾನು ಸಾಫ್ಟ್ವೇರ್ ಇನ್ಸ್ಟಾಲ್ ಮಾಡಲು ನನ್ನ ಕೊಠಡಿಯೊಳಗೆ ಹೋದೆ. ಈ ಶಬ್ಧವನ್ನೆಲ್ಲಾ ಕೇಳಿದ್ದ ನಮ್ಮ ತಂದೆಯವರೂ ಯಾರು ಬಂದಿರೋದು ಅಂತಾ ನೋಡಿ ಓ ಶ್ರೀನಿವಾಸನಾ… ಅಂದಿದ್ದಾರೆ. ಮೊದಲ ಬಾರಿಗೆ ನಮ್ಮ ಪಿಂಟೂ ನಮ್ಮ ಮನೆಗೆ ಬಂದಿದ್ದಾಗ ಅಣ್ಣ ಇವನು ಪಿಂಟೂ ಅಂತಾ ನಮ್ಮ ಸೀನಿಯರ್ ಅಂತಾ ಪರಿಚಯ ಮಾಡಿಸಿದಾಗ ಪಿಂಟೂನಾ…. ಅಂತಾ ರಾಗ ಎಳೆದಾಗ ಅವರ ಅನುಮಾನ ನನಗೆ ತಿಳಿದು ಇಲ್ಲಾ ಅಣ್ಣಾ ಅವನ ನಿಜವಾದ ಹೆಸರು ಶ್ರೀನಿವಾಸ ಅಂತಾ. ಸ್ನೇಹಿತರೆಲ್ಲಾ ಪಿಂಟೂ ಅಂತಾನೇ ಕರೆಯೋದು ಅಂದಾಗ. ಮೊದಲ ಬಾರಿಗೆ ಪರಿಚಯಆಗಿದೇ ಅನ್ನೋದನ್ನೋ ಲೆಕ್ಕಿಸಕ್ದೇ ಅವರಪ್ಪ ಅಮ್ಮಾ ಅಷ್ಟು ಚೆನ್ನಾಗಿ ಶ್ರೀನಿವಾಸ ಅಂತಾ ಭಗವಂತನ ಹೆಸರನ್ನಿಟ್ಟಿದ್ದಾರೆ. ನೀವೇಲ್ಲಾ ಪಿಂಟೂ ಅಂತ ಕರೆಯೋದು ನನಗೆ ಒಂದು ಚೂರು ಇಷ್ಟಾ ಆಗಲಿಲ್ಲ. ನಾನಂತೂ ಶ್ರೀನಿವಾಸಾ ಅಂತಾನೇ ಕರೀತೀನಿ. ಏನಪ್ಪಾ ಶ್ರೀನಿವಾಸ ನಿನಗೆ ಒಪ್ಪಿಗೇನಾ ಅಂತ ಕೇಳುವ ಮೂಲಕ ಅವರಿಬ್ಬರ ಪರಿಚಯವಾಗಿತ್ತು.
ಕಾಕತಾಳೀಯವೆಂದರೆ ಅದೇ ದಿನ ನಮ್ಮ ಮನೆಯಲ್ಲಿ ಹೊಸದಾಗಿ ಎಲೆಕ್ಟ್ರಿಕಲ್ ಕಾಫಿ ಫಿಲ್ಟರ್ ತಂದಿದ್ದೆವು. ಅದಾಗಲೇ ಬಂದ ಒಂದಿಬ್ಬರಿಗೆ ನಮ್ಮ ತಂದೆಯವರು ಪ್ರೆಷ್ ಕಾಫಿ ಮಾಡಿ ಕುಡಿಸಿದ್ದರು. ಇನ್ನೂ ಅವರ ನೆಚ್ಚಿನ ಶ್ರೀನಿವಾಸ ಬಂದ ಅಂದ್ಮೇಲೆ ಕೇಳ್ಬೇಕೇ? ಶ್ರೀನಿವಾಸಾ.. ನಿನಗೆ ಗೊತ್ತಾ ನಮ್ಮ ಮನೆಗೆ ಇವತ್ತು ಕಾಫಿ ಫಿಲ್ಟರ್ ತಂದೀದೀವಿ. ತಡೀ ಒಂದು ಫ್ರೆಷ್ ಕಾಫೀ ಮಾಡಿಕೊಡ್ತೀನಿ ಅಂದಿದ್ದಾರೆ. ಬೇಡಾ ಅಂಕಲ್ ಊಟ ಎಲ್ಲಾ ಆಗಿದೇ ಇಷ್ಟು ಹೊತ್ತಿನಲ್ಲಿ ಅಂತಾ ನಮ್ಮ ತಂದೆಯವರನ್ನೂ ನೋಡದೇ ಮುಖ ತಿರುಗಿಸಿ ಕೊಂಡು ಉತ್ತರ ಕೊಟ್ಟಿದ್ದಾನೆ. ಅಪ್ಪಾ ಕಾಫೀ ಮಾಡಿತರಲು ಅಡುಗೆ ಮನೆಗೆ ಹೋದೊಡನೆಯೇ, ಲೋ ಕಂಠಾ.. ಅದಕ್ಕೇ ನಾನು ಹೇಳಿದ್ದು ನಾನು ಒಳಕ್ಕೆ ಬರೋದಿಲ್ಲ ಅಂತಾ. ನೀನೇ ಹೋಗಿ ಕಾಫಿ ಇಸ್ಕೊಂಡು ಬಾ. ಇನ್ನೊಂದು ಎರಡು ಸಲಾ ನಿಮ್ಮಪ್ಪ ನಂಜೊತೆ ಮಾತಾಡಿದ್ರೇ ಎಲ್ಲರನ್ನೂ ಓಡಿಸ್ಬಿಡಿಸ್ತಾರೆ ಅಂದಾ. ಸರಿ ಅಂತಾ ನಾನೇ ಓಳಗೆ ಹೋಗಿ ಅಪ್ಪನ ಕೈಯಿಂದ ಕಾಫಿ ಇಸ್ಕೊಂಡು ಅವರು ಮತ್ತೊಮ್ಮೆ ಹೊರಗೆ ಬರದಂತೆ ನೋಡಿಕೊಳ್ಳಲು ಹರಸಾಹಸ ಪಟ್ಟಿದ್ದೆ.
ಈಗಾಗಲೇ ಹೇಳಿದಂತೆ ಕೈತುಂಬಾ ಕೆಲಸ ಇದ್ರೂ ಯಾರೂ ಸಹಾ ಸರಿಯಾಗಿ ಹೇಳಿದ ಸಮಯಕ್ಕೆ ಹಣ ಕೊಡ್ತಾ ಇರ್ಲಿಲ್ಲ. ಎಷ್ಟೋ ಸಲಾ ಎಂಟು ಹತ್ತು ಕಂಪ್ಯೂಟರ್ಸ್ ಕೊಂಡು ಮೂರ್ನಾಲ್ಕು ತಿಂಗಳಾದ್ರೂ ಹಣ ಕೊಡೋದಿಕ್ಕೆ ಸತಾಯಿಸ್ತಾ ಇದ್ದದ್ದು ನೋಡಿ ಪಿಂಟೂವಿಗೆ ಬಹಳ ಬೇಸರ ತರಿಸಿತ್ತು. ಏ ಹೋಗು ಮಗಾ!! ನಾವು ಸಾಲಾ ಸೋಲಾ ಮಾಡಿ ಏನೋ ನಾಲ್ಕು ಕಾಸು ಲಾಭ ಮಾಡಿಕೊಳ್ಳೋಣ ಅಂದ್ರೇ ಒಳ್ಳೇ ಭಿಕ್ಷೇ ಬೇಡುವುದು ನನಗೆ ಇಷ್ಟಾ ಆಗ್ತಾ ಇಲ್ಲ. ಸುಮ್ಮನೆ ಬೆಂಗ್ಳೂರು ಬಿಟ್ಟು ಊರಿಗೆ ಓಡಿ ಹೋಗ್ಬಿಡ್ಬೇಕು ಅಂತಾ ಅನ್ನಿಸ್ತಾ ಇದೆ ಅಂತಾ ಅವಾಗವಾಗ ಹೇಳ್ತಾ ಇದ್ದೋನು. ಅದೊಂದು ದಿನ ಹಾಗೇ ಊರಿಗೆ ಹೋದೋನೋ ಹಿಂದಿರುಗಿ ಬರ್ಲೇ ಇಲ್ಲ. ಅಲ್ಲೇ ಝಾಂಡಾ ಹೂಡಿ ಪಕ್ಕಾ ವ್ಯವಸಾಯಗಾರನಾಗೇ ಬಿಟ್ಟ. ಅಡಿಕೆ ತೋಟ ಮತ್ತು ಬತ್ತದ ಗದ್ದೆಯಲ್ಲಿ ಮೈ ಬಗ್ಗಿಸಿ ದುಡಿಯಲು ಅರಂಭಿಸಿ ಮುಂಚಿನಕ್ಕಿಂತ ಹೆಚ್ಚಿನ ಫಸಲುಗಳನ್ನು ಗಳಿಸಿದ್ದು ಮನೆಯವರಿಗೆಲ್ಲಾ ಸಂತೋಷ ತಂದಿತ್ತು.
ಯಾವಾಗ ಪಿಂಟು ಬೆಂಗಳೂರನ್ನು ಶಾಶ್ವತವಾಗಿ ಬಿಟ್ನೋ ಅಗಲೇ ನನ್ನನ್ನೂ ಮತ್ತು ಇನ್ನೊಬ್ಬ ನುರಿತ ತಜ್ಞನನ್ನು ಸ್ನೇಹ ಕಂಪ್ಯೂಟರ್ಸ್ ಪಾರ್ಟನರ್ ಆಗಿ ಮಾಡಿಯೇ ಹೋಗಿದ್ದ. ಆಗ ಸ್ನೇಹ ಕಂಪ್ಯೂಟರ್ಸ್ ಇದ್ದದ್ದು ಸ್ನೇಹ ಡಾಟ್ ಕಾಂ ಎಂಬ ಹೊಸಾ ಹೆಸರಿನಲ್ಲಿ ಮಲ್ಲೇಶ್ವರಂನ 14ನೇ ಕ್ರಾಸಿನಲ್ಲಿ ದೊಡ್ಡದಾದ ಕಛೇರಿ ಆರಂಭಿಸಿದೆವು.
ಈ ಲೇಖನಕ್ಕೆ ಸುಗ್ಗಿಯ ಕಾಲದಲ್ಲಿ ಎಂಬ ಶೀರ್ಷಿಕೆ ಏಕೆ ಇಟ್ಟೆ ಎಂದು ಈ ವಿಷಯಕ್ಜೆ ಈಗ ಬರೋಣ. ಪಿಂಟೂ ತನ್ನೂರಾದ ಚಿಕ್ಕಮಗಳೂರಿನ ಕೊಪ್ಪ ಬಳಿಯ ಗಿಣಿಯಾದಲ್ಲಿ ಅಪ್ಪಟ ಕೃಷಿಕನಾಗಿ ಮೂರ್ನಾಲ್ಕು ತಿಂಗಳುಗಳಿಗೆ ಆಡಿಗೆ ಫಸಲನ್ನು ಮಾರಿ ಅಂದಿನ ಕಾಲಕ್ಕೇ ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು ಗಳಿಸುತ್ತಿದ್ದ. ನಗರವಾಸಿಗಳಾಗಿ ನಮ್ಮ ಮನೆಯಲ್ಲಿ ಇನ್ನೂ Block & White TV ಇದ್ದ ಕಾಲದಲ್ಲೇ ಪಿಂಟೂವಿನ ಗಿಣಿಯಾ ಮನೆಯಲ್ಲಿ Videocon Bazooka TV, 3 CD changer CD player, Hometheateor ಇದ್ದು ಬಹಳ ಐಷಾರಾಮ್ಯವಾಗಿದ್ದ. ಅದೇ ರೀತಿ ಸುಗ್ಗಿಯ ಸಮಯದಲ್ಲಿ ಫಸಲನ್ನು ಮಾರಿ ಕೈ ತುಂಬಾ ಹಣದೊಂದಿಗೆ ಬೆಂಗಳೂರಿಗೆ ಬಂದನೆಂದರೆ ನಮ್ಮ ಸ್ನೇಹಾ ಕಛೇರಿಯ ಅವನ ಅಡ್ಡ. ಅಲ್ಲಿಂದಲೇ ಎಲ್ಲರಿಗೂ ಕರೆ ಮಾಡಿ ಸಂಜೆ ಎಲ್ಲರನ್ನೂ ಒಟ್ಟು ಹಾಕುತ್ತಿದ್ದ. ನವರಂಗ್ ಥಿಯೇಟರಿನಲ್ಲಿ ಒಟ್ಟೊಟ್ಟಿಗೆ 15-20 ಅವನ ಖರ್ಚಿನಲ್ಲಿಯೇ ಟಿಕೆಟ್ ಹರಿಸಿ ಗೆಳೆಯರನ್ನೆಲ್ಲರನ್ನೂ ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅಕಸ್ಮಾತ್ ಸಿನಿಮಾಕ್ಕೆ ಬರುತ್ತೇನಿ ಎಂದು ಕಡೇ ನಿಮಿಷದಲ್ಲಿ ಕೈಕೊಟ್ಟಾಗ ಪಿಂಟೂ ಬಳಿ ಟಿಕೆಟ್ ಉಳಿದು ಹೋದ್ರೇ, ಟಿಕೆಟ್ ಕೌಂಟರ್ ಬಳಿ ಬಂದು ಪರಿಚಯವೇ ಇಲ್ಲದವರಿಗೇ ಉಚಿತವಾಗಿ ಟಿಕೆಟ್ ಕೊಟ್ಟು ಬಿಡ್ತಾ ಇದ್ದ. ಅಷ್ಟಕ್ಕೇ ಮುಗಿಯದೇ ಸಿನಿಮಾ ಇಂಟರ್ವೆಲ್ಲಿನಲ್ಲಿ ತನ್ನ ಸ್ನೇಹಿತರ ಜೊತೆಗೆ ಅವರಿಗೂ ತಿಂಡಿ ತಿನಿಸುಗಳನ್ನು ತರಿಸಿ ಬಲವಂತ ಮಾಡಿ ತಿನ್ನಿಸುತ್ತಿದ್ದ. ಸಿನಿಮಾ ಮುಗಿದ ನಂತರ ಊಟಕ್ಕೆ ಕರೆದುಕೊಂಡು ಹೋಗಿ ಹೊಟ್ಟೆ ಬಿರಿಯುವಷ್ಟು ತಿನ್ನಿಸಿ ಕಳುಹಿಸಿದರೇನೇ ಅವನಿಗೆ ಸಮಧಾನ. ಹಾಗಾಗಿ ಪ್ರತೀ ಬಾರಿ ಸುಗ್ಗಿಯ ಸಮಯದಲ್ಲಿ ನನ್ನ ನೆನಪಿಗೆ ಬಂದೇ ಬರ್ತಾನೆ. ಈ ಬಾರಿಯ ಸುಗ್ಗಿಯ ಸಮಯದಲ್ಲಿ ಮಸ್ತಕದಲ್ಲಿದ್ದ ಅವನ ನೆನಪನ್ನು ಈ ಲೇಖನ ರೂಪದಲ್ಲಿ ಮಾಡಿಕೊಂಡಿದ್ದೇನೆ.
ಇಷ್ಟೆಲ್ಲಾ ಆಗುವಷ್ಟರಲ್ಲಿ ಎಲ್ಲಾ ಗೆಳೆಯರಿಗೂ ಮದುವೆಯ ವಯಸ್ಸಾಗಿ ಎಲ್ಲರಿಗಿಂತಲೂ ಮೊದಲು ನನ್ನದೇ ಮದುವೆಯಾದಾಗ ಮತ್ತದೇ ಪಿಂಟೂ ಊರಿನಿಂದ ಬೆಂಗಳೂರಿಗೆ ಬಂದು ನಮ್ಮೆಲ್ಲಾ ಗೆಳೆಯರನ್ನು ಒಗ್ಗೂಡಿಸಿ ಮದುವೆಗೆ ಕರೆತಂದಿದ್ದ. ಆಗೆಳೆಯರೆಲ್ಲಾ ಕೊಟ್ಟಿದ್ದ OVEN ಬಹಳ ಕಾಲ ನಮ್ಮ ಮನೆಯಲ್ಲಿ ಉಪಯೋಗಕ್ಕೆ ಬಂದಿತ್ತು. ನನ್ನ ಮದುವೆಯಾದ ಮೂರು ವಾರಗಳೊಳಗೇ ನಮ್ಮ ಮತ್ತೊಬ್ಬ ಗೆಳೆಯನೊಬ್ಬನ ಮದುವೆ ಮೂಡುಬಿದ್ರೆಯಲ್ಲಾದಾಗ ಪಿಂಟೂವಿನದೇ ಸಾರಥ್ಯ ಎಂದು ಮತ್ತೆ ಮತ್ತೆ ಹೇಳಬೇಕಿಲ್ಲ. ದೊಡ್ಡ ಮೆಟಡೋರ್ ವಾಹನ ಮಾಡಿಕೊಂಡು ಹೊರನಾಡು ಶೃಂಗೇರಿ ದರ್ಶನ ಮಾಡಿಸಿಕೊಂಡು ಮೂಡುಬಿದ್ರೆಗೆ ಕರೆದುಕೊಂಡು ಹೋಗಿದ್ದ. ದಕ್ಷಿಣ ಕರ್ನಾಟಕದ ಶುಭಸಮಾರಂಭದ ಊಟದ ಕಡೆಯಲ್ಲಿ ಹಣ್ಣಿನ ಪಾಯಸ (ರಸಾಯನ) ಬಡಿಸುವ ಪದ್ದತಿ. ನಮ್ಮ ಗೆಳೆಯನೊಬ್ಬ ಇನ್ನೂ ಸ್ವಲ್ಪ ಹಣ್ಣಿನ ಪಾಯಸ ಹಾಕಿ ಎಂದು ಅಡುಗೆಯವರನ್ನು ಕೇಳಿದಾಗ, ಹಾಂ ಬಂದೇ ಅಂತಾ ಹೇಳಿ ಎಷ್ಟು ಹೊತ್ತಾದ್ರೂ ಬರ್ದೇ ಹೋದಾಗ ಮತ್ತೇ ನಮ್ಮ ಪಿಂಟೂ ಗುಟುರು ಹಾಕ್ಲೇ ಬೇಕಾಯ್ತು. ಹೀಗೆ ಪ್ರತಿ ಸಂದರ್ಭದಲ್ಲೂ, ಪ್ರತಿಯೊಂದು ವಿಷಯದಲ್ಲೂ ನಾಯಕತ್ವದ ಗುಣ ಹೊಂದಿದ್ದ ನಮ್ಮ ಪಿಂಟೂ.
ನಮ್ದೆಲ್ಲಾ ಮದ್ವೆ ಆದ್ಮೇಲೆ ಪಿಂಟುದು ಮದುವೇ ಆಗ್ಲಿಲ್ವಾ ಅಂತೀದ್ದೀರಾ? ಹೌದು ಅವರಮ್ಮನ ತರಹ ನಮಗೂ ಅದೇ ಚಿಂತೆ ಆಗಿತ್ತು. ಅದಕ್ಕೇ ನಾನು ಯಾವಾಗ್ಲೂ ಪಿಂಟೂ.. ಬಾ ಮಗಾ ಬಾ. ಅಂತಾ ನಮ್ಮನ್ನ ಮಾತ್ರಾ ಮದುವೆ ಎಂಬಾ ಭಾವಿಗೆ ತಳ್ಳಿ ನೀನ್ ಮಾತ್ರಾ ಆರಾಮಾಗಿರೋದು ಎಷ್ಟು ಸರಿ ಎಂದು ಗೋಳು ಹುಯ್ಕೊತಾ ಇದ್ದೆ. ಆದ್ರೆ ತನ್ನ ತಂಗಿಯ ಮದುವೆ ಆಗೋ ವರೆಗೆ ನನ್ನದು ಬೇಡ ಅನ್ನೋದು ಪಿಂಟೂವಿನ ವಾದವಾಗಿತ್ತು. ಅದೇ ರೀತಿ ಅವನ ತಂಗಿಯ ಮದುವೆ ಆದ್ಮೇಲೇನೇ ಪಿಂಟೂವಿನ ಮದುವೆ ಆಗಿ ಮಲ್ಲೇಶ್ವರರ ಮಾರ್ಕೆಟ್ಟಿನ್ನಲಿರುವ ಈಶ್ವರ ಸೇವಾಮಂಡಳಿಯಲ್ಲಿ ನಡೆದ ಆರತಕ್ಷತೆಗೆ ಗೆಳೆಯರೆಲ್ಲಾ ಮತ್ತೊಮ್ಮೆ ಒಗ್ಗೂಡುವ ಸಂದರ್ಭ ಬಂದಿತ್ತು. ಕೆಲವೇ ತಿಂಗಳುಗಳ ಅಂತರದಲ್ಲಿ ಮಗಳು ಮತ್ತು ಮಗನ ಮದುವೆ ಸಂಭ್ರಮದಿಂದ ಮುಗಿದಿದ್ದು ಪಿಂಟೂವಿನ ಪೋಷಕರ ಜವಾಬ್ಧಾರಿಯನ್ನು ಸಂಪೂರ್ಣಗೊಳಿಸಿತ್ತು. ಅವರಿಬ್ಬರ ಸುಖಃ ದಾಂಪತ್ಯದ ಕುರುಹಾಗಿ ಮಗಳು ಮತ್ತು ಸೊಸೆ ಇಬ್ಬರೂ ಚೊಚ್ಚಲು ಗರ್ಭಿಣಿಯಾದ ಸುದ್ದಿ ಮನೆಯ ಆನಂದವನ್ನು ನೂರ್ಮಡಿಗೊಳಿಸಿತ್ತು. ಪಿಂಟೂವಿನ ತಂಗಿಯನ್ನು ಬಾಣಂತನಕ್ಕಾಗಿ ತವರು ಮನೆಗೂ ಕರೆತಂದಾಗಿತ್ತು .
ಬಹಳ ವರ್ಷಗಳ ನಂತರ ಮತ್ತೊಮ್ಮೆ ಪಿಂಟೂ ಮನೆಯಲ್ಲಿ ಮಕ್ಕಳ ಕಲರವ ಎಂದು ಎಂದು ಸಂಭ್ರಮಿಸುತ್ತಿದ್ದಾಗಲೇ,ನಾವೆಲ್ಲರೂ ನಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದಾಗ ಗಿಣಿಯಾದಿಂದ ಬಂದ ಕರೆಯೊಂದನ್ನು ಕೇಳಿ, ನಮಗೆಲ್ಲಾ ಒಂದು ಕ್ಷಣ ಬರ ಸಿಡಿಲು ಬಡಿದಂತಾಗಿತ್ತು. ಆ ವಿಷಯ ನಿಜಾ ಅಂತಾ ಹೇಗೆ ನಂಬುವುದು? ನಟ ಅಂಬರೀಷ್ ಅವರನ್ನು ಅದೆಷ್ಟೋ ಸಲಾ ಸಾಯಿಸಿದಂತೆ ನಮ್ಮ ಪಿಂಟೂವಿನ ವಿಷದಲ್ಲೂ ಇದೇ ರೀತಿಯ ಹುಡುಗಾಟವಾಗಿತ್ತು ಹಾಗಾಗಿ ನಾವು ಯಾರೂ ಆ ವಿಷಯವನ್ನು ಆರಂಭದಲ್ಲಿ ಗಂಭೀರವಾಗಿ ತೆಗೆದುಕೊಳ್ಳದೇ ಹೋದರೂ, ಆದರೂ ಮತ್ತೊಮ್ಮೆ ಪಿಂಟೂವಿನ ಸಂಬಂಧಿಕರೊಂದಿಗೆ ಪರಾಮರ್ಶಿಸಿದಾಗ ನಾವು ಕೇಳಿದ್ದ ಸಂಗತಿ ಸತ್ಯ ಎಂದು ಕೇಳಿಕೊಂಡು ಅದನ್ನು ಅವರ ಪೋಷಕರಿಗೆ ನೇರವಾಗಿ ತಿಳಿಸದೇ ಹಾಗೇ ಅವರನ್ನು ಊರಿಗೆ ಕರೆದುಕೊಂಡು ಹೋಗುವ ಕಠಿಣ ಜವಾಬ್ದಾರಿ ನಮ್ಮ ಗೆಳೆಯರ ಮೇಲಿತ್ತು. ತುಂಬು ಗರ್ಭಿಣಿ ಅವನ ತಂಗಿಗೆ ಈ ವಿಷಯ ತಿಳಿಸದೇ ಅವರ ಪೋಷಕರನ್ನು ಮಾತ್ರವೇ ಊರಿಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ನನ್ನ ಗೆಳೆಯರಿಬ್ಬರು ವಹಿಸಿಕೊಂಡರೆ, ನನಗೆ ಇಲ್ಲಿರುವ ನಮ್ಮ ಸ್ನೇಹಿತರಿಗೆ ಸುದ್ದಿ ಮುಟ್ಟಿಸುವ ಮತ್ತು ಕಛೇರಿ ನಿಭಾಯಿಸುವ ಕೆಲಸವಾಗಿತ್ತು. ಬಹಳ ಸೂಕ್ಷ್ಮವಾಗಿ ಪಿಂಟೂವಿನ ತಂಗಿಗೆ ಈ ವಿಷಯ ತಿಳಿಯದಂತೆ ಎಚ್ಚರ ವಹಿಸಿದ್ದರೂ ನಮ್ಮ ಗೆಳೆಯನೊಬ್ಬನಿಗೆ ಈ ಸೂಕ್ಷ್ಮತೆಯ ಅರಿವಿಲ್ಲದೇ ನೇರವಾಗಿ ಪಿಂಟೂವಿನ ಸೂತಕದ ಮನೇಗೇ ಹೋಗಿ ಪಿಂಟೂವಿನ ತಂಗಿಯನ್ನು ನೋಡಿ, ಏನೇ ಹೀಗಾಗೋಯ್ತು? ಹೇಗಾಯ್ತು? ಎಷ್ಟು ಹೊತ್ತಿಗಾಯ್ತು ಎಂದು ದುಖಃದಿಂದ ಬಡಬಡಾಯಿಸಿದಾಗಲೇ ಪಿಂಟೂವಿನ ತಂಗಿಗೂ ಆಕೆಯ ಮುದ್ದಿನ ಅಣ್ಣ ಮುರಳಿ ಮಧ್ಯಾಹ್ನ ತೋಟದ ಕೆಲಸ ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬಂದು ಮಡದಿ ಕೊಟ್ಟ ಮಜ್ಜಿಗೆ ಕುಡಿದು ಬಾಯಾರಿಕೆಯಾಗುತ್ತಿದೆ ಮತ್ತೊಂದು ಲೋಟ ತೆಗೆದುಕೊಂಡು ಬಾ ಎಂದು ಹೇಳಿ, ಮತ್ತೊಂದು ಲೋಟ ಮಜ್ಜಿಗೆ ತಂದು ಕೊಡುವಷ್ಟರಲ್ಲಿಯೇ ಗೋಡೆಗೆ ಪಕ್ಕಕ್ಕೆ ಒರಗಿಕೊಂಡವನು ಮತ್ತೆಂದೂ ಬಾರದಿರುವ ಲೋಕಕ್ಕೆ ಹೊರಟು ಹೋದ ಕಥೆ ಗೊತ್ತಾಗಿದ್ದು. ಚೊಚ್ಚಲು ತುಂಬು ಗರ್ಭಿಣಿಯ ಆಕ್ರಂದನವನ್ನು ತಡೆಯುವುದು ನಿಜಕ್ಕೂ ಕಷ್ಟವಾಗಿ ಪಿಂಟೂವಿನ ಅಂತಿಮ ದರ್ಶನಕ್ಕೆ ಆಕೆಯನ್ನೂ ಊರಿಗೆ ಆತುರಾತುರವಾಗಿ ಕರೆದುಕೊಂಡು ಹೋಗಬೇಕಾಗಿತ್ತು.
ಸಾಧಾರಣವಾಗಿ ಯಾರಾದ್ರೂ ನಮ್ಮ ಬಳಿ ಸಹಾಯ ಕೇಳಿ ಬಂದ್ರೇ ನಾವು ಒಂದು ಕ್ಷಣ ಸಾಧ್ಯತೆ ಬಾಧ್ಯತೆಗಳ ಬಗ್ಗೆ ಯೋಚಿಸಿ ನಮ್ಮ ಬಳಿ ಅಗತ್ಯಕ್ಕಿಂತ ಹೆಚ್ಚಾಗಿದ್ದಲ್ಲಿ ಮಾತ್ರಾ ಸಹಾಯ ಮಾಡಲು ಮುಂದಾಗುತ್ತೇವೆ. ಆದ್ರೇ ನಮ್ಮ ಪಿಂಟೂ ಕಷ್ಟ ಅಂತಾ ಯಾರೇ ಕೇಳ್ಕೊಂಡು ಬಂದ್ರೂ ಹಿಂದೇ ಮುಂದೇ ಯೋಚಿಸದೇ, ತನ್ನ ಕೈಯ್ಯಲ್ಲಿ ಆಗದೇ ಇದ್ರೂ ಮತ್ತೊಬ್ಬರ ಬಳಿ ಸಾಲಾ ಸೋಲಾನಾದ್ರು ಮಾಡಿ, ಇಲ್ವೇ ಮತ್ತೊಬ್ಬರನ್ನು ಕಾಡಿ ಬೇಡಿ, ಅಗತ್ಯ ಬಿದ್ದಾಗಾ ಧಮ್ಕಿನಾದ್ರು ಹಾಕಿ ಸಹಾಯಕ್ಕೆ ಬರುತ್ತಿದ್ದ ನಮ್ಮ ಪಿಂಟೂ, ತನಗೆ ಕಷ್ಟ ಅಂತಾ ಯಾರ ಹತ್ರಾನೂ ಹೇಳ್ಕೋದೇನೇ ಹೋಗೇ ಬಿಟ್ಟ. ಅವನಿಂದ ಉಪಕೃತರಾದ ನನ್ನಂತಹ ಎಷ್ಟೋ ಮಂದಿ ಅವನಿಗೆ ಯಾವುದೇ ರೀತಿಯ ಸಹಾಯ ಮಾಡಲು ಆಗಲೇ ಇಲ್ವಲ್ಲಾ ಅನ್ನೋ ಬೇಜಾರು ಇಂದಿಗೂ ನನ್ನನ್ನೂ ಕಾಡುತ್ತಲೇ ಇದೆ.
ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡು ಬೇರೆಯದ್ದೇ ಆಗಿರುತ್ತದೆ. ಸಾಧಾರಣ ವ್ಯಕ್ತಿಗಳು ಸತ್ತು ಹೋದ್ಮೇಲೆ ಅವರೊಂದಿಗೆ ಅವರ ವ್ಯಕ್ತಿತ್ವವೂ ಸತ್ತು ಹೋಗುತ್ತದೆ. ಆದರೆ ಕೆಲವೇ ಕೆಲವು ವ್ಯಕ್ತಿಗಳು ಸತ್ತರೂ ಅವರ ವ್ಯಕ್ತಿತ್ವ ಮಾತ್ರ ಅಜರಾಮರವಾಗಿ ಸದಾಕಾಲವೂ ನಮ್ಮ ನೆನಪಿನಂಗಳದಲ್ಲಿ ಉಳಿದಿರುತ್ತದೆ ಅನ್ನೋದಕ್ಕೆ ನಮ್ಮ ಪಿಂಟೂವಿನ ವ್ಯಕ್ತಿತ್ವವೇ ಸಾಕ್ಷಿ. ನಮ್ಮನ್ನಗಲಿ ಸರಿ ಸುಮಾರು ಇಪ್ಪತ್ತು ವರ್ಷಗಳಾಗುತ್ತಾ ಬಂದರೂ ಅವನ ಪ್ರತಿಯೊಂದು ನಡೆ ನುಡಿಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ ಎನ್ನುವುದಕ್ಕೆ ಈ ಲೇಖನವೇ ಸಾಕ್ಷಿ. ನಾನೀಗ ಐದಂಕಿಯ ಸಂಬಳವನ್ನು ಪಡೆಯುತ್ತಿರಬಹುದು. ಮಲ್ಟೀಪ್ಲೆಕ್ಸಿನಲ್ಲಿ ಐಶಾರಾಮ್ಯವಾಗಿ ಸಿನಿಮಾ ನೋಡುತ್ತಿರಬಹುದು. ಆಗಾಗ್ಗೇ ಸ್ಟಾರ್ ಹೋಟೆಲ್ಲಿನಲ್ಲಿ ಊಟ ಮಾಡ್ತಾ ಇರಬಹುದು. ನನ್ನದೇ ಬ್ಲಾಗಿನಲ್ಲಿ ಮನಸ್ಸಿಗೆ ಬಂದದ್ದನ್ನು ಗೀಚುತ್ತಾ, ಮತ್ತು ಯುಟ್ಯೂಬ್ ಛಾನಲ್ ಮನಸ್ಸಿಗೆ ಬಂದ ವಿಡಿಯೋ ಮಾಡ್ತಾ ಇರಬಹುದು. ಅದರೆ ಅಂದು ನಿಸ್ವಾರ್ಥವಾಗಿ ಕಾಲೇಜಿನಲ್ಲಿ ಯಾರೂ ನನ್ನನ್ನು ಮುಟ್ಟದಂತೆ ಜತನದಿಂದ ಕಾಪಾಡಿದ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಟಕ್ಕರ್ ಕೊಡುತ್ತಾ ನನ್ನ ಸಾಮರ್ಥ್ಯವನ್ನು ಓರಗೆ ಹಚ್ಚಿದ, ಸ್ನೇಹಾ ಕಂಪ್ಯೂಟರ್ಸ್ನಲ್ಲಿ ನನ್ನನ್ನು ಪಾರ್ಟನರ್ ಮಾಡಿಕೊಂಡು ಬದುಕಿನಲ್ಲಿ ನನಗೊಂದು ನೆಲೆಯೊಂದನ್ನು ಕಲ್ಪಿಸಿ ಕೊಟ್ಟ, ನವರಂಗ್ ಮತ್ತು ಸಂಪಿಗೆ ಸಿನಿಮಾ ಮಂದಿರದಲ್ಲಿ ಸಿನಿಮಾ ತೋರಿಸಿದ, ಐಯ್ಯರ್ ಮೆಸ್ಸು ಮತ್ತಿತರ ಹೋಟೆಲ್ಲಿನಲ್ಲಿ ಹೊಟ್ಟೆ ತುಂಬಾ ಊಟ ಹಾಕಿಸಿದ ಪಿಂಟೂನನ್ನು ಸ್ಮರಿಸಲೇ ಬೇಕು.
ಹಾಗಾಗಿ ಬಹಳ ದಿನಗಳಿಂದ ಮನಸ್ಸಿನಲ್ಲಿಯೇ ಹುದುಗಿದ್ದ ಭಾವನೆಗಳನ್ನು ಈ ಸರಣೀ ಲೇಖನಗಳ ಮೂಲಕ ನನ್ನ ಮತ್ತು ಪಿಂಟೂವಿನ ಆತ್ಮೀಯತೆಯನ್ನು ನಿಮ್ಮೆಲ್ಲರ ಮುಂದೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಈ ಮೂಲಕ ನನ್ನ ಆತ್ಮೀಯ ಗೆಳೆಯನಿಗೆ ಅಕ್ಷರಗಳ ಮೂಲಕ ಆಶ್ರು ತರ್ಪಣವನ್ನು ಅರ್ಪಿಸುವ ಮೂಲಕ ಈ ಸುಗ್ಗಿಯ ಸಮಯದಲ್ಲಿ ಮತ್ತೊಮ್ಮೆ ಸ್ಮರಿಸಿಕೊಂಡಿದ್ದೇನೆ. ಪಿಂಟು ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿರಬಹುದು ಆದರೆ ಆತನ ವ್ಯಕ್ತಿತ್ವ ಮತ್ತು ಕತೃತ್ವಗಳ ಮೂಲಕ ನಮ್ಮೊಂದಿಗೆ ಚಿರಕಾಲ ಇದ್ದೇ ಇರುತ್ತಾನೆ ಅಲ್ವೇ?
ಏನಂತೀರೀ?