ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

ಹೌದು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವುದನ್ನು ಪ್ರಸ್ತುತ ನಾವೇ ಸಾರಿ ಸಾರಿ ಎಲ್ಲರಿಗೂ ಈ ವಿಷಯವನ್ನು ಒತ್ತಿ ಒತ್ತಿ ಹೇಳಬೇಕಾದಂತಹ ಕೆಟ್ಟ ಪರಿಸ್ಥಿತಿ ಬಂದೊದಗಿಬಿಟ್ಟಿರುವುದು ನಿಜಕ್ಕೂ ಶೋಚನೀಯವಾಗಿದೆ. ಈ ರೀತಿಯಾಗಲು ಯಾರು ಕಾರಣೀಭೂತರು ಎಂದು ಯೋಚಿಸಿದಲ್ಲಿ ಮತ್ತೊಮ್ಮೆ ನಮ್ಮನ್ನು ನಾವೇ ಹಳಿದುಕೊಳ್ಳಬೇಕಾಗುತ್ತದೆ. ಅದಕ್ಕೆ ಸರಳವಾದ ಕಾರಣ ನಮ್ಮಲ್ಲಿಲ್ಲದ ಭಾಷಾಭಿಮಾನ. ನಮ್ಮೆಲ್ಲರ ಭಾಷಾಭಿಮಾನ ಕೇವಲ ಕನ್ನಡರಾಜ್ಯೋತ್ಸವದ ಸಂಧರ್ಭವಾದ ನವೆಂಬರ್ 1-30 ಅಥವಾ ಇನ್ನೂ ಒಂದೆರಡು ಹೆಚ್ಚಿನ ವಾರಗಳಿಗೆ ಮಾತ್ರವೇ ಸೀಮಿತಗೊಂಡು ಮಿಕ್ಕೆಲ್ಲಾ ದಿನಗಳು ಕುಂಬಕರ್ಣನಂತೆ ನಿದ್ರೆ ಹೋಗುವುದೇ ಈ ರೀತಿಯ ದುರ್ವಿಧಿಗೆ ಕಾರಣವಾಗಿದೆ.

ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೇ, 1986ರಲ್ಲಿ ಸಲ್ಲಿಸಿದ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ಗೊಳಿಸಿ ಎಂದು ಈಗ ಕರ್ನಾಟಕ ರಾಜ್ಯ ಬಂದ್ ಕರೆ ಕೊಟ್ಟಿರುವವರ ಮನಸ್ಥಿತಿಯನ್ನು ನೋಡಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಬೇಕೆನಿಸಿತು. ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿಯೇ ದೇಶಾದ್ಯಂತ ರಾಜ್ಯಗಳು ವಿಭಜಿತವಾದರೂ ಕನ್ನಡಿಗರ ದುರ್ವಿಧಿಯೆಂದರೆ ಅಪ್ಪಟ ಕನ್ನಡಿಗರೇ ಇದ್ದ ಪ್ರದೇಶಗಳು ಸದ್ದಿಲ್ಲದೇ ಕೇರಳ ಮತ್ತು ಮಹಾರಾಷ್ಟ್ರ ಪಾಲಾಯಿತು. ಇನ್ನು ಕರ್ನಾಟಕದ ಅವಿಭಾಜ್ಯ ಪ್ರದೇಶಗಳಲ್ಲಿ ತಮಿಳು,ತೆಲುಗು ಮರಾಠಿ ಮತ್ತು ಹಿಂದಿ ಭಾಷಿಗರ ಸಂಖ್ಯೆ ಹೆಚ್ಚಾಯಿತು. ಹಾಗೆಂದ ಮಾತ್ರಕ್ಕೆ ನಾವು ಈ ಅನ್ಯ ಭಾಷಿಗರನ್ನು ದೂಷಿಸುತ್ತಿಲ್ಲ ಮತ್ತು ದ್ವೇಷಿಸುತ್ತಿಲ್ಲ. ಬದಲಾಗಿ ಅವರಿಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸದೇ ನಾವೇ ಅವರ ಭಾಷೆಯನ್ನು ಕಲಿತು,ಆವರ ಹಬ್ಬ ಹರಿ ದಿನಗಳು, ಆಚರಣೆಗಳು ಮತ್ತು ಅವರ ಸಿನಿಮಾಗಳನ್ನು ನೋಡಿದ ಪರಿಣಾಮವೇ ಇಂದಿನ ಈ ದುಸ್ಥಿತಿ.

sarojini

ಸಂಸದೆ, ರಾಜ್ಯಸಭಾ ಪ್ರತಿನಿಧಿ ಮತ್ತು ಒಮ್ಮೆ ಕೇಂದ್ರ ಸಚಿವೆಯೂ ಆಗಿದ್ದ ಡಾ. ಸರೋಜಿನಿ ಮಹಿಷಿಯವರು ಸ್ಥಳೀಯರಿಗೆ ಉದ್ಯೋಗ ಎಂಬ ಮಣ್ಣಿನ ಮಗ ನೀತಿಯನ್ನು ಪ್ರತಿಪಾದಿಸಿ, ಕೇಂದ್ರ ಸರ್ಕಾರದ ರೇಲ್ವೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಿ ಮತ್ತು ಡಿ ಗುಂಪಿನ ಕೆಲಸಗಳನ್ನು ಕನ್ನಡಿಗರಿಗೆ ಮೀಸಲಾತಿ ನೀಡುವ ಬಗ್ಗೆ ಸಮಿತಿಯೊಂದರ ಮುಂದಾಳತ್ವ ವಹಿಸಿ 1986ರಲ್ಲಿ ಕರ್ನಾಟಕ ಸರಕಾರಕ್ಕೆ ನೀಡಿದ್ದ 58 ಶಿಫಾರಸುಗಳ ಪೈಕಿ 45 ಶಿಫಾರಸುಗಳನ್ನು ರಾಜ್ಯ ಸರಕಾರ ಒಪ್ಪಿಗೆ ನೀಡಿ ಅವುಗಳನ್ನು ಜಾರಿಗೆಯೂ ತಂದಿದೆ. ಉಳಿದ 13 ಪ್ರಮುಖ ಶಿಫಾರಸುಗಳಲ್ಲಿ ಒಂದಾದ ಸರಕಾರಿ ಹಾಗೂ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂಬ ಒತ್ತಾಯವನ್ನು ಈಗ ಕನ್ನಡಪರ ಸಂಘಟನೆಗಳು ಮಾಡುತ್ತಿವೆ.

ಈಗ ಬಂದ್ ಕರೆ ಕೊಟ್ಟಿರುವ ಖನ್ನಡ ಓಲಾಟರಾಗರು ಈ ಕೆಳಕಂಡ ವಿಷಯಗಳಲ್ಲಿ ಅವರ ನಿಲುವೇನು ಎಂಬುದನ್ನು ಮೊದಲು ತಿಳಿಯಪಡಿಸಲಿ?

 • ಕನ್ನಡ ಮಾತೃಭಾಷೆಯವರು ಮಾತ್ರ ಕನ್ನಡಿಗರೇ?
 • ಕನ್ನಡ ಮಾತನಾಡಬಲ್ಲವರೆಲ್ಲರೂ ಕನ್ನಡಿಗರೇ?
 • ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೆಲ್ಲರೂ ಕನ್ನಡಿಗರೇ?
 • ಕರ್ನಾಟಕದಲ್ಲಿ ಸದ್ಯ ವಾಸಿಸುತ್ತಿರುವವರೆಲ್ಲರೂ ಕನ್ನಡಿಗರೇ?
 • ರಾಜ್ಯದಲ್ಲಿ ಪ್ರಸ್ತುತವಾಗಿ ಆರು ಕೋಟಿ ಕನ್ನಡಿಗರು ಇದ್ದರೂ ಸರ್ಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳು ಏಕೆ ಇಲ್ಲ?
 • ಬೆಂಗಳೂರಿನ ಮಲ್ಟಿಪ್ಲೆಕ್ಸಿನಲ್ಲಿ ಕನ್ನಡ ಸಿನಿಮಾಗಳಿಗೇಕೆ ಇನ್ನೂ ತಾರತಮ್ಯ?
 • ರಸ್ತೆ/ಕಟ್ಟಡ ನಿರ್ಮಾಣ ಮತ್ತು ಜಾಡಮಾಲಿ ಕೆಲಸಮಾಡಲು ಕನ್ನಡಿಗರೇಕೆ ಮುಂದಾಗುವುದಿಲ್ಲ?
 • ಸಿ ಮತ್ತು ಡಿ ದರ್ಜೆಯಂತಹ ಕೆಲಸಕ್ಕೆ‌ ಮಾತ್ರವೇ ಕನ್ನಡಿಗರು ಸೀಮಿತವಾಗಬೇಕೇ?
 • ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಬಗ್ಗೆ ನಿಮ್ಮ ನಿಲುವೇನು?
 • ಮರಾಠಿಗರ ಮತ್ತು ಕೊಂಕಣಿಗಳ ಅಸ್ಮಿತೆ ಎಂಬ ನೆಪದಲ್ಲಿ ಕನ್ನಡಿಗರನ್ನು ಹೊರಹಾಕುತ್ತಿರುವ ಮಹಾರಾಷ್ಟ್ರ ಮತ್ತು ಗೋವಾದ ರಾಜ್ಯಗಳಿಗಿಂತ ನಮ್ಮ ರಾಜ್ಯ ಹೇಗೆ ವಿಭಿನ್ನ?
 • ಒಕ್ಕೂಟ ವ್ಯವಸ್ಥೆಯನ್ನು ಹೇಗೆ ಸಮರ್ಥಿಸುತ್ತೀರೀ?
 • ಅನೇಕ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿರುವ ಈ ಸಮಯದಲ್ಲಿ ಈ ರೀತಿಯ ಬಂದ್ ಕರೆ ನೀಡುವುದು ಒಪ್ಪುವಂತಹದ್ದೇ?

ಬಹಳ ದುಃಖದ ಸಂಗತಿಯೇನೆಂದರೆ ಬಂದ್ ಕರೆ ನೀಡಿರುವ ಬಹುತೇಕ ಸಂಘಟನೆಗಳ ನಾಯಕರುಗಳ ಮಾತೃಭಾಷೆ ಕನ್ನಡವೇ ಆಗಿರುವುದಿಲ್ಲ. ಈಗಿರುವ ಘಟಾನುಘಟಿ ನಾಯಕರುಗಳಿಗೆ ಸರಿಯಾಗಿ ಸ್ಪೃಟವಾಗಿ, ಸ್ವಚ್ಚವಾಗಿ ಅಚ್ಚ ಕನ್ನಡ ಮಾತನಾಡಲು ಬರುವುದೇ ಇಲ್ಲ. ಅ ಕಾರ ಮತ್ತು ಹ ಕಾರ ಬಳಕೆಯ ವೆತ್ಯಾಸವೇ ಅರಿಯದೇ ಆದರಕ್ಕೆ ಹಾದರ ಎಂದು ಹೇಳುವಂತಹ ನಾಯಕರೇ ಹೆಚ್ಚು. ಇಂದು ಬಹುತೇಕ ಕನ್ನಡ ಪರ ಸಂಘಟನೆಗಳು ಅವರ ನಾಯಕರುಗಳ ಸ್ವಪ್ರತಿಷ್ಟೆಯಿಂದಾಗಿ ಅನೇಕ ಭಾಗಗಳಾಗಿ ತಂಡು ತುಂಡುಗಳಾಗಿ ಹೋಗಿ ಅವರಲ್ಲಿಯೇ ಒಗ್ಗಟ್ಟಿಲ್ಲದಾಗಿದೆ. ಈಗ ಕರೆದಿರುವ ಮುಷ್ಕರಕ್ಕೂ ಸಹಾ ಅನೇಕ ಕನ್ನಡ ಪರ ಸಂಘಟನೆಗಳು ಬೆಂಬಲವನ್ನು ಸೂಚಿಸಿಯೇ ಇಲ್ಲ ಎನ್ನುವುದನ್ನು ಗಮನಿಸಬೇಕಾದ ಅಂಶವಾಗಿದೆ. ಹೀಗೆ ತಮ್ಮಲ್ಲಿಯೇ ಒಗ್ಗಟ್ಟಿಲ್ಲದೇ ಸುಖಾಸುಮ್ಮನೆ ಮತ್ತೊಬ್ಬರ ಮೇಲೆ ಗಧಾ ಪ್ರಹಾರ ಮಾಡುವುದು ಎಷ್ಟು ಸರಿ? ಮೊದಲು ಈ ಕನ್ನಡಪರ ಸಂಘಟನೆಗಳು ತಮ್ಮೆಲ್ಲಾ ಅಹಂಗಳನ್ನು ಬದಿಗಿಟ್ಟು ಒಂದಾಗಿ ಸಾಥ್ವಿಕ‌ ಹೋರಾಟ ಮಾಡಿದಲ್ಲಿ ಎಲ್ಲರ ಮನ‌ ಗೆಲ್ಲಬಹುದು

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ಮಾತನಾಡುವವರ ಸಂಖ್ಯೆ ಸದ್ಯಕ್ಕೆ ಕೇವಲ ಶೇ 20 ರಷ್ಟು ಆಗಿ ಹೋಗಿ ಅನ್ಯಭಾಷಿಕರೇ ಹೆಚ್ಚಾಗಿ ಹೋಗಿದ್ದಾರೆ. ಚಿಕ್ಕಪೇಟೆ, ಬಳೇಪೇಟೆ, ಅಕ್ಕಿಪೇಟೆ ಮಾರ್ವಾಡಿಗರ ಪಾಲಾದರೆ, ಹಲಸೂರು, ಬೆಂಗಳೂರು ದಂಡು ತಮಿಳರ ಪಾಲಾಗಿದ್ದರೆ, ಕೋರಮಂಗಲ, ಹೊಸೂರು ರಸ್ತೆ , ವೈಟ್ ಫೀಲ್ಡ್ ಪ್ರದೇಶಗಳಲ್ಲಿ ತೆಲುಗರದ್ದೇ ಪ್ರಾಭಲ್ಯ. ಇನ್ನು ಮಲೆಯಾಳಿಗಳು ಮತ್ತು ಉರ್ದು ಭಾಷಿಕರು ನಗರಾದ್ಯಂತ ಹಂಚಿಹೋಗಿದ್ದು ಅವರ ಮಧ್ಯೆ ಮರುಭೂಮಿಯಲ್ಲಿ ನೀರು ಸಿಕ್ಕಂತೆ ಅಲ್ಪ ಸ್ವಲ್ಪ ಕನ್ನಡಿಗರನ್ನು ಕಾಣುವಂತಾಗಿದೆ. 60-70ರ ದಶಕದ ಆನಕೃ ಮತ್ತು ಮ ರಾಮಮೂರ್ತಿಗಳ ಕಾಲದಿಂದಲೂ ಹಿಡಿದು ಇಂದಿಗೂ ಸಹಾ ಬೆಂಗಳೂರಿನಲ್ಲಿ ಕನ್ನಡ ಸಿನಿಮಾ ಪ್ರದರ್ಶನಕ್ಕೆ ಹೋರಾಟ ಮಾಡಲೇ ಬೇಕಿದೆ. ಇಂದಿಗೂ ಬಸ್, ಮಾಲ್ ಮತ್ತು ಪಬ್ಗಳಲ್ಲಿ ಕನ್ನಡದ ಚಿತ್ರಗೀತೆಗಳು ಮರೀಚಿಕೆಯೇ ಆಗಿದೆ. ಬೆಂಗಳೂರಿನ 26 ವಿಧಾನಸಭಾ ಸದಸ್ಯರುಗಳಲ್ಲಿ ಹೆಚ್ಚಿನವರು ಅನ್ಯಭಾಷಿಗರೇ ಆಗಿದ್ದಾರೆ. ಅವರಲ್ಲಿ ಕೆಲವರಿಗೆ ಇನ್ನೂ ಸಹಾ ಸರಿಯಾಗಿ ಕನ್ನಡ ಮಾತನಾಡುವುದಕ್ಕೂ ಬರುವುದಿಲ್ಲ. ಮೊದಲು ಈ ವಿಷಯಗಳ ಬಗ್ಗೆ ಆದ್ಯತೆ ಕೊಟ್ಟು ಅಯಕಟ್ಟಿನ ಪ್ರದೇಶಗಳಲ್ಲಿ ಉನ್ನತ ಅಧಿಕಾರಗಳಲ್ಲಿ ಕನ್ನಡಿಗರನ್ನು ಆಯ್ಕೆಮಾಡದೇ, ಸುಖಾ ಸುಮ್ಮನೆ ಒಂದು ದಿನದ ಬಂದ್ ಮಾಡಿ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟವಾಗುವಂತೆ ಮಾಡಿ, ಜನ ಜೀವನ ಅಸ್ತವ್ಯಸ್ತ ಮಾಡುವುದರ ಮೂಲಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ. 2019ರಲ್ಲಿ ನಡೆದ ಸುಮಾರು 10-12 ಬಂದ್ ಗಳಿಂದ ಬಂದ್ ಕರೆ ನೀಡಿದ ಸಂಘಟನೆಗಳು ಉದ್ದಾರವಾದವೇ ಹೊರತು ರಾಜ್ಯದ ಭಾಷೆ, ಜಲ ನೆಲ ಸಂಸ್ಕೃತಿಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು.

b2

ನಿಜಕ್ಕೂ ಬೇಸರ ತರಿಸುವ ಸಂಗತಿಯೇನೆಂದರೆ, ಒಂದೆರಡು ಸಂಘಟನೆಗಳ ಹೊರತಾಗಿ ಬಹುತೇಕ ಕನ್ನಡಪರ ಸಂಘಗಳ ಹುಟ್ಟು ಆಯಾಯಾ ನಾಯಕರ ಹೊಟ್ಟೇ ಪಾಡಿಗಾಗಿಯೇ ಆಗಿರುತ್ತದೆ. ಈ ನಾಯಕರು ತಮ್ಮ ಅಸ್ಥಿತ್ವಕ್ಕಾಗಿ ಮತ್ತು ಅಗ್ಗದ ದಿಢೀರ್ ಪ್ರಚಾರಕ್ಕಾಗಿ ಈ ರೀತಿಯ ಮುಷ್ಕರಗಳನ್ನು ಆಗ್ಗಿಂದ್ದಾಗ್ಗೆ ಕನ್ನಡದ ಹೆಸರಿನಡಿ ಮಾಡುವುದು, ಅನ್ಯಭಾಷಿಕರನ್ನು ಹೆದರಿಸಿ ಬೆದರಿಸುತ್ತಾ ರೋಲ್ ಕಾಲ್ ಮಾಡುವುದು ಇಲ್ಲವೇ ಯಾವುದಾದರೂ ಸಂಧಾನ (settlement) ಮಾಡಿಸುವ ಮೂಲಕ ಹಣ ಮಾಡುವುದಕಷ್ಟೇ ಸೀಮಿತವಾಗಿದ್ದು ಇವರಿಂದ ಕನ್ನಡಕ್ಕೆ ಒಂದು ನಯಾಪೈಸೆಯೂ ಲಾಭವಿಲ್ಲ ಎನ್ನುವುದು ಜಗಜ್ಜಾಹೀರಾತಾಗಿದೆ. ಕನ್ನಡದ ಹೆಸರಿನಲ್ಲಿ, ಪಾಪದ ಕುರಿ, ಕೋಳಿ, ಹಂದಿ, ನಾಯಿ, ಎಮ್ಮೆ, ಹಸುಗಳನ್ನು ಅಸಹ್ಯಕರವಾಗಿ ಪ್ರತಿಭಟನೆಗೆ ಬಳೆಸಿಕೊಳ್ಳುವ ಮೂಲಕ ಜನರ ಮುಂದೆ ನಗೆಪಾಟಲಾಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಹಾಗಂದ ಮಾತ್ರಕ್ಕೆ ಪ್ರತಿಭಟನೆ ಮಾಡಬಾರದು ಎಂದಲ್ಲ.ಅದಕ್ಕೆ ವಿರೋಧವನ್ನೂ ಮಾಡುತ್ತಿಲ್ಲ. ಡಾ. ಸರೋಜಿನಿ ಮಹಿಷಿ ವರದಿ‌ ಸಂಪೂರ್ಣವಾಗಿ ರಾಜ್ಯದಲ್ಲಿ ಜಾರಿಗೆಯಾಗಿ ಕನ್ನಡದ ನೆಲದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಲೇ ಬೇಕು.

 • ಬಂದ್ ಮಾಡಿ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡುವ ಬದಲು ಸಾಥ್ವಿಕವಾಗಿ ಹೋರಾಡ ಬಹುದಲ್ಲವೇ?
 • ಕನ್ನಡ ಪರ ಹೋರಾಟಗಾರರಿಗೆ ನಿಜಕ್ಕೂ ಕನ್ನಡಿಗರಿಗೆ ಕೆಲಸಕೊಡಿಸುವ ಉಮೇದು ಇದ್ದಲ್ಲಿ ಪ್ರತೀ ಸಂಘಟನೆಗಳು ಕನ್ನಡ ಶಾಲೆಗಳನ್ನು ದತ್ತು ಪಡೆದು ಕನ್ನಡಿಗರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತು ಅರ್ಹತೆಯ ಆಧಾರದಲ್ಲಿಯೇ ಉತ್ತಮ ಕೆಲಸ ಸಿಗುವಂತೆ ಮಾಡಬಹುದಲ್ಲವೇ?
 • ಎಲ್ಲರಿಗೂ ಸರ್ಕಾರವೇ ನೌಕರಿ ಕೊಡಬೇಕು ಮತ್ತು ಅದರಲ್ಲೂ ಮೀಸಲಾತಿ ಕೊಡಬೇಕು ಎಂದು ಕನ್ನಡಿಗರನ್ನು ಪರಾವಲಂಭಿಯರನ್ನಾಗಿ ಮಾಡುವ ಬದಲು ಇದೇ ಕನ್ನಡಪರ ಸಂಘಟನೆಗಳು ಕನ್ನಡಿಗರಿಗೆ ಸ್ವ-ಉದ್ಯೋಗವನ್ನು ಆರಂಭಿಸುವಂತಹ ತರಭೇತಿಗಳನ್ನು ನೀಡುವುದು ಮತ್ತು ಅವರಿಗೆ ಆರ್ಥಿಕ ಸಹಾಯ ಮಾಡುವುದರ ಮೂಲಕ ಸ್ವಾವಲಂಭಿಗಳನ್ನಾಗಿ ಮಾಡಬಹುದಲ್ಲವೇ?

ಮತ್ತೊಮ್ಮೆ ಹೇಳುತ್ತೇನೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ಸಾರ್ವಭೌಮರು ಯಾವಾಗಲೂ ಕೊಡುಗೈ ದಾನಿಗಳಾಗಿರುತ್ತಾರೆಯೇ ಹೊರತು ಎಂದೂ ಯಾರ ಬಳಿಯಲ್ಲಿಯೂ ದೈನೇಸಿಯಾಗಿ ಕೈಚಾಚುವುದಿಲ್ಲ. ಹಾಗಾಗಿ ಸುಮ್ಮನೆ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಎಂದು ರಾಜ್ಯಾದ್ಯಂತ ಬಂದ್ ಮಾಡುವ/ಮಾಡಿಸುವ ಬದಲು ತಮ್ಮ ಸ್ವಸಾಮರ್ಥ್ಯದಿಂದಲೇ ರಾಜಮಾರ್ಗವಾಗಿ ಕೆಲಸ ಗಿಟ್ಟಿಸುಕೊಳ್ಳುವಂತಾದರೆ ಕನ್ನಡಿಗರಿಗೇ ಹೆಮ್ಮೆಯಲ್ಲವೇ?

ಏನಂತೀರೀ?

ನಿನ್ಮವನೇ ಉಮಾಸುತ

2 thoughts on “ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

 1. ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸದೇ ನಾವೇ ಅವರ ಭಾಷೆಯನ್ನು ಕಲಿತು,ಆವರ ಹಬ್ಬ ಹರಿ ದಿನಗಳು, ಆಚರಣೆಗಳು ಮತ್ತು ಅವರ ಸಿನಿಮಾಗಳನ್ನು ನೋಡಿದ ಪರಿಣಾಮವೇ ಇಂದಿನ ಈ ದುಸ್ಥಿತಿ.

  I truly agree with the above statement. Most of the North Indians (exception is Marwadi’s and few Punjabi’s) have cultivated an habit not to speak in Kannada and make sure others learn Hindi. Even in official meetings whenever the Hindi people are more they switch over the language from English to Hindi. Even the tele-callers begin the conversation in Hindi now a days and I never respond. We don’t have any hatredness in speaking any language but the same love should be shown from the other side.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s