ದೇಹ ಮತ್ತು ದುಡಿತ

ನನ್ನ ಶಾಲಾ ಸಹಪಾಠಿಯೊಬ್ಬ ನೆನ್ನೆಯ ದಿನ ಸಂಜೆ ಶಟಲ್ ಆಡುವ ವೇಳೆಯಲ್ಲಿ ಶಟಲ್ ಕೋರ್ಟಿನಲ್ಲಿಯೇ ಬಿದ್ದು ತೀವ್ರತರವಾದ ಹೃದಯಸ್ಥಂಭನದಿಂದಾಗಿ ಮೃತನಾದ ಎಂದು ಇಂದು ಬೆಳಿಗ್ಗೆ ಗೆಳೆಯನೊಬ್ಬ ಫೋಟೋದೊಂದಿಗೆ ಕಳುಹಿದ್ದ ವ್ಯಾಟ್ಯಾಪ್ ಸಂದೇಶವೊಂದನ್ನು ನೋಡಿ ಮನಸ್ಸಿಗೆ ಬಹಳ ದುಃಖವುಂಟಾಯಿತು. ಪಾಶ್ವಾತ್ಯ ಬದುಕಿಗೆ ಒಗ್ಗಿಹೋಗಿರುವ ಇಂದಿನ ಯುವ ಜನತೆ ವಾರಪೂರ್ತಿ ಹೊತ್ತಲ್ಲದ ಹೊತ್ತಿನಲ್ಲಿ ನಿಶಾಚರರಂತೆ ದುಡಿಯುತ್ತಾರೆ ಮತ್ತು ವಾರಾಂತ್ಯದಲ್ಲಿ ಆ ದುಡಿತದ ದಣಿವಾರಿಸಿಕೊಳ್ಳಲು ನಾನಾ ರೀತಿಯ ಹವ್ಯಾಸಗಳಿಗೆ ದಾಸರಾಗಿ ತಮ್ಮ ದೇಶ ಮತ್ತು ದೇಹದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸದ ಪರಿಣಾಮವಾಗಿ ಅತೀ ಚಿಕ್ಕವಯಸ್ಸಿನಲ್ಲಿಯೇ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಸಂಬಂಧಿತ ರೋಗಗಳಿಗೆ ತುತ್ತಾಗಿ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಅಸುನೀಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಆತ್ಯಂತ ಚಿಕ್ಕವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ ಸ್ಥಾನಮಾನಗಳು ಮತ್ತು ನಿರೀಕ್ಷೆಗೂ ಮೀರಿದ ಸಂಬಳಗಳು ದೊರೆಯುತ್ತಿರುವ ಈ ಸಂಧರ್ಭದಲ್ಲಿ ನಮ್ಮ ಯುವ ಜನತೆ ಗಳಿಸಿದ್ದನ್ನು ಆನಂದದಿಂದ ಅನುಭವಿಸುವುದಕ್ಕಿಂತಲೂ ಇನ್ನೂ ಹೆಚ್ಚಿನ ಐಶಾರಮ್ಯದ ಆಸೆಯಿಂದ ಇಲ್ಲ ಸಲ್ಲದ ಒತ್ತಡಗಳನ್ನು ಮೈಮೇಲೆ ಹೇರಿಕೊಂಡು ಹೊತ್ತಲ್ಲದ ಹೊತ್ತಿನಲ್ಲಿ ಸಂಸಾರವನ್ನೂ ಬದಿಗೊತ್ತಿ ದುಡಿಯುತ್ತಾ ಅನಾರೋಗ್ಯಕ್ಕೆ ತುತ್ತಾಗಿ ಕಡೆಗೆ ಕೂಡಿಟ್ಟ ಹಣವನ್ನೆಲ್ಲಾ ಒಮ್ಮಿಂದೊಮ್ಮೆಲೆ ಆಸ್ಪತ್ರೆಗಳಿಗೆ ಸುರಿಯುವಂತಹ ಪರಿಸ್ಥಿತಿ ಬಂದಿರುವಾಗ. ಸಾಫ್ಟ್ ವೇರ್ ದಿಗ್ಗಜ ಶ್ರೀಯುತ ನಾರಾಯಣ ಮೂರ್ತಿಯವರ ಈ ದೃಷ್ಟಾಂತ ನಿಜಕ್ಕೂ ನಮ್ಮೆಲ್ಲರ ಕಣ್ಣನ್ನು ತೆರೆಸುವಂತಿದೆ.

ಅದೊಮ್ಮೆ ಬೆಂಗಳೂರಿನ ಮಾಯಾಂಕ್ ಗುಪ್ತಾ ಎನ್ನುವ ಸ್ವತಂತ್ರ ಕಾರ್ಪೊರೇಟ್ ತರಬೇತುದಾರರೊಬ್ಬರು ಕೆಲಸದ ನಿಮಿತ್ತ ಬೆಂಗಳೂರಿನಿಂದ ಮುಂಬೈಯ್ಯಿಗೆ ವಿಮಾನದಲ್ಲಿ ಎಕಾನಮಿ ಕ್ಲಾಸಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಅವರ ಪಕ್ಕ ಕಿಟಕಿಯ ಸೀಟಿನಲ್ಲಿ ಒಬ್ಬ ನಡುವಯಸ್ಸಿನವರೊಬ್ಬರು ಕುಳಿತುಕೊಂಡಿರುತ್ತಾರೆ. ಆ ದಿನ ಯಾವುದೋ ಒಂದು ಕಂಪನಿಗೆ ಕೆಲವೊಂದು ಮಾಹಿತಿಗಳನ್ನು ಪ್ರಸ್ತುತ ಪಡಿಸಬೇಕಿದ್ದ ಕಾರಣ ಗುಪ್ತಾರವರು ತಮ್ಮ ಲ್ಯಾಪ್ ಟ್ಯಾಪ್ ತೆಗೆದು ಆ ದಾಖಲೆಗಳನ್ನೆಲ್ಲಾ ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ 15-20 ನಿಮಿಷಗಳ ನಂತರ ಎಲ್ಲವೂ ಸರಿ ಇದೆ ಎನಿಸಿದ ಮೇಲೆ ತಮ್ಮ ಲ್ಯಾಪ್ ಟ್ಯಾಪ್ ಮುಚ್ಚಿಟ್ಟು ಹೊತ್ತು ಕಳೆಯುವುದಕ್ಕಾಗಿ ಕಿಟಕಿಯತ್ತ ಹೊರಳಿದಾಗ ಇದ್ದಕ್ಕಿದ್ದಂತೆಯೇ ಅವರ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯನ್ನು ನೋಡಿ ಅರೇ ಇವರನ್ನು ಎಲ್ಲೋ ನೋಡಿದ ಹಾಗಿದೆಯಲ್ಲಾ ಎಂದು ಭಾವಿಸುತ್ತಾರೆ.

ಆ ವ್ಯಕ್ತಿಗೆ ಸ್ವಲ್ಪ ವಯಸ್ಸಾಗಿದ್ದು ದೊಡ್ಡಾದಾದ ಕನ್ನಡಕ ಹಾಕಿಕೊಂಡಿದ್ದಾರೆ. ಅವರು ಧರಿಸಿದ್ದ ಸೂಟ್ ಕೂಡಾ ಅಂತಹ ದುಬಾರಿಯಲ್ಲ. ಅದೇ ರೀತಿ ಅವರು ಹಾಕಿದ್ದ ಬೂಟುಗಳೂ ಸಹಾ ಸಾಮಾನ್ಯ ಗುಣಮಟ್ಟದ್ದಾಗಿದ್ದು ತಮ್ಮ ಪಾಡಿಗೆ ತಾವು ತಮ್ಮ ಮೊಬೈಲ್ ಮುಖಾಂತರ ಕೆಲವೊಂದು ಈ-ಮೇಲ್‌ಗಳಿಗೆ ಪ್ರತ್ಯುತ್ತರಿಸುತ್ತಿರುತ್ತಾರೆ.

ಅವರನ್ನೇ ದಿಟ್ಟಿಸಿ ನೋಡುತ್ತಿದ್ದಂತೆಯೇ ತಕ್ಷಣವೇ ಅವರ ಗುರುತಿ ಸಿಕ್ಕಿ,
ಸರ್, ನೀವು ಇನ್ಫೋಸಿಸ್ ನಾರಾಯಣ ಮೂರ್ತಿ ಗಳಲ್ಲವೇ? ಎಂದು ಕೇಳುತ್ತಾರೆ

narayanamurtrhy

ಅದಕ್ಕವರು ಸುಮ್ಮನೆ ಮುಗುಳ್ನಕ್ಕು, ಹೌದು, ನಾನೇ ಎಂದು ಮೆಲು ಧನಿಯಲ್ಲಿ ಉತ್ತರಿಸಿದ್ದನ್ನು ಕೇಳಿ ಗುಪ್ತಾರವರು ಒಂದು ಕ್ಷಣ ದಂಗಾಗುತ್ತಾರೆ. ಮುಂದೆ ಏನು ಮಾತನಾಡ ಬೇಕೆಂದು ಕೆಲವು ಕ್ಷಣ ಹೊಳೆಯದೆ ಸುಮ್ಮನೇ ಅವರತ್ತಲೇ ನೋಡುತ್ತ . ಅವರು ಧರಿಸಿದ್ದ ಸಾಧಾರಣ ಬೂಟುಗಳು, ಸೂಟ್, ಟೈ ಮತ್ತು ಕನ್ನಡಕದತ್ತಲ್ಲೇ ಹರಿಯುತ್ತದೆ ಚಿತ್ತ. ಇನ್ಫೋಸಿಸ್ ಸಹ ಸ್ಥಾಪಕರು ಮತ್ತು ಸರಿ ಸುಮಾರು $ 2.3 ಬಿಲಿಯನ್ ಮೌಲ್ಯವುಳ್ಳ ವ್ಯಕ್ತಿ ಈ ರೀತಿಯಾಗಿ ಸರಳವಾಗಿರಬಲ್ಲರೇ ಎಂದು ಮನಸ್ಸು ಯೋಚಿಸುತ್ತದೆ. ಅಷ್ಟು ಹಣ ಮತ್ತೊಬ್ಬರ ಬಳಿ ಇದ್ದಿದ್ದಲ್ಲಿ ಅವರು ಇಡೀ ವಿಮಾನಯಾನ ಸಂಸ್ಥೆಯನ್ನೇ ಖರೀದಿಸಬಹುದಾಗಿತ್ತು ಇಲ್ಲವೇ ಬ್ಯುಸಿನೆಸ್ ಕ್ಲಾಸಿನಲ್ಲಿ ಆರಾಮವಾಗಿ ಪ್ರಯಾಣಿಸಬಹುದಾಗಿತ್ತು. ಆದರೂ ಸಹಾ ಇವರು ಎಕಾನಮಿ ತರಗತಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದದ್ದು ಗುಪ್ತಾರವರನ್ನು ಕುತೂಹಲಕ್ಕೆ ಎಡೆಮಾಡಿಕೊಡುತ್ತದೆ.

ಈ ಕೂತೂಹಲವನ್ನು ಪರಿಹರಿಸಿಕೊಳ್ಳುವ ಸಲುವಾಗಿ ಮೂರ್ತಿಗಳತ್ತ ತಿರುಗಿ ತಮ್ಮನ್ನು ತಾವು ಪರಿಚಯಿಸಿಕೊಂಡು ನಿಮ್ಮದೇನೂ ಅಭ್ಯಂತರವಿಲ್ಲದಿದ್ದರೆ ನಿಮ್ಮನ್ನು ಕೆಲಪ್ರಶ್ನೆಗಳನ್ನು ಕೇಳಬಹುದೇ ಎಂದು ನಮ್ರವಾಗಿ ಕೇಳುತ್ತಾರೆ. ಅದಕ್ಕೇ ಅಷ್ಟೇ ವಿನಮ್ರವಾಗಿ ಓಹೋ ಅಗತ್ಯವಾಗಿ ಕೇಳಿ ಎಂದು ತಮ್ಮ ಫೋನನ್ನು ಪಕ್ಕಕ್ಕಿಟ್ಟು ಗುಪ್ತಾರವರ ಪ್ರಶ್ನೆಗಳನ್ನು ಆಲಿಸಲು ಮುಂದಾಗುತ್ತಾರೆ .

ಸರ್ ಅಷ್ಟೊಂದು ದಿಗ್ಗಜರಾದ ನಿಮ್ಮಂತಹವರು ಈ ರೀತಿಯ ಎಕಾನಾಮಿಕ್ ದರ್ಜೆಯಲ್ಲೇಕೆ ಪ್ರಯಾಣಿಸುತ್ತಿದ್ದೀರೀ? ಬ್ಯುಸಿನೆಸ್ ಕ್ಲಾಸಿನಲ್ಲಿಯೇ ಪ್ರಯಾಣಿಸಬಹುದಾಗಿತ್ತಲ್ಲವೇ ಎಂದು ಪ್ರಶ್ನಿಸಿತ್ತಾರೆ.

ಅದಕ್ಕೆ ಮೂರ್ತಿಗಳು ಬ್ಯುಸಿನೆಸ್ ಕ್ಲಾಸಿನಲ್ಲಿ ಕುಳಿತುಕೊಂಡು ಪ್ರಯಾಣಿಸಿದರೆ ಜನರು ಬೇಗನೆ ತಲುಪುತ್ತಾರೆಯೇ? ಎಂದು ಮರು ಪ್ರಶ್ನಿಸುತ್ತಾರೆ.

ಆದಾದ ನಂತರ ಪ್ರಶ್ನೋತ್ತರಗಳನ್ನು ಮುಂದುವರೆಸಿ, ಸರ್, ನೀವು ತುಂಬಾ ಯಶಸ್ವಿಯಾಗಿದ್ದೀರಿ ಮತ್ತು ನಿಮ್ಮ ಜೀವನದಲ್ಲಿ ಅನೇಕ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದೀರಿ. ಆ ರೀತಿಯಾದ ನಿರ್ಧಾರಗಳಲ್ಲಿ ಯಾವುದಕ್ಕಾದರು ನೀವು ವಿಷಾದಿಸುತ್ತೀರಾ? ಎಂದು ಕೇಳುತ್ತಾರೆ ಗುಪ್ತಾರವರು.

ಈ ಪ್ರಶ್ನೆಗೆ ಉತ್ತರಿಸಲು ಸ್ವಲ್ಪ ಸಮಯ ತೆಗೆದು ಕೊಂಡ ಮೂರ್ತಿಗಳು, ಇತ್ತೀಚಿನ ದಿನಗಳಲ್ಲಿ ನನ್ನ ಮೊಣಕಾಲುಗಳಲ್ಲಿ ಆಗ್ಗಿಂದ್ದಾಗಿ ನೋವುಗಳು ಕಾಣಿಸಿಕೊಳ್ಳುತ್ತಿವೆ. ಚಿಕ್ಕವಯಸ್ಸಿನಲ್ಲಿ ನಿರಂತರ ಕೆಲಸದಲ್ಲಿ ನಿರತನಾಗಿದ್ದ ಕಾರಣ ನನ್ನ ದೇಹದ ಬಗ್ಗೆ ಆಸ್ಥೆ ವಹಿಸಲಿಲ್ಲ. ನಾನು ನನ್ನ ದೇಹದ ಕುರಿತಾಗಿ ಚೆನ್ನಾಗಿ ಕಾಳಜಿ ವಹಿಸಬೇಕಾಗಿತ್ತು., ನನ್ನ ಬಗ್ಗೆ ಕಾಳಜಿ ವಹಿಸಲು ನನಗೆ ಎಂದಿಗೂ ಸಮಯ ಸಿಗಲಿಲ್ಲ. ಸಿಗಲಿಲ್ಲ ಎನ್ನುವುದಕ್ಕಿಂತ ನಾನು ಕೊಡಲಿಲ್ಲ ಎನ್ನುವು ಹೆಚ್ಚು ಸೂಕ್ತ. ಈಗ ನಾನು ಹೆಚ್ಚು ಕೆಲಸ ಮಾಡಲು ಬಯಸಿದರೂ ನನ್ನ ದೇಹ ಸಹಕರಿಸುತ್ತಿಲ್ಲ.

ಈಗಿನ ಯುವಕರಿಗೆ ನನ್ನ ಕಿವಿ ಮಾತು ಇಷ್ಟೇ. ನೀವೆಲ್ಲರೂ ಹದಿಹರೆಯದವರಾಗಿದ್ದೀರಿ. ನೀವು ಚುರುಕಾದ ಮತ್ತು ಮಹತ್ವಾಕಾಂಕ್ಷೆಯವರಾಗಿದ್ದೀರಿ ಹಾಗಾಗಿ ನಾನು ಮಾಡಿದ ತಪ್ಪನ್ನು ನೀವೆಂದೂ ಪುನರಾವರ್ತಿಸಬೇಡಿ. ನಿಮ್ಮ ದೇಹದ ಬಗ್ಗೆ ಸರಿಯಾದ ಕಾಳಜಿ ವಹಿಸಿ ಮತ್ತು ಸರಿಯಾದ ವಿಶ್ರಾಂತಿ ತೆಗೆದುಕೊಳ್ಳಿ. ಹಣವನ್ನು ಇಂದಲ್ಲಾ ನಾಳೆ ಸಂಪಾದಿಸಬಹುದು ಆದರೆ ಹಣದಿಂದ ಆರೋಗ್ಯವನ್ನು ಸಂಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಮೊದಲು ನಮ್ಮನ್ನು ನಾವು ಸರಿಯಾಗಿ ಆರೈಕೆ ಮಾಡುವುದರ ಮೂಲಕ ಸದೃಢರಾಗಿ ದೇಶದ ಸತ್ಪ್ರಜೆಗಳಾಗಿ ದೇಶವನ್ನು ಕಾಪಾಡುವಂತಾಗಬೇಕು ಎಂದು ಉತ್ತರಿಸುತ್ತಾರೆ.

andre

ದೇಹದ ಸ್ವಾಸ್ಥ್ಯದ ಕುರಿತಾಗಿ ವೆಸ್ಟ್ ಇಂಡೀಸ್ ತಂಡದ ಆಂಡ್ರೇ ರಸೆಲ್ ಕೂಡ ಹೀಗೆಯೇ ಹೇಳುತ್ತಾನೆ. ವೆಸ್ಟ್ ಇಂಡೀಸ್ ಮತ್ತು ಐಪಿಎಲ್ ನಲ್ಲಿ ಕಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ತನ್ನ ಎರುರಾಳಿ ತಂಡ ಮೇಲೆ ಮುಗಿಬೀಳುವ ರಸೆಲ್ ಇತ್ತೀಚಿನ ದಿನಗಳಲ್ಲಿ ಹೊಡಿ ಬಡಿ ಆಟಕ್ಕಷ್ಟೇ ಸೀಮಿತವಾಗಿದ್ದಾನೆ. ವಿಪರೀತ ಕಾಲು ನೋವಿನಿಂದಾಗಿ ಆತ ಹೆಚ್ಚಿನ ಹೊತ್ತು ಮೈದಾನದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಒಂದು, ಎರಡು ರನ್ನುಗಳನ್ನು ಓಡಲು ಸಾಧ್ಯವಾಗದ ಕಾರಣ ಆತ ಫೋರ್ ಮತ್ತು ಸಿಕ್ಸರ್ ಬಾರಿಸಲು ಪ್ರಯತ್ನಿಸುತ್ತಾನೆ. ಈ ಪ್ರಯತ್ನದಲ್ಲಿ ಕೆಲವೊಂದು ಬಾರಿ ಸಫಲನಾದರೇ ಹೆಚ್ಚಿನ ಬಾರಿ ವಿಫಲನಾಗುತ್ತಿದ್ದಾನೆ. ಚಿಕ್ಕವಯಸ್ಸಿನಲ್ಲಿ ಎಲ್ಲರ ಗಮನ ಅದರಲ್ಲೂ ಹೆಂಗಳೆಯರ ಗಮನ ಸೆಳೆಯಲು ಕೇವಲ ದೇಹದಾಡ್ಯದತ್ತವೇ ಗಮನಹರಿಸಿ ಕಾಲುಗಳ ಸ್ವಾಸ್ಥ್ಯದ ಬಗ್ಗೆ ಗಮನ ಹರಿಸದ ಕಾರಣ ಈ ರೀತಿಯ ಸಮಸ್ಯೆಯಾಗಿದೆ ಎಂದು ಆತ ಬಹಳ ದುಃಖದಿಂದ ಹೇಳಿಕೊಂಡಿದ್ದಾನೆ.

ಸಾಮಾನ್ಯವಾಗಿ ಬಹುತೇಕ ಮಂದಿ ತಮ್ಮ ಸ್ವಂತ ಆರೋಗ್ಯದ ಬಗ್ಗೆ ಉದಾಸೀನ ಭಾವನೆ ಹೊಂದಿರುತ್ತಾರೆ. ಅನೇಕ ಆರೋಗ್ಯ ಸಮಸ್ಯೆಗಳಿದ್ದರೂ ಮುಂದೆ ಉಲ್ಬಣಗೊಂಡಾಗ ವೈದ್ಯರ ಬಳಿ ಹೋದರಾಯಿತು ಎಂದು ಮುಂದೂಡುತ್ತಲೇ ಇರುತ್ತಾರೆ. ಆ ಮೇಲೆ ಪಶ್ಚಾತ್ತಾಪ ಪಡುತ್ತಾರೆ. ನಾವು ಚೆನ್ನಾಗಿದ್ದರೆ ನಮ್ಮನ್ನು ನಂಬಿರುವವರನ್ನೂ ಚೆನ್ನಾಗಿ ನೋಡಿಕೊಳ್ಳಬಹುದು, ಆದ್ದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು ಎಂಬುದನ್ನು‌ ಮೊದಲು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

health

ಹಾಗಾಗಿ ಯಾರೂ ಸಹಾ ಹಣ ಮತ್ತು ಐಶಾರಾಮಿ ವಸ್ತುಗಳನ್ನು ಹೊಂದುವುದರಿಂದ ಶ್ರೀಮಂತರಾಗುವುದಿಲ್ಲ. ಇಳಿ ವಯಸ್ಸಿನಲ್ಲಿಯೂ ಅರೋಗ್ಯಕರವಾಗಿದ್ದು ತಾವು ಗಳಿಸಿದ್ದನ್ನು ಅತ್ಯಂತ ಚೆನ್ನಾಗಿ ಖರ್ಚುಮಾಡುತ್ತಾ ಸ್ನೇಹಿತರು ಮತ್ತು ಕುಟುಂಬದೊಡನೆ ಕಾಲ ಕಳೆಯುವವರೇ ನಿಜವಾದ ಶ್ರೀಮಂತರು. ಕಂಪನಿಗಳಿಗೆ ನಮ್ಮಂತಹ ನೂರಾರು ನೌಕರರು ಸಿಗಬಹುದು. ಆದರೆ ನಮ್ಮ ಕುಟುಂಬಕ್ಕೆ ನಮ್ಮನ್ನು ಹೊರತು ಪಡಿಸಿದರೆ ಬೇರಾರು ಸಿಗುವುದಿಲ್ಲದ ಕಾರಣ. ಸರಿಯಾಗಿ ಹೊತ್ತು ಹೊತ್ತಿಗೆ ಊಟ, ಕಣ್ತುಂಬ ನಿದ್ದೆ ಮತ್ತು ನಿಯಮಿತ ವ್ಯಾಯಾಮಗಳ ಮೂಲಕ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳೋಣ. ಹಾಗಾಗಿ ಕೇವಲ ದುಡಿತದತ್ತಲೇ ಹರಿಸದೇ ಚಿತ್ತ. ಆರೋಗ್ಯದತ್ತಲೂ ಹರಿಯಲಿ. ದೇಹ ಸಧೃಡವಾಗಿದ್ದಲ್ಲಿ ದೇಶವು ಸಧೃಢವಾಗಿರುತ್ತದೆ. ಆರೋಗ್ಯವೇ ಭಾಗ್ಯ. ಅದುವೇ ದೇಶದ ಸೌಭಾಗ್ಯ.

ಏನಂತೀರೀ?

4 thoughts on “ದೇಹ ಮತ್ತು ದುಡಿತ

  1. ನೀವು ಹೇಳಿರುವುದು ಅಕ್ಷರಶಃ ಸತ್ಯ. ಸಾಮಾನ್ಯವಾಗಿ ಬಹುತೇಕ ಮಂದಿ ತಮ್ಮ ಸ್ವಂತ ಆರೋಗ್ಯದ ಬಗ್ಗೆ ಉದಾಸೀನ ಭಾವನೆ ಹೊಂದಿರುತ್ತಾರೆ. ಅನೇಕ ಆರೋಗ್ಯ ಸಮಸ್ಯೆಗಳಿದ್ದರೂ ಮುಂದೆ ಸೀರಿಯಸ್ ಆದಾಗ ವೈದ್ಯರ ಬಳಿ ಹೋದರಾಯಿತು ಎಂದು ಪೋಸ್ಟ್ ಪೋನ್ ಮಾಡುತ್ತಿರುತ್ತಾರೆ. ಆಮೇಲೆ ಪಶ್ಚಾತ್ತಾಪ ಪಡುತ್ತಾರೆ. ನಾವು ಚೆನ್ನಾಗಿದ್ದರೆ ನಮ್ಮನ್ನು ನಂಬಿರುವವರನ್ನೂ ಚೆನ್ನಾಗಿ ನೋಡಿಕೊಳ್ಳಬಹುದು, ಆದ್ದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳೋಣ ಎಂಬ ಮನಸ್ಸು ಇಟ್ಟುಕೊಳ್ಳಬೇಕು.

    Like

Leave a comment