ನಮ್ಮ ಧರ್ಮ ಶಾಸ್ತ್ರದ ಪ್ರಕಾರ ಪ್ರತಿಯೊಂದು ಜೀವರಾಶಿಗಳಲ್ಲಿಯೂ ದೇವರಿರುತ್ತಾನೆ ಹಾಗಾಗಿ ಪ್ರತಿಯೊಬ್ಬರಿಗೂ ನಮ್ಮ ಎರಡೂ ಕರಗಳನ್ನು ಜೋಡಿಸಿ ಅದನ್ನು ನಮ್ಮ ಸೂರ್ಯಚಕ್ರಕ್ಕೆ (ಎದೆಯ ಗೂಡು) ತಾಗಿಸಿಗೊಂಡು ಭಕ್ತಿಯಿಂದ ತಲೆಬಾಗಿಸಿ ವಂದಿಸುವುದು ಆಚರಣೆಯಲ್ಲಿದೆ. ಅದಕ್ಕೆ ಪ್ರತಿಯಾಗಿ ಎದುರಿಗಿರುವ ವ್ಯಕ್ತಿಯೂ ಅದೇ ರೀತಿಯಲ್ಲಿಯೇ ಭಕ್ತಿ ಪೂರ್ವಕವಾಗಿ ವಂದಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಇಬ್ಬರೂ ವ್ಯಕ್ತಿಗಳ ನಡುವೆ ಕನಿಷ್ಠ ಪಕ್ಷ 3 ಅಡಿ ಅಂತರವನ್ನು ಕಾಯ್ದುಕೊಳ್ಳುತ್ತೇವೆ ಮತ್ತು ಎಂದಿಗೂ ಅವರನ್ನು ಮುಟ್ಟುವುದಿಲ್ಲ. ಈ ಕ್ರಿಯೆಯನ್ನು ಆಚರ, ಮಡಿ ಅಥವಾ ಅನುಷ್ಠಾನ ಎಂದು ಕರೆಯಲಾಗುತ್ತದೆ. ಇದನ್ನು ಪಾಲಿಸುವವರನ್ನು ಅನೇಕರು ಎಲ್ಲರ ಮುಂದೆಯೇ ಅಪಹಾಸ್ಯ ಮಾಡಿಕೊಂಡು ನಕ್ಕ ಪ್ರಹಸನಗಳು ಅದೆಷ್ಟೋ ಇವೆ. ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದು ಕೈ ಕುಲುಕಿದಲ್ಲಿ, ಇಲ್ಲವೇ ಒಬ್ಬನ್ನೊಬ್ಬರನ್ನು ಆಲಿಂಗಿಸಿದಲ್ಲಿ ಮಾತ್ರವೇ ಭ್ರಾತೃತ್ವ ಇಲ್ಲವೇ ಮಿತೃತ್ವ ಹೆಚ್ಚುತ್ತದೆ ಎಂದು ವಾದಿಸುವವರೇ ಹೆಚ್ಚಾಗಿದ್ದಾರೆ ಮತ್ತು ಅದನ್ನೇ ಇಂದಿಗೂ ಉದ್ದೇಶಪೂರ್ವಕವಾಗಿ ಅನುಸರಿಸುತ್ತಿದ್ದಾರೆ.
ಆದರೆ ಇತ್ತಿಚಿಗೆ World Health Organization (WHO) ಅವರೇ ಹೇಳಿರುವ ಪ್ರಕಾರ, ಪ್ರಸ್ತುತ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿರುವ ಕರೋನಾ ವೈರಸ್ ದಾಳಿಯಿಂದ ದೂರವಿರಲು,
- ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಕನಿಷ್ಠ ಪಕ್ಷ 3 ಅಡಿಗಳಷ್ಟಾದರೂ ಅಂತರವನ್ನು ಕಾಯ್ದುಕೊಳ್ಳ ಬೇಕು
- ಪರಿಚಿತರೇ ಆಗಲೀ, ಅಪರಿಚಿತರೇ ಆಗಲಿ, ಯಾರನ್ನೂ ಮುಟ್ಟದಿರಿ
- ಅಕಸ್ಮಾತ್ ಯಾರನ್ನೇ ಆಗಲಿ ಮುಟ್ಟಿ ಮಾತನಾಡಿಸುವ ಅನಿವಾರ್ಯ ಸಂದರ್ಭ ಬಂದಲ್ಲಿ ಕೂಡಲೇ ಕೈಗಳನ್ನು ತೊಳೆಯಿರಿ.
- ಪರಸ್ಪರ ಆಲೀಂಗನಗಳಿಂದ ಸಾಧ್ಯವಾದಷ್ಟೂ ದೂರವಿರಿ.
ಇಂತಹ ಮಹಾಮಾರಿಗಳನ್ನು ಅದೆಷ್ಟೋ ಸಹಸ್ರ ವರ್ಷಗಳ ಹಿಂದೆಯೇ ಗುರುತಿಸಿದ್ದ ನಮ್ಮ ಪೂರ್ವಜರು ಆಚಾರ, ವಿಚಾರ, ಮಡಿ ಹುಡಿ ಎಂಬ ನೆಪದಲ್ಲಿ ಕೆಲವೊಂದು ಅಭ್ಯಾಸಗಳನ್ನು ನಮ್ಮ ಜೀವನದ ಸಹಜ ಪ್ರಕ್ರಿಯೆಗಳನ್ನಾಗಿಸಿದ್ದರು.
- ಪ್ರತೀಬಾರಿ ಹೊರಗಿನಿಂದ ಮನೆ ಪ್ರವೇಶಿಸುವ ಮುನ್ನಾ ಕೈಕಾಲುಗಳನ್ನು ತೊಳೆದುಕೊಂಡೇ ಪ್ರವೇಶಿಸ ಬೇಕು.
- ಪಾದರಕ್ಷೆಗಳನ್ನು ಮನೆಯ ಹೊರಗೇ ಬಿಡಬೇಕು
- ಪ್ರತೀ ದಿನ ಮನೆಯನ್ನು ಗುಡಿಸಿ, ಶುದ್ಧ ನೀರಿನಿಂದ ಸಾರಿಸಬೇಕು.
- ಮನೆಯಲ್ಲಿ ರೋಗರುಜಿನಗಳು ಹರಡಂತೆ ತಡೆಗಟ್ಟಲು ಅಗ್ಗಾಗ್ಗೆ ಕ್ರಿಮಿನಾಶಕವಾದ ಗೋಮೂತ್ರವನ್ನು ಸಿಂಪಡಿಸಬೇಕು.
- ಮನೆಯ ಪ್ರಮುಖ ದ್ವಾರಗಳಲ್ಲಿ ಮಾವಿನ ಮತ್ತು ಬೇವಿನ ತೋರಣವನ್ನು ಕಟ್ಟಬೇಕು.
- ಎಲ್ಲದ್ದಕ್ಕಿಂತಲೂ ಪ್ರಮುಖವಾಗಿ, ಎರಡೂ ಕೈಗಳನ್ನೂ ಒಟ್ಟಿಗೆ ಜೋಡಿಸಿ, ನಮ್ಮಲ್ಲಿರುವ ಎಲ್ಲಾ ಅಹಂಗಳನ್ನೂ ಬದಿಗೊತ್ತಿ, ತಲೆಬಾಗಿಸಿ ಹೃದಯಪೂರ್ವಕವಾಗಿ ನಮಿಸಬೇಕು.
- ಕೈಕುಲುಕುವುದು ಮತ್ತು ತಬ್ಬಿಕೊಳ್ಳುವುದು ನಮ್ಮ ಸಂಸ್ಕೃತಿಯ ಭಾಗವಾಗಿರಲಿಲ್ಲ. ಹಾಗೆ ಮಾಡುವುದರಿಂದ ಕಣ್ಣಿಗೆ ಕಾಣದ ಎಷ್ಟೋ ಹಾನಿಕಾರಕ ಕೀಟಾಣುಗಳು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ.
ನಮ್ಮ ಹಿರಿಯರಿಂದ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದಲ್ಲಾ ಒಂದು ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತದೆ. ಇಂದಿನ ಪೀಳಿಗೆಯವರು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಡಂಬಾಚಾರ ಮತ್ತು ಮೂಡನಂಬಿಕೆ ಎಂದು ಜರಿಯುತ್ತಾ ಅವುಗಳನ್ನು ಅಚರಿಸದಿರುವುದು ಇಷ್ತೆಲ್ಲಾ ಅವಗಢಗಳಿಗೆ ಕಾರಣವಾಗಿದೆ.
ನಮ್ಮ ಸನಾತನ ಆಚಾರ ವಿಚಾರ ಪದ್ದತಿಗಳನ್ನು ಎಲ್ಲರೂ ಪಾಲಿಸೋಣ, ಆರೋಗ್ಯಕರವಾಗಿರೋಣ.
ಸ್ವಚ್ಘ ಭಾರತ. ಶ್ರೇಷ್ಠ ಭಾರತ
ಏನಂತೀರೀ?
Why namaskara not Shake hand and our Dharma is well explained very short and sweet ,any common with Common senses will understand immediately.
LikeLike