ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಕರಗ ಮಹೋತ್ಸವ

ಬೆಂಗಳೂರಿನ ಆಸುಪಾಸಿನಲ್ಲಿ ಶತಶತಮಾನಗಳಿಂದಲೂ ಪ್ರಮುಖ ದೇವಾಲಯಗಳಲ್ಲಿ ಅದರಲ್ಲೂ ವಿಶೇಷವಾಗಿ ದೇವಿಯ ದೇವಸ್ಥಾನಗಳಲ್ಲಿ ಕರಗ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕರಗಕ್ಕೇ ತನ್ನದೇ ಆದ ವೈಶಿಷ್ಟ್ಯವಿದೆ. ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದು. ಕರಗ(ಕರಕ) ಎಂಬ ಮಾತಿಗೆ ಕುಂಭ ಎಂಬ ಅರ್ಥವೂ ಇದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ. ಕರಗ ಪೂಜೆ ಮತ್ತು ಉತ್ಸವಗಳು ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ವೈಭವದಿಂದ ಆಚರಿಸಲ್ಪಟ್ಟು ಕ್ರಮೇಣ ಕರ್ನಾಟಕದ ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಆಚರಣೆ ರೂಢಿಯಲ್ಲಿದೆ.

ಕರಗ ಆಚರಣೆಯ ಮೂಲವನ್ನು ಪುರಾಣಗಳಲ್ಲಿ ಈ ರೀತಿಯಾಗಿ ಉಲ್ಲೇಖಿಸಲಾಗಿದೆ. ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮಾರ್ಛಿತಳಾಗಿ ಬಿದ್ದಳಂತೆ. ದ್ರೌಪದಿ ಮೂರ್ಛಿತಳಾಗಿ ಬಿದ್ದದ್ದು ಪಾಂಡವರಿಗೆ ತಿಳಿಯದೆ ಮುಂದೆ ನಡೆಯುತ್ತಾರೆ. ಆಕೆಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ಯಜಮಾನರನ್ನು, ಹಣೆಯಿಂದ ಗಣಾಚಾರಿಗಳನ್ನು, ಕಿವಿಗಳಿಂದ ಗವ್ಡರನ್ನು, ಬಾಯಿಯಿಂದ ಗಂಟೆಪೂಜಾರ’ಗಳನ್ನು ಮತ್ತು ಹೆಗಲಿನಿಂದ ವೀರಕುಮಾರರನ್ನು ಸೃಷ್ಟಿಸುತ್ತಾಳೆ. ಹೀಗೆ ದ್ರೌಪತಿಯ ತಪೋಬಲದಿಂದ ಹುಟ್ಟಿದವರೆಲ್ಲರೂ ಸೇರಿ ಆ ರಾಕ್ಷಸನ ವಿರುದ್ಧ ವೀರಾವೇಷದಿಂದ ಹೋರಾಡಿ ಅವನನ್ನು ಸಂಹರಿಸುತ್ತಾರೆ. ಹೀಗೆ ಮಕ್ಕಳನ್ನು ಹುಟ್ಟಿಸಿದ ದ್ರೌಪದಿ ಆದಿಶಕ್ತಿಯಾಗಿ, ಮತ್ತೆ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗುವುದು ಆ ಮಕ್ಕಳಿಗೆ ದುಗುಡವನ್ನು ಉಂಟು ಮಾಡುತ್ತದೆ. ಅವಳು ಹೋಗದಂತೆ ತಡೆಯಲು ಶ್ರೀ ಕೃಷ್ಣನ ಮೊರೆ ಹೋಗುತ್ತಾರೆ. ಆಗ ಶ್ರೀ ಕೃಷ್ಣನು ಆ ವೀರಕುಮಾರರಿಗೆ ತಮ್ಮ ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ಅಲಗುಸೇವೆ ಎನ್ನುತ್ತಾರೆ) ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು ಎಂದು ಅವಲತ್ತು ಮಾಡಿಕೊಳ್ಳಲು ತಿಳಿಸುತ್ತಾನೆ. ವೀರಕುಮಾರರು ಶ್ರೀಕೃಷ್ಣನ ಆಣತಿಯನ್ನು ಚಾಚೂ ತಪ್ಪದೇ ಪಾಲಿಸಿದ್ದನ್ನು ನೋಡಿದ ದ್ರೌಪದಿಗೆ ಮರುಕವಾಗಿ ಪ್ರತಿ ವರುಷವೂ ಭೂಮಿಗೆ ಬಂದು ಮಕ್ಕಳೊಂದಿಗೆ ಇರುವ ಮಾತು ನೀಡುತ್ತಾಳೆ. ಆ ದಿನವೇ ಕರಗ ಹಬ್ಬದ ದಿನ. ಈ ಸಂದರ್ಭದ ನೆನಪಿಗೆಗಾಗಿಯೇ ಕರಗ ಮಹೋತ್ಸವ ನಡೆಯುತ್ತದೆ ಎಂಬ ಪ್ರತೀತಿ ಇದೆ. . ಇದರ ಜೊತೆಗೆ ಇನ್ನೊಂದು ಐತಿಹ್ಯವಿದೆ. ದ್ವಾಪರ ಯುಗದಲ್ಲಿ, ಒಂದು ಸರ್ವಾಲಂಕಾರ ಭೂಷಿತೆಯಾದ ದ್ರೌಪದಿ ಮಂಗಳ ಕಲಶವನ್ನು ಹಿಡಿದು ಸ್ವಯಂವರ ಮಂಟಪವನ್ನು ಪ್ರವೇಶಿಸಿದಳು. ಮತ್ಸ್ಯವನ್ನು ಭೇದಿಸುವ ಅರ್ಜುನನ್ನೂ, ಕುಂತಿಯ ಅಭಿಲಾಷೆಯಂತೆ ಉಳಿದ ನಾಲ್ವರು ಪಾಂಡವ ಸಹೋದರರನ್ನೂ ಶಾಸ್ತ್ರೋಸ್ತವಾಗಿ ವಿವಾಹವಾದಳು. ಆಗ ಸಂತೋಷದಿಂದ ಕೈಯಲಿದ್ದ ಕಲಶವನ್ನು ಶಿರದಲ್ಲಿ ಧರಿಸಿದಳು. ಅದೇ ಕರಗವಾಯಿತು ಎಂಬ ನಂಬಿಕೆಯೂ ಇದೆ.

ಫಾಲ್ಗುಣ ಮಾಸದ ಹುಣ್ಣಿಮೆಯಂದು ದಿನಾಂಕ 9.3.2020 ರಂದು ವಿದ್ಯಾರಣ್ಯಪುರದ ಶ್ರೀ ಶ್ವೇತ ಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 29ನೇ ವಾರ್ಷಿಕೋತ್ಸವದ ಅಂಗವಾಗಿ ಮಲ್ಲಿಗೆ ಹೂವಿನ ಕರಗ ಮಹೋತ್ಸವ ಬಹಳ ಅದ್ದೂರಿಯಿಂದ ಆಚರಿಸಲ್ಪಟ್ಟಿತು. ಕರಗವನ್ನು ಹೊರುವವರು ಬಹಳ ಬಹಳ ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಪೂಜಿಸಿ ಹೂವಿನ ಕರಗವನ್ನು ತನ್ನ ತಲೆಯಮೇಲೆ ಹೊತ್ತು ಕತ್ತಿ ಹಿಡಿದ ವೀರ ಕುಮಾರರು ಅಲಗು ಸೇವೆ ಮಾಡಿದರು. ನಾದಸ್ವರ ಮತ್ತು ತಮಟೆಯ ಸದ್ದಿನೊಂದಿಗೆ ಕರಗಹೊತ್ತವರು ಮತ್ತು ವೀರ ಕುಮಾರರು ದೇವಾಯಯವನ್ನು ಪ್ರದಕ್ಷಿಣೆ ಹಾಕಿ ನಂತರ ವಿದ್ಯಾರಣ್ಯಪುರದ ಪ್ರಮುಖ ಬೀದಿಗಳಲ್ಲಿ, ಕತ್ತಿ ಹಿಡಿದ ವೀರಕುಮಾರರು ಗೋವಿಂದಾ, ಗೋವಿಂದಾ ಎಂಬ ಘೋಷಣೆಯೊಂದಿಗೆ ನರ್ತಿಸುತ್ತಾ ತಡ ರಾತ್ರಿಯ ವರೆಗೂ ಮೆರವಣಿಗೆ ಸಂಭ್ರಮದಿಂದ ಸಾಗಿತು. ಕರಗ ಬರುವ ಬೀದಿಗಳಲ್ಲಿನ ಮನೆಯವರು ತಮ್ಮ ಮನೆಗಳ ಮುಂದೆ ಸಾರಿಸಿ ಗುಡಿಸಿ ಭವ್ಯವಾದ ರಂಗೋಲಿ ಹಾಕಿ ಕರಗ ಬರುತ್ತಿದ್ದಂತೆಯೇ ಭಕ್ತಿಯಿಂದ ಹಣ್ಣು ಕಾಯಿ ನೈವೇದ್ಯ ಮಾಡಿ ಆರತಿ ಬೆಳಗಿ ಕರಗ ಹೊತ್ತವರ ಕೈಯಿಂದ ಪ್ರಸಾದ ರೂಪದಲ್ಲಿ ನಿಂಬೇಹಣ್ಣನ್ನು ಪಡೆದು ಪರಮ ಪಾವನರಾದರು.

Durga3ದೇವಸ್ಥಾನಗಳು ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರಗಳು. ಅಂತಹ ಶ್ರದ್ಧಾಕೇಂದ್ರಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಅಗ್ಗಿಂದ್ದಾಗೆ ನಡೆಯುತ್ತಿದ್ದಾಗಲೇ ನಮ್ಮ ಇಂದಿನ ಜನಾಂಗಕ್ಕೆ ನಮ್ಮ ಧರ್ಮ ಮತ್ತು ದೇವರುಗಳ ಅರ್ಥೈಸಿಕೊಂಡು ನಮ್ಮ ಆಚಾರ ವಿಚಾರಗಳಲ್ಲಿ ಶ್ರದ್ಧಾ ಭಕ್ತಿ ಹೆಚ್ಚಾಗುತ್ತದೆ. ಅಂತಹ ಕಾರ್ಯದಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನಗಳಲ್ಲಿಯೂ ಒಂದಲ್ಲಾ ಒಂದು ವಿಶೇಷ ಸೇವೆಗಳನ್ನು ಮಾಡುತ್ತಿರುವ ನಮ್ಮ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿಯ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯ ಅತ್ಯಂತ ಶ್ಲಾಘನೀಯ, ಅಭಿನಂದನೀಯ ಮತ್ತು ಇತರೇ ದೇವಾಲಯಗಳಿಗೆ ಅನುಕರಣೀಯ.

ಏನಂತೀರೀ?

ಆ ಕರಗ ಮಹೋತ್ಸವದ ಘಲಕ್ ಇದೋ ನಿಮಗಾಗಿ

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s