ಮೊನ್ನೆ ಹೋಳಿ ಹಬ್ಬದ ಸಂದರ್ಭದಲ್ಲಿ ನಮ್ಮ ಆತ್ಮೀಯ ಗೆಳೆಯರಾದ ಸಹಕಾರ ನಗರದ ಐಯ್ಯಂಗಾರ್ ಆಹಾರದ ಶ್ರೀ ವಿಜಯ್ ಹೆರಗು ಅವರು ಹೋಳಿ ಹಬ್ಬದ ಸಮಯದಲ್ಲಿ ತಮ್ಮದ್ದಲ್ಲದ ತಪ್ಪಿಗಾಗಿ ಪೋಲೀಸರ ಕೈಗೆ ಸಿಕ್ಕಿಕೊಂಡು ಪರದಾಡಿದ ತಮ್ಮ ಬಾಲ್ಯದ ಪಜೀತಿಯ ಪ್ರಸಂಗವನ್ನು ಸುಂದರವಾಗಿ ಮುಖಪುಟದಲ್ಲಿ ಬರೆದಿದ್ದರು. ಅದನ್ನು ಓದುತ್ತಿದ್ದಾಗ ಪೋಲೀಸರೊಂದಿಗೆ ವಯಕ್ತಿಕವಾಗಿ ಮತ್ತು ನಮ್ಮ ಗೆಳೆಯರಿಗಾದ ಕೆಲ ಮೋಜಿನ ಸಂಗತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.
ಪೋಲೀಸರೆಂದರೆ ನನಗೆ ಒಂದು ರೀತಿಯ ಪೂಜ್ಯ ಭಾವ. ಅವಿನಾಭಾವ ಸಂಬಂಧ. ಹಗಲಿರಳು ಎನ್ನದಂತೆ ಸದಾಕಾಲವೂ ಎಚ್ಚರದಿಂದಿದ್ದು ನಮ್ಮೆಲ್ಲರನ್ನು ರಕ್ಷಣೆ ಮಾಡುವ ನಿಸ್ವಾರ್ಥ ಜೀವಿಗಳು ಅವರು . ಮತ್ತೊಂದು, ನನ್ನ ಹೆಣ್ಣು ಕೊಟ್ಟ ಮಾವನವರೂ ಸಹಾ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರೇ. ಹಾಗಾಗಿ ಪೋಲೀಸರ ಅಳಿಯನಾದ್ದರಿಂದ ಹೆಣ್ಣು ಕೊಟ್ಟ ಮಾವನವರು ಕಣ್ಣು ಕೊಟ್ಟ ದೇವರಿದ್ದಂತೆ ಎನ್ನುವಂತೆ ಪೋಲೀಸರ ಬಗ್ಗೆ ನನಗೆ ಅಪಾರವಾದ ಗೌರವವಿದ್ದರೂ, ವಯಕ್ತಿಕವಾಗಿ ನನಗೆ ಅನೇಕ ಪೋಲೀಸ್ ಅಧಿಕಾರಿಗಳ ಒಡನಾಟವಿದ್ದರೂ ಈ ಕೆಳಕಂಡ ಪ್ರಸಂಗಗಳ ಕಹಿ ಅನುಭವದಿಂದಾಗಿ ಅದೇಕೋ ಪೋಲೀಸ್ ಠಾಣೆಯೊಳಗೆ ಹೋಗುವುದೆಂದರೆ ನನಗೆ ಒಲ್ಲದ ಮಾತು. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವ ಪರಿಸ್ಥಿತಿ.
ತೊಂಭತ್ತರ ದಶಕದ ಆರಂಭದ ದಿನಗಳು ನಾವೆಲ್ಲಾ ಕಾಲೇಜು ವಿದ್ಯಾರ್ಥಿಗಳು. ಇಂದಿನಂತೆ ಅಷ್ಟೇನೂ ಬಸ್ ಮತ್ತು ಬೈಕ್ ಸೌಲಭ್ಯವಿಲ್ಲದ ಕಾರಣ ನಾವೆಲ್ಲರೂ ಕಾಲೇಜಿಗೆ ಸೈಕಲ್ಲಿನಲ್ಲಿಯೇ ಹೋಗುತ್ತಿದ್ದವು. ಅಂದೊದು ಸಂಜೆ ಕಾಲೇಜು ಮುಗಿಸಿ ಗೆಳೆಯರೆಲ್ಲರೂ ತಂಡೋಪ ತಂಡವಾಗಿ ಸೈಕಲ್ಲಿನಲ್ಲಿ ಮನೆಗೆ ಹಿಂದಿರುಗುತ್ತಿದ್ದೆವು. ಮಾರನೇಯ ದಿನ ಯಾವುದೋ ಸಂಘಟನೆಗಳು ಬಂದ್ ಕರೆ ನೀಡಿದ್ದರಿಂದ ಗೆಳೆಯರೆಲ್ಲರೂ ಕೂಡಿ ಕ್ರಿಕೆಟ್ ಪಂದ್ಯವನ್ನು ಆಡುವುದೆಂದು ತೀರ್ಮಾನಿಸಿ ಅದರ ಬಗ್ಗೆ ಮಾತನಾಡಿಕೊಂಡು ಬರುತ್ತಿದ್ದೆವು. ನಮ್ಮ ಎದುರು ಒಂದು ಪೋಲೀಸ್ ಜೀಪ್ ಮತ್ತು ಅದರ ಹಿಂದೆ ಒಂದು ಟೆಂಪೋ ಹಾದು ಹೋಗಿದ್ದನ್ನು ಗಮನಿಸಿದೆವಾದರೂ ಬಂದ್ ನಿಮಿತ್ತ ಪೋಲೀಸರು ಗಸ್ತು ತಿರುಗುತ್ತಿರಬಹುದೆಂದು ಎಣಿಸಿ ಸುಮ್ಮನೆ ಮನೆಗೆ ತಲುಪಿದ್ದೆವು.
ರಾತ್ರಿ ಸುಮಾರು ಒಂಭತ್ತರ ಆಸುಪಾಸು ನಮ್ಮ ಸಹಪಾಠಿಯೊಬ್ಬನ ತಂದೆಯವರು ನಮ್ಮ ಮನೆಗೆ ಬಂದು ನಮ್ಮ ಮಗನನ್ನೇನಾದರೂ ನೋಡಿದ್ಯಾ? ಬೆಳಿಗ್ಗೆ ಕಾಲೇಜಿಗೆ ಹೋದವನು ಇಷ್ಟು ಹೊತ್ತಾದರೂ ಮನೆಗೆ ಬಂದಿಲ್ಲ. ಯಾವತ್ತೂ ಹೀಗಾಗಿರಲಿಲ್ಲ ಅಂತ ಗೋಳು ತೋಡಿಕೊಂಡರು. ಅರೇ!! ನಾವೆಲ್ಲರೂ ಒಟ್ಟಿಗೇನೇ ಸೈಕಲ್ ಸ್ಟಾಂಡಿನಿಂದ ಹೊರಟೆವು ಅವನ ಗುಂಪು ನಮ್ಮ ಹಿಂದೆಯೇ ಮನೆಯ ಕಡೆ ಬರುತ್ತಿದ್ದರಲ್ಲಾ ಎಂದೆ. ಅವರ ಗುಂಪಿನಲ್ಲಿದ್ದರು ಯಾರು ಯಾರು ಇದ್ದರು? ಎಂದು ಕೇಳಿದಾಗ, ನಾನೂ ಕೂಡಾ ಒಂದಿಬ್ಬರ ಹೆಸರನ್ನು ಹೇಳಿದಾಗ, ಸರಿ ನಿನಗೇನೂ ಅಭ್ಯಂತರವಿಲ್ಲದಿದ್ದರೇ ಅವರ ಮನೆ ಗೊತ್ತಿದ್ದರೆ ಅವರ ಮನೆಗೆ ಹೋಗಿ ಬರೋಣವೇ ಎಂದು ವಿನಂತಿಸಿಕೊಂಡರು. ಇದನೆಲ್ಲಾ ಗಮನಿಸುತ್ತಿದ್ದ ನಮ್ಮ ತಂದೆಯವರೂ ಹುಷಾರು ಜೋಪಾನವಾಗಿ ಹೋಗಿ ಬಾ ಎಂದು ಹೇಳಿದಾಗ ನಾನು ಮತ್ತು ನಮ್ಮ ಸ್ನೇಹಿತನ ತಂದೆ ಮತ್ತದೇ ಸೈಕಲ್ ಏರಿ ಮತ್ತೊಬ್ಬ ಗೆಳೆಯನ ಮನೆಗೆ ಹೋಗಿ ವಿಚಾರಿಸಿದಾಗ, ಆತ ಕೂಡಾ ಮನೆಗೆ ಬಂದಿಲ್ಲದ್ದು ಕೇಳಿ ನಮಗೆ ಮತ್ತಷ್ಟು ಗಾಭರಿಯಾಯಿತು.
ಇಬ್ಬರು ಹುಡುಗರು ನಾಪತ್ತೆಯಾಗಿದ್ದ ಕಾರಣ ಇನ್ನು ತಡ ಮಾಡಬಾರದೆಂದು ನಿರ್ಧರಿಸಿ ಆ ಸ್ನೇಹಿತರ ತಂದೆಯನ್ನೂ ಕರೆದು ಕೊಂಡು ಸೈಕಲ್ಲನ್ನೇರಿ ದೂರದ ಪೋಲಿಸ್ ಠಾಣೆಗೆ ಅಷ್ಟು ಹೊತ್ತಿನಲ್ಲಿ ದೂರನ್ನು ನೀಡಲು ಹೋದೆವು. ಬಹಳ ದುಗುಡ ದುಮ್ಮಾನಗಳಿಂದ ಮಕ್ಕಳು ಕಾಣೆಯಾಗಿದ್ದಾರೆ ಎಂದು ದೂರು ಕೊಡಲು ದೂರದ ಪೋಲೀಸ್ ಠಾಣೆಗೆ ಹೋಗಿ ನೋಡಿದರೆ ನಮಗೆ ಗಾಭರಿ ಆಗುವುದಂದೇ ಬಾಕಿ. ಲಡ್ಡು ಜಾರಿ ಬಾಯಿಗೆ ಬಿತ್ತಾ ಅನ್ನೂ ಜಾಹೀರಾತಿನಂತೆ ನಾವು ಯಾರು ಕಳೆದು ಹೋಗಿದ್ದಾರೆ ಅವರನ್ನು ಹುಡುಕಿಕೊಡಿ ಎಂದು ದೂರು ಕೊಡಲು ಬಂದಿದ್ದೆವೋ ಅವರೆಲ್ಲರೂ ಅಲ್ಲೇ ಸಾಲಾಗಿ ಪೋಲೀಸ್ ಠಾಣೆಯಲ್ಲಿ ಹ್ಯಾಪು ಮೋರೇ ಹಾಕಿಕೊಂಡು ಚಿತ್ರಾನ್ನ ತಿನ್ನುತ್ತಾ ಕುಳಿತಿದ್ದಾರೆ. ನಮ್ಮನ್ನು ನೋಡಿದ ಕೂಡಲೇ ಕೈಯಲ್ಲಿದ್ದ ಚಿತ್ರಾನ್ನದ ಪ್ಯಾಕೇಟನ್ನು ಒಗೆದು ಜೋರಾಗಿ ಅಳುತ್ತಾ ಓಡಿ ಬಂದರು. ಅವರ ಜೊತೇ ಅವರ ಅಷ್ಟೂ ಗುಂಪಿನ ಗೆಳೆಯರೆಲ್ಲರೂ ಅಲ್ಲೇ ಇದ್ದರು. ಇದೇನ್ರೋ ನೀವೆಲ್ಲಾ ಮನೆಗೆ ಬರ್ದೇ ಇಲ್ಲೇನ್ರೋ ಮಾಡ್ತಾ ಇದ್ದೀರೀ ಅಂತಾ ಕೇಳಿದ್ದಕೆ ಅವರು ಹೇಳಿದ ವಿಷಯ ಕೇಳಿ ಎದೆ ಸೀಳಿ ಹೋಗುವುದೊಂದೇ ಬಾಕಿ.
ಸಂಜೆ ಮನೆಗೆ ಬರುವಾಗ ನಮ್ಮ ಕಣ್ಣ ಮುಂದೆಯೇ ಪೋಲೀಸ್ ಜೀಪ್ ಮತ್ತು ಟೆಂಪೋ ಒಂದು ಹಾದು ಹೋಗಿತ್ತು ಎಂದು ಹೇಳಿದ್ದನೆಲ್ಲಾ ಅದೇ ಜೀಪ್ ಸ್ವಲ್ಪ ಮುಂದೆ ಹೋಗಿ ಗಾಡಿ ನಿಲ್ಲಿಸಿ ನಮ್ಮ ಹಿಂದೆ ಬರುತ್ತಿದ್ದ ಈ ಗೆಳೆಯರನ್ನೆಲ್ಲಾ ಸೈಕಲ್ಲಿನಿಂದಾ ನಿಲ್ಲಿಸಿ, ನಮ್ಮ ಸಾಹೇಬರು ಅದೇನೋ ಕಾಲೇಜಿನ ಹುಡುಗರ ಜೊತೆ ಮಾತನಾಡ್ಬೇಕಂತೇ ಅದಕ್ಕೆ ಒಂದು ಐದು ನಿಮಿಷ ಬಂದು ಹೋಗಿ ಅಷ್ಟೇ ಎಂದು ಹೇಳಿ ಅವರನ್ನೆಲ್ಲಾ ಪೋಲೀಸ್ ಜೀಪಿನಲ್ಲಿ ಕೂರಿಸಿಕೊಂಡು ಅವರ ಸೈಕಲ್ಲನ್ನೆಲ್ಲಾ ಹಿಂದಿದ್ದ ಟೆಂಪೂವಿಗೆ ಹಾಕಿಕೊಂಡು ಪೋಲೀಸ್ ಠಾಣೆಗೆ ಕರೆದುಕೊಂಡು ಬಂದು ಹೀಗೆ ಕೂರಿಸಿದ್ದರಂತೆ.
ಹಾಗೆ ಹೀಗೇ ಮಾತನಾಡುತ್ತಾ ಪೋಲೀಸ್ ಠಾಣೆಯ ಸೊಳ್ಳೆಗಳ ಕೈಯಲ್ಲಿ ಕಚ್ಚಿಸಿಕೊಳ್ಳುತ್ತಾ ಎಷ್ಟು ಹೊತ್ತಾದರು ಸಾಹೇಬರು ಬಾರದಿರಲು, ಏನು ಸಾರ್ ಇನ್ನು ಎಷ್ಟು ಹೊತ್ತಾಗತ್ತೇ ಸಾಹೇಬರು ಬರುವುದು? ಈಗಾಗಲೇ ಕತ್ತಲಾಗುತ್ತಿದೆ ಮನೆಯಲ್ಲಿ ಎಲ್ಲರೂ ಗಾಭರಿಯಾಗಿರುತ್ತಾರೆ ಎಂದು ಪರಿ ಪರಿಯಾಗಿ ಬೇಡಿಕೊಂಡರೂ, ಇವರ ಆರ್ತನಾದವನ್ನು ಆಲಿಸುವವರೇ ಇಲ್ಲ. ಆಮೇಲೆ ಇವರಿಗೆಲ್ಲಾ ತಿಳಿದ ವಿಷಯವೇನೆಂದರೆ ಬಂದ್ ಹಿಂದಿನ ದಿನ ಮುಂಜಾಗೃತಾ ಕ್ರಮವಾಗಿ ಕೆಲವೊಂದು ರೌಡೀ ಷೀಟರ್ಗಳನ್ನು ಬಂಧಿಸಿಟ್ಟುಕೊಳ್ಳುವುದು ವಾಡಿಕೆ. ಹಾಗೆ ಅವರಿಗೆ ಯಾವ ರೌಡೀ ಷೀಟರ್ಗಳೂ ಸಿಗದಿದ್ದ ಕಾರಣ ಲೆಕ್ಕಕ್ಕಿರಲಿ ಎಂದು ನಮ್ಮ ಅಮಾಯಕ ಗೆಳೆಯರನ್ನು ಠಾಣೆಯಲ್ಲಿ ಬಂಧಿಸಿಟ್ಟು ಕೊಂಡಿದ್ದರು. ಆವರ ಪುಣ್ಯಕ್ಕೆ ಲಾಕಪ್ಪಿನೊಳಗೆ ಹಾಕದೇ ಸುಮ್ಮನೆ ಅಲ್ಲೇ ಇದ್ದ ಮರದ ಬೆಂಚಿನ ಮೇಲೆ ಕೂರಿಸಿದ್ದರು. ಫೋಷಕರು ಬಂದಿದ್ದ ಕಾರಣ ವಿಧಿ ಇಲ್ಲದೇ ತಮ್ಮದೇನೂ ತಪ್ಪಿಲ್ಲದಿದ್ದರೂ ಪೋಲೀಸರು ಹೇಳಿದಂತೆ ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟು ಎಲ್ಲರನ್ನೂ ಬಿಡಿಸಿಕೊಂಡು ಮನೆಗೆ ಬರುವಷ್ಟರಲ್ಲಿ ಗಂಟೆ ಹನ್ನೊಂದಾಗಿತ್ತು.
ಮತ್ತೊಮ್ಮೆ ಅಯೋಧ್ಯೆ ರಾಮಜನ್ಮ ಭೂಮಿ ಸಂದರ್ಭದಲ್ಲಿ ದೇಶಾದ್ಯಂತ ನಾನಾ ರೀತಿಯ ಪ್ರತಿಭಟನೆಗಳು ಆಗುತ್ತಿದ್ದ ಸಂದರ್ಭದಲ್ಲಿ ಇದೇ ರೀತಿ ಬಂದ ಪೋಲಿಸರು ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಮ್ಮ ಗೆಳೆಯರನ್ನು ತಮ್ಮ ಜೀಪಿನಲ್ಲಿ ಕೂರಿಸಿಕೊಂಡು ಕಬ್ಬನ್ ಪಾರ್ಕ್ ಪೋಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಎಲ್ಲರ ಹೆಸರು, ವಯಸ್ಸು ಮತ್ತು ವಿಳಾಸವನ್ನು ತೆಗೆದುಕೊಂಡು ಚಿಕ್ಕ ವಯಸ್ಸಿನ ಮಕ್ಕಳು ಹೀಗೆಲ್ಲಾ ಪ್ರತಿಭಟನೆಯಲ್ಲಿ ಭಾಗವಹಿಸ ಬಾರದು ಎಂದು ಎಚ್ಚರಿಕೆ ನೀಡಿ ಮನೆಗೆ ಹೋಗಿ ಎಂದು ಕಳುಹಿಸಿದ್ದರು. ಎಲ್ಲರೂ ವಿದ್ಯಾರ್ಥಿಗಳಾಗಿದ್ದರಿಂದ ಯಾರ ಬಳಿಯಲ್ಲೂ ಬಸ್ ಛಾರ್ಜ್ ಇರದಿದ್ದ ಕಾರಣ, ಅಲ್ಲಿಂದ ಎಲ್ಲರೂ ಪ್ರತಿಭಟನೆಗೆ ಕರೆದು ಕೊಂಡು ಹೋಗಿದ್ದವರನ್ನೂ ಮತ್ತು ಪೋಲೀಸರಿಗೂ ಹಿಡಿ ಶಾಪ ಹಾಕುತ್ತಾ ಕಾಲ್ನಡಿಗೆಯಲ್ಲಿಯೇ ಅಲ್ಲಿಂದ ಮನೆಗೆ ಬಂದು ತಲುಪುವಾಗ ತಡ ರಾತ್ರಿಯಾದ ಕಾರಣ ಅವರೆಲ್ಲರ ಮನೆಗಳಲ್ಲಿಯೂ ಭಯದ ವಾತಾವರಣ ಮೂಡಿಸಿತ್ತು.
ನಮ್ಮ ಬಡಾವಣೆಯಲ್ಲಿ ಗಣೇಶೋತ್ಸವವನ್ನು ಬಹಳ ವರ್ಷಗಳಿಂದ ಅತ್ಯಂತ ವಿಜೃಂಭಣೆಯಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಎರಡು ದಿನಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಮೂರನೇ ದಿನ ಬಡವಣೆಯಲ್ಲಿ ಅದ್ದೂರಿಯ ಮೆರೆವಣಿಗೆಯ ನಂತರ ವಿಸರ್ಜನೆ ಮಾಡುವುದು ನದೆದುಕೊಂಡು ಬಂದಿರುವ ಸಂಪ್ರದಾಯ. ಹಾಗೆ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮತ್ತು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲು ಪೋಲೀಸರ ಅನುಮತಿ ಅತ್ಯಗತ್ಯವಾಗಿರುತ್ತದೆ. ಈ ರೀತಿಯ ಅನುಮತಿ ಪತ್ರವನ್ನು ನಾನೇ ಖುದ್ದಾ ಗಿ ಬಹಳಷ್ಟು ಸಲಾ ಬರೆದುಕೊಟ್ಟಿದ್ದೆ. ಅದೇ ರೀತಿ ಪತ್ರವನ್ನು ಸಿದ್ದ ಪಡಿಸಿದ್ದೆ ನಮ್ಮ ಮನೆ ಪೋಲೀಸ್ ಠಾಣೆಯ ಹತ್ತಿರವೇ ಇದ್ದದ್ದರಿಂದ ನೀನೇ ಏಕೆ ಪೋಲಿಸ್ ಠಾಣೆಗೆ ಆ ಪತ್ರವನ್ನು ಕೊಟ್ಟು ಬರಬಾರದು? ಎಂದು ನಮ್ಮ ಗಣೇಶೋತ್ಸವದ ಸಂಘಟಕರೊಬ್ಬರು ಕೇಳಿದಾಗ ಒಲ್ಲದ ಮನಸ್ಸಿನಿಂದಲೇ, ಒಪ್ಪಿ ಕೊಂಡು ಪೋಲೀಸ್ ಠಾಣೆಗೆ ಪತ್ರದೊಡನೆ ಹೋದಾಗ ಅಲ್ಲಿದ್ದ ರೈಟರ್ ಒಬ್ಬರು ಪತ್ರವನ್ನು ತೆಗೆದುಕೊಂಡು ನನ್ನ ಮೊಬೈಲ್ ನಂಬರ್ ಬರೆದು ಕೊಂಡು ಸಾಹೇಬರು ಬಂದಾಗ ಕರೆಯುತ್ತೇನೆ. ಅವರೊಡನೆ ಮಾತನಾಡಿದ ನಂತರ ಅನುಮತಿ ಪತ್ರ ಕೊಡುತ್ತೇನೆ ಎಂದಾಗ ಸರಿ ಎಂದು ಹೇಳಿ ಇದರ ಪ್ರಕ್ರಿಯೆ ಇಷ್ಟೇನಾ? ಇದಕ್ಕೆ ನಾನು ಇಷ್ಟೊಂದು ಹೆದರಿದ್ದೆನಾ ಎಂದು ಮನಸ್ಸಿನಲ್ಲಿಯೇ ಹೇಳಿ ಕೊಂಡು ಬಂದಿದ್ದೆ.
ಆದರೆ ಅದು ಕೇವಲ ಟ್ರೈಲರ್, ಪಿಕ್ವರ್ ಅಭಿ ಬಾಕಿ ಹೈ ಮೇರಾ ದೋಸ್ತ್ ಎನ್ನುವಂತೆ ಅಲ್ಲಿಂದಲೇ ಟಾರ್ಚರ್ ಶುರುವಾಗಿದ್ದು. ಮಾರನೇಯ ದಿನ ಆಫೀಸಿಗೆ ಹೋಗಿದ್ದಾಗ ಸಾರ್, ಸ್ಟೇಷನ್ ಕಡೆ ಬಂದು ಹೋಗಿ ಸಾರ್ ಕರಿತಿದ್ದಾರೆ ಎಂದರು. ಸಾರ್ ನಾನು ಆಫೀಸಿನಲ್ಲಿ ಇದ್ದೇನೆ ಸಂಜೆ ಬರ್ತೀನಿ ಎಂದು ಹೇಳಿ ಸಂಜೆ ಸ್ಟೇಶನ್ನಿಗೆ ಹೋದ್ರೇ, ಸಾಹೇಬರು ಇಷ್ಟು ಹೊತ್ತು ಇದ್ರೂ ಸಾರ್! ಈಗ ಎಲ್ಲೋ ರೌಂಡ್ಸ್ ಗೆ ಹೋಗಿದ್ದಾರೆ. ಕೂತ್ಕೊಳ್ಳಿ ಬಂದು ಬಿಡ್ತಾರೆ ಅಂದ್ರು. ಸುಮ್ಮನೆ ಅಲ್ಲೇ ಕೂತ್ಕೊಂಡಿದ್ರೇ, ಸ್ತೇಷನ್ನಿಗೆ ಹೋಗೋ ಬರೋವ್ರೆಲ್ಲಾನೂ ಒಂದು ತರಾ ಅನುಮಾನವಾಗಿ ನನ್ನನ್ನೇ ನೋಡಿ ಕೊಂಡು ಹೋಗ್ತಾ ಇದ್ದದ್ದು ನನಗೆ ಮುಜುಗರವೆನಿಸಿ ಒಂದೆರಡು ಗಂಟೆಗಳಾದ್ರು ಸಾಹೇಬ್ರು ಬಾರದಿದ್ದ ಕಾರಣ, ಸಾಹೇಬ್ರಿಗೆ ಹೇಳಿ ಬಿಡಿ ಇಷ್ಟು ಹೊತ್ತು ಕಾದಿದ್ದೆ ಎಂದು ಹೇಳಿ ಅಲ್ಲಿಂದ ಹೊರಬಿದಿದ್ದೆ. ಏನ್ ಸಾರ್ ಹಾಗೇ ಹೋಗ್ತಾ ಇದ್ದೀರಾ? ನಮ್ಮನ್ನೇನು ನೋಡ್ಕೊಳಲ್ವಾ ಎಂದ್ರು? ಸಾರ್!! ಇದು ಸಾರ್ವಜನಿಕ ಗಣೇಶೋತ್ಸವ ಎಲ್ಲರಿಂದ ಚಂದಾ ಎತ್ತಿ ಉತ್ಸವ ಮಾಡ್ತಾ ಇದ್ದೀವಿ. ಇನ್ನೂ ನೀವೇ ದೇವರ ಮೇಲಿನ ಭಕ್ತಿಯಿಂದ ಏನಾದ್ರೂ ಕೊಡ್ಬೇಕಷ್ಟೇ ಎಂದು ಖಾರವಾಗಿ ಹೇಳಿ ಹೊರ ಬಂದಿದ್ದೆ.
ಮಾರನೆ ದಿನ ಮತ್ತೆ ಕರೆ ಮಾಡಿ ಸಾರ್!! ಇದಕ್ಕೆಲ್ಲಾ ನಮ್ಮ ಸ್ತೇಷನ್ನಿನಿಂದ ಪರ್ಮಿಶನ್ ಕೊಡಲ್ವಂತೆ ಸಾರ್! ನೀವು ಕಮಿಷನರ್ ಆಫೀಸಿಗೆ ಹೋಗಿ ಅಲ್ಲಿಂದಲೇ ಪರ್ಮೀಷನ್ ತೆಗೆದುಕೊಳ್ಬೇಕಂತೇ ಅಂದಾಗ, ಓಹೋ, ನೆನ್ನೆ ಅವರನ್ನು ಸರಿಯಾಗಿ ನೋಡಿ ಕೊಳ್ಳದೇ ಹೋದ ಪರಿಣಾಮ ಎಂದು ತಿಳಿದು ಸರಿ ಸಾರ್ ಹಾಗೇ ಆಗಲಿ ಎಂದೆ ಅಮೇಲೇ ಅಲ್ಲಿಂದ ಎಷ್ಟು ಕರೆ ಬಂದ್ರು ಉತ್ತರಿಸುವ ಗೋಜಿಗೇ ಹೋಗಲಿಲ್ಲ ಹೇಗೂ ನಾವು ಅನುಮತಿ ಕೋರಿ ಪತ್ರ ಕೊಟ್ಟಾಗಿದೆ. ಇದು ಸಾರ್ವಜನಿಕ ಉತ್ಸವ ನನ್ನ ಮನೆಯದ್ದಲ್ಲ ಎಂದು ಎಂದು ನನಗಷ್ಟೇ ಹೇಳಿಕೊಂಡು ಸುಮ್ಮನಾಗಿಬಿಟ್ಟೆ. ಅಮೇಲೆ ಸಂಘಟಕರು ಸ್ಧಳೀಯ ನಗರಪಾಲಿಕೆ ಸದಸ್ಯರ ಸಹಾಯದಿಂದ ಅಗತ್ಯವಾದ ಅನುಮತಿಯನ್ನು ಪೋಲೀಸರಿಗೆ ನೀಡಬೇಕಾಗಿದ್ದ ಕಪ್ಪವನ್ನು ಸಲ್ಲಿಸಿ ಪಡೆದು ಕೊಂಡರು. ಅಂದಿನಿಂದ ಇನ್ನು ಯಾವತ್ತೂ ಅನಿವಾರ್ಯದ ಹೊರತಾಗಿ ಪೋಲೀಸ್ ಸ್ಟೇಷನ್ನಿಗ ಒಳಗೆ ಕಾಲು ಇಡಬಾರದು ಎಂದು ತೀರ್ಮಾನಿಸಿ ಬಿಟ್ಟೆ.
ಒಂದು ಸಲಾ ಪೋಲೀಸ್ ಸ್ಟೇಷನ್ನಿನ ಮೆಟ್ಟಲು ತುಳಿದ್ರೇ, ಒಂದಲ್ಲಾ ಒಂದು ಕಾರಣಕ್ಕೇ ಮತ್ತೆ ಮತ್ತೇ ಹೋಗಲೇ ಇರ್ಬೇಕಾಗತ್ತೇ ಅಂತಾ ಆಗಲೇ ಗೊತ್ತಾಯ್ತು ಇದಕ್ಕೇ ಇರಬೇಕು ಕಳ್ಳರು ಪೋಲಿಸ್ ಸ್ತೇಷನನ್ನು ಆಗ್ಗಿಂದ್ದಾಗ್ಗೆ ಹೋಗುವ ಮಾವನ ಮನೆ ಅನ್ನೋದು.
ಏನಂತೀರೀ?
ಹಾಗದರೆ ಪೋಲಿಸರು ಜನುಮ ಜನುಮಗಳು ಸ್ಟೇಷನ್ ಮೆಟ್ಟಿಲುಗಳ ಹತ್ತುವರು ಅನ್ನಿ ….
LikeLiked by 2 people