ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿಯಾಗಿದೆ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಸುಮಾರು 400-500 ಮನೆಗಳಿರುವ ಅಂದಾಜಿನ ಪ್ರಕಾರ 3000 ಜನರು ವಾಸಿಸುತ್ತಿರುವ ಈ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ ದೇವಿ ಗ್ರಾಮ ದೇವತೆಯಾಗಿದೆ. ಪ್ರತೀ ವರ್ಷ ಚೈತ್ರಮಾಸದಲ್ಲಿ ಬಹಳ ವಿಜೃಂಭಣೆಯಿಂದ ಸುಮಾರು ಎರಡು ವಾರಗಳ ಕಾಲ ಊರ ಹಬ್ಬ ನಡೆಸಿಕೊಂಡು ಬರುವ ಪದ್ದತಿ ಇದೆ. ಇದರ ಮೂಲ ಹೆಸರು ಬಾಲಕಂಚಿ ಎಂದಿದ್ದು ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ.
ಹೊನ್ನಾದೇವಿ ಮತ್ತು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಗಳನ್ನು ಹೊರತು ಪಡಿಸಿದಲ್ಲಿ ಊರಿನಲ್ಲಿ ಎಲ್ಲರೂ ಭಯ ಭಕ್ತಿಗಳಿಂದ ಪೂಜಿಸುವುದೇ ಹೆಬ್ಬಾರಮ್ಮನಿಗೆ. ಹೆಬ್ಬಾರಮ್ಮ ದೇವಿಯಾದದ್ದೂ ಒಂದು ರೋಚಕವಾದ ಕಥೆಯೇ. ಹಿಂದೆ ಬಾಳಗಂಚಿ ಅಗ್ರಹಾರವೆಂದೇ ಪ್ರಸಿದ್ದವಾಗಿ ಸುಮಾರು ಬ್ರಾಹ್ಮಣರ ಮನೆಗಳು ಇದ್ದವಂತೆ ಅಲ್ಲಿಯ ಗ್ರಾಮದೇವತೆಗೆ ನವಮಾಸ ತುಂಬಿದ ಗರ್ಭಿಣಿಯನ್ನು ಬಲಿಯಾಗಿ ಕೊಡುವ ಪದ್ದತಿ ರೂಢಿಯಲ್ಲಿತ್ತು. ಅದೊಮ್ಮೆ ಊರಿನ ಶಾನುಭೋಗರ ಮನೆಯವರ ಪಾಳಿ ಬಂದಾಗ ಆಕೆಯ ಮನೆಯ ಹೆಣ್ಣುಮಗಳನ್ನು ದೇವಿಗೆ ಬಲಿಕೊಡಲು ಸಿದ್ಧವಾದಾಗ ಅದೊಂದು ಅಗೋಚರ ಶಕ್ತಿಯ ಪ್ರಭಾವದಿಂದಾಗಿ ಭಾರೀ ಪ್ರಕಾಶಮಾನವಾದ ಬೆಳಕೊಂದು ಬೀರಿ ಎಲ್ಲರೂ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಆಕೆ ಅದೃಶ್ಯಳಾಗಿ ಒಂದು ಪದಕವಾಗಿ ಮಾರ್ಪಟ್ಟು ಹೊನ್ನಾದೇವಿಯ ಕೊರಳಲ್ಲಿ ಹಾರವಾಗುತ್ತಾಳೆ. ಅಂದಿನಿಂದ ಊರಿನವರೆಲ್ಲರೂ ಸೇರಿ ಹೊನ್ನಾದೇವಿಗೆ ಯಾವುದೇ ನರ ಬಲಿಯಾಗಲೀ ಪ್ರಾಣಿಬಲಿಯಾಗಲೀ ಕೊಡುವುದನ್ನು ನಿಷೇಧಿಸುತ್ತಾರೆ. ಅದೊಂದು ದಿನ ಹೊನ್ನಾದೇವಿಯ ಅರ್ಚಕರು ಪ್ರಸಾದ ರೂಪದಲ್ಲಿ ದೇವಿಯ ಮೇಲಿನ ಹೂವನ್ನು ಭಕ್ತಾದಿಗಳಿಗೆ ಕೊಡುವ ಸಂದರ್ಭದಲ್ಲಿ ಹೂವಿನ ಜೊತೆ ಈ ಪದಕವನ್ನೂ ಊರಿನ ಹರಿಜನಕೇರಿಯ ಭಕ್ತರೊಬ್ಬರಿಗೆ ಕೊಟ್ಟು ಬಿಡುತ್ತಾರೆ. ಹೀಗೆ ಅಚಾನಕ್ಕಾಗಿ ಹರಿಜನ ಕೇರಿ ಪ್ರವೇಶಿಸಿದ ಆ ಪದಕವನ್ನು ಅವರು ಹಿಂದಿರುಗಿಸಲು ನಿರಾಕರಿಸಿ ತಮ್ಮನ್ನು ಉದ್ಧಾರ ಮಾಡಲು ಹೊನ್ನಾದೇವಿಯೇ ದೇವತೆಯಂತೆ ಈ ರೂಪದಲ್ಲಿ ಬಂದಿರುವಳೆಂದು ಭಾವಿಸಿ ಆಕೆಯನ್ನು ಹೆಬ್ಬಾರಮ್ಮನ ರೂಪದಲ್ಲಿ ಪೂಜಿಸಲಾರಂಭಿಸುತ್ತಾರೆ. ಕಾಲ ಕ್ರಮೇಣ ನಮ್ಮೂರಿನಲ್ಲಿ ಅಸ್ಪೃಶ್ಯತೆಯ ಪಿಡುಗು ಕಡಿಮೆಯಾಗಿ ಹೊಲೆಯರ ಹಟ್ಟಿ ಎಂದು ಕರೆಯುತ್ತಿದ್ದದ್ದನ್ನು ದೊಡ್ಡ ಕೇರಿ ಎಂದು ಮರುನಾಮಕರಣ ಮಾಡಿ, ವರ್ಷಕ್ಕೊಮ್ಮೆ ಊರ ಹಬ್ಬದ ಸಮಯದಲ್ಲಿ ಹೆಬ್ಬಾರಮ್ಮನನ್ನು ಹೊತ್ತಿರುವ ಪೂಜಾರಿಗಳು ಶಾನುಭೋಗರ ಮನೆಗಳಿಗೆ ಹೋಗಿ ಮಡಿಲು ತುಂಬಿಸಿಕೊಳ್ಳುತ್ತಾಳೆ. ಹೆಬ್ಬಾರಮ್ಮತಮ್ಮ ಮನೆಗಳಿಗೆ ಬರುವ ಸಮಯದಲ್ಲಿ ಶ್ಯಾನುಭೋಗರ ಮನೆಯವರು ತಮ್ಮ ಮನೆಯ ಹೆಣ್ಣು ಮಗಳಿಗೆ ಸಲ್ಲಬೇಕಾದ ಸಕಲ ಮರ್ಯಾದೆಯೊಂದಿಗೆ, ಸೀರೆ ಮತ್ತು ಕುಪ್ಪಸ ಮತ್ತು ಯಥಾ ಶಕ್ತಿ ದಕ್ಷಿಣೆಯೊಂದಿಗೆ ಹೆಬ್ಬಾರಮ್ಮನಿಗೆ ಮನೆಯ ಹೆಂಗಳೆಯರೆಲ್ಲರೂ ಮಡಿಲು ತುಂಬಿ ಆರತಿ ಬೆಳಗಿ ತಮ್ಮ ಮನೆಯಲ್ಲಿ ಸದಾಕಾಲವು ಸುಭಿಕ್ಷವಾಗಿರಲಿ ಎಂದು ಪುನಃ ಆಕೆಯ ಮಡಿಲಿನಿಂದ ನಾಲ್ಕು ಕಾಳು ಅಕ್ಕಿಯನ್ನು ಪಡೆದು ಕೊಳ್ಳುತ್ತಾರೆ ಎನ್ನುವುದು ಒಂದು ದೃಷ್ಟಾಂತ.
ಅದೇ ರೀತಿ ಮತ್ತೊಂದು ದೃಷ್ಟಾಂತದ ಪ್ರಕಾರ ಸಪ್ತಮಾತೃಕೆಯರಾದ ಹೊನ್ನಾದೇವಿ, ಹೆಬ್ಬಾರಮ್ಮ, ಚಾವಟಿಯಮ್ಮ, ಚೌಡೇಶ್ವರಿ, ಮಾರಿಯಮ್ಮ, ಮಸಣಕಮ್ಮ ಮತ್ತು ಮಣಿಯಮ್ಮ ದೇವತೆಗಳು ಭೂಲೋಕ್ಕೆ ಬಂದು ಅಲ್ಲೊಂದು ಕಡೆ ವಿಶ್ರಾಂತಿ ಪದೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅವರಿಗೆಲ್ಲಾ ಹಸಿವಾಗಿ ಒಬ್ಬೊಬ್ಬರು ಒಂದೊಂದು ಪ್ರದೇಶಕ್ಕೆ ಊಟಕ್ಕೆ ಹೋಗುವುದಾಗಿ ನಿರ್ಧರಿಸಿ, ಬಾಳಗಂಚಿಯ ಅಗ್ರಹಾರದ ಕಡೆಗೆ ಹೊನ್ನಾದೇವಿ ಹೋದರೆ, ಹರಿಜನ ಕೇರಿಯ ಕಡೆಗೆ ಹೆಬ್ಬಾರಮ್ಮ ಮತ್ತು ಚಾವಟಿಯಮ್ಮ ಹೋಗುತ್ತಾರೆ. ಅದೇ ರೀತಿ ಚೌಡೇಶ್ವರಿ ಹಿರೀಸಾವೆಯಲ್ಲಿ ನೆಲೆಸಿದರೆ, ಮಾರಿಯಮ್ಮ ಹೊನ್ನಮಾರನಹಳ್ಳಿ ಗೌಡರ ಹಳ್ಳಿಯಲ್ಲಿ ಮಸಣಕಮ್ಮ(ಆಡು ಭಾಷೆಯಲ್ಲಿ ಮಶ್ಲಕಮ್ಮ) ನೆಲೆಸುತ್ತಾರೆ, ಕಡೆಯದಾಗಿ ಮಣಿಯಮ್ಮ ಮಾತ್ರ ಊರಿನ ಹೊರಗೆ ಉಳಿದು ಕೊಂಡು ಕಾಡಿನಲ್ಲಿ ಅಲ್ಲಿಲ್ಲಿ ಅಲೆದಾಡುತ್ತಾ ಇರುತ್ತಾಳೆ ಎಂಬ ಪ್ರತೀತಿ ಇದೆ. ವರ್ಷಕ್ಕೊಮ್ಮೆ ಊರಿನ ಹಬ್ಬದ ಸಮಯದಲ್ಲಿ ಹಿರೀಸಾವೆ ಚೌಡೇಶ್ವರಿ ಹೊರತು ಪಡಿಸಿ (ನಮ್ಮ ಊರಿನ ಹಬ್ಬದ ಒಂದು ದಿನ ಮುಂಚಿತವಾಗಿ ಆ ಊರಿನಲ್ಲಿ ಸ್ಥಳೀಯವಾಗಿಯೇ ಊರ ಹಬ್ಬವನ್ನು ಆಚರಿಸಲಾಗುತ್ತದೆ) ಉಳಿದೆಲ್ಲಾ ದೇವತೆಗಳನ್ನು ಒಟ್ಟಾಗಿ ಸೇರಿಸಿ ಹತ್ತು ಹದಿನಾರು ಹಳ್ಳಿಗಳ ಜನರ ಸಮ್ಮುಖದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಜಾತಿಯ ಬೇಧಭಾವವಿಲ್ಲದೆ ಅಸ್ಪೃಷ್ಯತೆಯ ತಾರತಮ್ಯತೆ ಇಲ್ಲದೇ ಭಾವೈಕ್ಯದಿಂದ ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುವ ಪದ್ದತಿ ನಮ್ಮೂರಿನಲ್ಲಿ ರೂಢಿಯಲ್ಲಿದೆ.
ನಮ್ಮೂರ ಹಬ್ಬದ ಸಂಪೂರ್ಣ ಮಾಹಿತಿಗಾಗಿ ಈ ಕೆಳಕಂಡ ಲೇಖನಗಳಿಂದ ತಿಳಿಯಬಹುದಾಗಿದೆ.
ಇಂತಹ ಇತಿಹಾಸವುಳ್ಳ ಶ್ರೀ ಹೆಬ್ಬಾರಮ್ಮನ ಗುಡಿ ಬಹಳ ಚಿಕ್ಕದಾಗಿದ್ದು ಶಿಥಿಲಾವಸ್ಥೆಗೆ ತಲುಪಿದ್ದದ್ದನ್ನು ಗಮನಿಸಿ ಊರಿನ ಎಲ್ಲರೂ ಸೇರಿ ಯಥಾಶಕ್ತಿ ಧನ ಸಹಾಯ ಮಾಡಿದ ಪರಿಣಾಮ ವಿಕಾರೀ ಸಂವತ್ಸರದ ಮಾಘ ಮಾಸದಲ್ಲಿ ಹೆಬ್ಬಾರಮ್ಮನ ದೇವಸ್ಥಾನ ಪುನರ್ನಿಮಾಣ ಮಾಡಿ 48 ದಿನಗಳ ಕಾಲದ ಮಂಡಲ ಪೂಜೆಯನ್ನು ಸಾಂಗೋಪಾಂಗವಾಗಿ ಪೂಜಾಕೈಂಕರ್ಯಗಳನ್ನು ಮಾಡಿ ಕೊನೆಯ ದಿನ ಊರಿನ ರಾಜ ಬೀದಿಯಲ್ಲಿ ಅದ್ದೂರಿಯಾಗಿ ಹೊನ್ನಾದೇವಿಯ ಮೆರವಣಿಗೆ ಮಾಡಿ ದೇವಿಯನ್ನು ಗುಡಿ ತುಂಬಿಸಲಾಯಿತು.
ಆ ಮೆರವಣಿಗೆಯ ರಸಕ್ಷಣಗಳನ್ನು ಈ ವೀಡೀಯೋ ಮೂಲಕ ಕಣ್ತುಂಬ ನೋಡಿ ಆನಂದಿಸಿ ಮತ್ತು ದೇವಿಯ ಕೃಪೆಗೆ ಪಾತ್ರರಾಗೋಣ.
ಏನಂತೀರೀ?