ಲೇಖನದ ಶೀರ್ಷಿಕೆ ನೋಡಿ ಶಾಕ್ ಆಯ್ತಾ? ಆಗಿರ್ಲೇ ಬೇಕು. ನನಗೂ ಇದರ ಬಗ್ಗೆ ತಿಳಿದುಕೊಂಡಾಗ ಇದೇ ರೀತಿ ಶಾಕ್ ಆದೆ. ನಮಗೆಲ್ಲ ತಿಳಿದಿರುವಂತೆ ಸ್ವಾಮೀ ವಿವೇಕಾನಂದರ ಆಧ್ಯಾತ್ಮದ ಗುರುಗಳು. ಇಡೀ ಜಗತ್ತಿನವರಿಗೆ ಹಿಂದೂ ಧರ್ಮದವ ಬಗ್ಗೆ ಇದ್ದ ತಾತ್ಸಾರವನ್ನು ಹೋಗಲಾಡಿಸಿ ಅವರ ಮನದಲ್ಲಿ ಹಿಂದೂ ಧರ್ಮದ ಬಗ್ಗೆ ಪೂಜ್ಯ ಭಾವನೆ ಮೂಡಿಸುವುದರಲ್ಲಿ ಶ್ರಮಿಸಿದ ಅಗ್ರಗಣ್ಯರು. ಆದರೆ ಈ ಶೀರ್ಷಿಕೆಯಲ್ಲಿ ಕ್ರಿಕೆಟ್ ಆಟ ಅಂತಾ ಇದೇ? ಎಲ್ಲಿಯ ಬೆಟ್ಟದ ನೆಲ್ಲಿಕಾಯಿ? ಎಲ್ಲಿಯ ಸಮುದ್ರ ಉಪ್ಪು? ಎಲ್ಲಿಂದ ಎಲ್ಲಿಗೆ ಸಂಬಂಧ ಅಂತಾ ಕೇಳಿದ್ರೇ. ಸ್ವಲ್ಪ ಸಮಾಧಾನ ತಗೋಳ್ಳೀ. ನಿಧಾನವಾಗಿ ಎಲ್ಲವನ್ನೂ ತಿಳಿದು ಕೊಳ್ಳೋಣ.
ಬಾಲ್ಯದಲ್ಲಿ ನರೇಂದ್ರ ದತ್ತ ಎಂಬ ನಾಮಾಂಕಿತರಾಗಿ ನಂತರ ರಾಮಕೃಷ್ಣ ಪರಮಹಂಸರಿಂದ ಸನ್ಯಾಸತ್ವ ಸ್ವೀಕರಿಸಿ ಪರಿಪೂರ್ಣ ಆಧ್ಯಾತ್ಮದ ಕಡೆಗೆ ವಾಲುವ ಓದಿನಲ್ಲಿ ಚುರುಕಾಗಿದ್ದಂತೆಯೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸದಾ ಮುಂದಿದ್ದರು. ಸ್ವತಃ ಅತ್ಯುತ್ತಮ ಪುಟ್ಬಾಲ್ ಆಟಗಾರರಾಗಿದ್ದಲ್ಲದೇ ಅತ್ಯುತ್ತಮ ದೇಹದಾಢ್ಯ ಪಟುವಾಗಿದ್ದರು ಜೊತೆಗೆ ಕತ್ತಿವರಸೆ (ಫೆನ್ಸಿಂಗ್)ಯಲ್ಲಿಯೂ ಅವರಿಗೆ ಆಸಕ್ತಿ ಇತ್ತು. ಅದೇ ಸಮಯದಲ್ಲಿ ತಮ್ಮ ಸಹಪಾಠಿಗಳಿಗೆ ಆದರ್ಶ ವ್ಯಕ್ತಿಯಾಗಿದ್ದರು. ಯುವಕರುಗಳು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಹೆಚ್ಚಾಗಿ ದೈಹಿಕ ಚಟುವಟಿಕೆಗಳನ್ನು ಮಾಡಲು ಯುವಕರನ್ನು ಪ್ರೇರೇಪಿಸುತ್ತಿದ್ದಲ್ಲದೇ ಕಾಲೇಜು ದಿನಗಳಲ್ಲಿ ಸಾಕಷ್ಟು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಗಂಟೆ ಗಟ್ಟಲೇ ಗರಡೀ ಮನೆಯ ಅಖಾಡದಲ್ಲಿ ದೇಹದಾಢ್ಯಕ್ಕೆ ಸಮಯವನ್ನು ಕಳೆಯುತ್ತಿದ್ದರು . ಹಾಗಾಗಿ ಅವರು ಕಲ್ಕತ್ತಾದ ಟೌನ್ ಕ್ಲಬ್ನ ಸದಸ್ಯರಾಗಿದ್ದರು ಮತ್ತು ದೈಹಿಕ ಚಟುವಟಿಕೆಗಳಲ್ಲಿ ಉತ್ಸಾಹಭರಿತರಾಗಿದ್ದರು. ಮುಂದೆ ಅದೇ ನರೇಂದ್ರ ದತ್ತ ಸ್ವಾಮಿ ವಿವೇಕಾನಂದರಾದಾಗ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಹಾಗಾಗಿ ಯುವಶಕ್ತಿಗಿಂತ ಮಿಗಿಲಾದುದ್ದು ಯಾವುದು ಇಲ್ಲ. ನನಗೆ 100 ಜನ ಗಟ್ಟಿ ಮುಟ್ಟಾದ ಯುವಕರನ್ನು ಕೊಡಿ ನಾವು ನವಭಾರತವನ್ನು ನಿರ್ಮಾಣ ಮಾಡುತ್ತೇನೆ ಎಂದು ಸದಾ ಕಾಲವೂ ಹೇಳುತ್ತಿದ್ದರು.
ಆಹ್ಟು ಹೊತ್ತಿಗಾಗಲೇ ಭಾರತೀಯರಿಗೆ ಬ್ರಿಟಿಷರು ಕ್ರಿಕೆಟ್ ಆಟದ ರುಚಿಯನ್ನು ಹತ್ತಿಸಿಬಿಟ್ಟ ಕಾರಣ ಎಲ್ಲಾ ಕಡೆಯಲ್ಲೂ ಅನೇಕ ಕ್ರಿಕೆಟ್ ಕ್ಲಬ್ಬುಗಳು ತಲೆಯೆತ್ತಿದ್ದವು. ಇದಕ್ಕೆ ಕಲ್ಕತ್ತಾ ನಗರವೂ ಹೊರತಾಗಿರಲಿಲ್ಲ. 1792 ರಲ್ಲಿ ಬ್ರಿಟಿಷರು ಕಲ್ಕತ್ತಾ ಕ್ರಿಕೆಟ್ ಕ್ಲಬ್ ಎಂಬ ಕ್ಲಬ್ ಸ್ಥಾಪಿಸಿದ್ದರು. ಅದಕ್ಕೆ ಪ್ರತಿಸ್ಪರ್ಧಿಯಂತೆ 1884 ರಲ್ಲಿ ಖ್ಯಾತ ಗಣಿತಶಾಸ್ತ್ರಜ್ಞರಾಗಿದ್ದ ಶ್ರೀ ಶಾರದಾರಂಜನ್ ರೇ ಅವರೊಂದು ಪ್ರಸಿದ್ಧ ಕ್ರಿಕೆಟ್ ಕ್ಲಬ್ ಓಂದನ್ನು ಸ್ಥಾಪಿಸಿ ಅದಕ್ಕೆ ದಿ ಟೌನ್ ಕ್ಲಬ್ ಎಂದು ಹೆಸರಿಸಿ ಬ್ರಿಟಿಷರಿಗೆ ಅವರದೇ ಆಟದಲ್ಲಿ ಕಠಿಣ ಸ್ಪರ್ಧೆ ಒಡ್ಡಲು ಸಜ್ಜಾಗಿದ್ದರು.
ಅದಾಗಲೇ ದಿ ಟೌನ್ ಕ್ಲಬ್ಬಿನ ಸದಸ್ಯರಾಗಿದ್ದ ನರೇಂದ್ರರು ಅದೊಮ್ಮೆ ಅಂದಿನ ಕಾಲದ ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ರೀ ಹೇಮಾ ಚಂದ್ರ ಘೋಷ್ ಅವರನ್ನು ಹೀಗೆಯೇ ಭೇಟಿ ನೀಡಿದಾಗ ಬ್ರಿಟಿಷರ ಹುಟ್ಟನ್ನಡಗಿಸಲು ಅವರದ್ದೇ ಆದ ಕ್ರಿಕೆಟ್ ಆಟದಲ್ಲಿ ಸೋಲಿಸುವ ಸಲುವಾಗಿ ಕ್ರಿಕೆಟ್ ಆಟದತ್ತ ಏಕೆ ಗಮನ ಹರಿಸಬಾರದು ಎಂದು ಸೂಚಿಸಿದರು. ಬ್ರಿಟಿಷರ ವಿರುದ್ಧ ಎಂತಹ ಹೋರಾಟಕ್ಕೂ ಸಿದ್ಧರಾಗಿದ್ದ, ಉತ್ಸಾಹಿ ತರುಣ ನರೇಂದ್ರರು ಸಂತೋಷದಿಂದಲೇ ದಿ ಟೌನ್ ಕ್ಲಬ್ಬಿನ ಕ್ರಿಕೆಟ್ ತಂಡದಲ್ಲಿ ಭಾಗಿಯಾಗಿ ಘೋಷ್ ಅವರ ಪ್ರಾಮಾಣಿಕವಾದ ಮಾರ್ಗದರ್ಶನದಲ್ಲಿ ಪರಿಣಾಮಕಾರಿ ಬೌಲರ್ ಆಗಿ ಪರಿವರ್ತಿತರಾದರು.
ಅಮೀರ್ ಖಾನ್ ಅವರ ಲಗಾನ್ ಚಿತ್ರದಲ್ಲಿ ಬರುವಂತೆಯೇ ಅದೊಂದು ದಿನ ಬ್ರಿಟಿಷ್ ಮತ್ತು ಭಾರತೀಯರ ನಡುವೆ ಕಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಪಂದ್ಯವೊಂದು ನಡೆಯಿತು. ಕಲ್ಕತ್ತಾ ಕ್ರಿಕೆಟ್ ಕ್ಲಬ್ ವಿರುದ್ಧದ ಐತಿಹಾಸಿಕ ಪಂದ್ಯದಲ್ಲಿ ನರೇಂದ್ರರು ಟೌನ್ ಕ್ಲಬ್ ತಂಡದ ಸದಸ್ಯರಾಗಿದ್ದರು. ಆಡುವ ಸಮಯದಲ್ಲಿ, ಹೇಮಾ ಚಂದ್ರ ಘೋಷ್ ನರೇಂದ್ರರನ್ನು ಭಾವನೆಗಳಿಂದ ದೂರವಿಡದಂತೆ ಮತ್ತು ಕೇವಲ ಬೌಲಿಂಗ್ನತ್ತವೇ ಗಮನಹರಿಸದಂತೆ ಸೂಚಿಸಿದರು. ಅದರಂತೆಯೇ ಬೌಲಿಂಗ್ ಮಾಡಲು ಚೆಂಡನ್ನು ಕೈಗೆತ್ತಿಕೊಂಡು ದಿಟ್ಟ ಮನಸ್ಸಿನಿಂದ ಕೆಚ್ಚದೆಯ ಛಲದಿಂದ ನರೇಂದರು ಬೌಲಿಂಗ್ ಮಾಡಲು ಶುರುವಾದಂತೆಯೇ. ಕೆಲವೇ ಕೆಲವು ಸಮಯದಲ್ಲಿ ಒಂದಾದ ಮೇಲೆ ಒಂದರಂತೆ ವಿಕೆಟ್ ಗಳಿಸುತ್ತಾ ಬ್ರಿಟಿಷರ ವಿರುದ್ಧ ಕೇವಲ 20 ರನ್ಗಳನ್ನು ನೀಡಿ ಏಳು ವಿಕೆಟ್ಗಳನ್ನು ಪಡೆದು ಕೊಂಡು ತಂಡಕ್ಕೆ ಭರ್ಜರಿ ಜಯಗಳಿಸುವುದರಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಈ ಮೂಲಕ ಬ್ರಿಟಿಷರ ಸೊಕ್ಕನ್ನು ಮುರಿಯುವುದರಲ್ಲಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದರು. ಇಂದಿಗೂ ಸಹಾ ಕಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಈ ಪಂದ್ಯದ ಕುರಿತಂತೆ ದಾಖಲೆ ದೊರೆಯುತ್ತದೆ.
ಈ ಪಂದ್ಯದ ಕ್ರಿಕೆಟ್ ಆಟದಿಂದ ಇಡೀ ದಿನ ವ್ಯರ್ಥವಾಗಿ ಹೋಗುವ ಕಾರಣ ಚುಟುಕು ಆಟಗಳಾದ ಫುಟ್ಬಾಲ್ ಆಡಿ ಎಂದು ಹೇಳುತ್ತಿದ್ದರು. ನಂತರ ಆಧ್ಯಾತ್ಮದತ್ತ ಅವರ ಚಿತ್ತ ಹರಿದ ಕಾರಣ ಕ್ರೀಡೆಯ ಕಡೆ ಅಷ್ಟೇನೂ ಗಮನ ಹರಿಸದೇ ರಾಮಕೃಷ್ಣರ ಕೃಪಾಶೀರ್ವಾದದಿಂದ ಆಧ್ಯಾತ್ಮಸಾಧನೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡರು. ಈ ದೇಶದ ಸೌಭಾಗ್ಯವೂ ಏನೋ ಅಂದು ಅವರು ಕ್ರೀಡೆಯತ್ತಲೇ ಕೇಂದ್ರೀಕೃತಗೊಂಡಿದ್ದರೆ ನಮ್ಮ ದೇಶಕ್ಕೊಬ್ಬ ಅತ್ಯುತ್ತಮ ಜ್ಞಾನಿ, ದಾರ್ಶನಿಕ, ವೇದಾಂತಿ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಿವೇಕಾನಂದರ ಬರಹಗಳು ಗಾಂಧಿಜೀ, ಸುಭಾಷ್ ಚಂದ್ರ ಬೋಸ್ ಅಲ್ಲದೇ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿತ್ತು. ಅಂತಹ ಶ್ರೇಷ್ಠ ಚಿಂತಕ, ಬೋಧಕ ಮತ್ತು ಮಾನವೀಯತೆಯ ಗುಣವುಳ್ಳ ವ್ಯಕ್ತಿಯೊಬ್ಬನನ್ನಉ ಕಳೆದುಕೊಳ್ಳುತ್ತಿದ್ದೆವು.
ಏನಂತೀರೀ?
ಪೋಟೋಗಳು : ಅಂತರ್ಜಾಲ ಕೃಪೆ