ಎಲೆಮರೆ ಕಾಯಿಗಳು

ನಮಗೆಲ್ಲರಿಗೂ ತಿಳಿದಿರುವಂತೆ ಮಹಾಮಾರಿ ಕೊರೋನ ಚೀನಾದೇಶದಲ್ಲಿ ಆರಂಭವಾಗಿ ಐರೋಪ್ಯ ದೇಶಗಳಲ್ಲಿ ಅಟ್ಟಹಾಸ ಮೆರೆದು ಈಗ ಭಾರತದ ಕಡೆ ತನ್ನ ಕೆನ್ನಾಲಿಗೆ ಬೀರಲು ಸಿದ್ಧವಾಗುತ್ತಿದೆ. ಅದನ್ನು ತಡೆಯಲು ನಮ್ಮ ಸರ್ಕಾರವೂ ಕೂಡ ಏಪ್ರಿಲ್ 15ರ ತನಕ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದೆ. ಹಾಗಾಗಿ ಕೋಟ್ಯಾಂತರ ದಿನಗೂಲಿ ನೌಕರಿಗೆ ಮತ್ತು ಬಡಬಗ್ಗರಿಗೆ ದಿನ ನಿತ್ಯದ ಕೂಳಿಗೆ ತೊಂದರೆಯಾಗುತ್ತಿದ್ದದ್ದನ್ನು ಮನಗಂಡು ಪ್ರಧಾನಿಗಳೂ ಸಹಾ ಕೋಟ್ಯಾಂತರ ರೂಪಾಯಿಗಳ ನೆರವನ್ನು ಘೋಷಿಸಿದ್ದಾರೆ ಮತ್ತು ದೇಶವಾಸಿಗಳಿಂದ ಈ ಮಹತ್ಕಾರ್ಯಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಲು ದೇಣಿಗೆಯನ್ನು ನೀಡಲು ಕೋರಿಕೊಂಡಿದ್ದಾರೆ.

akshay_Tweetಪ್ರಧಾನಿಗಳ ಈ ಕರೆಗೆ ಓಗೊಟ್ಟು ದೇಶ ವಿದೇಶದಲ್ಲಿರುವ ಲಕ್ಷಾಂತರ ಭಾರತೀಯರು, ಉದ್ಯಮಿಗಳು ತಮ್ಮ ಕೈಲಾದ ಮಟ್ಟಿಗಿನ ಸಹಾಯ ಮಾಡುತ್ತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಮಂತ್ರಿ ಪರಿಹಾರ ನಿಧಿಗೆ 25 ಕೋಟಿ ರೂಗಳನ್ನು ದೇಣಿಗೆ ನೀಡುವುದಾಗಿ ಘೋಷಿಸಿ, ಎಲ್ಲರೂ ಒಗ್ಗಟ್ಟಾಗಿ ಕೊರೊನಾ ಸಾಂಕ್ರಾಮಿಕ ವೈರಸ್ ವಿರುದ್ಧ ಹೋರಾಡಲು ಕರೆ ನೀಡಿದ್ದರೆ. ಅಕ್ಷಯ್ ಕುಮಾರ್ ಅವರ ಈ ಹೇಳಿಕೆಯನ್ನು ನೋಡಿದ ತಕ್ಷಣವೇ ಆತನ ಮಡದಿ ಟ್ವಿಂಕಲ್ ಖನ್ನಾ ಸಹಜವಾಗಿ ಪ್ರತಿಕ್ರಯಿಸಿ, ನಾನು ಶ್ರೀಮತಿ ಅಕ್ಷಯ್ ಕುಮಾರ್ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಆತ ಇಷ್ಟು ದೊಡ್ಡ ಮೊತ್ತವನ್ನು ದೇಣಿಗೆ ನೀಡುತ್ತೇನೆ ಎಂದು ಹೇಳಿದಾಗ, ಖಂಡಿತವಾಗಿಯೂ ಇಷ್ಟೊಂದು ಮೊತ್ತವನ್ನು ನೀಡುತ್ತಿರುವೆಯಾ? ಇಷ್ಟೊಂದು ಹಣವನ್ನು ನೀಡಿದಲ್ಲಿ ನಾವೇ ದೀವಾಳಿಯಂಚಿಗೆ ಸಿಲಕ ಬಹುದೆ? ಎಂದು ಎಚ್ಚರಿಸಿದಾಗ ಆತ ಹೇಳಿದ ಈ ಮಾತು ನನ್ನ ಮನಸ್ಸು ತುಂಬಿ ಬಂತು. ನಾನು ಚಲನ ಚಿತ್ರರಂಗಕ್ಕೆ ಬಂದಾಗ ನನ್ನ ಬಳಿ ಏನೂ ಇರಲಿಲ್ಲ. ಇದೇ ಜನರ ಅಭಿಮಾನದಿಂದಾಗಿ ಸದ್ಯ ಈ ರೀತಿಯ ಸ್ಥಾನಮಾನ ಗಳಿಸಿದ್ದೇನೆ. ಈಗ ಅದೇ ಜನ ಸಂಕಷ್ಟದಲ್ಲಿರುವಾಗ ಅವರಿಂದ ಗಳಿಸಿದ್ದನ್ನು ಅವರಿಗೇ ಹಿಂದಿರಿಗಿರುಸುವು ನಮ್ಮ ಕರ್ತವ್ಯವಲ್ಲವೇ?

ಇದೇ ರೀತಿ ರಜನೀಕಾಂತ್, ಅಮಿತಾಭ್ ಬಚ್ಚನ್, ತೆಲುಗು ಸಿನಿಮಾದ ಅನೇಕ ನಟರುಗಳು ತಮ್ಮ ಕೈಯ್ಯಲ್ಲಾದ ಮಟ್ಟಿಗೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಕೊಟ್ಟಿದ್ದಾರೆ ಅದೇ ರೀತಿ ಕ್ರಿಕೆಟ್ ಆಟಗಾರರಾದ ಸಚಿನ್, ದೋನಿ ಮತ್ತು ರೈನಾ ಅವರು ಕೊಡಾ ದೇಣಿಗೆ ನೀಡಿದ್ದಾರೆ.

ಇವರೆಲ್ಲಾ ಸೆಲೆಬ್ರಿಟಿಗಳು. ಅವರೆಲ್ಲರ ಆದಾಯ ತುಂಬಾನೇ ಹೆಚ್ಚಾಗಿದೆ. ಆದ್ರೆ ನಾನಿಂದು ನಿಮಗೆ ಪರಿಚಯ ಮಾಡಿಸ್ತಾ ಇರೋದು ಬಲಗೈಯಲ್ಲಿ ಕೊಟ್ಟದ್ದನ್ನು ಎಡಗೈಯ್ಯಿಗೆ ತಿಳಿಯಬಾರದು ಅಂತಾ ಎಚ್ಚರ ವಹಿಸಿರುವವರು. ತಮ್ಮ ಆಶ್ರಯದಾತೆಯಾದ ಆತ್ಮೀಯ ಗೆಳತಿ ಮತ್ತು ಸಹೋದ್ಯೋಗಿಯಾಗಿದ್ದವರನ್ನು ಕಡೆಯವರೆಗೂ ಮಗುವಿನಂತೆ ಪೋಷಿಸಿದಾಕೆ . ಅಂತಹ ಎಲೆಮರೆ ಕಾಯಿಯ ಹೆಸರೇ ಜಯಲಕ್ಷ್ಮಿ.

ಸುಮ್ಮನೆ ಜಯಲಕ್ಷ್ಮೀ ಅಂದರೆ ಹೆಚ್ಚಿನ ಜನರಿಗೆ ಗೊತ್ತಾಗುವುದಿಲ್ಲ. ರಾಜನ್-ನಾಗೇಂದ್ರ, ಶಂಕರ್-ಜೈಕಿಶನ್, ದೊರೈ-ಭಗವಾನ್ ಜೋಡಿಯಂತೆ ಶಾರದ-ಜಯಲಕ್ಷ್ಮೀ ಅಂದರೆನೇ ಬಹಳಷ್ಟು ಜನರಿಗೆ ತಿಳಿಯುವುದು. ಏಕೆಂದರೆ ಆವರಿಬ್ಬರದ್ದೂ ಅಷ್ಟೊಂದು ಅನ್ಯೋನ್ಯ ಜೋಡಿ. ಎರಡು ದೇಹ ಒಂದೇ ಜೀವ ಅನ್ನುವ ರೀತಿ. ಶಾರದಾ ಮತ್ತು ಜಯಲಕ್ಷ್ಮಿ ಇಬ್ಬರೂ ಶಿಕ್ಷಕಿಯರಾಗಿ ಸರ್ಕಾರೀ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತೆಯರಾಗಿದ್ದರು. ಅದೊಂದು ದಿನ ಜಯಲಕ್ಷ್ಮಿಯಾರು ತುಂಬಾ ಬೇಸರದಲ್ಲಿದ್ದು ತರಗತಿ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ ಮತ್ತು ಬಹಳ ದುಃಖಿತಳಾಗಿ ಅಳುತ್ತಿದ್ದನ್ನು ಕಂಡ ಶಾರದಾರವರು ಈ ರೀತಿಯ ದುಃಖಕ್ಕೆ ಕಾರಣವೇನು ಎಂದು ಕೇಳಿದರು. ಇನ್ನೂ ಮದುವೆಯಾಗಿರದಿದ್ದ ಜಯಲಕ್ಷ್ಮಿಯವರು ಅ ಹಿಂದಿನ ಸಂಜೆ ಸ್ವಲ್ಪ ತಡವಾಗಿ ಅವರ ಮನೆಗೆ ಹೋಗಿದ್ದಾರೆ. ಆಕೆ ಸಂಜೆ ಮನೆಗೆ ಸ್ವಲ್ಪ ತಡವಾಗಿ ಮನೆಗೆ ಬಂದಿದ್ದನ್ನು ಆಕೆಯ ಅಣ್ಣನ ಹೆಂಡತಿ ಅತ್ತಿಗೆ ಪ್ರಶ್ನಿಸಿದ್ದಲ್ಲದೇ ಆಕೆಯ ಅಣ್ಣನ ಬಳಿ ಇಲ್ಲ ಸಲ್ಲದ ರೀತಿಯಲ್ಲಿ ಚಾಡಿ ಹೇಳಿದ್ದು, ಹೆಂಡತಿಯ ಮಾತು ಕೇಳಿ ಆವರ ಅಣ್ಣ ಸ್ವಲ್ಪ ಅನಾಗರೀಕ ರೀತಿಯಲ್ಲಿ ನಡೆದುಕೊಂಡದ್ದು ಜಯಲಕ್ಷ್ಮೀ ಅವರ ಮನಸ್ಸನ್ನು ಬಹಳವಾಗಿ ನೋಯಿಸಿದ್ದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ತಾಯಿ ಇಲ್ಲದ ತನ್ನ ಗೆಳತಿಯನ್ನು ಆಕೆಯ ಅಣ್ಣಾ ಅತ್ತಿಗೆ ಈ ರೀತಿಯಾಗಿ ಬೇಸರ ಪಡಿಸಿದ್ದದ್ದನ್ನು ಜೀರ್ಣಿಸಿಕೊಳ್ಳದ ಶಾರದಾ ಅವರು ಇನ್ನು ಮುಂದೆ ನೀನು ನಿನ್ನ ಸಹೋದರನ ಮನೆಯಲ್ಲಿ ಇರಬೇಡ ಎಂದು ಹೇಳಿ ಜಯಲಕ್ಷ್ಮೀ ಅವರನ್ನು ವೈಯ್ಯಾಳೀಕಾವಲ್ ನಲ್ಲಿ ಇರುವ ತಮ್ಮ ಮನೆಗೆ ಕರೆದುಕೊಂಡು ಹೋಗಿ ತಮ್ಮ ತಾಯಿ ಶಂಕರಮ್ಮನವರಿಗೆ ಪರಿಚಯಿಸಿ ಅಂದಿನಿಂದ ಆ ಮನೆಯಲ್ಲಿ ಆ ಮೂವರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು ಮತ್ತು ಕಡೆಯ ತನಕ ಅವಿವಾಹಿತರಾಗಿಯೇ ಉಳಿಯಲು ನಿರ್ಧರಿಸಿದರು.

jayalakshmi
ಪೋಟೋದಲ್ಲಿ ಇರುವವರು ಶಾರದಅವರು. ಚೆಕ್ ಹಿಡಿದುಕೊಂಡು ಇರುವವರು ಜಯಲಕ್ಷ್ಮೀ ಅವರು

ಶಾರದಾ ಮತ್ತು ಜಯಲಕ್ಷ್ಮೀ ಅವರಿಬ್ಬರದ್ದೂ ವಿಭಿನ್ನ ವ್ಯಕ್ತಿತ್ವ. ಶಾರದಾರವರು ಅತ್ಯಂತ ಕಠಿಣ ಮಹಿಳೆ. ಆಕೆ ಗಣಿತ ಶಿಕ್ಷಕಿ, ಅತ್ಯುತ್ತಮ ಈಜುಗಾರ್ತಿ, ಚಾರಣಿಗ, ಯೋಗ ಪಟು, ಕಬಡ್ಡಿ ಆಟಗಾರ್ತಿ, ಕರಾಟೆ ಆಟಗಾರ್ತಿ, ಆಗಾಗ ಸೈಕಲ್ ಸವಾರಿಯನ್ನೂ ಮಾಡುತ್ತಿದ್ದರು. ಆ ಕಾಲದಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದ ವಿಕ್ಕಿ ಎಂಬ ಮಿನಿ ಬೈಕ್ ಮತ್ತು ಬಜಾಜ್ ಚೇತಕ್ ಸ್ಕೂಟರ್ ಓಡಿಸುತ್ತಿದ್ದ ದಿಟ್ಟ ಮಹಿಳೆ.  ನಂತರ ವಿಶ್ವ ಅಥ್ಲೆಟಿಕ್ಸ್ನಲ್ಲಿ ಹಲವಾರು ಚಿನ್ನದ ಪದಕಗಳನ್ನೂ ಗೆದ್ದಿದ್ದರು. ಇನ್ನು ಜಯಲಕ್ಷ್ಮೀ ಅತ್ಯಂತ ಮೃದು ಹೆಂಗಸು. ಉತ್ತಮ ಸಂಗೀತಗಾರ್ತಿ. ಸುಶ್ರಾವ್ಯಾದ ಹಾಡುಗಾರ್ತಿ. ಹೆಸರಾಂತ ಗಮಕಿಗಳಾಗಿದ್ದ ಮತ್ತು ಗಮಕ ರೂಪಕಗಳಿಗೆ ಖ್ಯಾತರಾಗಿದ್ದ ಶ್ರೀಯುತ ರಾಮರಾಧ್ಯರ ಪರಮಾಪ್ತ ಶಿಷ್ಯೆಯರಲ್ಲಿ ಒಬ್ಬರು. ಈಗಾಗಲೇ ನೂರಾರು ಜನರಿಗೆ ಸಂಗೀತವನ್ನು ಹೇಳಿಕೊಟ್ಟಿರುವಾಕೆ.

ಅಷ್ಟೆಲ್ಲಾ ಕಠಿಣವಾದ ಮಹಿಳೆಯಾಗಿದ್ದ ಶಾರದಾರವರು ತಮ್ಮ ಇಳಿವಯಸ್ಸಿನಲ್ಲಿ ವಾತರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಾಗ, ಜಯಲಕ್ಶ್ಮಿಅವರೇ ಅವರನ್ನು ತನ್ನ ಒಡ ಹುಟ್ಟಿದ ಸಹೋದರಿಯಂತೆ ಪುಟ್ಟ ಮಗುವಿನಂತೆ ಆಕೆ ಕಾಲವಾಗುವವರೆಗೂ ನೋಡಿಕೊಂಡರು. ಆಕೆ ಕಾಲವಾದ ನಂತರ ಅವರು ವಾಸಿಸುತ್ತಿದ್ದ ಆ ದೊಡ್ಡ ಮನೆಯನ್ನು ವಿಶ್ವಹಿಂದೂ ಪರಿಷತ್ತಿಗೆ ದಾನ ಮಾಡಿದ್ದಲ್ಲದೇ ತಮ್ಮ ಆದಾಯದಲ್ಲಿ ಉಳಿಸಿದ್ದ ಹಣದಿಂದಲೇ ವಿಧುರಾಶ್ವತ ದೇವಾಲಯದ ಬಳಿ ಭಕ್ತಾದಿಗಳಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ.

Jaya_chequeಜಾನ್ ಎಫ್ ಕೆನಡಿ ಅವರ ಪ್ರಸಿದ್ಧ ಹೇಳಿಕೆಯಂತೆ ನಿಮ್ಮ ದೇಶವು ನಿಮಗಾಗಿ ಏನು ಮಾಡಬಹುದೆಂದು ಕೇಳಬೇಡಿ, ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದು ? ಎಂದು ತಿಳಿಸಿ ಎಂಬಂತೆ, ಜಯಲಕ್ಷ್ಮೀಅವರು ತಮ್ಮ ಉಳಿತಾಯದ ಹಣದಿಂದ ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ನೆನ್ನೆ ದೇಣಿಗೆ ನೀಡಿದ್ದಾರೆ.

ಹೌದು ನಿಜ. ಉದ್ಯಮಿಗಳು, ಚಲನಚಿತ್ರ ನಟ-ನಟಿಯರು, ಕ್ರಿಕೆಟ್ ಆಟಗಾರರು ನೀಡಿರುವ ಮೊತ್ತಕ್ಕೆ ಹೋಲಿಸಿದರೆ ಎಂಭತ್ತರ ಆಸುಪಾಸಿನಲ್ಲಿರುವ ಜಯಲಕ್ಷ್ಮೀಯವರ ದೇಣಿಗೆ ಸಣ್ಣದಾಗಿ ಕಾಣಬಹುದು. ಆದರೆ ಆ ಮೊತ್ತದ ಹಿಂದಿರುವ ಆಕೆಯ ಪರಿಶ್ರಮ, ತನ್ನ ಇಳಿ ವಯಸ್ಸಿಗೆ ನೆರವಾಗಲೀ ಎಂದು ತನ್ನ ನಿವೃತ್ತ ವೇತನದಲ್ಲಿ ಸಂಗ್ರಹಿಸಿಟ್ಟಿದ್ದ ಹಣವನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆನ್ನುವ ಆಕೆಯ ಮನೋಭಾವವನ್ನು ನೋಡಿದರೆ ಆಕೆ ಕೊಟ್ಟ ಹಣ ಯಾವರೀತಿಯಲ್ಲೂ ಸಣ್ಣ ಮೊತ್ತ ಎನಿಸುವುದೇ ಇಲ್ಲ. ಇದೇ ನೋಡಿ ನಮ್ಮ ದೇಶದ ಜನರ ಸಂಸ್ಕಾರ ಮತ್ತು ಸಂಸ್ಕೃತಿ. ವಸುದೈವ ಕುಟುಂಬಕಂ ಎಂಬುದನ್ನು ಅಕ್ಷರಶಃ ಪಾಲಿಸಿದ ಇಂತಹ ಎಲೆಮರೆಕಾಯಿಗಳ ಸಂಖ್ಯೆ ಅಗಣಿತವಾಗಲಿ. ಇಂತಹವರ ತ್ಯಾಗ ನಿಜಕ್ಕೂ ಅಭಿನಂದನೀಯ ಮತ್ತು ಅನುಕರಣಿಯ. ದಿ. ಶಾರದಾ ಮತ್ತು ಜಯಲಕ್ಷ್ಮೀ ಅವರ ಈ ದಾನ ಧರ್ಮ ಕಾರ್ಯಗಳು ನಮ್ಮಂತಹವರಿಗೆ ಸ್ಪೂರ್ತಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s