ನಿಮಗಿದು ಗೊತ್ತೆ?

ನಮ್ಮ ಭಾರತ ದೇಶದಲ್ಲಿ
545 ಲೋಕಸಭಾ ಸದಸ್ಯರುಗಳು
245 ರಾಜ್ಯಸಭಾ ಸಂಸದರು
4120 ಶಾಸಕರು
ಹೀಗೇ ಒಟ್ಟಾರೆಯಾಗಿ 4910 ಸಾರ್ವಜನಿಕ ಪ್ರತಿನಿಧಿಗಳು ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆ.

pil2ಜನರಿಂದ, ಜನರಿಗಾಗಿ, ಜನರಿಗೋಸ್ಕರವಾಗಿಯೇ ಆಯ್ಕೆಯಾದ ಈ ಜನಪ್ರತಿನಿಧಿಗಳು ಕಾಲಕಾಲಕ್ಕೆ ಸರ್ಕಾರದಿಂದ ಮಾಸಿಕ ಸಂಬಳ, ಆ ಭತ್ಯೆ, ಈ ಭತ್ಯೆ ಎಂದು ಲಕ್ಷಾಂತರ ರೂಪಾಯಿಗಳನ್ನು ಜನರ ತೆರಿಗೆಯ ರೂಪದಲ್ಲಿ ಸಂಗ್ರಹವಾದ ಹಣದಿಂದ ಪಡೆಯುತ್ತಿದ್ದಾರೆ. ನೆರೆ ಬರಲಿ ಬರ ಬರಲಿ, ಸೋಂಕುಗಳ ಹಾವಳಿ ಇರಲಿ ಇವರ ಭತ್ಯೆಗಳಿಗೆ ಮತ್ತು ಸೌಲಭ್ಯಗಳಿಗೆ ಯಾವುದೇ ಕುಂದು ಕೊರತೆಯಂತೂ ಆಗುವುದೇ ಇಲ್ಲ. ಇದಲ್ಲದೇ ಇನ್ನೂ ಸಾವಿರಾರು ನಿವೃತ್ತ ಮಾಜೀ ಸಂಸದರು ಮತ್ತು ಶಾಸಕರುಗಳು ಕೇವಲ ಐದು ವರ್ಷ ಜನಪ್ರತಿನಿಧಿಯಾಗಿದ್ದಕ್ಕಾಗಿ ಪ್ರತೀ ತಿಂಗಳೂ ಸಾವಿರಾರು ರೂಪಾಯಿಗಳ ನಿವೃತ್ತ ವೇತನವಾಗಿ ಪಿಂಚಣಿ ಪಡೆಯುತ್ತಿದ್ದಾರೆ ಜೀವನಾವಧಿ ಅನೇಕ ಸೌಲಭ್ಯಗಳನ್ನು ಉಚಿತವಾಗಿ ಪಡೆಯುತ್ತಾರೆ.

ಇದು ನೇರವಾದ ರಾಮನ ಲೆಖ್ಖವಾದರೇ, ಅವರ ನಾನಾ ರೀತಿಯ ವ್ಯವಹಾರಗಳಿಂದ ಕೃಷ್ಣನ ಲೆಖ್ಖದಲ್ಲಿ ಕೊಟ್ಯಾಂತರ ರೂಪಾಯಿಗಳನ್ನು ಅಕ್ರಮವಾಗಿ ಸಂಗಹಿಸಿರುವುದು ಯಾರಿಗೂ ಗೊತ್ತಿಲ್ಲದ ವಿಷಯವೇನಲ್ಲ.

ಇಷ್ಟೆಲ್ಲಾ ಇದ್ದರೂ ಪ್ರತೀಬಾರಿ ಯಾವುದೇ ಪ್ರಾಕೃತಿಕ ವಿಕೋಪವಾಗಲೀ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇದೇ ರಾಜಕಾರಣಿಗಳು ಕಷ್ಟ ಪಟ್ಟು ಬೆವರು ಸುರಿಸಿ ನ್ಯಾಯಯುತವಾಗಿ ತೆರಿಗೆ ಕಟ್ಟಿ ಉಳಿದ ಹಣದಲ್ಲಿ ಜೀವನ ನಡೆಸಲು ಹೆಣಗಾಡುತ್ತಿರುವ ದೇಶದ ಮಧ್ಯಮ ವರ್ಗದ ಜನರಿಗೇ ಸಹಾಯ ಮಾಡುವಂತೆ ಮನವಿ ಮಾಡುವುದು ಎಷ್ಟು ಸರಿ?

ಹಾಲಿಯಲ್ಲಿರುವ ಈ ಎಲ್ಲಾ ಜನರ ಪ್ರತಿನಿಧಿಗಳು ತಮ್ಮ ವೈಯಕ್ತಿಕ ಖಾತೆಗಳಿಂದ ಕೇವಲ 5 ಲಕ್ಷರೂಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಸಹಾಯ ಮಾಡಲು ಒಪ್ಪಿದಲ್ಲಿ 2,45,50,00,000 (ಸರಿ ಸುಮಾರು ಇನ್ನೂರಾ ನಲವತ್ತೈದು ಕೋಟಿ ಐವತ್ತು ಲಕ್ಷ) ರೂಗಳನ್ನು ಒಮ್ಮಿಂದೊಮ್ಮೆಲೆಯೇ ಸುಲಭವಾಗಿ ಸಂಗ್ರಹಿಸಬಹುದಾಗಿದೆ. ಇನ್ನು ನಿವೃತ್ತ ಜನಪ್ರತಿನಿಧಿಗಳನ್ನೂ ಸೇರಿಸಿದರಂತೂ ಅದರ ಮೊತ್ತ ಎಷ್ಟು ಆಗುತ್ತದೆ ಎನ್ನುವುದನ್ನು ಅಂದಾಜು ಮಾಡಲೂ ಸಾಧ್ಯವಿಲ್ಲವಾಗಿದೆ.

poli1ನಮ್ಮನ್ನು ಪ್ರತಿನಿಧಿಸುವ ಈ ರಾಜಕಾರಣಿಗಳಿಗೆ ದೇಶದ ಬಗ್ಗೆ ಯಾವುದೇ ಜವಾಬ್ದಾರಿ ಮತ್ತು ಹೊಣೆಗಾರಿಕೆ ಇಲ್ಲವೇ? ಇಂತಹ ಕಠಿಣ ಸಂದರ್ಭದಲ್ಲಿ ಕೇವಲ ಎಲ್ಲೋ ಹತ್ತಾರು ಜನರಿಗೆ ನಾಲ್ಕಾರು ದಿನಗಳ ವರೆಗೆ ಊಟದ ಪ್ಯಾಕೆಟ್ ಕೊಟ್ಟೋ ಇಲ್ಲವೇ ಅಕ್ಕಿ, ಬೇಳೆ, ಎಣ್ಣೆ ಕೊಟ್ಟು ಫ್ಲೆಕ್ಸ್, ಫೇಸ್ ಬುಕ್ ಟ್ವಿಟ್ಟರ್, ವಾಟ್ಸಾಪ್ ಗಳಲ್ಲಿ ಹಾಕಿಕೊಳ್ಳುವುದಷ್ಟೇ ಅವರ ಕರ್ತವ್ಯವೇ?

ಎಲ್ಲಾ ಜನಪ್ರತಿನಿಧಿಗಳೂ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದೇನೂ ಹೇಳುತ್ತಿಲ್ಲ. ಎಲ್ಲೋ ಅಲ್ಲಲ್ಲಿ ಒಬ್ಬಿಬ್ಬರೂ ಮರುಭೂಮಿಯಲ್ಲಿ ಓಯಸಿಸ್ ತರಹ ಇರುವ ಕೆಲ ಜವಾಬ್ಧಾರಿಯುತ ಜನಪ್ರತಿನಿಧಿಗಳು ಮತ್ತು ನಾಯಕರುಗಳು ಇರುವುದರಿಂದಲೇ ದೇಶ ಇನ್ನೂ ಈ ರೀತಿಯಾಗಿ ಇದೆ. ಇಲ್ಲದಿದ್ದಲ್ಲಿ ವೆನಿಝುಲಾ ದೇಶದ ತರಹಾ ಯಾವತ್ತೋ ದಿವಾಳಿಯಾಗಿ ಬಿಡುತ್ತಿತ್ತು.

ಹಾಗೆಂದ ಮಾತ್ರಕ್ಕೆ ನಾವೇನು ಕಷ್ಟದಲ್ಲಿ ಇದ್ದವರಿಗೆ ಜನಸಾಮಾನ್ಯರು ಸಹಾಯ ಮಾಡಬಾರದು ಎಂಬ ವಿತಂಡ ವಾದವನ್ನೇನು ಮಂಡಿಸುತ್ತಿಲ್ಲ. ಶತೃವಾದರೂ ಸರಿ ಬಿದ್ದಾಗ ಮೊದಲು ಕೈಹಿಡಿದು ಮೇಲೆತ್ತು. ನಂತರ ಯುದ್ಧ ಮುಂದುವರೆಸು ಎಂದಿದ್ದಾರೆ ನಮ್ಮ ಹಿರಿಯರು. ಹಾಗಾಗಿ ನಮ್ಮ ಅಕ್ಕಪಕ್ಕದಲ್ಲಿ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ನಮ್ಮ ಧರ್ಮ ಹಾಗೂ ಕರ್ಮ. ನಾವೆಲ್ಲರೂ ಒಟ್ಟಾಗಿ ಮಾಡಲೇ ಬೇಕು ಮತ್ತು ಈಗಾಗಲೇ ಮಾಡುತ್ತಿದ್ದೇವೆಯೂ ಹೌದು.

ಆದರೆ ವಿಪತ್ತು ಮತ್ತು ವಿಕೋಪದ ಪರಿಹಾರಕ್ಕಾಗಿ, ಪ್ರತಿಬಾರಿ ಜನಸಾಮಾನ್ಯರ ಜೋಳಿಗೆಗೇ ಕೈ ಹಾಕುವ ಮುನ್ನ, ಜನರ ಸೇವೆಯಾಗಿ ಆಯ್ಕೆಯಾಗಿ ಜನರ ತೆರಿಗೆ ದುಡ್ದಿನಿಂದಲೇ ಮೋಜು ಮಸ್ತಿ ಮಾಡುತ್ತಿರುವ ಮಾಜಿ, ಹಾಲಿ ಜನಪ್ರತಿನಿಧಿಗಳು, ಮಾಜಿ ಮತ್ತು ಹಾಲಿ ಸರ್ಕಾರಿ ಅಧಿಕಾರಿಗಳು ಅದರಲ್ಲೂ ನಿವೃತ್ತ ನ್ಯಾಯಾಧೀಶರುಗಳಿಂದ ಮೊದಲು ಸುಲಭವಾಗಿ ದೇಣಿಗೆ ಸಂಗ್ರಹಿಸಿ ನಂತರ ಅದು ಸಾಲದೇ ಹೋದಲ್ಲಿ ಜನಸಾಮಾನ್ಯರತ್ತ ಕೈ ಒಡ್ಡಿದ್ದರೆ ಖಂಡಿತವಾಗಿಯೂ ಜನರು ಕೈ ಹಿಡಿದೇ ಹಿಡಿಯುತ್ತಾರೆ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ಏಕೆಂದರೆ ನಮ್ಮ ಪೂರ್ವಜರು ನಮಗೆ ದಾನ ಶೂರ ಕರ್ಣ, ಧದೀಚಿ, ಶಿಭಿ ಚಕ್ರವರ್ತಿಗಳಂತಹ ದಾನಿಗಳ ಕಥೆಯನ್ನೇ ಹೇಳಿ ಬೆಳೆಸಿದ್ದಾರೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s