ಇಡ್ಲಿ ಎಂದರೆ ಎಲ್ಲರ ಕಣ್ಣುಮುಂದೆ ಬರುವುದೇ ಹಬೆಯಲ್ಲಿ ಬೇಯಿಸಿದ, ಉಬ್ಬಿದ ಬಿಸಿ ಬಿಸಿಯಾದ ಮೃದುವಾದ ದಕ್ಷಿಣ ಭಾರತದ ಪ್ರಖ್ಯಾತವಾದ ತಿಂಡಿ. ಇಂತಹ ಇಡ್ಲಿಯ ಜೊತೆಗೆ ರುಚಿಕರವಾದ ಕಾಯಿ ಚಟ್ನಿ ಮತ್ತು ಸಾಂಬಾರ್ ಇದ್ದರಂತೂ ಬೇರಾವ ತಿಂಡಿಯೂ ಮನಸ್ಸಿಗೆ ಬೇಡ ಎನ್ನಿಸುತ್ತದೆ ಎಂದರೆ ಸುಳ್ಳಲ್ಲ.
ಯಾವುದೇ ರೀತಿಯ ಎಣ್ಣೆ ಅಥವಾ ಜಿಡ್ಡಿಲ್ಲದೇ ಕೇವಲ ಅಕ್ಕಿ ಮತ್ತು ಉದ್ದಿನ ಬೇಳೆಯ ಸರಿಯದ ಪ್ರಮಾಣದ ಮಿಶ್ರಿತವಾಗಿ ಹಬೆಯಲ್ಲಿ ಬೆಂದು ಸರಿಸಮಾನದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಇರುವ ಅತ್ಯಂತ ಕಡಿಮೆ ಕ್ಯಾಲೋರಿ ಇರುವ, ಆರೋಗ್ಯಕರ ಮತ್ತು ಅನಾರೋಗ್ಯಕರವಾಗಿರುವ ಎಲ್ಲಾರೀತಿಯ ವ್ಯಕ್ತಿಗಳೂ ತಿನ್ನಬಹುದಾದ ಏಕೈಕ ತಿಂಡಿಯಾಗಿದೆ ಇಡ್ಲಿ.
ಇಡ್ಲಿ ಹಿಟ್ಟನ್ನು ತಯಾರಿಸಲು ಬಿಳಿ ಅಕ್ಕಿಯನ್ನು ಬಳೆಸುವುದರಿಂದ ಹೆಚ್ಚಿನ ಕಾರ್ಬ್ ಇರುವ ಕಾರಣ ಅದು ದೇಹದ ತೂಕವನ್ನು ಹೆಚ್ಚಿಸಲು ಪ್ರೇರೇಪಿಸುತ್ತದೆ ಎಂದು ಕೆಲ ತಜ್ಣರು ಅಭಿಪ್ರಾಯ ಪಟ್ಟಕಾರಣ, ಅಕ್ಕಿ ಮತ್ತು ಉದ್ದಿನ ಬೇಳೆಯ ಬದಲು ರವೆಯನ್ನು ಬಳೆಸಲು ಆರಂಭಿಸಲಾಯಿತು. ಈ ರವೇ ಇಡ್ಲಿಯ ಆವಿಷ್ಕಾರದ ಹಿಂದೆಯೂ ಒಂದು ರೋಚಕವಾದ ಕಥೆಯಿದೆ 60ರ ದಶಕದಲ್ಲಿ ಹಿಂದೀ-ಚೀನೀ ಭಾಯ್ ಭಾಯ್ ಎಂದು ಹೇಳುತ್ತಲೇ, ಬೆನ್ನ ಹಿಂದೆ ಚೂರಿಹಾಕಿದ ಚೀನಿಯರ ವಿರುದ್ಧ ಸೋತು ಸುಣ್ಣವಾಗಿದ್ದ ಭಾರತಕ್ಕೆ ಮತ್ತೊಂದು ಆಘಾತ ರೂಪದಲ್ಲಿ ಪಾಕೀಸ್ಥಾನವೂ ಧಾಳಿ ಮಾಡಿದಾಗ ದೇಶದಲ್ಲಿ ಆಹಾರಕ್ಕೆ ಹಾಹಾಕಾರವಾದಾಗ ದೇಶದ ಹಿತದೃಷ್ಟಿಯಿಂದಾಗಿ ಅಕ್ಕಿಯ ಬಳಕೆ ಕಡಿಮೆ ಮಾಡಬೇಕು ಮತ್ತು ದೇಶವಾಸಿಗಳು ವಾರಕ್ಕೆ ಒಂದು ದಿನ, ಒಂದು ಹೊತ್ತು ಖಡ್ಡಾಯವಾಗಿ ಉಪಪಾಸ ಮಾಡಬೇಕೆಂದು ಅಂದಿನ ಹೆಮ್ಮೆಯ ಪ್ರಧಾನಿಗಳಾಗಿದ್ದ ಲಾಲಬಹದ್ದೂರ್ ಶಾಸ್ತ್ರಿಗಳು ಕೋರಿಕೊಂಡಾಗ ಇಡೀ ದೇಶವಾಸಿಗಳು ಅದಕ್ಕೆ ತಕ್ಕದಾಗಿ ಸ್ಪಂದಿಸಿದರು. ಹೋಟೆಲ್ ವ್ಯಾಪಾರಸ್ಥರು ಅಕ್ಕಿಯೇ ಇಲ್ಲದೇ ಇಡ್ಲಿ ಮಾಡುವುದು ಹೇಗೆ? ಎಂದು ಪರದಾಡುತ್ತಿರುವಾಗ ನಮ್ಮ ಹೆಮ್ಮೆ ಎಂಟಿಆರ್ ಸಂಸ್ಥೆಯವರು, ಅಕ್ಕಿ ಮತ್ತು ಉದ್ದಿನ ಬೇಳೆಯೇ ಇಲ್ಲದೇ, ಕೇವಲ ರವೆ ಮತ್ತು ಹುಳಿ ಮೊಸರು ಬಳೆಸಿ ಧಿಡೀರ್ ಆದ ಅದರೆ ಅಷ್ಟೇ ರುಚಿಕರವಾದ ಮತ್ತು ಆರೋಗ್ಯಕರವಾದ ರವೇ ಇಡ್ಲಿಯನ್ನು ಆವಿಷ್ಕರಿಸಿದರು. ನಂತರ ಇಡ್ಲಿಯಲ್ಲಿ ಅನೇಕ ಆವಿಷ್ಕಾರಗಳು ಮುಂದುವರಿದು ಈಗಂತೂ ನೂರಾರು ರೀತಿಯ ಇಡ್ಲಿಗಳನ್ನು ಮಾಡುತ್ತಿದ್ದಾರೆ.
ಇಂದು ನಮ್ಮ ನಳಪಾಕದಲ್ಲಿ ಧಿಡೀರ್ ಆಗಿ ತಯಾರಿಸ ಬಹುದಾದ ಆರೋಗ್ಯಕರ ಹೆಸರುಬೇಳೆ ಇಡ್ಲಿಯನ್ನು ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತಿದ್ದೇವೆ.
ಹೆಸರುಬೇಳೆ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ನೆನೆಸಿದ ಹೆಸರುಬೇಳೆ 1ಪಾವು ( 2ಗಂಟೆ ನೆನೆಸಿಡಬೇಕು)
- ರವೆ – 1/2ಪಾವು
- ಮೊಸರು 1/2 ಪಾವು
- ಕ್ಯಾರೆಟ್ ತುರಿ 1 ಬಟ್ಟಲು
- ಕರಿಬೇವು 6-8 ಎಲೆಗಳು
- ಕತ್ತರಿಸಿದ ಕೊತ್ತಂಬರಿ 1 ಚಮಚ
- ತುರಿದ ಶುಂಠಿ 1/4 ಚಮಚ
- ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ 3-4
ಒಗ್ಗರಣೆಗೆ
- ಸಾಸಿವೆ 1/4 ಚಮಚ
- ಕಡ್ಲೇಬೇಳೆ 1 ಚಮಚ
- ಉದ್ದಿನಬೇಳೆ. 1 ಚಮಚ
- ಮುರಿದ ಗೋಡಂಬಿ 10-12
- ಇಂಗು 1 ಚಿಟಿಕೆ
- ರುಚಿಗೆ ತಕ್ಕಷ್ಟು ಉಪ್ಪು
- ಅಡಿಗೆ ಸೋಡ ಅಥವ ENO
ಹೆಸರುಬೇಳೆ ಇಡ್ಲಿ ತಯಾರಿಸುವ ವಿಧಾನ
- ಮೊದಲಿಗೆ ರವೆಯನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಘಮ್ ಎಂದು ಬರುವ ವರೆಗೂ ಹುರಿದು ಕೊಳ್ಳಬೇಕು.
- ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಅದರಲ್ಲಿ ಸಾಸಿವೆ ಪಟ ಪಟ ಎನ್ನುವಷ್ಟು ಸಿಡಿಸಿ, ಅದಕ್ಕೆ ಒಂದು ಚಿಟಿಕೆ ಇಂಗು ಸೇರಿಸಿ, ಕಡೆಲೇಬೇಳೆ, ಉದ್ದಿನಬೇಳೆ, ಗೋಡಂಬಿಯನ್ನು ಬೆರೆಸಿ ಕೆಂಪಗಾಗುವಷ್ಟು ಸಮಯ ಹುರಿದಿಟ್ಟು ಕೊಳ್ಳಬೇಕು.
- ನೆನೆಸಿದ ಹೆಸರು ಬೇಳೆಯನ್ನು ನುಣ್ಣಗೆ ನೀರು ಹಾಕಿಕೊಳ್ಳದೆ ರುಬ್ಬಿಕೊಳ್ಳಬೇಕು.
- ರುಬ್ಬಿದ ಹೆಸರುಬೇಳೆ ಹಿಟ್ಟಿಗೆ ಮೊಸರು, ಒಗ್ಗರಣೆ ಹಾಕಿಟ್ಟುಕೊಂಡದ್ದನ್ನು ಸೇರಿಸಿ, ಅದರ ಜೊತೆಗೆ ತುರಿದ ಕ್ಯಾರೆಟ್, ಹೆಚ್ಚಿದ
- ಹಸಿ ಮೆಣಸಿನಕಾಯಿ , ಕತ್ತರಿಸಿದ ಕೊತ್ತಂಬರೀ , ಕರಿಬೇವು ಶುಂಠಿ ಸೇರಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಚಿಟಿಕೆ ಅಡಿಗೆ ಸೋಡ ಅಥವ ENO ಸೇರಿಸಿ, ಹುರಿದ ರವೆಯನ್ನು ಅದಕ್ಕೆ ಮೆಲ್ಲಗೆ ಗಂಟು ಬಾರದಂತೆ ಬೆರೆಸಿ ಗೊಟಾಯಿಸಬೇಕು.
- ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ ಕಲೆಸಿಟ್ಟ ಹಿಟ್ಟನ್ನು ಹಾಕಿ ಕುಕ್ಕರಿನಲ್ಲಿ ಇಟ್ಟು 10 ನಿಮಿಷ ಬೇಯಿಸಿದರೆ ರುಚಿಯಾದ ಬಿಸಿಬಿಸಿಯಾದ ಆರೋಗ್ಯಕರವಾದ ಹೆಸರುಬೇಳೆ ಇಡ್ಲಿ ಸಿದ್ಧ.
ಬಿಸಿಯಾಗಿರುವಾಗಲೇ ಈ ಇಡ್ಲಿಯನ್ನು ಕಾಯಿ ಚಟ್ನಿ ಅಥವಾ ಬಾಂಬೇ ಸಾಗುವಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.
ಹೆಸರುಬೇಳೆ ಬಳೆಸುವುದರಿಂದ ದೇಹಕ್ಕೆ ತಂಪಾಗಿರುತ್ತದೆ ಮತ್ತು ಅಕ್ಕಿ ಬದಲು ರವೆಯನ್ನು ಬಳೆಸುವುದರಿಂದ ಇದು ಮಾಮೂಲೀ ಇಡ್ಲಿಗಿಂತಲೂ ಆರೋಗ್ಯಕರವಾಗಿರುವುದಲ್ಲದೇ ಸಾಮಾನ್ಯ ಇಡ್ಲಿಗಿಂತಲೂ ಅಧಿಕ ರುಚಿಕರವಾಗಿರುತ್ತದೆ ಅಲ್ಲದೇ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿ ಅಂಶ ಕಡಿಮೆ ಇರುವ ಕಾರಣ ದೇಹದ ತೂಕವನ್ನೂ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಸಂಬಂಧೀ ಖಾಯಿಲೆ ಇರುವವರಿಗೂ ಈ ಹೆಸರುಬೇಳೆ ಇಡ್ಲಿ ಉತ್ತಮ ಆಹಾರವಾಗಿದೆ.
ಧಿಡೀರ್ ಅಂತ ಹೆಸರುಬೇಳೆ ಇಡ್ಲಿ ಸುಲಭವಾಗಿ ಹೇಗೆ ಮಾಡೋದು ಅಂತಾ ಹೇಳಿಕೊಟ್ಟಿದ್ದೇವೆ.
ಓದ್ಕೋಳ್ಳಿ, ಮಾಡ್ಕೋಳ್ಳಿ, ತಿಂದ್ಕೋಳ್ಳಿ
ಏನಂತೀರೀ?
ಈ ಪಾಕವಿಧಾನವನ್ನು ತಿಳಿಸಿಕೊಟ್ಟವರು : ಶ್ರೀಮತಿ ಲಕ್ಷ್ಮೀ ಆನಂದ್
#ನಳಪಾಕ
#ಹೆಸರುಬೇಳೆ ಇಡ್ಲಿ
#ಏನಂತೀರೀ?