ಸಂಜೆ ಹೊತ್ತು ಟೀ/ ಕಾಫಿಯ ಜೊತೆಗೆ ಏನಾದರೂ ಬಿಸಿ ಬಿಸಿಯಾಗಿ ಖಾರವಾಗಿ ತಿನ್ನಲು ಕುರುಕಲು ಇದ್ದರೆ ಚೆನ್ನಾ ಎನಿಸುವುದು ಸಹಜ. ಹಾಗಾಗಿ ನಿಮಗೆ ಥಟ್ ಅಂತಾ ಮಾಡುವ ರುಚಿಕರವಾದ ವಿವಿಧ ರೀತಿಯ ಕಟ್ಲೆಟ್ ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇನೆ.
ಅವಲಕ್ಕಿ/ಅನ್ನದ ಕಟ್ಲೇಟ್
ಅವಲಕ್ಕಿ ಕಟ್ಲೇಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ನೆನಸಿದ ಅವಲಕ್ಕಿ 2 ಬಟ್ಟಲು
- ಅಕ್ಕಿ ಹಿಟ್ಟು 2 ಚಮಚ
- ಜೋಳದ ಹಿಟ್ಟು 2 ಚಮಚ
- ಬೇಯಿಸಿದ ಆಲೂಗೆಡ್ಡೆ 2-3
- ಕತ್ತರಿಸಿದ ಕೊತ್ತಂಬರಿ ಸೊಪ್ಪು. 2 ಚಮಚ
- ಸಣ್ಣಗೆ ಹೆಚ್ಚಿದ ದಪ್ಪ ಮೆಣಸಿನಕಾಯಿ 2 ಚಮಚ
- ಸಣ್ಣಗೆ ಹೆಚ್ಚಿದ ಈರುಳ್ಳಿ 1/4 ಕಪ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
- ಜೀರಿಗೆ 1 ಚಮಚ
- ದನಿಯ ಪುಡಿ 1 ಚಮಚ
- ಅಚ್ಚ ಖಾರದ ಪುಡಿ 1 ಚಮಚ
- ನಿಂಬೇಹುಳಿ 1 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ಅವಲಕ್ಕಿ ಕಟ್ಲೇಟ್ ತಯಾರಿಸುವ ವಿಧಾನ
- ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿ, ಅದರ ಸಿಪ್ಪೆ ಸುಲಿದು ಒಂದು ಪಾತ್ರೆಯಲ್ಲಿ ಚೆನ್ನಾಗಿ ಹಿಸುಕಿ ಕೊಳ್ಳ ಬೇಕು.
- ನಂತರ ಬೇಯಿಸಿದ ಆಲೂಗೆಡ್ಡೆಗೆ, ನೆನೆಸಿದ ಅವಲಕ್ಕಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ , ಜೋಳದ ಹಿಟ್ಟು, ಅಚ್ಚ ಖಾರದ ಪುಡಿ, ದನಿಯಾಪುಡಿ ನಿಂಬೇ ಹಣ್ಣಿನ ರಸ, ಜೀರಿಗೆ ರುಚಿಗೆ ತಕ್ಕ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಗಟ್ಟಿಯಾಗಿ ಕಲೆಸಿಕೊಂಡು ಸ್ವಲ್ಪ ನಾದಬೇಕು.
- ಕಲೆಸಿದ ಹಿಟ್ಟನ್ನು ನಮಗೆ ಬೇಕಾದ ರೀತಿಯಲ್ಲಿ ತಟ್ಟಿಕೊಂಡು, ಅಗಲವಾದ ಬಾಣಲೆಯನ್ನು (ಕಡಿಮೆ ಎಣ್ಣೆ ಖರ್ಚಾಗುತ್ತದೆ) ಸ್ಟವ್ ಮೇಲಿಟ್ಟು, ಸಣ್ಣ ಉರಿಯಲ್ಲಿ ಕೆಂಪಗಾಗುವಷ್ಟು ಕರಿದರೆ ರುಚಿಯಾದ ಅವಲಕ್ಕಿ ಕಟ್ಲೆಟ್ ಸಿದ್ಧ
ನೆನೆಸಿದ ಅವಲಕ್ಕಿಯ ಬದಲಾಗಿ ಮನೆಯಲ್ಲಿ ಉಳಿದ ಅನ್ನವನ್ನೂ ಸಹಾ ಚೆನ್ನಾಗಿ ಮಿದ್ದು ಅದರಲ್ಲಿಯೂ ಕಟ್ಲೇಟ್ ಮಾಡಬಹುದು.
ವೆಜ್ ಕಟ್ಲೇಟ್
ವೆಜ್ ಕಟ್ಲೇಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಬೇಯಿಸಿದ ಆಲೂಗೆಡ್ಡೆ 4-5
- ಸಣ್ಣಗೆ ಹೆಚ್ಚಿದ ಟೊಮೆಟೊ 2
- ಸಣ್ಣಗೆ ಹೆಚ್ಚಿದ ಹುರಳೀಕಾಯಿ 1/4 ಕಪ್
- ಸಣ್ಣಗೆ ಹೆಚ್ಚಿದ ಕ್ಯಾರೆಟ್. 1/4 ಕಪ್
- ಹಸೀ ಬಟಾಣಿ 1/4 ಕಪ್
- ದನಿಯಾಪುಡಿ 1 ಚಮಚ
- ಕತ್ತರಿಸಿದ ಕೊತ್ತಂಬರಿ ಸೊಪ್ಪು 1/4 ಕಪ್
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ 1 ಚಮಚ
- ಅಚ್ಚಖಾರದ ಪುಡಿ 1 ಚಮಚ
- ಜೀರಿಗೆ 1 ಚಮಚ
- ಜೋಳದ ಹಿಟ್ಟು 1/2 ಕಪ್
- ಚಿರೋಟಿ ರವೆ 2 ಚಮಚ
- ರುಚಿಗೆ ತಕ್ಕ ಉಪ್ಪು
ವೆಜ್ ಕಟ್ಲೇಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಆಲೂಗೆಡ್ಡೆಯನ್ನು ಬೇಯಿಸಿ, ಅದರ ಸಿಪ್ಪೆ ಸುಲಿದು ಒಂದು ಪಾತ್ರೆಯಲ್ಲಿ ಚೆನ್ನಾಗಿ ಹಿಸುಕಿ ಕೊಳ್ಳ ಬೇಕು.
- ನಂತರ ಉಳಿದ ತರಕಾರಿಗಳಾದ ಟೊಮೆಟೊ, ಬಟಾಣಿ, ಕ್ಯಾರೆಟ್, ಹುರಳೀಕಾಯಿ ಇವುಗಳನ್ನು ಬೇಯಿಸಿಟ್ಟುಕೊಳ್ಳಬೇಕು
- ಬೇಯಿಸಿದ ತರಕಾರಿಗಳಿಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ , ಚಿರೋಟಿ ರವೆ, ಜೋಳದ ಹಿಟ್ಟು, ನಿಂಬೇ ಹಣ್ಣಿನ ರಸ, ಜೀರಿಗೆ, ಅಚ್ಚ ಖಾರದ ಪುಡಿ, ದನಿಯಾಪುಡಿ , ರುಚಿಗೆ ತಕ್ಕ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಗಟ್ಟಿಯಾಗಿ ಕಲೆಸಿಕೊಂಡು ಸ್ವಲ್ಪ ನಾದಬೇಕು.
- ಕಲೆಸಿದ ಮಿಶ್ರಣವನ್ನು ನಮಗೆ ಬೇಕಾದ ಆಕಾರದಲ್ಲಿ ತಟ್ಟಿಕೊಂಡು, ಅಗಲವಾದ ಬಾಣಲೆಯನ್ನು (ಕಡಿಮೆ ಎಣ್ಣೆ ಖರ್ಚಾಗುತ್ತದೆ) ಸ್ಟವ್ ಮೇಲಿಟ್ಟು ಸಣ್ಣ ಉರಿಯಲ್ಲಿ ಕೆಂಪಗಾಗುವಷ್ಟು ಕರಿದರೆ ರುಚಿಯಾದ ವೆಜ್ ಕಟ್ಲೆಟ್ಸಿದ್ಧ
ಆರೋಗ್ಯಕ್ಕೆ ತುಂಬಾ ಒತ್ತು ಕೊಡುವವರು ಮತ್ತು ಎಣ್ಣೆಯಲ್ಲಿ ಕರಿದದ್ದನ್ನು ಇಷ್ಟ ಪಡದವರು
- ಕಲೆಸಿದ ಮಿಶ್ರಣವನ್ನು ಅಂಗೈಯಲ್ಲಿ ಚಪ್ಪಟ್ಟೆಯಾಗಿ ತಟ್ಟಿ ಎರಡೂ ಬದಿಗೆ ಸ್ವಲ್ಪ ಎಣ್ಣೆ ಸವರಿ ಓವನ್ನಿನ ಗ್ರಿಲ್ ಮೇಲಿಟ್ಟು ಸುಮಾರು ಐದು ನಿಮಿಷಗಳಷ್ಟು ಬೇಯಿಸಿದಲ್ಲಿ ರುಚಿಕರ ಬೇಯಿಸಿದ ವೆಜ್ ಕಟ್ಲೇಟ್ ಸಿದ್ದ.
- ಓವನ್ ಇಲ್ಲದಿದ್ದವರು, ತಪ್ಪದಾದ ಕಾವಲಿಯ ಸ್ಟವ್ ಮೇಲೆ ಇಟ್ಟು ಬಿಸಿ ಮಾಡಿ, ಕಲೆಸಿದ ಮಿಶ್ರಣವನ್ನು ಅಂಗೈಯಲ್ಲಿ ಚಪ್ಪಟ್ಟೆಯಾಗಿ ತಟ್ಟಿ ಎರಡೂ ಬದಿಗೆ ಸ್ವಲ್ಪ ಎಣ್ಣೆ ಸವರಿ ಕಂದು ಬಣ್ಣ ಬರುವವರೆಗೆ ಎರಡೂ ಬದಿಯಲ್ಲಿ ಹುರಿದರೆ, ರುಚಿಕರವಾದ ವೆಜ್ ಕಟ್ಲೆಟ್ ಸಿದ್ದ.
ಈ ಕಟ್ಲೇಟ್ಟನ್ನು ಟೊಮ್ಯಾಟೋ ಸಾಸ್, ಚಿಲ್ಲಿಸಾಸ್ ಇಲ್ಲವೇ ಪುದೀನಾ ಚೆಟ್ನಿ ಮತ್ತು ಸುರಳಿಯಾಕಾರದಲ್ಲಿ ಹೆಚ್ಚಿದ ಈರುಳ್ಳಿ ಜೊತೆ ತಿನ್ನಲು ರುಚಿಯಾಗಿರುತ್ತದೆ.
ರುಚಿರುಚಿಯಾದ ಅವಲಕ್ಕಿ/ಅನ್ನ/ ವೆಜ್ ಕಟ್ಲೇಟ್ ಮಾಡುವುದನ್ನು ತಿಳಿಸಿಕೊಟ್ಟಿದ್ದೇವೆ. ಇನ್ನೇಕ ತಡಾ,
ಓದ್ಕೋಳ್ಳಿ, ಮಾಡ್ಕೊಳ್ಳಿ, ತಿನ್ಕೊಳ್ಳಿ.
ಏನಂತೀರೀ?