ಮಕ್ಕಳು ಅದೇ ಸಾರು, ಹುಳಿ, ಪಲ್ಯ ತಿಂದು ಬೇಜಾರಾದಾಗ ವಾರಾಂತ್ಯದಲ್ಲಿ ಅಥವಾ ದಿಡೀರ್ ಎಂದು ಯಾರಾದರೂ ಮನೆಗೆ ಬಂದಾಗ ಏನಪ್ಪಾ ಮಾಡುವುದು ಎಂದು ಹೆಚ್ಚಿಗೆ ಯೋಚಿಸದೇ, ನಾವು ತಿಳಿಸಿರುವಂತೆ ಆರೋಗ್ಯಕರವಾದ ಮತ್ತು ರುಚಿಕರವಾದ ಪಲಾವ್ ಮಾಡಿ ನೋಡಿ. ನಿಮ್ಮ ಮನೆಗೆ ಬಂದ ಅತಿಥಿಗಳು ಮತ್ತು ಮಕ್ಕಳು ಖಂಡಿತವಾಗಿಯೂ ಇಷ್ಟ ಪಡುತ್ತಾರೆ.
3 ಪಾವು ಅಕ್ಕಿಗೆ ಅನುಗುಣವಾಗಿ ಸುಮಾರು 8-10 ಜನರಿಗೆ ಸಾಕಾಗುವಷ್ಟು ಪಲಾವ್ ಮಾಡಲು ಬೇಕಾಗುವ ಸಾಮಗ್ರಿಗಳು
ತರಕಾರಿಗಳು
- ಕ್ಯಾರೆಟ್ 2 ದೊಡ್ಡ ಗಾತ್ರದ್ದು
- ಹುರಳೀಕಾಯಿ 1 ಬಟ್ಟಲು
- ನವಿಲು ಕೋಸು 2 ದೊಡ್ಡ ಗಾತ್ರದ್ದು
- ಈರುಳ್ಳಿ 2 ದೊಡ್ಡ ಗಾತ್ರದ್ದು
- ಟೊಮ್ಯಾಟೋ 3 ದೊಡ್ಡ ಗಾತ್ರದ್ದು
- ದೊಣ್ಣೇ ಮೆಣಸಿನಕಾಯಿ 1 ದೊಡ್ಡ ಗಾತ್ರದ್ದು
- ಪುದೀನಾ. ಅರ್ಧ ಕಪ್
- ಕರಿಬೇವು 2 ಕಡ್ಡಿ
- ಅಕ್ಕಿ 3 ಪಾವು
- ಅರಿಶಿನ. 1/4 ಸ್ಪೂನ್
- ಸಾಸಿವೆ 1/4 ಸ್ಪೂನ್
- ಜೀರಿಗೆ 1/2 ಸ್ಪೂನ್
- ತುಪ್ಪಾ 2 ಸ್ಪೂನ್
- ಅಡುಗೆ ಎಣ್ಣೆ 2 ಸ್ಪೂನ್
- ಕಾಲಾಕ್ಕನುಗುಣವಾಗಿ ಹಸೀ ಬಟಾಣಿ ಅಥವಾ ಅವರೇಕಾಳು 1 ಕಪ್ (ಬೇಕಾದಲ್ಲಿ)
ಮೇಲೇ ತಿಳಿಸಿದ ಎಲ್ಲಾ ತರಕಾರಿಗಳನ್ನು ಈ ಚಿತ್ರದಲ್ಲಿ ತೋರಿಸಿರುವಂತೆ ಹೆಚ್ಚಿಟ್ಟು ಕೊಳ್ಳಬೇಕು.
ರುಬ್ಬಿಕೊಳ್ಳುವುದಕ್ಕೆ
- ತೆಂಗಿನ ಕಾಯಿ ತುರಿ ಅರ್ಧ ಹೋಳು
- ಈರುಳ್ಳಿ 1 ದೊಡ್ಡಗಾತ್ರದ್ದು
- ಮೆಣಸಿನಕಾಯಿ 12-15 ಖಾರಕ್ಕೆ ಅನುಗುಣವಾಗಿ
- ಬೆಳ್ಳುಳ್ಳಿ 4-6 ಎಸಳು
- ಶುಂಠಿ 1 ಇಂಚು
- ಕೊತ್ತಂಬರಿ 1/4 ಕಪ್
- ಚೆಕ್ಕೆ 1 ಇಂಚು
- ಲವಂಗ 3 – 4
- ರುಚಿಗೆ ತಕ್ಕಷ್ಟು ಉಪ್ಪು
ಮೇಲೆ ಹೇಳಿದ ಎಲ್ಲಾ ಪರಿಕರಗಳನ್ನು ಅರ್ಧ ಲೋಟ ನೀರಿನೊಂದಿಗೆ ಗಟ್ಟಿಯಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.
ಪಲಾವ್ ಮಾಡುವ ವಿಧಾನ
- ಕುಕ್ಕರಿನಲ್ಲಿ ಎಣ್ಣೆ ಮತ್ತು ತುಪ್ಪಾ ಹಾಕಿ, ಚೆನ್ನಾಗಿ ಕಾದ ನಂತರ ಸಾಸಿವೆ ಹಾಗಿ ಚಟ ಪಟ ಸಿಡಿದ ನಂತರ ಜೀರಿಗೆ, ಅರಿಶಿನ, ಕರಿಬೇವು ಹಾಕಿ. ನಂತರ ಹೆಚ್ಚಿಟ್ಟ ಪುದಿನಾ ಸೊಪ್ಪನ್ನು ಹಾಕಿ ಹಸೀ ವಾಸನೆ ಹೋಗುವವರೆಗೂ ಬಾಡಿಸಿಕೊಳ್ಳಬೇಕು
- ಹೆಚ್ಚಿಟ್ಟ ಈರುಳ್ಳಿಯನ್ನು ಕೆಂಪಗೆ ಆಗುವವರೆಗೂ ಎಣ್ಣೆಯಲ್ಲಿ ಬಾಡಿಸಿಕೊಳ್ಳಬೇಕು
- ಹೆಚ್ಚಿಟ್ಟ ಕ್ಯಾರೇಟ್, ಹುರಳೀಕಾಯಿ, ನವಿಲು ಕೋಸು, ದೊಣ್ಣೇ ಮೆಣಸಿನಕಾಯಿ ಜೊತೆಗೆ ಕಾಲಾಕ್ಕನುಗುಣವಾಗಿ ಲಭ್ಯವಿರುವ ಹಸೀ ಬಟಾಣಿ ಅಥವಾ ಅವರೇಕಾಳನ್ನು ಹಾಕಿಕೊಂಡು ಸ್ವಲ್ಪ ಕಾಲ ಬಾಡಿಸಬೇಕು.
- ರುಬ್ಬಿಟ್ಟು ಕೊಂಡಿರುವ ಮಸಾಲೇ ಮಿಶ್ರಣವನ್ನು ತರಕಾರಿಯ ಜೊತೆ ಸ್ವಲ್ಪ ಕಾಲ ಕುದಿಯಲು ಬಿಡಬೇಕು
- ಅಕ್ಕಿಯನ್ನು ತೊಳೆದು ಕೊಂಡು ಕುದಿಯುತ್ತಿರುವ ಮಿಶ್ತ್ರಣಕ್ಕೆ ಸೇರಿಸಿ ಅನ್ನ ಬೇಯಿಸಲು ಹಾಕುವಷ್ಟು ನೀರನ್ನು ಹಾಕಿ,
- ತರಕಾರಿಗಳಿಗಾಗಿ ಅರ್ಧ ಲೋಟ ನೀರನ್ನು ಸೇರಿಸಿ ಸ್ವಲ್ಪ ಕೈಯಾಡಿಸಿ ಒಂದು ಕುದಿ ಬಂದನಂತರ ಕುಕ್ಕರ್ ಮುಚ್ಚಿಡಬೇಕು.
- ಕುಕ್ಕರ್ ಒಂದು ವಿಷಲ್ ಹಾಕಿದ ನಂತರ ಆರಲು ಬಿಡಬೇಕು.
ಮೊಸರು ಬಜ್ಜಿ/ರಾಯತ
- ಸೌತೇಕಾಯಿ ೧
- ಈರಳ್ಳಿ ೧
- ಮೆಣಸಿನಕಾಯಿ ೧
- ಕೊತ್ತಂಬರಿ ೧ ಚಮಯ
- ಮೊಸರು ೧/೨ ಲೀಟರ್
- ಉಪ್ಪು ರುಚಿಗೆ ತಕ್ಕಷ್ಟು
- ಚಿಟಿಕೆ ಸಕ್ಕರೆ
ಸೌತೇಕಾಯಿ, ಈರುಳ್ಳಿ, ಹಸೀಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಂಡು ಗಟ್ಟಿ ಮೊಸರಿನೊಂದಿಗೆ ಬೆರೆಸಿ ಅದಕ್ಕೆ ಚಿಟಿಕೆ ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿದಲ್ಲಿ ರುಚಿಯಾದ ಮೊಸರು ಬಜ್ಜಿ ಸಿದ್ಧ.
ಕುಕ್ಕರ್ ತಣ್ಣಗಾದ ನಂತರ ಮೊಸರು ಬಜ್ಜಿಯೊಂದಿಗೆ ಪಲಾವ್ ತಿನ್ನಲು ಸಿದ್ದವಾಗಿರುತ್ತದೆ. ಈ. ಪಲಾವ್ ನೊಂದಿಗೆ ಕಾಂಗ್ರೇಸ್ ಕಡಲೇಕಾಯಿ ಜೀಜ ಇದ್ದರಂತೂ ರುಚಿ ಇನ್ನಷ್ಟು ಮಜವಾಗಿರುತ್ತದೆ.
ರುಚಿ ರುಚಿಯಾದ ನಮ್ಮ ಮನೆಯಲ್ಲಿ ನಮ್ಮಾಕಿ ಮಾಡುವ ರೀತಿಯ ಪಲಾವ್ ಮಾಡಲು ತಿಳಿಸಿಕೊಟ್ಟಿದ್ದೇನೆ.
ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಜೊಳ್ಳಿ
ಏನಂತೀರೀ??
ಮನದಾಳದ ಮಾತು : ನಮ್ಮಾಕಿಯನ್ನು ಮೊದಲ ಬಾರಿ ನೋಡಲು ಹೋದಾಗ ಎಲ್ಲರಂತೇ ಉಪ್ಪಿಟ್ಟು-ಕೇಸರೀ ಬಾತ್ ಮಾಡಿ ಕೊಟ್ಟಿದ್ದರು. ಎರಡನೇ ಬಾರಿ ನೋಡಲು ಹೋದಾಗ ಇದೇ ರೀತೀ ಪಲಾವ್ ಮಾಡಿಕೊಟ್ಟಿದ್ದರು ಅದರ ರುಚಿ ಸವಿಯುತ್ತಿರುವಾಗಲೇ, ಏನಪ್ಪಾ ಹುಡುಗಿ ಒಪ್ಪಿಗೇನಾ ಎಂದು ನಮ್ಮ ತಂದೆ ಕೇಳಿದಾಗ ನನಗೇ ಅರಿವಿಲ್ಲದಂತೆಯೇ ಹೂಂ ಗುಟ್ಟಿದ್ದೆ. ಹೀಗೆ ಪಲಾವ್ ಮಾಡಿಕೊಟ್ಟೇ ನನ್ನನ್ನು ಅಮ್ಮಾ-ಮಗಳು ಬುಟ್ಟಿಗೆ ಹಾಕಿಕೊಂಡ್ಬಿಟ್ರು ಅಂತಾ ಈಗಲೂ ರೇಗಿಸುತ್ತಲೇ ಇರ್ತೇನೆ.