ಪೋಲಿಸರ ಬಿಸಿ ಬಿಸಿ ಕಜ್ಜಾಯ

ಕೊರೋನಾ ಮಹಾಮಾರಿಯ ಸಲುವಾಗಿ ದೇಶಾದ್ಯಂತ ಏನೂ, ಇಡೀ ಪ್ರಪಂಚಾದ್ಯಂತ ಎಲ್ಲಾ ದೇಶಗಳೂ ಲಾಕ್ ಡೌನ್ ಮಾಡಿಕೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಇರುವಂತೆ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು, ಎಲ್ಲಾ ಧರ್ಮಗುರುಗಳಾದಿಯಾಗಿ ಪರಿ ಪರಿಯಾಗಿ ಕೇಳಿಕೊಂಡರೂ, ಇನ್ನೂ ಕೆಲವು ಪುಂಡ ಪೋಕರಿಗಳು ರಸ್ತೆಯಲ್ಲಿ ಅಂಡಲೆಯುತ್ತಿರುವವರಿಗೆ ಪೋಲೀಸರು ತಮ್ಮ ಬೆತ್ತದಿಂದ ಬಿಸಿ ಬಿಸಿಯಾದ ಕಜ್ಜಾಯ ಉಣಿಸುತ್ತಿರುವ ವೀಡೀಯೋ ಅಥವಾ ಪೋಟೋಗಳನ್ನು ನೋಡುತ್ತಿರುವಾಗ ಅಥವಾ ಓದುತ್ತಿರುವಾಗ ಸುಮಾರು ವರ್ಷಗಳ ಹಿಂದೆ ನಮ್ಮ ಗೆಳೆಯರ ಗುಂಪೊಂದಕ್ಕೆ ಇದೇ ರೀತಿಯಾಗಿ ಪೋಲೀಸರು ಕೊಟ್ಟಿದ್ದ ರಸವತ್ತಾದ ಕಜ್ಜಾಯದ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆ ಕೋರಮಂಗಲದ ಬಳಿಯ ಪ್ರತಿಷ್ಠಿತ ವೆಬ್ ಪೋರ್ಟೆಲ್ ಕಂಪನಿಯೊಂದರಲ್ಲಿ ಕೆಲಸಮಾಡುತ್ತಿದ್ದೆ. ಆಗಿನ ಕಾಲಕ್ಕೇ ಸುಮಾರು 400-500 ಜನರು ಕೆಲಸಮಾಡುತ್ತಿದ್ದ ದೊಡ್ದ ಕಂಪನಿ. ಪ್ರತೀ ಶುಕ್ತ್ರವಾರ ಮಧ್ಯಾಹ್ನ ಒಂದೊಂದು ಪ್ರಾಜೆಕ್ಟ್ಗಳು ಲೈವ್ ಆಗುತ್ತಿದ್ದವು. ಸುಮಾರು ಎರಡು ಮೂರು ತಿಂಗಳು ಹಗಲೂ ರಾತ್ರಿ ಎನ್ನದೇ ದುಡಿದು ದಣಿವಾಗಿರುತ್ತಿದ್ದ ತಮ್ಮ ತಂಡದ ಸದಸ್ಯರಿಗೆ ಅಭಿನಂದನಾ ಪೂರ್ವಕವಾಗಿಯೋ ಇಲ್ಲವೇ ಮುಂದಿನ ಪ್ರಾಜೆಕ್ಟ್ ಮಾಡಲೂ ಉತ್ಸಾಹ ತುಂಬುವ ನಿಟ್ಟಿನಲ್ಲಿ ಶುಕ್ರವಾರದ ಸಂಜೆ ಹೊರಗಡೆ ಮೋಜು ಮಸ್ತಿಗೆಂದು ಕರೆದುಕೊಂಡು ಹೋಗುತ್ತಿದ್ದದ್ದು ವಾಡಿಕೆ.

ಮೋಜು ಮಸ್ತಿ ಎಂದ ಮೇಲೆ ತಿನ್ನಲು ಮತ್ತು ಕುಡಿಯಲು ಯಾವುದೇ ಶರತ್ತುಗಳು ಇರರಲಿಲ್ಲ. ಅವರಿಗಿಷ್ಟ ಬಂದದ್ದನ್ನು ತಿಂದು ಕುಡಿದು ಮಸ್ತಿ ಮಾಡಿ ಸೀದಾ ಮನೆಗೆ ಹೋಗಿ ಶನಿವಾರ ಮತ್ತು ಭಾನುವಾರ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಂಡು ಮತ್ತಿ ಸೋಮವಾರ ಉತ್ಸಾಹ ಭರಿತಗಾಗಿ ಕಛೇರಿಗೆ ಬಂದು ಎಂದಿಗಿಂತಲೂ ಹೆಚ್ಚಿನ ಹುರುಪಿನಿಂದ ಹೊಸಾ ಪ್ರಾಜೆಕ್ಟ್ ಮಾಡಲು ಸಿದ್ದರಾಗುತ್ತಿದ್ದರು. ಪ್ರತೀ ವಾರದ ವಾಡಿಕೆಯಂತೆ ಸುಮಾರು ಇಪ್ಪತ್ತು ಇಪ್ಪತ್ತೈದು ಅದರಲ್ಲೂ ಯುವಕರೇ ಹೆಚ್ಚಾಗಿದ್ದ ತಂಡದ ಹೊಸಾ ಪ್ರಾಜೆಕ್ಟ್ ಲೈವ್ ಆದ ಎರಡು ಮೂರು ಗಂಟೆಯಲ್ಲಿಯೇ ಭಾರೀ ಮನ್ನಣೆಗೆ ಪಾತ್ರರಾಗಿದ್ದನ್ನು ಕಂಡ ಅವರ ಮ್ಯಾನೇಜರ್ ಅತ್ಯಂತ ಉತ್ಸಾಹದಿಂದ ಸಂಜೆ ಕಛೇರಿ ಮುಗಿದ ನಂತರ ಎಲ್ಲರನ್ನೂ ಎಂ.ಜಿ. ರಸ್ತೆಯ ಪ್ರತಿಷ್ಠಿತ ಪಬ್ ಒಂದಕ್ಕೆ ತಮ್ಮ ಇಡೀ ತಂಡವನ್ನು ಕರೆದು ಕೊಂಡು ಹೋಗೀ ಗಮ್ಮತ್ತಾಗಿಯೇ ಮೋಜು ಮಾಡಿದ್ದಾರೆ. ಸಮಯದ ಪರಿಧಿಯೇ ಇಲ್ಲದಂತೆ ಮೋಜು ಮಸ್ತಿಮಾಡುತ್ತಿದ್ದ ತಂಡಕ್ಕೆ ಸಾರ್ ಗಂಟೆ ಹನ್ನೊಂದಾಯಿತು ನಮ್ಮ ಪಬ್ ಮುಚ್ಚಬೇಕು. ಇಲ್ಲದಿದ್ದಲ್ಲಿ ಪೋಲೀಸರು ಬಂದು ಗಲಾಟೆ ಮಾಡುತ್ತಾರೆ ಎಂದಾಗಲೇ ಓಹ್ ಸಮಯ ಇಷ್ಟೋಂದಾಯಿತೇ ಎಂದು ನೋಡಿ ಕೊಂಡು ಒಲ್ಲದ ಮನಸ್ಸಿನಿಂದಲೇ ತಮ್ಮ ತಮ್ಮ ಮನೆಗಳತ್ತ ಹೊರಡಲು ಅನುವಾದರು.

ಅ ತಂಡದಲ್ಲಿದ್ದ ಕೃಷ್ಣನೂ ಸಹಾ ಬಿಟ್ಟಿ ಸಿಕ್ಕಿತ್ತು ಅಂತಾ ಒಂದೆರಡು ಹೆಚ್ಚಿಗಿಯೇ ಏರಿಸಿಕೊಂಡಿದ್ದ. ಇಷ್ಟು ಹೊತ್ತಿನ ಸಮಯದಲ್ಲಿ ದೂರದ ರಾಜಾಜೀ ನಗರದಲ್ಲಿರುವ ಮನೆಗೆ ಹೋಗಿ ಅಪ್ಪಾ ಅಮ್ಮನ ಕೈಯ್ಯಲ್ಲಿ ಬೈಸಿಕೊಳ್ಳುವ ಬದಲು ಇಲ್ಲೇ ಹತ್ತಿರವಿರುವ ಕೋರಮಂಗಲದಲ್ಲೇ ಇರುವ ಆಫೀಸಿಗೆ ಹೋಗಿ ಅಲ್ಲೇ ಸುಮ್ಮನೇ ಮಲಗಿಕೊಂಡು ಬೆಳ್ಳಿಗ್ಗೆ ನಶೆ ಇಳಿದ ಮೇಲೆ ಮನೆಗೆ ಹೋಗುವುದೇ ವಾಸಿ ಎಂದೆನಿಸಿದೆ. ಸರೀ, ಆಫೀಸಿಗೆ ಒಬ್ಬನೇ ಹೋಗುವುದು ಹೇಗೆ ಎಂದು ಅಲ್ಲೇ ಇನ್ನೇನು ಮತ್ತೊಬ್ಬ ಗೆಳೆಯನ ಕಾರನ್ನೇರಿ ಮನೆಯ ಕಡೆ ಹೊರಟಿದ್ದ ಸರ್ದಾರ್ಜೀ ಸ್ನೇಹಿತನನ್ನು ಕರೆದು, ಅರೇ ಯಾರ್, ಇಂತಹ ಸಮಯದಲ್ಲಿ ಕಾರ್ನಲ್ಲಿ ಮನೆಗೆ ಹೋದರೆ ಏನು ಮಜಾ? ಬಾ ನನ್ನ ಜೊತೆ ಬೈಕಿನಲ್ಲಿ ಜಾಲಿಯಾಗಿ ಆಫೀಸಿಗೆ ಹೋಗೋಣ. ಬೆಳಿಗ್ಗೆ ನಾನೇ ನಿನ್ನ ಮನೆಯ ಹತ್ತಿರ ಬಿಟ್ತು ಹೋಗುತ್ತೇನೆ ಎಂದು ಹೇಳಿದ್ದಾನೆ ಅರೇ, ಛೋಡ್ ದೋ ಯಾರ್!! ನನಗೆ ಸುಸ್ತಾಗಿದೆ. ನಾನು ಕಾರಿನಲ್ಲಿಯೇ ಮನೆಗೆ ಹೋಗ್ಬಿಡ್ತೀನಿ ಅಂತಾ ಎಷ್ಟೇ ಪರಿಪರಿಯಾಗಿ ಕೇಳಿಕೊಂಡರೂ, ಬೆಂಬಿಡ ಬೇತಾಳನಂತೆ ಬೆನ್ನು ಹತ್ತಿ ಸರ್ದಾರ್ಜಿ ಗೆಳೆಯನನ್ನು ತನ್ನ ಬೈಕಿನಲ್ಲಿ ಹಿಂದೆ ಕುಳ್ಳರಿಕೊಳ್ಳುವುದರಲ್ಲಿ ಸಫಲನಾದ ನಮ್ಮ ಕೃಷ್ಣ.

wheeliಅದಾಗಲೇ ತೀರ್ಥ ಸೇವಿಸಿದ್ದರ ಪರಿಣಾಮ ಪರಮಾತ್ಮನ ಲೀಲೆ ಅಡಿಯಿಂದ ಮುಡಿಯವರೆಗೂ ಏರಿಯಾಗಿತ್ತು. ಎಂ.ಜಿ ರಸ್ತೆಯ ಮುಖ್ಯರಸ್ತೆಗಳಲ್ಲಿ ಹೋದರೆ ಪೋಲಿಸರ ಕೈಯಲ್ಲಿ ತಗುಲಿಕೊಂಡು ಡ್ರಿಂಕ್ & ಡ್ರೈವ್ ಕೇಸ್ ಅಡಿಯಲ್ಲಿ ದಂಡ ಯಾರು ಕಟ್ಟುತ್ತಾರೆ ಎಂದು ಯೋಚಿಸಿ, ಆಶೋಕನಗರ, ಜೌಗುಪಾಳ್ಯದ ಮುಖಾಂತರ ಖಾಲಿ ಇದ್ದ ಸಂದು ಗೊಂದು ರಸ್ತೆಗಳಲ್ಲಿ ದಿಮ್ಮಾಲೇ ರಂಗಾ ಎಂದು ಜೋರಾಗಿಯೇ ಬೈಕ್ ಓಡಿಸಿಕೊಂಡು ಅಗಾಗಾ ವೀಲಿ ಮಾಡಿಕೊಂಡು ಜಾಲಿಯಾಗಿ ಬರುತ್ತಿದ್ದ ಕೃಷ್ಣನಿಗೆ, ನ್ಯಾಷನಲ್ ಗೇಮ್ಸ್ ವಿಲೇಜ್ ಹತ್ತಿರದ ಆ ಕತ್ತಲೆಯಲ್ಲಿಯೂ ಲಾಠಿ ಹಿಡಿದು ಗಾಡಿಗಳನ್ನು ಅಡ್ಡ ಹಾಕುತ್ತಿದ್ದ ಪೋಲೀಸರನ್ನು ಕಂಡೊಡನೆಯೇ ಹೃದಯ ಬಾಯಿಗೆ ಬಂದಹಾಗಿದೆ.

police1ಇದೇನಪ್ಪಾ? ತಾನೊಂದು ಬಗೆದರೇ ದೈವವೊಂದು ಬಗೆದೀತು ಎನ್ನುವಂತೆ ಸಂದಿಗೊಂದಿಗಳಲ್ಲಿ ಬಂದರೂ ಇಲ್ಲಿ ಮಾಮನ ಕೈಯಲ್ಲಿ ತಗುಲಿಹಾಕಿಕೊಳ್ಳುವ ಹಾಕಾಯ್ತಲ್ಲಾ ಎಂದು ಯೋಚಿಸಿ ಗಾಡಿಯನ್ನು ಸ್ವಲ್ಪ ನಿಧಾನ ಮಾಡಿದಾಗ, ಏನ್ರೀ ಇಷ್ಟು ಹೊತ್ತಿನಲ್ಲಿ ಎಲ್ಲಿಗೆ ಹೋಗಿದ್ರೀ? ಕುಡಿದಿದ್ದೀರಾ? ಅದೂ ವೀಲೀ ಮಾಡ್ತೀರಾ? ಗಾಡಿ ಸೈಡ್ ಹಾಕಿ. ಚೆಕ್ ಮಾಡ್ಬೇಕು ಅಂತಾ ಪೋಲೀಸ್ ಹೇಳಿದ್ದು ಕೇಳಿದ ತಕ್ಷಣವೇ, ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಅನ್ನೋ ರೀತಿಯಲ್ಲಿ ಒಮ್ಮಿಂದೊಮ್ಮೆಗೆ ಗಾಡಿಯ ಎಕ್ಸಲೇಟರ್ ಜೋರು ಮಾಡಿ ಭರ್… ಎಂದು ಗಾಡಿ ಓಡಿಸಿಕೊಂಡು ಶರವೇಗದಿಂದ ಮುನ್ನುಗ್ಗಿದ್ದಾನೆ. ಇದನ್ನು ನೋಡಿದ ಪೋಲೀಸರೂ ಒಂದು ಕ್ಷಣ ದಂಗಾಗಿ ತಮ್ಮ ಕೈಯ್ಯಲ್ಲಿದ್ದ ಲಾಠಿಯನ್ನು ಬೀಸಿದ್ದಾರೆ. ಇಲ್ಲಿ ಏನಾಗುತ್ತಿದೇ ಎಂಬುದೇ ಅರಿವಿಲ್ಲದ ಕನ್ನಡ ಬಾರದ, ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಮಾಯಕ ಸರ್ದಾರ್ಜಿಯ ಬೆನ್ನಿಗೆ ಛಟೀರ್ ಅಂತಾ ಏಟು ಬಿದ್ದಿದೆ. ಅಚಾನಕ್ಕಾಗಿ ಲಾಠಿಯ ಪೆಟ್ಟು ಬಿದ್ದ ಶಬ್ಧ ಮತ್ತು ಆ ನೋವಿಗೆ ಸರ್ದಾರ್ಜಿ ಕಿರುಚಿದ ಶಬ್ಧಕ್ಕೆ ನಮ್ಮ ಕೃಷ್ಣನಿಗೆ ಕುಡಿದಿದ್ದ ನಶವೆಲ್ಲಾ ಜರ್ ಎಂದು ಇಳಿದು ಬಿಟ್ಟಿದೆ. ಗಾಡಿಯನ್ನು ಮತ್ತಷ್ಟೂ ಜೋರಾಗಿ ಓಡಿಸಲು ಪ್ರಯತ್ನಿಸಿದಾಗ ಮತ್ತಷ್ಟೂ ವ್ಯಗ್ರರಾದ ಪೋಲೀಸರಿಬ್ಬರೂ ತಮ ಕೈಯಲ್ಲಿದ್ದ ಫೈಬರ್ ಲಾಠಿಯನ್ನು ಆ ಕತ್ತಲಲ್ಲಿಯೂ ಗಾಡಿಯತ್ತ ತೂರಿದ್ದಾರೆ. ಏಕಲವ್ಯ ಮತ್ತು ಅರ್ಜುನ ಇಬ್ಬರೂ ನಾಯಿಯತ್ತ ಶಬ್ಧವೇಧಿ ಬಾಣ ಬಿಟ್ಟ ಹಾಗೆ ಆ ಇಬ್ಬರು ಪೋಲೀಸರೂ ಬೀಸಿದ ಲಾಠಿ ಗುರಿ ತಪ್ಪದೇ, ಮತ್ತದೇ ಸರ್ದಾರ್ಜಿಯ ಬೆನ್ನಿಗೆ ಸರಿಯಾಗಿ ಪೆಟ್ಟು ಕೊಟ್ಟಿದೆ. ಎದ್ದೆನೋ, ಬಿದ್ದೆನೋ, ಗೆದ್ದೆನೋ ಎಂಬಂತೆ ಹಾಗೂ ಹೀಗೂ ಸರ್ದಾರ್ಜಿಯ ಚಿರಾಟ ನರಳಾಟ ನಡುವೆಯೇ ಆಫೀಸಿಗೆ ಬಂದು ಸೇರಿಕೊಂಡಿದ್ದಾರೆ.

police3ಸುಮ್ಮನೆ ತನ್ನ ಪಾಡಿಗೆ ತಾನು ಮತ್ತೊಬ್ಬನ ಕಾರಿನಲ್ಲಿ ಹೋಗುತ್ತಿದ್ದ ಸರ್ದಾರ್ಜಿ ಗೆಳೆಯನನ್ನು ಜಾಲೀ ರೈಡ್ ಎಂದು ಕರೆದು ತಂದು ಅವನದ್ದಲ್ಲದ ತಪ್ಪಿಗಾಗಿಯೂ ಪೋಲೀಸರ ಬಿಸಿ ಬಿಸಿ ಕಜ್ಜಾಯದ ರುಚಿ ತೋರಿಸಿದ ಕೃಷ್ಣನ ಮೇಲೆ ಆ ನೋವಿನಲ್ಲೂ ಎಗರಾಡಿದ್ದಾನೆ ಸರ್ದಾರ್ಜಿ. ಅಷ್ಟು ಹೊತ್ತಿನಲ್ಲಿ ಎಲ್ಲಿಗೂ ಹೋಗಲಾಗದು ಎಂದು ತಿಳಿದು ಸೆಕ್ಯುರಿಟಿ ಬಳಿಯಲ್ಲಿ ಇದ್ದ ಪೈನ್ ಕಿಲ್ಲರ್ ಮಾತ್ರೆಯೊಂದನ್ನು ನುಂಗಿ ಮೀಟೀಂಗ್ ರೋಮೊಂದರ ಮೂಲೆಯಲ್ಲಿ ಮಲಗಿದ್ದವರಿಗೆ, ಬೆಳಿಗ್ಗೆ ಹೌಸ್ ಕೀಪಿಂಗ್ ಬಾಯ್ಸ್ ಬಂದು ಎಬ್ಬಿಸಿದಾಗಲೇ ಎಚ್ಚರವಾಗಿದ್ದು. ಕೃಷ್ಣನೇನೋ ಆರಾಮಾಗಿ ಎದ್ದು ಬಿಟ್ಟನಾದರೂ ಪೋಲೀಸರ ಕಜ್ಜಾಯ ಸರ್ದಾರ್ಜಿಯ ಬೆನ್ನಮೇಲೆ ಬಾಸುಂಡೆಯನ್ನು ಬರಿಸಿತ್ತು. ಹೆದರಿದ ಪರಿಣಾಮ ಜ್ವರವೂ ಬಂದು ಸೋಮವಾರ ಮತ್ತು ಮಂಗಳವಾರವೂ ಕಚೇರಿಗೆ ಬರಲಾಗಲಿಲ್ಲ.

ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವಂತೆ ಸೋಮವಾರ ಮತ್ತು ಮಂಗಳವಾರ ಸರ್ದಾರ್ಜಿ ಕಛೇರಿಗೆ ಬಾರದಿರುವುದನ್ನೇ ಎತ್ತಿ ತೋರಿಸುತ್ತಾ ಕೃಷ್ಣಾ ಎಲ್ಲರ ಬಳಿಯಲ್ಲೂ ರಸವತ್ತಾಗಿ ಪೋಲಿಸರ ಕಜ್ಜಾಯವನ್ನು ವರ್ಣಿಸುತ್ತಲೇ ಇದ್ದ. ಕೃಷ್ಣನ ಮಾತುಗಳನ್ನು ಕೇಳಿ ಕನಿಕರದಿಂದ ಪ್ರತಿಯೊಬ್ಬರೂ ಸರ್ದಾರ್ಜಿಗೆ ಕರೆ ಮಾಡಿ. ಛೇ!!! ಪಾಪ ನಿನಗೆ ಹೀಗಾಗಬಾರದಾಗಿತ್ತು ಎಂದು ಮರುಕ ಪಡುತ್ತಿದ್ದರೆ, ಸರ್ದಾರ್ಜಿಗೆ ಕತ್ತಲಲ್ಲಿ ಪೋಲೀಸರಿಂದ ಬಿದ್ದ ಕಜ್ಜಾಯಕ್ಕಿಂತಲೂ ಹಗಲಿನಲ್ಲಿ ಗೆಳೆಯರು ಕರೆ ಮಾಡಿ ಲೊಚಗುಟ್ಟುತ್ತಿದ್ದದ್ದೇ ಅತ್ಯಂತ ನೋವು ತರಿಸಿದ್ದಂತೂ ಸುಳ್ಳಲ್ಲ.

ನಮ್ಮ ಕರ್ತವ್ಯ ನಿರತ ಆರಕ್ಷಕರು ದಂಡಂ ದಶಗುಣಂ ಭವೇತ್ ಎನ್ನುವಂತೆ ಪುಂಡ ಪೋಕರಿಗಳಿಗೆ ಮತ್ತು ಕುಡುಕರಿಗೆ ಕುಂಡಿ ಮೇಲೇ ಬಾಸುಂಡೆ ಬರುವಂತೆ ಎರಡು ಬಾರಿಸಿ ಮುಂದೆದೂ ಈ ರೀತಿ ರಸ್ತೆಗೆ ಇಳಿಯದಂತೆ , ವೀಲೀ ಮಾಡದಂತೇ ಅಥವಾ ಕುಡಿದು ವಾಹನ ಚಲಾಯಿಸುವವರಿಗೆ ಜಾಣರಿಗೆ ಮಾತಿನ ಪೆಟ್ಟು ಕೋಣರಿಗೆ ದೊಣ್ಣೆ ಪೆಟ್ಟು ಆಂತಾ ಪೆಟ್ಟು ಕೊಡುವುದನ್ನೇ ಅಮಾಯಕರ ಮೇಲಿನ ಹಲ್ಲೆ ಅಥವಾ ಒಂದು ಕೋಮಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ಎನ್ನುವಂತೆ ಬಿಂಬಿಸುತ್ತಿರುವ ಕೆಲವರ ಮನಸ್ಥಿತಿ ನಿಜವಾಗಿಯೂ ಅಸಹ್ಯಕರವೆನಿಸುತ್ತದೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s