ಹೈಡ್ರಾಕ್ಸಿಕ್ಲೋರೊಕ್ವಿನ್ ಈ ಮಾತ್ರೆಗೆ ಇದ್ದಕ್ಕಿದ್ದಂತೆಯೇ ಜಗತ್ತಿನಾದ್ಯಂತ ಬೇಡಿಕೆ ಬಂದು ಬಿಟ್ಟಿದೆ. ಮಹಾಮಾರಿ ಕೂರೋನಾ ಸೋಂಕಿಗೆ ಇನ್ನೂ ಯಾವುದೇ ಮದ್ದನ್ನು ಕಂಡು ಹಿಡಿಯದ ಕಾರಣ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಿ ಸ್ವಲ್ಪ ಮಟ್ಟಿಗೆ ಈ ಮಹಾಮಾರಿಯನ್ನು ತಹಬಂದಿಗೆ ತರುತ್ತದೆ ಎಂದು ಕಂಡು ಕೊಂಡಿರುವ ಪರಿಣಾಮ ಅಮೇರೀಕ, ಇಟಲಿ, ಜರ್ಮನಿ ಹೀಗೇ ನಾನಾ ದೇಶಗಳು ಭಾರತಕ್ಕೆ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ರಫ್ತುಮಾಡುವಂತೆ ಗೋಗರಿಯುತ್ತಿವೆ. ವಸುದೈವ ಕುಟುಬಕಂ ಎಂಬ ತತ್ವದಡಿಯಲ್ಲಿ ನಮ್ಮ ದೇಶವೂ ಈ ಎಲ್ಲಾ ದೇಶಗಳಿಗೂ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ರಫ್ತು ಮಾಡಲು ಒಪ್ಪಿಕೊಂಡಿರುವುದು ನಿಜಕ್ಕೂ ಅಭಿನಂದನಾರ್ಹ.
ಈ ಔಷಧಿಯು ಭಾರತದಲ್ಲಿ ಏಕೆ ಮತ್ತು ಹೇಗೆ ಆಳವಾಗಿ ನೆಲೆಗೊಂಡಿದೆ ಮತ್ತು ಇದರ ಹಿಂದೆ ಯಾವುದಾದರೂ ಇತಿಹಾಸವಿದೆಯೇ? ಎಂದು ಸ್ವಲ್ಪ ಆಳವಾಗಿ ಅಧ್ಯಯನ ಮಾಡಿದಾಗ, ಈ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಕಂಡು ಹಿಡಿಯಲು ಮತ್ತು ಬೆಂಗಳೂರಿನ ಸುತ್ತ ಮದ್ಯದ ಡಿಸ್ಟಿಲರೀಸ್ ಕಾರ್ಖಾನೆಗಳು ಆರಂಭವಾಗಲು ನಮ್ಮ 1799 ರಲ್ಲಿ, ಶ್ರೀರಂಗಪಟ್ಟಣದಲ್ಲಿ. ಬ್ರಿಟಿಷರು ಮತ್ತು ಟಿಪ್ಪುವಿನ ನಡುವೆ ಕದನವೇ ಪ್ರೇರಣೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಹೌದು ಈ ರೋಚಕ ಕಥೆಯನ್ನು ವಿಸ್ತಾರವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
1799 ರಲ್ಲಿ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ್ ವಿರುದ್ಧ ನಡೆದ ಯುದ್ದದಲ್ಲಿ ಬ್ರಿಟಿಷರು ಟಿಪ್ಪೂನನ್ನು ಕೊಂದು ಹಾಕುವ ಮೂಲಕ ಇಡೀ ಮೈಸೂರು ಸಾಮ್ರಾಜ್ಯವು ಬ್ರಿಟಿಷರ ಪಾಲಾಗುತ್ತದೆ. ಟಿಪ್ಪುವಿನ ರಾಜಧಾನಿ ಶ್ರೀರಂಗಪಟ್ಟಣದ ಐತಿಹಾಸಿಕ ಸೊಬಗು ಮತ್ತು ಹವಾಮನಗಳು ಬ್ರಿಟೀಷರಿಗೆ ಬಹಳ ಇಷ್ಟವಾಗಿ ಕೆಲವು ದಿನಗಳವರೆಗೆ, ಬ್ರಿಟಿಷ್ ಸೈನಿಕರು ತಮ್ಮ ವಿಜಯೋತ್ಸವವನ್ನ್ನು ಸಂಭ್ರಮಿಸಲು ಇದಕ್ಕಿಂತ ಉತ್ತಮ ಜಾಗವಿಲ್ಲ ಎಂದು ನಿರ್ಧರಿಸಿದ ಲಾರ್ಡ್ ವೆಲ್ಲೆಸ್ಲಿ ಅಲ್ಲಿಯೇ ಬಿಡಾರ ಹೂಡುತ್ತಾನೆ. ಮತ್ತು ಸೈನಿಕರು ಮೋಜು ಮಸ್ತಿ ಮಾಡಲು ಯುದ್ದ ಭತ್ಯೆಯನ್ನು (War allowance) ಕೊಡುವುದನ್ನೂ ಆರಂಭಿಸುತ್ತಾನೆ. ಎಲ್ಲಾ ರೀತಿಯ ಸೌಕರ್ಯಗಳಿದ್ದರೂ ಕೆಲವೇ ವಾರಗಳಲ್ಲಿ ಹಲವಾರು ಬ್ರಿಟೀಷ್ ಸೈನಿಕರು ಮಲೇರಿಯಾ ರೋಗಕ್ಕೆ ತುತ್ತಾದಾಗ ಕಾರಣ ಏನೆಂದು ಹುಡುಕಿದಾಗ, ಜೌಗು ಪ್ರದೇಶವಾದ ಶ್ರೀರಂಗಪಟ್ಟಣದಲ್ಲಿದ್ದ ಸೊಳ್ಳೆಗಳಿಂದಲೇ ಮಲೇರಿಯಾ ರೋಗ ಹೆಚ್ಚುತ್ತಲಿದೆ ಎಂದು ಕಂಡು ಬರುತ್ತದೆ.
ಆದರೆ ಹೆಚ್ಚು ಹೆಚ್ಚು ಮಸಾಲೆಯುಕ್ತ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದ ಸ್ಥಳೀಯರಿಗೆ ಸ್ವಯಂ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದ ಕಾರಣ ಈ ಸಮಸ್ಯೆ ಹೆಚ್ಚಾಗಿ ಕಾಡಿರುವುದಿಲ್ಲ. ಹಾಗಾಗಿ ಸೊಳ್ಳೆ ಭೀತಿಯನ್ನು ತ್ವರಿತವಾಗಿ ನಿವಾರಿಸಲು, ಬ್ರಿಟಿಷರು ತಕ್ಷಣವೇ ಬೆಂಗಳೂರಿನ ದಂಡು ( ಕಂಟೋನ್ಮೆಂಟ್) ಪ್ರದೇಶವನ್ನು ಸ್ಥಾಪಿಸಿ ತಮ್ಮ ಸೈನ್ಯದ ಶಿಬಿರವನ್ನು ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಸ್ಥಳಾಂತರಿಸಿದರಾದರೂ, ಬೆಂಗಳೂರು ಸಹಾ ಸೊಳ್ಳೆಗಳಿಂದ ಮುಕ್ತವಾಗಿರದ ಕಾರಣ ಅಲ್ಲಿಯಷ್ಟಿಲ್ಲದಿದ್ದರೂ ಅಲ್ಪ ಸ್ವಲ್ಪ ಪ್ರಮಾಣದ ಮಲೇರೀಯಾ ತುತ್ತಾಗುವರ ಸಂಖ್ಯೆ ಇದ್ದೇ ಇರುತ್ತದೆ.
ಇದೇ ಸಮಯದಲ್ಲಿ, ಯುರೋಪಿಯನ್ ವಿಜ್ಞಾನಿಗಳು ಮಲೇರಿಯಾ ಚಿಕಿತ್ಸೆಗಾಗಿ ಬಳಸಬಹುದಾದ ಕ್ವಿನೈನ್ ಎಂಬ ರಾಸಾಯನಿಕ ಸಂಯೋಜನೆಯನ್ನು ಕಂಡುಹಿಡಿದಿದ್ದರಾದರೂ ಅದನ್ನು ದೊಡ್ಡ ಪ್ರಮಾಣದಲ್ಲಿ ಪರೀಕ್ಷಿಸಿಲ್ಲದಿದ್ದ ಕಾರಣ ಇನ್ನೂ ಹೆಚ್ಚಾಗಿ ಪ್ರಚಲಿತವಾಗಿರಲಿಲ್ಲ. ಹಾಗಾಗಿ ಕ್ವಿನೈನ್ ಮಾತ್ರೆಗಳನ್ನು ಬ್ರಿಟಿಷ್ ಸೈನ್ಯವು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಂಡು ತನ್ನ ಎಲ್ಲಾ ಸೈನಿಕರಿಗೆ ವಿತರಿಸಿ ಸೈನಿಕರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುವ ಮೂಲಕ ಮಲೇರಿಯಾವನ್ನು ತಡೆಗಟ್ಟಲು ಪ್ರಯತ್ನಿಸಿತು. ಮಲೇರಿಯಾ ಪೀಡಿತ ಸೈನಿಕರು ಕ್ಚಿನೈನ್ ಮಾತ್ರೆಯಿಂದಾಗಿ ಶೀಘ್ರವಾಗಿ ಚೇತರಿಸಿಕೊಂಡರಾಡರೂ, ಇನ್ನೂ ಅನೇಕ ಸೈನಿಕರ ಪರಿಸ್ಥಿತಿ ಉಲ್ಬಣವಾಣವಾಗಲು ಹೆಚ್ಚಿನವರು ಬಹಳ ಕಹಿಯಾಗಿದ್ದ ಕ್ವಿನೈನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂಬ ಕಠು ಸತ್ಯದ ಅರಿವಾಯಿತು.
ಹೇಗಾದರೂ ಮಾಡಿ ತಮ್ಮ ಸೈನಿಕರಿಗೆ ಈ ಔಷಧವನ್ನು ತೆಗೆದುಕೊಳ್ಳಲು ಮನವೊಲಿಸುವ ವಿಧಾನಗಳನ್ನು ಕಂಡು ಕೊಳ್ಳಲು ಅನೇಕ ಪ್ರಯೋಗಗಳನ್ನು ಮಾಡಿ ಕಡೆಗೆ ಕ್ವಿನೈನ್ ಮಾತ್ರೆಗಳಿಗೆ ಜುನಿಪರ್ ಆಧಾರಿತ ಮದ್ಯದ ಲೇಪ ಮಾಡಿದಲ್ಲಿ ಸ್ವಲ್ಪ ಸಿಹಿಯಾಗುತ್ತದೆ ಎಂಬುದನ್ನು ಕಂಡುಕೊಂಡರು. ಆ ಜುನಿಪರ್ ಆಧಾರಿತ ಮದ್ಯವೇ ಜಿನ್ ಆಗಿದ್ದು, ಕ್ವಿನೈನ್ ನೊಂದಿಗೆ ಬೆರೆಸಿದ ಜಿನ್ ಅನ್ನು ಜಿನ್ & ಟಾನಿಕ್ ಎಂದು ಕರೆಯಲಾಯಿತು ಮತ್ತು ಇದು ತಕ್ಷಣವೇ ಬ್ರಿಟಿಷ್ ಸೈನಿಕರಲ್ಲಿ ತ್ವರಿತವಾಗಿ ಪ್ರಾಭಲ್ಯವನ್ನೂ ಪಡೆಯಿತು. ಹಾಗಾಗಿ ಸೈನ್ಯವು ತಮ್ಮ ಮಾಸಿಕ ಪಡಿತರ ಭಾಗವಾಗಿ ಟಾನಿಕ್ ವಾಟರ್ (ಕ್ವಿನೈನ್) ಜೊತೆಗೆ ಕೆಲವು ಬಾಟಲಿಗಳ ಜಿನ್‌ಗಳನ್ನು ವಿತರಿಸಲು ಪ್ರಾರಂಭಿಸಿತು.
ಬ್ರಿಟಿಷ್ ಸೈನಿಕರಲ್ಲಿ ಹೆಚ್ಚುತ್ತಿರುವ ಜಿನ್ ಮತ್ತು ಇತರ ರೀತಿಯ ಮದ್ಯದ ಬೇಡಿಕೆಯನ್ನು ಪೂರೈಸುವ ಸಲುವಾಗಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬೆಂಗಳೂರಿನಲ್ಲಿ ಮತ್ತು ಸುತ್ತಮುತ್ತ ಹಲವಾರು ಸ್ಥಳೀಯ ಮದ್ಯಸಾರಗಳನ್ನು ನಿರ್ಮಿಸಿ ಇಲ್ಲಿಂದ ಭಾರತದ ಇತರ ಭಾಗಗಳಿಗೆ ಸಾಗಿಸಲಾರಂಭಿಸಿತು. ಹಾಗಾಗಿಯೇ ಬೆಂಗಳೂರಿನ ಸುತ್ತ ಮುತ್ತ ಅಸಂಖ್ಯಾತ ಸಾರಾಯಿ ಮತ್ತು ಮದ್ಯ ಬಟ್ಟಿ ಇಳಿಸುವ ಕಾರ್ಖಾನೆಗಳು ಅರಂಭವಾಗಿ ಬ್ರಿಟಿಷರ ಕಾಲದಲ್ಲಿಯೇ ಬೆಂಗಳೂರು ಭಾರತದ ಪಬ್ ರಾಜಧಾನಿಯಾಗಿ ಮಾರ್ಪಟ್ಟಿತ್ತು. ಸ್ವಾತಂತ್ರ್ಯಾನಂತರ ಈ ಎಲ್ಲಾ ಕಂಪನಿಗಳನ್ನು ಈಗ ಬ್ರಿಟನ್ ದೇಶದಲ್ಲಿ ಆಡಗಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ತಂದೆ ವಿಠ್ಠಲ್ ಮಲ್ಯ ಅವರು ಬ್ರಿಟಿಷ್ ಸಂಸ್ಥೆಗಳಿಂದ ಖರೀದಿಸಿ, ಯುನೈಟೆಡ್ ಬ್ರೂವರೀಸ್ ಎಂಬ ಮದ್ಯದ ಕಂಪನಿಯನ್ನು ಮುನ್ನಡೆಸಿದರು.
ಭಾರತೀಯ ಸೇನೆಯಲ್ಲಿ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಸರ್ ಸಿಸಿಜಿ ರಾಸ್ ಅವರ ಮಗ 1857 ರಲ್ಲಿ ಅಲ್ಮೋರಾದಲ್ಲಿ ಜನಿಸಿದ ರೋಲ್ಯಾಂಡ್ ರಾಸ್ ಅವರೂ ಸಹಾ ಭಾರತೀಯ ಸೇನಾ ವೈದ್ಯಕೀಯ ದಳದ ಕರ್ನಲ್ ಆಗಿದ್ದವರು ಮಲೇರಿಯಾ ಚಿಕಿತ್ಸೆಯಾಗಿ ಕ್ಲೋರೊಕ್ವಿನ್ ಅನ್ನು ಕಂಡುಹಿಡಿದರು. ನಂತರ ಅವರನ್ನು ಬೆಂಗಳೂರಿನಲ್ಲಿ ಸ್ಟಾಫ್ ಸರ್ಜನ್ ಆಗಿ ನೇಮಿಸಲಾಯಿತು. ಅವರು ಬರ್ಮ, ಆಂಡಮಾನ್ ಮತ್ತು ಮದ್ರಾಸ್ ಪ್ರಾಂತದಲ್ಲೂ ಸೇವೆ ಸಲ್ಲಿಸಿದರು. ಅವರ ಈ ಸೇವೆಗಾಗಿ ಬ್ರಿಟಿಷ್ ಸರ್ಕಾರ ಅವರಿಗೆ ಸರ್ ಗೌರವವನ್ನು ನೀಡಿ ಸನ್ಮಾನಿಸಿತ್ತು. 1902 ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿಯೂ ದೊರೆಯಿತು. ಹಾಗಾಗಿ ನೇರವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಭಾರತೀಯ ಸೈನ್ಯಕ್ಕೆ ಸಂಬಂಧಿಸಿದೆ.
ನಂತರದ ವರ್ಷಗಳಲ್ಲಿ, ಕ್ವಿನೈನ್ ಹಲವಾರು ಪ್ರಯೋಗಗಳಿಗೆ ಒಳಾಗಾಗುತ್ತಲೇ ಹೋಯಿತು. 1861 ರ ಆಗಸ್ಟ್ 2 ರಂದು ಜನಿಸಿದ ಭಾರತೀಯ ರಸಾಯನಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಶ್ರೀ ಪ್ರಫುಲ್ಲ ಚಂದ್ರ ರೇ, ಬಂಗಾಳದ ಯುವಜನರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಲು 1892 ರಲ್ಲಿ ಪ್ರಯೋಗಾಲಯದಲ್ಲಿ ವೈಯಕ್ತಿಕ ಉಪಕ್ರಮವಾಗಿ ಬಂಗಾಳ ಕೆಮಿಕಲ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಅನ್ನು ಸ್ಥಾಪಿಸಿ ಇದರ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿ ಅಂತಿಮವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅಥವಾ ಎಚ್‌ಸಿಕ್ಯು ಎಂಬ ಔಷಧವನ್ನು ಭಾರತದಲ್ಲಿ ತಯಾರಿಸಲು ಆರಂಭಿಸಿದರು. ಈ ಔಷಧಿ ಮುಂಚಿನ ಎಲ್ಲಾ ಔಷಧಿಗಳಿಗೆ ಹೋಲಿಸಿದಲ್ಲಿ ಕಡಿಮೆ ಅಡ್ಡಪರಿಣಾಮ ಹೊಂದಿದ್ದು ಇಂದಿಗೂ ಸಹಾ ಮಲೇರಿಯಾ ಸಂಬಂಧ ಪಟ್ಟ ಖಾಯಿಲೆಗೆ ಕೊಡುವ ಔಷದಿಯಾಗಿದೆ. ಹಾಗಾಗಿ ಇದು ಇಂದಿಗೂ ವಿಶ್ವದಲ್ಲೇ ಅತ್ಯಂತ ಹೆಚ್ಚು ಬೇಡಿಕೆಯಿರುವ ಔಷಧವಾಗಿದೆ.
ಮಲೇರಿಯಾದ ಈ ಅತ್ಯುತ್ತಮ ಔಷಧವನ್ನು ಭಾರತದಲ್ಲಿ ತಯಾರಿಸಿದ ಪ್ರಫುಲ್ಲ ಚಂದ್ರ ರೇ ಅವರು ತಮ್ಮ 82 ನೇ ವಯಸ್ಸಿನಲ್ಲಿ ಜೂನ್ 16, 1944 ರಂದು ತಮ್ಮನಿಧನರಾದರು. ಅವರ ಈ ಸೇವೆಯಾಗಿ ತಡವಾಗಿಯಾದರೂ, 2011 ರಲ್ಲಿ ತಮ್ಮ 150 ನೇ ಜನ್ಮ ವಾರ್ಷಿಕೋತ್ಸವದಂದು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ತನ್ನ ಅಸ್ಕರ್ ಕೆಮಿಕಲ್ ಲ್ಯಾಂಡ್‌ಮಾರ್ಕ್ ಪ್ಲೇಕ್ ಪ್ರಶಸ್ತಿಯನ್ನು ಕೊಟ್ಟು ಗೌರವವಿಸಿತು. ಇದು ಯುರೋಪಿಯನ್ ಅಲ್ಲದವರಿಗೆ ಸಂದ ಮೊತ್ತ ಮೊದಲ ಪ್ರಶಸ್ತಿಯಾಗಿದೆ.
ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ನಮ್ಮ ದೇಶದ ಖರ್ಚಿನಲ್ಲಿಯೇ ವಿದ್ಯಾಬ್ಯಾಸ ಮುಗಿಸಿ, ನಮ್ಮ ಪ್ರತಿಭೆಗೆ ಇಲ್ಲಿ ಬೆಲೆ ಇಲ್ಲಾ ಎಂದು ಹೇಳುತ್ತಾ ವಿದೇಶಗಳಿಗೆ ಪ್ರತಿಭಾ ಪಲಾಯನ ಮಾಡುವ ನಮ್ಮ ಇಂದಿನ ಯುವಜನತೆಗೆ ಟಿಪ್ಪುನ ಸೋಲು, ಸೊಳ್ಳೆ ಕಡಿತ ಮಲೇರಿಯಾ ಭೀತಿ, ಕ್ವಿನೈನ್ ಮಾತ್ರೆಗಳು, ಟಾನಿಕ್ ರೂಪದಲ್ಲಿ ಮದ್ಯ, ಪಡಿತರ ಮದ್ಯ , ವರ್ಣರಂಜಿತ ಕಾಕ್ಟೈಲ್ ನಿಂದ ಆರಂಭವಾಗಿ ಅಂತಿಮವಾಗಿ ಭಾರತೀಯ ಶ್ರೀ ಪ್ರಫುಲ್ಲ ಚಂದ್ರ ರೇ ಅವರ ಉತ್ಸಾಹದಿಂದಾಗಿ ಹೈಡ್ರಾಕ್ಸಿಕ್ಲೋರೊಕ್ವಿನ್ ಭಾರತದಲ್ಲಿ ತಯಾರಾಗಿ ಈಗಲೂ ಪ್ರಪಂಚಾದ್ಯಂತ ಬೇಡಿಕೆ ಇರುವ ಕಣ್ಣು ತೆರೆಸುವಂತೆ ಈ ಹೈಡ್ರಾಕ್ಸಿಕ್ಲೋರೊಕ್ವಿನ್ ಇತಿಹಾಸ.
ಏನಂತೀರೀ?
ಗೆಳೆಯರೊಬ್ಬರು ವಾಟ್ಸಾಪ್ಪಿನಲ್ಲಿ ಕಳುಹಿಸಿದ ಆಂಗ್ಲ ಲೇಖನದಿಂದ ಪ್ರೇರಿತನಾಗಿ ಆಧ್ಯಯನ ಮಾಡಿ ಬರೆದ ಲೇಖನ